ಧಾರವಾಡ: ಪ್ರಹ್ಲಾದ್ ಜೋಶಿ ನಿರಂತರ ಗೆಲುವಿಗೆ ಈ ಬಾರಿ ತಡೆ ಬಂದೀತೇ?

Update: 2024-03-10 05:31 GMT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರ ಪಕ್ಷಾಂತರದಿಂದ ರಾಜ್ಯಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಹುಬ್ಬಳ್ಳಿಯನ್ನು ಒಳಗೊಂಡ ಲೋಕಸಭಾ ಕ್ಷೇತ್ರ ಧಾರವಾಡ. ಇದು ರಾಜ್ಯ ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರುವ ಬೆಳವಣಿಗೆಗಳು, ವಿವಾದಗಳು ನಡೆದಿರುವ ಹಾಗೂ ಹಿರಿಯ ರಾಜಕಾರಣಿಗಳು ಬೆಳೆದು ಬಂದಿರುವ ಕ್ಷೇತ್ರವೂ ಹೌದು. ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ ರಾಜಕೀಯ, ಸಾಂಸ್ಕೃತಿಕ ಶಕ್ತಿ ಕೇಂದ್ರದಂತಿರುವ ಧಾರವಾಡ ಈಗ ಕೇಂದ್ರದಲ್ಲಿ ಅತ್ಯಂತ ಪ್ರಭಾವಿ ಮಂತ್ರಿಯಾಗಿರುವ ಪ್ರಹ್ಲಾದ್ ಜೋಶಿಯವರು ಪ್ರತಿನಿಧಿಸುತ್ತಿರುವ ಕ್ಷೇತ್ರ. ಸತತ ನಾಲ್ಕು ಗೆಲುವು ಸಾಧಿಸಿರುವ ಪ್ರಹ್ಲಾದ್ ಜೋಶಿ ಈ ಬಾರಿಯೂ ವಿಜಯ ಪತಾಕೆ ಹಾರಿಸುತ್ತಾರೆಯೇ? ಅಥವಾ ಕಾಂಗ್ರೆಸ್ನ ಸಂಘಟಿತ ಹೋರಾಟ ಕೊನೆಗೂ ಈ ಕ್ಷೇತ್ರದಲ್ಲಿ ಬಿಜೆಪಿ ಪಾರಮ್ಯವನ್ನು ಕೊನೆಗೊಳಿಸುತ್ತದೆಯೇ?.

ಧಾರವಾಡ ಲೋಕಸಭಾ ಕ್ಷೇತ್ರದ ಪ್ರಾಥಮಿಕ ಮಾಹಿತಿಗಳು

ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.70.16. ಈ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭೆ ಕ್ಷೇತ್ರಗಳು 8.

ಅವೆಂದರೆ, ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಕಲಘಟಗಿ ಹಾಗೂ ಶಿಗ್ಗಾಂವಿ.

4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಇನ್ನುಳಿದ 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಧಾರವಾಡ ಒಟ್ಟು 23,88,492 ಮತದಾರರಿರುವ ಈ ಲೋಕಸಭಾ ಕ್ಷೇತ್ರದಲ್ಲಿ ಪುರುಷರ ಸಂಖ್ಯೆ 15,79,024 ಇದ್ದರೆ ಮಹಿಳೆಯರ ಸಂಖ್ಯೆ 8,09,468

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ - ವೀರಶೈವರೇ ನಿರ್ಣಾಯಕರು. ಕುರುಬ ಮತ್ತು ಮುಸ್ಲಿಮ್ ಮತಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ.

ಹಿಂದಿನ ಚುನಾವಣೆಗಳ ಫಲಿತಾಂಶ ನೋಡುವುದಾದರೆ, ಪುನರ್ ವಿಂಗಡಣೆ ಬಳಿಕ 2008ರಲ್ಲಿ ಈ ಕ್ಷೇತ್ರ ರಚನೆಯಾಯಿತು. ಆನಂತರ 2009, 2014 ಮತ್ತು 2019ರಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು ಸಾಧಿಸಿದ್ದಾರೆ.


 



ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:

2009 ಬಿಜೆಪಿಗೆ ಶೇ.55.97, ಕಾಂಗ್ರೆಸ್ಗೆ ಶೇ.38.73

2014 ಬಿಜೆಪಿಗೆ ಶೇ.52.19, ಕಾಂಗ್ರೆಸ್ಗೆ ಶೇ.41.46

2019 ಬಿಜೆಪಿಗೆ ಶೇ.56.43, ಕಾಂಗ್ರೆಸ್ಗೆ ಶೇ.39.51

ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿನ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಹೈಕೋರ್ಟ್ ಸಂಚಾರಿ ಪೀಠ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಹೊಂದಿರುವ ಕ್ಷೇತ್ರ. 2008ರ ಕ್ಷೇತ್ರ ಪುನರ್ ವಿಂಗಡಣೆಗಿಂತ ಮೊದಲು ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವೆಂದು ಇದನ್ನು ಕರೆಯಲಾಗುತ್ತಿತ್ತು. ಧಾರವಾಡ ಜಿಲ್ಲೆಯ 7, ಹಾವೇರಿ ಜಿಲ್ಲೆಯ 1 ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಧಾರವಾಡ ಲೋಕಸಭಾ ಕ್ಷೇತ್ರ ರಚನೆ ಮಾಡಲಾಗಿದೆ.

ಸೋಲು ಗೆಲುವಿನ ಲೆಕ್ಕಾಚಾರ

ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿದ ಅಭಿವೃದ್ಧಿ ಕೆಲಸಗಳು ಬಿಜೆಪಿ ಕೈ ಹಿಡಿಯುವ ಸಾಧ್ಯತೆ ಹೆಚ್ಚು. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಿಂದ ಯುವಕರ ಮತಗಳು ಬಿಜೆಪಿಗೆ ಬರಬಹುದು. ಪ್ರಹ್ಲಾದ್ ಜೋಶಿಯವರ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸುವ ಸಾಮರ್ಥ್ಯದಿಂದಾಗಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿರುವ ಬಿಜೆಪಿಯ ಎದುರು ಕಾಂಗ್ರೆಸ್ ಮುಖಂಡರು ಕೂಡಾ ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಪ್ರಹ್ಲಾದ್ ಜೋಶಿ ಗೆಲುವಿನ ಓಟಕ್ಕೆ ತಡೆಯೊಡ್ಡಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರಿಗೆ ಅನ್ಯಾಯ, ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿಸಲು ಜೋಶಿ ಕಾರಣ ಎನ್ನುವ ಆರೋಪ ಕೂಡ ಬಿಜೆಪಿ ವಿರುದ್ಧ ಕೆಲಸ ಮಾಡಬಹುದು ಎಂಬ ವಾತಾವರಣವಿತ್ತು. ಬಿಜೆಪಿಯಲ್ಲಿ ಲಿಂಗಾಯತರು ಒಳಹೊಡೆತ ಕೊಟ್ಟರೆ ಜೋಶಿಗೆ ಸೋಲು ಖಚಿತ ಎಂದೂ ಹೇಳಲಾಗುತ್ತಿತ್ತು.

ಆದರೆ ಬದಲಾದ ಸನ್ನಿವೇಶದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಹಾಗಾಗಿ ಲಿಂಗಾಯತ ಫ್ಯಾಕ್ಟರ್ ಬಿಜೆಪಿ ಹಾಗೂ ಜೋಶಿಗೆ ಸಮಸ್ಯೆಯಾಗುವ ಸಾಧ್ಯತೆ ಈಗ ಕಡಿಮೆ.

ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾದ ಜೋಶಿ, ಗ್ರಾಮೀಣ ಪ್ರದೇಶಕ್ಕೆ ಒತ್ತು ನೀಡುವುದಿಲ್ಲ ಎನ್ನುವ ಅಪವಾದ ಇದೆ.ಮಹದಾಯಿ ವಿಷಯದಲ್ಲಿ ನಿರಂತರವಾಗಿ ರಾಜಕಾರಣ ನಡೆಯುತ್ತಿದ್ದು, ಇದರಿಂದಾಗಿ ಜೋಶಿ ಮೇಲೆ ರೈತ ಸಮುದಾಯ ಮುನಿಸಿಕೊಂಡಹಾಗಿದೆ.


 



ಟಿಕೆಟ್ ಆಕಾಂಕ್ಷಿಗಳು

ಬಿಜೆಪಿಯಿಂದ ಹಾಲಿ ಸಂಸದ, ಕೇಂದ್ರ ಸಚಿವ

ಪ್ರಹ್ಲಾದ್ ಜೋಶಿ ಹೆಸರು ಕೇಳಿಬರುತ್ತಿದ್ದರೆ, ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಡಝನ್ ಆಕಾಂಕ್ಷಿಗಳಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಮುಖಂಡ ಮೋಹನ್ ಲಿಂಬಿಕಾಯಿ, ವೀರಶೈವ ಲಿಂಗಾಯತ ಮುಖಂಡ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಲಿಂಗಾಯತ ಮುಖಂಡ, ಗೃಹ ಸಚಿವ ಜಿ.ಪರಮೇಶ್ವರ ಅವರ ಆಪ್ತ ರಾಜಶೇಖರ ಮೆಣಸಿನಕಾಯಿ, ಲಿಂಗಾಯತ ಮುಖಂಡ ಡಾ. ಗೌಡಪ್ಪ ಮಾಲಿ ಪಾಟೀಲ್, ಲಿಂಗಾಯತ ಮುಖಂಡ ಶರಣಪ್ಪ ಕೊಟಗಿ, ಧಾರವಾಡ ಗ್ರಾಮೀಣ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ್, ಮರಾಠಿ ಸಮುದಾಯದ ಮುಖಂಡ ಮಯೂರ ಮೋರೆ ಸೇರಿ ಹಲವರು ಟಿಕೆಟ್ ಬಯಸಿದ್ದಾರೆ.

ಬಿಜೆಪಿ ಭದ್ರಕೋಟೆ ಉಳಿಯಲಿದೆಯೇ?

ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಭದ್ರಕೋಟೆಯನ್ನು ಛಿದ್ರ ಮಾಡುವುದು ಕಾಂಗ್ರೆಸ್ಗೆ ಅಷ್ಟು ಸುಲಭದ ಮಾತಲ್ಲ. ಜೋಶಿ ಎದುರು ಸೇಡು ತೀರಿಸಿಕೊಳ್ಳಲು ಶೆಟ್ಟರ್ ಕಾಯುತ್ತಿದ್ದಾರೆ ಎಂಬ ಪರಿಸ್ಥಿತಿ ಈಗ ಬದಲಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಹೈಕಮಾಂಡ್ ಈಗಾಗಲೇ ಟಾಸ್ಕ್ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಲಾಡ್ ಸಭೆ ನಡೆಸುತ್ತಿದ್ದಾರೆ. ಅಲ್ಲದೆ ಪಕ್ಷ ಸಂಘಟನೆ ಬಗ್ಗೆ ಬೂತ್ ಮಟ್ಟದಲ್ಲಿ ಒತ್ತು ನೀಡಿದ್ದಾರೆ.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪತಿಯ ಕ್ಷೇತ್ರಕ್ಕೇ ಬರಲು ಆಗದಿದ್ದರೂ ಪ್ರಚಾರದ ಉಸ್ತುವಾರಿ ವಹಿಸಿ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬಂದ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರನ್ನೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಿಗಣಿಸಬಹುದು ಎನ್ನಲಾಗುತ್ತಿದೆ ಅಥವಾ ಪ್ರಬಲ ಅಭ್ಯರ್ಥಿ ಬೇಕೆಂದು ಶಾಸಕ ವಿನಯ್ ಕುಲಕರ್ಣಿ ಅವರನ್ನೇ ಅಭ್ಯರ್ಥಿ ಮಾಡಲು ಪರಿಗಣಿಸುವ ಸಾಧ್ಯತೆಯೂ ಇದೆ.

ವಿಧಾನ ಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ಗಾಗಿ ಟಿಕೆಟ್ ಬಿಟ್ಟುಕೊಟ್ಟ ರಜತ್ ಉಳ್ಳಾಗಡ್ಡಿಮಠ ಟಿಕೆಟ್ಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ಗೆ ಪಂಚ ಪೀಠ ಮಠಾಧೀಶರ ಬೆಂಬಲವೂ ಇದೆ ಎನ್ನಲಾಗುತ್ತಿದೆ.

ಧಾರವಾಡ ಲೋಕಸಭಾ ಕ್ಷೇತ್ರ ಲಿಂಗಾಯತರ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಲಿಂಗಾಯತರಿಗೆ ಬಿಟ್ಟುಕೊಡಬೇಕೆಂದು ಬಿಜೆಪಿ ಹೈಕಮಾಂಡ್ ಮೇಲೆ ಲಿಂಗಾಯತರು ಒತ್ತಡ ಹಾಕುತ್ತಿದ್ದಾರೆ. ಜೋಶಿಯವರಿಗೆ ಟಿಕೆಟ್ ಬೇಡ, ಲಿಂಗಾಯತರಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ನಡುವೆ ಬಿಜೆಪಿ ಲಿಂಗಾಯತರಿಗೆ ಈ ಸೀಟು ಬಿಟ್ಟುಕೊಟ್ಟು ಜೋಶಿಯವರನ್ನು ರಾಜ್ಯಸಭೆಗೆ ಕರೆಸಿಕೊಳ್ಳಬಹುದು. ಮುಂದೆ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನೂ ಮೋದಿಯವರು ಕೊಡಬಹುದು ಎಂದೂ ವದಂತಿಗಳಿವೆ.

ಆದರೆ ಪ್ರಹ್ಲಾದ್ ಜೋಶಿ ಮಾತ್ರ ಇದೆಲ್ಲವನ್ನೂ ನಿರಾಕರಿಸಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.

ಎಲ್ಲವೂ ಸೇರಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಹರೀಶ್ ಎಚ್.ಕೆ.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!