ಶಿವಮೊಗ್ಗ | ಸತತ 5ನೇ ದಿನಕ್ಕೆ ಕಾಲಿಟ್ಟ ಶರಾವತಿ ಮುಳುಗಡೆ ರೈತರ ಪ್ರತಿಭಟನೆ : ಕಾರ್ಗಲ್ ತಲುಪಿದ ಪಾದಯಾತ್ರೆ
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥರ ಹೋರಾಟ ಬಿರುಸುಗೊಂಡ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರೈತರನ್ನು ಭೇಟಿ ಮಾಡಿ, ರಾಜ್ಯ ಸರಕಾರ ನಿಮ್ಮೊಂದಿಗೆ ಇದೆ. ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಲು ಬಿಡುವುದಿಲ್ಲ. ನಾನು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇನೆ. ರೈತರು ತಾಳ್ಮೆಯಿಂದ ನನ್ನ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಮುಳುಗಡೆ ಸಂತ್ರಸ್ತರಿಗೆ, ಅರಣ್ಯ ಭೂಮಿ, ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸಾಗರದ ಎಸಿ ಕಚೇರಿ ಬಳಿ ಐದು ದಿನದಿಂದ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರವೂ ಮುಂದುವರೆದಿದೆ. ಶರಾವತಿ ಆಣೆಕಟ್ಟಿನತ್ತ ಹೊರಟಿರುವ ಸಾವಿರಾರರು ರೈತರನ್ನು ಒಳಗೊಂಡ ಲಿಂಗನಮಕ್ಕಿ ಚಲೋ ಯಾತ್ರೆಯು ಕಾರ್ಗಲ್ ಗೆ ತಲುಪಿದೆ.
ಈ ಹಿನ್ನಲೆಯಲ್ಲಿ ರೈತರನ್ನು ಭೇಟಿ ಮಾಡಿ ಮಧು ಬಂಗಾರಪ್ಪ ಮಾತನಾಡಿದರು. ಅರಣ್ಯ ಕಾಯಿದೆಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುವುದರಿಂದ, ಮಲೆನಾಡಿನ ಮುಳುಗಡೆ ಸಂತ್ರಸ್ತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ದೊಂದಿಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ರೈತರು ಆತಂಕ ಪಡುವುದು ಬೇಡ, ಸರಕಾರ ಜೊತೆ ಇರಲಿದೆ ಎಂದು ಸಚಿವರು ಭರವಸೆ ನೀಡಿದರು.
ರೈತರ ಭೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಹೋರಾಟ ಈಗಾಗಲೇ ನಡೆಯುತ್ತಿದೆ. ಈ ಸಂಬಂಧ ವಕೀಲರನ್ನೂ ನೇಮಕ ಮಾಡಲಾಗಿದೆ. ಇಲ್ಲಿ ಕಾನೂನು ಹೋರಾಟ ಆಗಬೇಕಿದೆ. ರೈತರು ಆತಂಕ ಪಡುವುದು ಬೇಡ ಎಂದರು.
ಅರಣ್ಯ ಹಕ್ಕು ಕಾಯ್ದೆಗೆ 75 ವರ್ಷಗಳ ಗಡುವಿದೆ. ಇದರಿಂದ ಮುಳುಗಡೆ ಸಂತ್ರಸ್ತರಿಗೆ ಸಮಸ್ಯೆ ಆಗಿದೆ. ಇದನ್ನು 25 ವರ್ಷಕ್ಕೆ ಇಳಿಸಲು ಕೇಂದ್ರಕ್ಕೆ ಶಿಪಾರಸು ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲೆಯ ಸಂಸದರು ಸಹ ಕೇಂದ್ರದ ಹಂತದಲ್ಲಿ ಧ್ವನಿಗೂಡಿಸಬೇಕು. ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸರಕಾರ ರೈತರಿಗೆ ಕೊಟ್ಟಮಾತಿನಂತೆ ನಡೆಯಲಿದೆ ಎಂದರು.
ಕಾರ್ಗಲ್‌ನತ್ತ ರೈತರ ಹೆಜ್ಜೆ:
ತಾಳಗುಪ್ಪದಿಂದ ಹೊರಟ ಪಾದಯಾತ್ರೆ ಕಾರ್ಗಲ್ ಮೂಲಕ ಸಾಗಿ ಅಂತಿಮವಾಗಿ ಜಲಾಶಯಕ್ಕೆ ತಲುಪಲಿದೆ. ಈಗಾಗಲೇ ಜಲಾಶಯದ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಕಂದಾಯ ಇಲಾಖೆಯು ಶಿವಮೊಗ್ಗ ತಾಲ್ಲೂಕು, ಕುಂಚೇನಳ್ಳಿ, ಹಾಲ ಲಕ್ಕವಳ್ಳಿ, ಲಕ್ಕಿನಕೊಪ್ಪ, ಭದ್ರಾವತಿ ತಾಲ್ಲೂಕು, ಇತರ ಪ್ರದೇಶಗಳಲ್ಲಿ ರೈತರಿಗೆ ಸಾವಿರಾರು ಹಕ್ಕುಪತ್ರಗಳನ್ನು ಕಳೆದ 30 ರಿಂದ 50 ವರ್ಷಗಳ ಹಿಂದೆಯೇ ನೀಡಿದೆ. ಅದನ್ನೂ ಈಗ ವಜಾ ಮಾಡಲು ಜಿಲ್ಲಾದ್ಯಂತ ಅರಣ್ಯ ಇಲಾಖೆ, ಉಪ ವಿಭಾಗಾಧಿಕಾರಿಗಳ ಮೂಲಕ ನೋಟೀಸ್ ಕೊಟ್ಟಿರುವುದನ್ನು ವಾಪಾಸ್ ಪಡೆಯಬೇಕು ಎಂದು ರೈತರು ಆಗ್ರಹಿಸಿದರು.
ಸೊರಬ ತಾಲ್ಲೂಕು ಕೆರೆಹಳ್ಳಿ, ತಾಳಗುಪ್ಪದಲ್ಲಿ ಸುಮಾರು 80 ಕುಟುಂಬಗಳ ಅಡಿಕೆ ತೋಟ ಮತ್ತು ಗದ್ದೆಗಳಿಂದ ರೈತರನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ ಅರಣ್ಯ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಎಣ್ಣೆ ಕೊಪ್ಪ ಗ್ರಾಮದಲ್ಲಿ ಒಕ್ಕಲೆಬ್ಬಿಸಿದವರಿಗೂ ಶಿಕ್ಷೆಯಾಗಬೇಕು ಮತ್ತು ರೈತರಿಗೆ ಭೂಮಿ ವಾಪಾಸ್ ಕೊಡಬೇಕು ಎಂದು ರೈತರು ಒತ್ತಾಯಿಸಿದರು.
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡುವಾಗ ಕೆ.ಪಿ.ಸಿ. ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 64 ವರ್ಷ ಆದರೂ ಇನ್ನೂ ಯಾವುದೇ ನೀರು ಸಂಗ್ರಹ ಆಗಿರುವುದಿಲ್ಲ (ಮುಳುಗಡೆ ಆಗಿರುವುದಿಲ್ಲ) ಸಾಗರ ತಾಲ್ಲೂಕು, ಹೊಸನಗರ ಮಾಸಿಕಟ್ಟೆ, ನಗರ ಭಾಗದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆ.ಪಿ.ಸಿ. ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಮಾಜಿ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪನವರು ಈ ರೀತಿಯ ಜಮೀನುಗಳನ್ನು ಭೂ ಸ್ವಾಧೀನ ಕಾಯ್ದೆಯಂತೆ ರೈತರಿಗೆ ವಾಪಾಸ್ಸು ನೀಡಲು ಪ್ರಸ್ತಾವನೆ ಕಳಿಸಲು ಆದೇಶಿಸಿದ್ದರು. ಈ ಭೂಮಿಯನ್ನು ರೈತರಿಗೆ ತಕ್ಷಣ ವಾಪಾಸು ಕೊಡಬೇಕು ಎಂದು ರೈತರು ಒತ್ತಾಯಿಸಿದರು.
ಮುಖಂಡರಾದ ದಿನೇಶ್ ಶಿರಿವಾಳ, ಶಿವಾನಂದ ಕುಗ್ವೆ, ವಿ.ಜಿ ಶ್ರೀಕರ್, ಹೊಯ್ಸಳ ಗಣಪತಿಯಪ್ಪ, ಜಿ.ಟಿ.ಸತ್ಯನಾರಾಯಣ ಮೊದಲಾದವರಿದ್ದರು.
ರೈತರು ವಶಕ್ಕೆ :
ಶರಾವತಿ ಮುಳುಗಡೆ ಸಂತ್ರಸ್ಥರ ಹೋರಾಟ ತೀವ್ರಗೊಂಡ ಹಿನ್ನಲೆಯಲ್ಲಿ ಪೊಲೀಸರು ರೈತರನ್ನು ವಶಕ್ಕೆ ಪಡೆದು ಸಾಗರಕ್ಕೆ ಕರೆ ತರುತ್ತಿದ್ದಾರೆ. ಲಿಂಗನಮಕ್ಕಿ ಚಲೋ ನಡೆಸುತ್ತಿದ್ದ ರೈತರ ಪಾದಯಾತ್ರೆ ಶುಕ್ರವಾರ ಕಾರ್ಗಲ್ ತಲುಪಿ ನಂತರ ಶನಿವಾರ ಲಿಂಗನಮಕ್ಕಿ ಡ್ಯಾಂ ಕಡೆ ಸಾಗಬೇಕಿತ್ತು.ಆದರೆ ಪೊಲೀಸರು ಲಿಂಗನಮಕ್ಕಿ ಡ್ಯಾಂ ತಲುಪುವ ಮುನ್ನವೇ ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀನಾ ಶ್ರೀನಿವಾಸ್, ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರಿವಾಳ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದರು.