ಸಂಕಷ್ಟದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು

ಎಲ್ಲ ಸರಕಾರಿ ಶಾಲೆಗಳಲ್ಲೂ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ವ್ಯವಸ್ಥೆ ಅಗತ್ಯ. ಇದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಸಾಧ್ಯವಾಗುತ್ತದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಸರಕಾರಿ ಶಾಲೆಗಳ ನಿರ್ವಹಣೆಗೆ ಅಗತ್ಯದ ಅನುದಾನ ಇಲ್ಲದಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸಬೇಕು ಎನ್ನುವುದು ಶಿಕ್ಷಕರ ಬೇಡಿಕೆಯಾಗಿದೆ.

Update: 2023-09-15 14:00 GMT

ಸಾಂದರ್ಭಿಕ ಚಿತ್ರ

ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಬೇಕು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 3ತನಕ ನಲಿ -ಕಲಿ, ಖಾಸಗಿ ಶಾಲೆಯಲ್ಲಿ ಕಲಿ- ನಲಿ ಎಂಬ ವ್ಯವಸ್ಥೆ ಇದೆ. ಈ ದ್ವಂದ್ವ ನೀತಿ ಸಲ್ಲದು. ಇದನ್ನು ಸರಿಪಡಿಸಲು ಸರಕಾರ ಗಮನ ನೀಡಬೇಕು.

-ಜಗದೀಶ್ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಂಗಳೂರು ತಾಲೂಕು ಅಧ್ಯಕ್ಷ

ಮಂಗಳೂರು: ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರರ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಜ್ಯೇಷ್ಠತೆ ಆಧಾರದಲ್ಲಿ ಭಡ್ತಿಯಾಗಲಿ, ಆರ್ಥಿಕ ಸೌಲಭ್ಯಗಳಾಗಲಿ ಇಲ್ಲದಾಗಿದ್ದು, ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ರಾಜ್ಯಾದ್ಯಂತ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವರು, ಶಾಸಕರ ಮೂಲಕ ಕಾಲಮಿತಿಯೊಳಗೆ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು, ಜಿಲ್ಲಾ ಸಂಘದ ಘಟಕಗಳು ಸರಕಾರಕ್ಕೆ ಮನವಿ ಮಾಡಿತ್ತು. ಒಂದು ತಿಂಗಳ ಒಳಗಾಗಿ ತಮ್ಮ ಪ್ರಮುಖ ಬೇಡಿಕೆಗಳೊಂದಿಗೆ, ಶೈಕ್ಷಣಿಕೆ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ 6ರಿಂದ 8ನೇ ತರಗತಿಯ ಬೋಧನೆಯನ್ನು ಅನಿರ್ದಿಷ್ಟಾವಧಿ ತನಕ ಬಹಿಷ್ಕರಿಸುವುದಾಗಿ ಶಿಕ್ಷಕರು ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು.

ಶಾಲಾ ಶಿಕ್ಷಕರಾಗಿ 2016ಕ್ಕಿಂತ ಮೊದಲು ನೇಮಕಗೊಂಡವರಲ್ಲಿ ಪದವಿ ವಿದ್ಯಾರ್ಹತೆ ಹೊಂದಿದ ಶಿಕ್ಷಕರನ್ನು ‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ’ ಎಂದು ಪದನಾಮೀಕರಿಸಬೇಕು. ಸೇವಾ ಜೇಷ್ಠತೆ ಮತ್ತು ಆರ್ಥಿಕ ಸೌಲಭ್ಯವನ್ನು ನೀಡಬೇಕು ಮತ್ತು 2016ಕ್ಕಿಂತ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡವರಲ್ಲಿ ಬಿ.ಎಡ್ ಪದವಿ ಹೊಂದಿರುವ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರ ಖಾಲಿ ಇರುವ ಹುದ್ದೆಗಳಿಗೆ ನೇಮಕದ ವೇಳೆ ಶೇ.50ರಷ್ಟು ಭಡ್ತಿ ನೀಡಬೇಕು ಎನ್ನುವುದು ಶಿಕ್ಷಕರ ಬೇಡಿಕೆಯಾಗಿದೆ.

ಪ್ರಾಥಮಿಕ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಸರಕಾರ ಗಮನಹರಿಸುತ್ತಿಲ್ಲ. ಮುಖ್ಯ ಶಿಕ್ಷಕರ ಹುದ್ದೆಗೆ ಭಡ್ತಿ ಅಥವಾ ನಿರಾಕರಣೆ ಮಾಡಿದರೂ ಶಿಕ್ಷಕರಿಗೆ ಆರ್ಥಿಕ ಸೌಲಭ್ಯವಿಲ್ಲ. ಒಂದು ಭಡ್ತಿ ಮಾತ್ರ ನೀಡುತ್ತಾರೆ. 15, 20, 25 ಮತ್ತು 30 ವರ್ಷ ಸೇವೆ ಸಲ್ಲಿಸಿದವರಿಗೆ ಸ್ವಯಂಚಾಲಿತ ವಿಶೇಷ ಭಡ್ತಿಗೆ ಅವಕಾಶ ಇದ್ದರೂ ಅದನ್ನು ಕೊಡುವುದಿಲ್ಲ. ಭಡ್ತಿ ದೊರೆತರೂ ಒಂದು ವೇಳೆ ಅವರು ಮುಖ್ಯ ಶಿಕ್ಷಕರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳದಿದ್ದರೆ ಅವರಿಗೆ ಆರ್ಥಿಕ ಸೌಲಭ್ಯವಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.

ಪ್ರತಿ ಶಾಲೆಗೆ ಒಬ್ಬ ಮುಖ್ಯಶಿಕ್ಷಕ ಮತ್ತು ಓರ್ವ ದೈಹಿಕ ಶಿಕ್ಷಣ ಶಿಕ್ಷಕ, ಡಿ ಗ್ರೂಪ್ ನೌಕರ ಮತ್ತು ತರಗತಿಗೊಬ್ಬ ಶಿಕ್ಷಕರನ್ನು ನೀಡಬೇಕು ಎನ್ನುವುದು ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದೆ.

ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಬೇಕು. ಈಗ ಶಾಲೆಗಳಲ್ಲಿ 1ರಿಂದ 3ತನಕ ಸರಕಾರಿ ಶಾಲೆಯಲ್ಲಿ ನಲಿ -ಕಲಿ, ಖಾಸಗಿ ಶಾಲೆಯಲ್ಲಿ ಕಲಿ- ನಲಿ ಎಂಬ ವ್ಯವಸ್ಥೆ ಇದೆ. ಈ ದ್ವಂದ್ವ ನೀತಿ ಸಲ್ಲದು. ಮಕ್ಕಳು ಶಾಲೆಗೆ ಬಾರದೆ ಇರಲು ಇದೊಂದು ಪ್ರಮುಖ ಕಾರಣವಾಗಿದೆ ಎನ್ನುವುದು ಶಿಕ್ಷಕರ ಅಭಿಪ್ರಾಯವಾಗಿದೆ.

ಕೇಂದ್ರದ ಶಿಕ್ಷಣ ನೀತಿಯಂತೆ 1ರಿಂದ 5ರ ತನಕ ತರಗತಿಗೆ ಶಿಕ್ಷಕರಾಗಲು ಡಿ ಎಡ್ ಅರ್ಹತೆ ಸಾಕು. 6ರಿಂದ 8ರ ತನಕದ ತರಗತಿಗಳಿಗೆ ಡಿ ಎಡ್ ಜೊತೆಗೆ ಪದವಿ ಅಗತ್ಯ, ಪ್ರೌಢಶಾಲೆಗೆ ಶಿಕ್ಷಕರಾಗಲು ಪದವಿ ಮತ್ತು ಬಿ ಎಡ್ ಶಿಕ್ಷಣ ಹೊಂದಿರಬೇಕಾಗುತ್ತದೆ. 2006ರಲ್ಲಿ ಆನೇಕ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭವಾಗಿತ್ತು. ಇಂತಹ ಶಾಲೆಗಳಿಗೆ ಓರ್ವ ಟಿಜಿಟಿ ಶಿಕ್ಷಕನನ್ನು ಸರಕಾರ ಒದಗಿಸಿತ್ತು.

ತರಗತಿಗೊಬ್ಬ ಶಿಕ್ಷಕರು ಎಲ್ಲೂ ಇಲ್ಲ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಶಿಕ್ಷಕರನ್ನು ನೀಡಲಾಗುತ್ತಿದೆ. 30ರ ಒಳಗಿದ್ದರೆ ಇಬ್ಬರು ಶಿಕ್ಷಕರು, 60ಕ್ಕಿಂತ ಅಧಿಕ ಮಕ್ಕಳಿಗೆ ಮೂವರು, 90ರ ನಂತರ 4 ಮಂದಿ, ಐದು ತರಗತಿಗೆ ಐದು ಶಿಕ್ಷಕರು ದೊರೆಯಬೇಕಾದರೆ ಅಲ್ಲಿ 120ಕ್ಕಿಂತ ಅಧಿಕ ಮಕ್ಕಳು ಅಗತ್ಯ. 1ರಿಂದ 8ರ ತನಕ ಬಹುತೇಕ ಶಾಲೆಗಳಲ್ಲಿ ಐವರು ಶಿಕ್ಷಕರು ಇದ್ದಾರೆ.ಅಲ್ಲಿ ಪ್ರತ್ಯೇಕ ಮುಖ್ಯ ಶಿಕ್ಷಕರು ಇಲ್ಲ. ಇರುವ ಶಿಕ್ಷಕರಲ್ಲಿ ಒಬ್ಬರು ತರಗತಿಯ ಕರ್ತವ್ಯದೊಂದಿಗೆ ಮುಖ್ಯ ಶಿಕ್ಷಕರ ಹುದ್ದೆಯ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿದೆ. ಶಾಲೆಗೆ ಮುಖ್ಯ ಶಿಕ್ಷಕರ ನೇಮಕವಾಗಬೇಕಾದರೆ 450ಕ್ಕಿಂತ ಹೆಚ್ಚು ಮಕ್ಕಳು ಬೇಕು.

ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಮೂರು ತರಗತಿಗಳಿಗೆ ಮುಖ್ಯ ಶಿಕ್ಷಕರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಶಿಕ್ಷಕರು ಇರುತ್ತಾರೆ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಏಳು ಅಥವಾ ಎಂಟು ತರಗತಿಗಳಿದ್ದರೂ ಬಹುತೇಕ ಶಾಲೆಗಳಲ್ಲಿ ನಾಲ್ಕು ಅಥವಾ ಐದು ಮಂದಿ ಶಿಕ್ಷಕರು ಮಾತ್ರ ಇದ್ದಾರೆ.

ರಾಜ್ಯದಲ್ಲಿ ಆಯ್ದ 2,000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿ ಐದು ವರ್ಷ ಕಳೆದರೂ ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕರನ್ನು ಒದಗಿಸಿಲ್ಲ. ಶಾಲೆಗಳಲ್ಲಿ ಇರುವ ಶಿಕ್ಷಕರೇ ಆಂಗ್ಲ ಮಾಧ್ಯಮ ವಿಭಾಗವನ್ನು ನಿಭಾಯಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಇಬ್ರಾಹಿಂ ಅಡ್ಕಸ್ಥಳ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!