ಬೆಂಗಳೂರು ಗ್ರಾಮಾಂತರ: ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಂಡೀತೇ?

Update: 2024-03-28 05:47 GMT





ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ವಿಧಾನಸಭಾ ಕ್ಷೇತ್ರಗಳು 8. ಅವೆಂದರೆ, ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ, ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್.

ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಎರಡರಲ್ಲಿ ಬಿಜೆಪಿ, ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ.

ಚನ್ನಪಟ್ಟಣ -ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್)

ರಾಮನಗರ -ಇಕ್ಬಾಲ್ ಹುಸೇನ್(ಕಾಂಗ್ರೆಸ್)

ಕನಕಪುರ -ಡಿ.ಕೆ. ಶಿವಕುಮಾರ್(ಕಾಂಗ್ರೆಸ್)

ಮಾಗಡಿ -ಎಚ್.ಸಿ.ಬಾಲಕೃಷ್ಣ (ಕಾಂಗ್ರೆಸ್)

ಕುಣಿಗಲ್ -ಡಾ.ರಂಗನಾಥ್ (ಕಾಂಗ್ರೆಸ್)

ರಾಜರಾಜೇಶ್ವರಿ ನಗರ -ಮುನಿರತ್ನ (ಬಿಜೆಪಿ)

ಬೆಂಗಳೂರು ದಕ್ಷಿಣ -ಎಂ.ಕೃಷ್ಣಪ್ಪ (ಬಿಜೆಪಿ)

ಆನೇಕಲ್ -ಶಿವಣ್ಣ (ಕಾಂಗ್ರೆಸ್)

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಒಟ್ಟು ಮತದಾರರು 27,63,910. ಅವರಲ್ಲಿ ಪುರುಷರು 14,06,042, ಮಹಿಳೆಯರು 13,57,547 ಮತ್ತು ಇತರರು 321

ಡಿಸಿಎಂ ಡಿಕೆಶಿ, ಮಾಜಿ ಸಿಎಂ ಎಚ್‌ಡಿಕೆ ನಡುವಿನ ಪ್ರತಿಷ್ಠೆಯ ಕಣ

ಒಕ್ಕಲಿಗ ಸಮುದಾಯವೇ ನಿರ್ಣಾಯಕವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಾಯಕತ್ವಕ್ಕಾಗಿಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಉಭಯರ ಪಾಲಿಗೆ ಇದು ತೀವ್ರ ಪ್ರತಿಷ್ಠೆಯ ಕಣವೂ ಹೌದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಡಿ.ಕೆ. ಸುರೇಶ್ ಕಾರಣವೆನ್ನಲಾಗಿದ್ದು, ಅದರ ಸೇಡು ತೀರಿಸಿಕೊಳ್ಳಲು ದಳಪತಿ ಹವಣಿಸುತ್ತಿದ್ದಾರೆ.

ಇತ್ತ ತನ್ನ ಗೆಲುವಿನ ಮೂಲಕ ಮೈತ್ರಿಕೂಟಕ್ಕೆ ಪೆಟ್ಟು ಕೊಡಲು ಸುರೇಶ್ ಸನ್ನದ್ಧರಾಗಿದ್ದಾರೆ.

ಕ್ಷೇತ್ರ ಪರಿಚಯ

1967ರಲ್ಲಿ ರಚನೆಯಾದ ಕನಕಪುರ ಲೋಕಸಭಾ ಕ್ಷೇತ್ರ ರಾಜ್ಯದ ಅತಿದೊಡ್ಡ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿ ಬದಲಾಗಿದೆ.

ಹಿಂದಿನಿಂದಲೂ ಪ್ರಾಮುಖ್ಯತೆ ಪಡೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಕೇಂದ್ರ ಸಚಿವರಾದ ಸಿ.ಕೆ. ಜಾಫರ್ ಶರೀಫ್, ಎಂ.ವಿ. ರಾಜಶೇಖರನ್, ಚಂದ್ರಶೇಖರ್ ಮೂರ್ತಿ, ತೇಜಸ್ವಿನಿ ಗೌಡ, ಎಚ್.ಡಿ. ಕುಮಾರಸ್ವಾಮಿ, ಇದೀಗ ಡಿ.ಕೆ. ಸುರೇಶ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ.

ಸತತ ನಾಲ್ಕನೇ ಗೆಲುವಿನ ಕನಸಿನಲ್ಲಿ ಡಿ.ಕೆ.ಸುರೇಶ್




 


ಕೇಂದ್ರ ಸರಕಾರದ ತೆರಿಗೆ ಅನ್ಯಾಯದ ವಿರುದ್ಧ ‘ನನ್ನ ತೆರಿಗೆ, ನನ್ನ ಹಕ್ಕು’ ಘೋಷಣೆಯೊಂದಿಗೆ ಕಾಂಗ್ರೆಸ್ ಕೈಗೊಂಡಿದ್ದ ಅಭಿಯಾನದ ವೇಳೆ ನಮ್ಮ ನ್ಯಾಯಯುತ ಪಾಲು ಕೊಡಲೇಬೇಕು ಎಂದು ಆಗ್ರಹಪೂರ್ವಕವಾಗಿ ಪ್ರತಿಪಾದಿಸಿದ್ದ, ರಾಜ್ಯ ಪ್ರತಿನಿಧಿಸಿದ್ದ ಕಾಂಗ್ರೆಸ್ ಪಕ್ಷದ ಏಕೈಕ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್. ತಮ್ಮ ಹೇಳಿಕೆಯಿಂದಲೇ ವಿವಾದಕ್ಕೆ ಸಿಲುಕಿದ್ದರು. ಮಾತ್ರವಲ್ಲ, ಬಿಜೆಪಿಯ ಕೆಂಗಣ್ಣಿಗೂ ಗುರಿಯಾಗಿದ್ದರು.

2013ರ ಉಪಚುನಾವಣೆಯಲ್ಲಿ 1.37 ಲಕ್ಷ, 2014 ಮತ್ತು 2019ರ ಚುನಾವಣೆಯಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಡಿ.ಕೆ. ಸುರೇಶ್, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ದಾರೆ.

ತಮ್ಮ 10 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡಿ ತನಗೆ ಕೂಲಿ ಕೊಡಿ ಎಂದು ಈಗ ಮತದಾರರನ್ನು ಕೇಳುತ್ತಿದ್ದಾರೆ.

ಕೊಂಚ ಸಿಡುಕಿನ ಸ್ವಭಾವದವರೆಂಬ ಆರೋಪ ಡಿ.ಕೆ.ಸುರೇಶ್ ಮೇಲಿದ್ದರೂ, ಕ್ಷೇತ್ರದ ಜನರ ಸಂಪರ್ಕದಲ್ಲಿ ಸದಾ ಮುಂದಿದ್ದಾರೆ. ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಎದುರಾಳಿಯಾಗಿ ಹೃದ್ರೋಗ ತಜ್ಞ, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಂಜುನಾಥ್ ಸ್ಪರ್ಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಇದು ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದಾಗ ಇಲ್ಲಿಂದ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಇವರೆಲ್ಲರೂ ಇಲ್ಲಿಂದ ಸ್ಪರ್ಧಿಸಿದ್ದಾರೆ. ಗೆದ್ದಿದ್ದಾರೆ, ಸೋತಿದ್ದಾರೆ.

ಹಾಗಾಗಿ ಇದು ಹಿಂದೆ ಹಾಗೂ ಈಗಲೂ ಡಿ.ಕೆ. ಶಿವಕುಮಾರ್ ಹಾಗೂ ದೇವೇಗೌಡರ ಕುಟುಂಬಗಳ ನಡುವಿನ ರಾಜಕೀಯ ಜಿದ್ದಾಜಿದ್ದಿಯ ಕಣ.

ಈ ಬಾರಿ ಡಿ.ಕೆ. ಸುರೇಶ್ ಎದುರು ದೇವೇಗೌಡರ ಅಳಿಯ ಡಾ. ಮಂಜುನಾಥ್ ಕಣಕ್ಕಿಳಿದಿದ್ದಾರೆ.

ಇದು ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.


ಜಾತಿವಾರು ಮತದಾರರ ಅಂದಾಜು ವಿವರ

ಒಕ್ಕಲಿಗರು 7 ಲಕ್ಷಕ್ಕೂ ಅಧಿಕ

ಎಸ್‌ಸಿ, ಎಸ್‌ಟಿ -3.50 ಲಕ್ಷ

ಮುಸ್ಲಿಮರು -2 ಲಕ್ಷ

ಲಿಂಗಾಯತರು -1.50 ಲಕ್ಷ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!