ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಪಕ್ಷಕ್ಕೇ ಎರಡು ಬಗೆಯುವ ನಾಯಕ !

Update: 2024-02-06 06:05 GMT
Editor : Ismail | Byline : ಆರ್. ಜೀವಿ

ಜಗದೀಶ್ ಶೆಟ್ಟರ್ (Screengrab:X/@ANI) 

ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿದ್ದ ಜಗದೀಶ್ ಶೆಟ್ಟರ್ ಬಿಜೆಪಿಗೇ ಮರಳಿದರು ಎಂಬುದು ಕಾಂಗ್ರೆಸ್ ಪಾಲಿಗೆ ತೀರಾ ಆಘಾತಕಾರಿ ಸಂಗತಿಯೇನೂ ಆಗಬೇಕಿಲ್ಲ. ಹಾಗೆ ನೋಡಿದರೆ ಅದು ಅನಿರೀಕ್ಷಿತವೂ ಅಲ್ಲ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದು, ಬಿಜೆಪಿಯಿನ್ನು ​ಸೋಲಿಸಬೇಕು ಎಂದಿದ್ದ ಶೆಟ್ಟರ್,

ಈಗ ಲೋಕಸಭೆ ಚುನಾವಣೆ ಹೊತ್ತಿಗೆ ಮತ್ತೆ ಬಿಜೆಪಿ ಸೇರಿಕೊಂಡು, ​ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕು ಎಂಬ ಹೇಳಿಕೆ ಕೊಡುತ್ತಿರುವುದು ಒಂದು ರಾಜಕೀಯ ತಮಾಷೆ ಮಾತ್ರ.

ಆದರೆ ನಿಜವಾಗಿಯೂ ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳಬೇಕಿರುವ ವಿಚಾರ ಬೇರೆಯೇ ಇದೆ. ಶೆಟ್ಟರ್ ಹೋದ ಬಗ್ಗೆ ಟೆನ್ಶನ್ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಶಾಮನೂರು ಶಿವಶಂಕರಪ್ಪರಂತಹ ನಾಯಕರು ಇನ್ನೂ ಪಕ್ಷದಲ್ಲಿ ಉಳಿದುಕೊಂಡಿರುವ ಬಗ್ಗೆ ಕಾಂಗ್ರೆಸ್ ಆತಂಕಗೊಳ್ಳಬೇಕಾಗಿದೆ.

ಅಂಥವರ ವಿಚಾರದಲ್ಲಿ ಕಾಂಗ್ರೆಸ್ ತಲೆಕೆಡಿಸಿಕೊಳ್ಳಲೇಬೇಕಾಗಿದೆ​.

ಬಿಜೆಪಿಯಲ್ಲೇ ಎಲ್ಲವನ್ನೂ ಪಡೆದ ಶೆಟ್ಟರ್ ಇಂದಲ್ಲ ನಾಳೆ ಬಿಜೆಪಿಗೆ ಹೋಗಲೇ ಬೇಕಿತ್ತು.

ಅವರೆಂದೂ ಕಾಂಗ್ರೆಸಿಗರಾಗಲೇ ಇಲ್ಲ.

ಅವರು ಕಾಂಗ್ರೆಸ್ ನಲ್ಲಿದ್ದ ಅತೃಪ್ತ ಬಿಜೆಪಿಗ ಹಾಗು ಆರೆಸ್ಸೆಸ್ಸಿಗ ಆಗಿದ್ದರು.

ಹಾಗಾಗಿ ಅವರು ಮತ್ತೆ ತನ್ನ ಮನೆಗೆ ಘರ್ ವಾಪ್ಸಿ ಮಾಡಿದ್ರು.

ಹಾಗೆ ವಾಪಸ್ ಹೋಗುವಾಗಲೂ ಅವರು ಕಾಂಗ್ರೆಸ್ ಬಗ್ಗೆ, ಅದರ ನಾಯಕರ ಬಗ್ಗೆ ಒಂದೆರಡು ಒಳ್ಳೆ ಮಾತುಗಳನ್ನೇ ಆಡಿದರು.

ಕಷ್ಟಕಾಲದಲ್ಲಿ ಕೈ ಹಿಡಿದು ಸ್ಥಾನಮಾನ ನೀಡಿದ್ದಕ್ಕೆ ಧನ್ಯವಾದ ಹೇಳಿದರು.

ಅಪ್ಪಿತಪ್ಪಿಯೂ ಕಾಂಗ್ರೆಸ್ ಬಗ್ಗೆ ಯಾವುದೇ ಕೆಟ್ಟ ಮಾತು ಆಡಲಿಲ್ಲ.

ಅಷ್ಟರಮಟ್ಟಿಗಿನ ಸೌಜನ್ಯ, ಕೃತಜ್ಞತೆ ಅವರಲ್ಲಿತ್ತು.

​ಆದರೆ ತನಗೆ ದಶಕಗಳಿಂದ ಅಧಿಕಾರ ಕೊಡುತ್ತಲೇ ಬಂದ ಪಕ್ಷ, ಸಿದ್ಧಾಂತ ಇವೆರಡಕ್ಕೂ​,

ತನಗೂ ಸಂಬಂಧವೇ ಇಲ್ಲದಂತೆ, ಪಕ್ಕಾ ಜಾತಿವಾದಿಗಳಂತೆ ವರ್ತಿಸುವ​,

​ಶಾಮನೂರುರಂಥ ಹಿರಿಯ ನಾಯಕರಿಂದ ಕಾಂಗ್ರೆಸ್ಗೆ ಆಗಿರುವ ಲಾಭವಾದರೂ ಏನು?

ಜಾತಿ​ಯ, ಜಾತಿ ಬಾಂಧವರ ವಿಚಾರ ಬಂದೊಡನೆ​ ತನ್ನ ಪಕ್ಷವನ್ನೇ ಮರೆತು,

ಬೇರೆ ಪಕ್ಷದಲ್ಲಿಯ ತಮ್ಮ ಸಮುದಾಯದವರನ್ನು ಗೆಲ್ಲಿಸಲು ಜನರಿಗೆ ಕರೆ ಕೊಡುವ ಇಂಥ ನಾಯಕರು ಕಾಂಗ್ರೆಸ್ಗೆ ಯಾಕೆ ​ಇಷ್ಟು ಅನಿವಾರ್ಯವಾಗಿದ್ದಾರೆ ?

ಒಂದು ಜಾತಿ ಸಂಘಟನೆಯ ಅಧ್ಯಕ್ಷರು ಎಂಬ ಒಂದೇ ಕಾರಣಕ್ಕೆ ಅವರು ತಮ್ಮ ಪಕ್ಷದ ಬಗ್ಗೆ ಮತ್ತು ಅದರ ವಿರುದ್ಧವೇ ಏನೇ ಹೇಳಿದರೂ ಅದನ್ನು ನುಂಗಿಕೊಳ್ಳಬೇಕೇ ಕಾಂಗ್ರೆಸ್ ?

ದೇಶದಲ್ಲಿರುವ​ ಕಠಿಣ ಪರಿಸ್ಥಿತಿ, ಅದಕ್ಕಾಗಿ ತನ್ನ ಪಕ್ಷ ಹಾಗೂ ಅದರ ನಾಯಕ ಬೀದಿಗಿಳಿದು ಹೋರಾಡುತ್ತಿರುವುದು​,

ತನಗೆ ಗೊತ್ತೇ ಇಲ್ಲದಂತೆ ವರ್ತಿಸುತ್ತಿರುವ ಇಂಥ ನಾಯಕರನ್ನು ಕಾಂಗ್ರೆಸ್ ಹೇಗೆ ಮತ್ತು ಏಕೆ ಸಹಿಸಿಕೊಳ್ಳುತ್ತಿದೆ?

​ಕಾಂಗ್ರೆಸ್ ನಲ್ಲಿ ದಶಕದಿಂದ ಶಾಸಕರಾಗಿರುವ, ತನ್ನ ಪುತ್ರನೂ ಶಾಸಕ, ಸಚಿವನಾಗಿರುವ ನಾಯಕನೊಬ್ಬ

ವೇದಿಕೆಯಲ್ಲೇ ಬಿಜೆಪಿ ಸಂಸದನನ್ನು ಗೆಲ್ಲಿಸಿ ಎಂದು ಕರೆಕೊಟ್ಟರೆ ಅದನ್ನು ರಾಹುಲ್ ಗಾಂಧಿ ಒಪ್ತಾರಾ ?

ಅವರು ಮಣಿಪುರದಿಂದ ಮುಂಬೈ ಗೆ ಬೀದಿಯಲ್ಲಿ ನಡೀತಾ ಇರೋದು ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಂಡು ಬರೋದಕ್ಕಾ ?

ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವಲ್ಲಿಯೂ ಅವರ ಪ್ರಾತಿನಿಧ್ಯ​ ಕಸಿದು, ಅವರ ಓಟು ಪಡೆದು ಗೆದ್ದು ಬರುತ್ತಿರುವ ​ಶಾಮನೂರು ಅವರನ್ನು ಕಾಂಗ್ರೆಸ್ ಏಕೆ ಓಲೈಸುತ್ತಿದೆ?.

ಯಾವತ್ತೂ ಜನಪರವಾಗಿ ಯೋಚಿಸದೆ, ಜಾತಿ ಬಗ್ಗೆ ಮಾತ್ರ ಚಿಂತಿಸುವ ಇಂತಹ ನಾಯಕರು ಯಾಕೆ ಕಾಂಗ್ರೆಸ್ಗೆ ಇಷ್ಟೊಂದು ಅನಿವಾರ್ಯ ಆಗಿದ್ದಾರೆ?

ಅಲ್ಪಸಂಖ್ಯಾತರ ನಾಯಕರು​ ಒಂಚೂರು ಬಾಯಿ ಬಿಟ್ಟರೆ​, ಅವರ​ ವಿರುದ್ಧ​ ಶಿಸ್ತಿನ ಹೆಸರಲ್ಲಿ ಕ್ರಮ ತೆಗೆದುಕೊಂಡು,

ರಾಜಕೀಯವಾಗಿ ಮುಗಿಸಿಯೇ ಬಿಡುವ ಕಾಂಗ್ರೆಸ್,

ಇಂತಹ ಕೆಲಸಕ್ಕೆ ಬಾರದ ಜಾತಿವಾದಿಗಳನ್ನು ಮಾತ್ರ ಯಾಕೆ ಈ ಪರಿ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಿದೆ?

ಶಾಮನೂರು ಹೇಳಿಕೆ ಬಗ್ಗೆ​ ರಾಜ್ಯ ಕಾಂಗ್ರೆಸ್​ ನ ಒಬ್ಬೇ ಒಬ್ಬ ಹಿರಿಯ ಮುಖಂಡರಾಗಲೀ, ಪಕ್ಷ​ವಾಗಲೀ ಆಕ್ಷೇಪ ವ್ಯಕ್ತಪಡಿಸಿದ ವರದಿ ಬಂದಿದೆಯೇ​ ?

​ಯಾಕೆ ಬಿಜೆಪಿ ಸಂಸದನನ್ನು ಗೆಲ್ಲಿಸಿ ಎಂದ ಕಾಂಗ್ರೆಸ್ ಶಾಸಕರ ವಿರುದ್ಧ ಆಕ್ಷೇಪ ಇಲ್ಲ ?

ಯಾಕೆ ಅವರಿಗೆ ನೊಟೀಸ್ ಇಲ್ಲ ? ಅವರ ವಿರುದ್ಧ ಕ್ರಮ ಯಾಕಿಲ್ಲ ?

ಅಲ್ಲೆಲ್ಲೋ ಡಿಕೆ ಶಿವಕುಮಾರ್ ಅಸಮಾಧಾನಪಟ್ಟುಕೊಂಡಂತೆ ಮಾತನಾಡಿದರು ಎನ್ನಲಾಗುತ್ತಿದ್ದರೂ,

ನಿಜವಾಗಿಯೂ ಶಾಮನೂರು ಬಗ್ಗೆ ಕ್ರಮ ತೆಗೆದುಕೊಳ್ಳುವ ಗತ್ತಾಗಲೀ ತಾಕತ್ತಾಗಲೀ ಕಾಂಗ್ರೆಸ್ಗೆ ಯಾಕೆ ಇಲ್ಲವಾಗಿದೆ?

ಕಾಂಗ್ರೆಸ್ ​ಪಕ್ಷವೇನು ​ಶಾಮನೂರರ ಜಹಗೀರೆ​ ?

ಮತ್ತೆ ಮತ್ತೆ ತಮ್ಮ ಸಮುದಾಯದ ಹೆಸರು ಮುಂದಿಟ್ಟುಕೊಂಡು ಪಕ್ಷವನ್ನು ಅಂಕೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಇಂಥವರ ಬಗ್ಗೆ ಕಾಂಗ್ರೆಸ್ ಏಕೆ ಭಯಪಡುತ್ತಿದೆ?

ಮಾತೆತ್ತಿದರೆ ತಮ್ಮ ಸಮುದಾಯದ ಬಲವನ್ನು ಮುಂದಿಡುವ,

ಶಾಮನೂರರಂಥ ನಾಯಕರು ಪಕ್ಷದಲ್ಲಿ ಸೋನಿಯಾ​, ಖರ್ಗೆ ಅವರಿಂದ ಹಿಡಿದು ಸಿದ್ದರಾಮಯ್ಯನವರವರೆಗೂ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿರುವವರು.

ಆದರೆ ರಾಜಕೀಯ ಆಟದಲ್ಲಿ ಇತರ ಪಕ್ಷಗಳ ನಾಯಕರೊಡನೆಯೂ ಅಷ್ಟೇ ಒಳ್ಳೆಯ ಸಂಬಂಧ ಕಾಯ್ದುಕೊಂಡವರು.

ಹಾಗೆ ನೋಡಿದರೆ ಅವರು ಗೆಲ್ಲುತ್ತ ಬಂದಿರುವ ದಾವಣಗೆರೆ ದಕ್ಷಿಣ ಕ್ಷೇತ್ರ ಮುಸ್ಲಿಂ ಮತದಾರರೇ ಹೆಚ್ಚಿರುವ ಕ್ಷೇತ್ರ. ಹಿಂದುಳಿದ ವರ್ಗದವರೇ ಇರುವ ಕ್ಷೇತ್ರ.

ಸುಮಾರು 2 ಲಕ್ಷಕ್ಕೂ ಅಧಿಕ ಮತದಾರರಿರುವ ದಾವಣೆಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ 30 ಸಾವಿರದ ಆಸುಪಾಸು ಇದೆ.

ಅಲ್ಲಿ ಅಲ್ಪಸಂಖ್ಯಾತ ಮತದಾರರು 80 ಸಾವಿರಕ್ಕಿಂತ ಹೆಚ್ಚಿದ್ದಾರೆ.

ಹಿಂದುಳಿದ ವರ್ಗದವರು ಹಾಗು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿದ್ದಾರೆ.

ಆದರೆ ​ಅಲ್ಲೇ ಸತತ ಟಿಕೆಟ್ ಪಡೆಯುತ್ತಾ, ಗೆಲ್ಲುತ್ತ, ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವವರು ಮಾತ್ರ ಶಾಮನೂರು ಶಿವಶಂಕರಪ್ಪ ಮತ್ತವರ ಕುಟುಂಬ.

ಕಳೆದ ವಿಧಾನ ಸಭಾ ಚುನಾವಣೆ ನಡೆಯುವಾಗ ಶಾಮನೂರರಿಗೆ 92 ವರ್ಷ.

ಅಲ್ಪಸಂಖ್ಯಾತರು ಟಿಕೆಟ್ಗಾಗಿ ಎಷ್ಟೇ ಬೇಡಿಕೆಯಿಟ್ಟರೂ ಅವರಿಗೇ ಮತ್ತೆ ಟಿಕೆಟ್. ಅವರೇ ನಿರಾಯಾಸವಾಗಿ ಗೆದ್ದು ಬಂದರು.

ಈಗ ದೇಶದಲ್ಲೇ ಅತ್ಯಂತ ಹಿರಿಯ ವಿಧಾನ ಸಭಾ ಸದಸ್ಯ ಶಾಮನೂರು.

ಹೈಕಮಾಂಡ್ಗೂ ಬಗ್ಗದಷ್ಟು ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ನಲ್ಲಿ ಪ್ರಬಲರಾಗಿದ್ಧಾರೆ.

ದಾವಣಗೆರೆ ಜಿಲ್ಲೆಯ ಮಟ್ಟಿಗೆ ಶಾಮನೂರು ಕುಟುಂಬವೇ ಹೈಕಮಾಂಡ್ ಎನ್ನುವಂಥ ಸ್ಥಿತಿಯಿದೆ.

ಗ್ರಾಮ ಪಂಚಾಯತ್ನಿಂದ ಹಿಡಿದು,

ಲೋಕಸಭೆ ಚುನಾವಣೆಯವರೆಗೂ ಅಭ್ಯರ್ಥಿಯ ಆಯ್ಕೆ ಮತ್ತಿತರ ವಿಚಾರಗಳಲ್ಲಿ ಶಾಮನೂರು ಶಿವಶಂಕರಪ್ಪ ಮತ್ತವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇ ಆಗಬೇಕು.

ನನಗೇನೂ ಮಂತ್ರಿಗಿರಿ ಮುಖ್ಯವಲ್ಲ, ಬೇಕಾದರೆ ಸರ್ಕಾರಿ ಕಾರು ಬಿಟ್ಟು ಹೆಲಿಕಾಪ್ಟರ್ನಲ್ಲಿ ದಾವಣಗೆರೆಗೆ ಹೋಗುತ್ತೇನೆ ಎಂದು ಒಮ್ಮೆ ಹೇಳಿದ್ದರು. ಅಷ್ಟರ ಮಟ್ಟಿಗೆ ಹಣಬಲ.

ಅವರು ಸಚಿವರಾಗಿರದ ಕಾಲದಲ್ಲೂ ಅವರ ಪುತ್ರ ಸಚಿವರಾಗಿರುತ್ತಾರೆ. ಈಗ ಲೋಕಸಭೆ ಚುನಾವಣೆಗೂ ಅವರ ಕುಟುಂಬದವರೇ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚು ಎಂಬ ಮಾತುಗಳಿವೆ.

ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದರೂ, ಅಥವಾ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದರೂ ಎರಡರಲ್ಲೂ ಇವರ ಕುಟುಂಬದ್ದೇ ಪಾತ್ರವಿರುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಇಂಥ ಪ್ರಭಾವಿ ಶಾಮನೂರು ಮೊನ್ನೆ ತಾನೊಬ್ಬ ಕಾಂಗ್ರೆಸ್ನ ಜವಾಬ್ದಾರಿಯುತ ​ಹಿರಿಯ ನಾಯಕ ಎನ್ನುವುದನ್ನೂ ಮರೆತು,

ಶಿವಮೊಗ್ಗದ ಸಮಾರಂಭದಲ್ಲಿ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕರೆ ನೀಡಿದ್ದು ಕಾಂಗ್ರೆಸ್ನ ಎದೆ ನಡುಗುವಂತೆ ಮಾಡಿದೆ.

​ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ ಬೆನ್ನಲ್ಲೇ,

ಅವರ ಬೀಗರಾದ ಶಾಮನೂರು ಇಂಥದೊಂದು ಹೇಳಿಕೆ ನೀಡಿ ಕಾಂಗ್ರೆಸ್ನಲ್ಲಿ ದಿಗಿಲು ಮೂಡಿಸಿದ್ದಾರೆ.

ಶಾಮನೂರು ಅಂಥ ಪ್ರಭಾವಿ ಹಿರಿಯ ನಾಯಕರಿಂದ ಈ ಮಾತು ಬರುತ್ತಲೇ ಕಾಂಗ್ರೆಸ್ ತೀವ್ರ ಕಸಿವಿಸಿ ಅನುಭವಿಸುತ್ತಿದ್ದರೆ,

ಬಿಜೆಪಿ ಮಾತ್ರ ಕಾಂಗ್ರೆಸ್ ಅನ್ನು ಆಡಿಕೊಂಡು, ಶಾಮನೂರು ಹೇಳಿಕೆಯನ್ನೂ ಶೆಟ್ಟರ್ ಘರ್ ವಾಪ್ಸಿಯನ್ನೂ ಕಾಂಗ್ರೆಸ್ ವಿರುದ್ದ ಅಸ್ತ್ರವಾಗಿ ತಿರುಗಿಸತೊಡಗಿದೆ.

ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಒಪ್ಪಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಬಿಜೆಪಿ ​ನಾಯಕ ಸಿ.ಟಿ ರವಿ ​ಹೇಳಿದ್ದಾರೆ.

ಇದು ಶಾಮನೂರು ಮಾತು ಮಾತ್ರವೊ​,

ಅಥವಾ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಎಲ್ಲ ಲಿಂಗಾಯತ ನಾಯಕರ ನಿಲುವು ಮತ್ತು ನಡೆಗಳಲ್ಲಿ ಆಗುತ್ತಿರುವ ಸ್ಪಷ್ಟವಾದ ಬದಲಾವಣೆಯೊ​,

ಎಂಬುದನ್ನು ಕಾಂಗ್ರೆಸ್ ಗಂಭೀರವಾಗಿ ಚಿಂತಿಸಬೇಕಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಅನಂತರದ ಕಾಂಗ್ರೆಸ್ ಸರ್ಕಾರ ರಚನೆಯ ಸಂದರ್ಭದ ಕಡೆಗೆ ಸ್ವಲ್ಪ ಹೊರಳಿ ನೋಡುವುದಾದರೆ,

ಯಾವ ಸಮುದಾಯದ ಎಷ್ಟು ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು ಮತ್ತು ಅನಂತರ ಯಾರು ಸರ್ಕಾರದಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದರು ಎಂಬುದು ಗೊತ್ತಾಗುತ್ತದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಸಮುದಾಯದಿಂದ ಎಷ್ಟು ಮತಗಳು ಕಾಂಗ್ರೆಸ್ಗೆ ಬಂದವು ಎಂಬುದನ್ನು ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಲೆಕ್ಕಾಚಾರ ಹೀಗೆ ದಾಖಲಿಸಿತ್ತು:

ಎಸ್ಟಿ ಸಮುದಾಯದ ಶೇ. 44ರಷ್ಟು ಮತಗಳು

ಎಸ್ಸಿ ಸಮುದಾಯದ ಶೇ. 60ರಷ್ಟು ಮತಗಳು

ಕುರುಬ ಸಮುದಾಯದ ಶೇ. 63 ಮತಗಳು

ಮುಸ್ಲಿಂ ಸಮುದಾಯದ ಶೇ. 88 ಮತಗಳು

ಒಕ್ಕಲಿಗ ಸಮುದಾಯದ ಶೇ. 24 ಮತಗಳು

ಇತರ ಹಿಂದುಳಿದ ವರ್ಗದ ಶೇ. 31 ಮತಗಳು

ಲಿಂಗಾಯತ ಸಮುದಾಯದ ಶೇ. 20 ಮತಗಳು

ಅಂದರೆ, ಅತಿದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಮತ ಹಾಕಿದ್ದವರು ಮುಸ್ಲಿಮರು. ಅತ್ಯಂತ ಕಡಿಮೆ ಮತಗಳು ಬಂದಿದ್ದು ಲಿಂಗಾಯತ ಸಮುದಾಯದಿಂದ.

ಆದರೆ, ಅದಾದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ಗಮನಿಸಿ.

​ಲಿಂಗಾಯತ ಸಮುದಾಯಕ್ಕೆ ​7ಸಚಿವ ಸ್ಥಾನ ಕೊಡಲಾಯಿತು.

ಅತಿ ಹೆಚ್ಚು ಮುಸ್ಲಿಂ ಮತಗಳನ್ನು ಪಡೆದಿದ್ದರೂ ಆ ಸಮುದಾಯಕ್ಕೆ ಸಿಕ್ಕಿದ್ದು 2 ಸಚಿವ ಸ್ಥಾನ ಮಾತ್ರ.

ಇಷ್ಟಾದ ಬಳಿಕವೂ ಶಾಮನೂರು ಶಿವಶಂಕರಪ್ಪ ಅವರ ತಕರಾರುಗಳು ನಿಂತಿರಲಿಲ್ಲ.

ಹೇಗೆ ತಾವು ಜಾತಿವಾದಿ ಎಂಬುದನ್ನು ಮತ್ತು ಅದಕ್ಕಾಗಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುವ ಭಂಡತನವನ್ನು ಅವರು ತೋರಿಸುತ್ತಲೇ ಬಂದರು.

ಲಿಂಗಾಯತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪ ಎತ್ತಿದ್ದರು.

ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಯಾವುದೇ ಪ್ರಮುಖ ಹುದ್ದೆ ನೀಡಿಲ್ಲ.

ಸಿದ್ದರಾಮಯ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡದಿರುವುದರಿಂದ ಅವರ ಪಾಡು ನಾಯಿಪಾಡಾಗಿದೆ ಎಂದು ಕಳೆದ ಅಕ್ಟೋಬರ್ನಲ್ಲಿ ಶಾಮನೂರು ಹೊಸ ತಕರಾರು ತೆಗೆದಿದ್ದರು.

ಅದಾದ ಬಳಿಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದರು.

ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಲೋಪದಿಂದ ಕೂಡಿದೆ. ಅದರಲ್ಲಿ ಲಿಂಗಾಯತ ವೀರಶೈವ ಎಂದು ಉಲ್ಲೇಖಿಸಿಕೊಂಡೇ ಇಲ್ಲ ಎಂದೆಲ್ಲ ಹೇಳುವ ಮೂಲಕ,

ಹಿಂದುಳಿದ ವರ್ಗದವರೇ ಹೆಚ್ಚಿದ್ದಾರೆ ಎಂಬ ಸೋರಿಕೆಯಾದ ವರದಿಯಲ್ಲಿನ ಅಂಶದ ಹಿನ್ನೆಲೆಯಲ್ಲಿ ಆಕ್ಷೇಪ ಮಾಡಿದ್ದರು.

ಶಾಮನೂರು ಶಿವಶಂಕರಪ್ಪ ಥರದವರೇ ಆಗಿರುವ,

ಬಿಜೆಪಿ ಬಗ್ಗೆ​, ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಇರುವ ನಾಯಕರ ಒಂದು ದಂಡೇ ಕಾಂಗ್ರೆಸ್ನಲ್ಲಿದೆ.

ಯಾವತ್ತಿಗೂ ಬಿಜೆಪಿಯ ಬಗ್ಗೆ ಎದುರಾಡದೆ, ಬೇಕಿದ್ದರೆ ತಮ್ಮ ಪಕ್ಷದ ಬಗ್ಗೆಯೇ ಅಪಸ್ವರ ಎತ್ತುವ ಇಂಥವರು ರಾಜಕೀಯ ಲಾಭವನ್ನು ಮಾತ್ರ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

ಪಕ್ಷದ ಹುದ್ದೆಗಳೆಲ್ಲವನ್ನೂ ಅನುಭವಿಸಿಯೂ​, ಕಡೆಗೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎನ್ನುವವರು,

ಎಲ್ಲ ಪಕ್ಷದವರ ಜೊತೆಗೂ ಉತ್ತಮ ಸಂಬಂಧವಿಟ್ಟುಕೊಂಡೇ ತಮ್ಮ ರಾಜಕಾರಣ ಮತ್ತು ಉದ್ಯಮವೆರಡನ್ನೂ ಸಂಭಾಳಿಸಿಕೊಂಡಿರುವ ನಾಯಕರು ನೋಡುವುದು ತಮ್ಮ ಹಿತಾಸಕ್ತಿಯನ್ನು ಮಾತ್ರ.

ಪಕ್ಷದೊಳಗೆ ಪ್ರಭಾವಿಗಳಾಗಿದ್ದುಕೊಂಡೇ ಪಕ್ಷಕ್ಕಾಗಿ ಏನನ್ನೂ ಮಾಡದ ಇಂಥ ನಾಯಕರನ್ನು ಸಾಕುತ್ತಲೇ ಬಂದಿರುವುದು ಕಾಂಗ್ರೆಸ್ ಪಾಲಿನ ಅನಿವಾರ್ಯತೆಯೂ ಆಗಿರುವುದೇ ಅದರ ಭಾರವೂ ಹೌದು.

ಶಾಮನೂರು ಅಂಥವರನ್ನು ಅದು ಏಕೆ ಸಹಿಸಿಕೊಳ್ಳಬೇಕಾಗಿದೆ,

ತನ್ನನ್ನು ಅಷ್ಟೇನೂ ಪ್ರಬಲವಾಗಿ ಬೆಂಬಲಿಸದ ಸಮುದಾಯದ ನಾಯಕ ಉಂಟುಮಾಡುವ ಮುಜುಗರಗಳನ್ನೆಲ್ಲ ನುಂಗಿಕೊಂಡು ಇರಬೇಕಾಗಿದೆ ಎಂಬುದೇ ವಿಚಿತ್ರ ಸಂಗತಿ,

ಮತ್ತು ಅದೇ ಇವತ್ತಿನ ರಾಜಕಾರಣದ ವಿಪರ್ಯಾಸವೂ ಹೌದು.

ಶಿವಶಂಕರಪ್ಪ ವಿರುದ್ಧ ಎಚ್ ವಿಶ್ವನಾಥ್ ಹೇಳಿರುವ ಮಾತು ಗಮನಿಸಬೇಕು.

ಶಾಮನೂರು ಶಿವಶಂಕರಪ್ಪ ಹಿರಿಯ ಮುತ್ಸದ್ದಿಯಲ್ಲ, ಬದಲಾಗಿ ಜಾತಿವಾದಿ. ಕಾಂಗ್ರೆಸ್ ಜೀವಂತವಾಗಿದ್ದರೆ ಅವರನ್ನು ಸಸ್ಪೆಂಡ್ ಮಾಡಲಿ ಎಂದು ವಿಶ್ವನಾಥ್ ಹೇಳಿದ್ದಾರೆ.

ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಶಾಸಕರಾಗಿ, ಮಗನನ್ನೂ ಮಂತ್ರಿಯನ್ನಾಗಿಸಿ,

ಕಾಂಗ್ರೆಸ್ನಾಲ್ಲಿದ್ದುಕೊಂಡು ಅಧಿಕಾರ ಅನುಭವಿಸುತ್ತ ಬೇರೆ ಪಾರ್ಟಿಗೆ ಕ್ಯಾನ್ವಾಸ್ ಮಾಡುತ್ತಿರುವ ಆವರ ಬಗ್ಗೆ ಏನು ಹೇಳಬೇಕು?

ಅವರು ದೇಶವಾದಿಯೊ ಇಲ್ಲ, ಜಾತಿವಾದಿಯೊ ಎಂದು ಕೆಣಕಿ ಕೇಳಿದ್ದಾರೆ.

ಅವರಿಗೆ ಪಾರ್ಟಿ ಸೋತರೂ ನೆಂಟಸ್ತಿಕೆ ಸೋಲಬಾರದು ಎಂದಿರುವ ವಿಶ್ವನಾಥ್,

ಈ ಕೂಡಲೇ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದಿದ್ದಾರೆ.

ಆದರೆ ಕಾಂಗ್ರೆಸ್ಗೆ ಶಾಮನೂರು ಶಿವಶಂಕರಪ್ಪ ಅವರನ್ನು ಹೊರಹಾಕುವ ತಾಕತ್ತು ಇದೆಯೆ?

ಅಥವಾ ಅದು ಕೂಡ ಆಂತರ್ಯದಲ್ಲಿ ಜಾತಿವಾದಿಯೇ ಆಗಿ,

ಇಂಥ ಅಸ್ತ್ರಗಳನ್ನು ಸಹಿಸಿಕೊಳ್ಳಲೇಬೇಕಾದ ಸಂದಿಗ್ಧದಲ್ಲಿ ಸಿಲುಕಿದೆಯೆ?

ಕಾಂಗ್ರೆಸ್ ಪಕ್ಷ ಬಿಜೆಪಿ, ಮೋದಿ, ಅಮಿತ್ ಶಾ ಜೊತೆ ಮೈತ್ರಿ ನಾಯಕರೆಂದು ಬರುವ ನಿತೀಶ್ ಕುಮಾರ್, ಮಮತಾ, ಕೇಜ್ರಿವಾಲ್ ರಂತವರನ್ನೂ ನಿಭಾಯಿಸಬೇಕು.

ಜೊತೆಗೆ ಪಕ್ಷದೊಳಗೇ ತುಂಬಿಕೊಂಡಿರುವ ಕಮಲ್ ನಾಥ್, ಗೆಹಲೋಟ್, ಶಶಿ ತರೂರ್ ರಂತಹ ಬಿಜೆಪಿಗೆ ಲಾಭ ಮಾಡಿಕೊಡುವವರನ್ನೂ ಎದುರಿಸಬೇಕು.

ಈಗ ರಾಹುಲ್ ಗಾಂಧಿ ರಾಷ್ಟ್ರ ಮಟ್ಟದಲ್ಲಿ ಎದುರಿಸುತ್ತಿರುವ ಸವಾಲೂ ಇದೇ ಆಗಿದೆ.

ಹೊರಗಿನ ಅಪಾಯವನ್ನು ಎದುರಿಸುವ ಸವಾಲಿನ ಜೊತೆಗೇ ಒಳಗಿನ ಇಂಥ ಅಪಾಯಗಳನ್ನೂ ಅದು ಹೇಗೆ ಎದುರಿಸಿ ನಿಲ್ಲಲಿದೆ?

ಉತ್ತರಗಳು ಸುಲಭವಿಲ್ಲ.

ಆದರೆ, ತನ್ನ ತಪ್ಪುಗಳ ಬಗ್ಗೆ ಅರಿವಾಗದೇ ಹೋದಲ್ಲಿ ಮಾತ್ರ ಕಾಂಗ್ರೆಸ್ ತನ್ನನ್ನು ತಾನೇ ತೀರಾ ಕೆಡುಕಿನ ತಿರುವಿಗೆ ತೆಗೆದುಕೊಂಡು ಹೋಗಲಿದೆ ಎಂದಷ್ಟೇ ಸದ್ಯಕ್ಕೆ ಹೇಳಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!