ಕ್ರಿಕೆಟ್ ನೆಪದಲ್ಲಿ ಜೂಜಿನ ಚಟ: ಶುರುವಾಯಿತೆ ಬಿಸಿಸಿಐ ಹೊಸ ಆಟ?

Update: 2023-07-09 05:57 GMT

- ವಿನಯ್ ಕೆ.

ಈಗ, ಬಿಸಿಸಿಐ ಈ ಡ್ರೀಮ್ 11ನ್ನು ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿ ನೇಮಿಸಿರುವಾಗ ಸ್ಟಾರ್ ಕ್ರಿಕೆಟಿಗರು ಯಾಕೆ ಏನೂ ಮಾತನಾಡುವುದಿಲ್ಲ ಎಂಬ ಪ್ರಶ್ನೆಯೂ ಏಳುತ್ತದೆ. ಅವರೇಕೆ ಮಾತನಾಡುವುದಿಲ್ಲ ಎಂದರೆ, ಅವರಲ್ಲೇ ಹೆಚ್ಚಿನವರು ಇದೇ ಡ್ರೀಮ್ 11 ಪರವಾಗಿ ಮಾತನಾಡುವ ಬ್ರಾಂಡ್ ಅಂಬಾಸಿಡರ್ಗಳು. ತಮ್ಮ ಅಭಿಮಾನಿ ಕೋಟ್ಯಂತರ ಯುವಕರು ದಾರಿ ತಪ್ಪಿಯಾರೆ, ಜೂಜಾಡಿ ಕೆಟ್ಟುಹೋಗುವರೆ ಎಂಬುದು ಅವರಿಗೆ ಮುಖ್ಯವಾಗುವುದೇ ಇಲ್ಲ. ಮುಖ್ಯವಾಗುವುದು ಬರೀ ವ್ಯವಹಾರ, ಝಣ ಝಣ ಕಾಂಚಾಣ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಿದ್ಧವಾಗುತ್ತಿದ್ದಂತೆಯೇ ಬಿಸಿಸಿಐ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಿದೆ.

ಆದರೆ ಆ ಹೊಸ ಪ್ರಾಯೋಜಕ ಸಂಸ್ಥೆಯಾದರೂ ಯಾವುದು? ಅದೊಂದು ಆನ್ಲೈನ್ನಲ್ಲಿ ನಡೆಯುವ ಪರೋಕ್ಷ ಜೂಜು ಅಡ್ಡೆ. ಅಂಥ ಜೂಜು ಅಡ್ಡೆಯನ್ನೇ ದೇಶದ ಅಧಿಕೃತ ಕ್ರಿಕೆಟ್ ತಂಡಕ್ಕೆ ಅಧಿಕೃತ ಪ್ರಾಯೋಜಕ ಮಾಡಿಕೊಂಡ ಬಿಸಿಸಿಐ ದೇಶದ ಯುವಜನತೆಗೆ ಕೊಡುವ ಸಂದೇಶವೇನು? ಕ್ರಿಕೆಟ್ ಅಭಿಮಾನಿಗಳನ್ನೂ ಜೂಜಾಟಕ್ಕೆ ಹಚ್ಚುವ ಪ್ರಯತ್ನವಲ್ಲವೆ ಇದು?

ಆದರೆ ಬಿಸಿಸಿಐ ಹೇಳುವುದೇ ಬೇರೆ. ಆನ್ಲೈನ್ ಫ್ಯಾಂಟಸಿ ಗೇಮಿಂಗ್ ಪ್ಲಾಟ್ಫಾರ್ಮ್ ಡ್ರೀಮ್ 11ನ್ನು ಮೂರು ವರ್ಷಗಳ ಅವಧಿಗೆ ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕ ಎಂದು ಘೋಷಿಸಿದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿರುವುದು ಹೀಗೆ: ‘‘ಬಿಸಿಸಿಐನ ಅಧಿಕೃತ ಪ್ರಾಯೋಜಕತ್ವದಿಂದ ಈಗ ಪ್ರಮುಖ ಪ್ರಾಯೋಜಕತ್ವದವರೆಗೆ ಡ್ರೀಮ್ 11 ಬಲಿಷ್ಠವಾಗಿ ಬೆಳೆದಿದೆ. ಇದು ಭಾರತೀಯ ಕ್ರಿಕೆಟ್ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ. ಈ ವರ್ಷಾಂತ್ಯದಲ್ಲಿ ಐಸಿಸಿ ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರುವ ಹೊತ್ತಿನಲ್ಲಿ, ಅಭಿಮಾನಿಗಳ ಮನರಂಜನಾ ಅನುಭವವನ್ನು ಉತ್ತಮಪಡಿಸುವುದು ನಮ್ಮ ಆದ್ಯತೆ. ಈ ಪ್ರಾಯೋಜಕತ್ವ ಅದಕ್ಕೆ ಪೂರಕವಾಗಿರಲಿದೆ ಎಂಬ ವಿಶ್ವಾಸ ನನಗಿದೆ.’’

ಅಂದರೆ ಅವರ ಪ್ರಕಾರ, ಕ್ರಿಕೆಟ್ ಅಭಿಮಾನಿಗಳ ಅನುಭವವನ್ನು ಉತ್ತಮಗೊಳಿಸಲು ಡ್ರೀಮ್ 11 ಪ್ರಾಯೋಜಕತ್ವ ನೆರವಾಗಲಿದೆ. ಆದರೆ ಯುವ ಜನಾಂಗವನ್ನು ಸೋಲಿಗೆ, ಹತಾಶೆಗೆ, ಸಾಲದ ಸುಳಿಗೆ ತಳ್ಳುವ ಆನ್ಲೈನ್ ಜೂಜು ಅಡ್ಡೆ ಯಾವ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಅನುಭವವನ್ನು ಉತ್ತಮಪಡಿಸಲಿದೆ?

ಆನ್ಲೈನ್ ಗೇಮ್ ಹೆಸರಲ್ಲಿ, ಆಕರ್ಷಕ ಮುಖವಾಡದೊಂದಿಗೆ ಯುವಕರನ್ನು ಹಾಳುಮಾಡುವ ಯಕಶ್ಚಿತ್ ಜೂಜುಕಟ್ಟೆ ಇದೆಂಬುದನ್ನು ಈಗಾಗಲೇ ಇದರಲ್ಲಿ ಸೋತು ಹೈರಾಣಾಗಿರುವ ಹಲವರು ಆರೋಪಿಸಿದ್ದಾರೆ. ವೆಬ್ಪತ್ರಿಕೆಯೊಂದು ಪ್ರಕಟಿಸಿದ್ದ ಆಘಾತಕಾರಿ ವರದಿಯ ಪ್ರಕಾರ, 2018ರಲ್ಲಿ ಡ್ರೀಮ್ 11 ಆ್ಯಪ್ ಬಳಸಲು ಆರಂಭಿಸಿದ್ದ ಕೋಲ್ಕತಾದವರೊಬ್ಬರು, 50 ರೂ.ಯಿಂದ ಆಟ ಆರಂಭಿಸಿ ಕಡೆಗೆ ಜೂಜಾಟದ ಚಟಕ್ಕೆ ಬಿದ್ದು 35 ಲಕ್ಷ ರೂ. ಕಳೆದುಕೊಂಡಿದ್ದರು.

ಫ್ಯಾಂಟಸಿ ಗೇಮ್ಗಳು ವರ್ಚುವಲ್ ಆಟಗಳಾಗಿವೆ. ಇದರಲ್ಲಿ ಆಡುವವರು ಯಾವುದೇ ಆಟದಲ್ಲಿ ನಿಜ ಜೀವನದ ಕ್ರೀಡಾಪಟುಗಳ ತಂಡಗಳನ್ನು ತಾವೇ ರಚಿಸಲು ಅವಕಾಶ ಇರುತ್ತದೆ. ಕೆಲವರು ಇಂಥ ಅಪ್ಲಿಕೇಶನ್ ಬಳಸಿ ಅಲ್ಪಸ್ವಲ್ಪಗಳಿಸಿರುವುದು ನಿಜವಾದರೂ, ಬಹುಪಾಲು ಜನರು ಫ್ಯಾಂಟಸಿ ಆಟಗಳನ್ನು ಆಡಿ ಕಳೆದುಕೊಂಡಿರುವುದು ಮಾತ್ರ ದೊಡ್ಡ ಮೊತ್ತದ ಹಣ.

ಇಲ್ಲಿ ಆಟವೇನೋ ವರ್ಚುವಲ್. ಆದರೆ ಆಡುತ್ತಿರುವವರು ಹಣ ಹಾಕಿ ಕಳೆದುಕೊಳ್ಳುವುದು ಮಾತ್ರ ಪಕ್ಕಾ ವಾಸ್ತವ. ಕಳೆದುಕೊಳ್ಳುವ ಹಣವೂ ಅಸಲಿ. ಸೋತವರನ್ನು ಗೆಲ್ಲಿಸುವ ಹಟಕ್ಕೆ ಬೀಳಿಸುತ್ತಾ ಮತ್ತಷ್ಟು ಮತ್ತಷ್ಟು ಹತಾಶರನ್ನಾಗಿಸುವ ಅತಿ ಕರಾಳ ವಾಸ್ತವ ಇಲ್ಲಿನದು.

ಅಲ್ಪಸ್ವಲ್ಪಓದಿಕೊಂಡವರು ಮಾತ್ರವಲ್ಲ, ತೀರಾ ಸುಶಿಕ್ಷಿತರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ‘ದಿ ಪ್ರಿಂಟ್’ ಬರಹವೊಂದು, ಇತ್ತೀಚೆಗೆ ಕೆಲವರು ಝೂಮ್ ಕರೆಯಲ್ಲಿ ಸೇರಿ ತಮ್ಮ ಆನ್ಲೈನ್ ಗೇಮಿಂಗ್ ಗೀಳಿನ ಬಗ್ಗೆ ಮಾತನಾಡಿದ್ದನ್ನು ಪ್ರಸ್ತಾಪಿಸಿತ್ತು. ಅನಾಮಿಕರ ಗುಂಪಿನ ಆ ಮಾತುಕತೆಯಲ್ಲಿ ನಿಜ ಜೀವನದ ಜೂಜಾಟಕ್ಕಿಂತ ಹೆಚ್ಚಾಗಿ ರಮ್ಮಿ, ಪೋಕರ್, ಡ್ರೀಮ್ 11ನಂಥ ಫ್ಯಾಂಟಸಿ ಸ್ಪೋರ್ಟ್ಸ್ ಚಟಕ್ಕೆ ಬಿದ್ದಿರುವುದರ ಬಗ್ಗೆ ಹೆಚ್ಚಿನವರು ಹೇಳಿಕೊಂಡಿದ್ದರು.

ಟೆಕ್ಕಿಯಾಗಿರುವ ಒಬ್ಬರು ಆರೇ ತಿಂಗಳಲ್ಲಿ ಆನ್ಲೈನ್ ಆಟವಾಡಿ ಕಳೆದುಕೊಂಡಿದ್ದು 12 ಲಕ್ಷ ರೂ. ತಮಾಷೆಯೆಂದರೆ ಇವರು ಆರಂಭದಲ್ಲಿ ಗೆದ್ದಿದ್ದು ನೂರೋ ಸಾವಿರವೋ ಅಲ್ಲ, ಭಾರೀ ದೊಡ್ಡ ಮೊತ್ತ. ಒಮ್ಮೆ 80 ಸಾವಿರ ರೂ., ಆಮೇಲೆ 60 ಸಾವಿರ ರೂ., ನಂತರ 50 ಸಾವಿರ ರೂ. ಹೀಗೆ ಗೆದ್ದಿದ್ದರು. ಆದರೆ ಅದನ್ನೆಂದೂ ಅವರು ನಗದಾಗಿ ಪಡೆಯಲು ಆಗಲೇ ಇಲ್ಲ. ಯಾಕೆಂದರೆ ಮುಂದಿನ ಬೆಟ್ನಲ್ಲಿ ಅವರು ಗೆದ್ದಿದ್ದೆಲ್ಲ ಹೋಗಿಬಿಡುತ್ತಿತ್ತು. ಕಡೆಕಡೆಗೆ ಅವರಿಗೆ ಅರ್ಥವಾದದ್ದು ಏನೆಂದರೆ, ಇದು ಗೆಲ್ಲುವ ಆಟವಲ್ಲ ಎಂಬುದು. ಆ ಹೊತ್ತಿಗೆ ಅವರು ತಮ್ಮ ಆತ್ಮವಿಶ್ವಾಸ, ಆರೋಗ್ಯ ಮತ್ತು ಹಣವನ್ನು ದೊಡ್ಡ ಮಟ್ಟದಲ್ಲಿ ಕಳೆದುಕೊಂಡಿದ್ದರು. ಆ್ಯಪ್ ಡಿಲೀಟ್ ಮಾಡಲು ಆತ್ಮೀಯರೆಲ್ಲ ಹೇಳಿದರೂ ಆತ ಮಾತ್ರ ಅದರಿಂದ ದೂರವುಳಿಯಲು ಆಗದ ಸ್ಥಿತಿ ಮುಟ್ಟಿದ್ದರು.

2022ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 60 ಕೋಟಿ ಜನರು ಸ್ಮಾರ್ಟ್ಫೋನ್ ಬಳಸುತ್ತಾರೆ. ಮೊಬೈಲ್ ಇಂಟರ್ನೆಟ್ ಯುಗ ಭಾರತದಲ್ಲಿ ಆರಂಭವಾದ ನಂತರ ಜನರಿಗೆ ಆ್ಯಪ್ಗಳ ಪರಿಚಯವಾಯಿತು. ವರದಿಯೊಂದರ ಪ್ರಕಾರ ಈ ಆ್ಯಪ್ಗಳ ಪೈಕಿ ಅತಿ ಹೆಚ್ಚು ಲಾಭ ಗಳಿಸುವುದು ಆನ್ಲೈನ್ ಜೂಜಾಟದ ಆ್ಯಪ್ಗಳು. ‘ದಿ ವೀಕ್’ ಪ್ರಕಟಿಸಿದ್ದ ವರದಿಯ ಪ್ರಕಾರ, ಭಾರತದಲ್ಲಿ ಶೇ.40ರಷ್ಟು ಇಂಟರ್ನೆಟ್ ಬಳಕೆದಾರರು ಜೂಜಾಡುತ್ತಾರೆ.

ದೇಶದಲ್ಲಿಂದು ಈ ಆನ್ಲೈನ್ ಗೇಮಿಂಗ್ ಆ್ಯಪ್ಗಳ ವಹಿವಾಟು ಬಿಲಿಯನ್ಗಟ್ಟಲೆ ಡಾಲರ್. ಸ್ಟ್ಯಾಟಿಸ್ಟಾ ಪ್ರಕಾರ, 2020ರಲ್ಲಿ 36 ಕೋಟಿ ಜನರು ಆನ್ಲೈನ್ ಆಟವಾಡುತ್ತಿದ್ದರೆ, 2022ರ ಕೊನೆಯ ವೇಳೆಗೆ 51 ಕೋಟಿ ಮಂದಿ ಆನ್ಲೈನ್ ಆಟಗಳ ಗೀಳಿಗೆ ಬಿದ್ದಿದ್ದಾರೆ. ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ.

ಕೋವಿಡ್ನಂಥ ಸಂದರ್ಭವೂ ಜನ ಇದರ ಗೀಳು ಅಂಟಿಸಿಕೊಳ್ಳಲು ಮತ್ತೊಂದು ಕಾರಣವಾಯಿತು. ಹೊತ್ತು ಕಳೆಯಲೆಂದು ಕೆಲವರು ಶುರು ಮಾಡಿದರೆ, ಹಣ ಸಂಪಾದಿಸ ಬಹುದು ಎಂಬ ಆಸೆ ಯಿಂದಲೂ ಜನರು ಆನ್ಲೈನ್ ಆಟಗಳ ಹಳ್ಳಕ್ಕೆ ಬೀಳುತ್ತಾರೆ.

ದೇಶದಲ್ಲಿ ಎಲ್ಲಾ ರೀತಿಯ ಜೂಜಾಟವನ್ನು ನಿಷೇಧಿಸ ಲಾಗಿದೆಯಾದರೂ, ಫ್ಯಾಂಟಸಿ ಗೇಮಿಂಗ್ ನಿಯಂತ್ರಿಸುವ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಫ್ಯಾಂಟಸಿ ಆಟಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಏಕೈಕ ಸಂಸ್ಥೆ ‘ದಿ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್’ (ಎಫ್ಐಎಫ್ ಎಸ್). ಇದು ಫ್ಯಾಂಟಸಿ ಸ್ಪೋರ್ಟ್ಸ್ ಬಳಕೆದಾರರಿಗಾಗಿ ಬಿಡುಗಡೆ ಮಾಡಿರುವ ಗೈಡ್, ಇಂಥ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಜವಾಬ್ದಾರಿಯುತ ಆಟಕ್ಕಾಗಿ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಿದೆ.

ಜುಲೈ 30, 2021ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಫ್ಯಾಂಟಸಿ ಕ್ರೀಡೆಗಳ ಕಾನೂನುಬದ್ಧತೆಯನ್ನು ಎತ್ತಿಹಿಡಿದಿದೆ. ಇದಲ್ಲದೆ, ರಾಜಸ್ಥಾನ, ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್ಗಳು ಮತ್ತು ಬಾಂಬೆ ಹೈಕೋರ್ಟ್ ಕೂಡ ಕಾಲ್ಪನಿಕ ಕ್ರೀಡೆಗಳ ಕಾನೂನುಬದ್ಧತೆಯನ್ನು ಎತ್ತಿಹಿಡಿದಿವೆ. ಇನ್ನೊಂದೆಡೆ, ತೆಲಂಗಾಣ, ಅಸ್ಸಾಂ, ಒಡಿಶಾ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ನಂತಹ ರಾಜ್ಯಗಳು ಆನ್ಲೈನ್ ಆಟಗಳನ್ನು ಸಂಪೂರ್ಣವಾಗಿ ನಿಷೇಧಿಸಿವೆ.

ಕರ್ನಾಟಕದಲ್ಲಿಯೂ ಆನ್ಲೈನ್ ಜೂಜು ಹತ್ತಿಕ್ಕಲು, ಹಣವನ್ನು ಪಣವಾಗಿಟ್ಟು ನಡೆಸುವ ಎಲ್ಲ ಬಗೆಯ ಆನ್ಲೈನ್ ಆಟಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನವನ್ನು ಸರಕಾರ 2021ರ ಸೆಪ್ಟಂಬರ್ನಲ್ಲಿಯೇ ಕೈಗೊಂಡಿತ್ತು. ಆದರೆ ಫ್ಯಾಂಟಸಿ ಗೇಮಿಂಗ್ ಎನ್ನುವುದು ಕೌಶಲ್ಯ ಆಧಾರಿತವಾಗಿದೆ ಮತ್ತು ಜೂಜಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಉಲ್ಲೇಖಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಭಾರತೀಯ ಕಾನೂನುಗಳ ಪ್ರಕಾರ, ಅದೃಷ್ಟದ ಆಟಗಳ ಮೇಲೆ ಬೆಟ್ಟಿಂಗ್ ಕಾನೂನುಬಾಹಿರವಾಗಿದೆ. ಆದರೆ ಕೌಶಲ್ಯದ ಆಟಗಳ ಮೇಲೆ ಬೆಟ್ಟಿಂಗ್ ಕಾನೂನುಬದ್ಧ. ಹೀಗಾಗಿ ಈ ಆ್ಯಪ್ಗಳು ತಮ್ಮದು ಕೌಶಲ್ಯ ಆಧರಿತ ಆಟ ಎಂದು ಹೇಳಿ ರಕ್ಷಣೆ ಪಡೆಯುತ್ತಿವೆ. ಆದರೆ ದೇಶದ ಹಲವೆಡೆ ಡ್ರೀಮ್ 11 ತಂದಿಟ್ಟಿರುವ ಆಪತ್ತು ಸಣ್ಣದಲ್ಲ.

ಡ್ರೀಮ್ 11ನಂಥ ಆನ್ಲೈನ್ ಪ್ಲಾಟ್ಫಾರ್ಮ್ಗಳು ಐಪಿಎಲ್ ಪಂದ್ಯಗಳ ವೇಳೆಯಲ್ಲಿ ಬೆಟ್ಟಿಂಗ್ ಅಡ್ಡೆಗಳೇ ಆಗಿಬಿಡುವುದುಂಟು. ಇವು ದುಡ್ಡು ಗಳಿಸಬಹುದೆಂಬ ಆಮಿಷವನ್ನು ಮತ್ತೆ ಮತ್ತೆ ಒಡ್ಡುತ್ತವೆ. ಹಲವು ಸಲ ಹಣ ಕಳೆದುಕೊಂಡರೂ, ನಡುವೆ ಎಲ್ಲೋ ಗೆದ್ದುಬಿಟ್ಟರೆ, ಮತ್ತೆ ಆಟವಾಡುವ, ಹಣ ಮಾಡುವ ಆಸೆ ಹುಟ್ಟುವುದು ಇಲ್ಲಿರುವ ಅಪಾಯ.

ಬೆಂಗಳೂರಿನ ಸಿಸಿಬಿ ಬಳಿಯೂ ಸಾಕಷ್ಟು ಇಂಥ ಆನ್ಲೈನ್ ಗೇಮಿಂಗ್ ವಂಚನೆ ಪ್ರಕರಣಗಳಿವೆ. ಎಲ್ಲಾ ಆನ್ಲೈನ್ ಗೇಮಿಂಗ್ಗಳು ಜೂಜಾಟವಲ್ಲದಿದ್ದರೂ, ಕೆಲವು ಆಟಗಳಿಗೆ ಹಣ ತೊಡಗಿಸಬೇಕಿರುತ್ತದೆ. ಅಲ್ಲದೆ ಈ ಹಲವಾರು ಆ್ಯಪ್ಗಳು ಆ್ಯಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್ನಲ್ಲಿ ಯಾವಾಗಲೂ ಲಭ್ಯವಿರುವುದಿಲ್ಲ. ಇವನ್ನು ವೆಬ್ ಬ್ರೌಸರ್ನಿಂದ ನೇರವಾಗಿ ಡೌನ್ಲೋಡ್ ಮಾಡಲು ವಿಶೇಷ ಲಿಂಕ್ಗಳಿರುತ್ತವೆ. ಹೀಗಾಗಿ ಅಪರಾಧ ನಡೆದಾಗ ಡಿಜಿಟಲ್ ಜಾಡು ಪತ್ತೆಹಚ್ಚುವುದು ಕಷ್ಟ ಎನ್ನಲಾಗುತ್ತದೆ.

ಇಲ್ಲಿ ಸಬ್ ಬುಕ್ಕಿಗಳು ಕೂಡ ಆನ್ಲೈನ್ ಆಟದ ಚಟಕ್ಕೆ ಬಿದ್ದಿರುತ್ತಾರೆ. ಅವರು ತಾವು ಮಾಡಿಕೊಂಡ ಸಾಲ ತೀರಿಸಲು ಈ ಆ್ಯಪ್ಗಳಿಗೆ ಐಡಿಗಳನ್ನು ಮಾರಿಕೊಂಡು ಕಮಿಷನ್ ಗಿಟ್ಟಿಸುತ್ತಾರಂತೆ. ಹೀಗೆ ಚಟದ ವಿಷಚಕ್ರದಲ್ಲಿ, ಜನರು ಆಗೀಗ ಗೆದ್ದರೂ ಸೋಲುತ್ತಿರುತ್ತಾರೆ ಎನ್ನಲಾಗುತ್ತದೆ.

ಅಧಿಕೃತ ಅಪ್ಲಿಕೇಶನ್ಗಳು ಮತ್ತು ವಿದೇಶದಲ್ಲಿರುವ ಸರ್ವರ್ಗಳನ್ನು ಆಧರಿಸಿದ ಅಪ್ಲಿಕೇಶನ್ಗಳ ನಡುವೆ ವ್ಯತ್ಯಾಸವಿರುವುದನ್ನೂ ಇಲ್ಲಿ ಗಮನಿಸಬೇಕಿದೆ. ಅಲ್ಲದೆ, ಎಲ್ಲಾ ಆನ್ಲೈನ್ ಆಟಗಳನ್ನು ಆಟಗಾರರನ್ನು ಗೀಳಿಗೆ ಬೀಳಿಸಲೆಂದೇ ವಿನ್ಯಾಸಗೊಳಿಸಲಾಗಿರುತ್ತದೆ. ಡ್ರೀಮ್11ನಂಥ ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ಗಳು ಒಂದು ಬಾರಿ ಬಳಕೆಗಲ್ಲ, ಮತ್ತೆ ಮತ್ತೆ ಆಡಲು ಆಮಿಷವೊಡ್ಡುತ್ತವೆ.

ಡ್ರೀಮ್ 11 ಭಾರತದ ಅತಿದೊಡ್ಡ ಫ್ಯಾಂಟಸಿ ಗೇಮಿಂಗ್ ಪ್ಲಾಟ್ಫಾರ್ಮ್ ಆಗಿದೆ. 2022ರ ಹಣಕಾಸು ವರ್ಷದಲ್ಲಿ ಇದು ಶೇ.50ರಷ್ಟು ಹೆಚ್ಚು ಆದಾಯ ಗಳಿಸಿದೆ. ಅದರ ಒಟ್ಟು ಆದಾಯ 4,000 ಕೋಟಿ ರೂ. ದಾಟಿದೆ. ಆದರೆ ಅದೇ ವೇಳೆ ಲಾಭದಲ್ಲಿ ಕುಸಿತವಾಗಿರುವ ವರದಿಯೂ ಇದೆ.

ಇದರ ಆದಾಯದ ಏಕೈಕ ಮೂಲ ಫ್ಯಾಂಟಸಿ ಸ್ಪೋರ್ಟ್ಸ್. 2021ರಲ್ಲಿ 2,554 ಕೋಟಿ ರೂ.ಇದ್ದದ್ದು 2022ರಲ್ಲಿ 3,841 ಕೋಟಿ ರೂ.ಗೆ ಏರಿದೆ. ಇದರ ಆದಾಯ ಬರುವುದೇ ಫ್ಯಾಂಟಸಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಬಳಕೆದಾರರಿಗೆ ವಿಧಿಸುವ ಪ್ಲಾಟ್ಫಾರ್ಮ್ ಶುಲ್ಕದ ಮೂಲಕ.

ಡ್ರೀಮ್ 11 ಕಳೆದ ಮೂರು ಆವೃತ್ತಿಗಳಿಂದ ಐಪಿಎಲ್ ಅನ್ನು ಪ್ರಾಯೋಜಿಸುತ್ತಿದೆ ಮತ್ತು ಬ್ರಾಂಡ್ ಅಂಬಾಸಿಡರ್ಗಳಾಗಿ ಹಲವಾರು ಸ್ಟಾರ್ ಕ್ರಿಕೆಟಿಗರನ್ನು ನೇಮಿಸಿಕೊಂಡಿದೆ. ಹೀಗಾಗಿ ಜಾಹೀರಾತು ಮತ್ತು ಪ್ರಚಾರದ ವೆಚ್ಚಗಳು ಸಂಸ್ಥೆಯ ಲಾಭವನ್ನು ತಿಂದುಹಾಕುತ್ತಿವೆ ಎಂಬ ವರದಿಗಳಿವೆ. ಈ ವೆಚ್ಚ 2021ರಲ್ಲಿ ರೂ. 1,249 ಕೋಟಿ ಇದ್ದದ್ದು, 2022ರಲ್ಲಿ ರೂ. 2,158 ಕೋಟಿಗೆ ಏರಿತೆನ್ನಲಾಗಿದೆ.

ಈಗ, ಬಿಸಿಸಿಐ ಈ ಡ್ರೀಮ್ 11ನ್ನು ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿ ನೇಮಿಸಿರುವಾಗ ಸ್ಟಾರ್ ಕ್ರಿಕೆಟಿಗರು ಯಾಕೆ ಏನೂ ಮಾತನಾಡುವುದಿಲ್ಲ ಎಂಬ ಪ್ರಶ್ನೆಯೂ ಏಳುತ್ತದೆ. ಅವರೇಕೆ ಮಾತನಾಡುವುದಿಲ್ಲ ಎಂದರೆ, ಅವರಲ್ಲೇ ಹೆಚ್ಚಿನವರು ಇದೇ ಡ್ರೀಮ್ 11 ಪರವಾಗಿ ಮಾತನಾಡುವ ಬ್ರಾಂಡ್ ಅಂಬಾಸಿಡರ್ಗಳು. ತಮ್ಮ ಅಭಿಮಾನಿ ಕೋಟ್ಯಂತರ ಯುವಕರು ದಾರಿ ತಪ್ಪಿಯಾರೆ, ಜೂಜಾಡಿ ಕೆಟ್ಟುಹೋಗುವರೆ ಎಂಬುದು ಅವರಿಗೆ ಮುಖ್ಯವಾಗುವುದೇ ಇಲ್ಲ. ಮುಖ್ಯವಾಗುವುದು ಬರೀ ವ್ಯವಹಾರ, ಝಣ ಝಣ ಕಾಂಚಾಣ.

ಇನ್ನು ಬಿಸಿಸಿಐ ಉತ್ತರದಾಯಿತ್ವದ ಪ್ರಶ್ನೆ. ನಮ್ಮ ದೇಶದಲ್ಲಿ ಹಾಕಿ, ಫುಟ್ಬಾಲ್, ಅತ್ಲೆಟಿಕ್ಸ್ ಸಹಿತ ಬಹುತೇಕ ಎಲ್ಲ ಕ್ರೀಡೆಗಳನ್ನು ನಿಯಂತ್ರಿಸುವ ಸಂಸ್ಥೆಗಳು ಸರಕಾರಿ ಸಂಸ್ಥೆಗಳು ಅಥವಾ ಸರಕಾರದ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳು. ಆದರೆ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ದೇಶ ವಿದೇಶಗಳ ಟೂರ್ನಿಗೆ ಕಳಿಸುವ ಬಿಸಿಸಿಐ ಸರಕಾರಿ ಸಂಸ್ಥೆಯಲ್ಲ. ಅದರ ಮೇಲೆ ನೇರವಾಗಿ ಸರಕಾರದ ಯಾವುದೇ ನಿಯಂತ್ರಣವೂ ಇಲ್ಲ. ಅಲ್ಲೇನಿದ್ದರೂ ದೇಶದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಪಕ್ಷಭೇದವಿಲ್ಲದೆ ಪ್ರಭಾವಿ ರಾಜಕಾರಣಿಗಳು ಆಡಿದ್ದೇ ಆಟ.

ಬಿಸಿಸಿಐ ಪಾಲಿಗೆ ಎಲ್ಲವೂ ವ್ಯಾಪಾರವೇ. ಅದು ಆಯೋಜಿಸುವ ಐಪಿಎಲ್ ಅಂತೂ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾ ಲೀಗ್. ಪ್ರತೀ ಐಪಿಎಲ್ ಪಂದ್ಯದ ಮೌಲ್ಯ 114 ಕೋಟಿ ರೂ.. ಆದರೆ ಕ್ರೀಡೆ ಉತ್ತೇಜಿಸುವ ಹೆಸರಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ.

ಈ ದೇಶದ ಯುವಕರು ಕ್ರಿಕೆಟ್ಗೆ ಮರುಳಾಗಿ ಕಾಲ ಕಳೆಯುತ್ತಿದ್ದರೆ, ಕ್ರಿಕೆಟ್ ನೆಪದಲ್ಲಿ ಕೋಟಿಗಟ್ಟಲೆ ಆದಾಯ ಮಾಡಿಕೊಳ್ಳುತ್ತಿರುವುದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ. ಹೀಗಿರುವಾಗ ಅದಕ್ಕೆ ಪ್ರಾಯೋಜಕತ್ವವೂ ಒಂದು ವ್ಯವಹಾರವೇ.

ಮೊದಲು ಬೈಜೂಸ್ ಪ್ರಾಯೋಜಕತ್ವ ಇತ್ತು. ಅದು ಸಾಕಷ್ಟು ವಿವಾದ ಮೈಮೇಲೆ ಎಳೆದುಕೊಂಡಿತ್ತು. ಈಗ ಡ್ರೀಮ್ 11 ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿದೆ. ಮತ್ತೊಂದು ಆಟ ಶುರುವಾಗುತ್ತಿದೆ.

ಒಂದು ಕಡೆ ಯುವಜನರಿಗೆ ರಾಜಕಾರಣಿಗಳು ದ್ವೇಷ ತುಂಬುತ್ತಿದ್ದಾರೆ. ಇನ್ನೊಂದು ಕಡೆ ಕ್ರಿಕೆಟ್ ಹೆಸರಲ್ಲಿ ಯುವಜನರಿಗೆ ಜೂಜಿನ ಗೀಳು ಅಂಟಿಸಿ ಅವರನ್ನು ದಿವಾಳಿ ಮಾಡಲು ಇಡೀ ವ್ಯವಸ್ಥೆಯೇ ಸಜ್ಜಾಗಿ ನಿಂತಿದೆ. ಬಿಸಿಸಿಐ, ಕ್ರಿಕೆಟಿಗರು, ಟಿವಿ ವಾಹಿನಿಗಳು, ಪತ್ರಿಕೆಗಳು ಎಲ್ಲರೂ ಒಟ್ಟಾಗಿ ಈ ಜೂಜನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿ ಉತ್ತರದಾಯಿತ್ವದ ಪ್ರಶ್ನೆಯೇ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!