ಶಿವಮೊಗ್ಗ | ನೆಹರು ಕ್ರೀಡಾಂಗಣಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ; ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ

Update: 2024-08-14 17:01 GMT

ಶಿವಮೊಗ್ಗ : ನಗರದ ನೆಹರು ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಕಂಡು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಬುಧವಾರ ಸಂಜೆ ನಗರದ ನೆಹರು ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ತಕ್ಷಣ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸಚಿವರು ಮಾಹಿತಿ ಪಡೆದುಕೊಂಡರು.

ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದರು.

ಕ್ರೀಡಾಂಗಣದಲ್ಲಿ ಲೈಟಿನ ವ್ಯವಸ್ಥೆ ಸರಿಯಾಗಿಲ್ಲ, ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ನಡುವೆ ಫುಟ್ಬಾಲ್ ಆಟಗಾರರು ತಮಗೆ ಟೂರ್ನಮೆಂಟ್ ಗೆ ತೆರಳಲು ಅಗತ್ಯವಿರುವ ಜರ್ಕಿನ್ ಶೂ ಹಾಗೂ ಶಾರ್ಟ್ಸ್ ಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದಾಗ ಪೂರಕವಾಗಿ ಸ್ಪಂದಿಸಿದ ಸಚಿವರು ತಮ್ಮ ವೈಯಕ್ತಿಕ ಹಣದಿಂದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಹಲವರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News