ಟೈಟಾನಿಕ್ ಮೋಹ ಪಾಶಕ್ಕೆ ಐವರು ಬಲಿ !

Update: 2023-06-24 10:24 GMT

 ಟೈಟಾನಿಕ್ ನ ಅವಶೇಷಗಳನ್ನು ನೋಡುವ ಮಾರಕ ಆಕರ್ಷಣೆ ಐದು ಜೀವಗಳ ಬಲಿ ಪಡೆದಿದೆ.

ಇದೊಂದು ದೊಡ್ಡ ಅಪಾಯದ ಸಾಧ್ಯತೆ ಇರುವ ಪ್ರಯಾಣ ಎಂದು ಗೊತ್ತಿದ್ದೇ ಈ ಸಾಹಸ ಪ್ರವಾಸಕ್ಕೆ ಹೋದವರು ಮರಳಿ ಬಂದಿಲ್ಲ.

ಭೂಮಿಯ ಮುಕ್ಕಾಲುಪಾಲು ಪ್ರದೇಶವನ್ನು ಆವರಿಸಿರುವ ಸಮುದ್ರದ ಆಳ ಎಂಬುದೊಂದು ನಿಗೂಢ ಲೋಕ. ಮುಗಿಯದಷ್ಟು ಅಚ್ಚರಿಗಳ ಜಗತ್ತದು. ಅಲ್ಲಿರುವ ಜೀವ ವೈವಿಧ್ಯ, ಅಲ್ಲಿನ ಸೌಂದರ್ಯ, ಅದರೊಳಗೆ ಹುದುಗಿರುವ ರಹಸ್ಯಗಳು ಎಲ್ಲವೂ ರುದ್ರರಮಣೀಯ. ಸದಾ ಹೊಸತನ್ನು ನೋಡುವ, ಸಾಹಸಕ್ಕೆ ಇಳಿಯುವ ಮನುಷ್ಯನ ತುಡಿತಕ್ಕೆ ಸಾಗರದಾಳ ಒಂದು ಬಹುದೊಡ್ಡ ಸವಾಲು, ಅಷ್ಟೇ ದೊಡ್ಡ ಅವಕಾಶ. ಈ ಕಾರಣದಿಂದಲೇ, ಆಳ ಸಮುದ್ರದ ಸಂಶೋಧನೆ, ಸರ್ವೇಕ್ಷಣೆ ಮತ್ತು ಪ್ರವಾಸಕ್ಕೆ ಎಲ್ಲಿಲ್ಲದ ಬೇಡಿಕೆ.

ಸಮುದ್ರದ ಅತ್ಯಂತ ತಳದವರೆಗೆ ಅಲ್ಲದಿದ್ದರೂ, ನಾಲ್ಕು ಕಿ.ಮೀ.ನಷ್ಟು ಆಳಕ್ಕೆ ಕರೆದೊಯ್ಯಬಲ್ಲ ಕೆಲವೇ ನೌಕೆಗಳು ಜಗತ್ತಿನಲ್ಲಿವೆ. ಅಂತಹ ನೌಕೆಯೊಂದರ ಒಳಗೆ ಕೂತು, ಸಮುದ್ರದಾಳದಲ್ಲಿ ಬಿದ್ದುಕೊಂಡಿರುವ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡುವ ಸಾಹಸಕ್ಕೆ ಐದು ಮಂದಿ ಇತ್ತೀಚಿಗೆ ಮುಂದಾಗಿದ್ದರು. ಅವರನ್ನು ಹೊತ್ತಿದ್ದ ಆ ನೌಕೆಯೇ ನಾಪತ್ತೆಯಾಗಿತ್ತು. ಈಗ ಅವರೆಲ್ಲರೂ ಜೀವ ಕಳೆದುಕೊಂಡ ದಾರುಣ ಸುದ್ದಿ ಬಂದಿದೆ.

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ದಿದ್ದ ಟೈಟನ್ ಹೆಸರಿನ ಸಬ್ ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿ ಐದು ದಿನಗಳ ಬಳಿಕ ಅದರ ಅವಶೇಷಗಳು ಪತ್ತೆಯಾಗಿದ್ದು ಅದರೊಳಗಿದ್ದ ಎಲ್ಲ ೫ ಮಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. .

ಕೆನಡಿಯನ್ ಶಿಪ್ ಒಂದರ ಮನುಷ್ಯ ರಹಿತ ಆಳ ಸಮುದ್ರ ರೋಬೋ ಗುರುವಾರ ನೀರಿನ ಮೇಲ್ಮೈಯಿಂದ ಸುಮಾರು ಎರಡೂವರೆ ಮೈಲು ಕೆಳಗೆ ಈ ಟೈಟಾನ್ ಸಬ್‌ಮರ್ಸಿಬಲ್‌ ನೌಕೆಯ ಅವಶೇಷವನ್ನು ಪತ್ತೆ ಹಚ್ಚಿದೆ ಎಂದು ಅಮೇರಿಕ ಕೋಸ್ಟ್ ಗಾರ್ಡ್ ನ ರಿಯರ್ ಅಡ್ಮಿರಲ್ ಜಾನ್ ಮ್ಯಾಗೇರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಕೆನಡಾದ ಹಡಗುಗಳು, ವಿಮಾನಗಳು ಈ ನೌಕೆಗಾಗಿ ಸತತ ಹುಡುಕಾಟ ನಡೆಸಿದ್ದವು. ಅಮೆರಿಕದ ಕರಾವಳಿ ಕೇಪ್ ಕಾಡ್ ನ ಪೂರ್ವಕ್ಕೆ ಸುಮಾರು 1,450 ಕಿಮೀಪ್ರದೇಶದಲ್ಲಿ ಹುಡುಕಾಟ ನಡೆದಿತ್ತು. 13 ಸಾವಿರ ಅಡಿ ಆಳದವರೆಗೆ ಪರಿಶೀಲನೆ ನಡೆಸಲಾಗುತ್ತಿತ್ತು. ಕೊನೆಗೆ ರೋಬೋಗಳನ್ನು ಬಳಸಲಾಯಿತು.ರೇಡಾರ್ ಸಾಮರ್ಥ್ಯವುಳ್ಳ ಎಸಿ- 130 ವಿಮಾನ ಮಾತ್ರವಲ್ಲದೆ, ಸಬ್‌ಮೆರಿನ್ ಯುದ್ಧ ನಿಗ್ರಹ ವ್ಯವಸ್ಥೆಯನ್ನು ಹೊಂದಿರುವ ಕೆನಡಾದ 8- ಪೊಸೀಡಾನ್ ಯುದ್ಧ ವಿಮಾನ ಕೂಡ ಟೈಟಾನ್ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ವರದಿಗಳು ಹೇಳಿದ್ದವು.

ಕೊನೆಗೂ ಈ ಬೃಹತ್ ಕಾರ್ಯಾಚರಣೆ ಆ ಐದು ಮಂದಿಯ ಜೀವ ಉಳಿಸಲು ಸಾಧ್ಯವಾಗಿಲ್ಲ.

ಈ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಪೈಲಟ್ ಅಲ್ಲದೆ ನಾಲ್ವರು ಪ್ರಯಾಣಿಕರಿದ್ದರು. 70ರಿಂದ 96 ಗಂಟೆಗಳ ಕಾಲ ಉಸಿರಾಡಲು ಅನುಕೂಲವಾಗುವಷ್ಟು ಆಮ್ಲಜನಕ ವ್ಯವಸ್ಥೆ ಇದರಲ್ಲಿ ಇದ್ದುದಾಗಿ ಹೇಳಲಾಗಿದೆ. ಹಾಗಾಗಿಯೇ ಆಮ್ಲಜನಕ ಮುಗಿಯುತ್ತಿರುವ ಅಂದಾಜಿನ ಮೇರೆಗೆ ಕೊನೆಯ ಹಂತದ ರಕ್ಷಣಾ ಪ್ರಯತ್ನಗಳನ್ನು ಚುರುಕು ಗೊಳಿಸಲಾಗಿತ್ತು. ಆದರೆ ಅದು ಯಶಸ್ವಿಯಾಗಿಲ್ಲ. ನೌಕೆ ಸಮುದ್ರದಾಳ ಸೇರಿದ್ದರೆ ಅಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶ ಇರುತ್ತದೆ. ಆಗ ಆಮ್ಲಜನಕದ ಬಳಕೆ ಹೆಚ್ಚಾಗಿ ಅವಧಿಗೂ ಮುನ್ನವೇ ಆಮ್ಲಜನಕ ಖಾಲಿಯಾಗಿರುವ ಸಾಧ್ಯತೆಯೂ ಇದೆ. ಸಾಲದ್ದಕ್ಕೆ ನೌಕೆಯಲ್ಲಿ ಇಂಗಾಲದ ಡೈಆಕ್ಸೈಡ್‌ ಅನ್ನು ಹೊರಹಾಕುವ ಯಾವುದೇ ವ್ಯವಸ್ಥೆ ಇಲ್ಲ. ನೌಕೆಯಲ್ಲಿರುವ ಆಮ್ಲಜನಕ ಖಾಲಿಯಾದರೆ, ಅದರೊಳಗಿದ್ದ ಯಾತ್ರಿಕರು ದೀರ್ಘ ಕಾಲ ಇಂಗಾಲದ ಡೈ ಆಕ್ಸೈಡ್‌ ಅನ್ನೇ ಉಸಿರಾಡಿ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯೂ ಇದೆ.

ಆಳ ಸಮುದ್ರಕ್ಕೆ ಹೋಗಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸುವ ಈ ಪ್ರವಾಸದ ನಿರ್ವಹಣೆ ನಡೆಸುವುದು ಓಶಿಯನ್ ಗೇಟ್ ಎಕ್ಸ್ ಪೆಡಿಷನ್. ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವ ಈ ಪ್ರವಾಸಕ್ಕೆ ಪ್ರವಾಸಿಗರು ತಲಾ 2,50,000 ಡಾಲರ್ ಹಣ ತೆರಬೇಕಾಗುತ್ತದೆ. ಅಂದ್ರೆ ಭಾರತದ ೨ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ.

ಟೈಟನ್ ಎಂಬ ಈ ಸಬ್ಮರ್ಸಿಬಲ್ ಅಟ್ಲಾಂಟಿಕ್ ಸಾಗರದಡಿಯಲ್ಲಿ ಸುಮಾರು 4,000 ಮೀಟರ್‌ಗಳಷ್ಟು ಆಳದಲ್ಲಿ ಐವರನ್ನು ಹೊತ್ತೊಯ್ದಿತ್ತು.

ನೌಕೆಯಲ್ಲಿ ಓಶಿಯನ್‌ಗೇಟ್ ಕಂಪೆನಿಯ ಸಿಇಒ ಮತ್ತು ಸಂಸ್ಥಾಪಕ 61 ವರ್ಷದ ಸ್ಟಾಕ್‌ ಟನ್ ರಶ್ ಕೂಡ ಇದ್ದರು. ಅವರ ಜೊತೆಗೆ ಬ್ರಿಟನ್‌ನ ಸಾಹಸ ಪ್ರೇಮಿ , ಮೂರು ಗಿನ್ನಿಸ್ ದಾಖಲೆ ಬರೆದಿರುವ 58 ವರ್ಷದ ಹಮಿಷ್‌ ಹಾರ್ಡಿಂಗ್‌, ಮಿಸ್ಟರ್‌ ಟೈಟಾನಿಕ್‌ ಎಂದೇ ಅಡ್ಡ ಹೆಸರಿರುವ 77 ವರ್ಷದ ಪಾಲ್‌ ಹೆನ್ರಿ ನಾರ್ಗಿಯೊಲೆಟ್‌, ಪಾಕ್ ಮೂಲದ ಬ್ರಿಟನ್‌ನ ಶ್ರೀಮಂತ ಉದ್ಯಮಿ 48 ವರ್ಷದ ಶಹಝಾದ್‌ ದಾವೂದ್‌, ಅವರ ಪುತ್ರ 19 ವರ್ಷದ ವಿದ್ಯಾರ್ಥಿ ಸುಲೇಮಾನ್‌ ಅವರಿದ್ದರು.

ಈ ಪೈಕಿ ಪಾಲ್ ಹೆನ್ರಿ ಟೈಟಾನಿಕ್‌ ಹಡಗಿನ ಅವಶೇಷಗಳು ಪತ್ತೆಯಾದ ಒಂದು ವರ್ಷದ ಬಳಿಕ 1986 ರಲ್ಲಿ ಸಮುದ್ರಕ್ಕಿಳಿದ ಮೊದಲ ತಂಡದಲ್ಲಿ ಇದ್ದವರು. 19 ವರ್ಷದ ಸುಲೇಮಾನ್‌ ಗೆ ಈ ಪ್ರವಾಸದಲ್ಲಿರುವ ಸಂಭಾವ್ಯ ಅಪಾಯದ ಬಗ್ಗೆ ಭಯವಿತ್ತು, ಆದರೂ ತಂದೆ ನೀಡಿದ ಉಡುಗೊರೆಯಾಗಿ ಈ ಪ್ರವಾಸಕ್ಕೆ ತೆರಳಿದ್ದರು. ಈಗ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ.

OceanGate Inc ಸಾಗರಗಳ ಆಳದಲ್ಲಿ ಪರಿಶೋಧನೆಗೆ ಕಡಿಮೆ ವೆಚ್ಚದಲ್ಲಿ ಜಲಾಂತರ್ಗಾಮಿ ಸೇವೆ ಒದಗಿಸುವ ಸಾಗರ ಸಾಹಸೋದ್ಯಮ ಅಮೇರಿಕನ್ ಕಂಪೆನಿ. 2009ರಲ್ಲಿ ಸ್ಥಾಪನೆಯಾಗಿತ್ತು.

ಟೈಟನ್ ಟ್ರಿಪ್‌ಗಾಗಿ, ಅದರ ವೆಬ್‌ಸೈಟ್ ಹೇಳುವಂತೆ ಯಾವುದೇ ಪೂರ್ವ ಡೈವಿಂಗ್ ಅನುಭವದ ಅಗತ್ಯವಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಹೋಗಬಹುದು.

ಟೈಟಾನಿಕ್ ಅವಶೇಷ ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್ ನಿಂದ ದಕ್ಷಿಣಕ್ಕೆ 700 ಕಿಮೀ ದೂರದಲ್ಲಿದೆ. ಇದು ಟೈಟಾನಿಕ್ ಪ್ರಯಾಣದ ಆರಂಭಿಕ ಪಾಯಿಂಟ್ ಆಗಿತ್ತು.

ಓಶಿಯನ್ ಗೇಟ್‌ನ ಸಂಸ್ಥಾಪಕ ಮತ್ತು ಮಾಲೀಕ ಸ್ಟಾಕ್‌ ಟನ್ ರಶ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಹಾಸ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಹಳೆಯ ವಿದ್ಯಾರ್ಥಿ. ಅವರು MBA ಪದವೀಧರ. ಅಲ್ಲದೆ, ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್, ಏರೋನಾಟಿಕಲ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿಯೂ ಪದವಿ ಪಡೆದಿದ್ದಾರೆ. ವಾಣಿಜ್ಯ ಪೈಲಟ್ ಆಗಿ ಕೆಲ ವರ್ಷಗಳ ಅನುಭವದ ಬಳಿಕ ಅವರು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದ್ದರು.

ಈಗ ಮುಳುಗಿರುವ ಟೈಟನ್ ಒಂದು ಸಬ್‌ ಮರ್ಸಿಬಲ್‌ ನೌಕೆ. ಈ ಸಬ್‌ ಮರ್ಸಿಬಲ್‌ಗಳು, ಸಬ್ ಮರೀನ್ ಗಳಿಗಿಂತ ಭಿನ್ನ. ಇವುಗಳ ಗಾತ್ರ ತೀರಾ ಚಿಕ್ಕದು.

ದೀರ್ಘಾವಧಿಯವರೆಗೆ ನೀರಿನಡಿಯಲ್ಲಿ ಇರಲು ಇವು ಸಂಪೂರ್ಣವಾಗಿ ಸಮರ್ಥವಾಗಿರುವುದಿಲ್ಲ. ಅವಕ್ಕೆ ಮೇಲ್ಮೈ ಹಡಗು, ತೀರದ ತಂಡ ಅಥವಾ ಕೆಲವೊಮ್ಮೆ ದೊಡ್ಡ ಜಲಾಂತರ್ಗಾಮಿ ನೌಕೆಯ ಬೆಂಬಲ ಬೇಕಾಗುತ್ತದೆ. ಕೆಲವೇ ಗಂಟೆಗಳಲ್ಲಿ ಇವುಗಳ ಕಾರ್ಯಾಚರಣೆ ಮುಗಿಸಬೇಕು. ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಸಬ್ ಮರ್ಸಿಬಲ್ ಗಳಿಗೆ ಇರುವುದಿಲ್ಲ.

ಆದರೆ ಸಬ್‌ ಮರೀನ್‌ ಮಾತ್ರ ಗಾತ್ರದಲ್ಲಿ ಒಂದು ಸಣ್ಣ ಹಡಗಿನಷ್ಟು ದೊಡ್ಡದಾಗಿರುತ್ತದೆ. ನೀರಿನಡಿಯಲ್ಲಿ ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಅದಕ್ಕೆ ಇರುತ್ತೆ. ನೀರಿನಡಿಯಲ್ಲಿ ಇದ್ದಾಗಲೂ ಅಗತ್ಯವಿರುವಷ್ಟು ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಸೌಲಭ್ಯ ಸಬ್ ಮರೀನ್ ನಲ್ಲಿರುತ್ತದೆ.

ಈಗ ಕಾಣೆಯಾಗಿದ್ದ ಟೈಟನ್ ತೂಕದಲ್ಲಿ ಹಗುರವಾಗಿದೆ ಮತ್ತು ಇತರ ಯಾವುದೇ ಆಳ ಡೈವಿಂಗ್ ಸಬ್‌ಮರ್ಸಿಬಲ್‌ಗಿಂತ ಹೆಚ್ಚು ವೆಚ್ಚದಾಯಕ ಎಂದು ಮಾಹಿತಿಯಿದೆ.

ಓಶಿಯನ್ ಗೇಟ್ ಬಳಿಯಿರುವ ಆಂಟಿಪೋಡ್ಸ್ 305 ಮೀಟರ್ ಆಳದಲ್ಲಿ ಸಾಗುವ ಸಬ್‌ಮರ್ಸಿಬಲ್ ಆಗಿದೆ. ಸೈಕ್ಲೋಪ್ಸ್ 1 ಮತ್ತೊಂದು ಸಬ್ಮರ್ಸಿಬಲ್ ಆಗಿದ್ದು, 500 ಮೀಟರ್ ಆಳದವರೆಗೆ ಹೋಗಬಲ್ಲುದು.

ಟೈಟಾನಿಕ್ ಅವಶೇಷಗಳ ವೀಕ್ಷಣೆ ಇತರ ಸಾಹಸ ಪ್ರಯಾಣಗಳಿಗಿಂತ ಆಳದ್ದಾಗಿರುತ್ತದೆ.

1912ರಲ್ಲಿ ಆ ಕಾಲಕ್ಕೆ ಅತ್ಯಾಧುನಿಕ ಮತ್ತು ಎಂದಿಗೂ ಮುಳುಗದ ನೌಕೆ ಎಂದು ಖ್ಯಾತಿ ಪಡೆದಿದ್ದ ‘ಆರ್‌ ಎಂ ಎಸ್‌ ಟೈಟಾನಿಕ್‌’ ಹಡಗು ತನ್ನ ಮೊದಲ ಪ್ರಯಾಣದಲ್ಲೇ ಸಮುದ್ರದ ತಳ ಸೇರಿತ್ತು. ಅದರ ಅವಶೇಷಗಳನ್ನು ಪತ್ತೆ ಮಾಡಲು ನಡೆದ ಹಲವು ಶೋಧ ಕಾರ್ಯಾಚರಣೆಗಳು ವಿಫಲವಾಗಿದ್ದವು. ಈ ರೀತಿಯ ಸಾವಿರಾರು ಪ್ರಯತ್ನಗಳ ಬಳಿಕ ಕೊನೆಗೆ ಟೈಟಾನಿಕ್‌ನ ಅವಶೇಷಗಳು ಪತ್ತೆಯಾದವು. ಅದೂ 1985ರಲ್ಲಿ, ಅಂದರೆ, ಕಾಣೆಯಾಗಿ 73 ವರ್ಷಗಳ ನಂತರ. ಆಮೇಲೆ ಜನರಿಗೆ ಟೈಟಾನಿಕ್‌ ಬಗೆಗಿನ ಕುತೂಹಲ ಹೆಚ್ಚುತ್ತಲೇ ಹೋಯಿತು. 1997ರಲ್ಲಿ ತೆರೆಗೆ ಬಂದಿದ್ದ ಟೈಟಾನಿಕ್‌ ಸಿನಿಮಾವನ್ನು ನೋಡಿ ರೋಮಾಂಚನಗೊಂಡವರು, ಅದರ ಬಗ್ಗೆ ಗೊತ್ತಿಲ್ಲದವರು ತೀರಾ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಸಮುದ್ರದ ಮೇಲ್ಮೈನಿಂದ 3,800 ಮೀಟರ್‌ ಅಡಿಯಲ್ಲಿ ಟೈಟಾನಿಕ್‌ ಅವಶೇಷವಿತ್ತು. ಅತ್ಯಾಧುನಿಕ ಕ್ಯಾಮೆರಾಗಳನ್ನು ಹೊತ್ತು ಅಲ್ಲಿಗೆ ಹೋಗಿ ಬರಬಲ್ಲ ಹಲವಾರು ಮಾನವರಹಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಅವುಗಳ ಮೂಲಕ ಟೈಟಾನಿಕ್‌ನ ಅವಶೇಷಗಳ ಚಿತ್ರ ಮತ್ತು ವಿಡಿಯೊಗಳನ್ನು ಸೆರೆಹಿಡಿಯಲಾಯಿತು. 1986ರಲ್ಲೇ ಮೊದಲ ಬಾರಿ ಮಾನವರನ್ನು ಹೊತ್ತ ನೌಕೆ ಟೈಟಾನಿಕ್‌ ಅವಶೇಷಕ್ಕೆ ಭೇಟಿ ನೀಡಿಬಂತು. ಆನಂತರ ಅಲ್ಲಿಗೆ ಜನರನ್ನು ಪ್ರವಾಸ ಕರೆದುಕೊಂಡು ಹೋಗುವುದು ಹೆಚ್ಚಾಯಿತು.

ಅಂತಹದ್ದೇ ಸಾಹಸ ಪ್ರವಾಸ ಆಯೋಜಿಸುವ ಕಂಪನಿಗಳಲ್ಲಿ ಓಶಿಯನ್‌ ಗೇಟ್‌ ಸಹ ಒಂದು. ಈ ಕಂಪೆನಿ ಈ ಹಿಂದೆಯೂ ಯಶಸ್ವಿಯಾಗಿ ಈ ಸಾಹಸ ಪ್ರವಾಸವನ್ನು ಆಯೋಜಿಸಿದೆ. ಓಶಿಯನ್‌ ಗೇಟ್‌ ಅಭಿವೃದ್ಧಿಪಡಿಸಿದ ‘ಟೈಟನ್‌’ ಎಂಬ ಸಬ್‌ಮರ್ಸಿಬಲ್‌ ನೌಕೆ 2021ರಲ್ಲಿ ಟೈಟಾನಿಕ್ ಅವಶೇಷಗಳ ಬಳಿ ನಾಲ್ವರು ಸಂಶೋಧಕರನ್ನು ಕರೆದುಕೊಂಡು ಹೋಗಿಬಂತು. 2022ರಲ್ಲಿ ಎರಡನೇ ಕಾರ್ಯಾಚರಣೆ ನಡೆಯಿತು. 2023ರ ಈ ಮೂರನೇ ಕಾರ್ಯಾಚರಣೆಗೆ 2022ರಿಂದಲೇ ಸಿದ್ಧತೆ ನಡೆಸಲಾಗಿತ್ತು. ಅದರಂತೆ ಜೂನ್‌ ಮೂರನೇ ವಾರದಲ್ಲಿ ಒಬ್ಬ ಪೈಲಟ್‌ ಮತ್ತು ಇತರ ನಾಲ್ವರನ್ನು ಹೊತ್ತು ಅಂಟ್ಲಾಂಟಿಕ್ ಆಳಕ್ಕೆ ಇಳಿದಿತ್ತು ಟೈಟನ್. ಆದರೆ ಯಾತ್ರೆ ಆರಂಭಿಸಿದ ಒಂದೂಮುಕ್ಕಾಲು ಗಂಟೆಯಲ್ಲೇ ‘ಟೈಟನ್‌’ ತನ್ನ ಮಾತೃ ನೌಕೆಯೊಂದಿಗಿನ ಸಂಪರ್ಕ ಕಡಿದುಕೊಂಡಿದೆ.

ಟೈಟನ್‌ ನೌಕೆ ಎಲ್ಲಿದೆ ಎಂಬುದರ ಬಗ್ಗೆಯೇ ಯಾವುದೇ ಸುಳಿವಿರಲಿಲ್ಲ. ತುರ್ತು ಸಂದರ್ಭದಲ್ಲಿ ಸಮುದ್ರದ ಮೇಲ್ಮೈಗೆ ಬರುವ ಸೌಲಭ್ಯ ಟೈಟನ್‌ನಲ್ಲಿ ಇದೆ. ಬಹುಶಃ ಅದೂ ವಿಫಲವಾಗಿದ್ದರಿಂದ ಕಾರ್ಯಾಚರಣೆ ಕಷ್ಟವಾಯಿತು. ಟೈಟನ್‌ ತೀರಾ ಸಮುದ್ರದ ತಳ ಸೇರಿದ್ದರೆ ಮತ್ತು ಅದು ಸಮುದ್ರದ ಮೇಲ್ಮೈನಲ್ಲಿದ್ದರೆ ಎಂಬ ಎರಡೂ ಅಂದಾಜಿನಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಟೈಟಾನಿಕ್‌ ಅವಶೇಷ ಇರುವ ಪ್ರದೇಶದ ಸರಾಸರಿ ಆಳ 3,800 ಮೀಟರ್‌ ಅಂದ್ರೆ 12,500 ಅಡಿ . ಅಷ್ಟು ಆಳಕ್ಕೆ ಸೂರ್ಯನ ಕಿರಣಗಳು ಒಂದು ಚೂರೂ ತಲುಪುವುದಿಲ್ಲ. ಅಂತಹ ಪ್ರದೇಶದಲ್ಲಿ ಟೈಟನ್‌ ಸಿಲುಕಿದ್ದರೆ, ಅದನ್ನು ಪತ್ತೆ ಮಾಡುವುದೇ ಕಷ್ಟ, ಪತ್ತೆ ಮಾಡಿದರೂ ಮೇಲಕ್ಕೆ ತರುವುದು ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳಿದ್ದರು.

ಕೇವಲ 22 ಅಡಿ ಉದ್ದವಿರುವ ಟೈಟನ್ ಒಂದು ಎಸ್‌ಯುವಿ ವಾಹನದ ಗಾತ್ರದಷ್ಟಿದೆ. ಲಕ್ಷಾಂತರ ಚದರ ಕಿ.ಮೀ. ವಿಸ್ತೀರ್ಣದ ಸಮುದ್ರದ ಮೇಲ್ಮೈನಲ್ಲಿ ಅಷ್ಟು ಸಣ್ಣ ಗಾತ್ರದ ನೌಕೆಯನ್ನು ಹುಡುಕುವುದು ತೀರಾ ಕಷ್ಟ. ನೌಕೆಯಲ್ಲಿ ಗರಿಷ್ಟ 96 ಗಂಟೆಗಳಿಗೆ ಆಗುವಷ್ಟು ಮಾತ್ರ ಆಮ್ಲಜನಕವಿತ್ತು. ನೌಕೆಯ ಬಾಗಿಲನ್ನು ಹೊರಗಿನಿಂದ ನಟ್‌–ಬೋಲ್ಟ್‌ ಹಾಕಿ ಸೀಲ್‌ ಮಾಡಲಾಗಿರುತ್ತದೆ. ನೌಕೆ ಸಮುದ್ರದ ಮೇಲ್ಮೈಗೆ ಬಂದ್ರೂ, ಒಳಗಿರುವ ಯಾತ್ರಿಕರು ಬಾಗಿಲು ತೆರೆದುಕೊಂಡು ಹೊರಗೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಆಮ್ಲಜನಕದ ಸಂಗ್ರಹ ಖಾಲಿಯಾದಾಗ ಯಾತ್ರಿಕರೆಲ್ಲಾ ಪ್ರಾಣ ಕಳೆದುಕೊಳ್ಳುತ್ತಾರೆ.

ಪತ್ತೆ ಆಗೋದು ತಡವಾದಷ್ಟೂ, ನೌಕೆ ಇನ್ನಷ್ಟು ದೂರಕ್ಕೆ ತೇಲಿ ಹೋಗುವ ಸಾಧ್ಯತೆ ಹೆಚ್ಚು. ಅದರಿಂದ ನೌಕೆ ಪತ್ತೆಯಾಗುವ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಅಷ್ಟು ಆಳದಲ್ಲಿ ಒಂದು ನೌಕೆ ಸಿಲುಕಿಕೊಂಡರೆ, ಅದರ ಮೇಲೆ ಇರುವ ಲಕ್ಷಾಂತರ ಟನ್‌ಗಳಷ್ಟು ನೀರಿನ ಭಾರ ಮತ್ತು ಒತ್ತಡವನ್ನು ಅದು ತಡೆದುಕೊಳ್ಳೋದು ಕಷ್ಟ. ಆಗ ಅದು ಭಾರಕ್ಕೆ ನಲುಗಿ ಕಾಗದದಂತೆ ಮುದುಡಿ ಹೋಗುತ್ತದೆ. ಈಗ ಟೈಟನ್ ಗೂ ಹಾಗೇ ಆಗಿರಬಹುದು.

ಇನ್ನು ಅಷ್ಟು ಆಳದಲ್ಲಿ ನೌಕೆ ಸಿಲುಕಿದ್ದರೆ, ಅಲ್ಲಿಗೆ ಹೋಗಿ ಆ ನೌಕೆಯನ್ನು ಮೇಲಕ್ಕೆ ಎಳೆದು ತರಬಲ್ಲ ಸಾಮರ್ಥ್ಯವಿರುವ ಯಾವುದೇ ನೌಕೆ ಈಗ ಜಗತ್ತಿನಲ್ಲಿ ಇಲ್ಲ. ಹೀಗಾಗಿ ಅಂತಹ ನೌಕೆಯನ್ನು ಅಥವಾ ಅದನ್ನು ಒಡೆದು ಯಾತ್ರಿಕರನ್ನು ಮೇಲಕ್ಕೆ ಎತ್ತಿ ತರಲು ಸಾಧ್ಯವೇ ಇಲ್ಲ.

ಮನುಷ್ಯನ ತಣಿಯದ ಕುತೂಹಲ ಆತನನ್ನು ಹೊಸ ಹೊಸ ಸಾಹಸಗಳಿಗೆ ಮುಂದಾಗಿಸುತ್ತದೆ. ಇಂತಹ ಸಾಹಸ, ಕುತೂಹಲ ಹಾಗು ಹೊಸತನ್ನು ನೋಡುವ, ತಿಳಿದುಕೊಳ್ಳುವ ದಾಹ ಈ ಲೋಕದಲ್ಲಿ ಅದೆಷ್ಟೋ ಹೊಸ ಆವಿಷ್ಕಾರಗಳಿಗೆ ದಾರಿಯಾಗಿದೆ. ಆದರೆ ಕೆಲವೊಮ್ಮೆ ಇಂತಹ ಸಾಹಸಗಳು ಕೈಕೊಡುತ್ತವೆ. ಅಂತಹದ್ದೇ ಒಂದು ಸಾಹಸಕ್ಕೆ ಇಳಿದ ಐದು ಮಂದಿ ಈಗ ಪ್ರಾಣ ಕಳೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!