ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟ ಜಿಲ್ಲಾ ಯುವ ಕಾಂಗ್ರೆಸ್

Update: 2024-03-16 17:53 GMT

ಶಿವಮೊಗ್ಗ: ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ. ಹತ್ತು ವರ್ಷದಲ್ಲಿ ಅವರು ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿದೆ. ಅವರು ನಾವು ಕೇಳುವ ಹತ್ತು ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಪ್ರಶ್ನೆಗಳ ಕರಪತ್ರಗಳನ್ನು ಬಿಡುಗಡೆ ಮಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದೀರಿ. 10 ವರ್ಷಕ್ಕೆ 20ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಗಿದೆ?. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿದ್ದೀರಿ ಎಲ್ಲಿ ನೀಡಿದ್ದೀರಿ?. ರೈತರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ನಿಮ್ಮ ಸರ್ಕಾರ ಬಂದಿದೆ. ನೂರಾರು ಜನರನ್ನು ಸಾಯಿಸಿ ವ್ಯಾಪಾರಿಗಳನ್ನು ಬೀದಿಗೆ ತಳ್ಳಿ ಉದ್ಯೋಗ ನಷ್ಟ ಮಾಡಿದ ನೋಟ್ ಬ್ಯಾನನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಾ ?.

ಎಲ್ಲರ ಖಾತೆಗೆ ಹಾಕುವೆ ಎಂದು ಹೇಳಿದ 15 ಲಕ್ಷ ಹಣ ಎಲ್ಲಿ?. ಇಂಧನ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದೀರಿ? ಎಲ್ಲಿ ಇಳಿಸಿದ್ದೀರಾ?. 10 ವರ್ಷದಲ್ಲಿ ಒಮ್ಮೆಯಾದರೂ ಪತ್ರಿಕಾ ಮಾಧ್ಯಮದ ಎದುರು ಏಕೆ ಮಾತನಾಡಿಲ್ಲ?. ಕೇವಲ ಪೋಟೋ ಪ್ರಚಾರಕ್ಕಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ಪೋಲು ಮಾಡಿದ್ದೀರಿ ಏಕೆ? ಎಂದು ಪ್ರಶ್ನೆಮಾಡಿದರು.

ಬೇಟಿ ಬಚಾವ್, ಬೇಟಿ ಪಡಾವೋ ಎಂದು ಹೇಳಿದ ನೀವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಕಾನೂನು ಮಾಡಲಿಲ್ಲ ಏಕೆ ?. ಎಲ್ಲಿದೆ ನಿಮ್ಮ ಬುಲೆಟ್ ಟ್ರೈನ್, ಕರ್ನಾಟಕದ ಯುವಕರಿಗೆ ಕೇಂದ್ರದ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಕಿತ್ತುಕೊಂಡಿದ್ದು ಏಕೆ?. ರಾಜ್ಯಕ್ಕೆ ಬರಬೇಕಾದ ಹಣವನ್ನು ಏಕೆ ಕೊಡಲಿಲ್ಲ?. ಜಿ.ಎಸ್.ಟಿ.ಹಂಚಿಕೆ ಹಣ ಏಕೆ ಇಲ್ಲ?. ಕಾವೇರಿ, ಮಹಾದಾಯಿ ಹಾಗೂ ಬರಪರಿಹಾರ ನಿಧಿ ಏಕೆ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ಹತ್ತು ಪ್ರಶ್ನೆಗಳಿರುವ ಕರ ಪತ್ರವನ್ನು ಮನೆ ಮನೆಗೂ ನಾವು ತಲುಪಿಸುತ್ತೇವೆ. ಮೋದಿಯವರಿಗೂ ನೀಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪ್ರವೀಣ್‍ಕುಮಾರ್, ಕೆ.ರಂಗನಾಥ್, ಲೋಕೇಶ್, ಎಂ.ರಾಹುಲ್, ಎಸ್.ಕುಮರೇಶ್, ಟಿ.ವಿ.ರಂಜಿತ್, ನಾಗರಾಜ್ ನಾಯಕ, ಪುಷ್ಪಕ್ ಕುಮಾರ್, ಮುಹಮ್ಮದ್ ಇಕ್ಬಾಲ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News