ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಶಿವಮೊಗ್ಗ : ಅರಣ್ಯ ಹಕ್ಕು ಕಾಯಿದೆ ಅಡಿ ರಾಜ್ಯದಾದ್ಯಂತ ಸಲ್ಲಿಸಲಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದು, ಈ ಎಲ್ಲ ಅರ್ಜಿಗಳ ಪುನರ್ ಪರಿಶೀಲನೆ ಮಾಡಿ, ಅರ್ಜಿದಾರರಿಗೆ ಸ್ವಾಭಾವಿಕ ನ್ಯಾಯದ ಅಡಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು. ಅಲ್ಲದೆ, ಈ ಪ್ರಕ್ರಿಯೆ ಪೂರ್ಣವಾಗುವವರೆಗೂ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂದು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗದ ಅರಣ್ಯ ಇಲಾಖೆಯ ಶ್ರೀಗಂಧ ಸಭಾಂಗಣದಲ್ಲಿ ನಡೆದ ಶಿವಮೊಗ್ಗ ವೃತ್ತದ ಅರಣ್ಯಾಧಿಕಾರಿಗಳೊಂದಿಗಿನ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "2005ರ ಡಿಸೆಂಬರ್ 13ನೇ ತಾರೀಖಿಗೆ ಮುನ್ನ ಅರಣ್ಯವಾಸಿಗಳಾಗಿದ್ದ ಎಲ್ಲ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆ ಅಡಿ ಪರಿಹಾರ ಸಿಗಲೇಬೇಕು. ಅದೇ ರೀತಿ ಇತರ ಹಿಂದುಳಿದವರು ಈ ದಿನಾಂಕಕ್ಕೆ ಮುನ್ನ ಅರಣ್ಯದಲ್ಲಿ ಜೀವನೋಪಾಯಕ್ಕಾಗಿಯೇ ನೆಲೆಸಿದ್ದಲ್ಲಿ ನಿಯಮಾನುಸಾರ ಅವರಿಗೆ ಹಕ್ಕು ನೀಡಬೇಕಾಗುತ್ತದೆ. ಪ್ರಸ್ತುತ 3 ತಲೆಮಾರು ಅಂದರೆ 75 ವರ್ಷ ಅವರು ಅಲ್ಲಿದ್ದರು ಎಂದು ಸಾಬೀತು ಪಡಿಸುವುದು ಕಷ್ಟ ಸಾಧ್ಯವಾಗಿದ್ದು, ಈ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟರು.
ಶರಾವತಿ ಸಂತ್ರಸ್ತರ ಸಮಸ್ಯೆ ಚರ್ಚೆ :
ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್‌ನಲ್ಲಿ ಐ.ಎ. ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಭೂಮಿಯನ್ನು ಮಾನ್ಯ ಮಾಡಿ, ಸಂತ್ರಸ್ತರ ಸಮಸ್ಯೆ ಶೀಘ್ರ ಬಗೆಹರಿಸಲು ಉತ್ತಮ ವಕೀಲರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡುವಂತೆ ಸೂಚಿಸಿದರು.
ಶೀಘ್ರವೇ 850 ಅರಣ್ಯ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ :
ಅರಣ್ಯ ಇಲಾಖೆಯಲ್ಲಿ ವನ ಪಾಲಕರಾಗಿ ಆಯ್ಕೆಯಾಗಿರುವ 310 ಅಭ್ಯರ್ಥಿಗಳಿಗೆ ಮತ್ತು 540 ಅರಣ್ಯ ರಕ್ಷಕರಿಗೆ ಮುಖ್ಯಮಂತ್ರಿಗಳಿಂದ ನೇಮಕಾತಿ ಪತ್ರ ವಿತರಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.