ಬ್ರಿಟಿಷ್ ಆಳ್ವಿಕೆಯಲ್ಲಿ ಜಾತಿ ಸುಧಾರಣೆಗಳು ಮತ್ತು ಮೀಸಲಾತಿ

Update: 2024-06-02 05:35 GMT

ಸಂವಿಧಾನದ ಆಧಾರದ ಮೇಲೆ ಅಸ್ಪಶ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಮತ್ತು ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಅಸ್ಪಶ್ಯರ ಹಿತರಕ್ಷಣೆಗೆ ರಾಷ್ಟ್ರೀಯ ನಾಯಕತ್ವದ ಮೇಲೆ ಒತ್ತಡ ಹೇರುವ ಗುರಿಯೊಂದಿಗೆ ಪೂನಾ ಒಪ್ಪಂದವು ರಾಜಕೀಯ ಗುಂಪಾಗಿ ಶೋಷಿತ ವರ್ಗವನ್ನು ಸ್ಥಾಪಿಸಲು ಕಾರಣವಾಯಿತು. ಆದಾಗ್ಯೂ ಶೋಷಿತ ವರ್ಗಗಳ ಪ್ರತಿನಿಧಿಗಳು ಇನ್ನು ಮುಂದೆ ಅಸ್ಪಶ್ಯ ಮತದಾರರಿಗೆ ಜವಾಬ್ದಾರರಾಗಿರುವುದಿಲ್ಲ ಎಂದು ಭಾವಿಸಿದ ಅಂಬೇಡ್ಕರ್ ಅವರು ಒಪ್ಪಂದದಿಂದ ನಿರಾಶೆಗೊಂಡರು.

ಭಾರತವು ಹಿಂದೂ ಸಮಾಜದ ಕೆಲವು ವರ್ಗಗಳ ವಿರುದ್ಧ ಅದರಲ್ಲೂ ಅಸ್ಪಶ್ಯರ ವಿರುದ್ಧ ಅಗಾಧ ತಾರತಮ್ಯದ ದೀರ್ಘ ಇತಿಹಾಸವನ್ನು ಹೊಂದಿದೆ. ಮೂಲವನ್ನು ಹಿಂದೂ ಸಮಾಜದಲ್ಲಿ ಪ್ರಚಲಿತದಲ್ಲಿರುವ ಜಾತಿ ಶ್ರೇಣಿಯನ್ನು ಆಧರಿಸಿದ ಅಸ್ಪಶ್ಯತೆ ಆಚರಣೆಯ ವಿರುದ್ಧ ಕಾಣಬಹುದು.

ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಸಮಾಜವನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ, ಅಂದರೆ ‘ಸವರ್ಣ’ ಅಥವಾ ‘ಚಾತುರ್ವರ್ಣ’ ಮತ್ತು ‘ಅವರ್ಣರು’ ಅಥವಾ ಅಸ್ಪಶ್ಯರು ಎಂದಿದ್ದಾರೆ. ಅಸ್ಪಶ್ಯರು ಅವರ್ಣರ ಒಂದು ಭಾಗವೆಂದು ಪರಿಗಣಿಸಲಾಗಿದೆ, ಅಂದರೆ ಅವರು ನಾಲ್ಕು ವರ್ಣಗಳನ್ನು ಮೀರಿ ಐದನೇ ಗುಂಪಾದರೂ ಮತ್ತು ಕ್ರಮಾನುಗತ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಕೀಳುತರವಾಗಿದ್ದರು. ಹೆಚ್ಚಿನ ವಿದ್ವಾಂಸರು ವೇದ ಕಾಲದಲ್ಲಿ ಅಸ್ಪಶ್ಯತೆ ಇರಲಿಲ್ಲ. ಅದು ನಂತರದಲ್ಲಿ ಹೊರಹೊಮ್ಮಿದೆ ಎನ್ನುತ್ತಾರೆ.

ಅವರು ಶಿಕ್ಷಣ, ಭೂಮಿ ಮಾಲಕತ್ವ, ಮಾರುಕಟ್ಟೆಯಲ್ಲಿ ವಹಿವಾಟು ಮುಂತಾದ ಮೂಲಭೂತ ಹಕ್ಕುಗಳಿಂದ ವಂಚಿತರಾದರು. ಪರಿಣಾಮವಾಗಿ ಅಸ್ಪಶ್ಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದು ತುಳಿತಕ್ಕೊಳಗಾದರು. ಅವರು ಕಡುಬಡತನ, ರೋಗ ಮತ್ತು ಅಜ್ಞಾನದಲ್ಲಿ ಬದುಕ ಬೇಕಾದ ಸ್ಥಿತಿಗೆ ಒಳಗಾದರು. ತಾರತಮ್ಯ, ಮೇಲ್ಜಾತಿಗಳ ಶೋಷಣೆಯ ಪ್ರತಿಕೂಲ ಮತ್ತು ದಮನಕಾರಿ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಬದಲಾವಣೆಗಳು ಹರಿದಾಡಲು ಪ್ರಾರಂಭವಾಗುವವರೆಗೂ ಅಸ್ಪಶ್ಯತೆ ಹಿಂದೂ ಸಮಾಜದ ಒಂದು ಭಾಗವಾಗಿಯೇ ಮುಂದುವರಿಯಿತು. ಅಸ್ಪಶ್ಯತೆಯ ಆಚರಣೆ ಮತ್ತು ವರ್ಣ ಅಥವಾ ಜಾತಿ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಬಿರುಸಿನ ವರ್ತನೆಯ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸಿತು.

ಅಸ್ಪಶ್ಯತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆ:

ಭಾರತೀಯ ಸಮಾಜದ ಮೇಲೆ ಬ್ರಿಟಿಷರ ಪ್ರಭಾವವು ಹೊಸ ಚಿಂತನೆಯ ಮಾರ್ಗವನ್ನು ಪ್ರೇರೇಪಿಸಿತು ಮತ್ತು ವಿವಿಧ ಸಾಮಾಜಿಕ ಆಚರಣೆಗಳನ್ನು ಪ್ರಶ್ನಿಸುವ ಬೌದ್ಧಿಕ ವರ್ಗದ ಹೊರಹೊಮ್ಮುವಿಕೆಗೆ ಕಾರಣವಾಯಿತು. ಪಾಶ್ಚಿಮಾತ್ಯ ಶಿಕ್ಷಣವು ಅಸ್ಪಶ್ಯತೆಯ ಆಚರಣೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಪ್ರತಿಪಾದಿಸಲಾಗಿದೆ. ಭಾರತೀಯ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಇಂಗ್ಲಿಷ್ ಭಾಷೆಯ ಪರಿಚಯವು ಹೊಸ ವಿದ್ಯಾವಂತ ವರ್ಗದ ಹೊರಹೊಮ್ಮುವಿಕೆಗೆ ಕಾರಣವಾಗಿದೆ. ಪಾಶ್ಚಿಮಾತ್ಯ ಶಿಕ್ಷಣವು ಸಮಾನತೆ, ಸ್ವಾತಂತ್ರ್ಯ ಮತ್ತು ಸಮತಾ ವಾದದ ಪರಿಕಲ್ಪನೆಗಳಿಗೆ ಬಾಗಿಲು ತೆರೆಯಿತು. ಇದು ಶುದ್ಧತೆ ಮತ್ತು ಮಾಲಿನ್ಯದ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಅಸ್ಪಶ್ಯತೆಯ ಅಭ್ಯಾಸವನ್ನು ಪ್ರಶ್ನಿಸಲು ಸಮಾಜದ ಒಂದು ವರ್ಗಕ್ಕೆ ದುಗುಡವನ್ನುಂಟುಮಾಡಿತು.

ರಾಜಾರಾಮ್ ಮೋಹನ್ ರಾಯ್, ಸ್ವಾಮಿ ದಯಾನಂದ ಸರಸ್ವತಿ ಮುಂತಾದ ಸುಧಾರಕರು ಹಿಂದೂ ವ್ಯವಸ್ಥೆಯಲ್ಲಿರುವ ತಾರತಮ್ಯ ಪದ್ಧತಿಯನ್ನು ವಿರೋಧಿಸಿದರು. ಅಸ್ಪಶ್ಯರು ಮತ್ತು ಕೆಳಜಾತಿಗಳಿಗೆ ಸಹಾಯ ಮಾಡಲು ಗಂಭೀರ ಪ್ರಯತ್ನಗಳನ್ನು ಪುಣೆಯ ಸುಧಾರಕ ಜ್ಯೋತಿಬಾ ಫುಲೆ ಅವರು ಕೈಗೊಂಡರು. ಅವರು ಶಿಕ್ಷಣ ಮತ್ತು ಸ್ವಯಂ-ಸಹಾಯದ ಕಾರ್ಯಕ್ರಮವನ್ನು ಸಂಯೋಜಿಸಿದರು. ಅಸ್ಪಶ್ಯರನ್ನು ‘ದಲಿತರು’ ಎಂದು ಬಳಸಿದ ಮೊದಲ ವ್ಯಕ್ತಿ ಅವರು.

ಆರಂಭದಲ್ಲಿ ಸಾಮಾಜಿಕ ಸಂಸ್ಥೆಗಳಿಗೆ ಸೀಮಿತವಾಗಿದ್ದ ಜಾತಿ ಮತ್ತು ಅಸ್ಪಶ್ಯತೆ 19ನೇ ಶತಮಾನದ ಅವಧಿಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿತು. ಕ್ರಮೇಣ ಅಸ್ಪಶ್ಯತೆಯು ಸಾಮಾಜಿಕವಾಗಿ ಮಾತ್ರವಲ್ಲದೆ ರಾಜಕೀಯ ಮಟ್ಟದಲ್ಲಿಯೂ ಪರಿಹರಿಸಬೇಕಾದ ಸಮಸ್ಯೆಯಾಗಿ ಮುಂದುವರಿಯಿತು. ಬ್ರಿಟಿಷರು ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವಲ್ಲದೆ ರಾಜಕೀಯ ಮತ್ತು ಕಾನೂನು ಸಂಬಂಧಿತ ಸಂಸ್ಥೆಗಳಲ್ಲಿಯೂ ಆಮೂಲಾಗ್ರ ಬದಲಾವಣೆಗಳನ್ನು ತಂದರು.

ಸ್ಪಷ್ಟವಾಗಿ ಕಾನೂನಿಗೆ ಸಂಬಂಧಿಸಿದ ಸಂಸ್ಥೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ದೌರ್ಬಲ್ಯಗಳ ಮಾದರಿಗಳನ್ನು ನಿಗ್ರಹಿಸಿದವು. ಔಪಚಾರಿಕವಾಗಿ ಕೆಳಜಾತಿಗಳು ಮತ್ತು ಅಸ್ಪಶ್ಯರಿಗೆ ಅವು ಕಾರ್ಯವಿಧಾನದ ಸಮಾನತೆಯನ್ನು ಒದಗಿಸುತ್ತವೆ. ಜಾತಿ ದೌರ್ಬಲ್ಯಗಳ ಕಾಯ್ದೆ, 1850, ವಿಶೇಷ ವಿವಾಹ ಕಾಯ್ದೆ, 1872 ಇತ್ಯಾದಿ ಶಾಸನಗಳನ್ನು ಜಾರಿಗೊಳಿಸಿದ್ದು ಹಿಂದೂ ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಇತರ ತಾರತಮ್ಯದ ಆಚರಣೆಗಳಿಗೆ ಹೊಡೆತ ಕೊಟ್ಟವು.

ಆಡಳಿತ ಮತ್ತು ಉದ್ಯೋಗದಲ್ಲಿ ಸಮಾನತೆಯನ್ನು ಪರಿಚಯಿಸುವ ಮೂಲಕ ಬ್ರಿಟಿಷ್ ಆಳ್ವಿಕೆಯು ಜಾತಿ ವ್ಯವಸ್ಥೆಯ ಅಶುಭ ಸೂಚಕ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ. ಆದರೆ ಅದು ಹಿಂದೂ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರಿಂದ ಯಾವುದೇ ನೈಜ ವ್ಯತ್ಯಾಸವನ್ನು ಕಾಣಲಾಗಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಭಾಗವಹಿಸುವಿಕೆಯಲ್ಲಿ, ಭಾರತೀಯರ ಒಳಗೊಳ್ಳುವಿಕೆ ‘ಭಾರತೀಯ ಮಂಡಳಿಗಳ ಕಾಯ್ದೆ, 1909’ರಿಂದ ಪ್ರಾರಂಭವಾಯಿತು. ಇದನ್ನು ಆಗಾಗ ಮಾರ್ಲೆ-ಮಿಂಟೋ ಸುಧಾರಣೆಗಳು ಎಂದು ಕರೆಯಲಾಗುತ್ತದೆ. 1909ರ ಕಾಯ್ದೆಯು ಮುಸ್ಲಿಮರು, ಹಿಡುವಳಿದಾರರು, ವಾಣಿಜ್ಯ ಸಂಘಗಳು ಇತ್ಯಾದಿ ಭಾರತೀಯರ ಸಣ್ಣ ವಿಭಾಗಗಳನ್ನು ಮಾತ್ರ ಗುಂಪು- ಆಧಾರಿತ ಪ್ರಾತಿನಿಧ್ಯದ ರೂಪದಲ್ಲಿ ರಾಜಕೀಯ ರಕ್ಷಣೆ ಒದಗಿಸಿದೆ. ಈ ಕಾಯ್ದೆಯು ಮುಸ್ಲಿಮರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನೀಡುವ ಮೂಲಕ ಅವರಿಗೆ ಒಲವು ತೋರಿತು. ಇದರ ಹಿಂದಿನ ಉದ್ದೇಶ ಮುಖ್ಯವಾಗಿ ಬ್ರಿಟಿಷರ ಆಳ್ವಿಕೆಯ ಹಿತಾಸಕ್ತಿಯನ್ನು ಭದ್ರಪಡಿಸುವುದಾಗಿತ್ತು.

ಆದರೆ ಮಾರ್ಲೆ-ಮಿಂಟೋ ಸುಧಾರಣೆಗಳ ಸಮಯದಲ್ಲಿ ಅಸ್ಪಶ್ಯರಿಗೆ ಪ್ರಾತಿನಿಧ್ಯ ಮತ್ತು ರಾಜಕೀಯ ರಕ್ಷಣೆಗಳನ್ನು ನೀಡಲಾಗಲಿಲ್ಲ. ಏಕೆಂದರೆ ಅವರು ಅಲ್ಲಿಯವರೆಗೆ ರಾಜಕೀಯವಾಗಿ ಸಂಘಟಿತರಾಗಿರಲಿಲ್ಲ. ಆದರೆ ಆ ಅವಧಿಯಲ್ಲಿ ಬಾಬಾ ಸಾಹೇಬರು ಶೋಷಣೆಗೆ ಒಳಗಾದ ವರ್ಗಗಳ ಪ್ರತಿನಿಧಿಯಾಗಿ ಮತ್ತು ನಾಯಕರಾಗಿ ಹೊರಹೊಮ್ಮಿದ್ದರಿಂದ ಅದು ಬದಲಾಯಿತು. ಅಂಬೇಡ್ಕರ್ ಅವರನ್ನು 1919ರಲ್ಲಿ ಸೌತ್ ಬರೋ ಫ್ರಾಂಚೈಸ್ ಸಮಿತಿಯ ಮುಂದೆ, ಮ್ಯಾಂಟಾಗು-ಚೆಲ್ಮಸ್ ಫೋರ್ಡ್ ಅವರ ಶಿಫಾರಸಿನಂತೆ ಶೋಷಿತ ವರ್ಗಗಳ ಪ್ರಾತಿನಿಧ್ಯವನ್ನು ಪರಿಶೀಲಿಸಲು ನೇಮಕ ಮಾಡಲಾಯಿತು. ಪರಿಣಾಮ ವೆಂಬಂತೆ ಭಾರತೀಯ ಕೌನ್ಸಿಲ್ಗಳ ಕಾಯ್ದೆ,1919 ಶೋಷಣೆಗೆ ಒಳಗಾದ ವರ್ಗಗಳಿಗೆ ಪ್ರಾತಿನಿಧ್ಯವನ್ನು ಒದಗಿಸಿತು. ಇದು ರಾಜಕೀಯ ಸಭೆಗಳಲ್ಲಿ ಅಸ್ಪಶ್ಯ ವಕ್ತಾರರ ಸೇರ್ಪಡೆಯನ್ನು ಸ್ಪಷ್ಟವಾಗಿ ಗುರುತಿಸಿತು.

ಶೋಷಿತ ವರ್ಗಗಳ ಸುಧಾರಣೆಗೆ ಶಿಫಾರಸುಗಳನ್ನು ನೀಡಲು ಸೈಮನ್ ಆಯೋಗವು 1928ರಲ್ಲಿ ಅಂಬೇಡ್ಕರ್ ಅವರನ್ನು ಆಹ್ವಾನಿಸಿತು. ಅವರು ಸೈಮನ್ ಆಯೋಗದ ಮುಂದೆ ಶೋಷಿತ ವರ್ಗಗಳ ಕುಂದು ಕೊರತೆಗಳನ್ನು ಪ್ರಬಲವಾಗಿ ಎತ್ತಿ ಹಿಡಿದರು. ಅಷ್ಟೇ ಅಲ್ಲ, ಅವರ ಸ್ಥಾನವನ್ನು ಸುಧಾರಿಸಲು ಕೆಲವು ಮಾರ್ಗಗಳನ್ನೂ ಸೂಚಿಸಿದರು. ಆಯೋಗವೇನೋ ಕೋಮು ಆಧಾರಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮತ್ತು ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತದಾರರನ್ನಾಗಿ ಮಾಡುವ ದಿಸೆಯಲ್ಲಿ ನೀತಿಯನ್ನು ವಿಸ್ತರಿಸಲು ಶಿಫಾರಸು ಮಾಡಿತು. ಆದರೂ, ಆಯೋಗವು ಇದನ್ನು ಸಾಮಾನ್ಯ ನಾಗರಿಕ ಪ್ರಜ್ಞೆಯ ಬೆಳವಣಿಗೆಗೆ ಅಡ್ಡಿ ಎಂದು ಪರಿಗಣಿಸಿದೆ.

ಸೈಮನ್ ಆಯೋಗದ ವರದಿಯಲ್ಲಿ ಒಳಗೊಂಡಿರುವ ಅಂಶಗಳನ್ನು ಪ್ರಮುಖರು ಒಪ್ಪಲಿಲ್ಲ. ಒಪ್ಪುವ ಪರಿಹಾರವನ್ನು ತಲುಪಲು ಲಂಡನ್ನಲ್ಲಿ ಬ್ರಿಟಿಷ್ ಸರಕಾರವು ಮೂರು ದುಂಡು ಮೇಜಿನ ಸಮ್ಮೇಳನಗಳನ್ನು ನಡೆಸಲು ಕಾರಣವಾಯಿತು. ನಾಗರಿಕ ಅಸಹಕಾರ ಅಭಿಯಾನದ ಕಾರಣ ಕಾಂಗ್ರೆಸ್ ಮೊದಲ ಸಮ್ಮೇಳನದಲ್ಲಿ ಭಾಗವಹಿಸಲಿಲ್ಲ . ಅಂಬೇಡ್ಕರ್ ಅವರು ಪ್ರತ್ಯೇಕ ಮತದಾರರು ಮತ್ತು ಸರಕಾರಿ ಸೇವೆಗಳಿಗೆ ನೇಮಕಾತಿ ತಾರತಮ್ಯದ ವಿರುದ್ಧ ಕಾನೂನುಗಳು ಮತ್ತು ಶೋಷಿತ ವರ್ಗಗಳನ್ನು ನೋಡಿಕೊಳ್ಳಲು ವಿಶೇಷ ಇಲಾಖೆಯನ್ನು ಒಳಗೊಂಡಂತೆ ರಕ್ಷಣೆಗೆ ಒತ್ತಾಯಿಸಿದರು.

ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮುಸ್ಲಿಮ್ ಲೀಗ್ ಮತ್ತು ಕಾಂಗ್ರೆಸ್ನ ನಿಲುವುಗಳು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದ್ದವು. ಮುಸ್ಲಿಮ್ ಲೀಗ್ ಪ್ರತ್ಯೇಕ ಚುನಾಯಿತರ ಬೇಡಿಕೆಗೆ ಒತ್ತಾಯಿಸಿತು. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿತು. ಆದರೂ, ಕಾಂಗ್ರೆಸ್ನ ಏಕೈಕ ಪ್ರತಿನಿಧಿಯಾಗಿದ್ದ ಗಾಂಧಿಯವರು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾರರನ್ನು ಇಷ್ಟವಿಲ್ಲದೆ ಒಪ್ಪಿಕೊಂಡರೂ, ಶೋಷಣೆಗೆ ಒಳಗಾದ ವರ್ಗಗಳಿಗೆ ಅನ್ವಯಿಸುವುದನ್ನು ಮಾತ್ರ ತೀವ್ರವಾಗಿ ವಿರೋಧಿಸಿದರು.

ಆಗಸ್ಟ್ 1932ರಲ್ಲಿ ಸಮಿತಿಯು ಒಂದು ತೀರ್ಮಾನಕ್ಕೆ ಬರಲು ವಿಫಲವಾದ ಕಾರಣ, ಆಗಿನ ಪ್ರಧಾನ ಮಂತ್ರಿ ರಾಮ್ಸೆ ಮೆಕ್ಡೊನಾಲ್ಡ್ ಅವರು ಎಲ್ಲಾ ಪಕ್ಷಗಳಿಗೆ ಬದ್ಧವಾಗಿರುವ ‘ಕೋಮು ಐತೀರ್ಪು’ ಎಂದು ಉಲ್ಲೇಖಿಸಲಾದ ಐತೀರ್ಪನ್ನು ನೀಡಲು ಪ್ರತಿನಿಧಿಗಳಿಂದ ಅಧಿಕಾರ ಪಡೆದರು.

ಐತೀರ್ಪು ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾರರನ್ನು ಒದಗಿಸಿತು. ಆದರೆ ಶೋಷಿತ ವರ್ಗಗಳು ಸಾಮಾನ್ಯ ಆದರೆ ವಿಶೇಷ ಮತದಾರರಾಗಿದ್ದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆದರು ಮತ್ತು 71 ಮೀಸಲು ಸ್ಥಾನಗಳನ್ನು ಮತ್ತು ವಿಶೇಷ ಹಕ್ಕನ್ನು ನೀಡಲಾಯಿತು. ವಿಶೇಷ ಮತ್ತು ಸಾಮಾನ್ಯ ಎರಡೂ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಅಂದರೆ ಅವರಿಗೆ ‘ಡಬಲ್ ವೋಟ್’ ಮಾಡುವ ಸೌಲಭ್ಯ ನೀಡಲಾಯಿತು. ಬ್ರಿಟಿಷ್ ಸರಕಾರದ ಈ ನಿರ್ಧಾರವು ಹಿಂದಿನ ನಿರ್ಧಾರಗಳಿಗೆ ಹೋಲುವುದರಿಂದ, ಅದು ಕಾಂಗ್ರೆಸ್ ನ ಬೇಡಿಕೆಗಳನ್ನು ನಿರ್ಲಕ್ಷಿಸಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಿತು.

ಪೂನಾ ಒಪ್ಪಂದ:

ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧಿಯವರು ಕಾಂಗ್ರೆಸನ್ನು ಪ್ರತಿನಿಧಿಸುವಾಗ ಅಂಬೇಡ್ಕರ್ ಅವರ ಪ್ರತ್ಯೇಕ ಮತದಾರರ ಬೇಡಿಕೆಗೆ ಒಲವು ತೋರಲಿಲ್ಲ ಮತ್ತು ಅದನ್ನು ‘ಎಲ್ಲರ ನಿರ್ದಯ ಕಡಿತ’ ಎಂದು ಪರಿಗಣಿಸಿದರು ಮತ್ತು ಅದನ್ನು ತಮ್ಮ ಜೀವವನ್ನು ಪಣಕ್ಕಿಟ್ಟು ವಿರೋಧಿಸುವುದಾಗಿ ಪ್ರತಿಜ್ಞೆ ಮಾಡಿದರು. ಆ ಸಮಯದಲ್ಲಿ ಸೆರೆಮನೆಯಲಿದ್ದ ಗಾಂಧಿಯವರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ವಿರೋಧಿಸಿದರು. ಆದಾಗ್ಯೂ, ಬ್ರಿಟಿಷರು ಸಂಬಂಧಪಟ್ಟ ಪಕ್ಷದ ಅಂದರೆ ಅಂಬೇಡ್ಕರ್ ಅವರ ಒಪ್ಪಿಗೆ ಇಲ್ಲದೆ ಐತೀರ್ಪಿನ ಬಗ್ಗೆ ತಲೆ ಹಾಕಲು ನಿರಾಕರಿಸಿದರು.

ಕಾಂಗ್ರೆಸ್ನ ಇತರ ನಾಯಕರು ಮತ್ತು ಶೋಷಿತ ವರ್ಗಗಳ ಮಧ್ಯ ಪ್ರವೇಶದ ನಂತರ ಅಂಬೇಡ್ಕರ್ ಎರಡೂ ಕಡೆಯವರಿಗೆ ಒಪ್ಪಿಗೆ ಆಗುವಂತಹ ಸಂಧಾನಕ್ಕೆ ಗಾಂಧಿಯವರನ್ನು ವೈಯಕ್ತಿಕವಾಗಿ ಭೇಟಿಯಾದರು. 71 ಪ್ರತ್ಯೇಕವಾಗಿ ಚುನಾಯಿತ ಸದಸ್ಯರ ಬದಲಿಗೆ 148 ಸ್ಥಾನಗಳನ್ನು ಶೋಷಣೆಗೆ ಒಳಗಾದ ವರ್ಗಗಳಿಗೆ ಮೀಸಲಿಡುವ ಜಂಟಿ ಮತದಾರರನ್ನು ಪರಿಚಯಿಸಲು ಒಪ್ಪಿಕೊಂಡರು.

ಸಂವಿಧಾನದ ಆಧಾರದ ಮೇಲೆ ಅಸ್ಪಶ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಮತ್ತು ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಅಸ್ಪಶ್ಯರ ಹಿತರಕ್ಷಣೆಗೆ ರಾಷ್ಟ್ರೀಯ ನಾಯಕತ್ವದ ಮೇಲೆ ಒತ್ತಡ ಹೇರುವ ಗುರಿಯೊಂದಿಗೆ ಪೂನಾ ಒಪ್ಪಂದವು ರಾಜಕೀಯ ಗುಂಪಾಗಿ ಶೋಷಿತ ವರ್ಗವನ್ನು ಸ್ಥಾಪಿಸಲು ಕಾರಣವಾಯಿತು. ಆದಾಗ್ಯೂ ಶೋಷಿತ ವರ್ಗಗಳ ಪ್ರತಿನಿಧಿಗಳು ಇನ್ನು ಮುಂದೆ ಅಸ್ಪಶ್ಯ ಮತದಾರರಿಗೆ ಜವಾಬ್ದಾರರಾಗಿರುವುದಿಲ್ಲ ಎಂದು ಭಾವಿಸಿದ ಅಂಬೇಡ್ಕರ್ ಅವರು ಒಪ್ಪಂದದಿಂದ ನಿರಾಶೆಗೊಂಡರು.

ಪೂನಾ ಒಪ್ಪಂದವು, ಭಾರತ ಸರಕಾರದ ಕಾಯ್ದೆ, 1935ರ ಪ್ರಕಾರ ಶೋಷಿತ ವರ್ಗಗಳ ಪ್ರಾತಿನಿಧ್ಯದ ಅಡಿಪಾಯವನ್ನು ರೂಪಿಸಿತು. 1935ರ ಕಾಯ್ದೆಯು ಕೋಮು ಆಧಾರಿತ ಮೀಸಲಾತಿ ತತ್ವವು 1919ರ ಕಾಯ್ದೆಯಲ್ಲಿನ ಊಹೆಗಿಂತ ಹೆಚ್ಚು ಮುಂದೆ ಹೋಯಿತು.

ಆನಂತರದಲ್ಲಿ, ಭಾರತ ಸರಕಾರ (ಪರಿಶಿಷ್ಟ ಜಾತಿ) ಆದೇಶ 1936ರನ್ವಯ ವಿವಿಧ ಪ್ರಾಂತಗಳಿಗೆ ಅನ್ವಯಿಸುವಂತೆ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಅಧಿಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎನ್. ಲಿಂಗಪ್ಪ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!