ಸಾಗರ | ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ : ಬಿಜೆಪಿ ಮುಖಂಡ ಅರುಣ್ ಕುಗ್ವೆ ಬಂಧನ

Update: 2024-06-23 12:58 GMT

ಅರುಣ್ ಕುಗ್ವೆ 

ಸಾಗರ : ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ದೈಹಿಕ ಸಂಬಂಧ ಬೆಳೆಸಿ, ಲೈಂಗಿಕ ದೌರ್ಜನ್ಯ ವೆಸಗುವ ಜೊತೆಗೆ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಅವರ ನಿಕಟವರ್ತಿ ಎನ್ನಲಾಗಿರುವ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಎಂಬಾತನನ್ನು ಪೊಲೀಸರು ರವಿವಾರ ಬಂಧಿಸಿರುವುದಾಗಿ ವರದಿಯಾಗಿದೆ.

ಸಂತ್ರಸ್ತ ಯುವತಿಯು ಶಿವಮೊಗ್ಗ ನಗರದ ಮಹಿಳಾ ಠಾಣೆಯಲ್ಲಿ ದಾಖಲಿಸಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಅರುಣ್ ಕುಗ್ವೆಯನ್ನು ಪೊಲೀಸರು ಬಂಧಿಸಿದ್ದು ಎಫ್‌ಐಆರ್ ದಾಖಲಾಗಿದೆ.

ದೂರಿನ ವಿವರ :

ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿಯೇ ಅರುಣ್ ಕುಗ್ವೆ ಅವರ ಪರಿಚಯವಾಗಿದ್ದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಮನೆಗಳಿಗೆ ಸಂಬಂಧ ಒಪ್ಪಿಗೆಯಾಗಿದೆ. ಉದ್ಯಮಿ ಮತ್ತು ರಾಜಕಾರಣಿ ಎಂದು ಹೇಳಿಕೊಂಡಿದ್ದ ಅರುಣ್ ಮುಂದೆ ವಿವಾಹವಾಗುವ ಹುಸಿ ಭರವಸೆ ನೀಡಿ ಜೋಗ, ಸಾಗರ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಲಾತ್ಕಾರವಾಗಿ ವಿಡಿಯೋ ಚಿತ್ರೀಕರಣ, ಫೋಟೋ ತೆಗೆದುಕೊಂಡಿದ್ದಾನೆ ಎಂದು ಸಾಗರ ಮೂಲದ ಯುವತಿ ದೂರಿನಲ್ಲಿ ವಿವರಿಸಿದ್ದಾರೆ.

ಬೇರೆ ಹುಡುಗಿಯರ ಜೊತೆ ಸಂಬಂಧ ಹೊಂದಿರುವ ಮಾಹಿತಿ ಕುರಿತು ವಿಚಾರಿಸಿದರೆ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಈಗ ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಕ್ಕೆ ಅರುಣ್‌ ಹಾಗೂ ಆತನ ಸೋದರ ಗಣೇಶ್ ಎಂಬುವವನು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಯುವತಿ ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಅರುಣ್ ಕುಗ್ವೆ ಮತ್ತು ಗಣೇಶ್ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 354, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅರುಣ್ ಕುಗ್ವೆ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿದ್ದು, ಗಡಿಪಾರು ಸೂಚನೆಯನ್ನೂ ಹಿಂದೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಗಂಭೀರತೆಯನ್ನು ಆಧರಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅರುಣ್ ಕುಗ್ವೆ ಜೊತೆಯಲ್ಲಿ ಎರಡನೇ ಆರೋಪಿಯಾಗಿ ಆತನ ಸೋದರ ಗಣೇಶ್ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News