ಜರ್ಮನಿಯಲ್ಲಿ ನಿಷೇಧಿತ EVM ಗಳಿಗಿಂತ ಭಾರತೀಯ EVMಗಳು ಹೇಗೆ ಭಿನ್ನ ?
ಇವಿಎಂ ಕುರಿತು ಇಂಡಿಯಾ ಮೈತ್ರಿಕೂಟ ವ್ಯಕ್ತಪಡಿಸಿದ್ದ ಕಳವಳಕ್ಕೆ ಚುನಾವಣಾ ಆಯೋಗ ಉತ್ತರಿಸಿದೆ. ತನ್ನ FAQ ಅಂದ್ರೆ ಆಗಾಗ ಕೇಳುವ ಪ್ರಶ್ನೆಗಳ ಪುಟವನ್ನು ಪರಿಷ್ಕರಿಸಿ ವಿಸ್ತರಿಸಿರುವ ಆಯೋಗ, ಪ್ರತಿಪಕ್ಷಗಳ ಹಲವು ಅನುಮಾನಗಳಿಗೆ ಉತ್ತರ ನೀಡಿದೆ.
ಮೈತ್ರಿಕೂಟದ ಸದಸ್ಯರು ಆಗಸ್ಟ್ನಲ್ಲಿ ಚುನಾವಣಾ ಆಯೋಗಕ್ಕೆ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ತೆಗೆದುಕೊಂಡಿದೆ. ಡಿಸೆಂಬರ್ 19ರಂದು ಗೊತ್ತುವಳಿಯೊಂದನ್ನು ಅಂಗೀಕರಿಸಿದ್ದ ಇಂಡಿಯಾ ಮೈತ್ರಿಕೂಟ, ಚುನಾವಣಾ ಆಯೋಗ ಮೈತ್ರಿಕೂಟದ ನಿಯೋಗವನ್ನು ಭೇಟಿ ಮಾಡಲು ಹಿಂಜರಿಯುತ್ತಿದೆ ಎಂದು ಹೇಳಿತ್ತು.
ಆದರೆ, ಚುನಾವಣಾ ಆಯೋಗ ಮೈತ್ರಿಕೂಟದ ಅನುಮಾನಗಳಿಗೆ ಈಗಾಗಲೇ ಉತ್ತರಿಸಿದೆ ಎಂದು ತಿಳಿಸಿರುವ ಮೂಲಗಳು, ಪರಿಷ್ಕೃತ FAQ ಪುಟಗಳ ಕಡೆ ಗಮನ ಸೆಳೆದಿವೆ. ಪರಿಷ್ಕರಿಸಿದ FAQ ಪುಟಗಳನ್ನು ಆಗಸ್ಟ್ 23ರಂದು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ 76 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ಹಿಂದಿನ ಆವೃತ್ತಿಯಲ್ಲಿ 39 ಪ್ರಶ್ನೆಗಳಿಗೆ ಮಾತ್ರವೇ ಉತ್ತರಿಸಲಾಗಿತ್ತು.
ಇವಿಎಂ ಬಗ್ಗೆ ಕೆಲವು ವಿಪಕ್ಷಗಳು ಮತ್ತೆ ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ನೀಡಿರುವ ಸ್ಪಷ್ಟೀಕರಣ ಏನು?. ಯಾವ್ಯಾವ ಪ್ರಶ್ನೆಗಳಿಗೆ ಅದು ಏನೆಂದು ಉತ್ತರಿಸಿದೆ?. ಜರ್ಮನಿಯಲ್ಲಿ ನಿಷೇಧಿತ ಇವಿಎಂಗಳಿಗಿಂತ ಭಾರತೀಯ ಇವಿಎಂಗಳು ಹೇಗೆ ಭಿನ್ನವಾಗಿವೆ?. ಒಂದು ವೇಳೆ ವಿವಿ ಪ್ಯಾಟ್‌ಗಳು ಪ್ರೋಗ್ರಾಮೆಬಲ್ ಮೆಮೊರಿಯನ್ನು ಹೊಂದಿದ್ದರೆ ಹಾಗೂ ಇವಿಎಂ ತಯಾರಕರು ವಿದೇಶಿ ಮೈಕ್ರೋಚಿಪ್ ತಯಾರಕರೊಂದಿಗೆ ಸಾಫ್ಟ್ವೇರ್ ಅನ್ನು ಹಂಚಿಕೊಂಡರೆ ಏನಾಗುತ್ತದೆ?.
ಇಂಥ ಅನುಮಾನಗಳ ಬಗ್ಗೆ ಆಯೋಗ ಇನ್ನಷ್ಟು ವಿವರಿಸಿದೆ. ಇವಿಎಂ ತಯಾರಿಕಾ ಸಂಸ್ಥೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತಮ್ಮ ಗೌಪ್ಯ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಇವಿಎಂಗಳಲ್ಲಿ ಬಳಸುವ ಮೈಕ್ರೋ ಕಂಟ್ರೋಲರ್‌ಗಳಿಗೆ ನಕಲಿಸಲು ವಿದೇಶಿ ಚಿಪ್ ತಯಾರಕರೊಂದಿಗೆ ಹಂಚಿಕೊಂಡಿವೆಯೆ ಎಂಬ ಪ್ರಶ್ನೆ್ಗೂ ಆಯೋಗ ಉತ್ತರ ಕೊಟ್ಟಿದೆ.
ಆಯೋಗ ಕೊಟ್ಟಿರುವ ಉತ್ತರ ಹೀಗಿದೆ: ಮೈಕ್ರೋ ಕಂಟ್ರೋಲರ್‌ಗಳನ್ನು ಬಿಇಎಲ್ / ಇಸಿಐಎಲ್ ಕಂಪನಿಗಳು ಫರ್ಮ್‌ವೇರ್ ತಂತ್ರಜ್ಞಾನದ ಮೂಲಕ, ತಮ್ಮದೇ ಜಾಗದಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಗಳ ಅಡಿಯಲ್ಲಿ ಪೋರ್ಟ್ ಮಾಡಿರುತ್ತವೆ.
ನಾಲ್ಕು ಹಂತಗಳ ಸುರಕ್ಷಿತ ಉತ್ಪಾದನಾ ಪ್ರಕ್ರಿಯೆಯಲ್ಲಿ ಮೈಕ್ರೋ ಕಂಟ್ರೋಲರ್ಗಳನ್ನು 3ನೇ ಹಂತದ ಪ್ರದೇಶದಲ್ಲಿ ಪೋರ್ಟ್ ಮಾಡಲಾಗುತ್ತದೆ. ಅಲ್ಲಿಗೆ ನಿಯೋಜಿತ ಎಂಜಿನಿಯರ್‌ಗಳು ಮಾತ್ರ ಬಯೋಮೆಟ್ರಿಕ್ ಸ್ಕ್ಯಾನ್‌ರ್‌ಗಳ ಮೂಲಕ ಅಧಿಕೃತ ಪ್ರವೇಶ ಪಡೆಯುತ್ತಾರೆ.
ಮೈಕ್ರೊ ನಿಯಂತ್ರಕಗಳಲ್ಲಿ ಫರ್ಮ್‌ವೇರ್ ಪ್ರೋಗ್ರಾಂ ಅನ್ನು ಲೋಡ್ ಮಾಡುವಾಗ ಯಾವುದೇ ಬಾಹ್ಯ ಏಜೆನ್ಸಿ, ಸ್ಥಳೀಯ ಅಥವಾ ವಿದೇಶಿ ಏಜೆನ್ಸಿಗಳು ತೊಡಗಿಸಿಕೊಂಡಿಲ್ಲ. ಇನ್ನು ವಿವಿಪ್ಯಾಟ್ ಕುರಿತ ಅನುಮಾನಗಳಿಗೆ ಆಯೋಗ ನೀಡಿರುವ ಉತ್ತರ ಹೀಗಿದೆ:
ವಿವಿಪ್ಯಾಟ್ನಲ್ಲಿ ಎರಡು ಬಗೆಯ ಮೆಮೊರಿಗಳಿರುತ್ತವೆ. ಮೈಕ್ರೊಕಂಟ್ರೋಲರ್ಗಳಿಗೆ ಮೀಸಲಿಟ್ಟಿರುವ ಪ್ರೋಗ್ರಾಂ ಸೂಚನೆಗಳನ್ನು ಒಂದು ಬಾರಿ ಮಾತ್ರ ಪ್ರೋಗ್ರಾಂ ಮಾಡಲು ಸಾಧ್ಯ. ಮತ್ತೊಂದರಲ್ಲಿ ಚಿಹ್ನೆಗಳನ್ನು ಸಂರಕ್ಷಿಸಿಡಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಅಭ್ಯರ್ಥಿಗಳ ಚಿಹ್ನೆಗಳನ್ನು ಲೋಡ್ ಮಾಡಲಾಗುತ್ತದೆ.
ಜರ್ಮನಿಯಲ್ಲಿ ನಿಷೇಧಿಸಿರುವ ಮತದಾನ ವ್ಯವಸ್ಥೆಗಳಿಗಿಂತ ಭಾರತದ ಇವಿಎಂಗಳು ಹೇಗೆ ಭಿನ್ನವಾಗಿವೆ ಎಂಬ ಪ್ರಶ್ನೆಗೆ ಆಯೋಗ ನೀಡಿರುವ ಉತ್ತರ:
ಇವಿಎಂಗಳು ಕೇಂದ್ರ ಸರ್ಕಾರದ ಅಧೀನದಲ್ಲಿನ ಸರ್ಕಾರಿ ವಲಯದ ಘಟಕಗಳ ಸುರಕ್ಷಿತ ವ್ಯವಸ್ಥೆಯಡಿ ತಯಾರಾಗುತ್ತವೆ. ಬಳಿಕ ಮೂರನೇ ತಂಡದ ಪರೀಕ್ಷೆಗೆ ಒಳಪಡುತ್ತವೆ.
ಜರ್ಮನಿಗಿಂತಲೂ ಭಾರತದ ಇವಿಎಂಗಳು ದೃಢವಾಗಿವೆ. ವಿಭಿನ್ನವಾದ, ಬೇರಾವುದಕ್ಕೂ ಹೋಲಿಸಲಾಗದ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳ ಮೂಲಕ ತಯಾರಾಗುತ್ತವೆ. ದೇಶದ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳು ಯಂತ್ರಗಳನ್ನು ಮತ್ತೆ ಮತ್ತೆ ಪರಿಶೀಲಿಸಿವೆ ಮತ್ತು ಆಯೋಗ ಹಾಗೂ ಇವಿಎಂಗಳ ಬಗ್ಗೆ ತಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿವೆ.
ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಕುರಿತ ಹಲವಾರು ಅನುಮಾನಗಳಿಗೂ ಆಯೋಗ ಉತ್ತರಿಸಿದೆ. ಸೆಲ್ ಫೋನ್ ಅಥವಾ ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡಬಹುದೆಂಬ ಅನುಮಾನಕ್ಕೆ ಆಯೋಗದ ಉತ್ತರ:
ಈ ಅನುಮಾನ ಆಧಾರರಹಿತ ಮತ್ತು ಅವೈಜ್ಞಾನಿಕವಾಗಿದೆ. ಮೈಕ್ರೋ ಕಂಟ್ರೋಲರ್‌ಗಳ ಕುರಿತು ತಾಂತ್ರಿಕ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿದೆ. ಬೇಕಿದ್ದರೆ ಮೈಕ್ರೋ ಕಂಟ್ರೋಲರ್ ತಯಾರಕರ ವೆಬ್‌ಸೈಟ್ ಪ್ರವೇಶಿಸಿ ಪರಿಶೀಲಿಸಬಹುದು. 20 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ಮಾಧ್ಯಮ ವರದಿಗಳು ನಿಜವೇ ಎಂಬ ಮತ್ತೊಂದು ಪ್ರಶ್ನೆಗೆ ಆಯೋಗದ ಉತ್ತರ:
ಈ ವಿಷಯ ನ್ಯಾಯಾಲಯದಲ್ಲಿದೆ. ಬಾಂಬೆ ಹೈಕೋರ್ಟಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ಒದಗಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಸತ್ಯಗಳನ್ನು ತಿರುಚುವುದು ದೊಡ್ಡ ವಿಷಯವಲ್ಲ. FAQ ಹೊಸ ಆವೃತ್ತಿಯಲ್ಲಿನ ಹೊಸ ಪ್ರಶ್ನೆಗಳು ಮತ್ತು ಉತ್ತರಗಳ ಹೊರತಾಗಿ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಪುಟದಲ್ಲಿ ಕೂಡ ಎವಿಎಂ ಮತ್ತು ವಿವಿಪ್ಯಾಟ್ಗಳ ತಯಾರಿಕೆ, ವೆಚ್ಚ, ಪರೀಕ್ಷೆ, ಸಾರಿಗೆ ಮತ್ತು ನಿಯೋಜನೆಯ ಮಾಹಿತಿಯನ್ನು ಕೊಡಲಾಗಿದೆ.
ಹೀಗೆ ಇವಿಎಂ ಕುರಿತ ವಿಪಕ್ಷಗಳ ಹಲವು ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಿದೆ. ಆದರೆ 2019 ರ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆಗಿರುವ ಬಹಳ ದೊಡ್ಡ ವ್ಯತ್ಯಾಸಗಳ ಬಗ್ಗೆ ದೇಶದ ಮಾಧ್ಯಮಗಳು ವರದಿ ಮಾಡಿ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದವು. ಆದರೆ ಆ ಬಗ್ಗೆ ಇನ್ನೂ ಉತ್ತರ ಬಂದಂತಿಲ್ಲ.
ಇವಿಎಂ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಡುವ ಊಹಾಪೋಹಗಳ ಆಚೆಗೆ ಇಲ್ಲಿರುವ ಅತ್ಯಂತ ಸರಳ ಪ್ರಶ್ನೆ -
ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಹೆಚ್ಚಿನ ಪಕ್ಷಗಳು ಹಾಗು ಮತದಾರರಿಗೆ ಕಳವಳ ಇದೆ ಎಂದಾದರೆ ಅದನ್ನು ಬದಲಾಯಿಸಲು ಯಾಕೆ ಸಾಧ್ಯವಿಲ್ಲ ಎಂಬುದು. ಅದಕ್ಕೆ ಉತ್ತರ ಸಿಗಬೇಕಾದರೆ ಮೊದಲು ವಿಪಕ್ಷಗಳು ಚುನಾವಣಾ ಫಲಿತಾಂಶ ಬಂದ ಬಳಿಕ ಇವಿಎಂ ಬಗ್ಗೆ ಮಾತಾಡುವುದನ್ನು ನಿಲ್ಲಿಸಬೇಕು. ಚುನಾವಣೆಗೆ ಮೊದಲು ಒಗ್ಗಟ್ಟಾಗಿ ಇವಿಎಂ ಬಳಕೆ ಬಗ್ಗೆ ಒಂದು ನಿಲುವು ತಳೆಯಬೇಕು. ಅದನ್ನು ಚುನಾವಣಾ ಆಯೋಗಕ್ಕೆ ತಿಳಿಸಬೇಕು. ಹಾಗೆ ಮಾಡದೇ ಪ್ರತಿ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಲ್ಲೊಬ್ಬರು ಇಲ್ಲೊಬ್ಬರು ಇವಿಎಂ ಬಗ್ಗೆ ಅಪಸ್ವರ ಎತ್ತಿದರೆ ಅದರಿಂದ ಯಾವುದೇ ಪ್ರಯೋಜನ ಆಗದು.