27 ವರ್ಷ ಹಳೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತ ಪದ್ಮನಾಭ ಬಂಧನ

Update: 2023-08-09 17:21 GMT

ಪೊಲೀಸರಲ್ಲಿ​ ತಮ್ಮ ಕೆಲಸದ ಕುರಿತು ನಿಷ್ಠೆ ಇದ್ದರೆ , ಒಂಚೂರು ಕುತೂಹಲವಿದ್ದರೆ, ಸ್ವಲ್ಪ ಬೆನ್ನುಬಿದ್ದರೆ ದಶಕಗಳ ನಂತರವೂ​ ಯಾವುದೇ ಪ್ರಕರಣವನ್ನು ಭೇದಿಸಬಹುದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 27 ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದವನೊಬ್ಬನನ್ನು ಕಡೆಗೂ ಪತ್ತೆ ಮಾಡಿ ಬಂಧಿಸಿದ​ ವೆರಿ ಇಂಟರೆಸ್ಟಿಂಗ್ ಸ್ಟೋರಿ ಇದು.

ಹೀಗೆ ನಾಪತ್ತೆಯಾಗಿದ್ದ ವ್ಯಕ್ತಿ ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೆಲಸವನ್ನೂ ಗಿಟ್ಟಿಸಿದ್ದ ​ಅಂದ್ರೆ ಈ ಪ್ರಕರಣ ಅದೆಷ್ಟು ಕುತೂಹಲಕಾರಿ ಅಂತ ನೀವೇ ಊಹಿಸಿ. ಅದೊಂದು ದೌರ್ಜನ್ಯ ಪ್ರಕರಣವಾಗಿತ್ತು. ನಡೆದಿದ್ದು ಬಂಟ್ವಾಳದಲ್ಲಿ. ನಾಲ್ವರು ಆರೋಪಿಗಳಲ್ಲಿ ಒಬ್ಬ ಪ್ರಕರಣ ದಾಖಲಾಗಿ ಎರಡು ವರ್ಷಗಳ ಬಳಿಕ​ ನಾಪತ್ತೆಯಾಗಿದ್ದ. ಅದಾಗಿ ಮೂರ್ನಾಲ್ಕು ವರ್ಷಗಳಲ್ಲಿಯೇ ಸರ್ಕಾರಿ ಉದ್ಯೋಗವನ್ನೂ ಪಡೆದುಕೊಂಡಿದ್ದ. ಅಷ್ಟಾಗಿಯೂ ಅವನೊಂದು ಪ್ರಕರಣದಲ್ಲಿ ಆರೋಪಿಯೆಂಬ ಒಂದು ಸಣ್ಣ ಸುಳಿವೂ ಯಾರಿಗೂ ಸಿಕ್ಕಿರಲಿಲ್ಲ.

ಆದರೆ, ಪ್ರಕರಣದ ಹಿಂದೆ ಬಿದ್ದು, ಒಂದೊಂದೇ ಸುಳಿವು ಪಡೆಯುತ್ತ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿದವರು​ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಠಾಣೆಯ ಬೀಟ್ ಸಿಬ್ಬಂದಿ ಪ್ರವೀಣ್ ಶಿವಪುರ. ಅಷ್ಟು ಹಳೆಯ ಪ್ರಕರಣ ಬಯಲಾದದ್ದು ಹೇಗೆ, ಪ್ರವೀಣ್ ಅವರಿಗೇಕೆ ಅದರ ಬಗ್ಗೆ ಕುತೂಹಲ ಮೂಡಿತು ಎಂಬುದನ್ನು ನೋಡುವ ಮೊದಲು ಪ್ರಕರಣವೇನು ಎಂಬುದನ್ನು ನೋಡೋಣ.

1995ರಲ್ಲಿ ನಡೆದ ದೌರ್ಜನ್ಯ ಪ್ರಕರಣ ಅದು. ದಿನಗೂಲಿ ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಎಂಬವರ ಮೇಲೆ ಹಲ್ಲೆ ನಡೆಸಿ, ತಲೆ ಬೋಳಿಸಿ ಮೆರವಣಿಗೆ ಮಾಡಿ ಕೊನೆಗೆ ಅವರ ಮೇಲೆ ಅಡಿಕೆ ಕದ್ದಿರುವ ಆರೋಪ ಹೊರಿಸಲಾಗಿತ್ತು ಎಂಬುದು ದೂರು.1995 ಅಕ್ಟೋಬರ್ 24ರಂದು ಸಂಘಪರಿವಾರದ ಮುಖಂಡ ನಾರಾಯಣ ಸೋಮಯಾಜಿ ಆಯೋಜಿದ್ದ ಆರೆಸ್ಸೆಸ್ ಬೈಠಕ್ನಲ್ಲಿ ಈ ದಿನಗೂಲಿ ಕಾರ್ಮಿಕರು ಭಾಗವಹಿಸಿರಲಿಲ್ಲ ಎಂಬುದು ಅವರ ಮೇಲಿನ ಹಲ್ಲೆಗೆ ಮತ್ತು ಅವರನ್ನು ತಲೆಬೋಳಿಸಿ ಅವಮಾನಿಸಿದ್ದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಘಟನೆಯ ಪ್ರಮುಖ ಆರೋಪಿಗಳಾದ ನಾರಾಯಣ ಸೋಮಯಾಜಿ, ಪದ್ಮನಾಭ, ವಿಠಲ, ಸುರೇಶ ಸಪಲ್ಯ ಎಂಬವರ ವಿರುದ್ಧ ಅಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ನಡುವೆ, ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದ ವೇಳೆಯೇ, ಪದ್ಮನಾಭ ಎಂಬ ಆರೋಪಿ ಎರಡು, ಮೂರು ಬಾರಿ ಕೋರ್ಟ್ಗೆ ಹಾಜರಾದ ಬಳಿಕ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ವಿಚಾರಣೆಗೆ ಗೈರಾಗುತ್ತಿದ್ದ ಆತನನ್ನು 2010ರಲ್ಲಿ ಪ್ರಕರಣದಲ್ಲಿ ಉಳಿದ ಮೂವರಿಂದ ಪ್ರತ್ಯೇಕಿಸಲಾಗಿತ್ತು. ಇತರ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಕೂಡ ಸಾಬೀತಾಗಿತ್ತು. ಬಳಿಕ ಸೆಷನ್ಸ್ ಕೋರ್ಟ್ನಲ್ಲಿ ಮೂವರೂ ಖುಲಾಸೆಯಾಗಿದ್ದರು. ಇಷ್ಟೆಲ್ಲ ನಡೆದರೂ ತಲೆಮರೆಸಿಕೊಂಡಿದ್ದ ಪದ್ಮನಾಭ ಮಾತ್ರ ಪತ್ತೆಯಿರಲಿಲ್ಲ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಬಳಿಯವನಾಗಿದ್ದ ಆರೋಪಿ ಪದ್ಮನಾಭ ಸಂಘಪರಿವಾರದ ಕಾರ್ಯಕರ್ತನಾಗಿದ್ದ. ನರಿಕೊಂಬು ಗ್ರಾಮದಲ್ಲಿದ್ದ ನಾರಾಯಣ ಸೋಮಯಾಜಿಗಳ ಎಸ್ಟೇಟಿನಲ್ಲಿ ಡೇರಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗುತ್ತದೆ. ಆದರೆ ತಲೆಮರೆಸಿಕೊಂಡ ಅವನಿಗಾಗಿ ಪೊಲೀಸರು ಹುಡುಕುತ್ತಿದ್ದರೆ, ಅಲ್ಲಿದ್ದ ಯಾರಿಗೂ ಆತನ ಬಗ್ಗೆ ಹೆಚ್ಚೇನೂ ಗೊತ್ತಿರದ ಹಿನ್ನೆಲೆಯಲ್ಲಿ ಅವನು ಎಲ್ಲಿಗೆ ಹೋಗಿರಬಹುದೆಂಬ ಸುಳಿವು ಸಿಕ್ಕಿರಲೇ ಇಲ್ಲ.

ಅವನ ವಿರುದ್ಧದ ಪ್ರಕರಣವೂ ಬದಿಗೆ ಸರಿದುಹೋಗಿತ್ತು. ಈ ಹಂತದಲ್ಲಿಯೇ, ಬಂಟ್ವಾಳ ಠಾಣೆಯ ಬೀಟ್ ಸಿಬ್ಬಂದಿ ಪ್ರವೀಣ್ ಶಿವಪುರ ಕ್ರೈಂ ಡ್ಯೂಟಿಯಲ್ಲಿರುವಾಗ ಈ ಪ್ರಕರಣದ ಬಗ್ಗೆ ಕುತೂಹಲಗೊಂಡರು. ವಾರ್ತಾಭಾರತಿ ಹಲವರೊಡನೆ ಮಾತನಾಡಿದ ಬಳಿಕ ಗೊತ್ತಾದ ಪ್ರಕಾರ, ಆರೋಪಿ ಪದ್ಮನಾಭನ ಬಗ್ಗೆ ಮಾಹಿತಿ ಕಲೆಹಾಕುವುದಕ್ಕೆ ಪ್ರವೀಣ್ ಶಿವಪುರ ಶುರು ಮಾಡಿದ್ದರು. ಕೇಸ್ ಫೈಲ್ ಅಧ್ಯಯನ ಮಾಡಿದ್ದ ಆಧಾರದ ಮೇಲೆ ಪ್ರಕರಣದ ಆರೋಪಿಗಳು, ಸಂತ್ರಸ್ತರು ಮತ್ತು ಸಾಕ್ಷಿಗಳನ್ನೆಲ್ಲ ಮಾತನಾಡಿಸಿದರೂ ಪದ್ಮನಾಭನ ಬಗ್ಗೆ ​ಹೆಚ್ಚೇನೂ ​ಮಾಹಿತಿ ದೊರಕಲಿಲ್ಲ.

ಬಳಿಕ ಪ್ರವೀಣ್ ಮಾಡಿದ್ದು ಸೋಮಯಾಜಿಗಳ ಎಸ್ಟೇಟ್ನಲ್ಲಿ ಹಿಂದೆ ಕೆಲಸಕ್ಕಿದ್ದ ರೈಟರ್ಗಳು ಮತ್ತು ಡ್ರೈವರ್ಗಳನ್ನು ಮಾತನಾಡಿಸಿದ್ದು. ಆಗ ಸಿಕ್ಕಿದ ಒಂದು ಸುಳಿವೇ, ಪ್ರವೀಣ್ ಜೊತೆ ಒಬ್ಬ ಪಶುವೈದ್ಯರೂ ಅಲ್ಲಿದ್ದರು ಮತ್ತು ಇಬ್ಬರು ಒಟ್ಟಿಗೇ ಅಲ್ಲಿಂದ ಬಿಟ್ಟಿದ್ದರು ಎಂಬುದು. ಹೇಗೋ ಆ ಪಶುವೈದ್ಯರ ವಿವರ ಪಡೆದು ಅವರನ್ನು ಮಾತನಾಡಿಸಿದಾಗ, ಏಳೆಂಟು ವರ್ಷದ ಹಿಂದೆ ಕಂಡಿದ್ದಾಗಿಯೂ, ಬೆಂಗಳೂರಿನಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸದಲ್ಲಿದ್ದುದಾಗಿಯೂ ಮಾಹಿತಿ ಸಿಕ್ಕಿತು. ಬಳಿಕ ಬೆಂಗಳೂರಿನಲ್ಲಿ ಪಶುಸಂಗೋಪನಾ ಇಲಾಖೆಯ ಹೆಬ್ಬಾಳ ಕೇಂದ್ರದಲ್ಲಿ ವಿವರಕ್ಕಾಗಿ ಪರಿಶೀಲಿಸಿದಾಗ ಬಯಲಾದದ್ದೇ, ಆತ ಶಿಡ್ಲಘಟ್ಟ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸದಲ್ಲಿರುವ ವಿಚಾರ.

2001ರಲ್ಲಿ ಪದ್ಮನಾಭ ಕೋಲಾರ ಜಿಲ್ಲೆಗೆ ಪಶುಸಂಗೋಪನಾ ಇಲಾಖೆಗೆ ನೇಮಕಗೊಂಡಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯಾದ ಬಳಿಕ ಶಿಡ್ಲಘಟ್ಟದಲ್ಲಿ ಸೇವೆ ಮುಂದುವರಿಸಿದ್ದ ಎಂದು ತಿಳಿದುಬಂದಿದೆ. ಮೂಲತಃ ಸಂಘಪರಿವಾರದವನಾದ ಆತ ಶಿಡ್ಲಘಟ್ಟದಲ್ಲಿಯೂ ಹಿಂ​ದುತ್ವ ಸಂಘಟನೆಯೊಂದರ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

27 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆರೋಪಿಯಾಗಿದ್ದವನ ಪತ್ತೆಯಾಗುತ್ತಿದ್ದಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮತಿ ಪಡೆದು ಅಲ್ಲಿಗೆ ಹೊದ ಬೀಟ್ ಸಿಬ್ಬಂದಿ ಪ್ರವೀಣ್ ಮತ್ತು ಜೊತೆ ಸಿಬ್ಬಂದಿ ಗಣೇಶ್ ಆರೋಪಿಯನ್ನು ಬಂಧಿಸಿದರು. ಬಳಿಕ ಆತನನ್ನು ಬಂಟ್ವಾಳ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಯಿತು. ಕೋರ್ಟ್ ಆತನಿಗೆ ಜಾಮೀನು ನೀಡಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಪದ್ಮನಾಭ, ಪೊಲೀಸರಿಂದ ತಲೆಮರೆಸಿಕೊಂಡದ್ದರ ನಡುವೆಯೇ ಸರ್ಕಾರವನ್ನೂ ವಂಚಿಸಿ ಕೆಲಸ ಗಿಟ್ಟಿಸಿಕೊಂಡಿದ್ದ ಎಂಬುದು ವಿಪರ್ಯಾಸ ಅಲ್ಲವೆ?. ​ನಮ್ಮ ವ್ಯವಸ್ಥೆಯಲ್ಲಿ ಅಂತಹದ್ದೂ ನಡೆಯುತ್ತದೆ. ಆದರೆ ನಮ್ಮ ವ್ಯವಸ್ಥೆಯಲ್ಲಿ ಪ್ರವೀಣ್ ಶಿವಪುರ ಅವರಂತಹ ಪೊಲೀಸರೂ ಇರುತ್ತಾರೆ. ಅವರಿಗೆ ತಮ್ಮ ಕೆಲಸದಲ್ಲಿ ನಿಷ್ಠೆ ಇರುತ್ತದೆ. ಅವರು ನಿಷ್ಠೆಯಿಂದ ಕೆಲಸ ಮಾಡಿದರೆ ಅವರನ್ನು ಪ್ರೋತ್ಸಾಹಿಸಿ ಮುಂದುವರಿಯಿರಿ ಎಂದು ಹೇಳುವ ಹಿರಿಯ ಪೊಲೀಸ್ ಅಧಿಕಾರಿಗಳೂ ಇರುತ್ತಾರೆ.

ಹಾಗಾಗಿ ಆರೋಪಿಯೇ ತಲೆಮರೆಸಿಕೊಂಡು ಸರಕಾರಿ ಕೆಲಸ ಗಿಟ್ಟಿಸಿ ಕೊಂಡರೂ ಒಂದಲ್ಲ ಒಂದು ದಿನ ಕಾನೂನಿನ ಕೈಗೆ ಸಿಕ್ಕೇ ಬಿಡುತ್ತಾನೆ. ಪೊಲೀಸರು ಮನಸ್ಸು ಮಾಡಿದರೆ ಸಮಾಜ ವಿರೋಧಿ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಖಂಡಿತ ಸಾಧ್ಯ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಅಲ್ವಾ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!