Congress Working Committee - CWC : ಖರ್ಗೆ ಟೀಮ್ ನಲ್ಲಿ ಯಾರ್ಯಾರು ?
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗು ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷದ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ರಚಿಸಿದೆ. 39 ಸದಸ್ಯರು, 32 ಕಾಯಂ ಆಹ್ವಾನಿತರು, 13 ಮಂದಿ ವಿಶೇಷ ಆಹ್ವಾನಿತರು ಇರುವ ಈ ಸಮಿತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಶೇಷ ಸಾಮರಸ್ಯದಿಂದ ರಚಿಸಿದ್ದಾರೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಪಟ್ಟಿಯಲ್ಲಿ ಹೆಚ್ಚಿನವರು ಹಿರಿಯರೇ ಇದ್ದರೂ ಕಿರಿಯರಿಗೂ ಜಾಗ ಸಿಕ್ಕಿದೆ ಎಂಬುದು ಮುಖ್ಯ. ಪಕ್ಷದೊಳಗೇ ಇರುವ ವಿಮರ್ಶಕ ನಿಲುವಿನವರಿಗೂ, ಬಂಡಾಯಗಾರರಿಗೂ ಸಿಡಬ್ಲ್ಯುಸಿಯಲ್ಲಿ ಮಣೆ ಹಾಕಲಾಗಿದೆ ಎಂಬುದು ಮತ್ತೊಂದು ವಿಶೇಷ.
ಪಕ್ಷವನ್ನು ಅತ್ಯಂತ ನಿರ್ಣಾಯಕ ಸನ್ನಿವೇಶದಲ್ಲಿ ಮುನ್ನಡೆಸುವ ಹೊಣೆ ಹೊತ್ತಿರುವ ಖರ್ಗೆಯವರು, ಮುಂಬರುವ ಕೆಲವ ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆಯನ್ನೂ ಈ ಸಮಿತಿ ರಚನೆ ವೇಳೆ ಗಮನದಲ್ಲಿಟ್ಟುಕೊಂಡಿದ್ದಾರೆ ಎಂಬುದು ಸ್ಪಷ್ಟ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಸಮಿತಿಯಲ್ಲಿದ್ದಾರೆ.
ಇವರಲ್ಲದೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಸಚಿನ್ ಪೈಲೆಟ್, ದಿಗ್ವಿಜಯ್ ಸಿಂಗ್, ಶಶಿ ತರೂರ್, ಆನಂದ ಶರ್ಮಾ, ಅಧೀರ್ ರಂಜನ್ ಚೌಧರಿ, ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಒಟ್ಟು 39 ನಾಯಕರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಕನ್ನಡಿಗ ರಾಜ್ಯಸಭೆ ಸದಸ್ಯರಾದ ಜೈರಾಮ್ ರಮೇಶ್ ಹಾಗು ಸಯ್ಯದ್ ನಾಸೀರ್ ಹುಸೇನ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಜನಪ್ರಿಯ ಯುವ ನಾಯಕ ಸಿಪಿಐ ನಿಂದ ಕಾಂಗ್ರೆಸ್ ಗೆ ಬಂದ ಕನ್ಹಯ್ಯ ಕುಮಾರ್ ಗೆ ಕಾಯಂ ಆಹ್ವಾನಿತರಾಗಿ ಸ್ಥಾನ ಸಿಕ್ಕಿದೆ. ಕೆಲವೇ ವರ್ಷಗಳ ಹಿಂದೆ ಪಕ್ಷ ಸೇರಿದ ಅವರಿಗೆ ಇದು ದೊಡ್ಡ ಹೊಣೆಗಾರಿಕೆ ಹಾಗು ಗೌರವ. ಈ ಮೂಲಕ ಕನ್ಹಯ್ಯ ಅವರ ಜನಪ್ರಿಯತೆ ಹಾಗು ಚಾಣಾಕ್ಷ ಮಾತುಗಾರಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಲು ಪಕ್ಷ ಬಯಸಿದೆ ಎಂಬುದು ಸ್ಪಷ್ಟ.
ಇನ್ನು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಥಾನ ನೀಡಲಾಗಿದೆ. ಹೊಸದಾಗಿ ಸ್ಥಾನ ಪಡೆದವರಲ್ಲಿ ಶಶಿ ತರೂರ್ ಮಾತ್ರವಲ್ಲದೆ, ದೀಪಾ ದಾಸ್ ಮುನ್ಷಿ ಮತ್ತು ಕರ್ನಾಟಕದ ಸೈಯದ್ ನಾಸಿರ್ ಹುಸೇನ್ ಕೂಡ ಸೇರಿದ್ದಾರೆ. ದೀಪಾ ದಾಸ್ ಅವರು ಪಶ್ಚಿಮ ಬಂಗಾಳದ ಮಾಜಿ ಸಂಸದೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ದಿವಂಗತ ಪ್ರಿಯರಂಜನ್ ದಾಸ್ ಮುನ್ಷಿ ಅವರ ಪತ್ನಿ.
ಸಯ್ಯದ್ ನಾಸಿರ್ ಅವರು ರಾಜ್ಯಸಭೆ ಸಂಸದರಾಗಿದ್ದು, ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಆಗಿದ್ದವರು. ಖರ್ಗೆಯವರ ಟೀಮ್ ನಲ್ಲಿ ಪ್ರಭಾವಿ ಎಂದೇ ಗುರುತಿಸಲ್ಪಟ್ಟವರು. ಕರ್ನಾಟಕದಿಂದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸ್ ಪದನಿಮಿತ್ತ ಸದಸ್ಯರಾಗಿದ್ದಾರೆ. ಹಿಂದಿನ ಸಿ ಡಬ್ಲ್ಯೂ ಸಿ ಯಲ್ಲಿದ್ದ ಕರ್ನಾಟಕದ ಕೆ ಎಚ್ ಮುನಿಯಪ್ಪ, ಎಚ್ ಕೆ ಪಾಟೀಲ್ ಹಾಗು ದಿನೇಶ್ ಗುಂಡೂರಾವ್ ಅವರನ್ನು ಹೊಸ ಸಮಿತಿಯಿಂದ ಕೈ ಬಿಡಲಾಗಿದೆ. ಮೂವರೂ ಈಗ ಸಚಿವರಾಗಿರುವುದರಿಂದ ಅವರನ್ನು ಸಮಿತಿಯ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗಿದೆ.
ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಕಾಂಗ್ರೆಸ್‌ನ 85ನೇ ಸರ್ವಸದಸ್ಯ ಅಧಿವೇಶನದ ಅಂಗವಾಗಿ ಫೆಬ್ರವರಿಯಲ್ಲಿ ನಡೆದ ಕಾಂಗ್ರೆಸ್ ಚಾಲನಾ ಸಮಿತಿ ಸಭೆ ಸಿಡಬ್ಲ್ಯುಸಿಗೆ ಸದಸ್ಯರ ನೇಮಕಕ್ಕೆ ಚುನಾವಣೆ ನಡೆಸದಿರಲು ನಿರ್ಧರಿಸಿತ್ತು.
ಸಮಿತಿಗೆ ಸದಸ್ಯರ ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಆ ಹೊಣೆಗಾರಿಕೆಯನ್ನು ಖರ್ಗೆ ನಿಭಾಯಿಸಿದ್ದಾರೆ. ಮುಖ್ಯವಾಗಿ ಇಲ್ಲೊಂದು ಸರಿ ತೂಗಿಸಿಕೊಂಡು ಹೋಗುವ ನಡೆ ಕಾಣಿಸುತ್ತದೆ. ಅಸಮಾಧಾನ ಹೊಂದಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಜೊತೆಗೆ ಕರೆದುಕೊಂಡು ಹೋಗುವ ನಿಲುವನ್ನು ಖರ್ಗೆ ಈ ಸಮಿತಿಯ ಮೂಲಕ ತೋರಿಸಿದ್ದಾರೆ.
ಮುಖ್ಯವಾಗಿ, ಕೇರಳ ಸಂಸದ ಶಶಿ ತರೂರ್ ಹಾಗೂ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ಸಿಡಬ್ಲ್ಯೂಸಿಯಲ್ಲಿ ಸೇರಿಸಿರುವುದು ಗಮನ ಸೆಳೆಯುತ್ತದೆ. ಗೊತ್ತಿರುವ ಹಾಗೆ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆಯವರ ಎದುರಾಳಿಯಾಗಿ ಶಶಿ ತರೂರ್ ಸ್ಪರ್ಧಿಸಿದ್ದರು. ಆ ಮೂಲಕ, ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಗಾಂಧಿ ಕುಟುಂಬದ ಪ್ರಯತ್ನಕ್ಕೆ ತರೂರ್ ಅಡ್ಡಗಾಲು ಹಾಕಿದ್ದರು. ಹಾಗೆ ಖರ್ಗೆಯವರ ಎದುರಾಳಿಯಾಗಿ ಸೋತಿದ್ದ ತರೂರ್ ಅವರಿಗೆ ಈಗ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಆದರೆ ಇದೊಂದು ಘನತೆಯ ನಿಲುವಾಗಿಯೂ ಗಮನ ಸೆಳೆಯುತ್ತಿದೆ.
ಇನ್ನು, ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಮತ್ತೆ ಮತ್ತೆ ಕಾಂಗ್ರೆಸ್ನ ಹಿರಿಯ ನಾಯಕ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವವರು. ಆಗಾಗ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಅದರ ಪರಿಣಾಮವಾಗಿಯೇ ಡಿಸಿಎಂ ಹುದ್ದೆಯನ್ನೂ ಕಳೆದುಕೊಂಡಿದ್ದವರು. ಈಗಲೂ ಗೆಹ್ಲೋಟ್ ಮತ್ತು ಪೈಲಟ್ ನಡುವಿನ ಕಿತ್ತಾಟ ನಿಂತಿಲ್ಲ. ಹಿರಿಯರ ಮಧ್ಯಸ್ಥಿಕೆಯಿಂದ ಅದು ಸ್ವಲ್ಪ ಶಮನವಾದಂತೆ ಕಾಣಿಸುತ್ತಿದೆ.
ಈ ನಡುವೆಯೇ ಪೈಲಟ್ ಅವರನ್ನು ಪಕ್ಷದ ಮಹತ್ವದ ಸಿಡಬ್ಲ್ಯುಸಿಗೆ ಸೇರಿಸಿಕೊಳ್ಳಲಾಗಿದೆ. ಇನ್ನೊಂದೆಡೆ, ಆನಂದ್ ಶರ್ಮಾ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಿರುವ ವಿಚಾರ. 2020ರಲ್ಲಿ ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದ ಜಿ- 23ರ ಗುಂಪಿನಲ್ಲಿದ್ದ ನಾಯಕರಲ್ಲಿ ಆನಂದ್ ಶರ್ಮಾ ಕೂಡ ಒಬ್ಬರು. ತರೂರ್ ಜೊತೆ ಈಗ ಅವರಿಗೂ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಕರ್ನಾಟಕದ ಬಿಕೆ ಹರಿಪ್ರಸಾದ್ ಅವರು ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಸಿಗದಿದ್ದುದಕ್ಕೆ ಅವರಿಗೆ ತೀವ್ರ ಅಸಮಾಧಾನವಿತ್ತು. ಅವರನ್ನೀಗ ಸಿಡಬ್ಲ್ಯುಸಿಗೆ ಸೇರಿಸಿಕೊಳ್ಳಲಾಗಿದೆ. ಇದೆಲ್ಲವೂ ಅಸಮಾಧಾನ ಇರುವವರನ್ನು ತಣಿಸುವ ಪ್ರಯತ್ನದಂತೆ ಕಾಣಿಸುತ್ತಿದ್ದರೂ, ಮುಖ್ಯವಾಗಿ ಮುಂಬರುವ ಚುನಾವಣೆಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬುದು ನಿಜ.
ಸಚಿನ್ ಪೈಲಟ್ ಅವರಿಗೆ ಸ್ಥಾನ ನೀಡಿರುವುದರಲ್ಲಿ ಈ ವಿಚಾರ ಸ್ಪಷ್ಟವಿದೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಸಂಘರ್ಷ ಬಗೆಹರಿಸುವ ಪ್ರಯತ್ನ ನಿರಂತರವಾಗಿ ನಡೆದೇ ಇದೆ. ಅವರಿಬ್ಬರೂ ಕಿತ್ತಾಡುವುದು, ಕಡೆಗೆ ನಾಯಕರ ಮಧ್ಯಸ್ಥಿಕೆಯಿಂದ ಒಂದಾದವರಂತೆ ತೋರಿಸಿಕೊಳ್ಳುವುದು ಈ ಪ್ರಹಸನದ ನಡುವೆಯೂ, ಪೈಲಟ್ ಬಂಡಾಯ ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬುದನ್ನು ನಾಯಕರು ಮರೆಯುವ ಹಾಗಿಲ್ಲ.
ಹಾಗಾಗಿಯೇ ಪೈಲಟ್ ಅಸಮಾಧಾನ ಶಮನಗೊಳಿಸಲು ಮತ್ತು ಆ ಮೂಲಕ ಚುನಾವಣೆಯಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಸಾಧ್ಯವಾಗಿಸಲು ಅವರನ್ನು ಉನ್ನತ ಸಮಿತಿಗೆ ಸೇರ್ಪಡೆ ಮಾಡಲಾಗಿದೆ. ಆದರೆ ಇದನ್ನು ಅಶೋಕ್ ಗೆಹ್ಲೋಟ್ ಯಾವ ರೀತಿ ಸ್ವೀಕರಿಸಿಯಾರು ಎಂಬ ಪ್ರಶ್ನೆಯೂ ಇದೆ. ಪಕ್ಷದಲ್ಲಿ ತಮಗೆ ಎದುರಾಳಿಯಂತಿರುವ ನಾಯಕನಿಗೆ ಉನ್ನತ ಸ್ಥಾನ ನೀಡಿರುವುದು ಗೆಹ್ಲೋಟ್ ಅವರಿಗೆ ಇರಿಸುಮುರಿಸು ತರಲಿದೆ ಎಂಬ ವಿಶ್ಲೇಷಣೆಗಳಿವೆ.
ಇದೆಲ್ಲದರ ಹೊರತಾಗಿಯೂ ಪಕ್ಷಕ್ಕೆ ಚುನಾವಣೆ ಬಹಳ ಮುಖ್ಯ. ಅದನ್ನು ಎದುರಿಸುವಾಗ ಪಕ್ಷದೊಳಗಿನ ಆಂತರಿಕ ಶಕ್ತಿಯನ್ನು ಮತ್ತು ಸಂಘಟನೆಯನ್ನು ಬಲಪಡಿಸಿಕೊಳ್ಳುವ ಅಗತ್ಯವಿರುತ್ತದೆ. ಸಮಿತಿ ರಚನೆ ವೇಳೆ ಕರ್ನಾಟಕವನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡಿರುವುದು ಕೂಡ ಕಾಣಿಸುತ್ತಿದೆ. ಬಹುಮತದ ಕಾಂಗ್ರೆಸ್ ಸರ್ಕಾರ ಬಂದಿರುವ ಹಿನ್ನೆಲೆಯಲ್ಲಿ ಮತ್ತು ಬಿಜೆಪಿಯ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಪೈಪೋಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಇದು ಪರಿಣಾಮಕಾರಿಯಾದೀತು ಎಂಬ ಲೆಕ್ಕಾಚಾರಗಳಿವೆ. ಈ ಸಮಿತಿ ಅಂಥ ಒಂದು ಸಂಘಟನಾತ್ಮಕ ಚತುರತೆಯಿಂದ ಕೂಡಿದ್ದಾಗಿದೆ ಎಂದಂತೂ ಹೇಳಬಹುದು.