ಜಾಗತಿಕ ಆಲೋಚನೆಯ ಹೊತ್ತಿನಲ್ಲಿ ಒಂದು ಸ್ಥಳೀಯ ನೋಟ

ನಾನು ಗರ್ವಾಲ್ ಮತ್ತು ನೀಲಗಿರಿಗಳೆರಡರ ಜೊತೆ ಆಳವಾದ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದೇನೆ. ಹಾಗಾಗಿ ಈ ಎರಡೂ ಪರ್ವತ ಪ್ರದೇಶಗಳ ಜೈವಿಕ ಸಾಂಸ್ಕೃತಿಕ ಸುಸ್ಥಿರ ಭವಿಷ್ಯ ನನ್ನ ಹಂಬಲವಾಗಿದೆ. ಈಗ ಲಭ್ಯವಿರುವ ಪುರಾವೆಗಳ ಪ್ರಕಾರ, ಗರ್ವಾಲ್ಗೆ ಅಂತಹ ಭವಿಷ್ಯದ ನಿರೀಕ್ಷೆಗಳು ಇದ್ದಂತೆ ಕಾಣಿಸುವುದಿಲ್ಲ. ನೀಲಗಿರಿಯ ಸಾಮಾಜಿಕ ಪರಿಸರ ಸಮಗ್ರತೆಯನ್ನು ಕಾಪಾಡಲು ಮತ್ತು ನವೀಕರಿಸಲು ನಿಸ್ಸಂದೇಹವಾಗಿ ಪ್ರಯಾಸಕರ ಹೋರಾಟಗಳು ಆಗಬೇಕಿದ್ದರೂ, ಕನಿಷ್ಠ ಅದು ಅಂಥ ಭರವಸೆ ಮತ್ತು ಸಾಧ್ಯತೆಯನ್ನಾದರೂ ಹೊಂದಿದೆ.

Update: 2023-09-10 02:48 GMT

ಕಳೆದ ನಾಲ್ಕು ದಶಕಗಳಲ್ಲಿ ನಾನು ಲೆಕ್ಕವಿಲ್ಲದಷ್ಟು ಶೈಕ್ಷಣಿಕ ವಿಚಾರ ಸಂಕಿರಣಗಳು ಮತ್ತು ಸಾಹಿತ್ಯೋತ್ಸವಗಳಲ್ಲಿ ಪಾಲ್ಗೊಂಡಿದ್ದೇನೆ. ತೀರಾ ಇತ್ತೀಚಿನದು ಕಳೆದ ತಿಂಗಳು ಉದಕಮಂಡಲಂನಲ್ಲಿ ನಡೆಯಿತು. ಅದು ಊಟಿ ಎಂದೇ ಚಿರಪರಿಚಿತ. ‘ನೀಲಗಿರಿಯಲ್ಲಿ ನೀಲಗಿರಿಗಾಗಿ ಸಮ್ಮೇಳನ’ ಎಂದು ಅದಕ್ಕೆ ಹೆಸರಿಡಲಾಗಿತ್ತು. ತಮಿಳುನಾಡಿನ ಈ ಸುಂದರ ಮತ್ತು ದುರ್ಬಲ ಪರ್ವತ ಜಿಲ್ಲೆಗೆ ಜೈವಿಕವಾಗಿ ಸುಸ್ಥಿರ ಭವಿಷ್ಯವನ್ನು ರೂಪಿಸುವ ಪ್ರಯತ್ನ ಅದಾಗಿತ್ತು. ಈ ಪ್ರದೇಶದಲ್ಲಿ ಕೆಲಸ ಮಾಡಿದ ಪ್ರಮುಖ ಸಮಾಜ ವಿಜ್ಞಾನಿಗಳು ಮತ್ತು ನಿಸರ್ಗ ವಿಜ್ಞಾನಿಗಳು, ನಾಗರಿಕ ಗುಂಪುಗಳ ಕಾರ್ಯಕರ್ತರು, ಉದ್ಯಮಿಗಳು, ಶಿಕ್ಷಕರು ಮತ್ತು ಬುಡಕಟ್ಟು ಹಿರಿಯರು ಸಮ್ಮೇಳನದಲ್ಲಿ ಮಾತನಾಡಿದರು. ಭಾಗವಹಿಸಿದ್ದವರ ವೈವಿಧ್ಯತೆ ಮತ್ತವರ ಮಾತುಗಳ ಗುಣಮಟ್ಟ ನೋಡಿಕೊಂಡರೆ, ಇದು ನಾನು ಭಾಗವಹಿಸಿದ ಅತ್ಯಂತ ಖುಷಿ ಕೊಟ್ಟ ಶೈಕ್ಷಣಿಕ ವಿಚಾರಸಂಕಿರಣಗಳಲ್ಲಿ ಒಂದಾಗಿತ್ತು.

ನೀಲಗಿರಿಗೂ ನನಗೂ ವೈಯಕ್ತಿಕ ಸಂಬಂಧವಿದೆ. ನನ್ನ ತಂದೆ ಊಟಿಯಲ್ಲಿ ಜನಿಸಿದರು. ಮತ್ತು ದೊಡ್ಡವರಾದ ನಂತರ ನನ್ನ ತಾಯ್ತಂದೆ ಭೇಟಿಯಾದದ್ದು, ಪ್ರೇಮಿಸತೊಡಗಿದ್ದು ಕೂಡ ಅದೇ ಊರಿನಲ್ಲಿ. ಆದರೂ, ನಾನು ಹುಟ್ಟಿ ಬೆಳೆದದ್ದು ಉಪಖಂಡದ ಇನ್ನೊಂದು ತುದಿಯಲ್ಲಿ, ಹಿಮಾಲಯದ ತಪ್ಪಲು ಗರ್ವಾಲ್ನಲ್ಲಿ. ಗರ್ವಾಲ್ನ ಒಳಗಿನ ಬೆಟ್ಟಗಳಲ್ಲಿ ನಾನು ಸ್ಥಿರತೆಗೆ ಸಂಬಂಧಿಸಿದ ನನ್ನ ಮೊದಲ ಸಂಶೋಧನೆಯನ್ನು ಮಾಡಿದೆ. ನಾನು ಮೊದಲ ಬಾರಿಗೆ ನೀಲಗಿರಿಗೆ ಭೇಟಿ ನೀಡಿದ್ದು ನನ್ನ ನಲವತ್ತನೇ ವಯಸ್ಸಿನಲ್ಲಿ. ಕಳೆದ ಕಾಲು ಶತಮಾನದಲ್ಲಿ ನಾನು ಅಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದೇನೆ. ವರ್ಷಗಳಿಂದಲೂ ಕಡಿಮೆ ಅವಧಿಯ ರಜಾ ದಿನಗಳಲ್ಲಿ ಕುಟುಂಬದೊಂದಿಗೆ ನೀಲಗಿರಿಗೆ ಬರುವುದಿದೆ. ಮತ್ತು ಕೊರೋನ ಸಮಯದಲ್ಲಿಯೂ ಅಲ್ಲಿದ್ದೆ.


 


ನೀಲಗಿರಿ, ಪಶ್ಚಿಮ ಘಟ್ಟಗಳೆಂದು ಕರೆಯಲ್ಪಡುವ ದೊಡ್ಡ ಪರ್ವತ ಶ್ರೇಣಿಯ ಒಂದು ಭಾಗ; ಗರ್ವಾಲ್, ಹಿಮಾಲಯ ಎಂದು ಕರೆಯಲ್ಪಡುವ ಇನ್ನೂ ದೊಡ್ಡ ಪರ್ವತಶ್ರೇಣಿಯ ಒಂದು ಭಾಗ. ಈ ನೀಲಗಿರಿ ಕುರಿತ ವಿಚಾರ ಸಂಕಿರಣದಲ್ಲಿ ನಡೆದ ಮಾತುಕತೆ ಮತ್ತು ಸಂಭಾಷಣೆಗಳನ್ನು ಕೇಳಿದಾಗ, ನನ್ನ ಯೌವನದಲ್ಲಿ ನನಗೆ ಚೆನ್ನಾಗಿ ತಿಳಿದಿರುವ ಬೆಟ್ಟಗಳು ಮತ್ತು ಈಗ ನನ್ನ ವೃದ್ಧಾಪ್ಯದಲ್ಲಿ ನಾನು ಚೆನ್ನಾಗಿ ತಿಳಿದುಕೊಳ್ಳಬೇಕಿರುವ ಬೆಟ್ಟಗಳ ನಡುವಿನ ಕೆಲವು ಐತಿಹಾಸಿಕ ಸಾಮ್ಯತೆಗಳನ್ನು ಗ್ರಹಿಸಬಹುದೆಂದು ಅಂದುಕೊಂಡೆ. ಈ ಸಾಮ್ಯತೆಗಳು ವಸಾಹತುಪೂರ್ವ, ವಸಾಹತುಶಾಹಿ ಮತ್ತು ವಸಾಹತೋತ್ತರ ಅವಧಿಗಳಲ್ಲಿನವಾಗಿವೆ.

ಎರಡೂ ಪ್ರದೇಶಗಳ ನಡುವಿನ ಆಳವಾದ ಜೈವಿಕ-ಸಾಂಸ್ಕೃತಿಕ ವ್ಯತ್ಯಾಸಗಳನ್ನು ನಾನು ಸಹಜವಾಗಿ ಗುರುತಿಸುತ್ತೇನೆ. ನೀಲಗಿರಿ ಮತ್ತು ಗರ್ವಾಲ್ಗಳ ನಿವಾಸಿಗಳು ಭಾಷೆ, ನಂಬಿಕೆ, ಸಂಸ್ಕೃತಿ ಮತ್ತು ಆಹಾರ ಪದ್ಧತಿಯಲ್ಲಿ ಬೇರೆಯೇ ಆಗಿದ್ದರು ಮತ್ತು ಆಗಿದ್ದಾರೆ. ಎರಡೂ ಪ್ರದೇಶಗಳ ಭೂದೃಶ್ಯಗಳು ಅವುಗಳ ಸಸ್ಯ, ಪ್ರಾಣಿ, ಮಣ್ಣಿನ ವಿಧಗಳು ಮತ್ತು ಭೂವೈಜ್ಞಾನಿಕ ರಚನೆಗಳಿಗೆ ಸಂಬಂಧಿಸಿ ಬಹಳ ವಿಭಿನ್ನವಾಗಿವೆ. ಹಾಗಿದ್ದರೂ, ಅವೆರಡರ ಆಧುನಿಕ ಪರಿಸರ ಇತಿಹಾಸದಲ್ಲಿ ನಾನು ಈಗ ವಿವರಿಸುವಂತೆ ಅನೇಕ ಸಾಮ್ಯತೆಗಳಿವೆ.

19ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ವಸಾಹತುಶಾಹಿಗಳು ಗರ್ವಾಲ್ ಮತ್ತು ನೀಲಗಿರಿಗಳಲ್ಲಿ ತಮ್ಮ ನೆಲೆಯನ್ನು ಶುರು ಮಾಡಿದರು. ಪ್ರತೀ ಪ್ರದೇಶದಲ್ಲಿ ವಿದೇಶಿಗರು ಬಂದಾಗ, ಗುಡ್ಡಗಾಡು ಸಮುದಾಯಗಳ ಜೀವನೋಪಾಯದ ನಾಲ್ಕು ಪ್ರಮುಖ ಬಗೆಗಳನ್ನು ಕಂಡುಕೊಂಡಿದ್ದಾರೆ. ಅವೆಂದರೆ, ಬೇಟೆ ಮತ್ತು ಸಂಗ್ರಹಣೆ, ಪಶುಪಾಲನೆ, ಕೃಷಿ ಹಾಗೂ ಕರಕುಶಲ ಉತ್ಪಾದನೆ. ಎರಡೂ ಪ್ರದೇಶಗಳು ಸಂಪೂರ್ಣವಾಗಿ ಅಲ್ಲದಿದ್ದರೂ, ಹೆಚ್ಚಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದವು. ನೀಲಗಿರಿಯ ಜನರು ಕೆಳಗಿನ ಕೊಂಗು ನಾಡಿನ ಬಯಲು ಪ್ರದೇಶಗಳೊಂದಿಗೆ ವ್ಯಾಪಾರ ವ್ಯವಹಾರ ಹೊಂದಿದ್ದರು. ಗರ್ವಾಲ್ನ ಜನರು ಇಂಡೋ-ಗಂಗಾ ಬಯಲು ಪ್ರದೇಶಗಳೊಂದಿಗೆ ಮತ್ತು ಟಿಬೆಟ್ನೊಂದಿಗೆ ಎತ್ತರದ ಹಿಮಾಲಯಾದ್ಯಂತ ವ್ಯಾಪಾರದಲ್ಲಿ ತೊಡಗಿದ್ದಾರೆ.

ನೀಲಗಿರಿ ಮತ್ತು ಗರ್ವಾಲ್ ಎರಡರಲ್ಲೂ ಸ್ಥಳೀಯ ಸಮುದಾಯಗಳು ಪ್ರಕೃತಿಯೊಂದಿಗೆ ಆಳವಾದ ಮತ್ತು ಸಾವಯವ ಸಂಬಂಧ ಹೊಂದಿದ್ದವು. ಅವರು ನಿಸರ್ಗವೇ ನಿಗದಿಪಡಿಸಿದ ಗಡಿಗಳಲ್ಲಿ ಬದುಕಲು ಮತ್ತು ತಮ್ಮ ವಂಶವನ್ನು ಬೆಳೆಸಲು ಕಲಿತರು. ಸಸ್ಯಗಳು, ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಸ್ಥಳೀಯ ಜ್ಞಾನ ಹೆಚ್ಚು ಅಭಿವೃದ್ಧಿ ಹೊಂದಿತು ಮತ್ತು ಅವರ ಜೀವನೋಪಾಯದ ಅಭ್ಯಾಸಗಳಲ್ಲಿ ಅದು ಕಾಣಿಸಿಕೊಂಡಿತು. ಅದೇ ಸಮಯದಲ್ಲಿ, ನಿರ್ದಿಷ್ಟ ಸಸ್ಯಗಳು, ಶಿಲೆಗಳು ಮತ್ತು ಜಲಮೂಲಗಳನ್ನು ಪೂಜಿಸುವುದು ಮತ್ತು ಅಗಮ್ಯ ಕಾಡಿನ ಪ್ರದೇಶಗಳನ್ನು ಪವಿತ್ರವನಗಳೆಂದು ಪ್ರತ್ಯೇಕಿಸುವುದು ಇವೆಲ್ಲವೂ ಈ ಆಧುನಿಕ ಪೂರ್ವ ಸಮುದಾಯಗಳು ಪ್ರಕೃತಿಯ ಬಗ್ಗೆ ತೋರಿಸಿದ ಆಳವಾದ ನಮ್ರತೆಯನ್ನೇ ಬಿಂಬಿಸುತ್ತವೆ.

ಬ್ರಿಟಿಷರ ಬರುವಿಕೆ ಈ ಎರಡೂ ಪ್ರದೇಶಗಳಲ್ಲಿನ ಇಡೀ ವಾತಾವರಣವನ್ನೇ ಆಮೂಲಾಗ್ರವಾಗಿ ಹದಗೆಡಿಸಿತು. ಪರಿಸರದ ದೃಷ್ಟಿಯಿಂದ ನೋಡಿದರೆ, ಭೂದೃಶ್ಯದಲ್ಲಿ ತೀವ್ರ ರೂಪಾಂತರ ಕಂಡುಬಂತು. ಇದು ನೀಲಗಿರಿಯಲ್ಲಿ ಚಹಾ ತೋಟಗಳ ರೂಪವಾದರೆ, ಹಿಮಾಲಯದಲ್ಲಿ ವಾಣಿಜ್ಯಿಕ ಅರಣ್ಯ. ಒಂದು ಸ್ಥಳದಲ್ಲಿ ಚಹಾವನ್ನು ನೆಡುವುದು ಮತ್ತು ಕೊಯ್ಲು ಮಾಡುವುದು ಮತ್ತು ಇನ್ನೊಂದು ಸ್ಥಳದಲ್ಲಿ ಪೈನ್ ಅನ್ನು ನೆಡುವುದು ಮತ್ತು ಕೊಯ್ಲು ಮಾಡುವುದು ಜೀವವೈವಿಧ್ಯತೆ ಮತ್ತು ಪರಿಸರ ಸ್ಥಿರತೆಯ ದೊಡ್ಡ ಮಟ್ಟದ ನಷ್ಟಕ್ಕೆ ಕಾರಣವಾಯಿತು. ಸಾಮಾಜಿಕವಾಗಿ, ಎರಡೂ ಪ್ರದೇಶಗಳಲ್ಲಿ ಕಾರ್ಮಿಕರು, ಅಧಿಕಾರಿಗಳು, ಶಿಕ್ಷಕರು, ಸೈನಿಕರು, ಮೋಜಿಗಾಗಿ ಬರುವವರು ಮತ್ತಿತರರೆಂದು ಹೊರಗಿನವರ ಒಳಹರಿವು ಹೆಚ್ಚಾಯಿತು. ಹಾಗೆಯೇ ಗುಡ್ಡಗಾಡು ಜನರು ಕಾರ್ಖಾನೆಗಳಲ್ಲಿ, ಮನೆಗಳಲ್ಲಿ ಉದ್ಯೋಗವನ್ನು ಹುಡುಕುವುದರಿಂದ ವಲಸೆಗಳೂ ಹೆಚ್ಚಿದವು. ಬಯಲು ಪ್ರದೇಶದಲ್ಲಿ ಕಚೇರಿಗಳು. ನಗರ ಕೇಂದ್ರಗಳು, ಊಟಿ ಮತ್ತು ಮಸ್ಸೂರಿಯಂತಹ ಗಿರಿಧಾಮಗಳು ನಿರ್ಮಾಣಗೊಂಡವು.

1947ರಲ್ಲಿ ಸ್ವಾತಂತ್ರ್ಯದ ನಂತರ, ಈ ಪ್ರದೇಶಗಳ ಸಾಮಾಜಿಕ ಮತ್ತು ಪರಿಸರ ಪುನಾರಚನೆ ಮತ್ತಷ್ಟು ವೇಗ ಪಡೆಯಿತು. ವಿದ್ಯುಚ್ಛಕ್ತಿಗಾಗಿ ಪರ್ವತದ ನದಿಗಳಿಗೆ ಅಣೆಕಟ್ಟು ಕಟ್ಟಲಾಯಿತು. ಕಾಡುಗಳು ಮತ್ತು ಹುಲ್ಲುಗಾವಲುಗಳು ಮುಳುಗಿದವು. ಮೋಟಾರು ರಸ್ತೆಗಳ ಜಾಲದ ವಿಸ್ತರಣೆಯೊಂದಿಗೆ ಬೆಟ್ಟಗಳ ಒಳಗೆ ಮತ್ತು ಹೊರಗೆ ಜನರು ಮತ್ತು ಸರಕುಗಳ ಹರಿವು ಹೆಚ್ಚಿತು. ವಸಾಹತೋತ್ತರ ರಾಜ್ಯದ ಅಭಿವೃದ್ಧಿಯ ಹೆಸರಲ್ಲಿ ಹತ್ತಾರು ಸರಕಾರಿ ನೌಕರರು ಅವರ ಕುಟುಂಬಗಳೊಂದಿಗೆ ಈ ಪ್ರದೇಶಗಳಿಗೆ ಬಂದರು. ಭಾರತೀಯ ಮಧ್ಯಮ ವರ್ಗದವರಿಂದಾಗಿ ಬಯಲು ಪ್ರದೇಶದಿಂದ ಬೆಟ್ಟಗಳವರೆಗೆ ಪ್ರವಾಸೋದ್ಯಮದಲ್ಲಿ ತ್ವರಿತ ಹೆಚ್ಚಳ ಉಂಟಾಯಿತು. ಈ ಪ್ರವಾಸಿಗರು ತಮ್ಮಾಂದಿಗೆ ಸ್ಥಳೀಯವಾಗಿ ಉದ್ಯೋಗ ಮತ್ತು ಆದಾಯ ಗಳಿಸುವ ಅವಕಾಶಗಳನ್ನು ತಂದರು. ಕುಡಿತ, ಜಗಳಗಳು, ಟ್ರಾಫಿಕ್ ಜಾಮ್ ಶುರುವಾದವು. ಮಾತ್ರವಲ್ಲದೆ ಜೈವಿಕವಾಗಿ ಕರಗದ ಟನ್ಗಳಷ್ಟು ತ್ಯಾಜ್ಯವನ್ನು ಅವರು ನಿರಾತಂಕವಾಗಿ ರಸ್ತೆಬದಿಗಳಲ್ಲಿ ಸುರಿದರು, ನದಿಗಳು ಮತ್ತು ಅರಣ್ಯಗಳಲ್ಲಿ ಎಸೆದರು.

1970ರ ಹೊತ್ತಿಗೆ ಗರ್ವಾಲ್ನಲ್ಲಿ ಅರಣ್ಯನಾಶದಿಂದ ಉಂಟಾದ ಪರಿಸರ ಮತ್ತು ಸಾಮಾಜಿಕ ಬಿಕ್ಕಟ್ಟು ಚಿಪ್ಕೋ ಚಳವಳಿಯ ಹುಟ್ಟಿಗೆ ಕಾರಣವಾಗುವಷ್ಟು ತೀವ್ರವಾಗಿತ್ತು. 1980ರ ಹೊತ್ತಿಗೆ ನೀಲಗಿರಿಯಲ್ಲಿ ಇಂಥ ಆಂದೋಲಕ್ಕಾಗಿ ಜನರನ್ನು ಸೇರಿಸುವ ನಾಗರಿಕ ಗುಂಪುಗಳು ತಯಾರಾಗತೊಡಗಿದ್ದವು. ಈ ಹೆಜ್ಜೆಗಳು ಸಮಯೋಚಿತವಾಗಿದ್ದವು. ಏಕೆಂದರೆ ಗರ್ವಾಲ್ ಮತ್ತು ನೀಲಗಿರಿಗಳ ಪರಿಸರ ಸಮಗ್ರತೆಯು ಅರಣ್ಯನಾಶ, ಮಣ್ಣಿನ ಸವೆತ, ವಿಷಕಾರಿ ತ್ಯಾಜ್ಯಗಳು, ವಿಲಕ್ಷಣ ಕಳೆಗಳು ಮತ್ತು ಅತಿಯಾದ ಸಂಖ್ಯೆಯ ಪ್ರವಾಸಿಗರ ಆಕ್ರಮಣ ಹೀಗೆ ವಿವಿಧ ದಿಕ್ಕುಗಳಿಂದ ಅಪಾಯದಲ್ಲಿತ್ತು. ನಂತರದ ವರ್ಷಗಳಲ್ಲಿ, ಪರ್ವತ ಪ್ರದೇಶಗಳ ಸುಸ್ಥಿರ ಭವಿಷ್ಯಕ್ಕಾಗಿ ಕೆಲಸ ಮಾಡುವವರು ಮತ್ತು ಅದನ್ನು ಹಾಳುಮಾಡುವವರ ನಡುವೆ ಭಾರೀ ಸಂಘರ್ಷಗಳೇ ನಡೆದವು.

ಹವಾಮಾನ ಬದಲಾವಣೆಯ ಸವಾಲು ಸಹಜವಾಗಿ ಈ ಪ್ರಶ್ನೆಗಳನ್ನು ಇನ್ನಷ್ಟು ಜರೂರುಗೊಳಿಸಿದೆ. ನನ್ನ ಯೌವನದಲ್ಲಿ ಕಂಡಿದ್ದ ಉತ್ತರದ ಬೆಟ್ಟಗಳಿಗಿಂತ ನನ್ನ ವೃದ್ಧಾಪ್ಯದಲ್ಲಿ ನೋಡುತ್ತಿರುವ ದಕ್ಷಿಣದ ಬೆಟ್ಟಗಳು ಮೂರು ವಿಚಾರಗಳಲ್ಲಿ ಹೆಚ್ಚು ಅದೃಷ್ಟಶಾಲಿ ಎಂದೆನ್ನಿಸತೊಡಗಿದೆ. ಮೊದಲ ಕಾರಣ ಪರಿಸರ. ಗರ್ವಾಲ್ನಲ್ಲಿ ನದಿಗಳು ಹಿಮದಿಂದ ಆವೃತವಾಗಿರುವುದರಿಂದ ಮತ್ತು ಹೆಚ್ಚಿನ ಎತ್ತರದಿಂದ ಇಳಿಯುವುದರಿಂದ, ಅವು ದುಬಾರಿ ಮತ್ತು ವಿನಾಶಕಾರಿ ಜಲವಿದ್ಯುತ್ ಯೋಜನೆಗಳನ್ನು ಆಹ್ವಾನಿಸುವ ಸಾಧ್ಯತೆ ಹೆಚ್ಚು. ನೀಲಗಿರಿಯಲ್ಲಿಯೂ ಕೆಲವು ಜಲವಿದ್ಯುತ್ ಯೋಜನೆಗಳಿವೆ. ಆದರೆ ಹಿಮಾಲಯದಲ್ಲಿನ ದೊಡ್ಡ ಮತ್ತು ನಿಚ್ಚಳವಾಗಿ ಬೆಳೆಯುತ್ತಿರುವ ಅಣೆಕಟ್ಟುಗಳ ಜಾಲ ಮಾಡಿರುವ ಹಾನಿಯನ್ನು ಇವು ಉಂಟುಮಾಡಿಲ್ಲ.

ನೀಲಗಿರಿಯ ಅದೃಷ್ಟದ ಎರಡನೇ ಕಾರಣವೆಂದರೆ, ಭೂ ರಚನೆ. ಈ ದಕ್ಷಿಣ ಬೆಟ್ಟಗಳು ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುತ್ತವಾದರೂ, ಇವೆಲ್ಲವೂ ಭಾರತೀಯ ಒಕ್ಕೂಟದ ರಾಜ್ಯಗಳಾಗಿವೆ. ಆದರೆ, ಗರ್ವಾಲ್ ಟಿಬೆಟ್ನ ಗಡಿಯಲ್ಲಿದೆ. ಭಾರತ ಮತ್ತು ಚೀನಾ ನಡುವಿನ ದುರ್ಬಲ ಸಂಬಂಧಗಳಿಂದಾಗಿ ವಿಶಾಲವಾದ ರಸ್ತೆಗಳ ನಿರ್ಮಾಣ ಮತ್ತು ಹೆಚ್ಚಿನ ಸಂಖ್ಯೆಯ ಸೈನ್ಯವನ್ನು ರವಾನಿಸುವ ಅವಶ್ಯಕತೆ ಪ್ರಾಕೃತಿಕವಾಗಿ ಮತ್ತು ಸಾಮಾಜಿಕವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಅದೃಷ್ಟದ ಮೂರನೇ ಕಾರಣ, ಧಾರ್ಮಿಕವಾದುದು. ನೀಲಗಿರಿ ಅನೇಕ ಸಣ್ಣ ಮತ್ತು ಸ್ಥಳೀಯವಾಗಿ ಆರಾಧಿಸಲ್ಪಡುವ ದೇವಾಲಯಗಳು, ಶ್ರದ್ಧಾ ಕೇಂದ್ರಗಳು, ಮಸೀದಿಗಳು ಮತ್ತು ಚರ್ಚ್ಗಳ ನೆಲೆಯಾಗಿದೆ. ಇವುಗಳಲ್ಲಿ ಯಾವುದಕ್ಕೂ ಜಿಲ್ಲೆಯ ಹೊರಗಿನ ಪ್ರವಾಸಿಗರು ಬರುವುದಿಲ್ಲ. ಗರ್ವಾಲ್ ಭಾರತದಲ್ಲಿನ ನಾಲ್ಕು ಪವಿತ್ರವಾದ ಮತ್ತು ಹೆಚ್ಚು ಪ್ರವಾಸಿಗರು ಬರುವ ದೇವಾಲಯಗಳಿಗೆ ನೆಲೆಯಾಗಿದೆ. ಚಾರ್ ಧಾಮ್ ಎಂದು ಕರೆಯಲ್ಪಡುವ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಜಮುನೋತ್ರಿ. ಈ ಸ್ಥಳಗಳಿಗೆ ಹಿಂದೆ ಕಾಲ್ನಡಿಗೆಯಲ್ಲಿ ಮತ್ತು ಕುದುರೆಗಾಡಿಗಳಲ್ಲಿ ಯಾತ್ರಿಗಳು ಬರುತ್ತಿದ್ದಾಗ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಧಾರ್ಮಿಕ ಪ್ರವಾಸೋದ್ಯಮ ರಭಸವಾಗಿ ವಿಸ್ತರಿಸಿದೆ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣದ ಅಗತ್ಯವಿದೆ ಎನ್ನಿಸುವ ಮಟ್ಟದಲ್ಲಿದೆ. ಅದು ಒಡ್ಡುವ ಪರಿಸರ ಮತ್ತು ಸಾಮಾಜಿಕ ಅಪಾಯಗಳು ಬಹಳಷ್ಟಿವೆ.

ನಾನು ಗರ್ವಾಲ್ ಮತ್ತು ನೀಲಗಿರಿಗಳೆರಡರ ಜೊತೆ ಆಳವಾದ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದೇನೆ. ಹಾಗಾಗಿ ಈ ಎರಡೂ ಪರ್ವತ ಪ್ರದೇಶಗಳ ಜೈವಿಕ ಸಾಂಸ್ಕೃತಿಕ ಸುಸ್ಥಿರ ಭವಿಷ್ಯ ನನ್ನ ಹಂಬಲವಾಗಿದೆ. ಈಗ ಲಭ್ಯವಿರುವ ಪುರಾವೆಗಳ ಪ್ರಕಾರ, ಗರ್ವಾಲ್ಗೆ ಅಂತಹ ಭವಿಷ್ಯದ ನಿರೀಕ್ಷೆಗಳು ಇದ್ದಂತೆ ಕಾಣಿಸುವುದಿಲ್ಲ. ನೀಲಗಿರಿಯ ಸಾಮಾಜಿಕ ಪರಿಸರ ಸಮಗ್ರತೆಯನ್ನು ಕಾಪಾಡಲು ಮತ್ತು ನವೀಕರಿಸಲು ನಿಸ್ಸಂದೇಹವಾಗಿ ಪ್ರಯಾಸಕರ ಹೋರಾಟಗಳು ಆಗಬೇಕಿದ್ದರೂ, ಕನಿಷ್ಠ ಅದು ಅಂಥ ಭರವಸೆ ಮತ್ತು ಸಾಧ್ಯತೆಯನ್ನಾದರೂ ಹೊಂದಿದೆ. ನಾಗರಿಕರು, ವಿಜ್ಞಾನಿಗಳು, ಸಾಮಾಜಿಕ ಪ್ರಜ್ಞೆಯುಳ್ಳ ಉದ್ಯಮಿಗಳು ಮತ್ತು ಸಾರ್ವಜನಿಕ ಮನೋಭಾವದ ಸರಕಾರಿ ಅಧಿಕಾರಿಗಳ ನಡುವಿನ ಫಲಪ್ರದ ಸಹಯೋಗದೊಡನೆ ಶೋಲಾ ಕಾಡುಗಳು ಮತ್ತು ಅರಣ್ಯಗಳನ್ನು ಮರುಸ್ಥಾಪಿಸಲು, ಕೃಷಿಯನ್ನು ರಾಸಾಯನಿಕಮುಕ್ತಗೊಳಿಸಲು, ಪ್ರವಾಸೋದ್ಯಮವನ್ನು ಹೆಚ್ಚು ಸಾಮಾಜಿಕ ಹೊಣೆಗಾರಿಕೆಯಿಂದ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ರೂಪಿಸಲು, ಜಲಮೂಲಗಳನ್ನು ಸ್ವಚ್ಛಗೊಳಿಸಲು ಮತ್ತು ಪುನರುಜ್ಜೀವನಗೊಳಿಸಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸಬಹುದು.

ಈ ಅಂಕಣವನ್ನು ದಿಲ್ಲಿಯಲ್ಲಿನ ಜಿ20 ಶೃಂಗಸಭೆಯ ವೇಳೆ ಪ್ರಕಟಿಸಲಾಗುತ್ತಿದೆ. ಹೆಚ್ಚು ಜನಸಂಖ್ಯೆಯುಳ್ಳ, ಸಮೃದ್ಧ ಮತ್ತು ಶಕ್ತಿಯುತ ರಾಷ್ಟ್ರಗಳ ನಾಯಕರು ವಿಶ್ವದ ಸ್ಥಿತಿಯನ್ನು ಚರ್ಚಿಸಲು ಭೇಟಿಯಾಗಿದ್ದಾರೆ. ಅವರ ಬೆಂಬಲಿಗರು ಮತ್ತು ಮಾಧ್ಯಮಗಳಲ್ಲಿ ಅವರ ಚೀಯರ್ಲೀಡರ್ಗಳಿದ್ದಾರೆ. ಆದರೆ ಈ ಜಿ20 ಶೃಂಗಸಭೆ ಭೂಮಿಯ ಮೇಲಿನ ಜೀವನದ ಭವಿಷ್ಯವನ್ನು ಭೌತಿಕವಾಗಿ ಸುಧಾರಿಸುತ್ತದೆ ಎಂಬುದು ಸಂಪೂರ್ಣವಾಗಿ ಅಸಂಭವ. ಜಾಗತಿಕವಾಗಿ ಯೋಚಿಸುತ್ತಿರುವಾಗ, ಸ್ಥಳೀಯವಾಗಿ ನೋಡುವ ಬಗೆ - ಕಳೆದ ತಿಂಗಳು ಊಟಿಯಲ್ಲಿ ನಡೆದ ನೀಲಗಿರಿ ವಿಚಾರಸಂಕಿರಣದ ಪ್ರೇರಣೆಯಲ್ಲಿ-ಮಾನವೀಯತೆ ಮತ್ತು ಪ್ರಕೃತಿಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಬಹುದು.

 - ರಾಮಚಂದ್ರ ಗುಹಾ ramachandraguha@yahoo.in

Writer - ವಾರ್ತಾಭಾರತಿ

contributor

Editor - Ismail

contributor

Byline - ರಾಮಚಂದ್ರ ಗುಹಾ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!