ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರರು-ಯೋಧರಿಗೆ ನಮನಗಳು : ಮಧುಬಂಗಾರಪ್ಪ

Update: 2024-08-15 06:23 GMT

ಶಿವಮೊಗ್ಗ: ನಮ್ಮ ಭಾರತ ದೇಶವನ್ನು ವಿದೇಶಿಯರಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಭಾರತೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ನಮ್ಮ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಆ ಎಲ್ಲಾ ಸ್ವಾತಂತ್ರ್ಯ ವೀರರಿಗೆ ಅನಂತ ನಮನಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ನಗರದ ಡಿ.ಎ.ಆರ್ ಮೈದಾನದಲ್ಲಿ ಆಯೋಜಿಸಿದ್ದ 78ನೇ ಸ್ವತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್‌ಚಂದ್ರ ಬೋಸ್, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಈ ನೆಲದ ಅನೇಕ ಹೋರಾಟಗಾರರ ಪರಿಶ್ರಮದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ವೀರಸೇನಾನಿಗಳು ನೇಣಿಗೆ ಶರಣಾಗಿ ಹುತಾತ್ಮರಾಗಿದ್ದು, ನಿಜಕ್ಕೂ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆಯವರಾದ ಎಸ್.ಬಂಗಾರಪ್ಪನವರು ಸೇರಿದಂತೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದ್ದು, ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಪ್ರತಿಭಾವಂತರು, ಪ್ರಸಿದ್ದರು, ಉದಯಿಸಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆ ಎಂದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಭಾರೀ ಮಳೆಯಿಂದಾಗಿ ಜನ-ಜಾನುವಾರುಗಳು, ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ತಕ್ಷಣದ ಪರಿಹಾರ ಕ್ರಮವಾಗಿ ಅಗತ್ಯ ನೆರವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್‌ಗಳನ್ನು ಪೂರೈಸಲಾಗಿದೆ. ಈಗಾಗಲೇ 12000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 2015 ರಿಂದ 2020 ನೇ ಸಾಲಿನ ವರೆಗೆ ಅನುದಾನಿತ ಶಾಲಾ ಕಾಲೇಜುಗಳಲ್ಲಿ 5 ಸಾವಿರ ಶಿಕ್ಷರ ನೇಮಕಾತಿ ಅನುಮತಿ ನೀಡಲಾಗಿದೆ. ಖಾಲಿ ಇರುವ 10 ಸಾವಿರ ಖಾಯಂ ಶಿಕ್ಷರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶರಾವತಿ ಹಾಗೂ ಇತರೆ ಯೋಜನೆಗಳ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆ ಮತ್ತು ಸರ್ಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಂತ್ರಸ್ಥರ ಪರವಾಗಿ ಸುಪ್ರಿಂಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ಈಗಾಗಲೇ ನೇಮಿಸಲಾಗಿದೆ. ವಿಧಾನ ಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ಶಾಸಕರಾದ ಚನ್ನಬಸಪ್ಪ, ಬಲ್ಕೀಶ್ ಬಾನು, ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಹೇಮಂತ್,ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News