ಹಿರಿಯ ಇತಿಹಾಸ ತಜ್ಞ ಗುಂಡಾ ಜೋಯಿಸ್ ನಿಧನ

Update: 2024-06-02 16:50 GMT

ಸಾಗರ : ರಾಜ್ಯದ ಹಿರಿಯ ಇತಿಹಾಸ ತಜ್ಞರಾಗಿ ಖ್ಯಾತರಾಗಿದ್ದ ಕೆಳದಿ ಗುಂಡಾ ಜೋಯಿಸ್ (94) ರವಿವಾರ  ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಳೆಯ ಕಾಲದ ಮೋಡಿ ಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರಾಗಿದ್ದ ಇವರು, ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ.

ತಮ್ಮ 17ನೆಯ ವಯಸ್ಸಿನಿಂದಲೇ ಜೋಯಿಸರು ಕೆಳದಿಯ ಇತಿಹಾಸದ ಸಂಶೋಧನೆ ಆರಂಭಿಸಿ, 1960ರಲ್ಲಿ ತಮ್ಮ ಮನೆಯಲ್ಲಿಯೇ ಐತಿಹಾಸಿಕ ವಸ್ತು ಸಂಗ್ರಹಾಲಯ ಪ್ರಾರಂಭಿಸಿ 1989ರ ನಂತರ ಸರಕಾರಕ್ಕೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಪ್ರಾಚೀನ ಓಲೆಗರಿ ಹಸ್ತಪ್ರತಿ ಸೂಚಿಯನ್ನು ತಯಾರಿಸಿಕೊಟ್ಟಿದ್ದ ಜೋಯಿಸರು, ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ, ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‍ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮೊದಲಾದ 30ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿ, 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, ಲೇಖನಗಳನ್ನು ಪ್ರಕಟಿಸಿದ್ದಾರೆ.

ತಮ್ಮ 50ನೆಯ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂಎ (ಇತಿಹಾಸ) ಪದವಿಯನ್ನು ಪಡೆದವರು. ಗ್ರಾಮಲೆಕ್ಕಿಗರಾಗಿ, ಪೋಸ್ಟ್ ಮಾಸ್ಟರ್, ವಿದ್ಯುತ್ ಇಲಾಖೆ, ಆಕಾಶವಾಣಿ, ವಯಸ್ಕರ ಶಿಕ್ಷಣ ಸಮಿತಿ, ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗದ ಸರಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಛಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 1962ರಿಂದ 1975ರವರೆಗೆ ಮೈಸೂರು ಹಾಗು ಧಾರವಾಡದ ವಿವಿ ಇತಿಹಾಸದ ಪ್ರಾಧ್ಯಾಪಕರಾಗಿ 1980ರಿಂದ 1985ರವರೆಗೆ ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1995ರಲ್ಲಿ ಶ್ರೇಷ್ಠ ಸಂಶೋಧಕ ರಾಜ್ಯ ಪ್ರಶಸ್ತಿ, ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್ ಪರ್ಟ್ ಬಿರುದು, 2004ರ ಹೊನ್ನಾಳಿ ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಸ್ಥಾನ, 2013ರಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಜೋಯಿಸರು ತಮ್ಮ ಕೊನೆ ದಿನಗಳವರೆಗೂ ಅಂಚೆ ಕಾರ್ಡ್‍ಗಳಲ್ಲಿಯೇ ಸಂವಹನ ನಡೆಸುವ ಮೂಲಕ ವಿಶಿಷ್ಟರಾಗಿದ್ದರು.

ಮೃತರ ಅಂತ್ಯಕ್ರಿಯೆಯನ್ನು ಸೋಮವಾರ 10 ಗಂಟೆಗೆ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News