ಬರಗಾಲದ ಬವಣೆಯಿಂದ ಪ್ರಾಣ ಉಳಿಸಿಕೊಳ್ಳಲು ಹೆಣಗುವ ಸಾಹಸ ಗಾಥೆ

Update: 2024-03-10 06:16 GMT

- ಐವನ್ ಡಿ’ಸಿಲ್ವಾ

15 ನೇ ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನವಾದ ಚಿತ್ರ “The Land Where The Wind Stood Still”. ನಿರ್ದೇಶನ ಆರ್ಡಕ್ ಆಮಿರ್ಕುಲೋವ್. ಕಝಕಿಸ್ತಾನದ ಚಿತ್ರ. 1930 ರಲ್ಲಿ ರಶ್ಯ ಎದುರಿಸಿದ ಭೀಕರ ಬರಗಾಲದ ಸಮಯದಲ್ಲಿ ರಶ್ಯ ದೇಶದ ಭಾಗವೇ ಆಗಿದ್ದ ಕಝಕಿಸ್ತಾನಲ್ಲಿ ಸುಮಾರು ಹತ್ತುಲಕ್ಷ ಜನ ಪ್ರಾಣತೆತ್ತರೆಂದು ನಂತರ ನಡೆದ ಜನಗಣತಿಯಲ್ಲಿ ತಿಳಿದು ಬಂದಿದೆ. ರಶ್ಯದ ಅಧಿಪತಿ ಸ್ಟಾಲಿನ್ನ ಆಡಳಿತ ಜಾರಿಗೆ ತಂದ ಕಲೆಕ್ಟಿವಿಸಮ್ನ ಭಾಗವಾಗಿ ಸಾಮಾನ್ಯ ರೈತಾಪಿ ಜನ ತಮ್ಮ ಜಮೀನುಗಳನ್ನೆಲ್ಲ ಸರಕಾರಕ್ಕೆ ಸಾಮುದಾಯಿಕ ಕೃಷಿ ಮಾಡಲು ಕಡ್ಡಾಯವಾಗಿ ಕೊಡಲೇಬೇಕಿತ್ತು. ಭ್ರಷ್ಟ ಸರಕಾರಿ ಅಧಿಕಾರಿಗಳು, ಪೊಲೀಸರು ಮತ್ತು ಸೈನಿಕರು ಸೇರಿ ಎಸಗಿದ ಹಿಂಸೆ ಬಂಧನ ಮತ್ತು ಸೋವಿಯತ್ ಸರಕಾರದ ನೀತಿಗಳು-ಆಹಾರಧಾನ್ಯಗಳ ತೀವ್ರಕೊರತೆಯ ನಡುವೆಯೂ ರಫ್ತುಮಾಡುವ ನೀತಿ, ಯುದ್ದ ಹಾಗೂ ಶಸ್ತ್ರಾಸ್ತ್ರಗಳಿಗೆ ಅಧಿಕ ಖರ್ಚು ಮತ್ತು ವಿಪರೀತ ಕೈಗಾರಿಕೀಕರಣದಿಂದ ಬರಗಾಲದ ಭೀಕರತೆ ಇನ್ನೂ ತೀವ್ರಗೊಂಡಿತ್ತು.

ಇಂತಹ ರಾಜಕೀಯ, ಸಾಮಾಜಿಕ ಹಿನ್ನೆಲೆಯಲ್ಲಿ ಕಝಕಿಸ್ತಾನದ ಒಂದು ಪ್ರಾಂತದಲ್ಲಿ ಮಧ್ಯವಯಸ್ಸಿನ ಜುಪಾರ್ ತನ್ನ ಎಳೆವಯಸ್ಸಿನ ಇಬ್ಬರು ಮಕ್ಕಳು ಜೋಲಾನ್ ಮತ್ತು ಬೋಷಾಯ್ ಜೊತೆಗೂಡಿ ತನ್ನ ಹುಟ್ಟಿದೂರಿಗೆ ಹೊರಟಿದ್ದಾಳೆ. ಜುಪಾರ್ಳ ಗಂಡನನ್ನು, ಆತ ತನ್ನದೇ ಮರಿಕುದುರೆಯೊಂದನ್ನು ಅಧಿಕಾರಿಗಳಿಗೆ ತಿಳಿಸದೆ ಕೊಂದು ತಿಂದಿದ್ದನ್ನು, ಊರಿನ ಮುಖ್ಯಸ್ಥ ಸೈನಿಕರಿಗೆ ದೂರು ನೀಡಿದ್ದ ಮೇರೆಗೆ ಬಂಧನದಲ್ಲಿಡಲಾಗಿದೆ. ಮರುಭೂಮಿಯುದ್ದಕ್ಕೂ ಎದುರಾಗುವ ಭೀಕರ ಬಿರುಗಾಳಿ, ಬಂಜರು ಭೂಮಿ ನಿರ್ನಾಮಗೊಂಡು ಆವಶೇಷಗಳೇ ತುಂಬಿರುವ ಊರುಗಳು. ಊರಿನಿಂದ ತಪ್ಪಿಸಿಕೊಂಡು ಪಲಾಯನ ಮಾಡುತ್ತಿರುವ ರೈತರನ್ನು ಬಂಧಿಸಲು ತಪ್ಪಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕೊಲ್ಲಲು ಕುದುರೆಗಳ ಮೇಲೆ ಗಸ್ತು ತಿರುಗುತ್ತಿರುವ ಸೈನಿಕರು, ಹದ್ದು ತೋಳಗಳು ಅರ್ಧಂಬರ್ಧ ತಿಂದು ಉಳಿಸಿದ ಮನುಷ್ಯರ ಕಳೆಬರಗಳು ಅವುಗಳಿಂದ ಹೊರಡುವ ದುರ್ನಾತ. ಆಹಾರ ನೀರು ಇಲ್ಲದೆ ಹಸಿವಿನಿಂದ ಹಗಲು ಬಿಸಿಲಿನ ಝಳದಿಂದ ರಾತ್ರಿ ಸುರಿಯುವ ನಿಷ್ಕರುಣಿ ಹಿಮಪಾತದಿಂದ ತಪ್ಪಿಸಿ ತನ್ನ ಕನಸಿನೂರಿನ ಪಯಣದಲ್ಲಿ ಪಡುವ ಯಾತನೆಗಳು ಮತ್ತು ಅವುಗಳನ್ನು ಎದುರಿಸಿ ಪ್ರಾಣ ಉಳಿಸಲು ಅವಳು ಪಡುವ ಸಾಹಸಗಳ ಗಾಥೆಯೇ “The Land Where The Wind Stood Still”.

ದಾರಿಯಲ್ಲಿರುವ ಪಾಳುಬಾವಿಯೊಂದರಲ್ಲಿ ಇವಳ ಊರಿನ ಮುಖ್ಯಸ್ಥ ಬಿದ್ದಿದ್ದಾನೆ, ಅವನ ಕತ್ತೆಯ ಸಹಾಯದಿಂದ ಅವನನ್ನು ಮೇಲೆತ್ತಿ ಅವನನ್ನು ಅಲ್ಲಿಯೇ ಬಿಟ್ಟುಹೋಗುತ್ತಾಳೆ. ಮೂಂದೊಮ್ಮೆ ಆತನನ್ನು ಮತ್ತೆ ಭೇಟಿಯಾದಾಗ ಆತ ಹಲ್ಲೆಗೊಳಗಾಗಿ ಬಿದ್ದಿರುತ್ತಾನೆ. ಹಸಿವಿನಿಂದ ತತ್ತರಿಸುತ್ತಿರುವ ಜನ ಆತನನ್ನು ಹೊಡೆದು ಹಾಕಿ ಕತ್ತೆಯನ್ನು ಕೊಂದು ತಿಂದಿರುತ್ತಾರೆ. ತನ್ನನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ಹೊರಡುವ ಜುಪಾರ್ಳಿಗೆ ದಾರಿಯ ಮದ್ಯೆ ಹಸಿವಿಗಿರಲಿ ಎಂದು ಆತ ನೀಡುವ ಒಣ ಮಾಂಸ ನರಮನುಷ್ಯರದ್ದೆಂದು ಗೊತ್ತಾದಾಗ ಕಸಿವಿಸಿಗೊಳ್ಳುತ್ತಾಳೆ. ಅವಳು ಭೇಟಿಯಾಗುವ ಒಂಟಿ ಮುದುಕಿ ಅದು ಹೇಗೋ ಜೀವ ಉಳಿಸಿಕೊಂಡಿರುತ್ತಾಳೆ. ಮುದುಕಿ ನೀಡುವ ಕಾಳಿನ ಆಹಾರ ತಿಂದಾಗ ಅವಳಿಗೂ ಮಕ್ಕಳಿಗೂ ಹೊಟ್ಟೆತೊಳಸಿ ವಾಂತಿ ಮಾಡುತ್ತಾರೆ. ಜುಪಾರ್ಳಿಗೆ ಮನುಷ್ಯರ ಮೇಲಿನ ನಂಬಿಕೆಯೇ ಹೊರಟುಹೋಗಿದೆ. ದಾರಿಯಲ್ಲಿ ಸಿಕ್ಕ ಮರದಲ್ಲಿದ್ದ ಹಕ್ಕಿಯ ಮರಿಯನ್ನು ಅವಳ ಮಗ ಹಿಡಿದು ಅದನ್ನು ಬೇಯಿಸಿ ಮಗನ ಹಸಿವು ತೀರಿಸುತ್ತಾಳೆ. ಮೊದಲ ಬಾರಿಗೆ ಜುಪಾರ್ ಕಾರ್ಯಸಾಧುವಾಗಿ ಚಿಂತಿಸಿ ಹಕ್ಕಿಯ ಮಾಂಸವನ್ನು ಜ್ವರದಿಂದ ನರಳುತ್ತಿರುವ ಚಿಕ್ಕ ಮಗನಿಗೆ ನೀಡದೆ ಹಿರಿಯವನನ್ನು ಉಳಿಸಲು ತೀರ್ಮಾನಿಸುತ್ತಾಳೆ. ಹಸಿವಿನಿಂದ ಜ್ವರದಿಂದ ಸಣ್ಣ ಮಗ ಸತ್ತಾಗ ಹಿರಿಯ ಮಗ ಅವಳನ್ನು ತಮ್ಮನ ಕೊಲೆಗಾರಳು ಎಂದು ಹಂಗಿಸುತ್ತಾನೆ.

ರೈಲುಗಾಡಿಯಲ್ಲಿ ಸೈನಿಕರಿಗೆಂದು ಸಾಗಿಸುತ್ತಿರುವ ಬ್ರೆಡ್ ಮತ್ತಿತರ ಆಹಾರ ಸಾಮಗ್ರಿಗಳನ್ನು ಕದಿಯುವಾಗ ಸೆರೆಹಿಡಿದ ಸೈನಿಕನ ಕಾಲಿಗೆ ಚಾಕುವಿನಿಂದ ಚುಚ್ಚಿ ಬಚಾವಾಗುತ್ತಾಳೆ. ಆದರೆ ಈ ಭಾಗ್ಯ ಹಸಿವಿನಿಂದ ಸೋತು ಆಹಾರ ಆರಸಲು ಬಂದ ಇತರ ಜನರಿಗೆ ಲಭಿಸುವುದಿಲ್ಲ. ಆಹಾರಕ್ಕಾಗಿ ಮುತ್ತಿಗೆ ಹಾಕಿದ ಸಾಮಾನ್ಯ ಜನರನ್ನು ಸೈನಿಕರು ಗುಂಡಿಟ್ಟು ಕೊಲ್ಲುತ್ತಾರೆ.

ಪ್ರಯಾಣ ಮುಂದುವರಿದಂತೆ ಇನ್ನೊಬ್ಬ ಮಗ ಕೂಡಾ ಹಸಿವಿಗೆ ಬಲಿಯಾಗುತ್ತಾನೆ. ಮರದಲ್ಲಿದ್ದ ಹಕ್ಕಿಗೂಡಿನಿಂದ ಎರಡು ಮರಿಗಳನ್ನು ಹಿಡಿದು ತರೋಣವೆಂದು ಮಗ ಹೇಳಿದಾಗ ಬೇಡವೆಂದು ನಿರಾಕರಿಸಿ ಹಕ್ಕಿಯ ಸಂತಾನ ಮುಂದುವರಿಯಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಜುಪಾರ್ಳ ಮಾನವೀಯತೆ ಹೃದಯ ಕಲಕುತ್ತದೆ. ತೀರಾ ದಿಕ್ಕೆಟ್ಟ ಜುಪಾರ್ ದಾರಿ ಮುಂದುವರಿಸುತ್ತಾಳೆ. ನದಿಯ ತೀರದಲ್ಲಿದ್ದ ಗುಡಿಸಲಲ್ಲಿ ಸತ್ತು ನಾರುತ್ತಿರುವ ಹೆಣಗಳ ಮಧ್ಯೆ ಹಸುಗೂಸೊಂದು ಚೀರಾಡುವುದನ್ನು ಕೇಳಿ ಆ ಕೂಸನ್ನು ಎತ್ತಿಕೊಂಡು ಮುಂದುವರಿಯುತ್ತಾಳೆ.

ವಿಪರೀತ ಪರಿಸ್ಥಿತಿಗಳಲ್ಲಿಯೂ ಧೈರ್ಯಗೆಡದೆ ಮುನ್ನುಗ್ಗುವ ಜುಪಾರ್ಳ ಆತ್ಮಸ್ತೈರ್ಯವನ್ನು ಮೆಚ್ಚುತ್ತಲೇ ಉಕ್ಕಿನ ಮನುಷ್ಯ ಸ್ಟಾಲಿನ್ನ ಆಡಳಿತದಲ್ಲಿ ವಿನಾಕಾರಣ ಹತ್ಯೆಗೀಡಾದ ಮಿಲಿಯಗಟ್ಟಲೇ ಸಾಮಾನ್ಯ ರೈತರನ್ನು ನೆನೆದು ಕಣ್ಣು ಹನಿಯಾಗುತ್ತದೆ. ಹಿಟ್ಲರ್ ಆರು ಮಿಲಿಯ ಅಂದರೆ ಅರವತ್ತು ಲಕ್ಷಯೆಹೂದಿಗಳನ್ನು ಮತ್ತಿತರರನ್ನು ಹತ್ಯೆಗೈದ ಎಂದು ಚರಿತ್ರೆ ಹೇಳುತ್ತದೆ. ಸ್ಟಾಲಿನ್ ಕಾಲದಲ್ಲಿ ಕೇವಲ 1930-32ರ ಅವಧಿಯ ಭೀಕರ ಬರಗಾಲದಲ್ಲಿ ಏಳು ಮಿಲಿಯ ರಶ್ಯನ್ನರು ಸತ್ತರೆಂದು ವರದಿಯಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!