ಶಿವಮೊಗ್ಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಜನರು

Update: 2024-11-25 11:50 GMT

ಸಾಂದರ್ಭಿಕ ಚಿತ್ರ | PC : PTI

ಶಿವಮೊಗ್ಗ : ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ನೆಟ್‌ವರ್ಕ್ ಸಮಸ್ಯೆಯೇ ಸದ್ದು ಮಾಡುತ್ತಿದೆ. ಮಲೆನಾಡ ಬೆಟ್ಟಗುಡ್ಡ, ಗಿರಿ ಕಂದಕಗಳನ್ನ ಹೊದ್ದು ನಿಂತಿರೋ ಗ್ರಾಮಗಳಲ್ಲಿ ಉತ್ತಮ ನೆಟ್‌ವರ್ಕ್‌ಗಾಗಿ ಜನರು ಪರದಾಡುವಂತಾಗಿದೆ.

ಜಿಲ್ಲೆಯ ಕುಗ್ರಾಮಗಳು ಸೇರಿದಂತೆ ನಗರ ಪ್ರದೇಶದ ಬಹುತೇಕ ಜನರು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ಅನ್ನೇ ಅವಲಂಬಿಸಿದ್ದಾರೆ. ನೆಟ್‌ವರ್ಕ್ ಸಮಸ್ಯೆಯಿಂದ ಮೊಬೈಲ್ ಫೋನ್ ಸಂಪರ್ಕ ಸೇವೆಗೆ ನೂರೆಂಟು ವಿಘ್ನ ಎದುರಾಗಿದೆ.

ಸಾಗರ ತಾಲೂಕಿನ ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯತಿ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಹೆಚ್ಚು ಕಾಡುತ್ತಿದೆ. ಫೋನ್ ಕರೆ ಮಾಡಬೇಕಾದರೆ ಗುಡ್ಡ, ಬೆಟ್ಟ ಹತ್ತಿ ಹೋಗಬೇಕಾದ ಪರಿಸ್ಥಿತಿ ಈಗಲೂ ಇದೆ. ಅಲ್ಲಿ ಒಂದು ಪಾಯಿಂಟ್ ನೆಟ್‌ವರ್ಕ್ ಸಿಕ್ಕರೆ ಅದೃಷ್ಟ. ಈ ಭಾಗದ ಜನರು ಚುನಾವಣಾ ಸಂದರ್ಭದಲ್ಲಿ ʼನೋ ನೆಟ್‌ವರ್ಕ್‌, ನೋ ವೋಟಿಂಗ್ʼ ಅಭಿಯಾನ ಮಾಡಿದ್ದರು. ಈ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಹಿನ್ನೀರು ಪ್ರದೇಶದ ಕಟ್ಟಿನಕಾರು, ಕಾರಣಿ, ಹಾಳಸಸಿ, ಬೆಳಮಕ್ಕಿ, ಕುದರೂರು, ಕಪ್ಪದೂರು, ಚಂಗೊಳ್ಳಿ, ಮಾರಲಗೋಡು, ಮಣಕಂದೂರು‌, ಕಲ್ಲೋಡಿ, ಸಿಗ್ಗಲು, ಕೇಶವಪುರ, ಗುಂಡೋಡಿ ಹೀಗೆ ಇನ್ನೂ ಹಲವು ಪ್ರದೇಶಗಳಲ್ಲಿ ನೆಟ್ ಸಂಪರ್ಕವೇ ಇಲ್ಲ. ಅಗತ್ಯ ಸಂದರ್ಭದಲ್ಲಿ ಗುಡ್ಡದ ತುದಿಗೆ ತಲುಪಿ ನೆಟ್‌ವರ್ಕ್‌ಗಾಗಿ ತಡಕಾಡುವಂತಾಗಿದೆ.

ಅಲ್ಲದೇ, ಕೊರೊನಾ ವೇಳೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತರಗತಿ ಕೇಳಬೇಕಾದ ಸಂದರ್ಭದಲ್ಲಿ ನೆಟ್‌ವರ್ಕ್‌ ಸಿಗದೆ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಹೇಳಿ ಹಲವು ವರ್ಷಗಳು ಕಳೆದೆರೂ ಈ ಸಮಸ್ಯೆಗೆ ಇನ್ನು ಪರಿಹಾರ ಸಿಕ್ಕಿಲ್ಲ.

ಸಾಲು ಸಾಲು ಸಭೆ:

ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸುವ ಸಲುವಾಗಿ ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದ್ದರೂ ಸಹ ಯಾವುದೇ ಫಲಪ್ರದವಾಗಿಲ್ಲ. ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಮೊಬೈಲ್ ಕಂಪನಿಗಳ ನಿರ್ವಾಹಕ ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸಲಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ಈ ಹಿಂದೆ ಅನೇಕ ಬಾರಿ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸುವ ಕುರಿತ ಸಭೆಗಳನ್ನು ನಡೆಸಿ, ಯೋಜನೆಯ ರೂಪುರೇಷೆಗಳನ್ನು ಚರ್ಚಿಸಲಾಗಿತ್ತು. ಆದಾಗ್ಯೂ ಸಮಸ್ಯೆ ಇನ್ನೂ ಜೀವಂತವಾಗಿರುವುದು ಬೇಸರವೆನಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದರು.

ಜಿಲ್ಲೆಯ ಗ್ರಾಮಾಂತರ ಭಾಗ ಸೇರಿದಂತೆ ಸುಮಾರು 141 ನೆಟ್‌ವರ್ಕ್‌ ಕಂಬ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 138 ನೆಟ್‌ವರ್ಕ್‌ ಸ್ಥಾವರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 63 ನೆಟ್‌ವರ್ಕ್‌ ಅಳವಡಿಕೆಯಲ್ಲಿ 15 ನೆಟ್‌ವರ್ಕ್‌ ಸಂಪರ್ಕ ಕಾರ್ಯ ಪೂರ್ಣಗೊಂಡಿವೆ. ಕಂದಾಯ ಭೂಮಿಗೆ ಸಂಬಂಧಿಸಿದ 55 ಪ್ರಕರಣಗಳಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ 17 ನೆಟ್‌ವರ್ಕ್‌ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಬಗ್ಗೆ ಬಿ.ಎಸ್.ಎನ್.ಎಲ್. ಅಧಿಕಾರಿ ವೆಂಕಟೇಶ್ ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿ ಮಾಹಿತಿ ನೀಡಿದ್ದರು.

ಸಮನ್ವಯದ ಕೊರತೆ:

ಟವರ್‌ಗಳನ್ನು ನಿರ್ಮಿಸಲು ಇರುವ ಭೂಸ್ವಾಧೀನ ಪ್ರಕ್ರಿಯೆ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ನೆಟ್‌ವರ್ಕ್‌ ಟವರ್ ಅಳವಡಿಸಲು ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ನೀಡಬೇಕಿದೆ. ಆದರೆ ಅರಣ್ಯ ಇಲಾಖೆಯವರು ನಿರಪೇಕ್ಷಣಾ ಪತ್ರ ನೀಡಲು ಮಿನಾಮೇಷ ಏಣಿಸುತ್ತಾರೆ. ಹೀಗಾಗಿ ಜಿಲ್ಲೆಯ ಕುಗ್ರಾಮಗಳಿಗೆ ಇನ್ನು ನೆಟ್‌ವರ್ಕ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

‘5ಜಿ’ ಸೇವೆ : ಸಂಸದ ರಾಘವೇಂದ್ರ:

ಒಂದು ವರ್ಷದಲ್ಲಿ ಬಿಎಸ್‌ಎನ್‌ಎಲ್‌ನ 180 ಟವರ್‌ಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದೇನೆ. ಅವುಗಳ ಅಳವಡಿಕೆಗೆ ಕಂದಾಯ ಅರಣ್ಯ ಇಲಾಖೆ ಅಧಿಕಾರಗಳು ಸಹಕಾರ ಕೊಟ್ಟು ಭೂಮಿ ಗುರುತಿಸಿ ಕೊಟ್ಟಿದ್ದಾರೆ. ಕೆಲವು ಕಡೆ ಅರಣ್ಯ ಇಲಾಖೆಯ ಅನುಮತಿ ಬೇಕಿತ್ತು. ಅದನ್ನೂ ಪಡೆಯಲಾಗಿದೆ. ಶೀಘ್ರ ಹಂತ ಹಂತವಾಗಿ ಟವರ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಿದ್ದೇವೆ. ಬಿಎಸ್‌ಎನ್‌ಎಲ್ ಉಳಿಸಿ ಬೆಳೆಸಲು ಕೇಂದ್ರ ಸರಕಾರ ಹೆಚ್ಚು ಹೂಡಿಕೆಗೆ ಮುಂದಾಗಿದೆ. ಹೀಗಾಗಿ ಇನ್ನೊಂದು ವರ್ಷದಲ್ಲಿ ದೇಶದಾದ್ಯಂತ ‘5ಜಿ’ ಸೇವೆಯೊಂದಿಗೆ ಸಂಸ್ಥೆಯ ಬಲ ಹೆಚ್ಚಿಸುವ ಕೆಲಸ ಆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಜಿಲ್ಲೆಯ ಮಲೆನಾಡು ಪ್ರದೇಶ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಗುರುತಿಸಲಾದ ಅನೇಕ ಸ್ಥಳಗಳಲ್ಲಿ ಬಿ.ಎಸ್.ಎನ್.ಎಲ್. ಸ್ಥಾವರಗಳನ್ನು ನಿರ್ಮಿಸಿ ಸೇವೆ ಒದಗಿಸುತ್ತಿದೆ. ಆದರೆ, ಬಿ.ಎಸ್.ಎನ್.ಎಲ್.ನ ಸೇವೆ ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ಜನರಿಗೆ ದೊರಕದಿರುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳಗಳಲ್ಲಿ ಏರ್‌ಟೆಲ್, ಜಿಯೋ ಸೇರಿದಂತೆ ಬೇರೆಬೇರೆ ಮೊಬೈಲ್ ಕಂಪನಿಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಸೇವಾ ವಲಯವನ್ನು ವಿಸ್ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News