ಬಿ ಎಸ್ ವೈ ವಿರುದ್ಧ ತೊಡೆ ತಟ್ಟಿದ ಈಶ್ವರಪ್ಪ, ಮಾಧುಸ್ವಾಮಿ
20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಬಳಿಕ ಬಿಜೆಪಿಯೊಳಗಿನ ಅಸಮಾಧಾನ, ಬೇಗುದಿಗಳು ಹಲವು ಬಗೆಯಲ್ಲಿ ವ್ಯಕ್ತವಾಗತೊಡಗಿವೆ. ಪಕ್ಷದ ಹಿರಿಯ ನಾಯಕರುಗಳ ಮಧ್ಯೆಯೇ ವೈಮನಸ್ಯ ತಲೆದೋರುವಂತಾಗಿದೆ. ಅಭ್ಯರ್ಥಿ ಯಾರೇ ಆದರೂ ಮೋದಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳುತ್ತಿರುವವರು ಕೂಡ ಒಳಗೊಳಗೇ ಹತಾಶೆ, ಅಸಹಾಯಕತೆಯಿಂದ ಬೇಯುತ್ತಿರುವುದು ಒಂದೆಡೆಯಾದರೆ,
ಬಂಡೇಳುತ್ತಿರುವವರು ಕೂಡ ಮೋದಿಗಾಗಿ ಈ ನಿರ್ಧಾರ ಎನ್ನುತ್ತಿರುವುದು ಇನ್ನೊಂದೆಡೆ ನಡೆದಿದೆ.
ಇದು ಬಿಜೆಪಿಯೊಳಗಿನ ತಮಾಷೆಯೊ, ಪ್ರಹಸನವೊ, ವಿಪರ್ಯಾಸವೊ ಗೊತ್ತಿಲ್ಲ. ಇದೆಲ್ಲದರ ನಡುವೆಯೂ ಪ್ರಮುಖ ನಾಯಕರು ಏನೂ ಮಾತಾಡದೆ ಇರುವ ಮತ್ತೊಂದು ಬಗೆಯ ಸನ್ನಿವೇಶವೂ ಇದೆ. ಹೀಗೆ ಬಿಜೆಪಿಯೊಳಗೆ ತಲೆದೋರುತ್ತಿರುವ ವಿದ್ಯಮಾನಗಳಲ್ಲಿ ಸದ್ಯಕ್ಕೆ ಎರಡು ಬೆಳವಣಿಗೆಗಳು ಗಮನ ಸೆಳೆದಿವೆ. ಮೊದಲನೆಯದು, ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿರುವುದು. ಇನ್ನೊಂದು, ತುಮಕೂರಿನಲ್ಲಿ ವಿ ಸೋಮಣ್ಣಗೆ ಟಿಕೆಟ್ ನೀಡಿರುವುದಕ್ಕೆ ಮಾಧುಸ್ವಾಮಿ ತೀವ್ರ ಅಸಮಾಧಾನಗೊಂಡಿರುವುದು.
ಅಭಿಪ್ರಾಯ ಸಂಗ್ರಹಣಾ ಸಭೆ ಬಳಿಕ ಮಾಧ್ಯಮದ ಮುಂದೆ ಮಾತನಾಡಿರುವ ಈಶ್ವರಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹಾವೇರಿಯಲ್ಲಿ ಪುತ್ರ ಕಾಂತೇಶ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಈಶ್ವರಪ್ಪ, ಅಭಿಪ್ರಾಯ ಕೇಳಲು ಬೆಂಬಲಿಗರ, ವಿವಿಧ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದ್ದರು.
ಆ ಬಳಿಕ ಸ್ವತಂತ್ರವಾಗಿ ಸ್ಪರ್ಧಿಸುವ ಮಾತನ್ನಾಡಿದ್ದಾರೆ. ತಮ್ಮ ಸ್ಪರ್ಧೆ ಮೋದಿ ವಿರುದ್ಧವಲ್ಲ, ಒಂದು ಕುಟುಂಬದ ಹಿಡಿತದಿಂದ ಬಿಜೆಪಿಯನ್ನು ಉಳಿಸಬೇಕಾಗಿದೆ ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಕಾರಣ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಕೊನೆಯ ಕ್ಷಣದ ವರೆಗೂ ಟಿಕೆಟ್ ಕೊಡಿಸುತ್ತೇನೆ ಎಂದೇ ಹೇಳುತ್ತಿದ್ದ ಯಡಿಯೂರಪ್ಪ ಏಕೆ ಅನ್ಯಾಯ ಮಾಡಿದರು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಎಲ್ಲ ಸ್ಥಾನಮಾನಗಳನ್ನು ಯಡಿಯೂರಪ್ಪ ತಮ್ಮ ಕುಟುಂಬದವರಿಗೆ ಇಟ್ಟುಕೊಂಡಿದ್ದಾರೆ. ಹಿಂಬಾಲಕರಿಗೆ ಅಧಿಕಾರ ಕೊಡಿಸಿದ್ದಾರೆ. ಗೋಬ್ಯಾಕ್ ಶೋಭಾ ಎಂದರೂ ಟಿಕೆಟ್ ಕೊಟ್ಟಿದ್ಧಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬೇಡ ಎಂದಿದ್ದ ಬೊಮ್ಮಾಯಿಯವರು ಕೂಡ ಟಿಕೆಟ್ ಸಿಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ ಎಂದು ಅವರ ವಿರುದ್ಧವೂ ಈಶ್ವರಪ್ಪ ಹರಿಹಾಯ್ದಿದ್ದಾರೆ.
ಇಷ್ಟೆಲ್ಲ ಹೇಳಿರುವ ಈಶ್ವರಪ್ಪನವರು, ಶಿವಮೊಗ್ಗದಲ್ಲಿ ಮಾರ್ಚ್ 18ಕ್ಕೆ ನಿಗದಿಯಾಗಿರುವ ಮೋದಿ ಕಾರ್ಯಕ್ರಮಕ್ಕೆ ಹೋಗುವುದೊ ಬೇಡವೊ ಎಂಬ ಗೊಂದಲದಲ್ಲಿದ್ದಾರೆ. ಅವರ ಪುತ್ರನನ್ನು ಎಂಎಲ್ಸಿ ಮಾಡುವ ಭರವಸೆ ಸಿಕ್ಕಿರುವುದು ಕೂಡ ಅವರ ಹೇಳಿಕೆಯಿಂದ ಗೊತ್ತಾಗಿದೆ.
ಆ ಭರವಸೆಯ ಹಿನ್ನೆಲೆಯಲ್ಲಿ ಅವರು ಅರ್ಧ ಸೋತಿದ್ಧಾರೆ ಎಂಬುದು ನಿಜವೇ ಆದರೂ, ಆಮೇಲೆ ಮಾತು ತಪ್ಪಿದರೆ ಏನು ಮಾಡುವುದು ಎಂಬ ಆತಂಕದಲ್ಲಿದ್ದಾರೆ. ಹಾಗೆ ನೋಡಿದರೆ, ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸುವುದರ ಬಗ್ಗೆ ಸಭೆಯಲ್ಲಿಯೇ ಸಹಮತ ವ್ಯಕ್ತವಾಗಿಲ್ಲ ಎಂದೂ ಹೇಳಲಾಗುತ್ತಿದೆ.
ಕೆಲವರು ಶಿವಮೊಗ್ಗಕ್ಕೆ ಮೋದಿ ಬಂದಾಗ ಟಿಕೆಟ್ ಬಗ್ಗೆ ಕೇಳೋಣ ಎಂದಿದ್ದರೆ, ಮತ್ತೆ ಕೆಲವರು ಬೊಮ್ಮಾಯಿಯವರ ಮನವೊಲಿಕೆಗೆ ಇರುವ ಸಾಧ್ಯತೆ ಬಗ್ಗೆಯೂ ಹೇಳುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಕೆಲವರು ನೀವು ಯಾವುದೇ ನಿರ್ಧಾರ ಮಾಡುವ ಮೊದಲು ಮೋದಿಯವರ ಬಗ್ಗೆ ಯೋಚಿಸಿ ಎಂದು ಹೇಳಿ ಅಡಕತ್ತರಿಯಲ್ಲಿ ಸಿಲುಕಿಸಿದ್ದಾರೆ.
ಪಕ್ಷದ ವಿರುದ್ಧ ಅಲ್ಲ ಎನ್ನುತ್ತಲೇ ಪಕ್ಷೇತರ ಆಗುವ ಮಾತಾಡುತ್ತಿರುವುದು, ಮೋದಿ ವಿರುದ್ದ ಅಲ್ಲ ಎನ್ನುತ್ತಲೇ ಹಾವೇರಿ ಟಿಕೆಟ್ ವಿಚಾರಕ್ಕೆ ಶಿವಮೊಗ್ಗದಲ್ಲಿ ಸೇಡು ತೀರಿಸಿಕೊಳ್ಳುವ ಮಾತಾಡುತ್ತಿರುವುದು ಎಲ್ಲವೂ ವಿಚಿತ್ರವಾಗಿಯೇ ಇದೆ. ತಾನು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸುವುದು ಬಿಜೆಪಿಯನ್ನು ಉಳಿಸುವುದಕ್ಕಾಗಿ ಎಂದು ಈಶ್ವರಪ್ಪ ಮಾತನಾಡುತ್ತಿದ್ದರೆ, ಅತ್ತ ಬೊಮ್ಮಾಯಿ ಕೂಡ ತಾನು ಈಶ್ವರಪ್ಪನವರಿಗೆ ಮೋಸ ಮಾಡಿಲ್ಲ. ವರಿಷ್ಠರ ಆದೇಶ ಪಾಲಿಸುತ್ತಿದ್ದೇನೆ ಅಷ್ಟೆ ಎನ್ನುತ್ತಿದ್ದಾರೆ.
ಕಳೆದ ಸಲ ಮೋದಿ ಒಂದು ಫೋನ್ ಕಾಲ್ ಮಾಡಿದ್ದಕ್ಕೆ ಪುಳಕಗೊಂಡಿದ್ದ ಈಶ್ವರಪ್ಪ, ಈಗ ಶಿವಮೊಗ್ಗಕ್ಕೆ ಮೋದಿ ಬರುವ ಹೊತ್ತಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತಾಡುತ್ತಿರುವುದು ಕಡೇಪಕ್ಷ ಎಂಎಲ್ಸಿ ಭರವಸೆಯಾದರೂ ಪಕ್ಕಾ ಆಗಲಿ ಎಂದಿರಬಹುದೆ? ಅದೇನೇ ಇದ್ದರೂ ಯಡಿಯೂರಪ್ಪ ಬಗ್ಗೆ ಈಶ್ವರಪ್ಪ ಭಾರೀ ಸಿಟ್ಟಾಗಿರುವುದು ಮಾತ್ರ ನಿಜ. ಅಪ್ಪ, ಮಗ ನನಗೆ ಮೋಸ ಮಾಡಿದರು ಎಂದೇ ಅವರು ಹೇಳುತ್ತಿದ್ದಾರೆ.
ಆದರೆ ಬಿಜೆಪಿ ಬಿಟ್ಟರೆ ಈಶ್ವರಪ್ಪಗೆ ಸ್ವತಂತ್ರವಾಗಿ ರಾಜಕೀಯ ಅಸ್ತಿತ್ವ ಇದೆಯೆ? ಬಹುಶಃ ಈ ಪ್ರಶ್ನೆಗೆ ಇತರರಿಗಿಂತ ಸ್ವತಃ ಈಶ್ವರಪ್ಪನವರೇ ಉತ್ತರವನ್ನು ಬಲ್ಲರು. ಪುತ್ರ ಗೆಲ್ಲಬಲ್ಲ ವಿಶ್ವಾಸವಿದ್ದರೆ ಆ ಕ್ಷೇತ್ರದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ವಿಚಾರವನ್ನೇಕೆ ಈಶ್ವರಪ್ಪ ಮಾಡುತ್ತಿಲ್ಲವೊ ಗೊತ್ತಿಲ್ಲ.
ಬದಲಾಗಿ, ಪುತ್ರನಿಗೆ ಟಿಕೆಟ್ ಸಿಗದಿರುವುದಕ್ಕೆ ಬೇರೊಂದು ಕ್ಷೇತ್ರದಲ್ಲಿ ತಂದೆಯ ಬಂಡಾಯದ ಮಾತು ಏನನ್ನು ಸೂಚಿಸುತ್ತದೆ ?
ಯಡಿಯೂರಪ್ಪ ಕೂಡ ಈಶ್ವರಪ್ಪ ಅದೇನು ಬಂಡಾಯ ಮಾಡ್ತಾರೋ ಈ ಸರ್ತಿ ನೋಡೇ ಬಿಡೋಣ ಅನ್ನೋ ಮೂಡ್ ನಲ್ಲಿರೋ ಹಾಗೆ ಕಾಣ್ತಾ ಇದೆ. ಅಂತೂ ಈಶ್ವರಪ್ಪ ಬಂಡಾಯದ ಮಾತು ಠುಸ್ ಪಟಾಕಿಯ ಹಾಗೆಯೇ ಕಾಣಿಸುತ್ತಿದೆ.
ಸದ್ಯಕ್ಕೆ ಇದು ನಾಟಕ ಶುರುವಾಗಲಿಕ್ಕಿರುವುದರ ಗ್ಯಾಪ್ನಲ್ಲಿ ಒಂದು ಬ್ರೇಕ್ ಡಾನ್ಸ್ ಥರ ಅಷ್ಟೇ ಇರಬಹುದೇನೊ. ಯಡಿಯೂರಪ್ಪ ವಿಚಾರದಲ್ಲಿ ಈಶ್ವರಪ್ಪ ಹೊರಹಾಕುತ್ತಿರುವಷ್ಟೇ ಅಸಮಾಧಾನವನ್ನು ಹೊರಹಾಕುತ್ತಿರುವ ಮತ್ತೊಬ್ಬ ಬಿಜೆಪಿ ನಾಯಕ ಮಾಧುಸ್ವಾಮಿ.
ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಧುಸ್ವಾಮಿ, ಟಿಕೆಟ್ ಸೋಮಣ್ಣ ಪಾಲಾದ ಬಳಿಕ ನೊಂದುಕೊಂಡಿದ್ದಾರೆ.
ಕಡೆವರೆಗೂ ತನಗೇ ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದ ಯಡಿಯೂರಪ್ಪ ನಡುನೀರಿನಲ್ಲಿ ಕೈಬಿಟ್ಟಿದ್ದಾರೆ ಎಂಬುದು ಮಾಧುಸ್ವಾಮಿ ಆಕ್ಷೇಪ.
ಯಡಿಯೂರಪ್ಪ ವಿರುದ್ಧದ ಮಾಧುಸ್ವಾಮಿ ಸಿಟ್ಟು ಈಗ ತುಮಕೂರು ಅಭ್ಯರ್ಥಿಯಾಗಿರುವ ಸೋಮಣ್ಣ ವಿರುದ್ಧವೂ ತಿರುಗಿದೆ. ಯಾವುದೇ ಕಾರಣಕ್ಕೂ ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ. ಇದನ್ನು ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎನ್ನುತ್ತಿದ್ದಾರೆ.
ಅಗತ್ಯ ಬಿದ್ದರೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ಕೊಡುವುದಕ್ಕೂ ರೆಡಿ ಎನ್ನುವ ಮೂಲಕ ಇನ್ನೊಂದು ಸಾಧ್ಯತೆಯ ಸುಳಿವನ್ನೂ ಅವರು ಕೊಟ್ಟಿದ್ದಾರೆ. ಹಾಗಾದರೆ ತುಮಕೂರಿನಲ್ಲಿ ಬಿಜೆಪಿಯೇನಾದರೂ ಬಂಡಾಯ ಎದುರಿಸುವ ಸ್ಥಿತಿ ಬರಬಹುದೆ? ಬಹುಶಃ ತುಮಕೂರಿನಲ್ಲಿ ಹಾಗಾದರೂ ಅಚ್ಚರಿಯಿಲ್ಲ.
ಬೆಂಗಳೂರು ಉತ್ತರದಲ್ಲಿ ಟಿಕೆಟ್ ಮಿಸ್ಸಾಗಿದ್ದಕ್ಕೆ ಸದಾನಂದ ಗೌಡರು ಮುನಿಸಿಕೊಂಡಿದ್ದಾರೆ, ಮೈಸೂರಲ್ಲಿ ಪ್ರತಾಪ್ ಸಿಂಹ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ, ಚಿಕ್ಕಮಗಳೂರಲ್ಲಿ ಸಿಟಿ ರವಿ ಕೊತ ಕೊತ ಕುದೀತಾ ಇದ್ದಾರೆ, ಕೊಪ್ಪಳದಲ್ಲಿ ಟಿಕೆಟ್ ಕಳಕೊಂಡು ಕರಡಿ ಸಂಗಣ್ಣ ಸಿಟ್ಟಾಗಿದ್ದಾರೆ, ಮಂಗಳೂರಲ್ಲಿ ಮಾಜಿ ರಾಜ್ಯಾಧ್ಯಕ್ಷರೇ ಅನಾಥರಾಗಿದ್ದಾರೆ, ದಾವಣಗೆರೆಯಲ್ಲಿ ರೇಣುಕಾಚಾರ್ಯ ಹಾಗೂ ರವೀಂದ್ರನಾಥ್ ಪಕ್ಷದ ವಿರುದ್ಧ ಗರಂ ಆಗಿದ್ದಾರೆ.
ಆದರೆ ಇವರ್ಯಾರೂ ನೇರವಾಗಿ ಪಕ್ಷದ ವಿರುದ್ಧ ಬಂಡಾಯ ಸಾರುವ ಮಾತಾಡುತ್ತಿಲ್ಲ. ಬಹುತೇಕ ಎಲ್ಲರೂ ಸಂಘದ ಸಂಘಟನೆ ಹಾಗು ಮೋದಿಯ ವರ್ಚಸ್ಸಿನಿಂದಲೇ ಗೆದ್ದವರಾದ್ದರಿಂದ ಅವರಿಗೆ ಅಷ್ಟು ಧೈರ್ಯವೂ ಇಲ್ಲ. ಹಾಗಾಗಿ ಇವರೆಲ್ಲ ಮಗ್ಗುಲ ಮುಳ್ಳಾಗುವ ಸಾಧ್ಯತೆ ಇಲ್ಲ.
ಒಂದು ವೇಳೆ ಹಾಗಾಗದೇ ಇದ್ದರೂ, ಬಿಜೆಪಿಯೊಳಗಿನ ತಳಮಳಗಳು ಮಾತ್ರ ಮುಗಿಯುವುದಿಲ್ಲ.
ಚುನಾವಣೆಯುದ್ದಕ್ಕೂ ಅವು ಮುಂದುವರಿಯುವ ಸೂಚನೆಗಳಂತೂ ಇವೆ.