ಶಿವಮೊಗ್ಗ | ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 32.45 ಲಕ್ಷ ರೂ. ವಂಚನೆ
ಶಿವಮೊಗ್ಗ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಷೇರುಗಳನ್ನು ಖರೀದಿಸಿ ಹೋಲ್ಡ್ ಮಾಡಿದರೆ ಅಧಿಕ ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 32.45 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್‌ನ ಲಿಂಕ್ ವೊಂದನ್ನು ಕ್ಲಿಕ್ ಮಾಡಿದಾಗ ವಾಟ್ಸಾಪ್ ಗ್ರೂಪ್ ಒಂದಕ್ಕೆ ಸೇರಿದ್ದರು. ಅಲ್ಲಿ ನಿಮಿಷ ಗುಪ್ತಾ ಎಂಬ ಹೆಸರಿನಲ್ಲಿ ಚಾಟಿಂಗ್ ಮಾಡಿದ್ದು, ಮೊಬೈಲ್‌ನಲ್ಲಿ ಒಂದು ಆ್ಯಪ್ ಡೌನ್‌ಲೋಡ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಹೇಳಲಾಗಿದೆ.
ಅಲ್ಲದೆ, ಆ ಆ್ಯಪ್ ಗೆ ಹಣ ಹೂಡಿಕೆ ಮಾಡಬೇಕು. ಹೆಚ್ಚು ಲಾಭಾಂಶ ಬರಲಿದ್ದು, ಶೇ.20ರಷ್ಟು ಕಮಿಷನ್ ನೀಡಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಅಧಿಕಾರಿ ಹೂಡಿಕೆ ಮಾಡಿದ್ದರು. ಕೊನೆಗೆ ವಂಚನೆಗೊಳಗಾಗಿದ್ದು ಅರಿವಾಗಿ, ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.