ಶಿವಮೊಗ್ಗ | ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ವಿವಿಧ ಗ್ರಾಮಗಳ ರಸ್ತೆ ಬಂದ್ : ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ

Update: 2024-03-17 12:38 GMT

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಭೇಟಿ ನೀಡುತ್ತಿರುವ ಹಿನ್ನೆಲೆ ಅವರು ಸಾಗುವ ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಎಲ್ಲೆಲ್ಲೂ ಬ್ಯಾರಿಕೇಡ್‌ ಹಾಕಲಾಗಿದೆ. ಇದರಿಂದ ವಿವಿಧ ಗ್ರಾಮಗಳ ಮತ್ತು ಬಡಾವಣೆಗಳ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಮಾ.18ರಂದು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಅಲ್ಲಮಪ್ರಭು ಆವರಣದಲ್ಲಿ ಆಯೋಜಿಸಲಾಗಿರುವ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೊಗಾನೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ , ಅಲ್ಲಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್‌) ರಸ್ತೆ ಮಾರ್ಗದಲ್ಲಿ ತೆರಳಲಿದ್ದಾರೆ. ಮೋದಿ ಭೇಟಿ ಹಿನ್ನೆಲೆ ಒಂದು ದಿನ ಮೊದಲೇ ಬ್ಯಾರಿಕೇಡ್‌ ಹಾಕಲಾಗಿದೆ. ಇದರಿಂದ ವಿವಿಧ ಗ್ರಾಮಗಳು, ಬಡಾವಣೆಗಳು ದಿಗ್ಬಂಧನಕ್ಕೊಳಗಾದಂತಾಗಿದೆ. ಮಂಡೇನಕೊಪ್ಪ, ಸೋಗಾನೆ, ಸಂತೆ ಕಡೂರು, ವಡ್ಡಿನಕೊಪ್ಪ, ಜ್ಯೋತಿನಗರ ಬಡಾವಣೆಯಿಂದ ಎನ್‌.ಆರ್‌.ಪುರ ರಸ್ತೆಗೆ ತೆರಳುವ ಮಾರ್ಗವನ್ನು ಬಂದ್‌ ಮಾಡಲಾಗಿದೆ ಎಂದು ಗೊತ್ತಾಗಿದೆ. ಬ್ಯಾರಿಕೇಡ್‌ ಹಾಕಿ, ಪೊಲೀಸರು ಮತ್ತು ಹೋಂ ಗಾರ್ಡ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ

ಎಸ್‌.ಪಿ.ಜಿ ಗಸ್ತು:

ಪ್ರಧಾನಿ ಸಾಗುವ ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪೊಲೀಸ್‌ ಇಲಾಖೆ ಸಿಬ್ಬಂದಿ ಮತ್ತು ಪ್ರಧಾನಿ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ ಪಡೆ ನಿರಂತರ ಗಸ್ತು ತಿರುಗುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಮೋದಿ ಬಿಸಿ:

ಬೀದಿ ಬದಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಬಿಸಿ ತಟ್ಟಿದೆ. ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಕಮಾನಿನ ಪಕ್ಕದಲ್ಲಿ ಮಹಿಳೆಯರು ತರಕಾರಿ ಮಾರಾಟ ಮಾಡುತ್ತಿದ್ದರು. ತರಕಾರಿ ಇಡಲು ಮತ್ತು ಮಳೆ, ಬಿಸಿಲಿನಿಂದ ರಕ್ಷಣೆಗೆ ಟಾರ್ಪಲ್‌ ಕಟ್ಟಿಕೊಂಡಿದ್ದರು. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಈ ಅಂಡಿಗಳನ್ನು ತೆರವುಗೊಳಿಸಲಾಗಿದೆ. ಇದೇ ದಾರಿಯ ರಸ್ತೆ ಪಕ್ಕದಲ್ಲಿದ್ದ ಹಣ್ಣು ಮಾರಾಟಗಾರರ ಅಂಗಡಿಗಳನ್ನೂ ತೆರವುಗೊಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಈ ಭಾಗದಲ್ಲಿ ಭದ್ರತೆ ದೃಷ್ಟಿಯಿಂದ ಅಂಗಡಿಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News