ಈ ಡಿ ಕೂಡ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದೆಯೆ ?
ಅತ್ತ ಕಾಂಗ್ರೆಸ್ ಖಾತೆಗಳನ್ನು ಸ್ಥಗಿತ ಗೊಳಿಸಲಾಗುತ್ತದೆ, ಇತ್ತ ಆಪ್ ನಾಯಕ, ದಿಲ್ಲಿ ಸಿಎಂ ಕೇಜ್ರಿವಾಲ್ ರನ್ನು ಅರೆಸ್ಟ್ ಮಾಡಲಾಗುತ್ತದೆ.
ಏನ್ ನಡೀತಾ ಇದೆ ಈ ದೇಶದಲ್ಲಿ ? ಇದೇ ರೀತಿ ನಡೆಯಲಿದೆಯ ಈ ಬಾರಿಯ ಮಹಾ ಚುನಾವಣೆ ? ಇದೇನಾ ಚುನಾವಣಾ ಆಯೋಗ ಹೇಳಿದ್ದ 'ಲೆವೆಲ್ ಪ್ಲೇಯಿಂಗ್ ಫೀಲ್ಡ್' ? ಈಗ ಎಲ್ಲಿದೆ ಚುನಾವಣಾ ಆಯೋಗ ? ಗುರುವಾರ ರಾತ್ರಿ ಸಮನ್ಸ್ ನೀಡಲು ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಈಡಿ ತಂಡ ಅವರನ್ನು ಬಂಧಿಸಿದೆ.
ಒಂದೆಡೆ ವಿಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿ, ಮತ್ತೊಂದೆಡೆ ವಿಪಕ್ಷ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಬಂಧನ.
ಈ ಮೂಲಕ ಬಿಜೆಪಿ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆಯೆ? ಕಾಂಗ್ರೆಸ್ ವಿಚಾರ ಮತ್ತು ಕೇಜ್ರಿವಾಲ್ ಬಂಧನದ ವಿಚಾರದ ನಡುವೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್ಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನೂ ಸಲ್ಲಿಸಿರುವ ವಿಚಾರವೇ ಜನರಿಗೆ ಗೊತ್ತಾಗದೆ ಹೋಗಲಿದೆಯೆ?
ಆ ವಿಚಾರ ಪೂರ್ತಿಯಾಗಿ ಮರೆಯಾಗಿ ಹೋಗುವಂತೆ ಮಡಿಲ ಮೀಡಿಯಾಗಳು ಅಬ್ಬರದಿಂದ ಈ ವಿಚಾರವನ್ನು ಇಡೀ ದಿನ ಮತ್ತೆ ಮತ್ತೆ ತಿರುಗಿಸಿ ಹೇಳುತ್ತ ಕಳೆಯಲಿವೆಯೆ? ಒಂದೆಡೆ ಚುನಾವಣೆ ಶುರುವಾಗಿದೆ, ಇನ್ನೊಂದೆಡೆ ಈಡಿ ಕಾರ್ಯಾಚರಣೆ ಕೂಡ ಶುರುವಾಗಿಬಿಟ್ಟಿದೆ.
ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಿರುವಂತೆ ರಕ್ಷಣೆ ನೀಡಲು ಕೇಜ್ರಿವಾಲ್ ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಳ್ಳಿಹಾಕಿದ ಬಳಿಕ ಕೇಜ್ರಿವಾಲ್ ನಿವಾಸಕ್ಕೆ ಈಡಿ ಅಧಿಕಾರಿಗಳು ತೆರಳಿದ್ದರು.
ಅನಂತರ ಅವರನ್ನು ಬಂಧಿಸಲಾಗಿರುವ ಬಗ್ಗೆ ಸುದ್ದಿ ಹರಡಿತು. ಅದರ ನಡುವೆಯೇ, ದೆಹಲಿ ಸಚಿವೆ ಅತಿಶಿ, ಈಡಿ ಬಿಜೆಪಿಯ ರಾಜಕೀಯ ಅಸ್ತ್ರವಾಗಿಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮೊರೆಹೋಗಲಿರುವುದಾಗಿಯೂ ಅತಿಶಿ ಹೇಳಿದ್ಧಾರೆ. ಈವರೆಗೂ ಎಷ್ಟು ಅಕ್ರಮ ಹಣ ಜಪ್ತಿ ಮಾಡಲಾಗಿದೆ ? ಒಂದು ರೂಪಾಯಿಯೂ ಸಿಗಲಿಲ್ಲ. ಯಾವ ಸಾಕ್ಷ್ಯಗಳೂ ಇಲ್ಲ. ಆದರೂ ಒಂದರ ಬೆನ್ನಿಗೊಂದರಂತೆ ಸಮನ್ಸ್ ಕಳಿಸಲಾಗುತ್ತದೆ. ಕಡೆಗೆ ಮುಖ್ಯಮಂತ್ರಿಯ ಮನೆಗೇ ಹೋಗಿ ಬಂಧಿಸಲಾಗುತ್ತದೆ.
ಈಚೆಗಷ್ಟೇ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿತ್ತು. ಈಗ ಕೇಜ್ರಿವಾಲ್ ಬಂಧನವಾಗಿದೆ.
ಈಡಿ 9 ಬಾರಿ ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ಹಾಜರಾಗಿರಲಿಲ್ಲ. ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ನ್ಯಾಯಪೀಠ ಸಮನ್ಸ್ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
ಮಧ್ಯಂತರ ರಕ್ಷಣೆಗೆ ನಿರಾಕರಿಸಿದ ಕೋರ್ಟ್, ಉತ್ತರ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಆದರೆ ಅಷ್ಟರೊಳಗೇ ಕೇಜ್ರಿವಾಲ್ ಬಂಧನವಾಗಿದೆ.
ಆದರೆ ಎಷ್ಟೊಂದು ಭಂಡತನದಿಂದ ಈಡಿಯಂಥ ಸಂಸ್ಥೆಯನ್ನು ಬಳಸಿಕೊಂಡು, ಚುನಾವಣೆ ಹೊತ್ತಲ್ಲಿಯೇ ವಿಪಕ್ಷ ನಾಯಕರನ್ನು ಬಂಧಿಸಲಾಗುತ್ತಿದೆ ? ಹೀಗೆ ಎಲ್ಲ ವಿಪಕ್ಷ ನಾಯಕರನ್ನೂ ಬಂಧಿಸಿ ಜೈಲಿಗೆ ಕಳಿಸಿ ದೇಶದಲ್ಲಿ ಚುನಾವಣೆ ನಡೆಸಲಾಗುತ್ತದೆಯೆ?
ಪ್ರಧಾನಿ ಮೋದಿಗೆ ವಿಪಕ್ಷ ನಾಯಕರ ವಿಚಾರದಲ್ಲಿ ಯಾಕಿಷ್ಟು ಭಯ? ಮೋದಿಗೆ ತನ್ನ ಭಾರೀ ಜನಪ್ರಿಯತೆ ಬಗ್ಗೆಯೇ ಭರವಸೆ ಇಲ್ಲವೆ ?
ಚುನಾವಣೆ ಘೋಷಣೆಯಾಗಿದೆ. ಅಧಿಕಾರ ಯಾರಿಗೆ ಎಂಬುದನ್ನು ಜನರು ನಿರ್ಧರಿಸಬೇಕಾಗಿದೆ. ಹೀಗಿರುವಾಗ ವಿಪಕ್ಷ ನಾಯಕರನ್ನೆಲ್ಲ ಬಂಧಿಸಲಾಗುತ್ತಿರುವುದು ಏನ್ನನ್ನು ಸೂಚಿಸುತ್ತದೆ? ಇಲ್ಲಿ ನಿಷ್ಪಕ್ಷಪಾತವಾಗಿಯೇ ಎಲ್ಲವೂ ನಡೆಯುತ್ತದೆ ಎಂದು ಜನರು ನಂಬುತ್ತಾರೆಯೆ?
ಈಡಿ ನಿಷ್ಪಕ್ಷಪಾತಿಯೇ ಆಗಿದ್ದರೆ ಯಾಕೆ ಅದರ ಕಣ್ಣಿಗೆ ಬಿಜೆಪಿ ನಾಯಕರು ಬೀಳುತ್ತಿಲ್ಲ? ಅವರಲ್ಲಿ ಭ್ರಷ್ಟಾಚಾರ ಆರೋಪ ಹೊತ್ತವರು ಇಲ್ಲವೆ?
ಹೇಮಂತ್ ಸೊರೇನ್ ರನ್ನು ಭ್ರಷ್ಟ ಎಂದು ಬಂಧಿಸಿದ ಬೆನ್ನಿಗೇ ಬಿಜೆಪಿ ಅದೇ ಸೊರೇನ್ ರ ಅತ್ತೆಯನ್ನು ಬಿಜೆಪಿಗೆ ತೆಗೆದುಕೊಳ್ಳುತ್ತದೆ. ಇದೆಂತಹಾ ರಾಜಕೀಯ ? ಯಾಕೆ ಪ್ರತಿ ಬಾರಿಯೂ ವಿಪಕ್ಷ ನಾಯಕರು ಮಾತ್ರವೇ ಈಡಿ ದೃಷ್ಟಿಗೆ ಸಿಗುತ್ತಾರೆ?
ಆದರೆ ಅದೇ ವಿಪಕ್ಷ ನಾಯಕರು ಬಿಜೆಪಿ ಸೇರಿದ ಕೂಡಲೇ ಅವರ ಪ್ರಕರಣ ಅಲ್ಲಿಗೇ ಮುಚ್ಚಿ ಹೋಗುತ್ತದೆ ಯಾಕೆ ? ಮೊನ್ನೆ ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ನ ಮಾಜಿ ಸಚಿವರಾದ ತನ್ನ ಮಾವನಿಗೆ ಈ ಡಿ ನೋಟಿಸ್ ಬಂದ ಬೆನ್ನಿಗೇ ಕಾಂಗ್ರೆಸ್ ನಾಯಕಿ ಅನುಕೃತಿ ಪಕ್ಷ ಬಿಟ್ಟರು.
ಯಾಕೆ ಚುನಾವಣೆ ಎದುರಿಸಬೇಕಿರುವ ಹೊತ್ತಿನಲ್ಲಿ ವಿಪಕ್ಷ ನಾಯಕರನ್ನು ಬಂಧಿಸುವ ಸಂಚು ನಡೆಯುತ್ತಿದೆ? ಇದೇ ವಿಚಾರಕ್ಕೆ ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ. ಎಷ್ಟು ಕಾಲವಾಯಿತು ಅವರನ್ನು ಜೈಲಿಗೆ ತಳ್ಳಿ? ಸತ್ಯೇಂದ್ರ ಜೈನ್ ಎಷ್ಟು ತಿಂಗಳಿಂದ ಜೈಲಿನಲ್ಲಿದ್ಧಾರಲ್ಲವೆ?
ಸಂಜಯ್ ಸಿಂಗ್ ಎಷ್ಟು ಸಮಯದಿಂದ ಜೈಲಿನಲ್ಲಿದ್ದಾರೆ? ಈಗ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ.ಅವರ ಬಂಧನದಿಂದಾಗಿ ಎಎಪಿ ನಾಯಕತ್ವಕ್ಕೆ ದೊಡ್ಡ ಏಟು ಬೀಳಲಿದೆ.
ಪಕ್ಷದೊಳಗೆ ಒಂದು ಬಗೆಯ ಆತಂಕ ಆವರಿಸಲಿದೆ. ದೆಹಲಿ ಮತ್ತು ಪಂಜಾಬ್ನಲ್ಲಿ ಬಿಜೆಪಿ ವಿರುದ್ಧ ಎಎಪಿ ಸೆಣೆಸಲಿತ್ತು. ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಎಎಪಿ ಮೈತ್ರಿಯಾಗಿತ್ತು. ಇದು ಬಿಜೆಪಿ ಭಯಕ್ಕೆ ಕಾರಣವಾಗಿತ್ತು. ಈಗಾಗಲೇ ಹಲವು ತಿಂಗಳುಗಳಿಂದ ಕೇಜ್ರಿವಾಲ್ ಅವರನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ಚುನಾವಣೆಯಿರಲಿ ಏನೇ ಇರಲಿ ವಿಪಕ್ಷ ನಾಯಕರ ವಿರುದ್ಧದ ತನಿಖಾ ಏಜನ್ಸಿಗಳ ಪ್ರಕರಣಗಳನ್ನು ತಡೆಯಲಾಗದು.
ಆದರೆ ಅದೆಷ್ಟು ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಲ್ಲವೆ? ಛತ್ತಿಸ್ಘಡದಲ್ಲಿ ವಿಧಾನಸಭೆ ಚುನಾವಣೆ ಹೊತ್ತಲ್ಲಿಯೇ ಈಡಿ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಮಧ್ಯಪ್ರದೇಶದಲ್ಲಿಯೂ ಚುನಾವಣೆ ನಡೆಯುತ್ತಿತ್ತು. ಅಲ್ಲಿ ಮಾತ್ರ ಈಡಿ ಪತ್ತೆಯೇ ಇರಲಿಲ್ಲ. ಈ ಥರದ ಕಾರ್ಯಾಚರಣೆ ತಡೆಯುವಂತೆ ಕಾಂಗ್ರೆಸ್ ಆಗ ಚುನಾವಣಾ ಆಯೋಗವನ್ನು ಕೇಳಿಕೊಂಡಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಒಂದು ತಿಂಗಳು ಜೈಲಿನಲ್ಲಿಡಲಾಯಿತು.
ಮೊನ್ನೆ ಸುಪ್ರೀಂ ಕೋರ್ಟ್ ಆ ಪ್ರಕರಣವನ್ನೇ ರದ್ದುಪಡಿಸಿದೆ. ಅಂದರೆ ಅನಗತ್ಯ ಪ್ರಕರಣ ದಾಖಲಿಸಿ ವಿಪಕ್ಷ ನಾಯಕನಿಗೆ ಕಿರುಕುಳ ನೀಡಲಾಗಿತ್ತು ಎಂದಲ್ಲವೆ?
ಈ ತನಿಖಾ ಏಜನ್ಸಿಯ ಹಣೆಬರಹವೇ ಇದು. ಇತ್ತೀಚಿನ ವರ್ಷಗಳಲ್ಲಿ ಅದರ ಟ್ರ್ಯಾಕ್ ರೆಕಾರ್ಡ್ ಉದ್ದಕ್ಕೂ ಹೀಗೆಯೇ ಇದೆ. ಹೀಗಿರುವಾಗ ಅದು ನಿಷ್ಪಕ್ಷಪಾತವಾಗಿ ಇದನ್ನೆಲ್ಲ ಮಾಡುತ್ತಿದೆ ಎಂದು ಹೇಗೆ ನಂಬೋದು ? ಯಾಕೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಮನೆಗೆ ಹೀಗೆ ಈಡಿ ತಂಡ ಹೋಗುವುದಿಲ್ಲ? ಯಾಕೆ ಐಟಿ ತಂಡ ಹೋಗುವುದಿಲ್ಲ?
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೇಲೆ ಭಾರೀ ಭ್ರಷ್ಟಾಚಾರದ ಆರೋಪ ಬಂತು. ಅದೇ ಕಾರಣಕ್ಕೆ ಬಿಜೆಪಿ ಸೋತಿದ್ದೂ ಆಯಿತು. ಚುನಾವಣಾ ಬಾಂಡ್ ವಿಚಾರದಲ್ಲಿನ ಸತ್ಯಗಳಂತೂ ಬಿಜೆಪಿಯ ಕಡು ಭ್ರಷ್ಟತೆಯನ್ನೇ ಹೇಳುತ್ತಿವೆ. ಒಂದೊಂದು ಕಂಪನಿಯೂ ನೂರಾರು ಕೋಟಿ ಚಂದಾ ನೀಡಿದೆ. ಅವುಗಳ ಮೇಲೆ ಈಡಿ ರೇಡ್ ಆದ ಬಳಿಕವೂ ಅಂಥ ಹಲವಾರು ಕಂಪನಿಗಳು ಕೋಟಿಗಟ್ಟಲೆ ಚಂದಾ ನೀಡಿವೆ ಎಂಬುದರ ಬಗ್ಗೆ ವರದಿಗಳು ಹೇಳುತ್ತಿವೆ.
ಈ ವಿಚಾರವಾಗಿ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಈಡಿ ದಾಳಿಯ ಭಯದಿಂದ ಕಂಪನಿಗಳು ಚಂದಾ ನೀಡಿರುವುದು ಬಯಲಾಗಿದೆ. ಈಡಿ ದಾಳಿಯ ಬಳಿಕ ವಿಪಕ್ಷ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವುದನ್ನೂ ನೋಡುತ್ತಿದ್ದೇವೆ. ಇದೆಲ್ಲವೂ ಏನನ್ನು ಹೇಳುತ್ತದೆ? ಹೀಗೆ ವಿಪಕ್ಷ ನಾಯಕರನ್ನು ಜೈಲಿಗೆ ಅಟ್ಟುತ್ತಿದ್ದರೆ ಚುನಾವಣೆಗೆ ಏನು ಅರ್ಥ ಉಳಿಯುತ್ತದೆ? ಚುನಾವಣೆಗೆ ಮೊದಲು ವಿಪಕ್ಷ ನಾಯಕರೆಲ್ಲ ಹೀಗೆ ಜೈಲುಪಾಲಾಗುತ್ತಾರೆಯೆ?
ಕಾಂಗ್ರೆಸ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಕಾಂಗ್ರೆಸ್ ಖಾತೆಯಿಂದ ಸರ್ಕಾರ ಹಣವನ್ನು ವರ್ಗಾಯಿಸುತ್ತದೆ. ಇವೆಲ್ಲವೂ ಏನು ಹಾಗಾದರೆ?ಯಾವತ್ತಾದರೂ ಈ ದೇಶದಲ್ಲಿ ಹೀಗೆಲ್ಲ ನಡೆದದ್ದಿತ್ತೆ? ಈಗ ನಡೆಯಲಿರುವ ಚುನಾವಣೆ ಯಾವ ರೀತಿಯಲ್ಲಿ ನಡೆಯಲಿದೆ? ಅದು ಬಿಜೆಪಿ ಮಾತ್ರವೇ ಗೆಲ್ಲುವುದಕ್ಕೆ ಇಡೀ ಮೈದಾನವನ್ನು ಸಜ್ಜುಗೊಳಿಸುತ್ತಿದೆಯೆ?
ಮೊನ್ನೆ ಮುಖ್ಯ ಚುನಾವಣಾ ಆಯುಕ್ತರು ಹೇಳಿದ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಂದರೆ ಇದೇನಾ? ವಿಪಕ್ಷಗಳು ಭ್ರಷ್ಟ ಎಂದು ಬಿಂಬಿಸುತ್ತ, ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುತ್ತ, ಚುನಾವಣಾ ಅಖಾಡವನ್ನು ಖಾಲಿ ಖಾಲಿಯಾಗಿಡಲಾಗುತ್ತದೆಯೆ?
ಅಲ್ಲಿ ಒಬ್ಬರೇ ಒಬ್ಬ ನಿಂತಿರುತ್ತಾನೆಯೆ? ಮತ್ತು ಅವರೇ ಗೆಲ್ಲುವವರೂ ಅವರೇ ಈ ದೇಶದ ಭವಿಷ್ಯವೂ ಆಗಿರುತ್ತಾರೆಯೆ? ಯಾರೆಂದರೆ ಯಾರೂ ಇಲ್ಲದ ಕಡೆಗಳಲ್ಲಿಯೂ ಕ್ಯಾಮೆರಾಗಳಿಗಾಗಿಯೇ ಕೈಬೀಸುವ ಆ ನಾಯಕನನ್ನು ತಡೆಯುವವರು ಯಾರೂ ಇಲ್ಲವೆ? ಅಖಾಡವನ್ನೇ ಖಾಲಿ ಮಾಡಿ ನಾನು ಗೆದ್ದೇ ಎಂದು ಬೀಗಿದರೆ ಅದು ಆ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರಿಗಾದರೂ ತೃಪ್ತಿ ನೀಡುತ್ತದೆಯೇ ? ಹಾಗೊಂದು ಸ್ಪರ್ಧೆ ನಡೆದರೆ ಅದು ಸ್ಪರ್ಧೆ ಎಂದು ಹೇಳಲಾದರೂ ಆಗುತ್ತಾ ? ಲೆವೆಲ್ ಪ್ಲೇಯಿಂಗ್ ಫೀಲ್ಡ್ ನಲ್ಲಿ ಕೊನೆಗೆ ಒಬ್ಬರೇ ಉಳಿದಿದ್ದರೆ , ಅವರೇ ಗೆದ್ದರೆ ಅದಕ್ಕೇನು ಅರ್ಥ ?