ಮೋದಿ ಸರಕಾರ ಬಂದ ಮೇಲೆ ಭಯೋತ್ಪಾದಕ ಪ್ರಕರಣಗಳಲ್ಲಿ 176% ಹೆಚ್ಚಳ ಆಗಿದ್ದು ಹೇಗೆ ?

Update: 2024-03-18 06:16 GMT
Editor : Ismail | Byline : ಆರ್. ಜೀವಿ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾನು 2023ರ ವಿಧಾನಸಭಾ ಚುನಾವಣೆ ಪ್ರಚಾರದಲ್ಲೇ ಹೇಳಿದ್ದೆ. ನೀವು ಕಾಂಗ್ರೆಸ್‌ಗೆ ಓಟ್ ಹಾಕಿದ್ರೆ, ತಾಲಿಬಾನಿ ಸರ್ಕಾರ ಬರುತ್ತೆ ಎಂದಿದ್ದೆ. ಇವತ್ತು ತಾಲಿಬಾನಿ ಸರ್ಕಾರ ನಡೀತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿ ಆಗಿದೆ. ವಿಧಾನಸೌಧದ ಒಳಗೆ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಮೊಳಗಿದೆ ಅಂದ್ರೆ ಯಾರು ಅಧಿಕಾರ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟ ಆಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆದರೆ ವಿಧಾನಸೌಧದ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದ್ರೂ ಆಶ್ಚರ್ಯ ಪಡಬೇಡಿ ಎಂದ ಪ್ರತಾಪ್ ಸಿಂಹ, ಬಾಂಬ್ ಬ್ಲಾಸ್ಟ್‌ಗಳು ಶುರುವಾಗಿದ್ದೇ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ. ಹತ್ತು ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ದೇಶದಲ್ಲಿ ನಡೆದಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ, ಳುಂಬಿನಿ ಗಾರ್ಡನ್ಸ್ , ಜರ್ಮನ್ ಬೇಕರಿ, ಪೂಣೆ, ಮುಂಬೈ, ಡೆಲ್ಲಿ, ಸೂರತ್ ಹೀಗೆ ದೇಶಾದ್ಯಂತ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆಯುತ್ತಿದ್ದವು ಎಂದು ಹೇಳಿದರು.

ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿದೆ ಎಂದ ಪ್ರತಾಪ್ ಸಿಂಹ, ಇದು ಟ್ರೈಲರ್ ಮಾತ್ರ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ ಎಂದ ಅವರು, ಆದಷ್ಟು ಬೇಗ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಕೊಟ್ಟು ಗೆಲ್ಲಿಸಿ ಕೊಡಿ. ಆ ಮೂಲಕ ಈ ಸರ್ಕಾರ ತೊಲಗಲು ಅವಕಾಶ ಮಾಡಿಕೊಟ್ರೆ ಕರ್ನಾಟಕ ಉಳಿಯುತ್ತೆ, ಇಲ್ಲದಿದ್ರೆ ಗಂಡಾಂತರ ಕಾದಿದೆ‌ ಎಂದು ಎಚ್ಚರಿಕೆ ನೀಡಿದರು.

ಇನ್ನು, ಒಸಾಮಾಬಿನ್, ಮುಲ್ಲಾ ಉಮರ್‌ ಅಂತಹವರು ಅಧಿಕಾರ ಮಾಡುವಾಗ ಬಾಂಬ್ ಹಾಕುವವರಿಗೆ ರಕ್ಷಣೆ ಕೊಡುತ್ತಾರೆ, ಹಿಡಿಯೋ ಕೆಲಸ ಮಾಡಲ್ಲ ಎಂದ ಪ್ರತಾಪ್ ಸಿಂಹ, ಇಷ್ಟೆಲ್ಲ ಆದ್ರೂ ಎಫ್ ಎಸ್‌ಎಲ್ ರಿಪೋರ್ಟ್ ಸೋಷಿಯಲ್ ಮೀಡಿಯಾದಲ್ಲಿ ತಿರುಚಿದ್ದಾರೆ ಅಂತ ಸಮರ್ಥಿಸಿಕೊಳ್ಳುವ ಅಗತ್ಯ ಏನಿದೆ‌? ಸಿದ್ದರಾಮಯ್ಯ ಅವರೇ ನೀವು ಅವರ ಕೈ ಕಡಿದರೂ ಅವರು ನಿಮಗೆ ಮತ ಹಾಕೋದು. ಮತ್ಯಾಕೆ ನೀವು ರಕ್ಷಣೆ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ಇನ್ನು, ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ ಎಂದ ಪ್ರತಾಪ್ ಸಿಂಹ, ಆರೋಪಿಗಳನ್ನು ಸದೆಬಡೆಯುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಸ್ವಾಗತ ಇದೆ, ಆದರೆ ಅದನ್ನ ಕೃತಿಯಲ್ಲಿ ತೋರಿಸಿ ಎಂದು ಸವಾಲು ಎಸೆದರು.

ಇವಿಷ್ಟು ಪ್ರತಾಪ್ ಸಿಂಹ ಅವರ ಹೇಳಿಕೆಗಳು. ಅಂದ್ರೆ ಪ್ರತಾಪ್ ಸಿಂಹ ಅವರಿಗೆ ಮೊನ್ನೆಯ ಬಾಂಬ್ ಬ್ಲಾಸ್ಟ್ ಕೇವಲ ಟ್ರೇಲರ್, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ ಎಂಬ ವಿವರ ಗೊತ್ತಿರೋದು ಹೇಗೆ ? ಇಂತಹ ವಿಧ್ವಂಸಕ ಕೃತ್ಯಗಳು ನಡೆಯುವ ಬಗ್ಗೆ ಮಾಹಿತಿ ಅವರಿಗೆ ಮೊದಲೇ ಇದ್ದರೆ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಹಾಗು ದೂರು ನೀಡಿದ್ದಾರಾ ? ವಿಧ್ವಂಸಕ ಕೃತ್ಯಗಳು ನಡೆಯುವ ಮಾಹಿತಿ ಪ್ರತಾಪ್ ಸಿಂಹಗೆ ಮೊದಲೇ ಗೊತ್ತಿರೋದು ಹೇಗೆ ?

ಬೆಂಗಳೂರು ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕೂಡಲೇ ಕರೆದು ಈ ಬಗ್ಗೆ ವಿಚಾರಣೆ ನಡೆಸಬೇಕು. ರಾಮೇಶ್ವರಂ ಬ್ಲಾಸ್ಟ್ ಕೇಸಿನಲ್ಲಿ ಅವರ ಬಳಿ ಇರುವ, ಅವರು ಇನ್ನೂ ಪೊಲೀಸರಿಗೆ ಹೇಳದೇ ಇರುವ ಮಾಹಿತಿಗಳನ್ನು ಬೇಗ ತಿಳಿದುಕೊಳ್ಳಬೇಕು. ಕಾಂಗ್ರೆಸ್‌ಗೆ ಓಟ್ ಹಾಕಿದ್ರೆ, ತಾಲಿಬಾನಿ ಸರ್ಕಾರ ಬರುತ್ತೆ ಎಂದಿದ್ದೆ. ಇವತ್ತು ತಾಲಿಬಾನಿ ಸರ್ಕಾರ ನಡೀತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿ ಆಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಒಂದು ಬಾಂಬ್ ಬ್ಲಾಸ್ಟ್ ಆದ್ರೆ ಅಲ್ಲಿರುವ ಸರಕಾರ ತಾಲಿಬಾನಿ ಸರಕಾರ ಎಂದಾಗುತ್ತೆ ಅಂತಾದ್ರೆ ... ನರೇಂದ್ರ ಮೋದಿ ಸರಕಾರವನ್ನು ಪ್ರತಾಪ್ ಸಿಂಹ ಏನಂತ ಕರೀಬೇಕು ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ, ನಮ್ಮ ನಲ್ವತ್ತು ವೀರ ಯೋಧರನ್ನು ಒಂದೇ ಕ್ಷಣದಲ್ಲಿ ಬಲಿ ಪಡೆದ ಭಯಾನಕ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದಿದ್ದು ಯಾರ ಅವಧಿಯಲ್ಲಿ ? ಕೇಂದ್ರದಲ್ಲೂ ಮೋದಿ ಸರಕಾರ, ಕಾಶ್ಮೀರದಲ್ಲೂ ಅವರದೇ ಆಡಳಿತ ಇರುವಾಗ ಆ ಭಯಾನಕ ಅಕ್ರಮಣ ನಡೆದು ಹೋಯಿತು. ಆದರೆ ಮೋದಿ ಸರಕಾರವನ್ನು ಪ್ರತಾಪ್ ಸಿಂಹ ತಾಲಿಬಾನಿ ಸರಕಾರ ಎಂದು ಹೇಳಿದ್ರಾ ? ಯಾರಾದರೂ ಪ್ರಜ್ಞಾವಂತರು ಹಾಗೆ ಹೇಳೋಕೆ ಆಗುತ್ತಾ ?

ಆ ಭಯೋತ್ಪಾದಕ ದಾಳಿಯಾಗಿ ಇವತ್ತಿಗೆ ಐದು ವರ್ಷ ಕಳೆಯಿತು. ಇವತ್ತಿಗೂ ಆ ದಾಳಿಗೆ ಯಾರ ವೈಫಲ್ಯ ಕಾರಣ ಎಂದು ಮೋದಿ ಸರಕಾರ ಹೇಳಲೇ ಇಲ್ಲ. ಅಷ್ಟು ದೊಡ್ಡ ದಾಳಿ ನಡೆಯಲು, ನಮ್ಮ ವೀರ ಯೋಧರು ಹುತಾತ್ಮರಾಗಲು ಕಾರಣವೇನು ಎಂದು ಇವತ್ತಿಗೂ ದೇಶಕ್ಕೆ ಹೇಳಿಲ್ಲ ಮೋದಿ ಸರಕಾರ.

ಕಾಶ್ಮೀರದಂತಹ ಜಗತ್ತಿನಲ್ಲೇ ಅತ್ಯಂತ ಸೂಕ್ಷ್ಮ ಹಾಗು ಅಷ್ಟೇ ಭದ್ರತೆ ಇರುವ ಸ್ಥಳದಲ್ಲಿ ಕಿಂಟಾಲುಗಟ್ಟಲೆ ಆರ್ ಡಿ ಎಕ್ಸ್ ಸ್ಪೋಟಕ ತಲುಪಿದ್ದು ಹೇಗೆ ಅನ್ನೋದನ್ನೂ ಇವತ್ತಿಗೂ ಮೋದಿ ಸರಕಾರ ದೇಶಕ್ಕೆ ಹೇಳಿಲ್ಲ. ಪುಲ್ವಾಮಾ ದಾಳಿ ನಡೆಯುವ ಸಾಕಷ್ಟು ಮೊದಲೇ ಇಂತಹದೊಂದು ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಯುತ್ತಿದೆ ಎಂಬ ಬೇಹು ಮಾಹಿತಿ ಇತ್ತು. ಅದನ್ನು ಯಾರು ಯಾಕೆ ನಿರ್ಲಕ್ಷಿಸಿದರು ಎಂಬ ಬಗ್ಗೆನೂ ಮೋದಿ ಸರಕಾರ ಈವರೆಗೂ ಹೇಳಿಲ್ಲ.

ಇದಕ್ಕೆ ಏನು ಹೇಳ್ತಾರೆ ಬಿಜೆಪಿ ಸಂಸದ ಪ್ರತಾಪ್ ಸಿಂಹ. ಹೋಗಲಿ. ಮೋದಿ ಸರಕಾರದ ಹತ್ತು ವರ್ಷಗಳ ಅವಧಿಯಲ್ಲಿ ಅದೊಂದೇ ಭಯೋತ್ಪಾದಕ ದಾಳಿನ ಈ ದೇಶದಲ್ಲಿ ನಡೆದಿದ್ದು ? 2014 ರಿಂದ 2018 ರ ಅವಧಿಯಲ್ಲೇ ಮೋದಿ ಸರಕಾರವೇ ಹೇಳಿದ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಿಂದ ಸಾವಿಗೀಡಾದ ಸೈನಿಕ ಸಂಖ್ಯೆಯಲ್ಲಿ 93% ಹೆಚ್ಚಳವಾಗಿದೆ. ಅಷ್ಟೇ ಅಲ್ಲ 2014 ರ ನಂತರದ ಐದು ವರ್ಷಗಳಲ್ಲಿ ಕಾಶ್ಮೀರದ ಭಯೋತ್ಪಾಕದ ಪ್ರಕರಣಗಳಲ್ಲಿ 176% ಹೆಚ್ಚಳವಾಗಿದೆ. ಎಷ್ಟು... 176% ಹೆಚ್ಚಳ. ಯಾರು ಹೇಳಿದ್ದು ಈ ಲೆಕ್ಕವನ್ನು... ಸ್ವತಃ ಮೋದಿ ಸರಕಾರವೇ ಹೇಳಿದ್ದು. ಇನ್ನು ಭಯೋತ್ಪಾದನೆ ಮೂಲೋತ್ಪಾಟನೆ ಆಗಿಬಿಡುತ್ತದೆ ಎಂದು ಮೋದಿ ಸರಕಾರ ನೋಟ್ ಬ್ಯಾನ್ ಮಾಡಿದ ಮೇಲೆಯೇ ನಡೆದಿದ್ದು ಭಯಾನಕ ಪುಲ್ವಾಮಾ ಭಯೋತ್ಪಾದಕ ದಾಳಿ.

ಹಾಗಾದರೆ ಪ್ರತಾಪ್ ಸಿಂಹ ಮೋದಿ ಸರಕಾರವನ್ನು ಏನಂತ ಕರೀತಾರೆ ? ಹೋಗಲಿ 2019 ರಲ್ಲಿ ಎರಡನೇ ಅವಧಿಗೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲಾದರೂ ದೇಶದಲ್ಲಿ , ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳು, ಸೈನಿಕರ ಸಾವುಗಳು, ಕಾಶ್ಮೀರಿ ಪಂಡಿತರ ಮೇಲಿನ ಆಕ್ರಮಣಗಳು ಕಡಿಮೆ ಆಗಿವೆಯೇ ? ಇಲ್ಲ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡು ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ಮೇಲೆ ಅಲ್ಲಿ ಭಯೋತ್ಪಾದನೆಯೇ ಇರೋದಿಲ್ಲ ಅಂತ ಬಿಜೆಪಿಯವರು ಹೋದಲ್ಲಿ ಬಂದಲ್ಲಿ ಪ್ರಚಾರ ಮಾಡಿದ್ದೇ ಮಾಡಿದ್ದು. ಆದರೆ ಆಗಿದ್ದೇನು ?

ಆಮೇಲೆ ಅಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳು ಹೆಚ್ಚೇ ಆಗಿವೆ. ಸರಕಾರದ್ದೇ ಅಂಕಿ ಅಂಶಗಳ ಪ್ರಕಾರ 2015-19 ರ ಅವಧಿಗೆ ಹೋಲಿಸಿದರೆ 2019-2023 ರಲ್ಲಿ ಸುಧಾರಿತ ಸ್ಪೋಟಕಗಳನ್ನು ಬಳಸಿದ ಸ್ಫೋಟ ಪ್ರಕರಣಗಳಲ್ಲಿ 73% ಹೆಚ್ಚಳವಾಗಿದೆ. ಇದಕ್ಕೆ ಏನು ಹೇಳ್ತಾರೆ ಬಿಜೆಪಿ ಸಂಸದ ಪ್ರತಾಪ್ ಸಿಂಹ. ಇನ್ನು ಮೋದಿ, ಬಿಜೆಪಿ, ಸಂಘ ಪರಿವಾರ ರಾಜಕೀಯಕ್ಕೆ ಉದ್ದಕ್ಕೂ ಬಳಸಿಕೊಂಡೇ ಬಂದ ಕಾಶ್ಮೀರಿ ಪಂಡಿತರ ವಿಷಯ.

ಮೋದಿ ಸರಕಾರ ಬಂದ ಮೇಲೆ ಅದರಲ್ಲೂ ವಿಶೇಷವಾಗಿ ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತು ಹಾಕಿದ ಮೇಲೆ ಅಲ್ಲಿ ಕಾಶ್ಮೀರಿ ಪಂಡಿತರಿಗೆ ಪೂರ್ಣ ಸುರಕ್ಷತೆ ಖಾತ್ರಿ ಆಗುತ್ತೆ ಎಂದು ಬಿಜೆಪಿ ದೇಶಾದ್ಯಂತ ಹೇಳ್ತಾ ಹೋಯಿತು. ಆದರೆ ಆಗಿದ್ದೇನು ? ಆ ಬಳಿಕ ಅಲ್ಲಿ ಕಾಶ್ಮೀರ ಪಂಡಿತರನ್ನು ಕಂಡ ಕಂಡಲ್ಲಿ ಗುಂಡಿಟ್ಟು ಕೊಲ್ಲಲಾಗುತ್ತಿದೆ. ಅವರೀಗ ಪ್ರತಿದಿನ ಭಯದ ನೆರಳಲ್ಲೇ ಬದುಕುವಂತಾಗಿದೆ. ಅವರ ಆಗ್ರಹ, ಪ್ರತಿಭಟನೆ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. " ನಮ್ಮನ್ನೆಲ್ಲ ಮುಗಿಸಿ ಬಿಡ್ತಾರೆ, ನಮ್ಮನ್ನು ಕೇಳೋರೇ ಇಲ್ಲದಾಗಿದೆ " ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆಲ್ಲ ಬಿಜೆಪಿ ಸಂಸದ ಪ್ರತಾಪ್ ಸಿಂಹ ಏನು ಹೇಳ್ತಾರೆ ?

ಅದೆಲ್ಲ ಬಿಡಿ. ಮೊನ್ನೆ ದೇಶದ ಸಂಸತ್ತಿನೊಳಗೇ ಹೊಗೆ ಬಾಂಬ್ ಸಿಡೀತಲ್ವಾ ? ದೇಶದ ಇತಿಹಾಸದಲ್ಲೇ ಎಂದೂ ನಡೆಯದ ಘಟನೆ ಸಂಸತ್ತಿನೊಳಗೆ ನಡೆದು ಹೋಯಿತಲ್ವಾ ? ಅದನ್ನು ಸಿಡಿಸಿದವರಿಗೆ ಇದೇ ಪ್ರತಾಪ್ ಸಿಂಹ ಪಾಸ್ ಕೊಟ್ಟು ಕಳಿಸಿದ್ರಲ್ವಾ ? ಅದ್ರಷ್ಟವಷಾತ್ ಅಲ್ಲಿ ಯಾವುದೇ ಪ್ರಾಣ ಹಾನಿ ಆಗಲಿಲ್ಲ. ನೂರಾರು ಕೋಟಿ ಖರ್ಚು ಮಾಡಿ ಈವರೆಗೆ ಎಲ್ಲೂ ಇಲ್ಲದಂತಹ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಇರುವ ಹೊಸ ಸಂಸತ್ ಭವನ ನಿರ್ಮಿಸಿದ್ದೇವೆ ಎಂದು ಮೋದಿ ಸರಕಾರ ಹೇಳಿತ್ತು. ಆದರೆ ಅಂತಹ ಹೊಸ ಸಂಸತ್ತಿನಲ್ಲಿ ಶೂ ಒಳಗೆ ಹೊಗೆ ಬಾಂಬ್ ಇಟ್ಟುಕೊಂಡು ಹೋಗುವಾಗ ಏನಾಗಿತ್ತು ಮೋದಿ ಸರಕಾರ ಮಾಡಿದ್ದ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ?

ಹೇಗೆ ಹೊಗೆ ಬಾಂಬ್ ಹಾಕಲು ಹೋಗುವವರಿಗೆ ಪಾಸ್ ಕೊಟ್ಟು ಕಳಿಸಿದ್ರು ಪ್ರತಾಪ್ ಸಿಂಹ ? ಹೇಗೆ ಈ ವ್ಯಕ್ತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರಮಾಣ ಪತ್ರ ನೀಡಿ ಪಾಸ್ ಕೊಟ್ಟು ಕಳಿಸಿದರು ಪ್ರತಾಪ್ ಸಿಂಹ ? ಅದಕ್ಕೆ ಪ್ರತಾಪ್ ಸಿಂಹ ತನ್ನನ್ನು ತಾನೇ ತಾಲಿಬಾನಿ ಸಂಸದ, ಹಾಗು ಅವರ ಸರಕಾರವನ್ನು ತಾಲಿಬಾನಿ ಸರಕಾರ ಎಂದು ಕರೀತಾರಾ ?

ಆಯ್ತು , ಇಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ, ರಾಜ್ಯದಲ್ಲೇ ಸ್ಫೋಟ ನಡೀಲಿಲ್ವ.. ಬೆಂಗಳೂರಲ್ಲಿ, ಮಂಗಳೂರಲ್ಲಿ ಸ್ಫೋಟ ನಡೆದಿದ್ದು ರಾಜ್ಯದಲ್ಲಿ ಬಿಜೆಪಿಯ ಸೋ ಕಾಲ್ಡ್ ಡಬಲ್ ಇಂಜಿನ್ ಸರಕಾರ ಇರುವಾಗಲೇ ಅಲ್ವಾ ? ಅದಕ್ಕೆ ಯಾರನ್ನು ಹೊಣೆ ಮಾಡ್ತಾರೆ ಸಂಸದ ಪ್ರತಾಪ್ ಸಿಂಹ ?

ಇನ್ನೂ ಒಂದು ವಿಷಯ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಕೊಟ್ಟು ಗೆಲ್ಲಿಸಿ ಕೊಡಿ. ಆ ಮೂಲಕ ಈ ಸರ್ಕಾರ ತೊಲಗಲು ಅವಕಾಶ ಮಾಡಿಕೊಟ್ರೆ ಕರ್ನಾಟಕ ಉಳಿಯುತ್ತೆ, ಇಲ್ಲದಿದ್ರೆ ಗಂಡಾಂತರ ಕಾದಿದೆ‌ ಎಂದು ಹೇಳಿದ್ದಾರೆ ಪ್ರತಾಪ್ ಸಿಂಹ. ಪುಲ್ವಾಮಾ ಭಯೋತ್ಪಾದಕ ದಾಳಿ, ಸಂಸತ್ತಿನೊಳಗೆ ಹೊಗೆ ಬಾಂಬ್ ಹಾಕೋದು ಗಂಡಾಂತರ ಅಲ್ವಾ ? ಅದು ಯಾರ ಸರಕಾರ ಇರುವಾಗ ಆಗಿದ್ದು ಪ್ರತಾಪ್ ಸಿಂಹ ಅವರೇ ?

ಆ ನಲವತ್ತು ಯೋಧರ ಬಲಿದಾನಕ್ಕೆ ಇವತ್ತಿಗಾದರೂ ನ್ಯಾಯ ಸಿಕ್ಕಿತಾ ? ಪುಲ್ವಾಮಕ್ಕೆ ಯಾರ ವೈಫಲ್ಯ ಕಾರಣವಾಗಿತ್ತೋ ಅವರಿಗೆ ಶಿಕ್ಷೆ ಆಯ್ತಾ ? ಯಾಕೆ ಆಗಿಲ್ಲ ? 28ಕ್ಕೆ 28 ಎಂಪಿ ಸ್ಥಾನವನ್ನೂ ಬಿಜೆಪಿ ಗೆದ್ರೂ ರಾಜ್ಯ ಕಾಂಗ್ರೆಸ್ ಸರಕಾರ ಹೇಗೆ ತೊಲಗುತ್ತೆ ? ಅದರ ಐದು ವರ್ಷದಲ್ಲಿ ಇನ್ನೂ ಒಂದು ವರ್ಷಾನೇ ಆಗಿಲ್ವಲ್ಲ ?

ಅಂದ್ರೆ ಪ್ರತಾಪ್ ಸಿಂಹ ಮಾತಿನ ಅರ್ಥ ಏನು ? ನೀವು ಮತ್ತೆ ಮೋದಿ ಸರಕಾರ ತಂದ್ರೆ, ನಾವು ಆಪರೇಷನ್ ಕಮಲನೋ ಇನ್ನೊಂದೋ ಮಾಡಿ ರಾಜ್ಯ ಕಾಂಗ್ರೆಸ್ ಸರಕಾರವನ್ನು ಉರುಳಿಸ್ತೀವಿ ಅಂತಾನಾ ? ಅಂದ್ರೆ ಜನಾದೇಶ ಪಡೆದಿರುವ ಸರಕಾರದ ವಿರುದ್ಧ ಷಡ್ಯಂತ್ರ ಹೂಡಿ ಅದನ್ನು ಉರುಳಿಸೋದೇ ನಮ್ಮ ಅಧಿಕೃತ ಕೆಲಸ ಅಂತ ಘಂಟಾಘೋಷವಾಗಿ ಹೇಳಿಕೊಳ್ತಾ ಇದ್ದಾರಾ ಬಿಜೆಪಿ ಸಂಸದ ಪ್ರತಾಪ್ ಸಿಂಹ ?

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಆಗಿರೋದು ಅತ್ಯಂತ ಗಂಭೀರ ವಿಚಾರ. ಆ ಸ್ಪೋಟದ ಹಿಂದಿರೋರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಆಗ್ಬೇಕು. ಸರಕಾರ ಈಗಾಗಲೇ ಪ್ರಕರಣ ದಾಖಲಿಸಿದೆ, ಕ್ಷಿಪ್ರ ಗತಿಯಲ್ಲಿ ತನಿಖೆ ನಡೆದಿದೆ, ಆರೋಪಿಯ ಬಂಧನ ಆಗೋದು ಮಾತ್ರ ಬಾಕಿ ಇದೆ. ತನಿಖೆ ಅದರಷ್ಟಕ್ಕೆ ಸರಿಯಾಗಿ ನಡೆಯಲು ಬಿಟ್ಟು ಬಿಡಬೇಕು.

ಆದರೆ ಅಂತಹ ಗಂಭೀರ ಪ್ರಕರಣವೊಂದರಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವ, ಅದರಲ್ಲಿ ಯಾವುದೋ ಧರ್ಮದವರನ್ನು ಎಳೆದು ತರುವ ಹೇಸಿಗೆ ರಾಜಕೀಯ ಮಾಡಲು ಪ್ರತಾಪ್ ಸಿಂಹ ಅವರಿಗೆ ನಾಚಿಕೆ ಆಗಲ್ವಾ ? ಸ್ವತಃ ತಾನೇ ಪಾಸ್ ಕೊಟ್ಟು ಸಂಸತ್ ಗೆ ಕಳಿಸಿದವರು ಹೋಗಿ ಸಂಸತ್ ಒಳಗೆ ಹೊಗೆ ಬಾಂಬ್ ಹಾಕಿದಾಗ ಬಾಯಿಗೆ ಬೀಗ ಜಡಿದುಕೊಂಡು ಕೂತ ಸಂಸದರಿಗೆ ಈಗ ರಾಜ್ಯ ಸರಕಾರದ ವಿರುದ್ಧ ತಾಲಿಬಾನಿ ಸರಕಾರ ಎಂದು ಹೇಳುವ ನೈತಿಕತೆ ಇದೆಯೇ ? ಸಿಂಧಗಿಯಲ್ಲಿ ಇದೇ ಪ್ರತಾಪ್ ಸಿಂಹ ಅವರ ಪರಿವಾರದವರು ಪಾಕಿಸ್ತಾನ ಧ್ವಜವನ್ನೇ ಹಾರಿಸಿದ್ರು. ಅದಕ್ಕೆ ಏನು ಹೇಳ್ತಾರೆ ಪ್ರತಾಪ್ ಸಿಂಹ ? ಸಂಸದರಾಗಿರುವವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತಾಡಬೇಕು. ಸುಮ್ಮನೆ ಪ್ರತಿಯೊಂದರಲ್ಲೂ ರಾಜಕೀಯ ಮಾಡಲು ಹೋದರೆ ಅದು ಅವರಿಗೇ ತಿರುಗುಬಾಣ ಆಗುತ್ತೆ. ಅಷ್ಟೇ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!