ಮನಸ್ಸಿಲ್ಲದಿದ್ದರೂ ಕಣಕ್ಕಿಳಿದ ಮಾಜಿ ಸಿಎಂ ಎದುರು ಭಾರೀ ಸವಾಲು

Update: 2024-04-18 05:22 GMT
Editor : Ismail | Byline : ಆರ್. ಜೀವಿ

ಅಂತೂ ಇಂತೂ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಅದಾಗಲೇ ನಿರ್ಧಾರವಾಗಿಬಿಟ್ಟಿದ್ದ ವಿಚಾರವನ್ನು ಹಾಸನದಲ್ಲಿ ದೇವೇಗೌಡರು ಅಧಿಕೃತವಾಗಿ ಮಂಗಳವಾರ ರಾತ್ರಿ ಘೋಷಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ತಮ್ಮ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ.

ಮಂಡ್ಯ ಕ್ಷೇತ್ರದ ಬಗ್ಗೆ ಪಕ್ಷ ಗಂಭೀರವಾಗಿದ್ದು, ಜೆಡಿಎಸ್ ಕಾರ್ಯಕರ್ತರು ಚೆನ್ನೈನಲ್ಲಿ ಎಚ್.ಡಿ.ಕುಮಾರಸ್ವಾಮಿ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ, ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಮಂಡ್ಯದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು ಎಂದೂ ದೇವೇಗೌಡರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೂಡ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಜೆಡಿಎಸ್ನಲ್ಲಿ ಇಂಥದ್ದನ್ನೆಲ್ಲ ತೀರ್ಮಾನಿಸಲಿಕ್ಕೆ ಒಂದು ಕೋರ್ ಕಮಿಟಿ ಕೂಡ ಇದೆ ಎಂಬುದು ಇಲ್ಲಿ ಗಮನಾರ್ಹ. ಇನ್ನು, ಕೋಲಾರದಿಂದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಅಲ್ಲಿನ ಹಾಲಿ ಸಂಸದ, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ದೇವೇಗೌಡರು ಖಚಿತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲೇಶ್ ಬಾಬು ಅವರ ಅದೃಷ್ಟಕ್ಕಾಗಿ ಅವರಿಗೆ ಅಭಿನಂದನೆ ಹೇಳಲೇಬೇಕು.

ಬಿಜೆಪಿ ಜೊತೆಗಿನ ಮೈತ್ರಿ ಕಾರಣದಿಂದಾಗಿ ಜೆಡಿಎಸ್ಗೆ ಸಿಕ್ಕಿರುವ ಮೂರೇ ಮೂರು ಕ್ಷೇತ್ರಗಳಲ್ಲಿ ಒಂದರ ಅಭ್ಯರ್ಥಿಯಾಗಿ ದೇವೇಗೌಡರ ಕುಟುಂಬಕ್ಕೆ ಹೊರಗಿನವರೊಬ್ಬರು ಆಯ್ಕೆಯಾಗಿಬಿಟ್ಟಿದ್ದಾರೆ ಎಂದರೆ ಅದು ಸಾಧಾರಣ ಅದೃಷ್ಟವಲ್ಲ.

ಕೋಲಾರದಲ್ಲಿ ಪ್ರಶ್ನೆಯೆ ಇಲ್ಲ. ಅಲ್ಲಿ ಮಲ್ಲೇಶ್ ಬಾಬು ಅವರೇ ಅಭ್ಯರ್ಥಿ ಎಂದು ದೇವೇಗೌಡರು ಹೇಳಿದ್ದು ಕೂಡ ವರದಿಯಾಗಿದೆ.

ದೇವೇಗೌಡರ ಕುಟುಂಬದಲ್ಲಿ ಕೋಲಾರದಲ್ಲಿ ನಿಲ್ಲಬಲ್ಲವರು ಯಾರೂ ಇಲ್ಲದೇ ಇರುವುದರಿಂದ ಆ ಪ್ರಶ್ನೆಯೇ ಬರಲಿಲ್ಲ ಎಂಬುದೂ ಅಷ್ಟೇ ನಿಜ.

ಕೊನೆಗಳಿಗೆಯಲ್ಲಿ ಕೋಲಾರದಲ್ಲಿ ಮತ್ತೆ ಅಭ್ಯರ್ಥಿ ಬದಲಾವಣೆಯಾದರೂ ಅಚ್ಚರಿಯಿಲ್ಲ. ಅದೇನೇ ಇದ್ದರೂ, ಮಂಡ್ಯದಲ್ಲಿ ಕುಮಾರಸ್ವಾಮಿಯವರ ಸ್ಪರ್ಧೆ ವಿಚಾರ ಭಾರೀ ಮಹತ್ವ ಪಡೆದಿದೆ.

ಕುಮಾರಸ್ವಾಮಿಯವರಿಗೆ ಇದು ತೀರಾ ಇಕ್ಕಟ್ಟಿನ ಪರಿಸ್ಥಿತಿ. ಅವರಿಗೆ ತಮ್ಮ ಪುತ್ರ ನಿಖಿಲ್ ನನ್ನ ಈ ಬಾರಿಯಾದರೂ ಮಂಡ್ಯದಿಂದ ಗೆಲ್ಲಿಸಿ ಸಂಸತ್ತಿಗೆ ಕಳಿಸಬೇಕು ಎಂಬ ಆಸೆಯಿತ್ತು. ಹೋದ ಬಾರಿಯ ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯೂ ಇತ್ತು. ಜೊತೆಗೆ ಅವರಿಗೆ ಆರೋಗ್ಯದ ಸಮಸ್ಯೆಯಿದೆ. ಮೊನ್ನೆಯಷ್ಟೇ ಚೆನ್ನೈಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ.

ಆದರೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಅವರು ಮಂಡ್ಯದಿಂದ ಲೋಕಸಭೆ ಚುನಾವಣಾ ಕಣಕ್ಕೆ ಧುಮುಕುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೋಸ್ಕರ ಅವರ ಹೃದಯ ಮಿಡಿಯುತ್ತಿದೆ. ಹಾಗಾಗಿ ಕಡೆಗೂ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ಧಾರೆ. ಇಲ್ಲಿಯವರೆಗೂ ಅವರ ಹೃದಯ ರಾಮನಗರದ ಜನರಿಗೋಸ್ಕರ, ಚನ್ನಪಟ್ಟಣದ ಜನತೆಗೋಸ್ಕರ ಮಿಡೀತಾ ಇತ್ತು. ಆದರೆ ಈಗ ಸದ್ಯ ಅಲ್ಲಿ ಅವರು ಸ್ಪರ್ಧಿಸುತ್ತಿಲ್ಲವಾದ್ದರಿಂದ ಮಂಡ್ಯದ ಜನರಿಗೋಸ್ಕರ ಅವರು ಹೃದಯ ಮಿಡಿಯುತ್ತದೆ.

ಹಾಗಾಗಿ, ಕುಮಾರಸ್ವಾಮಿಯವರು ಈಗ ಲೋಕಸಭೆ ಚುನಾವಣೆ ಇರುವ ಮಂಡ್ಯದ ಕಾರ್ಯಕರ್ತರಿಗಾಗಿ ಕಣ್ಣೀರು ಹಾಕುವಷ್ಟು ಮಿಡಿದಿದ್ದಾರೆ.

ಮೊನ್ನೆ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ಬಂದದ್ದೇ ತಮ್ಮ ನಿವಾಸದ ಎದುರು ಜಮಾಯಿಸಿದ ಮಂಡ್ಯ ಜಿಲ್ಲೆಯ ಅಭಿಮಾನಿಗಳು ಮತ್ತು ಕಾರ್ಯಕರ್ತರ ಪ್ರೀತಿ ಮತ್ತು ಆಗ್ರಹಕ್ಕೆ ಕುಮಾರಸ್ವಾಮಿ ಕಣ್ಣೀರು ಹಾಕಿಬಿಟ್ಟರು.

ಹೆಚ್ಚು ಮಾತನಾಡಬೇಡಿ ಎಂದು ವೈದ್ಯರು ಸೂಚಿಸಿದ್ದರಂತೆ. ಆದರೂ ಕಾರ್ಯಕರ್ತರ ಅಭಿಮಾನ ಕಂಡು ಸುಮ್ಮನಿರಲಾರದೆ, ಬಂದು ಮಾತನಾಡಿದರು. ನಿಮಗೆ ನಿರಾಸೆ ಮಾಡುವುದಿಲ್ಲ ಎಂದು ಕಣ್ಣೀರು ಹಾಕುತ್ತಲೇ ಭರವಸೆ ನೀಡಿದ್ದರು. ದೇವೇಗೌಡರು ಕೂಡ ಅದನ್ನೇ ಹೇಳಿದ್ದಾರೆ. ಮಂಡ್ಯದ ಜನ ಕುಮಾರಸ್ವಾಮಿಯವರನ್ನು ಬಿಡುತ್ತಿಲ್ಲವಂತೆ. ಬನ್ನಿ ಬನ್ನಿ, ನೀವೇ ಬರಬೇಕು ಎಂದು ದುಂಬಾಲು ಬಿದ್ದಿದ್ದಾರಂತೆ.

ಯಾವ ಕಾರಣಕ್ಕೂ ರಾಮನಗರ ಬಿಟ್ಟು ಹೋಗಲಾರೆ, ಅದು ನನ್ನ ಕರ್ಮಭೂಮಿ ಎನ್ನುತ್ತಿದ್ದ ಕುಮಾರಸ್ವಾಮಿಯವರು, ಮಂಡ್ಯ ಕ್ಷೇತ್ರದ ಅಭಿವೃದ್ಧಿಗಾಗಿ ತಲೆ ಕೊಡುತ್ತಿದ್ದಾರಂತೆ.

ಇಡೀ ನಾಡೇ ನನ್ನ ಕರ್ಮಭೂಮಿ ಎಂದು ಈಗ ಅವರು ಹೇಳಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಕಣಕ್ಕಿಳಿಯುತ್ತಾರೊ ಅಥವಾ ಕುಮಾರಸ್ವಾಮಿಯವರೊ ಎಂಬ ಪ್ರಶ್ನೆಯೊಂದು ಇತ್ತು. ಈ ನಡುವೆ ಕುಮಾರಸ್ವಾಮಿಯವರು, ಯಾವುದಕ್ಕೂ ಇರಲಿ ಎಂಬಂತೆ ಜೆಡಿಎಸ್‌ ನಾಯಕ ಸಿ ಎಸ್‌ ಪುಟ್ಟರಾಜು ಅವರನ್ನು ಕಣಕ್ಕಿಳಿಸುವ ಮಾತಾಡಿದ್ದರು.

ಆದರೆ ಜೆಡಿಎಸ್ ಕಾರ್ಯಕರ್ತರಿದ್ಧಾರಲ್ಲ, ಅವರು ದೇವೇಗೌಡರ ಕುಟುಂಬಕ್ಕಾಗಿ ಎಲ್ಲ ತ್ಯಾಗ ಮಾಡಿ ನಿಂತವರಾಗಿರುವುದರಿಂದ, ಪುಟ್ಟಸ್ವಾಮಿ ಎಲ್ಲ ಬೇಡ, ನೀವೇ ನಿಲ್ಲಬೇಕು ಎಂದು ಕುಮಾರಸ್ವಾಮಿಯವರಿಗೆ ದುಂಬಾಲು ಬಿದ್ದರಂತೆ. ಕಡೆಗೂ ಮಂಡ್ಯದಿಂದ ಕುಮಾರಸ್ವಾಮಿಯವರು ಕಣಕ್ಕಿಳಿದಿದ್ದಾರೆ. ಆದರೆ ಈ ಎಲ್ಲ ಕಾರ್ಯಕರ್ತರ ಆಗ್ರಹ, ಕಣ್ಣೀರು, ಮಿಡಿಯುವ ಹೃದಯ ಇತ್ಯಾದಿಗಳ ಹಿಂದೆ ಕೆಲಸ ಮಾಡಿರುವುದು ಬಿಜೆಪಿ ಹೈಕಮಾಂಡ್ ಒತ್ತಡ ಎಂಬುದು ಅಷ್ಟೇನೂ ಗುಟ್ಟಾಗಿಲ್ಲ.

ಮಂಡ್ಯದಿಂದ ನೀವೇ ಸ್ಪರ್ಧಿಸಬೇಕು ಎಂದು ಅಮಿತ್ ಶಾ ತಾಕೀತು ಮಾಡಿದ್ದು, ಕುಮಾರಸ್ವಾಮಿಯವರು ಏನೇ ಹೇಳಿದರೂ ಬಿಜೆಪಿ ವರಿಷ್ಠರು ಅದೇ ಹಠಕ್ಕೆ ಬಿದ್ದಿದ್ದು, ಕೊನೆಗೆ ಕುಮಾರಸ್ವಾಮಿಯವರು ಅದಕ್ಕೆ ಒಪ್ಪಿದ್ದು - ಇವೇ ಅವರ ಸ್ಪರ್ಧೆ ಹಿಂದಿನ ನಿಜವಾದ ಕಾರಣಗಳು.

ಹಾಗಾದರೆ ಹೇಗಿರಲಿದೆ ಮಂಡ್ಯ ಅಖಾಡ? ಮಂಡ್ಯದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ಸ್ಟಾರ್ ಚಂದ್ರು ಎಂದೇ ಎಲ್ಲರಿಗೂ ಪರಿಚಿತರಾಗಿರುವ ಉದ್ಯಮಿ ವೆಂಕಟರಮಣೇಗೌಡ ಅವರನ್ನು.

ಟಿಕೆಟ್ ಅಧಿಕೃತ ಘೋಷಣೆಗೆ ಮುಂಚಿನಿಂದಲೇ ವೆಂಕಟರಮಣೇಗೌಡ ಮಂಡ್ಯದಲ್ಲಿ ಪ್ರಚಾರ ಶುರುಮಾಡಿಬಿಟ್ಟಿದ್ದರು.

ರಾಜಕೀಯ ನಂಟು ಇರುವ ಕುಟುಂಬ ಅವರದು. ಅವರ ಸಹೋದರ ಕೆ.ಎಚ್.ಪುಟ್ಟಸ್ವಾಮಿಗೌಡರು ಪ್ರಸ್ತುತ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದಾರೆ.

ಪುಟ್ಟಸ್ವಾಮಿಗೌಡರ ಅಳಿಯ ಶರತ್ ಬಚ್ಚೇಗೌಡ ಕೂಡ ಹಾಲಿ ಕಾಂಗ್ರೆಸ್ ಶಾಸಕರು. ಬೀಗರಾದ ಹಿರಿಯ ರಾಜಕಾರಣಿ ಬಿ.ಎನ್.ಬಚ್ಚೇಗೌಡ ಸಂಸತ್ ಸದಸ್ಯರು. ಮಂಡ್ಯಕ್ಕಾಗಿ ಬಿಜೆಪಿ-ಜೆಡಿಎಸ್ ನೀನೊ ತಾನೊ ಎಂದು ಗೊಂದಲದಲ್ಲಿದ್ದಾಗಲೇ ಮಂಡ್ಯಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಯಾಗಿತ್ತು.

ಕಡಗೆ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿತು. ಬಿಜೆಪಿಯೇ ಕಣಕ್ಕಿಳಿಯಲಿ, ಜೆಡಿಎಸ್ ಬೇಕಾದರೂ ಕಣಕ್ಕಿಳಿಯಲಿ, ಕಳೆದ ಬಾರಿ ಗೆದ್ದ ಸುಮಲತಾ ಅವರನ್ನೇ ಬೇಕಾದರೂ ಬಿಜೆಪಿ ಕಣಕ್ಕಿಳಿಸಲಿ, ಅಥವಾ ಸುಮಲತಾ ಅವರೇ ಸ್ವತಂತ್ರವಾಗಿ ಸ್ಪರ್ಧಿಸಲಿ ತನ್ನ ಅಭ್ಯರ್ಥಿ ಬಗ್ಗೆ ತಾನು ಖಚಿತತೆ ಹೊಂದಿರುವುದನ್ನು ಕಾಂಗ್ರೆಸ್ ಸಾಕಷ್ಟು ಮೊದಲೇ ನಿರ್ಧರಿಸಿಯಾಗಿತ್ತು.

ಈಗ ಮಂಡ್ಯದಲ್ಲಿ ಅವರಿಗೆ ಎದುರಾಳಿಯಾಗಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಂಡ್ಯದ ರಾಜಕಾರಣ ತೀವ್ರ ಕುತೂಹಲ ಕೆರಳಿಸುವ ವಿಷಯ. ಮಂಡ್ಯ ಜನತಾ ಪರಿವಾರದ ಭದ್ರನೆಲೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಆದರೆ ಇದು ಕಾಂಗ್ರೆಸ್ ನೆಲೆಯೂ ಹೌದು ಎನ್ನುವುದು ಹಿಂದಿನ ಚುನಾವಣಾ ಫಲಿತಾಂಶಗಳಿಂದ ಸಾಬೀತಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಏರ್ಪಡುವ ಕ್ಷೇತ್ರ ಇದು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಮಾಡಿದರು.

ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಭಾರಿ ಕಸರತ್ತಿನಲ್ಲಿ ತೊಡಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಗೆಲುವೂ ಸೇರಿ 8ರಲ್ಲಿ 7 ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೇ ತೆಗೆದುಕೊಂಡಿದೆ. ಇದರಿಂದಾಗಿ ಲೋಕಸಭೆ ಚುನಾವಣೆ ಗೆಲ್ಲುವುದು ಸುಲಭವಾಗಬಹುದು ಎಂಬ ಲೆಕ್ಕಾಚಾರ ಅದರದ್ದು.

ಹಲವರ ಹೆಸರು ಕೇಳಿಬಂದಿತ್ತಾದರೂ, ಕಡೆಗೆ ಅಭ್ಯರ್ಥಿಯಾಗಿರುವುದು ವೆಂಕಟರಮಣೇಗೌಡ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನ ನಿಖಿಲ್‍ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋತಿದ್ದರು.

ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ, ನಿಖಿಲ್‍ ಮತ್ತು ಎಚ್.ಡಿ.ಕುಮಾರಸ್ವಾಮಿ ತಾವು ಕಣಕ್ಕಿಳಿಯುವುದಿಲ್ಲ ಎಂದು ಹೇಳುವುದನ್ನೇನೋ ಹೇಳಿದ್ದರು. ಸಿ.ಎಸ್.ಪುಟ್ಟರಾಜು ಅಥವಾ ಡಿ.ಸಿ.ತಮ್ಮಣ್ಣ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ದೇವೇಗೌಡರ ಕುಟುಂಬದವರೇ ನಿಲ್ಲಬೇಕಾಗಿರುವ ಕ್ಷೇತ್ರಗಳಲ್ಲಿ ಕಡೇ ಗಳಿಗೆಯಲ್ಲಾದರೂ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ದೇವೇಗೌಡರ ಕುಟುಂಬದವರೇ ಕಣಕ್ಕಿಳಿಯುವುದು ಸಾಮಾನ್ಯ.

ಈಗಲೂ ಕುಮಾರಸ್ವಾಮಿಯವರು ಮಂಡ್ಯದ ಕಾರ್ಯಕರ್ತರ ಒತ್ತಾಯವನ್ನು ಮೀರಲಾರದೆ ಕಣಕ್ಕಿಳಿದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಗೆಲುವಿಗೆ ಪೂರಕವಾಗುತ್ತದೆ ಎಂಬುದು ಜೆಡಿಎಸ್ ವಿಶ್ವಾಸ. ಜತೆಗೆ, ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗ ಮತದಾರರ ಬೆಂಬಲ ತಮಗೆ ಇದೆ ಎಂಬುದು ಜೆಡಿಎಸ್‍ ನಾಯಕರ ದೃಢ ನಂಬಿಕೆಯಾಗಿದೆ.

ಈಗ ಪ್ರಶ್ನೆಯಿರುವುದು ಸುಮಲತಾ ಏನು ಮಾಡುತ್ತಾರೆ ಎಂಬುದು. ಮಂಡ್ಯದಲ್ಲೇ ತಮ್ಮ ರಾಜಕೀಯ ಎನ್ನುತ್ತಿದ್ದ, ಮಂಡ್ಯದಿಂದ ಬಿಜೆಪಿ ಟಿಕೆಟ್ ತಮಗೇ ಖಚಿತ ಎಂದು ನಂಬಿಕೊಂಡಿದ್ದ, ಜೆಡಿಎಸ್ಗೆ ಬಿಜೆಪಿ ಸೀಟು ಬಿಟ್ಟುಕೊಟ್ಟ ಬಳಿಕವೂ ಮಂಡ್ಯದಿಂದಲೇ ಸ್ಪರ್ಧಿಸುವೆ ಎಂದಿದ್ದ ಸುಮಲತಾ ತೆಗೆದುಕೊಳ್ಳಬಹುದಾದ ನಿರ್ಧಾರ ಏನಿರಬಹುದು?

ಅವರಿಗೆ ಬಿಜೆಪಿ ಒಳ್ಳೆಯ ಸ್ಥಾನಮಾನದ ಆಸೆ ಹುಟ್ಟಿಸಿದೆ ಎಂದು ಹೇಳಲಾಗುತ್ತಿದೆ. ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲು ಕೇಳಿಕೊಳ್ಳಲಾಗಿದೆ ಎಂಬ ಮಾತುಗಳಿವೆ. ಆದರೆ ಅವರು ಬಿಜೆಪಿಯ ಮಾತಿಗೆ ಮಣೆ ಹಾಕುತ್ತಾರಾ ಅಥವಾ ಕುಮಾರಸ್ವಾಮಿ ಮೇಲಿನ ಜಿದ್ದಿಗಾದರೂ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸುತ್ತಾರಾ? ಆದರೆ ಅವರಿಗೆ ಇರುವ ಆತಂಕವೆಂದರೆ, 2019ರ ಚುನಾವಣೆಯಲ್ಲಿ ಸಿಕ್ಕಂತೆ ಸ್ವಾಭಿಮಾನದ ಮತಗಳು ಈ ಬಾರಿ ಬರುವ ಅವಕಾಶವಿಲ್ಲ. ಹಾಗಾಗಿ ಗೆಲುವು ಕಷ್ಟವಿದೆ ಎಂಬುದು ಅವರಿಗೆ ಗೊತ್ತಾಗಿಬಿಟ್ಟಿದೆ.

ಇನ್ನು ಬಿಜೆಪಿಗೆ ಬೆಂಬಲಿಸೋಣ ಎಂದರೆ ಅದು ತನ್ನ ವೈರಿ ಜೆಡಿಎಸ್ಗೆ ಮಣೆ ಹಾಕಿದೆ ಎಂಬ ಸಿಟ್ಟು ಸುಮಲತಾ ಅವರಲ್ಲಿದೆ. ಕುತೂಹಲಕರವೆಂಬಂತೆ ಈಗ ಇನ್ನೂ ಒಂದು ಮಾತು ಕೇಳಿಬರುತ್ತಿದೆ. ಏನೆಂದರೆ, ಕಾಂಗ್ರೆಸ್ ಅನ್ನು ಬೆಂಬಲಿಸಲು ಸುಮಲತಾ ಮುಂದಾಗಬಹುದು ಎಂಬುದು.

ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಒಳಗೊಳಗೇ ಸುಮಲತಾ ಅವರನ್ನು ಬೆಂಬಲಿಸಿದ್ದರೆಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಆ ಋಣ ತೀರಿಸಿಕೊಳ್ಳುವುದಕ್ಕಾಗಿ, ಈ ಸಲ ಚುನಾವಣೆಯಲ್ಲಿ ತಟಸ್ಥರಂತೆ ಉಳಿದು, ಪರೋಕ್ಷವಾಗಿ ಕಾಂಗ್ರೆಸ್ ಗೆ ಸನ್ನಿವೇಶವನ್ನು ಅನುಕೂಲಕರವಾಗಿಸುವ ಯೋಚನೆಗೂ ಅವರು ಬರಬಹುದು ಎನ್ನಲಾಗುತ್ತಿದೆ.

ಕಾಂಗ್ರೆಸ್ ಅನ್ನು ಬೆಂಬಲಿಸುವುದರಿಂದ ರಾಜಕೀಯವಾಗಿ ಲಾಭವಾಗಲೂಬಹುದು ಎಂಬ ಲೆಕ್ಕಾಚಾರವೂ ಅವರದ್ದಾಗಿದೆ ಎನ್ನಲಾಗುತ್ತಿದೆ.

ಯಾವ ನಿರ್ಧಾರಕ್ಕೆ ಅವರು ಬರಬಹುದು ಎಂಬುದು ಕುತೂಹಲದ ಸಂಗತಿಯಾಗಿದೆ. ಇದೆಲ್ಲ ಒಂದು ಕಡೆಯಾದರೆ, ಈಗಾಗಲೇ ಕುಮಾರಸ್ವಾಮಿ ಎರಡು ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಒಂದು, ತನ್ನ ಆರೋಗ್ಯ ಸರಿಯಿಲ್ಲ, ಹಾರ್ಟ್ ಸರ್ಜರಿಯಾಗಿದ್ದರೂ ಮಂಡ್ಯದ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಲೆ ಕೊಡುತ್ತಿದ್ದೇನೆ ಎಂಬ ಮಾತನ್ನು ಅವರು ಅಡಿರುವುದು.

ಎರಡನೆಯದಾಗಿ, ಈಗಾಗಲೇ ಅವರು ಚೆನ್ನೈನಿಂದ ವಾಪಸಾದ ದಿನವೇ ಕಾರ್ಯಕರ್ತರ ಎದುರು ಕಣ್ಣೀರು ಹಾಕಿರುವುದು. ದೇವೇಗೌಡರ ಕುಟುಂಬ ಲಾಗಾಯ್ತಿನಿಂದಲೂ ಬಳಸುತ್ತ ಬಂದಿರುವ ರಾಜಕೀಯ ಸಿದ್ಧೌಷಧವೆಂದರೆ ಧಾರಾಳ ಕಣ್ಣೀರು.

ಅದರಲ್ಲೂ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕಣ್ಣೀರು ಈಗಾಗಲೇ ಬ್ರ್ಯಾಂಡ್ ಆಗಿರುವಂಥದ್ದು.

ಈಗ ಮತ್ತೊಮ್ಮೆ ಕುಮಾರಸ್ವಾಮಿಯವರು ಅದೇ ಸಿದ್ಧೌಷಧ ಪ್ರಯೋಗವನ್ನು ಚುನಾವಣೆ ಕಣಕ್ಕೆ ಇಳಿಯುವ ಮೊದಲಿಂದಲೇ ಶುರು ಮಾಡಿಯಾಗಿದೆ. ಆದರೂ ಈಗಿನ ರಾಜಕೀಯದಲ್ಲಿ ಅದೆಷ್ಟು ಮಟ್ಟಿಗೆ ಫಲ ಕೊಡಬಹುದೊ ಗೊತ್ತಿಲ್ಲ. ಅಂತೂ ಕರ್ನಾಟಕದ ಒಳಿತಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಹೇಳಿರುವ ದೇವೇಗೌಡರು ಮತ್ತು ಕುಮಾರಸ್ವಾಮಿ ಈಗ ಮಂಡ್ಯದ ಅಭಿವೃದ್ಧಿಗಾಗಿ ಮಂಡ್ಯದಿಂದ ಕಣಕ್ಕಿಳಿಯುತ್ತಿರುವುದಾಗಿ ಹೇಳಿದ್ದಾರೆ.

ಇನ್ನು ಹಾಸನದ ಅಭಿವೃದ್ಧಿಗಾಗಿ ಪ್ರಜ್ವಲ್ ರೇವಣ್ಣನವರು ಕಣಕ್ಕಿಳಿದಿದ್ದಾರೆ. ಪ್ರಜ್ವಲ್ ಸ್ಪರ್ಧೆಗೆ ಬಿಜೆಪಿ ನಾಯಕರ ಕಡೆಯಿಂದಲೇ ವಿರೋಧವಿದ್ದು, ಅಭ್ಯರ್ಥಿ ಬದಲಿಸಲು ಅಮಿತ್ ಶಾ ಕಡೆಯಿಂದಲೇ ಸೂಚನೆ ಬಂದಿದೆ ಎಂದೆಲ್ಲ ಹೇಳಲಾಗಿತ್ತು. ಕಡೆಗೆ ಏನಾಯಿತೊ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಜೆಡಿಎಸ್ ಹಸ್ತಕ್ಷೇಪ ಮಾಡಿಲ್ಲ. ಹಾಗೆಯೇ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ಹಸ್ತಕ್ಷೇಪ ಇರುವುದಿಲ್ಲ ಎಂದು ನಾಯಕರೇ ಹೇಳಿದ್ದೂ ಆಯಿತು. ಅಂತೂ ಪ್ರಜ್ವಲ್ ಕಣದಲ್ಲಿ ಉಳಿದಿದ್ದಾರೆ.

ಆದರೆ ಬಿಜೆಪಿ ಇಲ್ಲಿ ಮೈತ್ರಿ ಧರ್ಮ ಪಾಲಿಸಿ ಪ್ರಜ್ವಲ್ ಬೆಂಬಲಕ್ಕೆ ಪೂರ್ತಿ ಮನಸ್ಸಿನಿಂದ ನಿಲ್ಲಲಿದೆಯೆ? ರೇವಣ್ಣ ಕುಟುಂಬವೆಂದರೇ ಆಗದ ಹಾಸನ ಬಿಜೆಪಿ ಪ್ರಜ್ವಲ್ ಗೆಲುವಿಗೆ ಶ್ರಮಿಸುವುದೆ? ಹಾಸನ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ಮುಖಂಡ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ.

ಒಕ್ಕಲಿಗ ಸಮುದಾಯದ ಶ್ರೇಯಸ್, ದೇವೇಗೌಡರ ಕುಟುಂಬದೊಂದಿಗೆ ಜಿದ್ದಿನಲ್ಲಿದ್ದ ಪುಟ್ಟಸ್ವಾಮಿಗೌಡರ ಮೊಮ್ಮಗ. ಶ್ರೇಯಸ್ ಪಟೇಲ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ವಿರುದ್ದ ಸೋತಿದ್ದರೂ, ಅವರು ಕಂಗೆಟ್ಟುಹೋಗುವ ಮಟ್ಟಿಗೆ ಶ್ರೇಯಸ್ ಪೈಪೋಟಿ ಒಡ್ಡಿದ್ದರು.

ಅವರು ಈಗ ರೇವಣ್ಣ ಪುತ್ರ ಪ್ರಜ್ವಲ್ಗೆ ಲೋಕಸಭೆ ಕಣದಲ್ಲಿ ಎದುರಾಳಿ. ಹಾಗಾಗಿ, ದೇವೇಗೌಡರ ಕುಟುಂಬಕ್ಕೆ ಹಾಸನ ಈ ಬಾರಿ ಲೀಲಾಜಾಲ ಮೈದಾನವಂತೂ ಆಗಿರುವುದಿಲ್ಲ. ಇನ್ನು ಕೋಲಾರದಲ್ಲಿಯೂ ಜೆಡಿಎಸ್ ಲೆಕ್ಕಾಚಾರಕ್ಕೆ ಸುರಳೀತ ಎನ್ನಿಸುವಂಥ ದಾರಿಯೇನೂ ಇಲ್ಲ.

ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರವಾಗಬೇಕಿದೆಯಾದರೂ, ಕಾಂಗ್ರೆಸ್ ಭದ್ರಕೋಟೆಯೇ ಆಗಿರುವ ಕೋಲಾರದಲ್ಲಿ ಕಾಂಗ್ರೆಸ್ ಪಾಲಿಗೆ ಗೆಲುವು ಕಷ್ಟದ್ದಲ್ಲ.

ಕಳೆದ ಬಾರಿ ಕಾಂಗ್ರೆಸ್ ಒಳಗೇ ಅಭ್ಯರ್ಥಿ ವಿಚಾರಕ್ಕೆ ಅಸಮಾಧಾನ ತಲೆದೋರಿದ ಪರಿಣಾಮ ಕಾಂಗ್ರೆಸ್ ಸೋತು, ಕ್ಷೇತ್ರ ಬಿಜೆಪಿ ಪಾಲಾಗಿತ್ತು.

ಆದರೆ ಈ ಬಾರಿ ಬಣ ರಾಜಕೀಯ ಮಾಡದೆ, ಯಾವುದೇ ಅಭ್ಯರ್ಥಿ ಕಣಕ್ಕಿಳಿದರು ಬೆಂಬಲಿಸಬೇಕು ಎಂಬ ಖಡಕ್ ಸೂಚನೆಯನ್ನು ಕಾಂಗ್ರೆಸ್ ನಾಯಕರು ಈಗಾಗಲೇ ಕೊಟ್ಟಿದ್ದಾರೆ. ಇನ್ನು ಜೆಡಿಎಸ್ ಪಾಲಿಗೆ ಕೋಲಾರದಲ್ಲಿ ಇರುವ ಮತ್ತೊಂದು ತೊಡಕು ಏನೆಂದರೆ, ಹಾಲಿ ಸಂಸದ ಬಿಜೆಪಿಯ ಎಸ್ ಮುನಿಸ್ವಾಮಿ ಜೆಡಿಎಸ್ ಟಿಕೆಟ್ಗಾಗಿ ಬಹಲ ಪ್ರಯತ್ನ ಮಾಡಿದ್ದರು.

ಅವರು ನಡ್ಡಾ ಮತ್ತು ದೇವೇಗೌಡರನ್ನು ಭೇಟಿ ಮಾಡಿಯೂ ಈ ಬಗ್ಗೆ ಕೇಳಿಕೊಂಡಿದ್ದರು. ಅವರ ಆಸೆ ಈಡೇರಿಲ್ಲ.

ಹೀಗಾಗಿ ಅವರ ಬೆಂಬಲ ಕೂಡ ಜೆಡಿಎಸ್ ಅಭ್ಯರ್ಥಿಗೆ ಸಿಗದೇ ಹೋಗಲೂಬಹುದು. ಈ ಅಸಮಾಧಾನವೇ ಹೊಸ ಮುಖವಾಗಿರುವ ಜೆಡಿಎಸ್ನ ಮಲ್ಲೇಶ್ ಬಾಬು ಅವರ ಪಾಲಿಗೆ ಸವಾಲಾಗಲೂ ಬಹುದು.

ಇದೆಲ್ಲ ಏನೇ ಇರಲಿ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ಸುಲಭದ ತುತ್ತಾ ಎಂದರೆ, ಖಂಡಿತ ಇಲ್ಲ. ಅಷ್ಟಕ್ಕೂ ಕುಮಾರಸ್ವಾಮಿ ಗೆಲ್ಲುವುದು ಬಿಜೆಪಿಗಾದರೂ ಬೇಕಾಗಿದೆ ಎಂಬಂತೆ ತೋರುತ್ತಿಲ್ಲ. ಅದು ಜೆಡಿಎಸ್ ಹಾಗು ಕುಮಾರಸ್ವಾಮಿ ಪಾಲಿಗೆ ಇನ್ನಷ್ಟು ಬ್ಯಾಡ್ ನ್ಯೂಸ್.

ಅಖಾಡವಂತೂ ತಯಾರಾಗಿದೆ. ಆಟ ಇನ್ನು ಶುರುವಾಗಬೇಕಿದೆ. ಏನಾಗಲಿದೆ ಎಂದು ಕಾದು ನೋಡೋಣ

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!