2029 ರಲ್ಲಿ ಈಗಿನಂತೆ ನಡೆಯೋದಿಲ್ಲ ಚುನಾವಣೆ ?

Update: 2024-03-06 05:21 GMT
Editor : Ismail | Byline : ಆರ್. ಜೀವಿ

2024ರದ್ದೇ, ಈವರೆಗೆ ನಡೆದುಕೊಂಡು ಬಂದಿರುವ ರೀತಿಯ ಕೊನೆಯ ಚುನಾವಣೆ ಆಗಲಿದೆಯೇ ?. ಈ ಚುನಾವಣೆಯಲ್ಲಿ ಮೋದಿ ಗೆದ್ದರೆ ಬಳಿಕ ದೇಶದ ಸಂವಿಧಾನ, ಚುನಾವಣಾ ವ್ಯವಸ್ಥೆ ಎಲ್ಲವೂ ಬದಲಾಗಲಿದೆಯೇ ?.ಗಣಿಗಾರಿಕೆ ಸಹಿತ ನೈಸರ್ಗಿಕ ಸಂಪನ್ಮೂಲಗಳಿಂದ ಬರುವ ಆದಾಯದ  ಮೇಲೆ ರಾಜ್ಯಗಳ ಪಾಲು ಸಂಪೂರ್ಣ ಇಲ್ಲವಾಗುವುದೇ ?.ಖಾಸಗೀಕರಣಕ್ಕೆ ಸಂಪೂರ್ಣ ಮುಕ್ತ ಅವಕಾಶ ನೀಡಲಾಗುವುದೇ ?.

ಸಂವಿಧಾನದಲ್ಲಿ ಹಲವು ತಿದ್ದುಪಡಿಗಳಾಗಲಿವೆಯೇ ?.ಸಂಸತ್ತಿನೆದುರು ಸಂವಿಧಾನವೂ ಏನೂ ಇಲ್ಲದಂತಾಗುವುದೇ ? ಸಂಸತ್ತೇ ಸರ್ವಶಕ್ತವಾಗಲಿದೆಯೇ ?.ಇಂತಹ ಪ್ರಶ್ನೆಗಳು ಈಗ ಚರ್ಚೆಗೆ ಬಂದಿವೆ.

ಅದಕ್ಕೆ ಕಾರಣ ಈಗ ಸುಪ್ರೀಮ್ ಕೋರ್ಟ್ ನಲ್ಲೇ ಮೋದಿ ಸರಕಾರ ನೀಡುತ್ತಿರುವ ಹೇಳಿಕೆ ಹಾಗೂ ಮಾಡುತ್ತಿರುವ ವಾದ. ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಗಣಿಗಾರಿಕೆಯಿಂದ ಬರುವ ಆದಾಯಕ್ಕೆ ಸಂಬಂಧಿಸಿ ಬದಲಾವಣೆಗೆ ಅವಕಾಶವಿದೆ ಎಂದು ಅಟಾರ್ನಿ ಜನರಲ್ ಮುಖ್ಯ ನ್ಯಾಯಮೂರ್ತಿ ಸಹಿತ ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ಹೇಳುತ್ತಿದ್ದಾರೆ.

ಈಗ ರಾಜ್ಯಗಳಿಗೆ ತಮ್ಮಲ್ಲಿ ಆಗುತ್ತಿರುವ ಗಣಿಗಾರಿಕೆಯಲ್ಲಿ ಕೇಂದ್ರ ನಿರ್ಧರಿಸಿರುವ ರಾಯಲ್ಟಿ ಅಥವಾ ರಾಜಧನ ಪಡೆಯುವ ಹಕ್ಕಿದೆ.

ಆದರೆ ಈ ವ್ಯವಸ್ಥೆಯನ್ನು ಬದಲಾಯಿಸಿ ಗಣಿಗಾರಿಕೆಯ ಸಂಪೂರ್ಣ ಆದಾಯ ಕೇಂದ್ರಕ್ಕೆ ಸಿಗುವ ಹಾಗೆ ಮಾಡಲು ತಯಾರಿ ನಡೆದಿದೆಯೇ ?

ಕೇಂದ್ರ ಹಾಗೂ ರಾಜ್ಯಗಳಿಗೆ ಯಾವ್ಯಾವ ಹಕ್ಕುಗಳಿವೆ ಎಂದು ಸಂವಿಧಾನದಲ್ಲಿ ಹೇಳಲಾಗಿರುವ ಬಗ್ಗೆ ಮೊನ್ನೆ ಸುಪ್ರೀಮ್ ಕೋರ್ಟಿನಲ್ಲಿ ಒಂಬತ್ತು ಸದಸ್ಯರ ಪೀಠ ಹಾಗೂ ಮೋದಿ ಸರಕಾರದ ನಡುವೆ ದೊಡ್ಡ ಚರ್ಚೆ ನಡೆದಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಡಿ. ವೈ ಚಂದ್ರಚೂಡ್ ಅವರಿದ್ದ ಪೀಠದಲ್ಲಿ ನ್ಯಾ. ಋಷಿಕೇಶ್ ರಾಯ್, ನ್ಯಾ. ಎ ಎಸ್ ಓಕಾ, ನ್ಯಾ. ನಾಗರತ್ನ, ನ್ಯಾ. ಪಾರ್ದಿವಾಲ, ನ್ಯಾ. ಮನೋಜ್ ಮಿಶ್ರಾ, ನ್ಯಾ. ಉಜ್ವಲ್ ಭುಯಾನ್, ನ್ಯಾ. ಆಗಸ್ಟೀನ್ ಜಾರ್ಜ್ ಮಾಸಿಹ್, ನ್ಯಾ. ಸತೀಶ್ ಚಂದ್ರ ಶರ್ಮಾ ಇದ್ದರು. ಈ ಪೀಠದೆದುರು ಮೋದಿ ಸರಕಾರದ ಪರವಾಗಿ ಅಟಾರ್ನಿ ಜನರಲ್ ಆರ್‌ ವೆಂಕಟರಮಣಿ ವಾದ ಮಂಡಿಸುತ್ತಿದ್ದರು.

ಅಲ್ಲಿ ಮೋದಿ ಸರಕಾರದ ವಾದಗಳನ್ನು ಗಮನಿಸಿದರೆ ಅದರ ಉದ್ದೇಶದ ಬಗ್ಗೆಯೇ ಅನುಮಾನಗಳು ಏಳುತ್ತವೆ. ದೇಶದ ಒಕ್ಕೂಟ ವ್ಯವಸ್ಥೆಗೆ ದೊಡ್ಡ ಅಪಾಯ ಎದುರಾಗುವ ಎಲ್ಲ ಸೂಚನೆಗಳೂ ಕಾಣಿಸತೊಡಗಿವೆ. ಈ ಚುನಾವಣೆಯನ್ನು ಗೆಲ್ಲುವುದರ ಬೆನ್ನಲ್ಲೇ ಇವೆಲ್ಲವನ್ನೂ ಜಾರಿಗೆ ತರಲು ಮೋದಿ ಸರ್ಕಾರ ಒಳಗೊಳಗೆ ತಯಾರಾಗುತ್ತಿರುವ ಸುಳಿವುಗಳಿವೆ. ಇದೇ ಈ ರೀತಿಯ ಕಡೆಯ ಚುನಾವಣೆಯಾಗಿಬಿಟ್ಟರೆ ಸಂಸದೀಯ ರಾಜಕಾರಣ ಸಂಪೂರ್ಣ ಬದಲಾಗಿ ಹೋಗಲಿದೆ.

ಒಕ್ಕೂಟ ವ್ಯವಸ್ಥೆಯೂ ಬದಲಾಗುವ ಸಾಧ್ಯತೆ ಇದೆ. ಮತ್ತಿವನ್ನೆಲ್ಲ ಕಾನೂನುಬದ್ಧವಾಗಿಯೇ ಮಾಡುವ ತಯಾರಿ ನಡೆದಿದೆ. 2029 ಕ್ಕೆ ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ಅದರ ಜೊತೆಗೆ ದೇಶದ ಎಲ್ಲ ವಿಧಾನ ಸಭೆಗಳಿಗೂ ಒಟ್ಟಿಗೇ ಒಂದೇ ಬಾರಿ ಚುನಾವಣೆ ನಡೆಸುವ ಸಾಧ್ಯತೆಯೂ ಇದೆ. ಹೀಗಾದರೆ ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿ ನಿರ್ಮಾಣವಾಗುತ್ತದೆ.

ಕಾರ್ಮಿಕರ ಅತ್ಯಲ್ಪ ಗಳಿಕೆ ಬಗ್ಗೆ ಕೇಳಲಾಗದು. ರೈತರ ಸ್ಥಿತಿ ಇನ್ನಷ್ಟು ದಿಕ್ಕೆಡಲಿದೆ. ಉದ್ಯೋಗಗಳ ಬಗ್ಗೆ ಕೇಳುವಂತಿಲ್ಲ. ಉತ್ಪಾದನೆ ಬಗ್ಗೆ ಮಾತನಾಡುವುದು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮೋದಿ ಹೇಳುತ್ತಿದ್ದಾರೆ. ಅದಕ್ಕೆ ಮೋದಿ ಗ್ಯಾರಂಟಿಗಳ ಮೇಲೆ ದೇಶದ ಜನರಿಗೆ ಭರವಸೆ ಮೂಡಿರುವುದು ಕಾರಣ ಎಂತಲೂ ಅವರೇ ಹೇಳುತ್ತಾರೆ. ಇಂಥದೊಂದು ಗೆಲುವು ಬಿಜೆಪಿಗೆ ಸಿಕ್ಕಿಬಿಟ್ಟರೆ ಏನೇನಾಗಿ ಹೋಗಬಹುದು? ಅದು ದೇಶವನ್ನು ಎಲ್ಲಿಗೆ ಒಯ್ಯಬಹುದು?

ಈ ಚುನಾವಣೆಯನ್ನು ಗೆದ್ದ ಬಳಿಕ ಇಡೀ ಚುನಾವಣಾ ವ್ಯವಸ್ಥೆಯೇ ಹೇಗೆ ಬದಲಾಗಿಹೋಗಬಹುದು? ಮೂರು ಮುಖ್ಯ ಬದಲಾವಣೆಗಳು ಮಂಬರುವ ದಿನಗಳಲ್ಲಿ ಇಡೀ ವ್ಯವಸ್ಥೆಯನ್ನು ಆಕ್ರಮಿಸಲಿವೆ ಎನ್ನಲಾಗುತ್ತಿದೆ. ಮೊದಲನೆಯದು, ಗಣಿಗಾರಿಕೆ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮೂಲಕ ಬರುವ ಆದಾಯದ ಮೇಲೆ ರಾಜ್ಯಗಳ ಹಿಡಿತ ತಪ್ಪಿಹೋಗಿ, ಅದು ಪೂರ್ತಿಯಾಗಿ ಕೇಂದ್ರದ ಹಿಡಿತಕ್ಕೆ ಬರಲಿದೆ.

ಅದಾನಿಯಂಥವರು ಆ ವಲಯದಲ್ಲಿ ಇನ್ನಷ್ಟು ಗಟ್ಟಿಯಾಗಿ ತಳವೂರಲಿದ್ದಾರೆ. ಒಡಿಶಾ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶದಂಥ ರಾಜ್ಯಗಳ ನೈಸರ್ಗಿಕ ಸಂಪತ್ತೆಲ್ಲವೂ ಕೇಂದ್ರದ ಹಿಡಿತಕ್ಕೆ ಹೋಗುವ ಅಪಾಯ ಎದುರಾಗಲಿದೆ.

ಎಲ್ಲವೂ ಕೇಂದ್ರದ ಕೈಯಲ್ಲಿರಲಿದೆ. ಎರಡನೆಯದಾಗಿ, ಖಾಸಗೀಕರಣ ಅಥವಾ ಕಾರ್ಪೊರೇಟೀಕರಣ.

ಈಗಾಗಲೇ ದೇಶದಲ್ಲಿ ಸಾರ್ವಜನಿಕ ವಲಯದ ಸ್ಥಿತಿ ದಯನೀಯವಾಗಿದೆ. ಸಾರ್ವಜನಿಕ ವಲಯದ ಹಿತಾಸಕ್ತಿಯನ್ನು ಕಾರ್ಪೊರೇಟ್ ವಲಯವನ್ನು ಸಾಕುವುದಕ್ಕಾಗಿ ಹೆಚ್ಚುಕಡಿಮೆ ಮಾರಿಕೊಳ್ಳಲಾಗಿದೆ. ಇದರೊಂದಿಗೆ ದೇಶ ಪೂರ್ತಿಯಾಗಿ ಖಾಸಗಿ ಉದ್ಯಮ ವಲಯದ ದೈತ್ಯರ ಕೈಯಲ್ಲಿ ಹೋಗಬಹುದಾದ ಅಪಾಯ ಇದೆ. ಮೂರನೆಯದಾಗಿ, ಒಂದು ರಾಷ್ಟ್ರ ಒಂದು ಚುನಾವಣೆ ಇಡೀ ಒಕ್ಕೂಟ ವ್ಯವಸ್ಥೆಯನ್ನೇ ಬದಲು ಮಾಡಿಬಿಡಲಿದೆ. ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ಎಲ್ಲವೂ ಏಕಕಾಲಕ್ಕೆ ನಡೆಯಲಿದೆ.

ಈಗಾಗಲೇ ದೇಶದ ಬಡವರು, ಶೋಷಿತರು, ರೈತರನ್ನೆಲ್ಲ ನಿರ್ಲಕ್ಷಿಸಿರುವ ಮೋದಿ ಸರ್ಕಾರ ಒಂದೇ ರಾಷ್ಟ್ರ ಒಂದೇ ಚುನಾವಣೆ ನೀತಿ ಮೂಲಕ ಇನ್ನಷ್ಟು ಪ್ರಬಲವಾಗಲಿದೆ. ಆಗ ಇವರಾರೂ ಪ್ರಶ್ನಿಸುವುಕ್ಕೂ ಆಗದ ಸ್ಥಿತಿ ತಲೆದೋರಲಿದೆ. ಈಗಾಗಲೇ ದಮನ ನೀತಿಯಲ್ಲಿ ಭಾರೀ ಮುಂದಿರುವ ಮೋದಿ ಸರ್ಕಾರವನ್ನು ಅನಂತರ ಹಿಡಿಯುವುದೇ ಆಗಲಾರದು ಎಂಬುದು ಊಹೆಗೆ ನಿಲುಕದೇ ಇರುವ ವಿಚಾರವೇನಲ್ಲ.

ರೈತರಿಗೆ ವಂಚನೆ ಎಸಗಿರುವ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹೇಳುತ್ತಿರುವುದು ಈ ಹಿನ್ನೆಲೆಯಲ್ಲಿ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ.

ಮೋದಿ ಮತ್ತೆ ಗೆದ್ದರೆ ದೇಶದಲ್ಲಿ ಚುನಾವಣೆಯೇ ನಡೆಯುವುದಿಲ್ಲ. ಅವರು ಮತ್ತಷ್ಟು ಸರ್ವಾಧಿಕಾರಿಯಾಗುತ್ತಾರೆ ಎಂಬ ಕಳವಳವನ್ನು ಖರ್ಗೆ ವ್ಯಕ್ತಪಡಿಸುತ್ತಲೇ ಇದ್ದಾರೆ. ಮಾಧ್ಯಮ, ನ್ಯಾಯಾಂಗ, ಈಡಿ, ಐಟಿ ಎಲ್ಲವನ್ನೂ ಹತೋಟಿಗೆ ತೆಗೆದುಕೊಂಡಿರುವ ಮೋದಿ ದೇಶವನ್ನೇ ನಿಯಂತ್ರಿಸಲು ಹೊರಟಿದ್ದಾರೆ. ಅವರನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಬೇಡಿ ಎಂದು ಖರ್ಗೆ ಹೇಳಿದ್ದಾರೆ.

ಆದರೆ ಈಗ ಕಾಣಿಸುತ್ತಿರುವ ಸೂಚನೆಗಳು ಮೋದಿ ಮತ್ತು ಸಂಸತ್ತು ಇನ್ನಷ್ಟು ಅಧಿಕಾರಯುತವಾಗಬಲ್ಲ ಸಾಧ್ಯತೆಯನ್ನೇ ಹೇಳುತ್ತಿವೆ. ದೇಶದ ಆರ್ಥಿಕತೆ ಬಗ್ಗೆ ದೊಡ್ಡ ದೊಡ್ಡ ಮಾತಾಡುತ್ತಿರುವ ಮೋದಿ, ಟ್ರಿಲಿಯನ್ಗಳ ಲೆಕ್ಕ ಕೊಡುತ್ತಿರುವ ಮೋದಿ ಹೇಳುತ್ತಿರುವುದಕ್ಕೂ ವಾಸ್ತವಕ್ಕೂ ಅಗಾಧ ಅಂತರವಿದೆ.

ಉತ್ಪಾದನೆ, ನಿರ್ಮಾಣ, ವ್ಯಾಪಾರ, ಸಾರಿಗೆ, ಕೃಷಿ ಮುಂತಾದ ವಲಯಗಳಲ್ಲಿನ ಸ್ಥಿತಿಯೇ ಬೇರೆ, ಮೋದಿ ಕೊಡುತ್ತಿರುವ ಅಂಕಿಅಂಶಗಳೇ ಬೇರೆ. ಪೂರ್ತಿ ಹದಗೆಟ್ಟಿರುವ ಅರ್ಥ ವ್ಯವಸ್ಥೆಯ ವಾಸ್ತವಾಂಶವನ್ನು ಮರೆಮಾಚಿ, ಮೂರನೇ ಆರ್ಥಿಕತೆ ಎಂದೆಲ್ಲ ಹೇಳಲಾಗುತ್ತಿರುವ ಭಂಡತನವನ್ನು ನೋಡುತ್ತಿದ್ದೇವೆ.

ಮೋದಿ ಇನ್ನಷ್ಟು ಪ್ರಬಲರಾದರೆ, ಸಂಸತ್ತು ಇನ್ನಷ್ಟು ಪ್ರಬಲವಾದರೆ, ಸಂಸತ್ತಿನ ವ್ಯಾಖ್ಯೆಯೇ ಬದಲಾಗಲಿದೆ. ಸಂವಿಧಾನವನ್ನೂ ಮೀರಿದ ಸ್ಥಿತಿಯೊಂದ ನಿರ್ಮಾಣವಾಗಲಿದೆ ಎಂದೇ ವಿಪಕ್ಷಗಳು ಹೇಳುತ್ತಿವೆ.

ಚುನಾವಣಾ ಆಯೋಗವನ್ನೂ ಹಿಡಿತಕ್ಕೆ ತೆಗೆದುಕೊಳುವ ಮಟ್ಟಕ್ಕೆ ಸರ್ಕಾರ ತನ್ನ ಸರ್ವಾಧಿಕಾರಿ ಮನಸ್ಥಿತಿಯನ್ನು ತೋರಿಸಲಿದೆ ಎನ್ನಲಾಗುತ್ತಿದೆ. ಸಂವಿಧಾನವೇ ಮಹತ್ವ ಕಳೆದುಕೊಳ್ಳಬಹುದಾದ, ಸಂವಿಧಾನವನ್ನೂ ಮೀರಿ ಮೋದಿ ಮತ್ತು ಸಂಸತ್ತು ಪ್ರಬಲವಾಗಬಹುದಾದ ಸನ್ನಿವೇಶದಲ್ಲಿ ಇನ್ನೂ ಎಂಥ ಭಯಾನಕ ಸ್ಥಿತಿ ಎದುರಾಗಬಹುದು?

ಗಣಿಗಾರಿಕೆಗೆ ಸಂಬಂಧಿಸಿದ ಕಾನೂನುಗಳಲ್ಲಿ ದೊಡ್ಡ ಬದಲಾವಣೆ, ಖಾಸಗೀಕರಣಕ್ಕೆ ಮುಕ್ತ ಅವಕಾಶ ಕೊಡುವಂತಹ ಬದಲಾವಣೆ ಹಾಗೂ ಒಂದು ದೇಶ ಒಂದೇ ಚುನಾವಣೆ - ಈ ಮೂರು 2024 ರ ಚುನಾವಣೆಯ ಫಲಿತಾಂಶವನ್ನು ಅವಲಂಬಿಸಿದೆ ಎಂದೇ ವಿಪಕ್ಷಗಳು ಎಚ್ಚರಿಸುತ್ತಿವೆ.ಈಗಾಗಲೇ ನಡೆಯುತ್ತಿರುವ ಕರಾಳ ಘಟನೆಗಳನ್ನು ನೋಡುತ್ತಿದ್ದರೆ ಅದನ್ನು ಊಹಿಸುವುದೂ ಕಷ್ಟವಾಗುತ್ತಿದೆ. ಊಹಿಸಿದರೇ ತಲ್ಲಣಗೊಳ್ಳುವಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!