ದ್ವೇಷ ಬರಹ, ಜನವಿರೋಧಿ ನಡೆಯ ಮೂಲಕವೇ ಬೆಳೆದು, ಮುಗ್ಗರಿಸಿದ ವಿಫಲ ರಾಜಕಾರಣಿ

Update: 2024-03-18 04:38 GMT
Editor : Ismail | Byline : ಆರ್. ಜೀವಿ

ಬಿಜೆಪಿ 2ನೇ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಈಗಾಗಲೇ ಸುಳಿವು ಸಿಕ್ಕಿದ್ದಂತೆ, ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೈತಪ್ಪುತ್ತದೆ ಎಂಬುದು ಗೊತ್ತಾದ ಕ್ಷಣದಿಂದಲೂ ಪ್ರತಾಪ್ ಅವರ ಹತಾಶೆಯನ್ನು ಇಡೀ ರಾಜ್ಯವೇ ನೋಡಿದೆ.

ಜನವಿರೋಧಿ ಧೋರಣೆಯಿಂದಲೇ ಸಂಘ ಪರಿವಾರದಲ್ಲಿ ಮುನ್ನೆಲೆಗೆ ಬಂದಿದ್ದ ಪತ್ರಕರ್ತನೊಬ್ಬ ಎರಡೆರಡು ಬಾರಿ ರಾಜ್ಯದ ಸಾಂಸ್ಕೃತಿಕ ನಗರದ ಜನಪ್ರತಿನಿಧಿಯೂ ಆಗಿಬಿಟ್ಟಿದ್ದು ಒಂದು ವಿಪರ್ಯಾಸ. ಹತ್ತು ವರ್ಷಗಳ ಬಳಿಕ ಅವರ ಪಕ್ಷದಿಂದಲೇ ಅದಕ್ಕೊಂದು ಹಂತದ ಅಂತ್ಯ ಸಿಕ್ಕಿದೆ.

ಮೋದಿ ಹೆಸರಿನ ಬಲದಿಂದಲೇ ರಾಜಕೀಯದಲ್ಲಿ ಗೆದ್ದು, ಆ ಬಳಿಕ ​ಜನಪ್ರತಿನಿಧಿಯ ಘನತೆಗೆ ತಕ್ಕಂತೆ ನಡೆದುಕೊಳ್ಳದ ವ್ಯಕ್ತಿಯನ್ನು,

ರಾಜಕೀಯವಾಗಿ ನೇಪಥ್ಯಕ್ಕೆ ಸರಿಸುವುದಕ್ಕೆ, ಆತನ ಬೆನ್ನು ನೇವರಿಸಿ ಸಂಸತ್ತಿಗೆ ಕಳಿಸಿದ್ದ ಪಕ್ಷವೇ ಕಡೆಗೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ .

ಹಿಂದುತ್ವದ ಹೆಸರಿನಲ್ಲಿ, ಧರ್ಮ ಮತ್ತು ಸಮುದಾಯ ದ್ವೇಷದ ಹೆಸರಿನಲ್ಲಿ ಎಷ್ಟೇ ಆಟವಾಡಿದರೂ ಅದು ಕೊನೆಯಾಗುವ ಕಾಲವೊಂದು ಬಂದೇ ಬರುತ್ತದೆ ಎಂಬುದನ್ನು ಈ ಬೆಳವಣಿಗೆ ತೋರಿಸಿದೆ. ದ್ವೇಷ, ಅಸಹಿಷ್ಣುತೆಯೇ ಅರ್ಹತೆಯಾಗಿ ಅಧಿಕಾರ ಕಂಡ ವ್ಯಕ್ತಿಯನ್ನು ಕಡೆಗೆ ಅವರದೇ ಪಕ್ಷ ಮನೆಗೆ ಕಳಿಸಿದೆ.

ಕೇವಲ ಮೋದಿ ಹೆಸರಲ್ಲಿ ಬಂದು, ಮೋದಿ ಹೆಸರಲ್ಲೇ ಗೆಲ್ಲುವವರು, ಮೋದಿ ಹೆಸರಿಲ್ಲದೆ ರಾಜಕೀಯದಲ್ಲಿ ಏನೂ ಅಲ್ಲದವರು ಬಿಜೆಪಿಯಲ್ಲಿ ಕೆಲವರಿದ್ದಾರೆ. ಅವರೇ ಹೇಳಿಕೊಂಡಂತೆ ಮೋದಿ ಇಲ್ಲದೆ ಅವರು ನಾಯಕರೂ ಅಲ್ಲ, ಏನೇನೂ ಅಲ್ಲ. ಅಂಥವರ ಸಾಲಿನಲ್ಲಿ ಮೈಸೂರು ಹಾಲಿ ಸಂಸದ ಪ್ರತಾಪ್ ಸಿಂಹ ಕೂಡ ಒಬ್ಬರು.

ಮೋದಿ ಅಭಯ ನಂಬಿಕೊಂಡು, ಕೇವಲ ದ್ವೇಷ ರಾಜಕಾರಣವನ್ನೇ ಮಾಡಿದ, ಎಂದೂ ಜನಪರವಾಗಿ ನಡೆದುಕೊಳ್ಳದ ಪ್ರತಾಪ್ ಸಿಂಹ ಬಂದಷ್ಟೇ ವೇಗವಾಗಿ ರಾಜಕೀಯದಲ್ಲಿ​ ಬದಿಗೆ ಸರಿಸಲ್ಪಟ್ಟಿದ್ದಾರೆ. ಪ್ರತಾಪ್ ಸಿಂಹ ಒಬ್ಬ ವಿಫಲ ರಾಜಕಾರಣಿ. ಯಾಕೆಂದರೆ ಅವರೊಬ್ಬ ವ್ಯಕ್ತಿಯಾಗಿಯೂ ಒಳ್ಳೆಯತನವನ್ನು, ಒಳ್ಳೆಯ ಮನಸ್ಸನ್ನು ಹೊಂದಿಲ್ಲ ಎಂಬುದಕ್ಕೆ ಅಧಿಕಾರದ ಅಮಲಿನಲ್ಲಿ ಇಷ್ಟು ಕಾಲ ಅವರು ನಡೆದುಕೊಂಡ ರೀತಿಯೇ ಸಾಕ್ಷಿ.

ಪಕ್ಷದೊಳಗೇ ನಾಯಕರ ನಡುವೆ ವಿಶ್ವಾಸ ಬೆಳೆಸಿಕೊಳ್ಳಲಿಲ್ಲ. ಅದೇ ದ್ವೇಷದ ಮನಃಸ್ಥಿತಿಯನ್ನು ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ವಿಚಾರದಲ್ಲಿಯೂ ತೋರಿಸಿದರು. ದ್ವೇಷವನ್ನು ಪ್ರಚೋದಿಸುತ್ತಲೇ ಸುದ್ದಿಯಲ್ಲಿದ್ದರು, ವಿವಾದಗಳನ್ನು ಸೃಷ್ಟಿಸುತ್ತಲೇ ರಾಜಕೀಯವಾಗಿ ಅಸ್ತಿತ್ವ ಕಾಪಾಡಿಕೊಳ್ಳಲು ಹೊಂಚಿದರು.

ಯಾಕೆಂದರೆ ಅವರಿಗೆ ಅದೇ ದೊಡ್ಡ ಬಂಡವಾಳವಾಗಿತ್ತು. ಸದಾ ಹಿಂದೂ ಮುಸ್ಲಿಂ ಎಂದು ಪ್ರಚೋದನಕಾರಿ ಹೇಳಿಕೆಗಳ ಮೂಲಕವೇ ರಾಜಕೀಯವಾಗಿ ಬೆಳೆಯಲು, ವರಿಷ್ಠರ ಗಮನ ಸೆಳೆಯಲು ನೋಡಿದರು. ಉದ್ದಟತನದ ಮೂಲಕ ಪಕ್ಷದ ಸ್ಥಳೀಯ ನಾಯಕರನ್ನು, ಕಾರ್ಯಕರ್ತರನ್ನು, ಅಧಿಕಾರಿಗಳನ್ನು, ಪತ್ರಕರ್ತರನ್ನು ಎದುರು ಹಾಕಿಕೊಂಡರು. ದೇಶಭಕ್ತಿ, ದೇಶ ರಕ್ಷಣೆಯ ಭಾಷಣ ಮಾಡುತ್ತಲೇ ಸಂಸತ್ತಿನೊಳಗೆ ಹೊಗೆ ಬಾಂಬ್ ಸ್ಫೋಟ ವಿದ್ಯಮಾನದ, ಐತಿಹಾಸಿಕ ಕಳಂಕದ ಭಾಗವಾಗಿ ಹೋದರು.

ಒಬ್ಬ ಜನಪ್ರತಿನಿಧಿ ಹೇಗೆ ಕೇವಲ ಹಿಂದುತ್ವ ಹಾಗು ವರಿಷ್ಠರ ಅಭಯ ನೆಚ್ಚಿಕೊಂಡು ಜನವಿರೋಧಿ ಆಗಿಯೂ ತಾನು ರಾಜಕೀಯವಾಗಿ ಬೆಳೆಯಬಲ್ಲೆ ಎಂಬ ಭ್ರಮೆಯಲ್ಲಿರುತ್ತಾನೆ. ಕೊನೆಗೆ ಅದಕ್ಕೆ ದೊಡ್ಡಬೆಲೆ ತೆರುತ್ತಾನೆ ಎಂಬುದಕ್ಕೆ ಪ್ರತಾಪ್ ಸಿಂಹ ಅತ್ಯುತ್ತಮ ನಿದರ್ಶನ. ಪತ್ರಕರ್ತನಾಗಿಯೂ ಜನವಿರೋಧಿ ಆಶಯಗಳನ್ನೇ ಪ್ರತಿಪಾದಿಸುತ್ತಿದ್ದ, ನಾಡಿನ ಪ್ರಮುಖ ಸಾಹಿತಿಗಳು, ಚಿಂತಕರನ್ನು ಅವಮಾನಿಸಿಯೇ ಸಂಘ ಪರಿವಾರದವರ ನಡುವೆ ಪ್ರವರ್ಧಮಾನಕ್ಕೆ ಬಂದ ಪ್ರತಾಪ್ ಸಿಂಹ ರಾಜಕೀಯದಲ್ಲೂ ಅದೇ ರೀತಿಯ ದ್ವೇಷದ ನಡೆಯಿಂದ ಗೆದ್ದುಬಿಡಬಲ್ಲೆ ಎಂದುಕೊಂಡಿದ್ದರು.

ಆದರೆ ಅಧಿಕಾರ ಸಿಕ್ಕಿದೆ ಎಂದುಕೊಂಡು ನೆಲವನ್ನೇ ಮರೆತಂತೆ ವರ್ತಿಸಿದವರ ​ಅವಿವೇಕ ಮತ್ತು ಅತ್ಯಾತುರವನ್ನೇ ಉದ್ದಕ್ಕೂ ಪ್ರದರ್ಶಿಸಿ ಕೊನೆಗೆ ಕೈ ಸುಟ್ಟುಕೊಂಡರು. ಪಕ್ಷದೊಳಗೆ ರಾಜ್ಯದ ಯಾವ ನಾಯಕರೂ ಪ್ರತಾಪ್ ಸಿಂಹ ಪರವಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಕೇವಲ ಓಲೈಕೆಯಿಂದ ಅಧಿಕಾರ ಪಡೆದು ತನ್ನ ವರ್ತನೆಯಿಂದಾಗಿ ಎಲ್ಲರ ವಿಶ್ವಾಸವನ್ನೂ ಕಳೆದುಕೊಂಡ ಪ್ರತಾಪ್ ಸಿಂಹಗೆ ಪಕ್ಷದೊಳಗೆ ಈಗ ಯಾರೂ ಮಿತ್ರರಿಲ್ಲ, ಹಿತೈಷಿಗಳು ಉಳಿದಿಲ್ಲ.

ಎರಡೂ ಬಾರಿ ಪ್ರತಾಪ್ ಸಿಂಹ ಮೈಸೂರಿನಲ್ಲಿ ಮೋದಿ ಹೆಸರಿನ ಬಲದಿಂದಷ್ಟೇ ಗೆದ್ದಿದ್ದೇ ಹೊರತು ಮತ್ತಾವ ಅರ್ಹತೆಯಿಂದಲೂ ಅಲ್ಲ.

2014ರಲ್ಲಿ ಅಚಾನಕ್ ಆಗಿ ಬಿಜೆಪಿ ಟಿಕೆಟ್ ಸಿಕ್ಕಾಗ , ಬಿಜೆಪಿ ಬಲ, ಯಡಿಯೂರಪ್ಪ ಮತ್ತು ಮೋದಿಕೃಪೆಯಿಂದಲೇ ಗೆಲ್ಲುವುದು ಸಾಧ್ಯವಾಗಿತ್ತು.

ಅನಂತರವೂ ಎದುರಾಳಿ ಪಕ್ಷಗಳು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜಾತಿಬಲವೇ ಕೈಹಿಡಿದ ಪರಿಣಾಮ ಹಾಗು ಮೋದಿ ಅಲೆಯಲ್ಲಿ ಗೆಲುವು ಸಿಕ್ಕಿತ್ತು.

ಆದರೆ ಹಾಗೆ ಬಂದ ಗೆಲುವನ್ನು ಸದುಪಯೋಗ ಪಡಿಸಿಕೊಳ್ಳುವ ಸಜ್ಜನಿಕೆ ಮತ್ತು ತಾಳ್ಮೆಯನ್ನು ತೋರಿಸಿದ್ದರೂ, ಒಳ್ಳೆಯ ನಡೆಯಿಂದ ಜನರ ಪ್ರೀತಿಯನ್ನು ಗಳಿಸಿದ್ದರೂ ಪ್ರತಾಪ್ ಸಿಂಹ್ ಇವತ್ತು ಈ ಮಟ್ಟಿಗೆ ಯಾರೂ ರಾಜಕೀಯವಾಗಿ ಬೆನ್ನಿಗಿರದಂತೆ ಆಗುವ ಸ್ಥಿತಿಗೆ ಬಂದು ಮುಟ್ಟುತ್ತಿರಲಿಲ್ಲ. ರಾಜ್ಯ ನಾಯಕರ ಜೊತೆ ಅಸಡ್ಡೆ, ಉದ್ದಟತನದ ವರ್ತನೆಯನ್ನೇ ತೋರಿಸುತ್ತ ಬಂದ ಪ್ರತಾಪ್ ಸಿಂಹ್ ಒಂದು ಹಂತದಲ್ಲಿ ಬಿಜೆಪಿಯ ದೆಹಲಿ ನಾಯಕರ ಕೆಂಗಣ್ಣಿಗೂ ತುತ್ತಾದರು.

ಸಂಸತ್ ಒಳಗೆ ಹೊಗೆ ಬಾಂಬ್ ಸಿಡಿಸಿದವರಿಗೆ ಪಾಸ್ ನೀಡಿದ್ದ ಪ್ರಕರಣದಲ್ಲಂತೂ ಪ್ರತಾಪ್ ಸಿಂಹ ಸಂಪೂರ್ಣ ಮೂಲೆಗುಂಪಾದರು.

ಮತ್ತದು ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರ ತಂದಿತ್ತು. ಮತ್ತೆ ಅವರಿಗೇ ಟಿಕೆಟ್ ಕೊಡುವುದರಿಂದ ಪಕ್ಷ ಇನ್ನಷ್ಟು ಮುಜುಗರಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಅಭಿಪ್ರಾಯ ಆ ಹೊತ್ತಿನಲ್ಲಿಯೇ ಮೂಡಿಬಿಟ್ಟಿತ್ತು.

ಮೈಸೂ​ರಿನ ಎಲ್ಲ ಜನರ ಪ್ರತಿನಿಧಿಯಾಗುವ , ಅದರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಿಳಿದುಕೊಳ್ಳುವ, ಅದರ ವೈವಿಧ್ಯತೆ ಮತ್ತು ಹಿರಿಮೆಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ವಿವೇಕವನ್ನೂ ಪ್ರತಾಪ್ ಸಿಂಹ ತೋರಿಸಲೇ ಇಲ್ಲ. ಟಿಪ್ಪು ಜಯಂತಿ, ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತ, ಗಲಾಟೆಗೆ ಕಾರಣವಾಗುತ್ತ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರವೇ ನೋಡಿದರು ಪ್ರತಾಪ್ ಸಿಂಹ.

ಕ್ಷೇತ್ರದ ಅಭಿವೃದ್ಧಿಗಿಂತಲೂ ಪ್ರತಾಪ್ ಸದಾ ವಿವಾದಾತ್ಮಕ ಹೇಳಿಕೆ, ಗಲಾಟೆಗಳಿಂದಲೇ ಪ್ರಚಾರ ಪಡೆಯಲು ಯತ್ನಿಸಿದ್ದನ್ನು ಜನ ನೋಡುತ್ತಲೇ ಬಂದಿದ್ದಾರೆ. ಮೈಸೂರು ನಗರದ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಇದೇ ಪ್ರತಾಪ್ ಸಿಂಹ.

ಹುಣಸೂರಿನಲ್ಲಿ ನಡೆದ ಹನುಮ‌ ಜಯಂತಿ ಆಚರಣೆ ವೇಳೆ ರಾಮಭಕ್ತರನ್ನು ಪ್ರಚೋದಿಸಿ ಗಲಾಟೆ ಎಬ್ಬಿಸಿದ್ದು ಕೂಡ ಈ ಮಹಾಶಯರೇ . ಪೊಲೀಸರು ಹನುಮ ಜಯಂತಿ ವೇಳೆ ಹುಣಸೂರು ನಗರ ಪ್ರವೇಶಿಸದಂತೆ ಬ್ಯಾರಿಕೇಡ್ ಅಡ್ಡಹಾಕಿದ್ದಕ್ಕೆ ಪೊಲೀಸ್ ಬ್ಯಾರಿಕೇಡ್ ಅನ್ನೇ ಗುದ್ದಿ ​ಯುವಜನರಿಗೆ ಕೆಟ್ಟ ಸಂದೇಶ ರವಾನಿಸಿದರು ಪ್ರತಾಪ್ ಸಿಂಹ.

ಕೇಂದ್ರ ಗೃಹ ಸಚಿವ ಅಮಿತ್ ಶಾ ತನ್ನನ್ನು ಕರೆದು ಕರ್ನಾಟಕದಲ್ಲಿ ನಾವು ಮಾಡಿದ ಪ್ರತಿಭಟನೆಗಳ ವೇಳೆ ಲಾಠಿ ಚಾರ್ಜ್ , ಅಶ್ರುವಾಯು ಸಿಡಿತ ಆಗಿದೆಯೇ ? ಹಾಗೆ ಆಗುವಂತೆ ಮಾಡಬೇಕು ಎಂದು ಹೇಳಿದ್ದರು ಎಂಬ ​ಪ್ರತಾಪ್ ಸಿಂಹ​ ಆಡಿಯೋ ಸಂಭಾಷಣೆ ಕೂಡ ​ವಿವಾದಕ್ಕೆ ಕಾರಣವಾಗಿತ್ತು.

ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ಗಲಾಟೆಗೆ ಕೂಡ ಪ್ರತಾಪ್ ಸಿಂಹ ನೀಡಿದ್ದ ಪ್ರಚೋದನಕಾರಿ ಹೇಳಿಕೆ ಕಾರಣವಾಗಿತ್ತು. ಕಳೆದ ಹಲವು ವರ್ಷಗಳಿಂದ ಬಹುಜನರು ಆಚರಣೆ ಮಾಡಿಕೊಂಡು ಬರುತ್ತಿದ್ದ ಮಹಿಷ ದಸರಾಕ್ಕೆ ಅಡ್ಡಿಪಡಿಸಿ ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿದ್ದ ಪೆಂಡಾಲ್ ಅನ್ನು ಕಿತ್ತು, ಅಂದು ಮೈಸೂರು ಡಿಸಿಪಿ ಆಗಿದ್ದ ಮುತ್ತುರಾಜ್ ಅವರ ವಿರುದ್ದ ಬಳಸಬಾರದ ಪದ ಬಳಸಿ ಮಾತನಾಡಿದ್ದು ಇದೇ ಸಂಸದ.​

ತನ್ನ ನಡವಳಿಕೆ ಮತ್ತು ಮಾತುಗಳ ಕಾರಣದಿಂದಾಗಿ ಆಗ ಪ್ರತಾಪ್ ಸಿಂಹ ಪೊಲೀಸರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು.

ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸುವ ಮೂಲಕ ಈ ಭಾಗದ ದಲಿತರ ವಿರೋಧ ಕಟ್ಟಿಕೊಂಡದ್ದೂ ಆಯಿತು. ಅದಕ್ಕಿಂತಲೂ ಅದೊಂದು ಸಾಂಸ್ಕೃತಿಕ ತಿಳುವಳಿಕೆ ಇಲ್ಲದವನ ಅತಿರೇಕದ ನಡವಳಿಕೆಯಾಗಿತ್ತು.

2019ರಲ್ಲಿ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆಯ ನೌಕರನಿಂದ​ ಮೊದಲು ಕೋವಿಡ್ ಕಾಣಿಸಿಕೊಂಡಿತು ಎಂಬುದು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ, ಆ ಕಂಪನಿ ಪರ ನಿಂತಿದ್ದ ಪ್ರತಾಪ್ ಸಿಂಹ, ನಂಜನಗೂಡು ಶಾಸಕ, ಅವರದೇ ಪಕ್ಷದ ಹರ್ಷವರ್ಧನ್ ಜೊತೆಗೂ ಜಟಾಪಟಿ ಮಾಡಿಕೊಂಡಿದ್ದರು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಜೊತೆಗೂ ಕೋವಿಡ್ ಸಮಯದಲ್ಲಿ ವಿರೋಧ ಕಟ್ಟಿಕೊಂಡಿದ್ದರು. ಅವರ ವಿರುದ್ಧವೂ ಹೇಳಿಕೆಗಳನ್ನು ನೀಡಿದ್ದರು. ನಂತರ 2020ರಲ್ಲಿ ನಂಜನಗೂಡು ತಾಲ್ಲೂಕು ಹುಚ್ಚಗಣಿ ಮಾರಮ್ಮ ದೇವಸ್ಥಾನ ರಸ್ತೆ ಪಕ್ಕದಲ್ಲಿದೆ ಎಂ​ದು ಸರ್ಕಾರದ ಆದೇಶದಂತೆ ಕೆಡವಿದ್ದ​ಕ್ಕೆ ಅಂದಿನ ಜಿಲ್ಲಾಧಿಕಾರಿ ಭಗಾದಿ ಗೌತಮ್ ವಿರುದ್ಧ ಕೆಡಿಪಿ ಸಭೆಯಲ್ಲೇ ಕೆಟ್ಟದಾಗಿ ಮಾತನಾಡಿ, ಇಡೀ ಅಧಿಕಾರಿ ಸಮೂಹದ ಕೆಂಗಣ್ಣಿಗೆ ಗುರಿಯಾಗಿದ್ದರು.

ಆ ವೇಳೆ ನಂಜನಗೂಡು ತಹಶೀಲ್ದಾರ್ ಆಗಿದ್ದ ಲಿಂಗಾಯತ ಸಮುದಾಯದ ಮೋಹನ್ ಕುಮಾರಿ ಅವರ ಅಮಾನತಿಗೆ ಪಟ್ಟು ಹಿಡಿದು, ಕಡೆಗೆ ವರ್ಗಾವಣೆ ಮಾಡಿಸಿ, ಲಿಂಗಾಯತ ಸಮುದಾಯದವರ ಕೋಪಕ್ಕೂ ತುತ್ತಾಗಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಹಿರಿಯ ಜನ ನಾಯಕರ ವಿರುದ್ದ ನಾಲಿಗೆ ಹರಿಬಿಟ್ಟು ಆ ನಾಯಕರ ಸಮುದಾಯಗಳ ಕೋಪಕ್ಕೂ ಗುರಿಯಾಗಿದ್ದಾರೆ. ಮಾತೆತ್ತಿದರೆ, ಗಂಡಸುತನ ಎನ್ನುವ, ದಲಿತ ಸಮುದಾಯದ ಕುರಿತು ತುಳಿದು ಹಾಕುತ್ತೇನೆ, ಹೊಸಕಿ ಹಾಕುತ್ತೇನೆ ಎನ್ನುವ, ಈ ಸಂಸದರಿಗೆ ಕಡೆಗೂ ಅವರ ಪಕ್ಷದವರೇ ಅವರ ದಾರಿ ಯಾವುದು ಎಂಬುದನ್ನು ತೋರಿಸಿದ್ದಾರೆ.

ಅವರದೇ ಪಕ್ಷದ ಮಾಜಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ​ ಹಲವು ಮುಖಂಡರುಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿಯಿಂದಾಗಿ ಸ್ವಪಕ್ಷದವರೇ ಪ್ರತಾಪ್ ಸಿಂಹ ವಿರುದ್ಧ ತಿರುಗಿ ನಿಂತಿದ್ದಾರೆ. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ವಿರೋಧವೂ ಸಾಕಷ್ಟು ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪ​ರ್ಧಿಸಿದ್ದ ವಿ.ಸೋಮಣ್ಣ ಪರ ಮಾತ್ರ ಪ್ರಚಾರ ಮಾಡಿ ಇನ್ನುಳಿದ ಯಾವುದೇ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿಲ್ಲ ಎಂಬ ಆರೋಪವೂ ಪ್ರತಾಪ್ ಸಿಂಹ ವಿರುದ್ದ ಇತ್ತು. ತನ್ನ ಸಹೋದರ ವಿಕ್ರಮ್ ಸಿಂಹ ಮರಗಳ್ಳತನ ಪ್ರಕರಣದ ವಿಚಾರವಾಗಿಯೂ ಪ್ರತಾಪ್ ಸಿಂಹ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ದೊಡ್ಡ ಸುದ್ದಿಯಾಗಿದ್ದರು.‌ ತನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಆದರೆ ​ರಾಜಕೀಯವಾಗಿ ಏನೂ ಆಗಿಲ್ಲದ ತಾನು, ಸಿಕ್ಕಿದ ಸುವರ್ಣಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳದೆ, ತನ್ನನ್ನು ರಾಜಕೀಯವಾಗಿ ಮುಗಿಸಿಕೊಳ್ಳುವ ಹಳ್ಳವನ್ನು ಇಷ್ಟು ವರ್ಷಗಳ ಕಾಲವೂ ತೋಡಿಕೊಳ್ಳುತ್ತ ಬಂದಿದ್ದು ಸ್ವತಃ ತನ್ನ ನಡವಳಿಕೆ, ಅವಿವೇಕ ಮತ್ತು ದ್ವೇಷ ರಾಜಕಾರಣ ಎಂಬುದು ಮಾತ್ರ ಇವತ್ತಿಗೂ, ಈಗಲೂ ಪ್ರತಾಪ್ ಸಿಂಹಗೆ ಅರ್ಥವಾಗಿಲ್ಲ ಎಂಬುದೇ ವಿಚಿತ್ರ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!