ಚೈತ್ರಾ ಕುಂದಾಪುರ ಹಗರಣ ಮುಚ್ಚಿಟ್ಟರೇ ಸೂಲಿಬೆಲೆ ?

Update: 2023-09-25 13:34 GMT
Editor : Ismail | Byline : ಆರ್. ಜೀವಿ

ಸೂಲಿಬೆಲೆ

ಚೈತ್ರಾ ಕುಂದಾಪುರ ಗ್ಯಾಂಗ್ ಹತ್ತಿರ ಬಿಜೆಪಿ ಟಿಕೆಟ್ ಬಯಸಿ ದುಡ್ಡು ಕೊಟ್ಟು ಮೋಸಹೋದವರು ಒಬ್ಬ ಗೋವಿಂದಬಾಬು ಪೂಜಾರಿ ಮಾತ್ರವಲ್ಲದೆ, ಇನ್ನೂ 17ಕ್ಕೂ ಹೆಚ್ಚು ಮಂದಿ ಇದ್ದಾರೆಯೆ?. ಅದೆಲ್ಲೋ ಲೋಕಲ್ ಚಾನೆಲ್ಲುಗಳಲ್ಲಿ ಕೆಲಸಕ್ಕಿದ್ದ ಚೈತ್ರಾ ಕೋಟ್ಯಂತರ ಆಸ್ತಿಯ ಒಡತಿಯಾದದ್ದು ಹೇಗೆ? ಪೊಲೀಸರು ಸೀಜ್ ಮಾಡಿರುವ ಆಸ್ತಿಯ ರಹಸ್ಯವೇನು?. ಟಿಕೆಟ್ ವಂಚನೆ ವಿಚಾರವಾಗಿ ಸಂಘ ಪರಿವಾರದ ಬೇರೆ ಬೇರೆ ಬಾಗಿಲುಗಳಲ್ಲಿ ನಿಂತವರಿಗೆ ಪರಸ್ಪರ ಗೊತ್ತಿತ್ತೆ? ಗೊತ್ತಿದ್ದರೂ ಯಾರೂ ತನಿಖೆಗೆ ಒತ್ತಾಯಿಸದೇ ಇದ್ದುದರ ಮರ್ಮವೇನು?.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆಂದು ನಂಬಿಸಿ, ಐದು ಕೋಟಿ ರೂ. ಪಡೆದು ವಂಚಿಸಿದ ಪ್ರಕರಣದ ತನಿಖೆ ಮುಂದುವರಿದಿರುವಂತೆ ಹಲವು ತಿರುವುಗಳನ್ನು ಪಡೆಯುತ್ತಲೇ ಇದೆ. ಈವರೆಗೆ, ಸಂಘಪರಿವಾರದೊಳಗೆ ಆಕೆಗಿದ್ದ ಪಾಪ್ಯುಲಾರಿಟಿ ಕಾರಣಕ್ಕೆ ಭಯಗೊಂಡೊ ಏನೋ ಸುಮ್ಮನಿದ್ದ ಬೇರೆ ಕೆಲವರೂ, ಚೈತ್ರಾಳಿಂದ ತಾವು ಮೋಸ ಹೋಗಿರುವುದಾಗಿ ಹೇಳಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ನಡುವೆ, ತಲೆಮರೆಸಿಕೊಂಡಿದ್ದ ಚೈತ್ರಾ ಗ್ಯಾಂಗ್ ನ ​ಮೂರನೇ ಆರೋಪಿ​ ಅಭಿನವ ​ಹಾಲಶ್ರೀ​ ಸ್ವಾಮಿಯನ್ನು ಒಡಿಶಾದ ಕಟಕ್ ನಲ್ಲಿ ಬಂಧಿಸಲಾಗಿದೆ. ಕಾವಿ ಹಾಕಿ ಆಧ್ಯಾತ್ಮದ ಹೆಸರಲ್ಲಿ ಜನರಿಗೆ ವಂಚಿಸಿದ ಈ ಸ್ವಾಮಿ ಈಗ ​ಕಾವಿ ಸೇಫಲ್ಲ ಎಂದುಕೊಂಡು, ಯಾರಿಗೂ ಗುರುತೇ ಸಿಗದಿರುವಂತೆ ಟಿ ಶರ್ಟ್, ಚಡ್ಡಿ ಮತ್ತು ಜರ್ಕಿನ್ ಹಾಕಿಕೊಂಡಿದ್ದುದು ವರದಿಯಾಗಿದೆ.​​ ಅದರ ಬೆನ್ನಲ್ಲೇ, ಈ ಪ್ರಕರಣಕ್ಕೂ ಬಿಜೆಪಿಯ ಹಲವು ರಾಜಕಾರಣಿಗಳಿಗೂ ನಂಟಿದೆ ಎಂದು ಕಾಂಗ್ರೆಸ್ ಗಂಭೀ​ರ ಆರೋಪ ಮಾಡಿದೆ.

ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ಹೀಗಿವೆ:

1. ಬಸವರಾಜ ಬೊಮ್ಮಾಯಿ ಮತ್ತು ಅರಗ ಜ್ಞಾನೇಂದ್ರ ಇಬ್ಬರಿಗೂ ಚೈತ್ರಾ ತುಂಬ ಹತ್ತಿರದವರು.

2. ಚೈತ್ರಾ ತಂಡದ ಒಂಭತ್ತು ಮಂದಿಯೂ ಆರೆಸ್ಸೆಸ್ ಮತ್ತು ಬಿಜೆಪಿ ಲಿಂಕ್ ಇರುವಂಥವರು.

3. ಚೈತ್ರಾಗೆ ಮೈಸೂರು ಭಾಗದ ರಾಜಕಾರಣಿಗಳ ಲಿಂಕ್ ಇದೆ. ಮೈಸೂರಿನ ಗ್ರಾಮಾಂತರ ಭಾಗದ ಇಬ್ಬರು ರಾಜಕಾರಣಿಗಳು ಈಕೆಯ ಮೂಲಕ ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ.

ಹೀಗೆಂದು ಆರೋಪಿಸಿರುವ ಎಂ ಲಕ್ಷ್ಮಣ್, ಶೀಘ್ರದಲ್ಲೇ ಎಲ್ಲರ ಹೆಸರನ್ನು ಬಹಿರಂಗಪಡಿಸುವುದಾಗಿಯೂ ಹೇಳಿದ್ದಾರೆ.

ಅವರು ಮಾಡಿರುವ ಒತ್ತಾಯಗಳು:

1. ಸಿ.ಟಿ ರವಿ ಮತ್ತು ಯಡಿಯೂರಪ್ಪ ಜೊತೆ ಈಕೆಯ ಸಂಬಂಧವೇನು ಎಂ​ಬುದನ್ನು ಬಹಿರಂಗಪಡಿಸಬೇಕು.

2. ಪಿಎಸ್ಐ, ವಿವಿ ಕುಲಪತಿಗಳ ನೇಮಕಾತಿ ಸೇರಿದಂತೆ ನಾಲ್ಕಕ್ಕೂ ಹೆಚ್ಚಿನ ಹಗರಣದಲ್ಲಿ ಚೈತ್ರಾ ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅದರ ಬಗ್ಗೆ ತನಿಖೆಯಾಗಬೇಕು.

3. ಚೈತ್ರಾ ಕುಂದಾಪುರಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದ್ದು, ಇದರ ಬಗ್ಗೆಯೂ ತನಿಖೆಯಾಗಬೇಕು.

4. ಸುಮಾರು 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿ ವ್ಯವಹಾರ ಇಲ್ಲಿ ನಡೆದಿದೆ. ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಾಗಿರುವ ಇವರ ಯೋಗ್ಯತೆ ಏನು ಎನ್ನುವುದನ್ನು ಬಹಿರಂಗಪಡಿಸಬೇಕು. ​ಇವಿಷ್ಟು ಎಂ ಲಕ್ಷ್ಮಣ್ ಅವರು ಮಾಡಿರುವ ಆರೋಪಗಳು ಹಾಗು ಆಗ್ರಹಗಳು.

ಈ ನಡುವೆ, ಪ್ರಕರಣದ ಜೊತೆ ನಂಟಿದೆ ಎನ್ನಲಾದ ಕೆಲವು ಪ್ರಭಾವಿಗಳ ಹೆಸರುಗಳು ಕೂಡ ಬಹಿರಂಗವಾಗುತ್ತಿದ್ದು, ಕೆಲವರು ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯುವ ಬ್ರಿಗೇಡ್ ಸಂಘಟನೆಯ ​ಚಕ್ರವರ್ತಿ ಸೂಲಿಬೆಲೆ, ಚೈತ್ರಾ ಕುಂದಾಪುರ ಪ್ರಕರಣದಲ್ಲಿ ನನ್ನ ಹೆಸರು ನೇರವಾಗಿ ಬಂದಿಲ್ಲ. ನನ್ನ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆಂದು ​ಮಂಗಳೂರಿನ ವಜ್ರದೇಹಿ ಮಠದ ಸ್ವಾಮೀಜಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಎಂದಿದ್ದಾರೆ.

ಉದ್ಯಮಿ ಗೋವಿಂದಬಾಬು ಪೂಜಾರಿ ನನಗೆ ತುಂಬಾ ಆತ್ಮೀಯ ಸ್ನೇಹಿತರು. ಅವರು ಮೋಸ ಹೋಗಿದ್ದಕ್ಕೆ ನನಗೆ ಬೇಸರವಿದೆ. ಈ ವಿಚಾರವನ್ನು ನಾನು ಈ ಹಿಂದೆಯೇ ಸಿ.ಟಿ.ರವಿ ಗಮನಕ್ಕೂ ತಂದಿದ್ದೆ. ಬಿಜೆಪಿಯಲ್ಲಿ ಈ ರೀತಿ ನಡೆಯಲ್ಲವೆಂದು ಜನರಿಗೆ ಗೊತ್ತಾಗಬೇಕು, ಗೊತ್ತಾಗೋದರಲ್ಲಿ ತಪ್ಪಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾಗಿ ತಿಳಿಸಿದರು.

ಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ನೋಡಿದ್ದೆ. ಹಣ ಪಡೆದು ವಂಚನೆ ಪ್ರಕರಣದಲ್ಲಿ ನನ್ನ ಹೆಸರು ಬಂದಿದ್ದಕ್ಕೆ ಬೇಸರವಿಲ್ಲ. ಸಿಸಿಬಿ ಕರೆದರೆ ವಿಚಾರಣೆಗೆ ಹೋಗುತ್ತೇನೆ, ಮಾಹಿತಿ ಕೇಳಿದರೆ ನೀಡುತ್ತೇನೆ ಎಂದಿದ್ಧಾರೆ​ ಚಕ್ರವರ್ತಿ ಸೂಲಿಬೆಲೆ.

ಐಟಿ​ ಇಲಾಖೆಗೆ ಚೈತ್ರಾ ಬರೆದ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು ಕೂಡ ಇದೆ. ​ಅದಕ್ಕೆ ಪ್ರತಿಕ್ರಿಯೆ ​ನೀಡಿರುವ ​ಅವರು ​: “ಸತ್ಯಜಿತ್ ಸುರತ್ಕಲ್ ಅವರು ಜುಲೈ ತಿಂಗಳಲ್ಲಿ ಫೋನ್ ಮಾಡಿ ಈ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ. ಗೋವಿಂದ ಬಾಬು ಪೂಜಾರಿ ಅವರು ನಿಮಗೆ ಒಂದೂವರೆ ಕೋಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ನೀವು ಆ ಹಣ ವಾಪಸ್ ನೀಡಿ ಎಂದು ಹೇಳಿದ್ದರು. ಅದಕ್ಕೆ ನಾನು, ಈ ಪ್ರಕರಣದಲ್ಲಿ ನಾನಿಲ್ಲ ಎಂದಿದ್ದೆ. ಆನಂತರ ಈ ವಿಚಾರದಲ್ಲಿ ನಾನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ ಮತ್ತು ಬಜರಂಗದಳದ ಮುಖಂಡರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಅವರು ಸಮಾಧಾನಪಡಿಸಿದ್ದರು. ಇದಾದ ಬಳಿಕ ಮತ್ತೆ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ, ನಾನು ತಪ್ಪಿ ನಿಮ್ಮ ಹೆಸರು ಹೇಳಿದ್ದೇನೆ. ಅದು ಅಭಿನವ ಸ್ವಾಮೀಜಿ ಎಂದು ಗೊತ್ತಾಗಿದೆ ಎಂದರು. ಆ ಬಳಿಕ ನಾನು ಅಭಿನವ ಸ್ವಾಮೀಜಿ ಅವರಿಗೆ ಕೂಡ ಕರೆ ಮಾಡಿ ವಿಚಾರಿಸಿದ್ದೆ. ಬಳಿಕ ಅಭಿನವ ಸ್ವಾಮೀಜಿ ಅವರ ಆಪ್ತರಾಗಿರುವ ​ಚಕ್ರವರ್ತಿ ​ಸೂಲಿಬೆಲೆ ಅವರ ಜೊತೆಯೂ ಮಾತನಾಡಿದೆ. ಆಗ ​ ಚಕ್ರವರ್ತಿ ​ಸೂಲಿಬೆಲೆ​ ಅವರು ಈ ಪ್ರಕರಣದಲ್ಲಿ ನನ್ನ ಹೆಸರು ಕೂಡ ಇದೆಯಾ ಎಂದು ತಮಾಷೆಯಾಗಿ ಕೇಳಿದ್ದರು. ಈ ವಿಚಾರದಲ್ಲಿ ತಾನು ಮಾಜಿ ಸಚಿವ ಸಿ ಟಿ ರವಿ ಅವರ ಜೊತೆಗೆ ಮಾತನಾಡಿರುವುದಾಗಿಯೂ ಹೇಳಿದ್ದರು. ಬಳಿಕ ನಾನು ಚೈತ್ರಾ ಕುಂದಾಪುರ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಚೈತ್ರಾ ಕುಂದಾಪುರ ಬರೆದ ಪ್ರೇಮಪಾಶ ಎಂಬ ಕೃತಿಗೆ ಬೆನ್ನುಡಿಯನ್ನು ನಾನು ಬರೆದಿದ್ದೆ. ಅವರ ಪರಿಚಯವಿತ್ತು. ಅವರಲ್ಲಿ ವಿಚಾರಿಸಿದಾಗ, ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಬಂತು. ಇದೀಗ ನನ್ನ ಹೆಸರು ಕೇಳಿಬರುತ್ತಿದೆ. ಸಚಿವರೊಬ್ಬರು ಹೇಳಿಕೆ ನೀಡಿ ಈ ಪ್ರಕರಣದಲ್ಲಿ ಬಿಜೆಪಿಯ ದೊಡ್ಡ ಮುಖಂಡರೊಬ್ಬರ ಹೆಸರು ಇದೆ ಎಂದಿದ್ದರು.”​ಇದು ಮಂಗಳೂರಿನ ವಜ್ರದೇಹಿ ಸ್ವಾಮೀಜಿ ರಾಜಶೇಖರಾನಂದ ಅವರು ಹೇಳಿರೋದು.

ಈ ಬಗ್ಗೆ ಮಾತನಾಡಿದ ಸಿಟಿ ರವಿ, ಚುನಾವಣೆ ಮುಗಿದ ಮೇಲೆ ಚಕ್ರವರ್ತಿ ಸೂಲಿಬೆಲೆ ಪೋನ್ನಲ್ಲಿ ಮಾತನಾಡಿದ್ದರು. "ಹಣ ಕೊಡುವುದು ನಿಮಗೆ ಗೊತ್ತಿತ್ತಾ ಎಂದು ಚಕ್ರವರ್ತಿ ಅವರನ್ನು ಕೇಳಿದಾಗ ಗೊತ್ತಿಲ್ಲ ಅಂತ ಹೇಳಿದ್ದರು. ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಕ್ರವರ್ತಿ ಸೂಲಿಬೆಲೆಗೆ ಹೇಳಿದ್ದಾಗಿ ತಿಳಿಸಿದ್ದಾರೆ. ಹಣಕ್ಕಾಗಿ ಟಿಕೆಟ್ ಕೊಡುತ್ತಾರೆ ಅಂತಾ ಭಾವಿಸಿದ್ದು ತಪ್ಪು. ಒಂದನ್ನು ಮುಚ್ಚಿಟ್ಟರೆ ನಾಳೆ ಸ್ವಭಾವವಾಗಿ ಬೆಳೆಯಬಹುದು. ಮೋಸ ಹೋಗುವವರಿಗೂ ಪಾಠ ಆಗಬೇಕು. ಮೋಸ ಮಾಡುವವರಿಗೂ ಪಾಠ ಆಗಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ಅವರು ಕೇಳುವ ಪ್ರಶ್ನೆ ಏನೆಂದರೆ, ಈ ವಂಚನೆ ಪ್ರಕರಣದ ಬಗ್ಗೆ ಇಷ್ಟೆಲ್ಲಾ ಆರೋಪಗಳು ಬಂದು ಸೂಲಿಬೆಲೆಗೆ ಗೊತ್ತಾದ ಕೂಡಲೇ ಅವರು ಸಿಟಿ ರವಿಯವರನ್ನು ಸಂಪರ್ಕಿಸಬೇಕಿತ್ತಾ? ಅಥವಾ ಅಣ್ಣಾ ಹಜಾರೆ ಚಳವಳಿ, ಜಾಗೊ ಭಾರತ್​ ಬಗ್ಗೆ ಮಾತಾಡುವ, ​ಭ್ರಷಾಚಾರದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ, ಬೆಳಗ್ಗೆದ್ದರೆ ದೇಶವೇ ಇರಲ್ಲ ಎನ್ನುವ ತುಂಬಾ ಜಾಗೃತ ಮನಸ್ಸಿನ ಸೂಲಿಬೆಲೆ ನೇರವಾಗಿ ಪೊಲೀಸರಿಗೆ, ಚುನಾವಣಾ ಆಯೋಗಕ್ಕೆ ದೂರು ಕೊಡಬೇಕಿತ್ತಾ? ಎಂಬುದು.

ಹಾಗೆಯೇ ವಜ್ರದೇಹಿ ಶ್ರೀಗೆ ಗೊತ್ತಾದ ಕೂಡಲೇ ಅವರು ಸೂಲಿಬೆಲೆಗೆ ಕರೆ ಮಾಡ್ತಾರೆಂದರೆ, ಈ ಪ್ರಕರಣದ ಆಳ ಅಗಲ ತಿಳಿಯಬಹುದು. ಮೂರು ತಿಂಗಳ ಹಿಂದೆಯೇ ಇವರಿಗೆ ಈ ವಂಚನೆ ಪ್ರಕರಣದ ಬಗ್ಗೆ ಗೊತ್ತಿತ್ತು ಎಂದಾದರೆ ಮತ್ತೇಕೆ ಇವರೆಲ್ಲರೂ ಆಗಲೇ ತನಿಖೆಗೆ ಒತ್ತಾಯ ಮಾಡಿರಲಿಲ್ಲ ಎಂಬ ಸಂಶಯ ಮೂಡುತ್ತದೆ ಎಂದಿದ್ದಾರೆ ನವೀನ್ ಸೂರಿಂಜೆ.

ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿ, ​" ಸೂಲಿಬೆಲೆ ಮಾಧ್ಯಮವೊಂದರಲ್ಲಿ ಹಾಲಶ್ರೀ ಭೇಟಿಯಾದ ತಕ್ಷಣ ಈ ಕುರಿತು ಅವರಲ್ಲಿ ವಿಚಾರಿಸಲಿದ್ದೇನೆ ಎಂದು ಹೇಳಿದ್ದಾರೆ. ವಿಷಯ ತಿಳಿದು ಮೂರು ತಿಂಗಳಾಗಿದ್ದರೂ, ಮೊನ್ನೆ ಮೊನ್ನೆ ವರೆಗೂ ಹಾಲಶ್ರೀ ಸಂಪರ್ಕ, ಒಡನಾಟದಲ್ಲಿ ಇದ್ದರೂ, ಚಕ್ರವರ್ತಿ ಈ ಕುರಿತು ಅಭಿನವ ಹಾಲಶ್ರೀ ಜೊತೆ ಚರ್ಚಿಸದಿರುವುದು, ವಿಷಯದ ನೈಜತೆಯ ಕುರಿತು ವಿವರ ಪಡೆಯದಿರುವುದು ಯಾಕೆ ? ಇದೆಲ್ಲವೂ ಅನುಮಾನಗಳನ್ನು ಮೂಡಿಸುವುದಿಲ್ಲವೆ ? ಕರ್ನಾಟಕ ಪೊಲೀಸರು ರಾಜಕೀಯ, ಸಾಮಾಜಿಕವಾಗಿ ಅತ್ಯಂತ ಗಂಭೀರವಾದ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಈ ಪ್ರಕರಣದ ಸಮಗ್ರ ತನಿಖೆ ನಡೆಸುವುದನ್ನು ರಾಜ್ಯ ಸರಕಾರದ ನಾಯಕತ್ವ ವಹಿಸಿದವರು ಖಾತರಿ ಪಡಿಸಲಿ ಎಂಬುದು ನಾಗರಿಕ ಸಮಾಜದ ನಿರೀಕ್ಷೆ​" ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಬಯಲಿಗೆ ಬರುತ್ತಿರುವ ಚೈತ್ರಾ ಆಸ್ತಿ ವಿಚಾರವಂತೂ ದಿಗ್ಭ್ರಮೆ ಹುಟ್ಟಿಸುತ್ತದೆ. ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಇತ್ತೀಚಿಗೆ ಖರೀದಿಸಿದ್ದ ಕಿಯಾ ​ಕೆರೆನ್ಸ್ ಕಾರು, ಮನೆ, ಸೈಟು ಹಾಗೂ ಎರಡು ಕೋಟಿ ರೂಪಾಯಿ ಎಫ್ ಡಿ ಹಣವನ್ನು ಜಪ್ತಿ ಮಾಡಿದ್ದಾರೆ.

ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ನಿಲ್ಲಿಸಿದ್ದ ಚೈತ್ರಾ ಕಾರನ್ನು ಆಕೆಯ ಸ್ನೇಹಿತ ಎನ್ನಲಾದ ಕಿರಣ್‌ ಎಂಬಾತ ಸೆಪ್ಟೆಂಬರ್ 9ರಂದು ಮುಧೋಳಕ್ಕೆ ತಂದಿದ್ದ. ಕಿರಣ್ ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರು ತಂದು ತನ್ನ ಡ್ರೈವಿಂಗ್ ಸ್ಕೂಲ್ ನಲ್ಲಿಟ್ಟುಕೊಂಡಿದ್ದಾಗ, ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇ​ಸ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್​ ನನ್ನ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಚೈತ್ರಾಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಸ್ವತ್ತನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್‌ ಹೆಸರಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟಿದ್ದ 1.8 ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ.

ಸ್ಥಳೀಯ ಸೊಸೈಟಿಯಲ್ಲಿದ್ದ 40 ಲಕ್ಷ ರೂ. ಹಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ವಂಚನೆಯ ಹಣದಲ್ಲಿ ಖರೀದಿ ಮಾಡಿದ್ದ 65 ಲಕ್ಷ ರೂ. ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಉಳಿದಂತೆ ಆಸ್ತಿ ಖರೀದಿ ಮಾಡಿದ ಬಗ್ಗೆ ಮಾಹಿತಿಯಿದ್ದು, ಅದನ್ನೂ ವಿಡಿಯೋ ಮಾಡುವ ಮೂಲಕ ಸರ್ಕಾರಿ ವ್ಯಾಪ್ತಿಗೆ ಪಡೆದುಕೊಂಡಿದ್ದಾರೆ.

ಸಿಸಿಬಿ ಅಧಿಕಾರಿಗಳ ತಂಡ ಮಂಗಳವಾರ ಚಿಕ್ಕಮಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಸಭೆಗಳು ನಡೆದಿವೆ ಎನ್ನಲಾದ ಚಿಕ್ಕಮಗಳೂರಿನ ಐಬಿಗೆ ಆರೋಪಿ ಗಗನ್ ಕಡೂರುನನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರೆ.

ಈಗ, ಬಟ್ಟೆ ಅಂಗಡಿ ಇಟ್ಟುಕೊಡುವುದಾಗಿ ಬಿಜೆಪಿ ಕಾರ್ಯಕರ್ತನಿಗೆ 5 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಚೈತ್ರಾ ವಿರುದ್ಧ ಉಡುಪಿಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಸುದಿನ್ ಎಂಬುವರು ವಂಚನೆಗೊಳಗಾದ ವ್ಯಕ್ತಿ. 2015ರಲ್ಲಿ ಸುದಿನ್ ಅವರಿಗೆ ಚೈತ್ರಾ ಪರಿಚಯವಾಗಿತ್ತು. ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದ ಚೈತ್ರಾ, 2018-2023ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಾಳೆ. ಮೂರು ಲಕ್ಷವನ್ನು ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದಿನ್, ಉಳಿದ ಎರಡು ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದರು.

ಮತ್ತೊಂದೆಡೆ, ಚೈತ್ರಾ ಗ್ಯಾಂಗ್ ಮಾದರಿಯ ವಂಚನೆ ಪ್ರಕರಣಗಳು ಬೇರೆ ಕಡೆಯಿಂದಲೂ ಕೇಳಿಬರತೊಡಗಿವೆ. ಕೊಪ್ಪಳದಲ್ಲಿ ವರದಿಯಾದ ಪ್ರಕರಣದಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೆವೆಂದು ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ‌. ತಿಮ್ಮಾರೆಡ್ಡಿ ​ಗಿಲ್ಲೆಸೂಗುರ್ ಅವರಿಗೆ ಟಿಕೆಟ್ ಕೊಡಿಸುತ್ತೇವೆಂದು ಮೂವರು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರಿಂದ ವಂಚನೆ ನಡೆದಿದೆ. 21 ಲಕ್ಷ ರೂಪಾಯಿ ಹಣ ಪಂಗನಾಮ ಹಾಕಲಾಗಿದೆ. ಮೂವರ ವಿರುದ್ದ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ತಿಮ್ಮಾರೆಡ್ಡಿ ದೂರು ದಾಖಲಿಸಿದ್ದಾರೆ.

ತಮಗೆ ಅಮಿತ್ ಶಾ ಪರಿಚಯವೆಂದೂ, ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ, ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದೂ ವಂಚಕರು ಹೇಳಿದ್ದಾಗಿ ತಿಮ್ಮಾರೆಡ್ಡಿ ದೂರಿದ್ದಾರೆ. ತಾನು ಆತನ ಬ್ಯಾಂಕ್ ಖಾತೆಗೆ 19 ಲಕ್ಷ ರೂಪಾಯಿ ವರ್ಗಾಯಿಸಿದ್ದಾಗಿ ಹೇಳುವ ತಿಮ್ಮಾರೆಡ್ಡಿ. ಕೊನೆಗೆ ಟಿಕೆಟ್ ಸಿಗದೆ, ಹಣವೂ ವಾಪಸ್ ಬಾರದ ಹಿನ್ನಲೆಯಲ್ಲಿ ದೂರು ನೀಡಿದ್ದಾರೆ.

​ಚೈತ್ರಾ ಕುಂದಾಪುರ ಎಂಬ ದ್ವೇಷ , ಸುಳ್ಳು ಬಿಟ್ಟು ಬೇರೇನೂ ಬಂಡವಾಳವಿಲ್ಲದ ಬಡಾಯಿಯನ್ನು ಊರೂರು ತಿರುಗಿಸಿ ಸಮಾಜದ ಶಾಂತಿ, ನೆಮ್ಮದಿ ಕದಡಿದ ಸಂಘ ಪರಿವಾರ, ಅದರಿಂದ ಚುನಾವಣಾ ಲಾಭ ಪಡೆದ ಬಿಜೆಪಿ ಹಾಗು ಇಂತಹ ಕೂಗುಮಾರಿಗಳನ್ನು ಮಹಾ ವಾಗ್ಮಿಗಳಂತೆ ಬಿಂಬಿಸುವ ಕನ್ನಡದ ಚಾನಲ್ ಗಳು - ಇವರೆಲ್ಲರೂ ಚೈತ್ರಾ ಕುಂದಾಪುರ ಹಾಗು ಗ್ಯಾಂಗ್ ಎಸಗಿರುವ ಸರಣಿ ವಂಚನೆಯಲ್ಲಿ ಪಾಲುದಾರರೇ.

ಆದರೆ ಈ ವಂಚಕ ಗ್ಯಾಂಗ್ ಸುಮ್ಮನೆ ಅವರಷ್ಟಕ್ಕೆ ಇಷ್ಟೆಲ್ಲಾ ಕಾರುಬಾರು ಮಾಡ್ತಾರೆ ಅಂದ್ರೆ ಯಾರಾದ್ರೂ ನಂಬೋದು ಸಾಧ್ಯನಾ ? ಕೋಟಿಗಟ್ಟಲೆ ರೂಪಾಯಿಯ ವ್ಯವಹಾರ ಕೇವಲ ಚೈತ್ರಾಳ ಧೈರ್ಯದಲ್ಲಿ ಯಾರಾದ್ರೂ ಮಾಡ್ತಾರಾ ? ದೇಶದ ಅತಿ ದೊಡ್ಡ, ಅತಿ ಬಲಿಷ್ಠ ಪಕ್ಷದ ಟಿಕೆಟ್ ಗೆ ಪ್ರಯತ್ನಿಸುವಾಗ ಕೇವಲ ಒಬ್ಬಳು ಯುವತಿಯ ಮಾತು ನಂಬಿ ಕೋಟಿ ಕೋಟಿ ಯಾರಾದ್ರೂ ಚಾಣಾಕ್ಷ ಉದ್ಯಮಿಗಳು ಕೊಡ್ತಾರಾ ?

ಹಾಗಾಗಿ ಮೊದಲು ಚೈತ್ರಾಳನ್ನು ಪ್ರಚೋದನಕಾರಿ ದ್ವೇಷ ಭಾಷಣಕ್ಕೆ ಬಳಸಿದಂತೆ, ಈ ವಂಚನೆಗೂ ಮುಖವಾಡವಾಗಿ ಬಳಸಿದ ದೊಡ್ಡವರು ಯಾರು ಎಂಬುದು ಬಹಿರಂಗವಾಗಬೇಕು. ಅವರೂ ಕಾನೂನಿಗೆ ಲೆಕ್ಕ ಕೊಡಬೇಕು. ಇನ್ನು ಈ ಸುಳ್ಳುಕೋರರು ಹಾಗು ದ್ವೇಷ ಹರಡುವವರ ಹಿಂದೆ ಭ್ರಮೆಯಲ್ಲಿ ತಿರುಗಾಡುವ ಯುವಜನ - ಅವರು ಈಗಲಾದರೂ ನಾವು ಧರ್ಮ , ಸಂಸ್ಕೃತಿಯ ಹೆಸರಲ್ಲಿ ಎಂತಹ ವಂಚಕರ ಜಾಲಕ್ಕೆ ಸಿಲುಕಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!