ಕರ್ನಾಟಕ ಸರಕಾರದ ಸಂವಿಧಾನ ವಿರೋಧಿ ನಡೆ

Update: 2024-03-28 07:35 GMT

ಡಾ. ತೌಸೀಫ್ ಮಡಿಕೇರಿ

ಸಿಇಒ, ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್

ಕರ್ನಾಟಕ ಸರಕಾರ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತೀ ಶೈಕ್ಷಣಿಕ ವರ್ಷ ಶೇ. ೨೫ರಷ್ಟು ಆ ಸಮುದಾಯದ ವಿದ್ಯಾರ್ಥಿಗಳಿಗೆ ಸೀಟನ್ನು ನೀಡಬೇಕೆಂಬ ನಿಯಮವನ್ನು ರದ್ದುಪಡಿಸಿದೆ. ಈ ನಿಯಮ ಸಡಿಲಿಕೆಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಅತೀ ಹೆಚ್ಚು ನಷ್ಟವಾಗಲಿದೆ. ಭಾರತದ ಸಂವಿಧಾನದ ೩೦ನೇ ವಿಧಿ ಪ್ರಕಾರ ಅಲ್ಪಸಂಖ್ಯಾತರಿಗೆ ತನ್ನದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಅಧಿಕಾರವಿದೆ. ಒಂದು ಸಮುದಾಯವು ತನ್ನದೇ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ ಅದನ್ನು ಸಂರಕ್ಷಿಸುವ ಅಧಿಕಾರವನ್ನು ಸಂವಿಧಾನ ನೀಡುತ್ತದೆ. ಧರ್ಮ ಅಥವಾ ಭಾಷೆಗೆ ಅನುಸಾರವಾಗಿ ತನ್ನದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯವನ್ನು ಆ ಸಮುದಾಯ ಹೊಂದಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದರೆ ಶಾಲೆ, ಕಾಲೇಜು ಅಥವಾ ಶೈಕ್ಷಣಿಕ ಸಂಸ್ಥೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿ ಅಥವಾ ಗುಂಪಿನಿಂದ ಸ್ಥಾಪಿಸಲ್ಪಟ್ಟಿರಬೇಕು ಮತ್ತು ಆ ಸಂಸ್ಥೆಯನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ನಿರ್ವಹಿಸುತ್ತಿರಬೇಕು, ಅಂತಹ ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೊಂದಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಸ್ಥಾನಮಾನ ಪಡೆಯಲು ಈ ಎರಡು ನಿಯಮಗಳು ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಎಸ್.ಪಿ. ಮಿತ್ತಲ್ v/s ಯೂನಿಯನ್ ಆಫ್ ಇಂಡಿಯಾ (೧೯೮೩) ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದೆ.

ಒಂದು ಅಲ್ಪಸಂಖ್ಯಾತ ಸಂಸ್ಥೆಯಲ್ಲಿ ಇತರ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದು. ಅದರಲ್ಲಿ ಏನೂ ಅಭ್ಯಂತರವಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಟೇಟ್ ಆಫ್ ಕೇರಳ v/s ಮದರ್ ಪ್ರೊವಿನ್ಸಿಯಲ್ (೧೯೭೦) ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ೨೦೦೫ರ ಪಿ.ಎ. ಇನಾಂದಾರ್ v/s ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ: ‘‘ಅಲ್ಪಸಂಖ್ಯಾತ ಮಾನ್ಯತೆ ಪಡೆದ ಸಂಸ್ಥೆಗಳು ಇತರ ಸಮುದಾಯದ ವಿದ್ಯಾರ್ಥಿಗಳ ದಾಖಲಾತಿ ಪಡೆದುಕೊಳ್ಳಬಹುದು. ಆದರೆ ಸೀಮಿತ ಪ್ರಮಾಣದಲ್ಲಿ ಮಾತ್ರ ಮತ್ತು ತನ್ನ ಅಲ್ಪಸಂಖ್ಯಾತ ಸ್ಥಾನಮಾನ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಇತರ ಸಮುದಾಯಗಳ ವಿದ್ಯಾರ್ಥಿಗಳ ದಾಖಲಾತಿ ಮಾಡಬಾರದು. ಅವರು ಹಾಗೆ ಮಾಡಿದರೆ, ಅವರು ಆರ್ಟಿಕಲ್ ೩೦ (೧)ರ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ.’’ ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಎಷ್ಟು ಶೇ. ವಿದ್ಯಾರ್ಥಿಗಳಿರಬೇಕೆಂದು ನಿಗದಿಪಡಿಸುವ ಅಧಿಕಾರ ರಾಜ್ಯ ಸರಕಾರಕ್ಕಿದೆ.

ಕರ್ನಾಟಕ ಸರಕಾರದ ಪ್ರತೀ ಶೈಕ್ಷಣಿಕ ವರ್ಷ ಶೇ. ೨೫ರಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸೀಟನ್ನು ನೀಡಬೇಕೆಂಬ ನಿಯಮ ರದ್ದತಿಯಿಂದಾಗಿ ಮುಂದೊಂದು ದಿನ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಆ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ ಕೂಡಾ ಆಗುವ ಸಾಧ್ಯತೆ ಇದೆ. ಏಕೆಂದರೆ ಅಲ್ಪಸಂಖ್ಯಾತ ಸ್ಥಾನಮಾನದೊಂದಿಗೆ ವಿದ್ಯಾಸಂಸ್ಥೆ ನಡೆಸುವ ಶ್ರೀಮಂತರ ಶಾಲಾ- ಕಾಲೇಜುಗಳಲ್ಲಿ ಆರ್ಥಿಕವಾಗಿ ಮೇಲ್ವರ್ಗದವರು ಮಾತ್ರ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ದುಬಾರಿ ಫೀಸನ್ನು ಭರಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

ತಮ್ಮ ಸಂಸ್ಥೆಗಳಿಗೆ ತಮ್ಮ ಸಮುದಾಯದ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿಲ್ಲ, ಆದ್ದರಿಂದ ಪ್ರತೀ ಶೈಕ್ಷಣಿಕ ವರ್ಷ ಶೇ. ೨೫ರಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸೀಟನ್ನು ನೀಡಬೇಕೆಂಬ ನಿಯಮ ರದ್ದುಮಾಡಬೇಕೆಂದು ಈ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿ ಸರಕಾರದ ಮೇಲೆ ಒತ್ತಡ ತಂದು ಈ ನಿಯಮವನ್ನು ರದ್ದು ಪಡಿಸಿದೆ. ದುಬಾರಿ ಫೀಸು ನೀಡಲು ಸಾಧ್ಯವಿಲ್ಲದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಆ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು ಅಥವಾ ಉಚಿತ ಶಿಕ್ಷಣ ನೀಡಿ ಶೇ. ೨೫ರಷ್ಟು ಸೀಟು ಭರ್ತಿ ಮಾಡುವುದು ಆ ಸಂಸ್ಥೆಯ ಸಾಮಾಜಿಕ ಕರ್ತವ್ಯ. ಏಕೆಂದರೆ ಈ ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನ ಪಡೆದಿರುವುದೇ ಆ ಸಮುದಾಯದ ಶೈಕ್ಷಣಿಕ ಏಳಿಗೆಗಾಗಿ ಮತ್ತು ಆ ಸಮುದಾಯವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವುದು ಆ ಸಂಸ್ಥೆಗಳ ಉದ್ದೇಶವಾಗಿರಬೇಕು. ಆದ್ದರಿಂದ ಈ ಸಂಸ್ಥೆಗಳು ಶೇ. ೨೫ರಷ್ಟು ಸೀಟುಗಳನ್ನು ಆ ಸಮುದಾಯಕ್ಕೆ ನೀಡದಿದ್ದರೆ ಅದು ಸಂವಿಧಾನಕ್ಕೆ ಬಗೆಯುವ ದ್ರೋಹ.

ಈ ಪ್ರತಿಷ್ಠಿತ ಸಂಸ್ಥೆಗಳಿಗೆ ಸರಕಾರದಿಂದ ಸವಲತ್ತುಗಳನ್ನು ಪಡೆಯಲು, ಶಿಕ್ಷಣ ಹಕ್ಕು ಕಾಯ್ದೆಯಿಂದ ಹೊರಗುಳಿಯಲು ಅಲ್ಪಸಂಖ್ಯಾತ ಸ್ಥಾನಮಾನ ಬೇಕು. ತಮ್ಮ ಸಮುದಾಯದ ಬಡ ಮಕ್ಕಳಿಗೆ ಸೀಟು ಕೊಡಲು ಸಾಧ್ಯವಿಲ್ಲ ಎಂದಾದರೆ ಅಲ್ಪಸಂಖ್ಯಾತ ಸ್ಥಾನಮಾನ ಏಕೆ?

ಇಂದು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ದಾಖಲಾತಿ ಪಡೆಯುತ್ತಾರೆ. ಅಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ ಇಂದಿನ ಪ್ರತಿಷ್ಠಿತ ಮುಸ್ಲಿಮ್ ಶಿಕ್ಷಣ ಸಂಸ್ಥೆ ಸರಕಾರದ ಈ ನಿಯಮ ರದ್ದತಿಯಿಂದಾಗಿ ನಾಳೆ ತನ್ನೆಲ್ಲ ಶೇ. ನೂರರಷ್ಟು ಸೀಟುಗಳನ್ನು ಇತರ ಸಮುದಾಯದ ಮಕ್ಕಳಿಗೆ ನೀಡಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳೇ ಇಲ್ಲದಿದ್ದರೆ ಇದರಿಂದ ಸಮುದಾಯಕ್ಕೇನೂ ಲಾಭವಿಲ್ಲ.

ಆದ್ದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಇಲ್ಲದ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಏಕೆ ನೀಡಬೇಕೆಂಬುದು ಸರಕಾರ ಚಿಂತಿಸಬೇಕಾಗಿದೆ.

ಇದು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ಪರಿಣಾಮ ಬೀಳಲಿದೆ. ರಾಜ್ಯಾದ್ಯಂತ ಮುಸ್ಲಿಮ್, ಕ್ರೈಸ್ತ, ಜೈನ್, ಸಿಖ್, ಕೊಡವ, ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆದ ೩,೦೦೦ಕ್ಕೂ ಹೆಚ್ಚು ಶಾಲೆಗಳಿವೆ ಮತ್ತು ಅದೇ ರೀತಿ ನೂರಾರು ಕಾಲೇಜುಗಳಿವೆ. ಇದರಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ದುಬಾರಿ ಶಾಲಾ ಶುಲ್ಕ ಪಡೆಯುವ ನೂರಾರು ಶಾಲಾ, ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಬಡ, ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಾಧ್ಯವಿಲ್ಲ.

ಸಂವಿಧಾನದ ೩೦ನೇ ವಿಧಿಯ ಉದ್ದೇಶವೇನೆಂದರೆ ಅಲ್ಪಸಂಖ್ಯಾತ ಸಮುದಾಯ ತನ್ನ ಸಂಸ್ಕೃತಿ, ಭಾಷೆಯ ಸಂರಕ್ಷಣೆಯೊಂದಿಗೆ ತನ್ನ ಸಮುದಾಯವನ್ನು ತನ್ನದೇ ಶೈಕ್ಷಣಿಕ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸುವುದು. ಈ ನಿಟ್ಟಿನಲ್ಲಿ ಸಮುದಾಯದ ಏಳಿಗೆಗಾಗಿ ಪ್ರಯತ್ನಿಸುವುದು. ಸಂವಿಧಾನದ ೩೦ನೇ ವಿಧಿ ಮೂಲಭೂತ ಹಕ್ಕಾಗಿರುವುದರಿಂದ ಅದನ್ನು ವಿಶಾಲಾರ್ಥದಿಂದ ಅರಿತುಕೊಳ್ಳಬೇಕಾಗಿದೆ. ಅದನ್ನು ಸಂಕುಚಿತ ಮತ್ತು ನಿಷ್ಠುರವಾಗಿ ಓದಲು ಸಾಧ್ಯವಿಲ್ಲ. ಆದ್ದರಿಂದ ಅಲ್ಪಸಂಖ್ಯಾತ ಸ್ಥಾನಮಾನದ ಉದ್ದೇಶ, ಒಂದು ಸಂಸ್ಥೆ ಅಲ್ಪಸಂಖ್ಯಾತ ಸಮುದಾಯದವರಿಂದ ಸ್ಥಾಪಿಸಲ್ಪಟ್ಟು ಮತ್ತು ನಿರ್ವಹಿಸುತ್ತಿದ್ದರೆ ಮಾತ್ರ ಸಾಕು, ಸಮುದಾಯದ ವಿದ್ಯಾರ್ಥಿಗಳಿಗೆ ಕನಿಷ್ಠ ಪ್ರಮಾಣದಲ್ಲೂ ಸೀಟು ನೀಡುವ ಅಗತ್ಯವಿಲ್ಲವೆಂದಾದರೆ ರಾಜ್ಯ ಸರಕಾರ ಮತ್ತೊಮ್ಮೆ ಸಂವಿಧಾನವನ್ನು ಮತ್ತು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ತೌಸೀಫ್ ಮಡಿಕೇರಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!