ಸತತ ಏಳು ಬಾರಿ ಗೆದ್ದ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್
ಹೊಸದಿಲ್ಲಿ : ಭರ್ತೃಹರಿ ಮಹತಾಬ್ ಅವರನ್ನು18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಗುರುವಾರ 20 ಜೂನ್ 2024 ರಂದು ಭಾರತದ ರಾಷ್ಟ್ರಪತಿಯವರು ಭಾರತದ ಸಂವಿಧಾನದ ಅನುಚ್ಛೇದ 95(1) ರ ಅಡಿಯಲ್ಲಿ ನೇಮಕ ಮಾಡಿದ್ದಾರೆ.
ಅವರಿಗೆ ಸಹಾಯ ಮಾಡಲು ಕಾಂಗ್ರೆಸ್‌ನ ಕೆ ಸುರೇಶ್, ಡಿಎಂಕೆಯ ಟಿ ಆರ್ ಬಾಲು, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ ಮತ್ತು ಬಿಜೆಪಿಯ ರಾಧಾ ಮೋಹನ್ ಸಿಂಗ್ ಮತ್ತು ಫಗ್ಗನ್ ಸಿಂಗ್ ಕುಲಾಸ್ತೆ ಅವರನ್ನೂ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಘೋಷಿಸಿದ್ದಾರೆ.
18 ನೇ ಲೋಕಸಭೆಗೆ ಚುನಾಯಿತ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಮತ್ತು ಸ್ಪೀಕರ್ ಆಯ್ಕೆಯಾಗುವವರೆಗೆ ಲೋಕಸಭೆಯ ಅಧ್ಯಕ್ಷತೆ ವಹಿಸುವುದು ಹಂಗಾಮಿ ಸ್ಪೀಕರ್ ಅವರ ಪ್ರಾಥಮಿಕ ಕೆಲಸವಾಗಿದೆ.
ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಹಂಗಾಮಿ ಸ್ಪೀಕರ್ ಅಲ್ಲದೆ ರಾಷ್ಟ್ರಪತಿಗಳು ಸಾಮಾನ್ಯವಾಗಿ ಇತರ ಮೂವರು ಚುನಾಯಿತ ಸಂಸದರನ್ನೂ ನೇಮಿಸುತ್ತಾರೆ. ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯಚಟುವಟಿಕೆಗಳ ಕೈಪಿಡಿಯಲ್ಲಿ ಉಲ್ಲೇಖಿಸಲಾದ ನಿಯಮಗಳು ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರನ್ನು ಅಂದರೆ ಸಂಸದರಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿದವನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳುತ್ತದೆ.
ಭರ್ತೃಹರಿ ಮಹತಾಬ್ ಅವರು ಸತತ ಏಳು ಬಾರಿ ಸಂಸದರಾಗಿ ಲೋಕಸಭೆಯಲ್ಲಿದ್ದವರು. ಸಂಪ್ರದಾಯದ ಪ್ರಕಾರ ಎಂಟು ಬಾರಿ ಸಂಸದರಾದ ಕಾಂಗ್ರೆಸ್ ನ ಕೋಡಿಕುನ್ನಿಲ್ ಸುರೇಶ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಬೇಕಿತ್ತು. ಇದು ಸಂಸದೀಯ ಶಿಷ್ಟಾಚಾರಗಳಿಗೆ ವಿರುದ್ಧವಾದ ನಡೆ ಎಂದು ಭರ್ತೃಹರಿ ಅವರ ಆಯ್ಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಆದರೆ ಸುರೇಶ್ ಅವರು ಸತತ ಎಂಟು ಬಾರಿ ಜಯಗಳಿಸಿಲ್ಲ. ನಡುವೆ ಎರಡು ಬಾರಿ ಸೋತಿದ್ದಾರೆ. ಭರ್ತೃಹರಿ ಅವರು ಸತತ ಏಳು ಬಾರಿ ಗೆದ್ದಿದ್ದಾರೆ ಎಂಬುದು ಬಿಜೆಪಿ ಬೆಂಬಲಿಗರ ವಾದ.
ಒಡಿಶಾದ ಭರ್ತೃಹರಿ ಮಹತಾಬ್ ಅವರು ಜನಿಸಿದ್ದು ಸೆಪ್ಟೆಂಬರ್ 8 ,1957 ರಲ್ಲಿ. ಮಹತಾಬ್ ಅವರು1998 ರಿಂದ 2024 ರವರೆಗೆ ಸತತ 7 ಬಾರಿ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದವರು. 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಅವರು ಬಿಜೆಡಿ ತೊರೆದು ಬಿಜೆಪಿ ಸೇರಿದ್ದರು. ವಿನೋದ್ ತಾವ್ಡೆ, ಧರ್ಮೇಂದ್ರ ಪ್ರಧಾನ್ ಮತ್ತು ಬೈಜಯಂತ್ ಪಾಂಡಾ ಅವರು ಮಹತಾಬ್ ಅವರನ್ನು ಆಗ ಪಕ್ಷಕ್ಕೆ ಸೇರಿಸಿಕೊಂಡಿದ್ದರು.
ಮಹತಾಬ್ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದ ದಿವಂಗತ ಹರೇಕೃಷ್ಣ ಮಹತಾಬ್ ಅವರ ಪುತ್ರ. ಮಹತಾಬ್ ಅವರು ಬಿಜು ಜನತಾ ದಳ (BJD) ಪಕ್ಷದ ಸದಸ್ಯರಾಗಿದ್ದರು. ಮಾರ್ಚ್, 2024 ರಲ್ಲಿ ಬಿಜೆಪಿ ಸೇರಲು BJD ಗೆ ರಾಜೀನಾಮೆ ನೀಡಿದರು. ಬಿಜೆಡಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸೂಕ್ತ ಅವಕಾಶ ಸಿಕ್ಕಿಲ್ಲ ಎಂದವರು ಆರೋಪಿಸಿದ್ದರು. ಅದಕ್ಕೂ ಮೊದಲು ಸತತ ಆರು ಬಾರಿ ಬಿಜೆಡಿಯಿಂದ ಅವರು ಸಂಸದರಾಗಿದ್ದರು.
ಅವರು 1998 ರಲ್ಲಿ ಮೊದಲ ಬಾರಿ ಒಡಿಶಾದ ಕಟಕ್ ಕ್ಷೇತ್ರದಿಂದ 12 ನೇ ಲೋಕಸಭೆಗೆ ಆಯ್ಕೆಯಾದರು. ಅದಾದ ನಂತರ 1999, 2004, 2009, 2014 ಮತ್ತು 2019 ರಲ್ಲಿ ಅದೇ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾಗಿದ್ದರು. 2024 ರ ಚುನಾವಣೆಯಲ್ಲಿ ಮಹತಾಬ್ ಅವರು ಮತ್ತೆ ಕಟಕ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಡಿಯ ಸಂತ್ರುಪ್ ಮಿಶ್ರಾ ಅವರನ್ನು 57,077 ಮತಗಳಿಂದ ಸೋಲಿಸಿದರು.
ಈ ಬಾರಿ ಒಡಿಶಾದಲ್ಲಿ ಒಟ್ಟು 21 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾ ದಳವನ್ನು ಧೂಳೀಪಟ ಮಾಡಿದೆ.
ಭರ್ತೃಹರಿ ಮಹತಾಬ್ ಅವರು 2017 ರಲ್ಲಿ ʼಅತ್ಯುತ್ತಮ ಸಂಸದʼ ಪ್ರಶಸ್ತಿಯನ್ನು ಪಡೆದಿದ್ದರು. ಚರ್ಚೆಗಳಲ್ಲಿನ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರಿಗೆ 2017, 2018, 2019 ಮತ್ತು 2020 ರ ʼಸಂಸದ್ ರತ್ನʼ ಪ್ರಶಸ್ತಿಯನ್ನೂ ನೀಡಲಾಗಿದೆ.
ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಿಂದ ಆರಂಭವಾಗಲಿದೆ. ಈ ವೇಳೆ ಲೋಕಸಭೆಯ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಲೋಕಸಭೆಯ ನೂತನ ಸ್ಪೀಕರ್ ಆಯ್ಕೆ ಜೂನ್ 26ರಂದು ನಡೆಯಲಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂನ್ 27 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಮುಂದಿನ ಐದು ವರ್ಷಗಳ ಹೊಸ ಸರ್ಕಾರದ ಕೆಲಸದ ರೂಪುರೇಷೆಗಳನ್ನು ಮಂಡಿಸಲಿದ್ದಾರೆ.