ಕರ್ನಾಟಕದಲ್ಲಿ ಏಳು ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

Update: 2024-03-18 05:58 GMT
Editor : Ismail | Byline : ಆರ್. ಜೀವಿ

ಬರಲಿರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕದ 7 ಕ್ಷೇತ್ರಗಳು ಸೇರಿದಂತೆ ಒಟ್ಟು 39 ಕ್ಷೇತ್ರಗಳಿಗೆ ಈ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪಟ್ಟಿಯನ್ನು ನೋಡಿದರೆ ಮುಖ್ಯವಾಗಿ ಕಾಣಿಸುವ ಅಂಶಗಳು ಮೂರು.

ಮೊದಲನೆಯದಾಗಿ ದಕ್ಷಿಣದ ರಾಜ್ಯಗಳಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿದೆ. ಎರಡನೆಯದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ. ಮೂರು, ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದರ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದೆ ಕರ್ನಾಟಕದ 7 ಕ್ಷೇತ್ರಗಳಿಗೆ, ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಧೈರ್ಯ ಮಾಡಲಾಗಿದೆ.

39 ಅಭ್ಯರ್ಥಿಗಳಲ್ಲಿ

ಕರ್ನಾಟಕ​ದ – 7 ಕ್ಷೇತ್ರಗಳು

ಛತ್ತೀಸ್ಗಢ​ದ – 6 ಕ್ಷೇತ್ರಗಳು

ಕೇರಳ​ದ – 16 ಕ್ಷೇತ್ರಗಳು

ತೆಲಂಗಾಣ​ದ – 4 ಕ್ಷೇತ್ರಗಳು

ಮೇಘಾಲಯ​ದ – 2 ಕ್ಷೇತ್ರಗಳು

ಹಾಗೂ ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾಗಳ ತಲಾ 1 ಅಭ್ಯರ್ಥಿಗಳು ಸೇರಿದ್ದಾರೆ.

ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡ್ನಿಂದಲೇ ಸ್ಪರ್ಧಿಸುತ್ತಿದ್ಧಾರೆ ಎನ್ನುವುದು ವಿಶೇಷ. ಇನ್ನು ತಿರುವನಂತಪುರದಲ್ಲಿ ಶಶಿ ತರೂರ್ ಕಣಕ್ಕಿಳಿದಿದ್ದು, ಅವರು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರಿಗೆ ಎದುರಾಳಿಯಾಗಲಿದ್ದಾರೆ. ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ​ಆದ್ಯತೆ ನೀಡಲಾಗಿದೆ ಎನ್ನುವ ವಿಚಾರವನ್ನು ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಅದರಂತೆ, 39ರಲ್ಲಿ ಸಾಮಾನ್ಯ ವರ್ಗದ 15 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ 24 ಅಭ್ಯರ್ಥಿಗಳಿದ್ದಾರೆ. ಕರ್ನಾಟಕದ 7 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿಯೇ ಅಭ್ಯರ್ಥಿಗಳ ಘೋಷಣೆಯಾಗಿರುವುದು ವಿಶೇಷ.

ಅದರಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ನಿಜವಾಗಿಯೂ ಯಾವ ಕ್ಷೇತ್ರಗಳ ವಿಚಾರದಲ್ಲಿ ಗೊಂದಲ ಹೊಂದಿದೆಯೊ ಅಲ್ಲಿಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆ 7 ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು:

ತುಮಕೂರು – ಎಸ್ಪಿ ಮುದ್ದಹನುಮೇಗೌಡ

ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು)

ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್

ಹಾಸನ – ಶ್ರೇಯಸ್ ಪಟೇಲ್

ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್

ವಿಜಯಪುರ – ರಾಜು ಅಲಗೂರ

ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ

ಮುದ್ದಹನುಮೇಗೌಡರು ಬೇಸರ ಮಾಡಿಕೊಂಡು ಕಾಂಗ್ರೆಸ್ ಬಿಟ್ಟುಹೋಗಿದ್ದವರು ಮತ್ತೆ ಪಕ್ಷಕ್ಕೆ ಮರಳುತ್ತಾರೆ ಮತ್ತು ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಕೆಲವು ತಿಂಗಳುಗಳ ಹಿಂದಿನಿಂದಲೇ ಮಾತುಗಳಿದ್ದವು. ಕಡೆಗೂ ಅವರು ಫೆಬ್ರವರಿ ಕಡೇ ವಾರದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದರು.

ಈಗ ಅವರಿಗೆ ತುಮಕೂರು ಲೋಕಸಭೆ ಟಿಕೆಟ್ ಘೋಷಣೆಯಾಗಿದೆ. ಈ ಹಿಂದೆ ಕಾಂಗ್ರೆಸ್ನಿಂದಲೇ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ, 2019ರಲ್ಲಿ ಜೆಡಿಎಸ್-ಕಾಂಗ್ರೆಸ್‍ ಮೈತ್ರಿ ಕಾರಣಕ್ಕೆ ಟಿಕೆಟ್ ವಂಚಿತರಾಗಿದ್ದರು. ಅನಂತರ ಬಿಜೆಪಿ​ಗೆ ಪಕ್ಷಾಂತರ ಮಾಡಿದ್ದರು. ಈಗ ಕಾಂಗ್ರೆಸ್ಗೆೆ ಮರಳಿದ್ದಾರೆ. ಅವರ ಸೇರ್ಪಡೆಗೆ ಪಕ್ಷದಲ್ಲಿ ವಿರೋಧ ಕಂಡುಬಂದಿತ್ತೆಂಬುದು ನಿಜವಾದರೂ, ಸ್ವತಃ ಡಿಕೆ ಶಿವಕುಮಾರ್, ​ಸಚಿವ ಕೆಎನ್ ರಾಜಣ್ಣ, ಶ್ರೀನಿವಾಸ್ ಸೇರಿದಂತೆ ಬಹುತೇಕ ಎಲ್ಲ ನಾಯಕರು ಚರ್ಚಿಸಿಯೇ ಅವರನ್ನು ಪಕ್ಷಕ್ಕೆ ಕರೆದುಕೊಂಡಿದ್ದಾರೆ.

ಈಗ ಕಾಂಗ್ರೆಸ್ನೊಳಗೆ ಅಸಮಾಧಾನ ವ್ಯಕ್ತವಾಗಿರುವುದು ಮಂಡ್ಯಕ್ಕೆ ಉದ್ಯಮಿ ವೆಂಕಟರಮಣೇಗೌಡ​ ಅಥವಾ ಸ್ಟಾರ್ ಚಂದ್ರು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವ ವಿಚಾರಕ್ಕೆ. ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂಬುದು ಸ್ಪಷ್ಟವಾದಾಗಲೇ ಪಕ್ಷದ ​ರಾಜ್ಯ ಪ್ರಧಾನ ಕಾರ್ಯದರ್ಶಿ ​ಡಾ ಎಚ್ ಎನ್ ರವೀಂದ್ರ ರಾಜೀನಾಮೆ ನೀಡಿದ್ದರು​. ಆದರೆ ಅದನ್ನು ಪಕ್ಷ ಅಷ್ಟೇನೂ ಗಂಭೀರವಾಗಿ ತೆಗೆದು​ಕೊಂಡಿಲ್ಲ.

ಹಾಗಾಗಿ ಅದನ್ನು ಭಿನ್ನಮತ ಸ್ಫೋಟ ಎಂದೆಲ್ಲ ಹೇಳುವುದಕ್ಕಿಂತ, ಕಾಂಗ್ರೆಸ್ ತನ್ನ ನಿರ್ಧಾರದಲ್ಲಿ ಸ್ಪಷ್ಟತೆ ಹೊಂದಿದೆ ಮತ್ತು ಯಾವುದೇ ಗೊಂದಲಗಳಿಲ್ಲದೆ ಅಭ್ಯರ್ಥಿಯನ್ನು ಪ್ರಕಟಿಸಿದೆ ಎನ್ನುವುದು ಮುಖ್ಯ. ಹಾಗೆ ನೋಡಿದರೆ, ಟಿಕೆಟ್ ಅಧಿಕೃತ ಘೋಷಣೆಗೆ ಮುಂಚಿನಿಂದಲೇ ವೆಂಕಟರಮಣೇಗೌಡ ಪ್ರಚಾರ ಶುರುಮಾಡಿಬಿಟ್ಟಿದ್ದರು.

ರಾಜಕೀಯ ನಂಟು ಇರುವ ಕುಟುಂಬ ಅವರದು. ಅವರ ಸಹೋದರ ಕೆ.ಎಚ್.ಪುಟ್ಟಸ್ವಾಮಿಗೌಡರು ಪ್ರಸ್ತುತ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದಾರೆ. ಪುಟ್ಟಸ್ವಾಮಿಗೌಡರ ಅಳಿಯ ಶರತ್ ಬಚ್ಚೇಗೌಡ ​ಹೊಸಕೋಟೆಯಿಂದ ಹಾಲಿ​ ಕಾಂಗ್ರೆಸ್ ​ ಶಾಸಕರು. ಬೀಗರಾದ ಹಿರಿಯ ರಾಜಕಾರಣಿ​, ಚಿಕ್ಕಬಳ್ಳಾಪುರದ ಬಿಜೆಪಿ ಸಂಸತ್ ಸದಸ್ಯ​ ಬಿ.ಎನ್.ಬಚ್ಚೇಗೌಡ​ ಈಗ ಬಿಜೆಪಿಯಿಂದ ದೂರ ಸರಿದಿದ್ದಾರೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವ ವಿಚಾರವೆಂದರೆ,​ ರಾಜ್ಯದ ಗಮನ ಸೆಳೆದಿರುವ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ತಾನೊ ನೀನೊ ಎಂಬ ಗೊಂದಲದಲ್ಲಿರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ ಎನ್ನುವುದು.

ಬಿಜೆಪಿಯೇ ಕಣಕ್ಕಿಳಿಯಲಿ, ಜೆಡಿಎಸ್ ಬೇಕಾದರೂ ಕಣಕ್ಕಿಳಿಯಲಿ, ಕಳೆದ ಬಾರಿ ಗೆದ್ದ ಸುಮಲತಾ ಅವರನ್ನೇ ಬೇಕಾದರೂ ಬಿಜೆಪಿ ಕಣಕ್ಕಿಳಿಸಲಿ, ಅಥವಾ ಸುಮಲತಾ ಅವರೇ ಸ್ಪರ್ಧಿಸಲಿ ತನ್ನ ಅಭ್ಯರ್ಥಿ ಬಗ್ಗೆ ತಾನು ಖಚಿತತೆ ಹೊಂದಿರುವುದನ್ನು ಕಾಂಗ್ರೆಸ್ ಸಾಕಷ್ಟು ಮೊದಲೇ ನಿರ್ಧರಿಸಿಯಾಗಿತ್ತು. ಈಗ ಅಧಿಕೃತವಾಗಿ ಘೋಷಿಸಿದೆ.

ಮಂಡ್ಯದಲ್ಲಿ ಬಿಜೆಪಿ ಸ್ಪರ್ಧಿಸಲಿದೆಯೊ ಅಥವಾ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಾರೋ ಎನ್ನುವ ಗೊಂದಲ ಒಂದು ಕಡೆಯಾದರೆ, ಸುಮಲತಾ ತಾನು ಸ್ಪರ್ಧಿಸುವುದು ಖಚಿತ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಇರುವ ಗೊಂದಲ ಸುಲಭಕ್ಕೆ ಬಗೆಹರಿಯುವಂತೆ ಕಾಣಿಸುತ್ತಿಲ್ಲ.

ಅವೆರಡೂ ಪಕ್ಷಗಳಿಗೆ ಮಂಡ್ಯ ಬಹಳ ಪ್ರಮುಖವಾಗಿದೆ. ಹಾಗಾಗಿ ಯಾರೂ ಬಿಟ್ಟುಕೊಡಲು ತಯಾರಿಲ್ಲ. ಒಂದು ವೇಳೆ ಬಿಜೆಪಿಗೆ ಬಿಟ್ಟುಕೊಡಲು ಜೆಡಿಎಸ್ ದೊಡ್ಡ ಮನಸ್ಸು ಮಾಡಿ, ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಅವರೇ ಕಣಕ್ಕಿಳಿದರೆ ಆಗ ಕುಮಾರಸ್ವಾಮಿ ಸುಮ್ಮನಿರಲಾರರು. ಹೀಗೆ ಅವೆರಡೂ ಗೊಂದಲದಲ್ಲಿರುವಾಗ ಮತ್ತು ಒಮ್ಮತಕ್ಕೆ ಬರಲಾರದ ಬಿಕ್ಕಟ್ಟು ಎದುರಿಸುತ್ತಿರುವಾಗ, ಯಾವ ಗೊಂದಲವೂ ಇಲ್ಲದೆ ಕಾಂಗ್ರೆಸ್ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಿದೆ. 2014ರಲ್ಲಿ ಇದೇ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ ಗೀತಾ ಅವರಿಗೆ ಸಹೋದರ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಬಲವಾಗಬಹುದೆ, ಅವರು ಈ ಬಾರಿ ಸಂಸತ್ ಪ್ರವೇಶಿಸುವರೆ ಎಂಬುದನ್ನು ಕಾದು ನೋಡಬೇಕಿದೆ.

​ಶಿವಮೊಗ್ಗದಲ್ಲಿ ಹಾಲಿ ಸಂಸದ ಬಿ ಎಸ್ ವೈ ಪುತ್ರ ಬಿ ವೈ ರಾಘವೇಂದ್ರ ಮತ್ತೆ ಟಿಕೆಟ್ ಪಡೆಯೋದು ಬಹುತೇಕ ಖಚಿತ. ಹಾಗಾದರೆ ಮತ್ತೊಮ್ಮೆ ಬಿ ಎಸ್ ವೈ ಹಾಗು ಬಂಗಾರಪ್ಪ ಕುಟುಂಬಗಳ ನಡುವೆ ಹಣಾಹಣಿ ನಡೆಯಲಿದೆ. ಯಡಿಯೂರಪ್ಪ ಅವರ ತವರಲ್ಲೇ ಬಿಜೆಪಿಯನ್ನು ಸೋಲಿಸುವುದೇ ಕಾಂಗ್ರೆಸ್ , ಗೀತಾ ಹಾಗು ಅವರ ಸೋದರ ಮಧು ಬಂಗಾರಪ್ಪ ಅವರಿಗೆ ಸಾಧ್ಯವಾಗಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿಕೆ ಸುರೇಶ್ ಕಳೆದ ಬಾರಿ ಕಾಂಗ್ರೆಸ್ನಿಂದ ಗೆದ್ದ ಏಕೈಕ ಸಂಸದ. ಈ ಬಾರಿ ಅವರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಬಿಜೆಪಿ-ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ರಣತಂತ್ರ ರೂಪಿಸಿರುವ ಬಗ್ಗೆ ವರದಿಗಳು ಹೇಳುತ್ತಿವೆ.

ಕಳೆದೆರಡೂ ಚುನಾವಣೆಗಳಲ್ಲಿ ಸತತವಾಗಿ ಗೆದ್ದಿರುವ ಸುರೇಶ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಅವರ ಗೆಲುವಿನ ಅಂತರ 2 ಲಕ್ಷ ಮತಗಳಿಗೂ ಅಧಿಕವಿತ್ತು ಎಂಬುದು ಗಮನಾರ್ಹ. ಈ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ.

ವಿಜಯಪುರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿರುವ ರಾಜು ಅಲಗೂರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಹೌದು.​ ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದರು. ​ಈ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಲೋಕಸಭಾ ಸದಸ್ಯರಾಗಿದ್ದಾರೆ.

ಎರಡು ಬಾರಿ ಶಾಸಕರಾಗಿದ್ದ ಅವರು​ ಪ್ರಬಲ ಚಲವಾದಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಮುದಾಯದ ಬಲ ಅವರ ಕೈಹಿಡಿಯಲಿದೆ ಎನ್ನಲಾಗುತ್ತಿದೆ.​ ರೈತ, ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಮಾಜಿ ಉಪನ್ಯಾಸಕ ರಾಜು ಆಲಗೂರ ಒಮ್ಮೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಅನುಭವ ಹೊಂದಿದ್ದಾರೆ. ಹಾಸ​ನ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾಜಿ ಸಂಸದ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ. ಡಿಕೆ ಶಿವಕುಮಾರ್ ಅವರ ಹತ್ತಿರದ ಸಂಬಂಧಿಯೂ ಹೌದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ​ ಹೊಳೆನರಸೀಪುರದಲ್ಲಿ ಎಚ್ಡಿ ರೇವಣ್ಣ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದವರು. ಇವರಿಗೆ ಪ್ರಜ್ವಲ್ ರೇವಣ್ಣ ಅವರೇ ಎದುರಾಳಿಯಾಗುವ ಸಾಧ್ಯತೆಯಿದೆ.

​ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಹೆಚ್ಚಾಗಿರುವುದು, ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಅಹಿಂದ ಮತ ಹೆಚ್ಚಳ ಆಗುವ ಸಾಧ್ಯತೆ, ಪುರಸಭೆ ಚುನಾವಣೆಯಲ್ಲಿ ಗೆಲುವಿನಿಂದ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಲ್ಲಿರುವುದು ಕಾಂಗ್ರೆಸ್ ಪಾಲಿಗೆ ಪ್ಲಸ್ ಪಾಯಿಂಟ್. ಆದರೆ ದೇವೇಗೌಡರ ತವರಲ್ಲಿ ಜೆಡಿಎಸ್ ಅನ್ನು ಸೋಲಿಸುವುದು ಸುಲಭ ಅಲ್ಲ, ಆದರೆ ತೀರಾ ಅಸಾಧ್ಯವೂ ಅಲ್ಲ.

ಇನ್ನು ಹಾವೇರಿ ಅಭ್ಯರ್ಥಿ ​ಆನಂದಸ್ವಾಮಿ ಗಡ್ಡದೇವರಮಠ ಅಚ್ಚರಿಯ ಆಯ್ಕೆ. ಅವರು ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಅವರ ಪುತ್ರ. ​ಯುವ ನಾಯಕರಾಗಿರುವ ​ಆನಂದಸ್ವಾಮಿ ಕ್ಷೇತ್ರದಲ್ಲಿ ʼಅಜ್ಜಾರ ಮಗʼ ಎಂದೇ ಚಿರಪರಿಚಿತ. ​ ಆನಂದ‌ಸ್ವಾಮಿ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.​ಇವರ ವಿರುದ್ಧ ಬಿಜೆಪಿ​ಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.​

ಬಹುಶಃ ಕಾಂಗ್ರೆಸ್ ಅಭ್ಯರ್ಥಿಗಳು ಯಾರೆಂಬುದನ್ನು ನೋಡಿಕೊಂಡೇ ತನ್ನ ಅಭ್ಯರ್ಥಿಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಕಟಿಸುವ ಹಾಗೆ ಕಾಣಿಸುತ್ತದೆ.​ ಆದರೆ ನೀವು ಯಾರನ್ನು ಬೇಕಾದರೂ ಕಣಕ್ಕಿಳಿಸಿ, ನಮ್ಮ ಅಭ್ಯರ್ಥಿಗಳು ಇವರೇ ಎಂದು ಕಾಂಗ್ರೆಸ್ ಘೋಷಿಸಿ ಒಂದು ಹೆಜ್ಜೆ ಮುಂದಿಟ್ಟಿದೆ. ಅವರ ತಯಾರಿ, ತಂತ್ರಗಾರಿಕೆ ಏನೇ ಇದ್ದರೂ, ಈ ಹಂತದಿಂದಲೇ ಭಯ ಶುರುವಾಗಿರುವುದಂತೂ ಹೌದು ಎಂಬುದು ಸ್ಪಷ್ಟವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!