ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಮೋದಿ, ಅಮಿತ್ ಶಾ ಅವರಿಗೂ ಒಪ್ಪಿಗೆ ಇರಬಹುದು : ಕೆ.ಎಸ್ ಈಶ್ವರಪ್ಪ

Update: 2024-03-30 09:09 GMT

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಷ್ಟ ಇರಬಹುದು. ಇಲ್ಲವೆಂದಾದರೆ ನನ್ನನ್ನು ಯಾಕೆ ಪಕ್ಷದಿಂದ ಈವರೆಗೆ ತೆಗೆದು ಹಾಕಿಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಎಂದು ಪ್ರಶ್ನಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಮಿತ್ ಶಾ ಇನ್ನು ದೂರವಾಣಿ ಕರೆ ಮಾಡುವುದಿಲ್ಲ. ನನ್ನ ಸ್ಪರ್ಧೆ ಮೋದಿ, ಅಮಿತ್ ಶಾ ಅವರಿಗೂ‌ ಒಪ್ಪಿಗೆ ಇರಬಹುದು. ಯಾಕೆಂದರೆ, ಅಪ್ಪ ಮಕ್ಕಳ ಕೈಯಿಂದ ಪಕ್ಷ ಬಿಡಿಸಬೇಕು ಎಂಬ ಉದ್ದೇಶ ಅವರದ್ದು ಇರಬಹುದು. ಮೋದಿ, ಅಮಿತ್ ಶಾ ಅವರೇ ಈಶ್ವರಪ್ಪ ಅವರನ್ನು ನಿಲ್ಲಿಸಿರಬಹುದು ಎಂಬ ಅಭಿಪ್ರಾಯ ಜನರದ್ದಾಗಿದೆ ಎಂದು ಹೇಳಿದರು.

ಅಷ್ಟು ಮೋಸ ಮಾಡಿರುವ ಯಡಿಯೂರಪ್ಪ ಅವರು ಯಾವ ಮುಖ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ?. ಯಾವ ಯಾವ ಪಕ್ಷಕ್ಕೆ ಹೋಗಿ ಬಂದವರು ಅವರು. ಅಧಿಕಾರಕ್ಕಾಗಿ ಕೆಜೆಪಿ ಕಟ್ಟಿದರು. ನಾನು ಅವರ ಬಳಿ ಕೆಜೆಪಿ ಬೇಡ ಅಂದಿದ್ದೆ. ನಾನೇ ಮತ್ತೆ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆ ತಂದೆ. ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಅಂದರೂ ಅವರಿಗೆ ಟಿಕೆಟ್ ಕೊಡಿಸಿದರು ಎಂದು ವಾಗ್ದಾಳಿ ನಡೆಸಿದರು.

ನನ್ನನ್ನು ‌ಪಕ್ಷದಿಂದ ತೆಗೆದರೆ ಮತ್ತೆ ನಾನು ಬಿಜೆಪಿಗೆ ಹೋಗುತ್ತೇನೆ. ಶಿಕಾರಿಪುರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭ ಸುರಿದಷ್ಟು ದುಡ್ಡನ್ನು ಎಲ್ಲಿಯೂ ಸುರಿದಿಲ್ಲ. ಅಷ್ಟೊಂದು ಹಣವನ್ನು ಶಿಕಾರಿಪುರ ಕ್ಷೇತ್ರದಲ್ಲಿ ಸುರಿದರೂ ಕೇವಲ 11 ಸಾವಿರ ಮತಗಳ ಅಂತರದಿಂದ ವಿಜಯೇಂದ್ರ ಗೆದ್ದಿದ್ದಾರೆ. ಈ ಬಾರಿಯೂ ಅತಿ ಹೆಚ್ಚು ಹಣ ಸುರಿಯುವ ನಿರೀಕ್ಷೆ ಇದೆ ಎಂದು ಹೇಳಿದರು.

ಈ ಚುನಾವಣೆ ಧರ್ಮ- ಅಧರ್ಮದ ನಡುವಿನ ಚುನಾವಣೆ. ಈ ಬಾರಿ ಕಾರ್ಯಕರ್ತರು ಅಧರ್ಮ ಸೋಲಿಸಿ, ಧರ್ಮಕ್ಕೆ ಜಯ ಕೊಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಿಂತ ನಾನು ಮುಂದೆ ಇದ್ದೇನೆ ಎಂದರು.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ದೂರವಾಣಿ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ. ಕಾಲ್ ಮೀ ಅರ್ಜೆಂಟ್ ಅಂತಾ ಮೆಸೇಜ್ ಮಾಡಿದ್ದರು. ನಾನು ಪ್ರತಿಕ್ರಿಯೆ ಕೊಡಲಿಲ್ಲ. ಬಹುಶಃ ಅವರ ಪಕ್ಷದಿಂದ ಟಿಕೆಟ್​ಗಾಗಿ ಕರೆ ಮಾಡಿರಬಹುದು. ನಾನು ಹಿಂದುತ್ವವನ್ನು ನನ್ನ ತಾಯಿ ಅಂದುಕೊಂಡಿರುವವನು. ಹಿಂದುತ್ವಕ್ಕೆ ಮೋಸ ಮಾಡಲ್ಲ ಎಂದು ಹೇಳಿದರು.

ದೇವೇಗೌಡರು ಕರೆ ಮಾಡಿಲ್ಲ. ನಾನು ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಹೇಳುತ್ತಿದ್ದೆ. ನಿಮ್ಮ ಪಕ್ಷ ನಮ್ಮ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಜೆಡಿಎಸ್ ಮತವನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಅಂದಿದ್ದೆ. ಅದಕ್ಕೆ ದಿಲ್ಲಿಗೆ ಹೋದಾಗ ಕುಮಾರಸ್ವಾಮಿ ಅವರು, ನೀವು ಹೇಳಿದಂತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡುತ್ತಿದ್ದೇನೆ ಎಂದು ಪೋನ್ ಮಾಡಿದ್ದರು ಎಂದು ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News