ಸುಲಭವಾಗಿ ಗೆಲ್ಲೋ ಸೀಟನ್ನು ಮತ್ತೆ ಕಳಕೊಳ್ಳುತ್ತಾ ಕಾಂಗ್ರೆಸ್ ?

Update: 2024-04-18 05:05 GMT
Editor : Ismail | Byline : ಆರ್. ಜೀವಿ

ಸಾಂದರ್ಭಿಕ ಚಿತ್ರ

ಕೋಲಾರ ಕಾಂಗ್ರೆಸ್ನಲ್ಲಿ ಕೋಲಾಹಲವೇ ಎದ್ದಿದೆ. ಬಿಕ್ಕಟ್ಟು ಬಗೆಹರಿಸುವ ಮತ್ತೊಂದು ಸುತ್ತಿನ ಯತ್ನವೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಡೆಯಿಂದ ನಡೆದಿದೆ. ನೋಡುವುದಕ್ಕೆ ಇದು ಕೆಎಚ್ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವಿನ ಸಂಘರ್ಷದ ಹಾಗೆ ಕಂಡರೂ, ವಾಸ್ತವದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಜಿದ್ದಾಜಿದ್ದಿಯ ಮತ್ತೊಂದು ಸ್ವರೂಪವೆ ​ಇದು ಎಂಬ ಅನುಮಾನ ಕೂಡ ರಾಜಕೀಯ ವಲಯದಲ್ಲಿ ಇಲ್ಲದೆ ಇಲ್ಲ.

ಈ ಹೊತ್ತಿನಲ್ಲಿ ಕಾಂಗ್ರೆಸ್ನಲ್ಲಿ, ಅದೂ ಸುಲಭವಾಗಿ ಗೆಲ್ಲುವ ಎಲ್ಲ ಅವಕಾಶವೂ ಇರುವ ಕೋಲಾರದಲ್ಲಿ ಹೀಗೆ ಬಣ ರಾಜಕೀಯ ಸ್ಫೋಟ ಆಗಬಾರದಿತ್ತು. ಎಲ್ಲವೂ ಸರಿಯಿರುವ ಕಡೆಯಲ್ಲೇ ಹಾಳುಗೆಡಿಸಿಕೊಳ್ಳುವ ಕೆಟ್ಟ ಚಾಳಿಯೊಂದು ಕಾಂಗ್ರೆಸ್ ಅನ್ನು ಹಲವು ಬಾರಿ ದುಸ್ಥಿತಿಗೆ ತಳ್ಳಿದ್ದಿದೆ. ಆದರೆ ಅಂಥ ಸ್ಥಿತಿಯಿಂದ ಅದು ಪಾಠ ಕಲಿತದ್ದು ಮಾತ್ರ ಕಡಿಮೆ.

ಈ ಹಂತದಲ್ಲಿ, ನಿಜವಾಗಿಯೂ ಕೋಲಾರ ಕಾಂಗ್ರೆಸ್ನಲ್ಲಿ ನಡೆಯುತ್ತಿರುವುದು ಏನು?

ಹೈಕಮಾಂ​ಡ್ ಗೇ ಸೆಡ್ಡು ಹೊಡೆಯುವ ಸೂಚನೆ ಕೊಡುತ್ತಿರುವ ರಮೇಶ್ ಕುಮಾರ್ ಬಣದ ಧೈರ್ಯ ಎಲ್ಲಿಯದು?

ಎರಡೂ ಬಣಗಳ ನಡುವಿನ ಬಿಗಿಪಟ್ಟಿನ ಮೂಲಕ ತಲೆದೋರಬಹುದಾದ ರಾಜಕೀಯ ತಿರುವು ಏನಾಗಿರಬಹುದು?

ಬಲಗೈ, ಎಡಗೈ ಸಮುದಾಯಗಳ ಹೆಸರಿನಲ್ಲಿನ ಈ ತಿಕ್ಕಾಟ, ಮತ್ತಿದರ ಹಿಂದಿನ ರಾಜಕೀ​ಯ, ಇದೆಲ್ಲವೂ ಎಲ್ಲಿಗೆ ಹೋಗಿ ತಲುಪಲಿದೆ?

ಕಳೆದ ಬಾರಿಯೂ ಬಣ ರಾಜಕೀಯದಿಂದಾಗಿಯೇ ಸುಲಭದ ಗೆಲುವಿನ ಅವಕಾಶವಿರುವ ಕೋಲಾರ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿತ್ತು.

ಅಷ್ಟಾದ ಮೇಲೆಯೂ ಮತ್ತೆ ಅದೇ ಬಣ ರಾಜಕೀಯ​ ನಡೆಯುತ್ತಿದೆ. ​

ಕೋಲಾರ ಟಿಕೆಟ್ಗಾಗಿ ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವೆ ಪೈಪೋಟಿ ನಡೆದಿರುವುದು ಗೊತ್ತೇ ಇರುವ ವಿಚಾರ. ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರೆ. ಅದಕ್ಕೆ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸುತ್ತಿದ್ದು, ತಮ್ಮ ಕಡೆಯ ಅಭ್ಯರ್ಥಿಗೆ ಟಿಕೆ ಟ್ ನೀಡುವಂತೆ ಪಟ್ಟು ಹಿಡಿದಿದೆ. ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂಬುದು ರಮೇಶ್ ಕುಮಾರ್ ಬಣದ ಒತ್ತಾಯವಾಗಿದೆ.

ಮಾರ್ಚ್ 26ರಂದು ಮುನಿಯಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಆ ಬಳಿಕ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಲು ಖರ್ಗೆ ಸಮ್ಮತಿಸಿದ್ದಾರೆ ಎನ್ನಲಾಗಿತ್ತು. ಮುನಿಯಪ್ಪ ಅಳಿಯಗೆ ಟಿಕೆಟ್ ಖಚಿತವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಮೇಶ್ ಕುಮಾರ್ ಬಣ ಕೆರಳಿದೆ.

ಮುನಿಯಪ್ಪ ಅಳಿಯನಿಗೆ ಟಿಕೇಟ್ ನೀಡಿದರೆ ರಾಜೀನಾಮೆ ಕೊಡುವ ಬೆದರಿಕೆಯೂ ರಮೇಶ್ ಕುಮಾರ್ ಕಡೆಯ ನಾಯಕರಿಂದ ಬಂತು.

ತಮ್ಮ ಬೇಡಿಕೆಗೆ ಹೈಕಮಾಂಡ್ ಮಣಿಯದಿದ್ದರೆ ರಾಜೀನಾಮೆ ಕೊಡುತ್ತೇವೆ ಎಂದು​ ಈ ನಾಯಕರು ಬಹಿರಂಗವಾಗಿಯೇ ಹೇಳಿದರು.

ಎಂಎಲ್‌ಸಿಗಳಾದ ಅನಿಲ್ ಕುಮಾರ್, ನ​ಸೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ರಾಜೀನಾಮೆ ಕೊಡುವುದಾಗಿ ಎಚ್ಚರಿಕೆ ನೀಡಿದರು.

​ಬುಧವಾರ ವಿಧಾನಸೌಧದಲ್ಲಿ ದೊಡ್ಡ ಪ್ರಹಸನವೇ ನಡೆದುಹೋಯಿತು. ಮೀಡಿಯಾಗಳಿಗೆಲ್ಲ ರಾಜೀನಾಮೆ ಪತ್ರ ತೋರಿಸಿ ಒಳಹೋದವರು, ಕಡೆಗೆ ರಾಜೀನಾಮೆ ಕೊಡದೆ ವಾಪಸಾದರು. ಸ್ಪೀಕರ್ ಯುಟಿ ಖಾದರ್ ಮಂಗಳೂರಿನಲ್ಲಿರುವುದು ತಿಳಿದ ಬಳಿಕ ಮಂಗಳೂರಿಗೇ ಹೋಗಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದಾಗಿಯೂ ಸುದ್ದಿಯಾಯಿತು.

ಕಡೆಗೆ ಸಭಾಪತಿ ಹೊರಟ್ಟಿಯವರ ಕಚೇರಿಗೂ ಹೋಗಿದ್ದರು. ಆದರೆ ರಾಜೀನಾಮೆ ನೀಡಲಿಲ್ಲ. ಇದರ ನಡುವೆ ಮಧ್ಯಪ್ರವೇಶಿಸಿದ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚೆ ನಡೆಸುವವರೆಗೂ ಯಾವುದೇ ನಿರ್ಧಾರ ಮಾಡಬೇಡಿ ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವೊಲಿಕೆ ಮಾಡಿ ಶಾಸಕರನ್ನು ಕರೆದೊಯ್ದರು.

ಮುಖ್ಯಮಂತ್ರಿ ಫೋನ್ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿಲ್ಲ. ಅವರು ಏನು ತೀರ್ಮಾನಿಸುತ್ತಾರೆ ಎಂದು ಕಾಯುತ್ತೇವೆ ಎಂಬ ಸಮಜಾಯಿಷಿಯೂ ಬಂತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಎಲ್ಲರೂ ಹೇಳಿದ್ದರು. ರಮೇಶ್ ಕುಮಾರ್ ಮತ್ತು ಅವರ ಬೆಂಬಲಿಗರು ಕೂಡಾ ಅದೇ ಮಾತು‌ ಹೇಳಿದ್ದರು. ಆ ಸಭೆಯಲ್ಲಿ ಎಲ್ಲರೂ ಇದ್ದರು. ಈ ಹಿಂದೆ ಅಹಿತಕರ ಘಟನೆ ನಡೆದಿದ್ದರೆ ಮರೆಯೋಣ ಎಂದೂ ಆ ಸಭೆಯಲ್ಲಿ ನಾನು ಹೇಳಿದ್ದೆ ಎಂಬುದು ಮುನಿಯಪ್ಪ ಮಾತು.

ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಮುನಿಯಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಅದರ ನಡುವೆಯೂ, ಎಲ್ಲವನ್ನೂ ಹೈಕಮಾಂಡ್‌ಗೆ ಬಿಟ್ಟಿದ್ದೇನೆ, ಅಲ್ಲಿನ ತೀರ್ಮಾನವೇ ಅಂತಿಮ ಎಂತಲೂ ಅವರು ಹೇಳಿರುವುದಾಗಿ ವರದಿಯಾಗಿದೆ. ಇನ್ನೊಂದೆಡೆ, ಕೋಲಾರದಲ್ಲಿ ಎಸ್ಸಿ ಎಡಗೈ ಸಮುದಾಯದ ಮುಖಂಡರಿಂದ ಕೆ.ಎಚ್ ಮುನಿಯಪ್ಪ ಪರವಾಗಿ ತುರ್ತು ಪತ್ರಿಕಾಗೋಷ್ಠಿಯೂ ನಡೆಯಿತು.

ಮೊದಲು ರಮೇಶ್ ಕುಮಾರ್ ಬಣದವರು ರಾಜೀನಾಮೆ ಕೊಟ್ಟು ಹೋಗಲಿ. ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಲಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಸ್ಸಿ ಎಡಗೈ ಸಮುದಾಯಕ್ಕೆ ಕರೆ ಕೊಟ್ಟು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದೂ ಆಯಿತು.

ಇದೆಲ್ಲವೂ ಇತ್ತ ನಡೆಯುತ್ತಿರುವಾಗ ಬೆಂಗಳೂರಿನಲ್ಲಿ ಸಿಎಂ, ಡಿಸಿಎಂ ಇಬ್ಬರೂ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಮೈ​ಸೂರಿನಲ್ಲಿ ಗ್ಯಾರಂಟಿ ಸಮಾವೇಶದಲ್ಲಿದ್ದರು. ಡಿಕೆ ಶಿವಕುಮಾರ್ ಕಾರವಾರ ಪ್ರವಾಸದಲ್ಲಿದ್ದರು.

ಈ ಮೊದಲು ನಾಲ್ಕು ದಿನಗಳ ಹಿಂದೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ ನಾಯಕರ ನಡುವಿನ ಭಿನ್ನಮತ ಶಮನವಾಗಿರಲಿಲ್ಲ. ಕಡೆಗೆ ​ಬುಧವಾರದ ಬೆಳವಣಿಗೆ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ​ಮುಂದಾಗಬೇಕಾಯಿತು.

ಸಾಮಾನ್ಯವಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಐದು ಲೋಕಸಭಾ ಕ್ಷೇತ್ರ​ಗಳ ಟಿಕೆಟ್‌ ಅನ್ನು ದಲಿತರಿಗೆ ನೀಡುವ ಸಂಪ್ರದಾಯ ಅನುಸರಿಸುತ್ತಾ ಬಂದಿದೆ. ಚಾಮರಾಜನಗರ, ಕಲಬುರಗಿ ಕ್ಷೇತ್ರವನ್ನು ಬಲಗೈ ಸಮುದಾಯಕ್ಕೂ, ಕೋಲಾರ ಹಾಗೂ ಚಿತ್ರದುರ್ಗ ಕ್ಷೇತ್ರವನ್ನು ಎಡಗೈ ಸಮುದಾಯಕ್ಕೂ ಹಾಗೂ ವಿಜಯಪುರವನ್ನು ಲಂಬಾಣಿ ಅಥವಾ ಬೋವಿ ಸಮುದಾಯಕ್ಕೆ ನೀಡುತ್ತಾ ಬಂದಿದೆ.

​ಆದರೆ ಈಗ ಕೋಲಾರ ಕ್ಷೇತ್ರದ ಟಿಕೆಟ್‌ ಅನ್ನು ದಲಿತ ಬಲಗೈ ಸಮುದಾಯಕ್ಕೆ ನೀಡಬೇಕು ಎಂದು ಬಂಡೆದ್ದಿರುವ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ನೇತೃತ್ವದ ಬಣದ ವಾದ ಕಾಂಗ್ರೆಸ್‌ನಲ್ಲಿ ಭಾರಿ ತಳಮಳ​ಕ್ಕೆ ಕಾರಣವಾಗಿದೆ.

ಈ ವಾದಕ್ಕೆ ಎಡಗೈ ಸಮುದಾಯದಿಂದ ಭಾರಿ ವಿರೋಧ ಕೇಳಿ ಬಂದಿದ್ದು, ಹೈಕಮಾಂಡ್‌ ಈ ವಾದಕ್ಕೆ ಮನ್ನಣೆ ನೀಡಿದರೆ ಸಾಮಾಜಿಕ ನ್ಯಾಯಕ್ಕೆ ಚ್ಯುತಿ ಬರುವುದು ಮಾತ್ರವಲ್ಲದೆ ರಾಜ್ಯದಲ್ಲಿ ಸುಮಾರು 65 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಡಗೈ ಸಮುದಾಯದ ​ಆಕ್ರೋಶವನ್ನು ಕಾಂಗ್ರೆಸ್‌ ಎದುರಿಸಬೇಕಾಗಬಹುದು ಎಂಬ ನೇರ ಎಚ್ಚರಿಕೆಯೂ ಕಾಂಗ್ರೆಸ್‌ಗೆ ರವಾನೆಯಾಗಿದೆ.

​ಆದರೆ ಈ ಬಾರಿ ಚಾಮರಾಜನಗರದಲ್ಲೂ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ಸಿಕ್ಕಿದರೆ ವಿಜಯಪುರ ಹಾಗು ಕಲಬುರ್ಗಿಯೋ ಸೇರಿದಂತೆ ಮೂರು ಟಿಕೆಟ್ ಬಲಗೈ ಸಮುದಾಯಕ್ಕೆ ಸಿಕ್ಕಂತಾಗುತ್ತದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯದ ಚಂದ್ರಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ. ಈಗ ಕೋಲಾರದಲ್ಲೂ ಸಂಪ್ರದಾಯದ ಪ್ರಕಾರ ಎಡಗೈ ಸಮುದಾಯಕ್ಕೆ ಕೊಟ್ಟರೆ ಅವರಿಗೆ ಎರಡು ಟಿಕೆಟ್ ಸಿಕ್ಕಿದ ಹಾಗಾಗುತ್ತೆ.

​ಇಲ್ಲದಿದ್ದರೆ ಬಲಗೈ ಸಮುದಾಯಕ್ಕೆ ನಾಲ್ಕು ಟಿಕೆಟ್, ಎಡಗೈ ಸಮುದಾಯಕ್ಕೆ ಕೇವಲ ಒಂದೇ ಟಿಕೆಟ್ ಆಗುತ್ತದೆ. ಹಾಗಾದರೆ ಕಾಂಗ್ರೆಸ್ ವಿರುದ್ಧ ಎಡಗೈ ಸಮುದಾಯ ತಿರುಗಿ ಬೀಳೋದು ಖಚಿತ. ಈ ನಡುವೆ, ಚಿಕ್ಕಬಳ್ಳಾಪುರದಲ್ಲಿ​ ಮುನಿಯಪ್ಪ ಪುತ್ರಿ ಶಾಸಕಿ ರೂಪಕಲಾ ಟಿಕೆಟ್ ವಿಚಾರವಾಗಿ ಪಕ್ಷದಲ್ಲಿ ನಡೆಯುತ್ತಿರುವ ರಂಪಾಟದ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ವರದಿಯಾಗಿದೆ.

ದಯವಿಟ್ಟು ಬೀದಿಯಲ್ಲಿ ರಂಪಾಟ ಮಾಡಿ, ಪಕ್ಷಕ್ಕೆ ಮುಜುಗರ ತರಬೇಡಿ. ಇವತ್ತಿನ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಅಸೂಯೆ ಹಾಗೂ ದ್ವೇಷಕ್ಕೆ ಬುದ್ಧಿ ಕೊಡುವುದು ಸರಿಯಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಲೆ ತಗ್ಗಿಸುವಂತೆ ಮಾಡಬೇಡಿ. ಟಿಕೆಟ್ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಳಿ ಚರ್ಚಿಸೋಣ ಎಂದು ರೂಪಕಲಾ ಹೇಳಿದ್ದಾರೆ. ಅವರಿಗೆ ಹೊಳೆಯುತ್ತಿರುವ ಸತ್ಯ ಕಾಂಗ್ರೆಸ್ನಲ್ಲಿ ಇತರ ನಾಯಕರಿಗೆ ಏಕೆ ಹೊಳೆಯುತ್ತಿಲ್ಲ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!