ಕಾಡು ನಾಶವೆಂಬ ನಿತ್ಯ ದುರಂತ

Update: 2024-04-15 03:48 GMT

ಪರಿಸರ-ಪ್ರಕೃತಿಯ ಮೇಲಾಗುತ್ತಿರುವ ಹಾನಿಯನ್ನು ತಡೆಗಟ್ಟಲು ಮಲೆನಾಡಿಗೆ ಮೊದಲ ಆದ್ಯತೆಯನ್ನು ನೀಡಬೇಕಾ ಅಥವಾ ಬಯಲು ಸೀಮೆಗೆ ಆದ್ಯತೆಯನ್ನು ನೀಡಬೇಕಾ ಎಂದು ನಮ್ಮ ಸ್ನೇಹಿತರ ಮಧ್ಯೆ ಒಂದು ಸಣ್ಣ ಚರ್ಚೆ ಆರಂಭವಾಯಿತು. ಕೆಲವರು ಮಲೆನಾಡು ಎಂದರು. ಇನ್ನು ಕೆಲವರು ಬಯಲು ಸೀಮೆಗೆ ಆದ್ಯತೆಯನ್ನು ನೀಡಬೇಕು ಎಂದರು. ಆದರೆ ಇತ್ತೀಚೆಗೆ ಪ್ರಕೃತಿ-ಪರಿಸರದ ಮೇಲಾಗುತ್ತಿರುವ ಅತ್ಯಾಚಾರ, ಅನಾಚಾರ, ಅನಾಹುತಗಳನ್ನು ಗಮನಿಸಿದಾಗ ಮಲೆನಾಡಿಗೆ ಎಷ್ಟು ಆದ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾತಿನಿಧ್ಯವನ್ನು ಬಯಲು ಸೀಮೆಗೂ ನೀಡಬೇಕಾಗಿದೆ.

ಈ ನಮ್ಮ ಭೂಮಿಯ ಮೇಲೆ ಸುಮಾರು 45ಶೇ. ಗಿಂತ ಹೆಚ್ಚಿನ ಪ್ರದೇಶದಲ್ಲಿ ಬಯಲು ಸೀಮೆಯಂತಹ ಒಣ ಭೂಮಿ ಇದೆ. ಈ ಜಾಗವು ಸುಮಾರು 250 ಕೋಟಿ ಜನರ ನೆಲೆಯಾಗಿದೆ. ಸುಮಾರು 120 ಕೋಟಿ ಹೆಕ್ಟೇರ್ ಅರಣ್ಯಕ್ಕೆ ಆತಿಥ್ಯವನ್ನು ವಹಿಸಿದೆ. ಇದು ವಿಶ್ವದ ಅರಣ್ಯ ಪ್ರದೇಶದ ಕಾಲು ಭಾಗದಷ್ಟು. ಲಕ್ಷಾಂತರ ಜೀವಸಂಕುಲಕ್ಕೆ ಆಶ್ರಯ ತಾಣವಾಗಿದೆ. ಇಂತಹ ಜಾಗದಲ್ಲಿ ಕಾರ್ಬನ್ನ ಅಂಶವು ಸಾವಯವ ಇಂಗಾಲದ ರೂಪದಲ್ಲಿ ಶೇಖರಣೆಯಾಗಿದೆ. ಅದು ಸುಮಾರು 40ಶೇ. ದಷ್ಟು ಎಂದು ಅಂದಾಜಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿಯೇ ನೋಡುವುದಾದರೆ, 2019ರ ವರದಿಯಂತೆ ಸುಮಾರು 38,575 ಚದರ ಕಿಲೋ ವಿಸ್ತೀರ್ಣದಲ್ಲಿ ಕಾಡುಗಳು ಜೀವಿಸುತ್ತಿವೆ. ಇದು ಕರ್ನಾಟಕದ ಭೂಪ್ರದೇಶದಲ್ಲಿ ಸುಮಾರು 22.61ಶೇ. ಜಾಗದಲ್ಲಿ. ಈ ಕಾಡುಗಳನ್ನು 3 ಭಾಗಗಳಾಗಿ ವರ್ಗೀಕರಿಸಲಾಗಿದೆ. ದಟ್ಟಾರಣ್ಯ ಪ್ರದೇಶವು ಸುಮಾರು 4,501 ಚ.ಕೀ. ಮಧ್ಯಮ ದಟ್ಟಾರಣ್ಯ ಸುಮಾರು 21,048 ಚಕೀ. ಹಾಗೂ ತೆರೆದ ಅರಣ್ಯ, ಕುರುಚಲು ಕಾಡುಗಳು, ಬೆಟ್ಟಗುಡ್ಡ ಪ್ರದೇಶಗಳು ಕರ್ನಾಟಕದ ಭಾಗಶಃ ಎಲ್ಲಾ ಜಿಲ್ಲೆಗಳಲ್ಲೂ ಇದ್ದು ಒಟ್ಟಾರೆ 17,510 ಚ.ಕೀ. ವ್ಯಾಪ್ತಿಯಂತೆ ಒಟ್ಟಾರೆ 43,059 ಚಕೀ. ವ್ಯಾಪ್ತಿಯಲ್ಲಿ ಕಾಡುಗಳು ಜೀವಿಸುತ್ತಿವೆ.

ಕರ್ನಾಟಕ ರಾಜ್ಯದಲ್ಲಿ ಜೀವಿಸುತ್ತಿರುವ ಈ ಕಾಡುಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 1.2 ಲಕ್ಷ ವಿವಿಧ ಪ್ರಭೆೇಧದ ಜೀವಸಂಕುಲ ಜೀವಿಸುತ್ತಿವೆ ಎಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 4,500 ಮರಗಿಡಗಳು, 800ಮೀನುಗಳು, 600 ಪಕ್ಷಿಗಳು, 120 ಸಸ್ತನಿಗಳು, 160 ಸರಿಸೃಪ, 1,500 ಔಷಧೀಯ ಸಸ್ಯ ಪ್ರಭೆೇದಗಳಿವೆ. ಇದರಲ್ಲಿ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 50 ರಿಂದ 60ಶೇ. ಜೀವಸಂಕುಲ ಜೀವಿಸುತ್ತಿದ್ದರೆ ಇನ್ನುಳಿದ ಜೀವಸಂಕುಲವು ಬಯಲು ಸೀಮೆಯ ಸಣ್ಣಸಣ್ಣ ಕಾಡುಗಳು, ಗೋಮಾಳಗಳು, ಕುರುಚಲು ಕಾಡುಗಳು, ಬೆಟ್ಟಗುಡ್ಡಗಳಲ್ಲಿರುವ ಕಾಡುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವಿಸುತ್ತಿವೆ.

ಹುಲ್ಲುಗಾವಲಿನ ಸುತ್ತಮುತ್ತ ಪ್ರದೇಶವು ನರಿ, ತೋಳ, ನಲು, ಹಾವು, ಇಲಿ, ಗೆದ್ದಿಲು, ಜಿಂಕೆ, ಚಿರತೆ, ಪಟ್ಟಿಚಿರತೆ, ಪಾರಿವಾಳ, ಗುಬ್ಬಿಯಂತಹ ಲಕ್ಷಾಂತರ ಪ್ರಾಣಿ ಪಕ್ಷಿ ಸಂಕುಲಕ್ಕೆ ಆಶ್ರಯತಾಣವಾಗಿದೆ. ಇಂತಹ ಕಾಡುಗಳಲ್ಲಿರುವ ಮರಗಿಡಗಳು ಮತ್ತು ಅವುಗಳ ಮಧ್ಯೆ ಬೆಳೆಯುತ್ತಿರುವ ಪೊದೆ ಗಿಡಗಳು, ಬಳ್ಳಿಗಳು, ಚೈತನ್ಯ ಕಳೆಗಿಡಗಳು, ಹುಲ್ಲಿನಂತಹ ಸಹಸ್ರಾರು ಸಂಖ್ಯೆಯ ಸಸ್ಯ ಪ್ರಭೆೇದಗಳು ಮಣ್ಣು ಸವಕಳಿಯಾದಂತೆ ತಡೆಯುವುದರ ಜೊತೆಗೆ ಪೋಷಕಾಂಶಗಳ ಚಕ್ರ, ಆಮ್ಲಜನಕದ ಚಕ್ರ, ಸಾರಜನಕ ಚಕ್ರ, ನೀರಿನ ಚಕ್ರವನ್ನು ಸಮತೋಲದಲ್ಲಿರುವಂತೆ ಮಾಡಿ ಕೃಷಿಯ ರಥವನ್ನು ಸದಾ ಮುನ್ನಡೆಸುತ್ತಿರುತ್ತವೆ. ಆಯಾ ಭಾಗಕ್ಕೆ ಗಾಳಿ ಮತ್ತು ನೀರನ್ನು ಶುದ್ಧ್ದೀಕರಿಸುವ ಮತ್ತು ಪ್ರಾಣವಾಯುವನ್ನು ನಿರಂತರವಾಗಿ ಒದಗಿಸುವಂತಹ ಜವಾಬ್ದಾರಿಯುತ ಕೆಲಸಕಾರ್ಯಗಳನ್ನು ಮಾಡುತ್ತಿರುತ್ತವೆ. ಬಹಳ ಮುಖ್ಯವಾಗಿ ಸೂರ್ಯನ ಕಿರಣಗಳಿಂದ ಒದಗುವ ಬೆಳಕನ್ನು ಸದ್ಬಳಕೆ ಮಾಡಿಕೊಂಡು ಭೂತಾಪಮಾನದ ಏರಿಕೆಗೆ ಕಡಿವಾಣ ಹಾಕುತ್ತದೆ.

ಭಾರತ ದೇಶದ ಸುಮಾರು 68ಶೇ. ನಷ್ಟು ಕೃಷಿ ಭೂಮಿ ಈ ಬಯಲು ಸೀಮೆಯ ಕಾಡುಗಳ ಸುತ್ತಮುತ್ತಲಲ್ಲಿದೆ. ಇಲ್ಲಿ ಸಹಸ್ರಾರು ಸಂಖ್ಯೆಯ ರೈತರು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಸು, ಎತ್ತು, ಎಮ್ಮೆ, ಆಡು-ಕುರಿ, ಕೋಳಿಯಂತಹ ರಾಸುಗಳು ಜೊತೆಗೂಡಿ ನೂರಾರು ಜಾತಿಯ ಹಣ್ಣು, ಕಾಳುಗಳು, ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ಹುಲ್ಲುಗಾವಲು ಮತ್ತು ಕೃಷಿ ಭೂಮಿಯಲ್ಲಿ ಚೈತನ್ಯ ಕಳೆಗಿಡಗಳು ಯಥೇಚ್ಛವಾಗಿ ಬೆಳೆಯುತ್ತಿದೆ. ಇವುಗಳಲ್ಲಿ ಸುಮಾರು 370 ಪ್ರಬೇಧವು ದ್ವಿದಳ ಧಾನ್ಯದ ಗಿಡಗಳ ಹಾಗೇ ಭೂಮಿಗೆ ಸಾರಜನಕವನ್ನು ಸ್ಥಿರೀಕರಿಸುವ ಗುಣವನ್ನು ಹೊಂದಿವೆ. ಸುಮಾರು 200 ಪ್ರಭೇದದ ಗಿಡಗಳು ಎಣ್ಣೆ ಕಾಳಿನ ಗಿಡಗಳಂತೆ ಎಣ್ಣೆಯ ಅಂಶವನ್ನು ಹೊಂದಿವೆ. ಸುಮಾರು 280 ಪ್ರಭೇದದ ಗಿಡಗಳು ಖಾರವಾದ, ಘಾಟಿನಿಂದ ಕೂಡಿದ ಅಂಶವನ್ನು ಹೊಂದಿವೆ.

ಸುಮಾರು 300 ಪ್ರಭೇದದ ಗಿಡಗಳು ಏಕದಳ ಜಾತಿಗೆ ಸೇರಿರುವವು. ತುಂಬೆ, ಮುಟ್ಟಿದರೆ ಮುನಿ, ಜಾಗಡೆ ಸೊಪ್ಪು, ನೆಲರ್ವಕೆ ಸೊಪ್ಪು, ನೆಲನೆಲ್ಲಿಯಂತಹ ನೂರಾರು ಔಷಧೀಯ ಗುಣಗಳುಳ್ಳ ಸಸ್ಯಗಳು ಮಣ್ಣಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾ ಪ್ರಾಣಿಪಕ್ಷಿಗಳಿಗೆ, ಮನುಷ್ಯರಿಗೆ ಬರುವ ಕಾಯಿಲೆಗಳಿಗೆ ಔಷಧೀಯ ಸತ್ವವನ್ನು ಒದಗಿಸುತ್ತಾ ಪ್ರಕೃತಿ-ಪರಿಸರದ ಉಳಿವಿಗಾಗಿ ಹಗಲಿರುಳು ತಮ್ಮ ಜೀವವನ್ನು ಮುಡುಪಾಗಿಟ್ಟಿವೆ. ಇವುಗಳ ಜೊತೆಜೊತೆಗೆ ಜೀವಿಸುತ್ತಿರುವ ಭೂತಾಳೆ, ಕತ್ತಾಳೆ, ಬೇವು, ಆಲ, ಹೊಂಗೆ, ಹುಣಸೆ, ಸಕ್ಕರೆ ಹಣ್ಣಿನಂತಹ ಸಹಸ್ರಾರು ಸಸ್ಯಸಂಕುಲಕ್ಕೆ ಬೆಲೆ ಕಟ್ಟಲಾದೀತೇ?

ಈ ಭೂಮಿಯ ಮೇಲೆ ಸುಮಾರು 3 ಲಕ್ಷ ಕೋಟಿ ಮರಗಳಿವೆ ಎಂದು ಅಂದಾಜಿಸಲಾಗಿದೆ. ಅಂದರೆ ಒಬ್ಬರಿಗೆ ಸುಮಾರು 400 ಮರಗಳಂತೆ. ಇಷ್ಟು ಸಂಖ್ಯೆಯ ಮರಗಳಲ್ಲಿ ಕಾಡಿನಲ್ಲಲ್ಲದೆ ಬಯಲು ಸೀಮೆಯಂತಹ ಪ್ರದೇಶದಲ್ಲಿ ಬೆಳೆಯುವ ಮರಗಳ ಸಂಖ್ಯೆಯ ಪಾಲು ಸುಮಾರು 40ಶೇ. ರಷ್ಟು ಎಂದು ಅಂದಾಜಿಸಲಾಗಿದೆ. ಇವೆಲ್ಲವುಗಳ ಸಮಿಶ್ರಣದಿಂದ ಭೂಮಿ ಇನ್ನು ಜೀವಂತವಾಗಿದೆ. ಇಂತಹ ಜಾಗದಲ್ಲೇನಾದರು ಪರಿಸರ ನಾಶವಾದರೆ ಆಹಾರ ಕ್ಷಾಮ ಎದುರಾಗುತ್ತದೆ. ಈಗಾಗಲೇ ಅಪೌಷ್ಟಿಕತೆಯಿಂದ ನರಳಾಡುತ್ತಿರುವ ನಮಗೆ ಈ ದುರಂತವನ್ನು ತಡೆಯಲಾದೀತೇ?

ಈಗ ನಾವು ಆಲೋಚಿಸಬೇಕಾಗಿರುವುದು, ಕಳೆದ ಮೂರು ಶತಮಾನಗಳಲ್ಲಿ ಸುಮಾರು 140 ಲಕ್ಷ ಚದರ ಕಿಲೋಮಿಟರ್ ಕಾಡು ನಾಶ ಆಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸುತ್ತದೆ. ಅಮೆಝಾನ್ ನೆಟ್ವರ್ಕ್ ಆ್ ಜಿಯೋರೆರೆನ್ಸ್ ಸೋಶಿಯೋ-ಎನ್ವಿರಾನ್ಮೆಂಟಲ್ ಇನ್ಫರ್ಮೇಷನ್ ವರದಿಯ ಪ್ರಕಾರ 2001-2020 ರ ಅವಧಿಯಲ್ಲಿ 5,42,581 ಚದರ ಕಿಲೋಮೀಟರ್ ಮಳೆಕಾಡು ನಾಶ ಆಗಿದೆ ಎಂದು ತಿಳಿಸುತ್ತದೆ. ಭಾರತ ದೇಶದಲ್ಲಿ 1990 ರಿಂದ 2015 ರ ಮಧ್ಯೆ ಸುಮಾರು 2,84,400 ಹೆಕ್ಟೇರ್ ಪ್ರದೇಶದಲ್ಲಿ ಕಾಡು ನಾಶವಾಗಿದ್ದು, 2015 ರಿಂದ 2020 ರ ಮಧ್ಯೆ ಅದರ ಸಂಖ್ಯೆ 6,68,400 ಹೆಕ್ಟೇರ್ ಪ್ರದೇಶಕ್ಕೆ ಏರಿಕೆಯಾಗಿದೆಯಂತೆ. ಕರ್ನಾಟಕ ರಾಜ್ಯದಲ್ಲಿ ಕಳೆದ 9 ವರ್ಷಗಳಲ್ಲಿ ಸುಮಾರು 26,000 ಎಕರೆ ಕಾಡನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಪ್ರತಿವರ್ಷವು ಸುಮಾರು 1500 ಕೋಟಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಬಹಳ ಮುಖ್ಯವಾಗಿ ಸುಮಾರು 40ಶೇ. ಜೀವಸಂಕುಲ ನಶಿಸಿದೆ ಎನ್ನುವ ಮಾತುಗಳು ಹಾಗೂ ಏರುತ್ತಿರುವ ತಾಪಮಾನದಿಂದ ಮತ್ತು ಬದಲಾಗುತ್ತಿರುವ ಹವಾಮಾನದಿಂದ ಪ್ರಸ್ತುತ ಜೀವಿಸುತ್ತಿರುವ ಕಾಡುಗಳು ಚೇತರಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವ ವರದಿಗಳು ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ದಟ್ಟಾರಣ್ಯದಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡಗಳ ನಿರ್ಮಾಣ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುವುದು ಎನ್ನುತ್ತಿದ್ದಾರೆ. ಇನ್ನು ಬಯಲು ಸೀಮೆಯಲ್ಲಿರುವ ತೆರೆದ ಅರಣ್ಯಗಳನ್ನು ಯಾರು ಕಣ್ತೆರೆದು ನೋಡುತ್ತಲೇ ಇಲ್ಲ. ಬೆಟ್ಟಗುಡ್ಡಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಗೋಮಾಳಗಳನ್ನು ಕಾರ್ಖಾನೆಗಳಿಗೆ, ಕಂಪೆನಿಗಳಿಗೆ ಜಾಗವನ್ನೂ ನೀಡುತ್ತಿರುವುದರಿಂದ ಹಸು, ಆಡುಕುರಿಗಳು, ಪ್ರಾಣಿಪಕ್ಷಿಗಳಿಗೆ ಮೇವಿದಂತೆ ಮಾಡುತ್ತಿವೆ.

ಇದೆ ಲ್ಲದರ ಮಧ್ಯೆ ಕರಾವಳಿ ತೀರಗಳು ಹಾಗೂ ಸಮುದ್ರ ಜೀವಗಳನ್ನು ಮರೆಯಲೇಬಾರದು. ಅಲ್ಲಿಯು ಆವೀಯತೆ ಹೆಚ್ಚಾಗುತ್ತಿದ್ದು ಸಹಸ್ರಾರು ಸಂಖ್ಯೆಯ ಜಲಜೀವಗಳ ನಿತ್ಯ ಮಾರಣಹೋಮವಾಗುತ್ತಿವೆ. ಇದೆ ಲ್ಲವನ್ನು ನೋಡುತ್ತಿದ್ದರೆ ಭೂಮಿಯ ಮೇಲೆ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾದರೂ ಹೇಗೆ? ಎನ್ನುವ ಪ್ರಶ್ನೆ ಕಾಡತೊಡಗಿದೆ. ಈಗ ನಾನು, ನನ್ನದು ಎನ್ನುವುದನ್ನು ಬಿಟ್ಟು ಇಡೀ ಭೂಮಂಡಲವನ್ನು ಏಕ ದೃಷ್ಟಿಕೋನದಿಂದ ನೋಡುತ್ತಾ ಪ್ರಕೃತಿ-ಪರಿಸರವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಈ ಭೂಮಿಯ ಮೇಲೆ ನಮ್ಮೆಲ್ಲರ ಉಳಿವು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಅವಿನಾಶ್ ಟಿ. ಜಿ. ಎಸ್.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!