ತೀರ್ಥಹಳ್ಳಿ | ತುಂಗಾ ನದಿ ದಡದಲ್ಲಿ ರೆಸಾರ್ಟ್ : ಮಾಲಕರ ವಿರುದ್ದ ಕ್ರಮಕ್ಕೆ ನೈಜ ಹೋರಾಟಗಾರರ ವೇದಿಕೆ ಆಗ್ರಹ

Update: 2024-07-24 16:14 GMT

ಬೆಂಗಳೂರು: ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಭಾರತಿ ಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಸಿದೆ.

ತೀರ್ಥಹಳ್ಳಿ ತಾಲೂಕಿನ ಭಾರತಿ ಪುರದಲ್ಲಿರುವ ವಿಹಂಗಮ ರೆಸಾರ್ಟ್ ತುಂಗಾ ನದಿಯ ದಂಡೆಯ ಮೇಲಿದೆ. ಇದು ಬಫರ್ ಜೋನ್ ವ್ಯಾಪ್ತಿಗೆ ಒಳಪಡಲಿದ್ದು, ರೆಸಾರ್ಟ್ ಮಾಲೀಕರು ಕಾರ್ಟೇಜ್ ಗಳನ್ನು ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಣೆಗೊಳಪಡಿಸಿದ್ದಾರೆ.  ಮಳೆಗಾಲ ವಾಗಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ . ಪ್ರವಾಸಿಗರು ಉಳಿದುಕೊಳ್ಳುವ ಕಾರ್ಟೇಜ್ ಕೆಳಗೆ ನದಿ ದಂಡೆಯು ಕುಸಿತಗೊಂಡಿದ್ದು ಕಾರ್ಟೇಜ್ ಗಳು ಅಪಾಯದ ಅಂಚಿನಲ್ಲಿ ಇವೆ‌‌ ಎಂದು ಮನವಿಯಲ್ಲಿ ದೂರಲಾಗಿದೆ.

ಇದು ಕೃಷಿ ಚಟುವಟಿಕೆಗಳು ಒಳಗೊಂಡಿರುವ ರೆಸಾರ್ಟ್ ಆಗಿದ್ದು, ಅಡಿಕೆ ತೋಟ ಕೃಷಿ ಜೊತೆ ಜೊತೆಗೆ ಕಮರ್ಷಿಯಲ್ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರು?. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರಯೇ?. ಬಫರ್ ಜೋನ್ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವನ್ನು ನೀಡಿದ ಅಧಿಕಾರಿಗಳು ಯಾರು? ಈ ಬಗ್ಗೆ ತನಿಖೆ ನಡೆಸುವಂತೆ ವೇದಿಕೆಯು ಮನವಿ ಮಾಡಿದೆ.

ಶಿವಮೊಗ್ಗ ಜಿಲ್ಲಾಡಳಿತವು ಈ ಕೃಷಿ ಭೂಮಿಯಲ್ಲಿ ಮತ್ತು ಬಫರ್ ಜೋನ್ ನಲ್ಲಿ ರೆಸಾರ್ಟ್ ನಡೆಸಲು ಅನುಮತಿ ಕೊಡಲು ಹೇಗೆ ಸಾಧ್ಯ ಎಂದು ಸಚಿವರಿಗೆ ನೀಡಿದ ದೂರಿನಲ್ಲಿ ಪ್ರಶ್ನಿಸಲಾಗಿದೆ. ಕಾನೂನಿಗೆ ವಿರುದ್ಧವಾಗಿ ರೆಸಾರ್ಟ್ ನಡೆಸಲು ಅವಕಾಶ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ರೆಸಾರ್ಟ್ ಮಾಲೀಕರು ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಖಾಂತರವೇ ರೆಸಾರ್ಟ್ ನಡೆಸುತ್ತಿದ್ದರೆ ನಮ್ಮದು ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ತುಂಬಿ ಹರಿಯುತ್ತಿರುವ ತುಂಗಾ ನದಿಯ ತಟದಲ್ಲಿ ಮಳೆಗಾಲದ ಕಾರಣ ನೀರಿನ ಹರಿವು ಜಾಸ್ತಿಯಾಗಿ ತುಂಗಾ ನದಿಯ ದಂಡೆ ಕುಸಿಯುತ್ತಿದೆ. ಅಲ್ಲದೆ, ರೆಸಾರ್ಟ್ ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರು ಕಾರ್ಟೇಜ್ ನ ಹೊರಗೆ ನದಿ ನೀರು ನೋಡಿ ಖುಷಿಪಡುತ್ತಿದ್ದಾರೆ, ಇದರ ಹಿಂದಿನ ಅಪಾಯದ ಅರಿವಿಲ್ಲ ಎಂದು ದೂರಿನಲ್ಲಿ‌ ಆತಂಕ ವ್ಯಕ್ತಪಡಿಸಿದೆ.

ಬೇಸಿಗೆ ಸಮಯದಲ್ಲಿ ನದಿಯ ನೀರು ಕಡಿಮೆಯಾದಾಗ ನದಿಯಲ್ಲಿ ಬೋಟಿಂಗ್ ಕೂಡ ನಡೆಯುತ್ತದೆ. ನದಿಯು ಸಾರ್ವಜನಿಕರ ಸ್ವತ್ತಾಗಿದ್ದು, ಇದಕ್ಕೆಲ್ಲ ಅವಕಾಶ ಕೊಟ್ಟ ಅಧಿಕಾರಿಗಳು ಯಾರು?. ತುಂಗಾ ನದಿಯ ದಡದಲ್ಲಿಯೇ ಬಫರ್ ಜೋನ್ ಒಳಗೆ ಕಾರ್ಟೇಜ್ ಗಳನ್ನು ನಿರ್ಮಾಣ ಮಾಡಲು, ತುಂಗಾ ನದಿಯಲ್ಲಿ ಬೋಟಿಂಗ್ ನಡೆಸಲು ಅನುಮತಿ ಕೊಟ್ಟಿರುವುದು ಅನುಮಾನ ಹುಟ್ಟಿಸಿದೆ. ರೆಸಾರ್ಟ್ ಮಾಲೀಕರೊಂದಿಗೆ ಸ್ಥಳೀಯ ಅಧಿಕಾರಿಗಳು ಶಾಮಿಲಾಗಿರಬಹುದು‌ ಎಂಬ ಶಂಕೆ ವ್ಯಕ್ತವಾಗಿದೆ.‌

ತೀರ್ಥಹಳ್ಳಿಯ ಪ್ರಕೃತಿಯ ಸೊಬಗನ್ನು ಸವಿಯಲು ಬರುವ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಹಾಗೂ ಪ್ರಕೃತಿ, ಪರಿಸರ ,ನದಿಯನ್ನು ದುರುಪಯೋಗಪಡಿಸಿಕೊಂಡ ರೆಸಾರ್ಟ್ ಮಾಲೀಕರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ಮನವಿಯಲ್ಲಿ ಒತ್ತಾಯಿಸಿದೆ.

ಈ ಹಿಂದೆ ಕೂಡ ಅರಣ್ಯ ಮತ್ತು ಪ್ರಾಣಿಗಳ ಅಂಗಾಂಗಗಳನ್ನು ರೆಸಾರ್ಟ್ ನಲ್ಲಿ ಇರಿಸಿದ ಬಗ್ಗೆ ತೀರ್ಥಹಳ್ಳಿಯ ಸ್ಥಳೀಯ ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ  ವರದಿಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ತಕ್ಷಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News