ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್ ಚಿಟ್? : ವಿಜಯೇಂದ್ರ ವಿಶ್ಲೇಷಣೆ

Update: 2025-01-23 16:44 IST
Photo of B.Y.Vijayendra

ವಿಜಯೇಂದ್ರ

  • whatsapp icon

ಶಿವಮೊಗ್ಗ: ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದವರು ಕ್ಲೀನ್ ಚಿಟ್ ಕೊಟ್ಟಿರುವ ಸಾಧ್ಯತೆ ಇದೆ. ಕ್ಲೀನ್ ಚಿಟ್ ಕೊಟ್ಟಿದ್ದರೆ, ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ ಲೋಕಾಯುಕ್ತ ತನಿಖಾ ಸಂಸ್ಥೆಯು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದೇ ಆದರೆ, ಲೋಕಾಯುಕ್ತ ತನಿಖೆ ಸರಿಯಾಗಿ ಆಗುತ್ತಿಲ್ಲ, ಸಿಎಂ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬಿಜೆಪಿ ಹಲವು ದಿನಗಳಿಂದ ವ್ಯಕ್ತಪಡಿಸಿದ ಅನುಮಾನಗಳು ಸತ್ಯವಾದಂತೆ ಎಂದು ವಿಶ್ಲೇಷಿಸಿದರು.

ಮೊನ್ನೆ ಜಾರಿ ನಿರ್ದೇಶನಾಲಯವು (ಈ.ಡಿ.) ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ಮುಡಾದಲ್ಲಿ ಎಷ್ಟು ಕೋಟಿ ಹಗರಣ ನಡೆದಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತೊಂದು ಕಡೆ ರಾಜ್ಯ ಹೈಕೋರ್ಟ್ ಕೂಡ ಮೈಸೂರಿನ ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಇದರ ನಡುವೆ ಮುಖ್ಯಮಂತ್ರಿಗಳೂ ಸೇರಿ ರಾಜ್ಯ ಸರಕಾರವು ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಹೈಕೋರ್ಟ್ ತೀರ್ಪು ಬರುವ ಸಂದರ್ಭದಲ್ಲೇ ಲೋಕಾಯುಕ್ತ ವರದಿ ನೀಡಿದ್ದು ಸತ್ಯವಾದರೆ, ಇದು ಖಂಡಿತ ಸರಿಯಲ್ಲ. ಇದಕ್ಕೆ ಯಾವುದೇ ರೀತಿಯ ಪಾವಿತ್ರ್ಯತೆ ಇರುವುದಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಕ್ಲೀನ್ ಚಿಟ್ ಕೊಡಲಾಗಿದೆ ಎಂಬುದು ನಮ್ಮೆಲ್ಲರ ಸ್ಪಷ್ಟ ಅಭಿಪ್ರಾಯ ಎಂದು ನುಡಿದರು.

ಈ.ಡಿ. ಆಧಾರರಹಿತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಮುಡಾ ಹಗರಣ ಆಗಿದೆ ಎಂದಿದ್ದರೆ ಅದಕ್ಕೆ ಆಧಾರಗಳಿರುತ್ತವೆ. ಈ.ಡಿ. ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆತುರಾತುರವಾಗಿ ಕ್ಲೀನ್ ಚಿಟ್ ಪಡೆಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಶ್ರೀರಾಮುಲು ಅವರು ಹಿರಿಯರಿದ್ದು ಅವರ ಬಗ್ಗೆ ಗೌರವವಿದೆ :

ಶ್ರೀರಾಮುಲು ಅವರ ವಿಚಾರದಲ್ಲಿ ಮೊನ್ನೆ ಕೋರ್ ಕಮಿಟಿಯಲ್ಲಿ ಏನು ಚರ್ಚೆ ಆಗಿದೆಯೋ ಅದರ ಕುರಿತ ಶ್ರೀರಾಮುಲು ಅವರ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಶ್ರೀರಾಮುಲು ಅವರು ಹಿರಿಯರಿದ್ದು ಅವರ ಬಗ್ಗೆ ಗೌರವವಿದೆ. ಒಳಗಡೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅವರ ಉಪಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕೆಂಬ ಚರ್ಚೆ ನಡೆದಿದೆ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕೆಂಬ ದೃಷ್ಟಿಯಿಂದ ಕೆಲವೊಂದು ಚರ್ಚೆಗಳು ನಡೆದಿವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News