ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು ಭಾರೀ ಪ್ರಮಾಣದಲ್ಲಿ ಕಡಿತ ?
ಕರ್ನಾಟಕಕ್ಕೆ ಕೇಂದ್ರದ ಮೋದಿ ಸರ್ಕಾರದಿಂದ ಮತ್ತೊಮ್ಮೆ ಭಾರೀ ಅನ್ಯಾಯವಾಗಿದೆ.15ನೇ ಹಣಕಾಸು ಆಯೋಗದ ನೆಪದಲ್ಲಿ ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು ಭಾರೀ ಪ್ರಮಾಣದಲ್ಲಿ ಕಡಿತಗೊಂಡಿದೆ. ಅನ್ನಭಾಗ್ಯ ಯೋಜನೆಗೆ ಅಗತ್ಯವಾಗಿದ್ದ ಹೆಚ್ಚುವರಿ ಅಕ್ಕಿಯನ್ನು ಖರೀದಿಸುವುದಕ್ಕೂ ಕರ್ನಾಟಕಕ್ಕೆ ಅಡ್ಡಗಾಲು ಹಾಕಿದ್ದ ಮೋದಿ ಸರ್ಕಾರ, ಈಗ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಿದ್ದ ತೆರಿಗೆ ಪಾಲನ್ನೂ ದೋಚಿಕೊಂಡಿದೆ.
ತೆರಿಗೆ ಪಾಲು ಹಂಚುವಲ್ಲೂ ತನ್ನ ರಾಜಕೀಯ ಲಾಭ ನೋಡಿಕೊಂಡಿರುವ ಅದು, ಇತರೆಲ್ಲ ರಾಜ್ಯಗಳಿಗೂ ಲಾಭವಾಗುವಂತೆ ಮಾಡಿ,
ಕರ್ನಾಟಕವನ್ನು ಮಾತ್ರ ಉದ್ದೇಶಪೂರ್ವಕವಾಗಿಯೇ ಸತಾಯಿಸಿದಂತಿದೆ. ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರವಾಗಿ ಮೋದಿ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದ ತೆರಿಗೆ ಪಾಲನ್ನು ಕಡಿತ ಮಾಡಿ, ಗುಜರಾತ್ ಅಭಿವೃದ್ಧಿಗೆ ಕೊಡಲಾಗಿದೆ ಎಂದಿರುವ ಸಿದ್ದರಾಮಯ್ಯ, ಮೋದಿ ದೇಶಕ್ಕೆ ಪ್ರಧಾನಿಯೊ ? ಗುಜರಾತಿಗೆ ಮಾತ್ರ ಪ್ರಧಾನಿಯೊ ಎಂದು ಕೇಳಿದ್ದಾರೆ. ಇದೇನಾ ನಿಮ್ಮ ಗುಜರಾತ್ ಮಾಡೆಲ್?. ಇಂಥ ಹುಸಿ ಮಾಡೆಲ್ನಿಂದ ಕನ್ನಡಿಗರು ಕಲಿಯುವುದೇನಿದೆ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಹೇಗೆ ಘೋರ ಅನ್ಯಾಯವಾಗಿದೆ ಮತ್ತು ಗುಜರಾತಿಗೆ ಭಾರೀ ಏರಿಕೆಯಾಗಿದೆ ಎಂಬುದನ್ನೂ ಅವರು ಎಕ್ಸ್ನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕಕ್ಕೆ ದೊರೆತ ತೆರಿಗೆ ಪಾಲು
2018-19ರಲ್ಲಿ ಶೇ.4.71 – 35,894 ಕೋಟಿ ರೂ.
2023-24ರಲ್ಲಿ ಶೇ.3.64 – 37,252 ಕೋಟಿ ರೂ.
ಇದೇ ವೇಳೆ ಗುಜರಾತ್ ಪಡೆದುಕೊಂಡ ತೆರಿಗೆ ಪಾಲು
2018-19ರಲ್ಲಿ ಶೇ.3.08 – 23,489 ಕೋಟಿ ರೂ.
2023-24ರಲ್ಲಿ ಶೇ.3.40 – 35,525 ಕೋಟಿ ರೂ.
ಅಂದರೆ, ಇದು ಶೇ.51ರಷ್ಟು ಏರಿಕೆ. ತೆರಿಗೆ ಪಾಲಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಏರಿಕೆ ಬೇರಾವ ರಾಜ್ಯಗಳಲ್ಲೂ ಆಗಿಲ್ಲ. ಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ ಕಂಡವರ ಪಾಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಇಷ್ಟೊಂದು ಅನ್ಯಾಯವಾಗುವುದಕ್ಕೆ ಕಾರಣವಾಗಿರುವುದು 15ನೇ ಹಣಕಾಸು ಆಯೋಗದ ಲೆಕ್ಕಾಚಾರ. ತೆರಿಗೆ ಪಾಲು ಲೆಕ್ಕಾಚಾರದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಬೇರೆಬೇರೆಯೇ ವಿಧಾನ ಅನುಸರಿಸಲಾಗಿದೆ.
ಹಾಗಾದರೆ, 15ನೇ ಹಣಕಾಸು ಆಯೋಗದ ನೆಪದಲ್ಲಿ ತನಗೆ ಬೇಕಾದ ರಾಜ್ಯಗಳಿಗೆ ತನಗೆ ತೋಚಿದಂತೆ ತೆರಿಗೆ ಪಾಲು ಹಂಚಲು ಕೇಂದ್ರ ಸರ್ಕಾರ ಒಂದು ಹಿಂಬಾಗಿಲ ವ್ಯವಸ್ಥೆ ಮಾಡಿಕೊಂಡಿತೆ?. ಮತ್ತು ಇಲ್ಲಿ ಕರ್ನಾಟಕವನ್ನೇ ಮುಖ್ಯವಾಗಿ ಗುರಿ ಮಾಡಿಕೊಂಡೇ ರಾಜ್ಯದ ಪಾಲನ್ನು ಕಡಿತ ಮಾಡಿತೆ?.
ಈ ಅನುಮಾನಗಳು ಏಳದೇ ಇರುವುದಿಲ್ಲ. ಯಾಕೆಂದರೆ, 15ನೇ ಹಣಕಾಸು ಆಯೋಗದ ಲೆಕ್ಕಾಚಾರದ ಪ್ರಕಾರವೇ ಹಂಚಿಕೆಯಾಗಿದೆ ಎಂಬುದಕ್ಕೆ ಸ್ಪಷ್ಟತೆಯೇ ಇಲ್ಲದಿರುವುದು, ಎಲ್ಲವೂ ಗೋಜಲು ಗೋಜಲೆನ್ನಿಸುವುದು ಹಣಕಾಸು ಆಯೋಗದ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ರಾಜಕೀಯ ಲೆಕ್ಕಾಚಾರವೊಂದರ ಸುಳಿವನ್ನು ಕಾಣಿಸುತ್ತಿದೆ.
15ನೇ ಹಣಕಾಸು ಆಯೋಗ ನಿಗದಿ ಮಾಡಿದ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳ ಪಾಲಿನಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಭಾರೀ ಲಾಭವಾಗಿದ್ದರೂ, ಕರ್ನಾಟಕಕ್ಕೆ ಅಷ್ಟೇ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ. 2020-21ರವರೆಗೂ ಅನುಸರಿಸಲಾಗುತ್ತಿದ್ದ ಮಾನದಂಡಗಳ ಪ್ರಕಾರ, ಕಡಿಮೆ ತೆರಿಗೆ ಪಾವತಿಸುವ ಉತ್ತರದ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲು, ಹಾಗೆಯೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ಕರ್ನಾಟಕ, ತಮಿಳುನಾಡಿನಂಥ ರಾಜ್ಯಗಳಿಗೆ ಕಡಿಮೆ ತೆರಿಗೆ ಪಾಲು ಹಂಚಿಕೆಯಾಗುತ್ತಿತ್ತು.
ಈಗ 15ನೇ ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಬದಲಾಗಿರುವ ಸ್ಥಿತಿಯಂತೆ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಿಗೂ ಹೆಚ್ಚು ತೆರಿಗೆ ಪಾಲು ಸಿಕ್ಕಿದೆ. ಆದರೆ ಅನ್ಯಾಯವಾಗಿರುವುದು ಕರ್ನಾಟಕಕ್ಕೆ ಮಾತ್ರ. 2018-19ರಲ್ಲಿ ಕರ್ನಾಟಕಕ್ಕೆ 35,894 ಕೋಟಿ ತೆರಿಗೆ ಪಾಲು ಸಿಕ್ಕಿದ್ದರೆ, 2022-23ರಲ್ಲಿ ಸಿಕ್ಕಿರುವುದು 34,496 ಕೋಟಿ ರೂ. ಮಾತ್ರ.
ಅಂದರೆ ಐದು ವರ್ಷಗಳ ಹಿಂದೆ ಸಿಕ್ಕಿದ್ದಕ್ಕಿಂತ ಕಡಿಮೆ ಪಾಲು. 14ನೇ ಹಣಕಾಸು ಆಯೋಗ ಹೇಳಿದ್ದಂತೆ 2019-20ರವರೆಗೂ ಕರ್ನಾಟಕಕ್ಕೆ ಶೇ.4.74ರಷ್ಟು ತೆರಿಗೆ ಪಾಲು ಸಿಗುತ್ತಿತ್ತು.15ನೇ ಹಣಕಾಸು ಆಯೋಗ ಅದನ್ನು ಶೇ.3.64ಕ್ಕೆ ಇಳಿಸಿತು. 14ನೇ ಹಣಕಾಸು ಆಯೋಗದ ಶಿಫಾರಸಿನಷ್ಟೇ ಪಾಲು ಸಿಗುವಂತಿದ್ದರೆ 2023-24ರಲ್ಲಿ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲು 48,517 ಕೋಟಿ ಇರುತ್ತಿತ್ತು.
ಆದರೆ 15ನೇ ಹಣಕಾಸು ಆಯೋಗದ ನೀತಿಯಿಂದಾಗಿ 2023-24ರ ಆರ್ಥಿಕ ವರ್ಷವೊಂದರಲ್ಲಿಯೇ ಕರ್ನಾಟಕಕ್ಕೆ 11,265 ಕೋಟಿಯಷ್ಟು ಕಡಿತವಾಗಿದೆ. 15ನೇ ಹಣಕಾಸು ಆಯೋಗದ ನೀತಿಯಿಂದಾಗಿ 2018-19 ರಿಂದ 2023-24ರ ಅವಧಿಯಲ್ಲಿ ಕರ್ನಾಟಕಕ್ಕೆ ಆದ ನಷ್ಟ 36, 945 ಕೋಟಿ ರೂ.
ಇದು ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರೋ ಕಡಿತ ಕೊಡುಗೆ. 15ನೇ ಹಣಕಾಸು ಆಯೋಗದ ಲೆಕ್ಕಾಚಾರದಂತೆ ಬೇರೆಲ್ಲಾ ರಾಜ್ಯಗಳ ತೆರಿಗೆ ಪಾಲು ಏರಿಕೆಯಾದರೂ, ಕರ್ನಾಟಕ ಮತ್ತು ಕೇರಳಕ್ಕೆ ಮಾತ್ರವೆ ಇಳಿಕೆಯಾಗಿರುವುದು ಏಕೆ?. ಇದು ಅಸ್ಪಷ್ಟವಾಗಿಯೇ ಇದೆ. ಆದರೆ ಒಂದಂತೂ ಸ್ಪಷ್ಟವಾಗುತ್ತಿದೆ. ಏನೆಂದರೆ, ಬಿಜೆಪಿ ಅಧಿಕಾರದಲ್ಲಿಲ್ಲದ, ಪ್ರಾದೇಶಿಕ ಪಕ್ಷಗಳ ಸರ್ಕಾರಗಳಿರುವ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾಗಳ ತೆರಿಗೆ ಪಾಲು ಭಾರೀ ಏರಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನ ವೇಳೆಯಲ್ಲೂ ಈ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿದ್ದವು. ಒಡಿಶಾ ಈ ಹಿಂದೆ ಪಡೆಯುತ್ತಿದ್ದ ತೆರಿಗೆ ಪಾಲಿನ ಮೊತ್ತ ಗಮನಿಸಿದರೆ, 2023-24ರಲ್ಲಿ ಅದು ಪಡೆಯಲಿರುವ ತೆರಿಗೆ ಪಾಲು 10,000 ಕೋಟಿಗಿಂತಲೂ ಹೆಚ್ಚು ಏರಿದೆ.
ಇದೇ ಅವಧಿಯಲ್ಲಿ ಆಂಧ್ರದ ತೆರಿಗೆ ಪಾಲಿನಲ್ಲಿ 8,551 ಕೋಟಿ ಏರಿಕೆಯಾಗಿದೆ. ತಮಿಳುನಾಡಿನ ಪಾಲು 11,026 ಕೋಟಿಯಷ್ಟು ಏರಿಕೆಯಾಗಿದೆ.
ಆದರೆ ಇದೇ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲಿನಲ್ಲಾದ ಏರಿಕೆ 1,358 ಕೋಟಿ ಮಾತ್ರ. ಅಂದರೆ, ಶೇ.3.8ರಷ್ಟು ಮಾತ್ರ.
ಹಾಗಾದರೆ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಲ್ಲಿ ತೆರಿಗೆ ಪಾಲಿನ ಹಂಚಿಕೆಯಲ್ಲಾದ ಈ ಭಾರೀ ಏರಿಕೆ ಹಿಂದಿನ ಮರ್ಮವೇನು?.
ತನ್ನ ನೆಲೆಯಿಲ್ಲದ ಈ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳುವುದರ ತಯಾರಿಯಾಗಿ ಬಿಜೆಪಿ ಇಂಥದೊಂದು ರಾಜಕಾರಣ ಮಾಡಿತೆ ? .
ಹಣಕಾಸು ಆಯೋಗವೂ ಬಿಜೆಪಿ ಸೂತ್ರಕ್ಕೆ ತಕ್ಕಂತೆ ಆಡಿತೆ?. ಬಿಜೆಪಿಯನ್ನು ಬಲಗೊಳಿಸಲು, ಎಲ್ಲೆಡೆ ಅದು ರಾಜಕೀಯವಾಗಿ ಭದ್ರಗೊಳ್ಳುವಂತಾಗಲು ಜನರ ತೆರಿಗೆ ಪಾಲನ್ನೂ ಕಸಿದುಕೊಳ್ಳುವುದು ಮೋದಿ ಸರ್ಕಾರದ ಮಾಡೆಲ್ ಆಗಿಹೋಯಿತೆ ?.
ಕರ್ನಾಟಕಕ್ಕೆ ಆಗಿರುವ ಈ ಘೋರ ಅನ್ಯಾಯದ ಬಗ್ಗೆ ಕರ್ನಾಟಕದ 25 ಬಿಜೆಪಿ ಸಂಸದರು ಮೋದಿಯವರ ಬಳಿ ಹೋಗಿ ಪ್ರಶ್ನಿಸೋದು ಸಾಧ್ಯವೇ ?. ಯಾಕೆ ನಮ್ಮ ರಾಜ್ಯಕ್ಕೆ ಹೀಗೆ ಅನ್ಯಾಯ ಮಾಡಿದ್ದೀರಿ ? ಹೀಗೆ ಮಾಡಿದ್ರೆ ನಾವು ಲೋಕಸಭಾ ಚುನಾವಣೆಗೆ ಜನರ ಮುಂದೆ ಹೋಗೋದು ಹೇಗೆ ? ಅಂತ ಕೇಳುವ ಸಾಧ್ಯತೆ ಇದೆಯೇ. ಖಂಡಿತ ಇಲ್ಲ. ಅವರು ಕಳೆದ ಹತ್ತು ವರ್ಷಗಳಲ್ಲಿ ಮಾಡದ್ದನ್ನು ಈಗ ಮಾಡೋದೇ ಇಲ್ಲ. ರಾಜ್ಯದ ಜನತೆಯೇ ಈ ಪ್ರಶ್ನೆಯನ್ನು ಪ್ರಧಾನಿ ಮೋದಿಗೆ ಹಾಗು ಬಿಜೆಪಿಗೆ ಕೇಳಬೇಕಾಗಿದೆ.