ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ಯೋಜನೆ ಕೈ ಬಿಡಲಾಗಿದೆ: ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯನ್ನು ಕೈಬಿಡಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಬಗ್ಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಬಹಳ ಸುದ್ದಿ ಆಗಿದೆ. ಜಿಲ್ಲೆಯ ಆನೇಕ ಸಂಘಟನೆಗಳು, ಪರಿಸರವಾದಿಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಚರ್ಚೆ ನಡೆಸಿ ಯೋಜನೆಯನ್ನು ಕೈಬಿಡಲಾಗಿದೆ ಎಂದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಬಗ್ಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಪ್ರಸ್ತಾವ ಮಾಡಲಾಗಿತ್ತು. ನಮ್ಮ ಕಾಂಗ್ರೆಸ್ ಸರಕಾರ ಬಂದ ಮೇಲೆ ಯೋಜನೆಗೆ 20 ಸಾವಿರ ಕೋಟಿ ರೂ. ಅಂದಾಚು ವೆಚ್ಚ ಮಾಡಲಾಗಿತ್ತು. ಅಂದಾಜು ವೆಚ್ಚದ ಪ್ರಸ್ತಾವ ಬಿಟ್ಟರೆ ಬೇರೆ ಏನು ಸಹ ನಮ್ಮ ಸರಕಾರದಲ್ಲಿ ಆಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಈ ಬಗ್ಗೆ ನನಗೆ ಅಭಿಪ್ರಾಯ ಕೇಳಿದ್ದರು. ಅಭಿಪ್ರಾಯ ತಿಳಿಸಿದ ಮೇಲೆ ಈ ಯೋಜನೆಯನ್ನು ಕೈಬಿಡಲು ಸರಕಾರ ನಿರ್ಧರಿಸಿದೆ ಎಂದು ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಶರಾವತಿ ಶರಾವತಿ ಮುಳುಗಡೆ ಸಂತ್ರಸ್ರರ ಪರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಹಲವಾರು ಸಭೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ಗೆ ಐಎ ಸಲ್ಲಿಸಲಾಗಿದೆ. ಸಮರ್ಥ ವಾದ ಮಂಡಿಸಲು ವಕೀಲರನ್ನು ನೇಮಕ ಮಾಡಲಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ, ನಾವು ರೈತ ಜೊತೆಗಿದ್ದೇವೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸಂಸದ ರಾಘವೇಂದ್ರ ಕೇಂದ್ರದಲ್ಲಿ ಮಾತಾಡಿಲ್ಲ. ರೈತರ ಧ್ವನಿಯಾಗಿ ರಾಘವೇಂದ್ರ ಕೆಲಸ ಮಾಡಿಲ್ಲ. ರೈತರ ಪರ ಧ್ವನಿ ಎತ್ತದೆ ಹೋದರೆ ಇವರು ಯಾಕೇ ಬೇಕು ಎಂದು ಶಾಸಕರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಪ್ರಮುಖರಾದ ಸೋಮಶೇಖರ್ ಲ್ಯಾವಿಗೆರೆ, ರಮೇಶ್ ಶಂಕರಘಟ್ಟ, ಬಾಲಾಜಿ, ಶಿಜು ಪಾಶಾ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.