ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಸ್ವತ ಪರಿಹಾರ ಒದಗಿಸಲು ಸರ್ಕಾರ ಬದ್ಧ: ಸಚಿವ ಮಧುಬಂಗಾರಪ್ಪ

Update: 2024-06-21 17:51 GMT

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರ ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ. ಮಾಡುವ ಯಾವುದೇ ಕಾರ್ಯ ಕಾಲಮಿತಿಯಲ್ಲಿ ಪೂರ್ಣಗೊಳಿಸಿ. ಸಂತ್ರಸ್ತರಿಗೆ ನೆರವು ನೀಡುವ ವಿಷಯದಲ್ಲಿ ರಾಜ್ಯದ  ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ. ಜನರಿಗೆ ಅನುಕೂಲವಾಗುವಂತಿದ್ದಲ್ಲಿ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಸಹಕರಿಸಿ ಎಂದರು.

ಸಂತ್ರಸ್ತರ ಸಮಸ್ಯೆಯನ್ನು ಸರಳವಾಗಿ ಸುಲಭವಾಗಿ ಇತ್ಯರ್ಥಗೊಳಿಸಲು ಅಧಿಕಾರಿಗಳು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು. ಅಲ್ಲದೇ, ರೈತರಿಗೆ ಹಲವು ದಶಕಗಳ ಹಿಂದೆ ನಿಮಾನುಸಾರ ಭೂಮಿಯ ಮಂಜೂರಾತಿಯಾಗಿದ್ದರೂ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಬದಲಾವಣೆಯಾಗದೆ ರೈತರಿಗೆ ಅಭದ್ರತೆ ಕಾಡುತ್ತಿದೆ. ಸಾಗುವಳಿದಾರರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಬೇಕು ಎಂದ ಅವರು, ಕಾನೂನು ತೊಡಕಿಲ್ಲದೇ ಸ್ಥಳೀಯವಾಗಿ ಬಗೆಹರಿಸಬಹುದಾದ ಹಾಗೂ ಈಗಲೂ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯದಂಚಿನ ಹೊಲಗಳಲ್ಲಿ ಮಂಗನ ಹಾವಳಿಯಿಂದಾಗಿ ರೈತರು ತಮ್ಮ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಮಂಗಗಳ ನಿಯಂತ್ರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಕಾನೂನು ತೊಡಕು ಎದುರಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಇಲಾಖೆಯು ಈ ಹಿಂದೆ ಕೆಲವು ರೈತರಿಗೆ ಮಂಜೂರಾತಿ ನೀಡಿರುವ ಭೂಮಿ ಹಕ್ಕು ಪ್ರಮಾಣ ಪತ್ರದಲ್ಲಿ ಹಂಗಾಮಿ ಎಂಬ ಪದ ಬಳಕೆಯಿಂದಾಗಿ ಸರ್ಕಾರದ ಸೌಲತ್ತುಗಳನ್ನು ಪಡೆಯಲು ಅಡಚಣೆ ಉಂಟಾಗುತ್ತಿದೆ. ಈ ಹಂಗಾಮಿ ಎಂಬ ಪದ ಕೈಬಿಟ್ಟು, ದಾಖಲೆ ಮಾಡಿಕೊಡಲು ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಅರಣ್ಯಾಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News