ಅಕ್ರಮದ ಆರೋಪ ಎದುರಿಸುತ್ತಿದ್ದ ಡಿಎಲ್‌ಎಫ್‌ ನಿಂದ ಬಿಜೆಪಿಗೆ ಕೋಟ್ಯಂತರ ರೂಪಾಯಿ !

Update: 2024-04-18 05:38 GMT
Editor : Ismail | Byline : ಆರ್. ಜೀವಿ

ಒಬ್ಬನನ್ನು ಮಹಾ ಭ್ರಷ್ಟ ಅಂತ ಆರೋಪಿಸೋದು, ಎರಡು ದಿನ ಬಿಟ್ಟು ನೋಡಿದ್ರೆ ಅವನ ಜೊತೆಗೇ ಸರಕಾರ ರಚಿಸೋದು ಅವರು ಭ್ರಷ್ಟಾಚಾರಿಗಳು ಅಂತ ಭಾಷಣ ಮಾಡೋದು ಅಧಿಕಾರಕ್ಕೆ ಬಂದ್ರೆ ಅದೇ ಭ್ರಷ್ಟಾಚಾರವನ್ನು ತಾವೇ ಮುಚ್ಚಿ ಹಾಕೋದು ಹೀಗೆ ತಾವು ಹೇಳೋದಕ್ಕೂ, ನಿಜವಾಗಿ ಮಾಡೋದಕ್ಕೂ ಸಂಬಂಧವೇ ಇರದ ಪಕ್ಷ ಹಾಗು ನಾಯಕರು ಯಾರು ಗೊತ್ತಾ ?

ಸರಿಯಾಗಿ ಊಹಿಸಿದ್ರಿ. ಅದು ಬಿಜೆಪಿ ಹಾಗು ಪ್ರಧಾನಿ ಮೋದಿ.

ವಾದ್ರಾ ಹಗರಣ, ವಾದ್ರಾ ಭ್ರಷ್ಟಾಚಾರ, ಸೋನಿಯಾ ಗಾಂಧಿ ಕುಟುಂಬದ ಹಗರಣ ಎಂದು 2014ರ ಚುನಾವಣೆಯುದ್ದಕ್ಕೂ ಭಾಷಣ ಮಾಡಿಕೊಂಡು ಹೋದ ಮೋದಿ ಹಾಗು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನು ?

ಅದೇ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾನ ಅಕ್ರಮವನ್ನು ಸ್ವತಃ ಬಿಜೆಪಿ ಸರಕಾರವೇ ಮುಚ್ಚಿ ಹಾಕಿದೆ.

ಅದಕ್ಕಾಗಿ ಅದು ಸಾಕಷ್ಟು ದೊಡ್ಡ ಮೊತ್ತದ ಶುಲ್ಕವನ್ನೂ ಪಡೆದುಕೊಂಡಿದೆ.

ಬಿಜೆಪಿ ಹೇಳಿದ ಹಾಗೆ ವಾದ್ರಾ ದೇಶಕ್ಕೆ ಮೋಸ ಮಾಡಿದ್ದರೆ ಆ ಮೋಸವನ್ನು ಮುಚ್ಚಿ ಹಾಕಿದ ಬಿಜೆಪಿ ಮಾಡಿದ್ದೇನು ?

ಇದು ಮಹಾ ಮೋಸ ಅಲ್ವಾ ?

ಅಸಲೀಯತ್ತು ಏನೆಂದರೆ, ಬಿಜೆಪಿಗೆ 170 ಕೋಟಿ ರೂ. ಸಂದಾಯವಾಗುತ್ತಿದ್ದಂತೆ, ಹರಿಯಾಣದ ಪ್ರಕರಣದಲ್ಲಿ ವಾದ್ರಾಗೂ, ಆತನೊಂದಿಗೆ ವ್ಯವಹಾರ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್‌ಎಫ್‌ಗೂ ಕ್ಲೀನ್ ಚಿಟ್ ಸಿಕ್ಕಿದೆ.

ಈ ಕಂಪನಿ ಬಿಜೆಪಿ ಬಿಟ್ಟರೆ ಇನ್ನಾವುದೇ ರಾಜಕೀಯ ಪಕ್ಷಕ್ಕಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದೇ ಇಲ್ಲ.

ಅಂತೂ ಮೋಸ ಮುಚ್ಚಿಹಾಕಲು ವ್ಯವಹಾರ ಕುದುರಿಸುವುದಕ್ಕಾಗಿ ಚುನಾವಣಾ ಬಾಂಡ್ ಬಳಕೆಯಾಗಿರುವುದು ಸ್ಪಷ್ಟ.

ಮೊದಲು ನಿಯಮ ಉಲ್ಲಂಘನೆ ಆರೋಪ. ಆದರೆ ಯಾವಾಗ ಕೋಟಿಗಟ್ಟಲೆ ಹಣ ಹರಿದು ಬಂತೊ ಆಮೇಲೆ ನಿಯಮ ಉಲ್ಲಂಘನೆ ಆಗಿಯೇ ಇಲ್ಲ ಎಂಬ ಸಮಜಾಯಿಷಿ.

ಹೇಗಿದೆಯಲ್ವಾ ಈ ಜಾದೂ ?

ಸ್ವಲ್ಪ ನೆನಪಿಸಿಕೊಳ್ಳುವುದಾದರೆ,

2018ರ ಸೆಪ್ಟೆಂಬರ್ ನಲ್ಲಿ ಹರಿಯಾಣ ಪೊಲೀಸರು ಉದ್ಯಮಿ ಹಾಗು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಮತ್ತು ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್ ಗ್ರೂಪ್ ಹಾಗೂ ಇತರರ ವಿರುದ್ಧ ಗುರುಗ್ರಾಮ್‌ನಲ್ಲಿನ ಭೂ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮತ್ತು ವಂಚನೆ ಕೇಸ್ ಹಾಕುತ್ತಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ವಾದ್ರಾ ಮಾಡಿಕೊಂಡಿದ್ದ ಭೂ ವ್ಯವಹಾರಗಳ ವಿಚಾರವನ್ನೇ 2014ರ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪ್ರಮುಖವಾಗಿ ಕಾಂಗ್ರೆಸ್ ವಿರುದ್ಧ ಬಳಸಿಕೊಳ್ಳುತ್ತದೆ. ಗೆದ್ದೂ ಬಿಡುತ್ತದೆ.

ಮೋದಿ ಪ್ರಧಾನಿಯಾದ ಕೂಡಲೇ ರಾಬರ್ಟ್ ವಾದ್ರಾ ಮಾಡಿರುವ ಭ್ರಷ್ಟಾಚಾರ ಪ್ರಕರಣದ ಸಮಗ್ರ ತನಿಖೆ ನಡೆದು ಅವರು ಜೈಲಿಗೆ ಹೋಗಬೇಕಿತ್ತು.

ಆದರೆ ಆಮೇಲೆ ಸದ್ದಿಲ್ಲದೆ ಆದದ್ದೇ ಬೇರೆ.

ಇಡೀ ಕೇಸ್ ಅಚ್ಚರಿಯ ತಿರುವು ಪಡೆದುಕೊಂಡುಬಿಡುತ್ತದೆ.

ಭೂ ವ್ಯವಹಾರಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು 2023ರ ಏಪ್ರಿಲ್ನಲ್ಲಿ ಹರ್ಯಾಣ ಬಿಜೆಪಿ ಸರ್ಕಾರ ಹೈಕೋರ್ಟ್‌ ಮುಂದೆ ಹೇಳುತ್ತದೆ.

ಅದನ್ನು ಉಲ್ಲೇಖಿಸಿ ವಾದ್ರಾ ತಾನು ದೋಷಮುಕ್ತ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಾಗ, ಅದು ಎಲ್ಲರಿಗೂ ಕ್ಲೀನ್ ಚಿಟ್ ಮಾತ್ರ ಎಂದು ಸರ್ಕಾರ ಸಮಜಾಯಿಸಿ ಕೊಡುತ್ತದೆ.

ಈಗ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ ವಿವರ ಅಸಲೀ ಕಥೆಯನ್ನು ಬಿಚ್ಚಿಟ್ಟಿದೆ.

2019ರ ಅಕ್ಟೋಬರ್ನಿಂದ 2022ರ ನವೆಂಬರ್ವರೆಗೆ ಡಿಎಲ್ಎಫ್ ಕಂಪನಿ ಬಿಜೆಪಿಗೆ 170 ಕೋಟಿ ರೂ.ಗಳನ್ನು ದೇಣಿಗೆ ನೀಡಿರುವ ವಿಚಾರ ಬಯಲಾಗಿದೆ.

ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್, ಡಿಎಲ್ಎಫ್ ಗಾರ್ಡನ್ ಸಿಟಿ ಇಂದೋರ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿಎಲ್ಎಫ್ ಲಕ್ಸುರಿ ಹೋಮ್ಸ್ ಲಿಮಿಟೆಡ್ ಎಂಬ ಮೂರು ಕಂಪೆನಿಗಳ ಹೆಸರಿನಲ್ಲಿ ಬಾಂಡ್ ಖರೀದಿ ನಡೆದಿದೆ.

ಈ ಎಲ್ಲಾ ಬಾಂಡ್‌ಗಳ ಏಕೈಕ ಫಲಾನುಭವಿ ಬಿಜೆಪಿ. ಆ ಪಕ್ಷ ಬಿಟ್ಟರೆ ಇನ್ನಾವುದೇ ರಾಜಕೀಯ ಪಕ್ಷಕ್ಕೆ ಡಿಎಲ್ಎಫ್ ಗ್ರೂಪ್ ದೇಣಿಗೆ ನೀಡಿದ್ದೇ ಇಲ್ಲ.

ಡಿಎಲ್ಎಫ್ ಖರೀದಿಸಿರುವ ಬಾಂಡ್ಗಳ ವಿವರ:

2022ರ ಜನವರಿ 10ರಂದು ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಹೆಸರಿನಲ್ಲಿ 50 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2022ರ ಜನವರಿ 17.

2022ರ ಏಪ್ರಿಲ್ 7ರಂದು ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಹೆಸರಿನಲ್ಲಿ 40 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2022ರ ಏಪ್ರಿಲ್ 18.

2019ರ ಅಕ್ಟೋಬರ್ 9ರಂದು ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಮತ್ತು ಡಿಎಲ್ಎಫ್ ಲಕ್ಸುರಿ ಹೋಮ್ಸ್ ಹೆಸರಿನಲ್ಲಿ 25 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2019ರ ಅಕ್ಟೋಬರ್ 11.

2022ರ ನವೆಂಬರ್ 15ರಂದು ಡಿಎಲ್ಎಫ್ ಗಾರ್ಡನ್ ಸಿಟಿ ಇಂದೋರ್ ಮತ್ತು ಡಿಎಲ್ಎಫ್ ಲಕ್ಸುರಿ ಹೋಮ್ಸ್ ಹೆಸರಿನಲ್ಲಿ 25 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2022ರ ನವೆಂಬರ್ 16.

2020ರ ಜನವರಿ 15ರಂದು ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಹೆಸರಿನಲ್ಲಿ 15 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2020ರ ಜನವರಿ 21.

2021ರ ಏಪ್ರಿಲ್ 7ರಂದು ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಮತ್ತು ಡಿಎಲ್ಎಫ್ ಲಕ್ಸುರಿ ಹೋಮ್ಸ್ ಹೆಸರಿನಲ್ಲಿ 15 ಕೋಟಿಯ ಬಾಂಡ್ ಖರೀದಿ.

ಅದು ನಗದೀಕರಣಗೊಂಡ ದಿನಾಂಕ 2021ರ ಏಪ್ರಿಲ್ 12.

ಈ ಡಿಎಲ್ಎಫ್ ಗ್ರೂಪ್ 1946ರಲ್ಲಿ ಚೌಧರಿ ರಾಘವೇಂದ್ರ ಸಿಂಗ್ ಎಂಬವರಿಂದ ಸ್ಥಾಪಿತವಾದದ್ದು. ಆರಂಭದಿಂದಲೂ ಅದು ತೊಡಗಿಸಿಕೊಂಡದ್ದು ರಿಯಲ್ ಎಸ್ಟೇಟ್ ವಲಯದಲ್ಲಿ.

ವಿಶೇಷವಾಗಿ ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಅದರ ವ್ಯವಹಾರಗಳಿವೆ. 2022-23ರ ಹಣಕಾಸು ವರ್ಷದಲ್ಲಿ ಅದರ ವಹಿವಾಟು 6,012 ಕೋಟಿ ರೂ.ಗಳಾಗಿದ್ದು, ನಿವ್ವಳ ಲಾಭ 2,051 ಕೋಟಿ ರೂ. ದಾಖಲಾಗಿತ್ತು.

ಈ ಗ್ರೂಪ್ ವಾದ್ರಾ ಒಡೆತನದ ಕಂಪನಿಯಿಂದ ಭೂಮಿ ಖರೀದಿಸಿದ್ದನ್ನು ಹರಿಯಾಣ ಸರ್ಕಾರ ರದ್ದುಗೊಳಿಸಿದ ನಂತರ 2012ರಲ್ಲಿ ಸುದ್ದಿಯಾಯಿತು.

2008ರಲ್ಲಿ, ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆ ಗುರುಗ್ರಾಮ್‌ನಲ್ಲಿ 3.5 ಎಕರೆ ಭೂಮಿಯನ್ನು 7.5 ಕೋಟಿ ರೂ.ಗೆ ಖರೀದಿಸಿತ್ತು.

ತಿಂಗಳ ನಂತರ ಅದನ್ನು 7 ಪಟ್ಟು ಹೆಚ್ಚು ಮೊತ್ತಕ್ಕೆ ಅಂದರೆ 58 ಕೋಟಿಗೆ ಡಿಎಲ್ಎಫ್ ಖರೀದಿಸಿತು. ಹಲವು ಕಂತುಗಳಲ್ಲಿ ಹಣ ಪಾವತಿಸಿತ್ತು.

2012ರಲ್ಲಿ ಅಶೋಕ್ ಖೇಮ್ಕಾ ಎನ್ನುವ ಐಎಎಸ್ ಅಧಿಕಾರಿ ಈ ಲ್ಯಾಂಡ್ ಡೀಲ್ನಲ್ಲಿ ದೋಷ ಇರುವುದನ್ನು ಗಮನಿಸಿ ಡಿಎಲ್ಎಫ್ ಗೆ ಮಾಡಲಾಗಿದ್ದ ಮಾಲಿಕತ್ವ ವರ್ಗಾವಣೆ ರದ್ದುಗೊಳಿಸಿದರು.

ಇದರಿಂದಾಗಿ ಆ ಅಧಿಕಾರಿ ಆಗಿನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಆದೇಶದ ಮೇರೆಗೆ ವರ್ಗಾವಣೆಯಾಗುವಂತಾಯಿತು.

ಇದೆಲ್ಲ ವಿಚಾರವನ್ನು 2014ರಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಅಸ್ತ್ರವಾಗಿ ಬಳಸಿಕೊಂಡಿತು.

ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ 2018ರ ಸೆಪ್ಟೆಂಬರ್ 1ರಂದು ಪೊಲೀಸರು ವಾದ್ರಾ, ಹೂಡಾ, ಡಿಎಲ್‌ಎಫ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ವಂಚನೆ, ಫೋರ್ಜರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿದರು.

2019ರ ಜನವರಿಯಲ್ಲಿ ಭೂ ಹಂಚಿಕೆಯ ಮತ್ತೊಂದು ಪ್ರಕರಣದಲ್ಲಿನ ಅಕ್ರಮಗಳ ಆರೋಪದ ಮೇಲೆ ಡಿಎಲ್ಎಫ್ ಕಚೇರಿಗಳ ಮೇಲೆ ಸಿಬಿಐ ರೇಡ್ ನಡೆಯಿತು.

2019ರ ಅಕ್ಟೋಬರ್ನಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಡಿಎಲ್ಎಫ್ ಬಿಜೆಪಿಗೆ ತನ್ನ ಮೊದಲ ದೇಣಿಗೆಯನ್ನು ನೀಡಿತ್ತೆಂಬುದು ಮೊನ್ನೆ ಬಿಡುಗಡೆಯಾಗಿರುವ ಚುನಾವಣಾ ಬಾಂಡ್ ವಿವರಗಳಿಂದ ಗೊತ್ತಾಗುತ್ತಿದೆ.

ಅದಾದ ಬಳಿಕ 2020, 2021 ಮತ್ತು 2022ರವರೆಗೂ ಅದು ಬಿಜೆಪಿಗೆ ಹಣವನ್ನು ನೀಡುತ್ತಲೇ ಇತ್ತು. 2022ರ ನವೆಂಬರ್ನಲ್ಲಿ ಕಡೆಯದಾಗಿ ಅದು ಬಾಂಡ್‌ಗಳನ್ನು ಖರೀದಿಸಿತ್ತು.

ಐದು ತಿಂಗಳ ನಂತರ, 2023ರ ಏಪ್ರಿಲ್ 19ರಂದು ವಿಚಾರಣೆ ವೇಳೆ ಹರ್ಯಾಣ ಸರ್ಕಾರ, ವಾದ್ರಾ ಮತ್ತು ಡಿಎಲ್ಎಫ್ ನಡುವಿನ ಲ್ಯಾಂಡ್ ಡೀಲ್ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಎದುರು ಹೇಳಿತು.

ಆಗ, ತಾನು ದೋಷಮುಕ್ತ ಎಂದು ವಾದ್ರಾ ಹೇಳಿಕೊಂಡಾಗ, ಅದು ಕ್ಲೀನ್ ಚಿಟ್ ಅಲ್ಲ ಎಂದು ಹೇಳಿದ ಸರ್ಕಾರ, ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ ಎಂದಿತ್ತು.

ತನಿಖೆಯನ್ನು ಕಳೆದ 5 ವರ್ಷಗಳಿಂದ ಎಳೆದುಕೊಂಡು ಬರಲಾಗುತ್ತಿರುವುದಕ್ಕೆ 2023ರ ನವೆಂಬರ್ನಲ್ಲಿ ಆಕ್ಷೇಪ ಎತ್ತಿದ್ದ ಹೈಕೋರ್ಟ್, ಆದಷ್ಟು ಬೇಗ ಮುಗಿಸಲು ಸೂಚಿಸಿತ್ತು.

ಅದೇ ತಿಂಗಳು, ಮತ್ತೊಂದು ಕಂಪನಿ ವಿರುದ್ಧದ ಮನಿ ಲಾಂಡರಿಂಗ್ ತನಿಖೆ ನೆಪದಲ್ಲಿ ಗುರುಗ್ರಾಮ್‌ನಲ್ಲಿನ ಡಿಎಲ್‌ಎಫ್ ಕಚೇರಿಗಳ ಮೇಲೆ ಈಡಿ ರೇಡ್ ನಡೆಯಿತು.

2023 ಮತ್ತು 2024ರಲ್ಲಿ ಡಿಎಲ್ಎಫ್ ಯಾವುದೇ ಚುನಾವಣಾ ಬಾಂಡ್ ಖರೀದಿಸಿಲ್ಲ ಎಂಬುದು ಅಸಲೀ ವಿಚಾರ.

ಬಿಜೆಪಿ ಬಣ್ಣ ಎಂಥದ್ದು ಎಂದು ತಿಳಿಯಲು ಇದಕ್ಕಿಂತ ಇನ್ನೇನು ಬೇಕು?


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!