ಭಾರತದ ಸಂಸತ್ ನಲ್ಲಿ ಇನ್ನೂ ಮರೀಚಿಕೆಯಾಗಿರುವ ಲಿಂಗ ಸಮಾನತೆ

Update: 2024-03-31 04:01 GMT

ಸಂಸತ್ತಿನಲ್ಲಿ ಮಹಿಳೆಯರ ಜಾಗತಿಕ ಸರಾಸರಿ ಶೇ.24ರಷ್ಟಿದ್ದರೆ ಭಾರತದಲ್ಲಿ ಶೇ.12ರಷ್ಟಿದೆ. ಜಿನೀವಾ ಮೂಲದ ಇಂಟರ್-ಪಾರ್ಲಿಮೆಂಟರಿ ಯೂನಿಯನ್ ಪ್ರಕಾರ, ಸಂಸತ್ತಿನಲ್ಲಿ ಚುನಾಯಿತ ಪ್ರತಿನಿಧಿಗಳ ಅನುಪಾತದ ವಿಷಯದಲ್ಲಿ ಜಾಗತಿಕವಾಗಿ ಭಾರತವು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 148ನೇ ಸ್ಥಾನದಲ್ಲಿದೆ. ಏಶ್ಯದ 18 ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. 8 ಸಾರ್ಕ್ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಸಾರ್ಕ್ ಗುಂಪಿನಲ್ಲಿರುವ ಇತರ ರಾಷ್ಟ್ರಗಳಾದ ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ.

ಪ್ರಜಾಪ್ರಭುತ್ವದಲ್ಲಿ ಭೌಗೋಳಿಕ ಗಾತ್ರಕ್ಕಿಂತ ಜನಸಂಖ್ಯೆಯ ಗಾತ್ರವನ್ನು ಪರಿಗಣಿಸುವುದು ಬಹಳ ಮುಖ್ಯ. ಜನಸಂಖ್ಯೆಯ ಪ್ರಕಾರ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎನಿಸಿರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲೂ ಭಾರತೀಯರು ಕಾತುರರಾಗಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಸಮಾನ ರಾಜಕೀಯ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಕೇವಲ ಮತದಾನದ ಹಕ್ಕನ್ನು ಕೊಟ್ಟರೆ ಅಥವಾ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿದ ಮಾತ್ರಕ್ಕೆ ಅದನ್ನು ಭಾಗವಹಿಸುವಿಕೆ ಎನ್ನಲಾಗದು. ಅದಕ್ಕೆ ವಿಶಾಲವಾದ ಅರ್ಥವಿದೆ. ಭಾಗವಹಿಸುವಿಕೆ ಎಂದರೆ ಅಧಿಕಾರ ಕೇಂದ್ರದಲ್ಲಿಯೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಸಿಕ್ಕಿದರೆ ಮಾತ್ರ ರಾಜಕೀಯ ಭಾಗವಹಿಸುವಿಕೆ ಎಂಬ ಪದಕ್ಕೆ ಅರ್ಥ ಬರುತ್ತದೆ. ಭಾರತದ ಮೊದಲ ಲೋಕಸಭಾ ಚುನಾವಣೆಯಲ್ಲಿ 15 ಮಹಿಳಾ ಸಂಸದರು ಆಯ್ಕೆಯಾಗಿದ್ದರು. ಪ್ರಸಕ್ತ 17ನೇ ಲೋಕಸಭೆಯಲ್ಲಿ 78 ಮಹಿಳಾ ಸಂಸತ್ ಸದಸ್ಯರು ಇದ್ದಾರೆ. ಅಂದರೆ ಮಹಿಳಾ ಸಂಸದರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗುತ್ತಿದ್ದರೂ ಅದು ಸಮಾಧಾನಪಡುವಷ್ಟಿಲ್ಲ ಎನ್ನುವುದೂ ಸತ್ಯ.

ಭಾರತದ ಸಂಸತ್ 543 ಸಂಸದರುಗಳಿಂದ ಕೂಡಿದ್ದು ಆಂಗ್ಲೋ ಇಂಡಿಯನ್ನರಿಗೆ ಎರಡು ಸ್ಥಾನಗಳನ್ನು ಮೀಸಲಿಟ್ಟಿದ್ದ ಸಂವಿಧಾನದ ಅನುಚ್ಛೇದ 331ಕ್ಕೆ ತಿದ್ದುಪಡಿ ತಂದ ನಂತರ ಒಟ್ಟು ಸಂಸದರ ಸಂಖ್ಯೆ 552ರವರೆಗೂ ತಲುಪುತ್ತಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಜನಸಂಖ್ಯೆಯ ಆಧಾರದ ಮೇಲೆ ಪ್ರಾತಿನಿಧ್ಯ ಸಿಗಬೇಕಾಗಿರುವುದು ಅತ್ಯಂತ ಪ್ರಮುಖವಾದ ಅಂಶ. ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಒಟ್ಟು ಲೋಕಸಭಾ ಸ್ಥಾನಗಳ ಅರ್ಧದಷ್ಟು ಸ್ಥಾನಗಳಾದರೂ ಲಭ್ಯವಾಗಬೇಕು. 2009ರಲ್ಲಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ 52 ಮಹಿಳಾ ಅಭ್ಯರ್ಥಿಗಳು, 2014ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಯಲ್ಲಿ 64 ಮಹಿಳೆಯರು ಮತ್ತು 2019ರಲ್ಲಿ ನಡೆದ ಕಳೆದ ಲೋಕಸಭಾ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಭಾರತದ ಸಂಸತ್ತಿನಲ್ಲಿ ಮಹಿಳಾ ಸಂಸದರ ಸಂಖ್ಯೆ 78ನ್ನು ಮೀರಿಲ್ಲ. ಇದು ಲಿಂಗ ಸಮಾನತೆಯ ನಿಧಾನಗತಿಗೂ ಕಾರಣವಾಗಿದೆ.

ಭಾರತದಲ್ಲಿ ಮಹಿಳೆಯರ ಜನಸಂಖ್ಯೆ 2021ರಲ್ಲಿ 646 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅದೇ ಅವಧಿಯಲ್ಲಿ ಪುರುಷರ ಜನಸಂಖ್ಯೆ 696 ಮಿಲಿಯನ್ ಇತ್ತು. ಅಂದರೆ ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಶೇ.50 ಎಂದು ಅಂದಾಜಿಸಬಹುದು. ಅಂದರೆ ಭಾರತದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದಾರೆ. ಭಾರತದ ಸಂಸತ್ತಿಗೆ ಇದುವರೆಗೂ ನಡೆದಿರುವ ಚುನಾವಣೆಗಳಲ್ಲಿ ಮಹಿಳೆಯರ ಮತದಾನದ ಸರಾಸರಿ ಪ್ರಮಾಣ ಶೇ.65.63 ಆಗಿದ್ದರೆ ಪುರುಷರ ಮತದಾನದ ಪ್ರಮಾಣ 67.09 ಆಗಿದೆ. ಅಂದರೆ ಭಾರತದಲ್ಲಿ ಮಹಿಳೆಯರು ಜನಸಂಖ್ಯೆಯ ಅರ್ಧದಷ್ಟಿದ್ದಾರೆ ಮತ್ತು ಮತದಾನದ ಪ್ರಮಾಣದಲ್ಲಿಯೂ ಪುರುಷರಷ್ಟೇ ಪ್ರಮಾಣದಲ್ಲಿದ್ದಾರೆ ಎಂಬುದು ಸ್ಪಷ್ಟವಾಯಿತು. ಆದರೆ ಸಂಸತ್ತಿನಲ್ಲಿ ಮಹಿಳಾ ಸಂಸತ್ ಸದಸ್ಯರ ಪ್ರಾತಿನಿಧ್ಯ ಮಾತ್ರ ಎರಡಂಕಿಯನ್ನು ದಾಟಿಲ್ಲ. ಮಹಿಳೆಯರ ಪ್ರಾತಿನಿಧ್ಯ ಭಾರತದ ಸಂಸತ್ತಿನಲ್ಲಿ ಇದುವರೆಗೂ ಶೇ.12ರ ಮಿತಿಯನ್ನು ಮೀರಿಲ್ಲ.

ಸಂಸತ್ತಿನಲ್ಲಿ ಮಹಿಳೆಯರ ಜಾಗತಿಕ ಸರಾಸರಿ ಶೇ.24ರಷ್ಟಿದ್ದರೆ ಭಾರತದಲ್ಲಿ ಶೇ.12ರಷ್ಟಿದೆ. ಜಿನೀವಾ ಮೂಲದ ಇಂಟರ್-ಪಾರ್ಲಿಮೆಂಟರಿ ಯೂನಿಯನ್ ಪ್ರಕಾರ, ಸಂಸತ್ತಿನಲ್ಲಿ ಚುನಾಯಿತ ಪ್ರತಿನಿಧಿಗಳ ಅನುಪಾತದ ವಿಷಯದಲ್ಲಿ ಜಾಗತಿಕವಾಗಿ ಭಾರತವು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 148ನೇ ಸ್ಥಾನದಲ್ಲಿದೆ. ಏಶ್ಯದ 18 ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. 8 ಸಾರ್ಕ್ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಸಾರ್ಕ್ ಗುಂಪಿನಲ್ಲಿರುವ ಇತರ ರಾಷ್ಟ್ರಗಳಾದ ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳ ಸಂಸತ್ತುಗಳು, ದಕ್ಷಿಣ ಸುಡಾನ್ ಮತ್ತು ಸೌದಿ ಅರೇಬಿಯದಂತಹ ದೇಶಗಳು ಭಾರತಕ್ಕಿಂತ ಉತ್ತಮ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ. ರುವಾಂಡ, ಬೊಲಿವಿಯಾ, ಕ್ಯೂಬಾ, ಸೆನೆಗಲ್, ದಕ್ಷಿಣ ಆಫ್ರಿಕಾ, ಸ್ಪೇನ್ ಸೇರಿದಂತೆ ವಿಶ್ವದ 42 ದೇಶಗಳು ತಮ್ಮ ಸಂಸತ್ತಿನಲ್ಲಿ ಶೇ.30 ಅಥವಾ ಅದಕ್ಕಿಂತ ಹೆಚ್ಚು ಮಹಿಳಾ ಸಂಸದರನ್ನು ಹೊಂದಿವೆ.

2022ರಲ್ಲಿ ಜಗತ್ತಿನ 47 ದೇಶಗಳಲ್ಲಿ ಸಂಸತ್ ಚುನಾವಣೆಗಳು ನಡೆದವು. ಈ ಪೈಕಿ ಕೋಸ್ಟರಿಕಾ, ಸ್ವೀಡನ್, ಸೆನೆಗಲ್, ಡೆನ್ಮಾರ್ಕ್, ಸ್ಲೊವೇನಿಯಾ, ಆಸ್ಟ್ರೇಲಿಯ ಮತ್ತು ಬಾರ್ಬಡೋಸ್ ದೇಶಗಳ ಸಂಸತ್ತುಗಳಿಗೆ ಶೇ.40ರಷ್ಟು ಮಹಿಳೆಯರು ಆಯ್ಕೆಯಾದರು. ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯದ ಸೆನೆಟ್ಗೆ ನಡೆದ ಚುನಾವಣೆಯಲ್ಲಿ ಶೇ.56.6ರಷ್ಟು ಮಹಿಳೆಯರು ಆಯ್ಕೆಯಾಗುವ ಮೂಲಕ ಇತಿಹಾಸವೇ ನಿರ್ಮಾಣವಾಯಿತು. ಕ್ಯೂಬಾದ ಸಂಸತ್ತಿಗೆ ಶೇ.56 ಮತ್ತು ನಿಕರಾಗುವಾದ ಸಂಸತ್ತಿಗೆ ಶೇ.52ರಷ್ಟು ಮಹಿಳೆಯರು ಆಯ್ಕೆಯಾಗುವ ಮೂಲಕ ಈ ದೇಶಗಳ ಸಂಸತ್ತಿನಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಸಂಸದರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯ ವರದಿಯು ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯವು ನಿರಾಶಾದಾಯಕವಾಗಿ ಮುಂದುವರಿಯುತ್ತಿದೆ ಎಂದು ಗಮನಿಸಿತು. ರಾಜಕೀಯ ಪಕ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಮಹಿಳೆಯರು ಅತ್ಯಲ್ಪ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಯಿತು. ಸ್ಥಳೀಯ ಸಂಸ್ಥೆಗಳು, ರಾಜ್ಯ ಶಾಸಕಾಂಗ ಸಭೆಗಳು, ಸಂಸತ್ತು ಮತ್ತು ಸರಕಾರದ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 50 ಸ್ಥಾನಗಳನ್ನು ಮೀಸಲಿಡಲು ವರದಿಯಲ್ಲಿ ಶಿಫಾರಸು ಮಾಡಲಾಯಿತು.

1996, 1998, 1999 ಮತ್ತು 2008ರಲ್ಲಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಮಸೂದೆಗಳನ್ನು ಪರಿಚಯಿಸಲಾಯಿತು. 2010ರಲ್ಲಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು. ಆದರೆ ಲೋಕಸಭೆಯಲ್ಲಿ ಯಶಸ್ವಿಯಾಗಲಿಲ್ಲ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಟ್ಟು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಸಂವಿಧಾನ 128ನೇ ಮಸೂದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಲೋಕಸಭೆಯಲ್ಲಿ ಸೆಪ್ಟಂಬರ್ 19, 2023ರಂದು ಪರಿಚಯಿಸಲಾಯಿತು. ಲೋಕಸಭೆ ಮತ್ತು ರಾಜ್ಯಸಭೆಗಳು ಕ್ರಮವಾಗಿ ಈ ವಿಧೇಯಕವನ್ನು ಸೆಪ್ಟಂಬರ್ 20 ಮತ್ತು 21, 2023ರಂದು ಅಂಗೀಕರಿಸಿದವು. ಆದರೆ ಈ ವಿಧೇಯಕದಲ್ಲಿ ಜನಗಣತಿಯ ಆಧಾರದ ಮೇಲೆ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲು ಡಿಲಿಮಿಟೇಶನ್ ಕೈಗೊಳ್ಳುವ ಉದ್ದೇಶವನ್ನು ಹೊಂದಿರುವುದರಿಂದ ಮುಂದಿನ ಜನಗಣತಿ ಪ್ರಕಟಗೊಂಡ ಬಳಿಕ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಮಹಿಳಾ ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಮಹಿಳಾ ಸಂಸತ್ ಸದಸ್ಯರ ಸಂಖ್ಯೆ ಪ್ರಸಕ್ತ ಇರುವ 78ರಿಂದ 181ಕ್ಕೆ ಏರಿಕೆಯಾಗುವ ಆಶಯವನ್ನು ಹೊಂದಲಾಗಿದೆ.

ಭಾರತದಲ್ಲಿ 1881ರಿಂದ ಪ್ರತೀ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಲಾಗುತ್ತಿದೆ. ಆದರೆ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಎಲ್ಲೆಡೆ ಅನಿಶ್ಚಿತತೆಯನ್ನು ಉಂಟು ಮಾಡಿದ್ದರಿಂದ 2021ರಲ್ಲಿ ನಡೆಯಬೇಕಿದ್ದ ದಶವಾರ್ಷಿಕ ಜನಗಣತಿಯನ್ನು ಮುಂದೂಡಲಾಯಿತು. ಆದ್ದರಿಂದ ಮಹಿಳೆಯರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯ ಪ್ರಯೋಜನಗಳು ದೊರೆಯುವುದಿಲ್ಲ. ಜನಗಣತಿ ನಡೆದು, ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡರೆ ಮುಂದೆ 2029ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಈ ವಿಧೇಯಕದ ಪ್ರಯೋಜನ ಮಹಿಳೆಯರಿಗೆ ದೊರೆಯಲಿದೆ. ಹಾಗಾದಾಗ ಮಾತ್ರ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಅರ್ಥ ಬರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಅಮ್ಮಸಂದ್ರ ಸುರೇಶ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!