ವಿಪಕ್ಷ ನಾಯಕರು ನೀಡಿದ ಸಲಹೆಗಳನ್ನು ಸ್ಪೀಕರ್ ಗಣನೆಗೆ ತೆಗೆದುಕೊಂಡಾರೇ?
ಓಂ ಬಿರ್ಲಾ ಅವರು ಮತ್ತೊಮ್ಮೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಆ ವಿಷಯ ಹೆಚ್ಚು ಸುದ್ದಿಯಾಗಿಲ್ಲ. ಆದರೆ ಅವರ ಮೊದಲ ಅವಧಿಯ ಬಗ್ಗೆ, ಆಗ ಏನೇನಾಯಿತು ಎಂದು ಪ್ರತಿಪಕ್ಷಗಳು ನೆನಪಿಸಿದ್ದಿದೆಯಲ್ಲ..., ಅದು ದೊಡ್ಡ ಘಟನೆಯಾಗಿದೆ.
‘‘ತಟಸ್ಥರಾಗಿರಿ’’, ‘‘ತಾರತಮ್ಯ ಮಾಡಬೇಡಿ’’, ‘‘ಪ್ರಜಾಪ್ರಭುತ್ವವನ್ನು ಹಿಂದಕ್ಕೆ ಕೊಂಡೊಯ್ಯಬೇಡಿ...’’ ಇಂಥ ಹಲವು ನೇರನಿಷ್ಠುರ ಸಲಹೆಗಳನ್ನು ತಮ್ಮನ್ನು ಸ್ವಾಗತಿಸುತ್ತ ವಿಪಕ್ಷ ನಾಯಕರು ಮಾಡಿದ ಭಾಷಣಗಳಲ್ಲಿ ಸ್ಪೀಕರ್ ಓಂ ಬಿರ್ಲಾ ಕೇಳಿಸಿಕೊಳ್ಳಬೇಕಾಯಿತು.
ಪ್ರತಿಪಕ್ಷಗಳು 2019ರಿಂದ 2024ರ ಅವಧಿಯ ನಡುವಿನ ಅನೇಕ ಘಟನೆಗಳನ್ನು ಪ್ರಸ್ತಾಪಿಸಿದಾಗ, ಸ್ಪೀಕರ್ ಕೂಡ ತಮ್ಮ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ನೆನಪಿಸುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ಕೊಡಲು ನೋಡಿದರು.
ಆದರೆ ಕಳೆದ ಅವಧಿಯಲ್ಲಿ ದಾಖಲೆಯ 140 ಸಂಸದರನ್ನು ಅಮಾನತು ಮಾಡಿದ್ದನ್ನು ಅವರು ಮರೆಯುವಂತಿಲ್ಲ. ಹಾಗಾಗಿಯೇ ವಿಪಕ್ಷ ನಾಯಕರು ಅವರಿಗೆ ಒಂದೊಂದನ್ನೂ ನೆನಪಿಸುತ್ತಾ, ಮತ್ತೆ ಅಂಥದೇ ಅನ್ಯಾಯಗಳು ನಡೆಯದಂತೆ ನೋಡಿಕೊಳ್ಳಿ ಎಂದದ್ದು ಮಹತ್ವದ ವಿಚಾರ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ವಿಪಕ್ಷಗಳಿಗೆ ದನಿ ಕೊಟ್ಟಿದೆ. ಅವು ಗಟ್ಟಿ ಧ್ವನಿಯಲ್ಲಿ ಮಾತಾಡುವ ಹಾಗೆ ಮಾಡಿದೆ.
ಇದೇ ಲೋಕಸಭೆಯಲ್ಲಿ ಹಿಂದಿನ ಅವಧಿಯಲ್ಲಿ ಏನೇನೆಲ್ಲವನ್ನೂ ನೋಡಬೇಕಾಗಿ ಬಂತು? ವಿಪಕ್ಷಗಳ ನಾಯಕರು ಮಾತನಾಡಲು ನಿಂತರೆ ಅವರ ಮೈಕ್ಗಳ ಆಡಿಯೋ ಇದ್ದಕ್ಕಿದ್ದಂತೆ ಇಲ್ಲವಾಗುತ್ತಿತ್ತು.
ರಾಹುಲ್ ಗಾಂಧಿ ಮಾತನಾಡಲು ನಿಂತರೆ ಆಗ ಲೋಕಸಭೆ ಕ್ಯಾಮರಾ ಅವರನ್ನು ತೋರಿಸುವ ಬದಲು ಅವರ ಜಾಗದಲ್ಲಿ ಸ್ಪೀಕರ್ ಅವರನ್ನೇ ಮತ್ತೆ ಮತ್ತೆ ತೋರಿಸುತ್ತಿದ್ದವು.
ಸಂಸತ್ತಿನ ಎರಡೂ ಸದನಗಳಿಂದ ದಾಖಲೆ ಸಂಖ್ಯೆಯಲ್ಲಿ ಸಂಸದರನ್ನು ಹೊರಹಾಕಲಾಗಿತ್ತು. ವಿಪಕ್ಷಗಳ ಸದಸ್ಯರೇ ಇಲ್ಲದೆ ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಲಾಗಿತ್ತು.
ಆದರೆ ಬಹಳ ಬೇಗ ಸಮಯ ಬದಲಾಗಿದೆ. ಈಗ ವಿಪಕ್ಷಗಳು ಮಾತಾಡುತ್ತಿವೆ ಮತ್ತು ಬಹಳ ಸ್ಪಷ್ಟ ಮತ್ತು ದಿಟ್ಟ ದನಿಯಲ್ಲಿ ಮಾತನಾಡುತ್ತಿವೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಆಡಿದ ಮಾತುಗಳು ಅತ್ಯಂತ ಮಹತ್ವದವಾಗಿದ್ದವು.
‘‘ಎಷ್ಟು ಪರಿಣಾಮಕಾರಿಯಾಗಿ ಸದನವನ್ನು ನಡೆಸಲಾಗುತ್ತದೆ ಎಂಬುದು ಪ್ರಶ್ನೆಯಲ್ಲ. ಆದರೆ ಎಷ್ಟು ಜನರ ದನಿಗೆ ಸದನದಲ್ಲಿ ಅವಕಾಶ ಮಾಡಿಕೊಡಲಾಯಿತು ಎಂಬುದು ಮುಖ್ಯ’’ ಎಂದು ರಾಹುಲ್ ಹೇಳಿದರು.
‘‘ನೀವು ವಿಪಕ್ಷ ಸದಸ್ಯರ ಬಾಯಿ ಮುಚ್ಚಿಸಿ ಸದನವನ್ನು ಪರಿಣಾಮಕಾರಿಯಾಗಿ ನಡೆಸಬಹುದು. ಆದರೆ ಅದು ಪ್ರಜಾಸತ್ತಾತ್ಮಕವಲ್ಲ. ಈ ದೇಶದ ಸಂವಿಧಾನವನ್ನು ವಿಪಕ್ಷಗಳು ರಕ್ಷಿಸಿಕೊಳ್ಳಲು ಅವಕಾಶವಾಗಬೇಕೆಂಬುದನ್ನು ಈ ಸಲದ ಫಲಿತಾಂಶ ತೊರಿಸಿದೆ’’ ಎಂದರು ರಾಹುಲ್ ಗಾಂಧಿ.
ವಿಪಕ್ಷಗಳಿಗೆ ಮಾತನಾಡುವ ಮತ್ತು ದೇಶದ ಜನತೆಯ ದನಿಯನ್ನು ಪ್ರತಿನಿಧಿಸುವ ಅವಕಾಶ ಮಾಡಿಕೊಡುವ ಮೂಲಕ ನೀವು ದೇಶದ ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡುವುದು ಸಾಧ್ಯ, ಜನರ ಪರ ದನಿಯೆತ್ತಲು ವಿರೋಧ ಪಕ್ಷಗಳಿಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸುವುದಾಗಿ ಹೇಳಿದರು. ಲೋಕಸಭೆ ಕಲಾಪಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಅವರು ಆಶಿಸಿದರು.
‘‘ಈ ಸದನ ದೇಶವನ್ನು ಪ್ರತಿನಿಧಿಸುತ್ತದೆ. ಸರಕಾರ ರಾಜಕೀಯ ಶಕ್ತಿಯನ್ನು ಖಂಡಿತ ಹೊಂದಿದೆ. ಆದರೆ ವಿರೋಧ ಪಕ್ಷಗಳು ಸಹ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ವಿರೋಧ ಪಕ್ಷಗಳು ನಿಮ್ಮ ಕೆಲಸಗಳಿಗೆ ನೆರವಾಗಲು ಬಯಸುತ್ತವೆ. ವಿರೋಧ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚು ಭಾರತೀಯರನ್ನು ಈ ಬಾರಿ ಪ್ರತಿನಿಧಿಸಲಿವೆ. ಹಾಗಾಗಿ ‘ಇಂಡಿಯಾ’ ಬಣದ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವುದು ಅಗತ್ಯ’’ ಎಂದು ರಾಹುಲ್ ಹೇಳಿದರು.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಸ್ಪೀಕರ್ ಆಗಿ ಎಲ್ಲ ಸಂಸದರಿಗೂ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ನೀಡುವಂತೆ ಮನವಿ ಮಾಡಿದರು.
‘‘ಲೋಕತಂತ್ರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ ಕೂತಿದ್ದೀರಿ. ನೀವು ಕುಳಿತಿರುವ ಹುದ್ದೆಗೆ ದೊಡ್ಡ ಪರಂಪರೆಯಿದೆ’’ ಎಂದು ನೆನಪಿಸಿದರು.
‘‘ನಿಷ್ಪಕ್ಷಪಾತವೇ ಈ ಮಹತ್ತರ ಹುದ್ದೆಯ ಮಹತ್ತರ ಹೊಣೆಗಾರಿಕೆ. ಯಾವುದೇ ಜನಪ್ರತಿನಿಧಿಯ ಧ್ವನಿಗೆ ಕಡಿವಾಣ ಹಾಕಬಾರದು, ಉಚ್ಚಾಟನೆಯಂತಹ ಕ್ರಮ ಮತ್ತೆ ನಡೆಯಬಾರದು ಎಂದು ನಿರೀಕ್ಷಿಸುತ್ತೇವೆ’’ ಎಂದು ಅಖಿಲೇಶ್ ಹೇಳಿದರು.
‘‘ನೀವು ಯಾವಾಗಲೂ ವಿಪಕ್ಷಗಳನ್ನೇ ನಿಯಂತ್ರಿಸಿದ್ದೀರಿ. ಆದರೆ ಈ ಬಾರಿ ಆಡಳಿತ ಪಕ್ಷದ ಸಂಸದರನ್ನೂ ನಿಯಂತ್ರಿಸುತ್ತೀರಿ ಎಂದು ಆಶಿಸುತ್ತೇವೆ’’ ಎಂದರು.
‘‘ಸದನ ನಿಮ್ಮ ಸಂಕೇತಗಳ ಮೇಲೆ ಕಾರ್ಯನಿರ್ವಹಿಸಬೇಕೇ ಹೊರತು ಬೇರೆ ರೀತಿಯಲ್ಲಿ ಅಲ್ಲ. ನಿಮ್ಮ ಎಲ್ಲಾ ನ್ಯಾಯಯುತ ನಿರ್ಧಾರಗಳ ಜೊತೆಗೆ ನಾವಿರುತ್ತೇವೆ’’ ಎಂದರು.
‘‘ನೀವು ಆಡಳಿತ ಪಕ್ಷವನ್ನು ಗೌರವಿಸುವಂತೆಯೇ ಪ್ರತಿಪಕ್ಷಗಳನ್ನೂ ಗೌರವಿಸುತ್ತೀರಿ ಮತ್ತು ಅವರು ಮಾತನಾಡಲು ಅವಕಾಶ ಮಾಡಿಕೊಡುತ್ತೀರಿ ಎಂದು ನಾನು ಭಾವಿಸುತ್ತೇನೆ’’ ಎಂದು ಅಖಿಲೇಶ್ ಹೇಳಿದರು.
ಡಿಎಂಕೆ ಸದಸ್ಯ ಬಾಲು, ‘‘ಸ್ಪೀಕರ್ ಹುದ್ದೆಯಲ್ಲಿ ಕುಳಿತಿರುವ ನೀವು ಈಗ ಯಾವುದೇ ಪಕ್ಷದ ಸದಸ್ಯರಲ್ಲ’’ ಎಂದರು.
‘‘ನೀವು ತಾವರೆ ಚಿಹ್ನೆ ಮೇಲೆ ಆರಿಸಿ ಬಂದಿದ್ದೀರಿ. ತಾವರೆ ಯಾವಾಗಲೂ ನೀರಿನ ಮೇಲೆ ತೇಲುತ್ತಿರುತ್ತದೆ. ಆದರೂ ಅದು ನೀರನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ನಿಮ್ಮ ಮತ್ತು ಆಡಳಿತ ಪಕ್ಷದ ನಡುವೆ ಯಾವುದೇ ರಾಜಕೀಯ ಇರಕೂಡದು. ವಿಪಕ್ಷಗಳನ್ನೂ ಸಮಾನವಾಗಿ ಕಾಣಬೇಕು. ದಯವಿಟ್ಟು ನಿಷ್ಪಕ್ಷವಾಗಿರಿ’’ ಎಂದರು.
ಎನ್ಸಿಪಿ ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಮಾತನಾಡಿ, ಕಳೆದ ಬಾರಿ 150 ಸಂಸದರು ಅಮಾನತಾದ ಸಂದರ್ಭವನ್ನು ನೆನೆದು ಬೇಸರ ವ್ಯಕ್ತಪಡಿಸಿದರು. ಅಂಥದ್ದು ಮತ್ತೆ ನಡೆಯದಿರಲಿ. ಸದನದಲ್ಲಿ ಸಂವಾದ ಮಹತ್ವವಾಗಿದ್ದು, ಅದಕ್ಕೆ ಒತ್ತು ನೀಡುವಂತಾಗಲಿ ಎಂದರು.
ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಸದನ ವಿಪಕ್ಷಗಳಿಗೆ ಸೇರಿದ್ದು. ನಿಮಗೆ ಒಳ್ಳೆಯ ಉದ್ದೇಶವೇ ಇರಬಹುದು. ಆದರೆ ಕೆಲವು ಸಲ ಆಡಳಿತ ಪಕ್ಷದ ಇಷಾರೆಗಳಿಗೆ ಮಣಿಯುವಂತಾಗುತ್ತದೆ. 140 ಸಂಸದರ ಅಮಾನತು ಒಂದೇ ದಿನದಲ್ಲಿ ನಡೆಯಿತು. ಇದು ಅಪೇಕ್ಷಣಿಯವಲ್ಲ. ಮಸೂದೆಗಳನ್ನು ಬರೀ ಪರಿಚಯಿಸಿ, ಯಾವುದೇ ಚರ್ಚೆಯಿಲ್ಲದೆ ಪಾಸು ಮಾಡಲಾಯಿತು ಎಂದು ನೋವಿನಿಂದ ನೆನಪಿಸಿಕೊಂಡರು.
ಶಿವಸೇನೆ ಠಾಕ್ರೆ ಬಣದ ಅರವಿಂದ್ ಗಣಪತ್ ಸಾವಂತ್, ‘‘ಸೌಹಾರ್ದ ಬೇಕಿದೆ, ದ್ವೇಷವಲ್ಲ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಕಣ್ಣೀರು ಹಾಕುವವರಿರಲಿಲ್ಲ ಎಂಬುದಕ್ಕಾಗಿ ದುಃಖವಾಗುತ್ತದೆ, ರೈತರು ಪ್ರತಿಭಟಿಸುತ್ತಿದ್ದರೆ ಸ್ಪಂದಿಸುವವರಿರಲಿಲ್ಲ ಎಂಬುದಕ್ಕೆ ಸಂಕಟವಾಗುತ್ತದೆ. ನಿರುದ್ಯೋಗಿ ಯುವಕರು ಅಲೆಯುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಿಲ್ಲವೆನ್ನುವಾಗ ಬೇಸರವಾಗುತ್ತದೆ. ಈ ಅವಧಿಯಲ್ಲಿ ಎಲ್ಲವೂ ಬದಲಾಗಲಿ’’ ಎಂದರು.
ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ, ‘‘ವಿಪಕ್ಷಗಳಿಗೆ ಅವಕಾಶ ಮಾಡಿಕೊಡಿ. ಈ ಸದನದ ಸ್ವರೂಪವೇ ಬದಲಾಗಬೇಕಿದೆ’’ ಎಂದರು.
ಇದೆಲ್ಲದರ ಹೊರತಾಗಿಯೂ, ಹಿಂದಿನ ಲೋಕಸಭೆಯಲ್ಲಿ ಏನಾಗಿತ್ತೆಂಬ ಸತ್ಯವೂ ಇದೇ ಸ್ಪೀಕರ್ ಕಣ್ಣೆದುರು ಇದೆ ಮತ್ತು ಆ ಕರಾಳ ಸತ್ಯವನ್ನು ಕೂಡ ಅವರು ಮರೆಯುವಂತಿಲ್ಲ.
ಹಿಂದಿನ ಸ್ಪೀಕರ್ ಅವರನ್ನೇ ಮುಂದುವರಿಸುವ ಮೂಲಕ ಬಿಜೆಪಿ ಈ ಹಿಂದೆ ಮಾಡಿದಂತೆ, ವಿಪಕ್ಷ ಸಂಸದರು ಮಾತನಾಡುವಾಗ ಮೈಕ್ ಬಂದ್ ಮಾಡುವುದೇ? ಪ್ರಧಾನಿ ಮೋದಿ ಈ ಸಲ ಜನರು ಕಲಿಸಿದ ಪಾಠದ ಬಳಿಕವೂ ಬದಲಾಗಿಲ್ಲವೇ? ಮುಂದಿನ ದಿನಗಳು ಹೇಗಿರುತ್ತವೆ ಎಂದು ಕಾದು ನೋಡಬೇಕಿದೆ.