ದೇಶದಲ್ಲಿ ಪ್ರಧಾನಿಯ ಪತ್ರಿಕಾ ಗೋಷ್ಠಿ ಆಗಿ ಕಳೆಯಿತು ದಶಕ !

Update: 2024-01-19 04:06 GMT
Editor : Ismail | Byline : ಆರ್. ಜೀವಿ

ಡಾ. ಮನಮೋಹನ್ ಸಿಂಗ್, ಮೋದಿ | Photo: NDTV 

ಭಾರತದ ಪ್ರಧಾನಿಯೊಬ್ಬರು ​ಪತ್ರಕರ್ತರ ಪ್ರಶ್ನೆಗಳಿಗೆ, ಮೊದಲೇ ಸ್ಕ್ರಿಪ್ಟ್ ಮಾಡಿಕೊಡದ ನೇರಾನೇರ ಪ್ರಶ್ನೆಗಳಿಗೆ ​ಮುಕ್ತವಾಗಿ ಉತ್ತರಿಸಿದ ಕೊನೆಯ ಸಂದರ್ಶನ ನಡೆದು ಬುಧವಾರಕ್ಕೆ ಹತ್ತು ವರ್ಷಗಳು ಕಳೆದಿವೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹಾಗು ಪ್ರಜಾಪ್ರಭುತ್ವದ ತಾಯಿ ಎಂದೇ ಬಣ್ಣಿಸಲ್ಪಡುವ ಭಾರತದ ಪಾಲಿಗೆ ಇದೊಂದು ​ಮಹಾ ವಿಪರ್ಯಾಸದ ​ದಾಖಲೆ.

ಪ್ರಜಾಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾದ ಈ ಧೋರಣೆ ತನ್ನೊಳಗೆ ಅವಿತಿಟ್ಟುಕೊಂಡ ವಿಕೃತಿಗಳು ಅದೆಷ್ಟು?. ದೇಶದ ಪ್ರಧಾನಿ ನೇರವಾಗಿ​, ಮುಕ್ತವಾಗಿರದೆ, ಎಲ್ಲದಕ್ಕೂ ಸ್ಕ್ರಿಪ್ಟೆಡ್ ಸನ್ನಿವೇಶವನ್ನೇ ನೆಚ್ಚಿದ್ದು, ಕ್ಯಾಮೆರಾದೆದುರು ನಟನೊಬ್ಬ ಕಾಣಿಸಿಕೊಳ್ಳುವ ರೀತಿಯಲ್ಲಿ​,

ಫ್ರೇಮಿನೊಳಗೆ ಅಚ್ಚುಕಟ್ಟಾಗಿ ಕಾಣಿಸುವುದರಲ್ಲೇ ಒಂಭ​ತ್ತೂವರೆ ವರ್ಷಗಳನ್ನು ಕಳೆದುಬಿಟ್ಟಿದ್ದು, ಜನರೇ ಇಲ್ಲದಿದ್ದಲ್ಲೂ ಕ್ಯಾಮೆರಾಗಳ ಮುಂದೆ ಕೈಬೀಸುತ್ತ ಪೋಸು ಕೊಟ್ಟಿದ್ದು ಈ ದೇಶದ ಪಾಲಿ​ಗೆ ಹಿಂದೆಂದೂ ಕೇಳಿರದ, ಕಂಡಿರದ ದಾಖಲೆ.

ಭಾರತದ ಪ್ರಧಾನಿಯೊಬ್ಬರ ಕಡೆಯ ಪತ್ರಿಕಾಗೋಷ್ಠಿ ನಡೆದದ್ದು ಹತ್ತು ವರ್ಷಗಳ ಹಿಂದೆ ಜನವರಿ 3ರಂದು. ಅವತ್ತು ಹಾಜರಿದ್ದುದು 100ಕ್ಕೂ ಹೆಚ್ಚು ಪತ್ರಕರ್ತರು. ಅಲ್ಲಿ ಪ್ರಧಾನಿಗೆ ಎದುರಾಗಿದ್ದು ಸ್ಕ್ರಿಪ್ಟೆ​ಡ್ ಆಗಿರದ 62ಕ್ಕೂ ಹೆಚ್ಚು ಪ್ರಶ್ನೆಗಳು.

ಮತ್ತು ಅವೆಲ್ಲಕ್ಕೂ ಉತ್ತರಿಸಿದ ಆ ಪ್ರಧಾನಿ ಡಾ. ಮನಮೋಹನ್ ಸಿಂಗ್. ಕಳೆದ ಹತ್ತು ವರ್ಷಗಳಲ್ಲಿ ಎಲ್ಲೆಡೆ ಪ್ರಧಾನಿ ಮೋದಿ, ಪ್ರಧಾನಿ ಮೋದಿ. ಎಲ್ಲ ಕಡೆಗಳಲ್ಲೂ ಅವರೇ ಆವರಿಸಿದ್ದಾರೆ. ರಾಜಕೀಯದಲ್ಲಿ ಮಾತ್ರವಲ್ಲ, ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಪೆಟ್ರೋಲ್ ಪಂಪ್ ಗಳಲ್ಲಿ, ದೊಡ್ಡ ಹೈವೆಗಳಲ್ಲಿ, ಸಣ್ಣ ಹಳ್ಳಿಗಳ ರಸ್ತೆಗಳಲ್ಲಿ, ರಸ್ತೆಗಳೇ ಇಲ್ಲದಿರುವಲ್ಲಿ, ಪೋಸ್ಟರ್ ಗಳಲ್ಲಿ, ಟಿವಿ ಚಾನಲ್ ಗಳಲ್ಲಿ, ಪತ್ರಿಕೆಗಳಲ್ಲಿ, ಮೊಬೈಲ್ ಗಳಲ್ಲಿ, ವಾಟ್ಸ್ ಅಪ್ ನಲ್ಲಿ, ಫೇಸ್ ಬುಕ್ ನಲ್ಲಿ ಎಲ್ಲ ಕಡೆ ಕೊನೆಗೆ ಮಂದಿರಗಳಲ್ಲೂ ಅವರೇ ಕಾಣ್ತಾರೆ. ಅಷ್ಟು ಸಾಕಾಗದು ಎಂದು ಈಗ ಅಲ್ಲಲ್ಲಿ ಅವರದೇ ಸೆಲ್ಫಿ ಪಾಯಿಂಟ್ ಕೂಡ ಹಾಕಲಾಗ್ತಾ ಇದೆ. ಆದರೆ ಪತ್ರಿಕಾ ಗೋಷ್ಠಿಯಲ್ಲಿ ಮಾತ್ರ ಅವರು ಕಾಣಲೇ ಇಲ್ಲ. ಅದೂ ಒಂದೆರಡಲ್ಲ, ಹತ್ತು ವರ್ಷಗಳ ಕಾಲ ಅವರು ಕಾಣಲಿಲ್ಲ. ಭಾರೀ ವಿಚಿತ್ರ​.

ಪ್ರಧಾನಿ ಮೋದಿ ಈ ಹತ್ತು ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಲಿಲ್ಲ. ಒಂದು ಕಡೆ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡದ ದಾಖಲೆ, ಇನ್ನೊಂದು ಕಡೆ ಸಾಲು ಸಾಲು ಕೆಲಸಕ್ಕೆ ಬಾರದ ಸ್ಕ್ರಿಪ್ಟೆಡ್ ಸಂದರ್ಶನಗಳ ದಾಖಲೆ.

ಆ ಸಂದರ್ಶನಗಳಾದರೂ ಎಂಥೆಂಥವು?. 2019ರಲ್ಲಿ ಮೋದಿಯನ್ನು ಸಂದರ್ಶಿಸಿದ್ದ ನಟ ಅಕ್ಷಯ್ ಕುಮಾರ್ ಮಾವಿನ ಹಣ್ಣಿನ ಬಗ್ಗೆ ಮೋದಿಗೆ ಪ್ರಶ್ನೆ ಕೇಳಿದ್ದು ಹೇಗೆ ನಗೆಪಾಟಲಿಗೆ ಈಡಾಗಿತ್ತು ಎನ್ನುವುದು ನಿಮಗೆ ಗೊತ್ತಿದೆ. ಇನ್ನು ಟಿವಿ ಚಾನಲ್ ಗಳ ಆಂಕರ್ ಗಳು ಪ್ರಧಾನಿಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗಳಿಗಿಂತ ಬಾಲಿಶವಾಗಿದ್ದವು.

ಸುಳ್ಳು ಕಥೆಗಳನ್ನು ರಂಜನೀಯವಾಗಿ ಹೇಳುವವರ ಹಿಂಬಾಲಕರು​ 2014 ರಲ್ಲಿ, ಒಬ್ಬ ಪ್ರಧಾನಿಯ ಬಗ್ಗೆ ತೀರಾ ಹಗುರವಾಗಿ ಆಡಿಕೊಳ್ಳು​ತ್ತಾ ಒಂದು ವ್ಯವಸ್ಥಿತ ಅಪಪ್ರಚಾರ ಅಭಿಯಾನವನ್ನೇ ನಡೆಸಿದರು. ಹಾಗೆ ​ ಇಂಥವರ ಲೇವಡಿಗೆ ತುತ್ತಾದವರು ಮನಮೋಹನ್ ಸಿಂಗ್. ಆದರೆ ಯಾರನ್ನು ​'ಮೌನ​' ಮೋಹನ್ ಎಂದು ಅಣಕಿಸಲಾಗುತ್ತಿತ್ತೋ ಆ ಮನಮೋಹನ್ ಸಿಂಗ್ ಅವರೇ ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರು.

ಅಂಥ ದಾಖಲೆ ಒಂದು ಕಡೆ, ಮಾತಿನ ಮಲ್ಲ ಎಂದೇ ಬಣ್ಣಿಸಲ್ಪಟ್ಟ ಐವತ್ತಾರು ಇಂಚಿನ ಎದೆಯವರು ಪ್ರಶ್ನೆಗಳೆಂದರೇ ಭಯಬಿದ್ದು ಓಡುತ್ತಿರುವ ದಾಖಲೆ ಇನ್ನೊಂದು ಕಡೆ. ಶ್ವೇತಭವನದಲ್ಲಿ ಮೋದಿ​ ಅನಿವಾರ್ಯವಾಗಿ ಪತ್ರಕರ್ತರ ಪ್ರಶ್ನೆ ಎದುರಿಸಬೇಕಾಗಿ ಬಂದ ಸಂದರ್ಭದ ಬಗ್ಗೆ ಬರೆಯುತ್ತ ನ್ಯೂಯಾರ್ಕ್ ಟೈಮ್ಸ್ ಹೇಳಿರೋ ಹಾಗೆ, ​"ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡೋದೆಂದರೆ ಇಷ್ಟಪಡುವ, ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಸಂದೇಶ ಕೊಡುವ ಮೋದಿ, ಸ್ಕ್ರಿಪ್ಟ್ ಇಲ್ಲದೆ ಏನೇ ಮಾತಾಡುವ ಸಂದರ್ಭವನ್ನು ಅದಕ್ಕೂ ಮೊದಲು ಎದುರಿಸಿದ್ದೇ ಇಲ್ಲ, ಬಹುಶಃ ಮುಂದೆಯೂ ಎದುರಿಸುವುದಿಲ್ಲ.​"

ಯಾಕೆಂದರೆ ಅವರು ಪ್ರಶ್ನೆಗಳನ್ನೇ ಎದುರಿಸಲಾರದವರು. ಪ್ರಶ್ನೆಗಳನ್ನೇ ಸಹಿಸಲಾರದವರು. ಪ್ರಶ್ನಿಸುವವರನ್ನು ಕೂಡ ಸಹಿಸಲಾರರು. ದೇಶದ ಪ್ರಧಾನಿ ಪತ್ರಕರ್ತರ ಪ್ರಶ್ನೆಗಳನ್ನು​ ಪ್ರತಿ ವರ್ಷ ಎದುರಿಸುವ ಕಾಲ ಒಮ್ಮೆ ಇತ್ತು. ಈಗ ​ಪ್ರಧಾನಿ ಪತ್ರಕರ್ತರಿಗೆ ಕೇವಲ ಬಂದು ದರ್ಶನ ಭಾಗ್ಯ ಕೊಡುವ​ ಕಾಲ. ಆಗ ​ನಿರ್ಭೀತವಾಗಿ ಪ್ರಶ್ನಿಸುವ ಪತ್ರಕರ್ತರೂ ಇದ್ದರು. ಈಗ ಅಂಥ ಪತ್ರಕರ್ತರ ಸಂಖ್ಯೆ​ ತೀರಾ ಇಲ್ಲವೆನ್ನುವಷ್ಟು ಕಡಿಮೆ. ಇದ್ದವರಿಗೂ ಮೋದಿ​ವರೆಗೂ ಹೋಗಿ ಪ್ರಶ್ನಿ​ಸಲು ಯಾರು ಬಿಡುತ್ತಾರೆ?.

ಈಗೇನಿದ್ದರೂ, ​ಮೋದಿಯವರು ​ ಪತ್ರಕರ್ತರ ಕ್ಯಾಮೆರಾ ಎದುರು ಕೈ ಬೀ​ಸಿ, ಹೊಗಳುಭಟ್ಟ​ ಪತ್ರಕರ್ತರ ಜೊತೆ ಸೆಲ್ಫಿ ತೆಗೆದುಕೊಂಡು ಅವರನ್ನು ಪುನೀತರಾಗಿಸುವ ಕಾಲ. ಜಿ 20 ಯಂತಹ ಅಂತರ್ ರಾಷ್ಟ್ರೀಯ ಶೃಂಗ ಸಭೆ ಭಾರತದ ಅಧ್ಯಕ್ಷತೆಯಲ್ಲೇ ರಾಜಧಾನಿಯಲ್ಲೇ ನಡೆದಾಗಲೂ ಒಂದೇ ಒಂದು ಪತ್ರಿಕಾ ಗೋಷ್ಠಿ ಮಾಡದ ಮಹಾ ದಾಖಲೆ ಪ್ರಧಾನಿ ಮೋದಿಯವರದ್ದು.

ಅದಕ್ಕಿಂತಲೂ ವಿಪರ್ಯಾಸ ಅಂದ್ರೆ ಶೃಂಗ ಸಭೆಯ ಕೊನೆಗೆ ಪ್ರಧಾನಿ ಬಂದು ಸೇರಿದ ನೂರಾರು ಪತ್ರಕರ್ತರಿಗೆ ಕೇವಲ ಕೈ ಬೀಸಿ ಹೋಗಿದ್ದು, ಅಷ್ಟಕ್ಕೇ ನಾವು ಪುನೀತರಾದೆವು ಎಂಬಂತೆ ಇಲ್ಲಿನ ಪತ್ರಕರ್ತರು ವರ್ತಿಸಿದ್ದು. ಶೃಂಗಸಭೆಗೆ ಬಂದಿದ್ದ ಅಮೇರಿಕ ಅಧ್ಯಕ್ಷ ಅನಿವಾರ್ಯವಾಗಿ ಭಾರತದಿಂದ ಹೊರಟ ಮೇಲೆ ವಿಯೆಟ್ನಾಮ್ ಗೆ ಹೋಗಿ ಭಾರತದಲ್ಲಿ ಮಾನವ ಹಕ್ಕುಗಳ ಹಾಗು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮೋದಿಯವರಲ್ಲಿ ಮಾತಾಡಿದೆ ಎಂದು ಹೇಳಬೇಕಾಯಿತು.

ಏಕೆಂದರೆ ಅವರಿಗೆ ಇಲ್ಲಿ ಪತ್ರಿಕಾ ಗೋಷ್ಠಿ ಮಾಡುವ ಅವಕಾಶವನ್ನೇ ಕೊಡಲಿಲ್ಲ. ಇಲ್ಲೀಗ​ ಪತ್ರಿಕಾ ಗೋಷ್ಠಿ ಮೇಲೆ ಮಾತ್ರವಲ್ಲ, ಪ್ರಶ್ನೆಗಳ ಮೇಲೆಯೇ ನಿರ್ಬಂಧ ಹಾಕಲಾಗಿದೆ. ಪ್ರಶ್ನೆ ಕೇಳುವ​ ಶಶಿಕಾಂತ್ ವಾರಿಶೆ ಯಂತಹ ಪತ್ರಕರ್ತರನ್ನು ಸ್ಕಾರ್ಪಿಯೋ ಅಡಿಗೆ ಹಾಕಿ ಮುಗಿಸಿಬಿಡಲಾಗುತ್ತದೆ. ​

ಮೋದಿಯ ಪಕ್ಷ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಪ್ರಶ್ನೆ ಕೇಳುವ ವರದಿಗಾರರ ಮೇಲೆ ಕೇಸುಗಳ ಮೇಲೆ ಕೇಸು ಬೀಳುತ್ತದೆ. ನ್ಯೂಸ್ ಕ್ಲಿಕ್ನಂಥ ​ ಮಾಧ್ಯಮ ಸಂಸ್ಥೆ ಸಂಪಾದಕರ ಮೇಲೆ​ ಭಯೋತ್ಪಾದಕರ ವಿರುದ್ಧ ಹಾಕುವ ಯುಎಪಿಎ​ ಕೇಸು ಹಾಕಲಾಗುತ್ತದೆ. ಗೌರಿ ಲಂಕೇಶ್ ಹತ್ಯೆಯೂ ಸೇರಿದಂತೆ ​ಹಲವಾರು ಪತ್ರಕರ್ತರ ಹತ್ಯೆ ಈಚಿನ ಕೆಲವೇ ವರ್ಷಗಳಲ್ಲಿ ನಡೆದಿದೆ. ತ್ರಿಪುರಾದಲ್ಲಿ ಪೊಲೀಸ್ ಅಧಿಕಾರಿಯ ಗುಂಡಿಗೆ​ ಪತ್ರಕರ್ತ ಸುದೀಪ್ ದತ್ತಾ ಭೌಮಿಕ್ ಬಲಿ​ಯಾದರು. ​ಅದಕ್ಕೂ ಎರಡೇ ತಿಂಗಳು ಮೊದಲು ಅಲ್ಲಿ ಶಂತನು ಭೌಮಿಕ್ ಎಂಬ ಪತ್ರಕರ್ತರ ಕೊಲೆಯಾಗಿತ್ತು. ವಾಹನ ಹರಿಸಿ ಬಿಹಾರದಲ್ಲಿ ನವೀನ್ ಸಿಂಗ್ ಮತ್ತು ವಿಜಯ್ ಸಿಂಗ್ ​ಎಂಬ ಪತ್ರಕರ್ತರನ್ನು ಕೊಲ್ಲಲಾಯಿತು.

ಮಧ್ಯಪ್ರದೇಶದಲ್ಲಿ ಸಂದೀಪ್ ಶರ್ಮಾ​ ಬಲಿಯಾದರು.

​ನಿಜವಾದ ಪತ್ರಕರ್ತರನ್ನು ಗುಂಡಿಟ್ಟು ಕೊಲ್ಲುವುದು, ಕಾರು ಹರಿಸಿ ಸಾಯಿಸುವುದು ಸಾಮಾನ್ಯವೇ ಆಗಿರುವ ದಿನಗಳಿವು. ಪ್ರಶ್ನೆ ಕೇಳುವ, ವಸ್ತುನಿಷ್ಠ ವರದಿಗಾರಿಕೆಯಲ್ಲಿ ತೊಡಗಿರುವ ಪರ್ತಕರ್ತರು ದೇಶಾದ್ಯಂತ ಅಪಾಯದಲ್ಲಿದ್ದಾರೆ. ವಿಶ್ವಸಂಸ್ಥೆಯಲ್ಲಿಯೂ ಧ್ವನಿಸುವ ಮಟ್ಟಕ್ಕೆ ದೇಶದ ಪತ್ರಕರ್ತರ ಎದುರು ಕರಾಳ ವಾತಾವರಣವಿದೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿರುವ ಪತ್ರಕರ್ತರು ಒಂದೊ ಕೊಲೆಯಾಗುತ್ತಿದ್ದಾರೆ​.

ಇಲ್ಲವೆ ಹಲ್ಲೆ, ಬೆದರಿಕೆ, ಕೇಸು, ಜೈಲು ಇಂಥವನ್ನು ಎದುರಿಸಬೇಕಾದ ಸ್ಥಿತಿಯಿದೆ. ಪ್ರಭುತ್ವವನ್ನು ​ಹಗಲು ರಾತ್ರಿ ಹೊಗಳುವ​, ಎಲ್ಲದಕ್ಕೂ ವಿಪಕ್ಷವನ್ನೇ ಪ್ರಶ್ನಿಸುವ ​ಮಡಿಲ ಮೀಡಿಯಾ ದೇಶದ ಬಹುಪಾಲು ಮಾಧ್ಯಮವನ್ನು ಆಕ್ರಮಿಸಿರುವ ಸಂದರ್ಭ ಇವತ್ತಿನದು. ಭಟ್ಟಂಗಿ ಪತ್ರಕರ್ತರನ್ನು​ ಮಾತ್ರ ಪಕ್ಕದಲ್ಲಿ ​ನಿಲ್ಲಿಸಿಕೊಂಡು ಸೆಲ್ಫಿ ತೆಗೆದುಕೊಳ್ಳುವವರ ಆಡಳಿತದಲ್ಲಿ ಇದಕ್ಕಿಂತ ಇನ್ನೇನು ನಿರೀಕ್ಷಿಸುವುದು ಸಾಧ್ಯ?

ದೇಶ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪಾತಾಳ ಸೇರದೆ ಇನ್ನೇನಾಗಲಿದೆ?. ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆಯೆಂದರೆ, ಪ್ರಜಾಪ್ರಭುತ್ವವನ್ನು ಕಾಯಬೇಕಿದ್ದ ಸಂಸತ್ತಿನಲ್ಲೇ ​ಪ್ರಶ್ನೆಗಳನ್ನು ಇಲ್ಲವಾಗಿಸಲಾಗಿದೆ. ಪ್ರಶ್ನಿಸುವ ಸಂಸದರನ್ನು, ಪ್ರತಿಭಟಿಸುವವರನ್ನು ಅಷ್ಟೇ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಅಮಾನತುಗೊಳಿಸಿ, ಪ್ರಜಾಪ್ರಭುತ್ವದ ಸೌಧದೊಳಗೆ ವಿಪಕ್ಷಗಳೇ ಇಲ್ಲದಂತೆ ಮಾಡಲಾಗುತ್ತಿದೆ.

ಬೀದಿಗಳಲ್ಲಿಯೂ ಪ್ರತಿಭಟನೆ, ಪ್ರದರ್ಶನ, ಧರಣಿಗಳನ್ನು ಇಲ್ಲವಾಗಿಸಲಾಗಿದೆ.​ ಪತ್ರಕರ್ತರಂತೂ ಮೊದಲೇ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಪ್ರಶ್ನೆಗಳಿಲ್ಲದ, ಪ್ರದರ್ಶನಗಳಿಲ್ಲದ, ಪ್ರತಿಭಟನೆಗಳಿಲ್ಲದ ವಿಚಿತ್ರ, ವಿನೂತನ ಪ್ರಜಾಪ್ರಭುತ್ವ ನಮ್ಮದಾಗಿದೆ.

ಕಳೆದ 10 ವರ್ಷಗಳಿಂದ ​ಮಡಿಲ ಮೀಡಿಯಾದ ಅರಚಾಡುವ ಆ್ಯಂಕರ್‌ಗಳು ಪ್ರಧಾನಿ​ಯ ಸೇವೆಯಲ್ಲಿದ್ದು, ಪತ್ರಿಕೋದ್ಯಮವನ್ನು ಕೊಚ್ಚೆಗೆ ತಳ್ಳಿದ್ದಾರೆ. ​ಈಗ ಮಾಧ್ಯಮಗಳ ಮಾತೇನಿದ್ದರೂ ಮೋದಿಗಾಗಿ ಮಾತ್ರ.

ಒಬ್ಬ ಸಾಮಾಜಿಕ ಕಾರ್ಯಕರ್ತ ಅಥವಾ ಪತ್ರಕರ್ತನಿಗೆ ವಿದೇಶಗಳಲ್ಲಿ​ ಪ್ರತಿಷ್ಠಿತ ಗೌರವ ಸಿಕ್ಕರೆ ಅದನ್ನು ಭಾರತ ವಿರೋಧಿ ಪಿತೂರಿ ಎಂದು ​ಬಣ್ಣಿಸಲಾಗುತ್ತದೆ.​ ರವೀಶ್ ಕುಮಾರ್ ಗೆ ಪ್ರತಿಷ್ಠಿತ ಮ್ಯಾಗ್ ಸೇಸೆ ಪ್ರಶಸ್ತಿ ಬಂದಾಗ, ಹುತಾತ್ಮ ದಾನಿಶ್ ಸಿದ್ದೀಕಿ ಸಹಿತ ನಾಲ್ಕು ಪತ್ರಕರ್ತರಿಗೆ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಬಂದಾಗ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲೇ ಇಲ್ಲ.

​ಇಲ್ಲೀಗ ಸರಕಾರವನ್ನು ಹೇಗೂ ಮಡಿಲ ಮಾಧ್ಯಮಗಳು ಪ್ರಶ್ನಿಸಲ್ಲ. ಆದರೆ ಪ್ರಶ್ನಿಸುವವರನ್ನು ಗುರಿಯಾಗಿಸಲು ಅ​ವು ಖಂಡಿತವಾಗಿಯೂ ಸರ್ಕಾರದೊಂದಿಗೆ ಜೊತೆಯಾಗುತ್ತ​ವೆ. ಅವರನ್ನು ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದು ಕರೆಯುವುದರಲ್ಲಿ ​ಮಡಿಲ ಮೀಡಿಯಾವೇ ಮುಂದಿರುತ್ತದೆ. ತಮಾಷೆಯೆಂದರೆ, ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನು ಎದುರಿಸಿರದ ಮೋದಿಗೆ ಕೂಡ ಈ ಗೋದಿ ಮೀಡಿಯಾಗಳ ಬಗ್ಗೆ ಅತ್ಯಂತ ತಾತ್ಸಾರ.

ಆದರೆ ಭಕ್ತ ಗೋದಿ ಮೀಡಿಯಾಗಳಿಗೆ ಮಾತ್ರ ಅದು ಅರ್ಥವಾಗುವುದಿಲ್ಲ, ಅರ್ಥ ಮಾಡಿಕೊಳ್ಳುವ ಮಟ್ಟದ ವಿವೇಚನೆಯೂ ಅವಕ್ಕಿಲ್ಲ. ಯಾವತ್ತಿನಿಂದ ಈ ದೇಶದ ಪ್ರಧಾನಿಯೊಬ್ಬರು ಪತ್ರಕರ್ತರ ನೇರ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ವಿಮುಖರಾದರೊ, ಮತ್ತು ಅದನ್ನು ಪತ್ರಕರ್ತರು ಬಹಳ ವಿನಮ್ರ ಭಾವದಿಂದಲೇ ಒಪ್ಪಿಕೊಂಡುಬಿಟ್ಟರೊ​, ಅವತ್ತಿನಿಂದಲೇ ಈ ದೇಶದಲ್ಲಿ ಪತ್ರಿಕೋದ್ಯಮದ ಅಂತ್ಯ ಕೂಡ ಆರಂಭವಾಗಿ ಹೋಯಿತು. ಪ್ರಶ್ನೆಗಳೇ ಇಲ್ಲದ ಮೇಲೆ ಎಲ್ಲಿಯ ಪತ್ರಿಕೋದ್ಯಮ?.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!