ಭಯೋತ್ಪಾದನೆ ಮಟ್ಟ ಹಾಕಿದ್ರೆ ಪುಲ್ವಾಮಾ ದಾಳಿ ನಡೆದಿದ್ದು ಹೇಗೆ ?
ಅವರಿಗೆ ಈ ಒನ್ ವೇ ಸಂವಹನ ಅಂದ್ರೆ ಬಹಳ ಇಷ್ಟ. ರೇಡಿಯೊದಲ್ಲಿ ಅವರೇ ದೇಶದ ಜನರನ್ನು ಉದ್ದೇಶಿಸಿ ಮಾತಾಡೋದು.
ಟಿವಿಯಲ್ಲಿ ದಿಢೀರ್ ಅಂತ ಬಂದು ಅವರೇ ಒಂದು ನೇರ ಪ್ರಸಾರದ ಭಾಷಣ ಮಾಡೋದು. ಅದರಲ್ಲೊಂದು ದೊಡ್ಡ ಘೋಷಣೆ ಮಾಡಿ ಜನರನ್ನು ಬೆಚ್ಚಿ ಬೀಳಿಸೋದು. ಈ ತರ ತಾನು ಮಾತ್ರ ಮಾತಾಡಿ ಜನರು ಅಲ್ಲಿ ಕೇಳಿಸಿಕೊಳ್ಳಲು ಮಾತ್ರ ಅವಕಾಶ ಇರುವ ಯಾವ ಮಾಧ್ಯಮವನ್ನೂ, ವಿಧಾನವನ್ನೂ ಅವರು ಕಳೆದ ಹತ್ತು ವರ್ಷಗಳಲ್ಲಿ ಆಗಾಗ ಪ್ರಯತ್ನಿಸದೆ ಬಿಟ್ಟಿಲ್ಲ.
ಈಗ ಹತ್ತು ವರ್ಷದ ಅಧಿಕಾರ ಮುಗಿಯುವಾಗ ಬಾಕಿ ಇದ್ದ ಇನ್ನೊಂದು ಒನ್ ವೇ ಸಂವಹನದ ವೇದಿಕೆಯನ್ನೂ ಬಳಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ದೇಶದ ಜನರಿಗೆ ನಿನ್ನೆ ಪತ್ರ ಬರೆದಿದ್ದಾರೆ.
ಮೈ ಡಿಯರ್ ಫ್ಯಾಮಿಲಿ ಮೆಂಬರ್ ಎಂದೇ ಜನರನ್ನು ಸಂಬೋಧಿಸಿದ್ದಾರೆ. ಅಲ್ಲಿಗೆ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಅವರು ಕಾಲ್ ಮಾಡಿದ್ದಕ್ಕೆ ಈಶ್ವರಪ್ಪ ಪುಳಕಗೊಂಡಂತೆ ಜನರೂ ಪುಳಕಗೊಳ್ಳಬಹುದು. ಈಶ್ವರಪ್ಪ ಅವರಿಗೆ ಟಿಕೆಟ್ ಕೊಡಲಿಲ್ಲ, ಆದರೆ ಕಾಲ್ ಮಾಡಿದ್ರು. ಈಶ್ವರಪ್ಪ ಫುಲ್ ಖುಷ್ ಆದ್ರು. ಈಗ ಜನರಿಗೆ ಹೇಳಿದ ಭರವಸೆ ಈಡೇರಿಸಲಿಲ್ಲ. ಆದರೆ ಲೆಟರ್ ಬರೆದು ಡಿಯರ್ ಫ್ಯಾಮಿಲಿ ಮೆಮ್ಬರ್ ಅಂದ್ರು. ಅಲ್ಲಿಗೆ ಜನ ಫುಲ್ ಖುಷ್ ಆಗ್ತಾರೆ ಬಿಡಿ.
ವಿಷಯ ಅದಲ್ಲ. ಈ ಪ್ರೀತಿ ತುಂಬಿ ತುಳುಕುತ್ತಿರುವ ಲೆಟರ್ ನಲ್ಲಿ ಪ್ರಧಾನಿ ಮೋದಿಯವರು ತನ್ನ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ನೀರು ಹಾಗು ಗ್ಯಾಸ್ ಒದಗಿಸಿದ್ದು, ಆಯುಷ್ಮಾನ್ ಯೋಜನೆ, ಮಾತೃ ವಂದನಾ ಯೋಜನೆ, ರೈತರಿಗೆ ಆರ್ಥಿಕ ನೆರವುಗಳನ್ನು ನೀಡಿದ್ದನ್ನು ಉಲ್ಲೇಖಿಸಿದ್ದಾರೆ. ಮೂಲಭೂತ ಸೌಲಭ್ಯ ಅಭಿವೃದ್ಧಿಯಲ್ಲಿ ಇನ್ನಿಲ್ಲದ ಕೆಲಸ ಆಗಿದೆ ಎಂದಿದ್ದಾರೆ. ಒಟ್ಟಾರೆ ವಿಕಸಿತ ಭಾರತ ನಿರ್ಮಾಣದತ್ತ ನಾವು ಸಾಗಿದ್ದೇವೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ.
ಅದರ ಜೊತೆಜೊತೆಗೆ ನಮ್ಮ ಸರಕಾರ ಕೆಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿತು ಎಂದಿದ್ದಾರೆ. ಜಿ ಎಸ್ ಟಿ ಜಾರಿ, ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತು ಹಾಕಿದ್ದು, ತ್ರಿವಳಿ ತಲಾಕ್ ರದ್ದತಿ, ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡಿದ್ದು, ಹೊಸ ಪಾರ್ಲಿಮೆಂಟ್ ಬಿಲ್ಡಿಂಗ್ ಉದ್ಘಾಟಿಸಿದ್ದು, ಭಯೋತ್ಪಾದನೆ ಹಾಗು ಎಡಪಂಥೀಯ ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಆದರೆ ಈ ಐತಿಹಾಸಿಕ ನಿರ್ಧಾರಗಳ ಪಟ್ಟಿಯಲ್ಲಿ ಏನೋ ಒಂದು ಮಿಸ್ ಆಗ್ತಾ ಇದೆಯಲ್ವಾ... ಏನದು... ನೋಟ್ ಬ್ಯಾನ್.... ! ರಾತ್ರೋ ರಾತ್ರಿ ದಿಢೀರನೇ ನೋಟ್ ಬ್ಯಾನ್ ಮಾಡಿದ್ದನ್ನು ಲೆಟರ್ ಅಲ್ಲಿ ಸೇರಿಸಲು ಪ್ರಧಾನಿ ಮೋದಿ ಮರೆತು ಬಿಟ್ಟಿದ್ದಾರೆ. ಅದ್ಯಾಕೆ ಅಷ್ಟು ದೊಡ್ಡ ನಿರ್ಧಾರವನ್ನು ಉಲ್ಲೇಖಿಸಲು ಅವರು ಮರೆತು ಬಿಟ್ಟರು ? ಅಥವಾ ಆ ನಿರ್ಧಾರ ಮೋದಿ ಸರಕಾರದ ಮಹಾ ವೈಫಲ್ಯ ಆಯಿತಲ್ವಾ... ಅದಕ್ಕೇ ಅದರ ರಗಳೆಯೇ ಬೇಡ ಅಂತ ಬಿಟ್ರಾ .. ?
ಕಪ್ಪುಹಣ ನಿರ್ಮೂಲನೆ ಆಗುತ್ತೆ ಅಂತ ಹೇಳಿ ಟೋಟಲ್ ಫೇಲ್ ಆಗಿ ಬಿಟ್ರಲ್ಲ... ಅದರ ಬದಲಿಗೆ ಬಡವರು, ಮಧ್ಯಮ ವರ್ಗದ ಪ್ರಾಮಾಣಿಕ ಜನಗಳೇ ಸಂಕಷ್ಟ ಪಡೋ ಹಾಗೆ ಆಯಿತಲ್ವಾ... ಇವತ್ತಿಗೂ ಅದರಿಂದ ಸಣ್ಣ, ಮಧ್ಯಮ ಉದ್ಯಮಗಳು, ವ್ಯಾಪಾರಗಳು ಚೇತರಿಸಿಕೊಳ್ಳಲೇ ಇಲ್ವಲ್ಲಾ.. . ಅದರಿಂದ ಭಯೋತ್ಪಾದನೆ ನಿರ್ಮೂಲನೆ ಆಗೋ ಬದಲು ಜಾಸ್ತಿನೇ ಆಯಿತಲ್ವಾ...
ಅದಕ್ಕೆ ಪಾಪ ಮೋದಿಯವರು ಅದನ್ನು ಪಟ್ಟಿಯಿಂದ ಬಿಟ್ಟು ಬಿಟ್ಟರು. ಹಾಗೆಯೇ ಇನ್ನೊಂದು ಐತಿಹಾಸಿಕ ನಿರ್ಧಾರವನ್ನೂ ಮೋದಿಯವರು ಉಲ್ಲೇಖಿಸಿಲ್ಲ. ದಿಢೀರ್ ದೇಶಾದ್ಯಂತ ಲಾಕ್ ಡೌನ್ ಘೋಷಣೆಯ ನಿರ್ಧಾರ. ಯಾಕಂದ್ರೆ ಅದೂ ಏನೇನೂ ಪ್ರಯೋಜನಕ್ಕೆ ಬಾರದೆ ಇನ್ನಷ್ಟು ಸಮಸ್ಯೆ, ಸಂಕಷ್ಟಗಳನ್ನೇ ಜನರಿಗೆ ತಂದಿಟ್ಟಿತು. ಹಾಗಾಗಿ ಅದನ್ನೂ ಮೋದಿಯವರು ಬಿಟ್ಟು ಬಿಟ್ಟಿದ್ದಾರೆ.
ಇನ್ನು ಉಗ್ರವಾದದ ವಿರುದ್ಧ ಕಠಿಣ ಕ್ರಮ ಅಂದಿದ್ದಾರೆ. ಆದರೆ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದಿದ್ದು, 40 ಯೋಧರು ಬಲಿಯಾಗಿದ್ದು ಯಾರ ಅವಧಿಯಲ್ಲಿ... ಹೋ .. ಮೋದೀಜಿ ಅವಧಿಯಲ್ಲೇ... ಆದ್ರೆ ಏನ್ ಮಾಡೋದು ಬಿಡಿ ಅವರು ಅದನ್ನು ಮರೆತು ಬಿಟ್ಟಿದ್ದಾರೆ. ಇನ್ನು ಕಂಡ ಕಂಡ ಪ್ರೊಫೆಸರ್ ಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು, ಲೇಖಕರನ್ನು, ವಿದ್ಯಾರ್ಥಿ ಮುಖಂಡರನ್ನು ಯಾವುದೇ ಆಧಾರವೇ ಇಲ್ಲದೆ, ಇನ್ನು ಕೆಲವರ ವಿರುದ್ಧ ಪೊಲೀಸರೇ ಸುಳ್ಳು ಸಾಕ್ಷ್ಯ ಸೃಷ್ಟಿಸಿ ವರ್ಷಗಟ್ಟಲೆ ಜೈಲಿಗೆ ಹಾಕಿದ್ದನ್ನು ಎಡಪಂಥೀಯ ಉಗ್ರವಾದದ ವಿರುದ್ಧ ಕ್ರಮ ಅಂತ ಮೋದಿಯವರು ಹೇಳಿರಬೇಕು.
ಏನೇ ಇರಲಿ... ಮೋದೀಜಿ ನಮಗೆ ಲೆಟರ್ ಬರೆದಿದ್ದಾರೆ. ಅದೇ ಇಂಪಾರ್ಟೆಂಟ್. ಸುಮ್ಮನೆ ಅದೂ ಇದೂ ಹೇಳಿ ಟೀಕೆ ಮಾಡೋದು ಸರಿಯಲ್ಲ. ಅವರು ಹೇಳಿದ್ದ ಹಾಗೆ ಉದ್ಯೋಗ ಕೊಟ್ಟಿಲ್ಲ, ಕಪ್ಪು ಹಣ ತಂದಿಲ್ಲ, ಬೆಲೆ ಏರಿಕೆ ತಡೆದಿಲ್ಲ, ಭಯೋತ್ಪಾದನೆ ತಡೆದಿಲ್ಲ ... ಇದ್ದ ಉದ್ಯೋಗವನ್ನೂ ಲಾಕ್ ಡೌನ್, ನೋಟ್ ಬ್ಯಾನ್ ಮಾಡಿ ಕಿತ್ತುಕೊಂಡ್ರು .. ಬೆಲೆ ಏರಿಕೆ ಮೊದಲಿದ್ದೇ ಇದಕ್ಕಿಂತ ಒಳ್ಳೆದಿತ್ತು ಅನ್ನೋವಷ್ಟು ಈಗಾಗಿದೆ... ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರೋದು ಬಿಟ್ಟು ಇಲ್ಲೇ ಸ್ಟೇಟ್ ಬ್ಯಾಂಕ್ ಮೂಲಕವೇ ಮಹಾ ಹಗರಣಕ್ಕೆ ಅವಕಾಶ ಮಾಡಿ ಬಿಟ್ರು ಭಯೋತ್ಪಾದನೆ ನಿರ್ಮೂಲನೆ ಆಗೋದು ಬಿಟ್ಟು ಜಾಸ್ತಿನೇ ಆಯ್ತು ಪೆಟ್ರೋಲ್ ಬೆಲೆ, ಡಾಲರ್ ಎದುರು ರೂಪಾಯಿ ಮೌಲ್ಯ ... ಅದೆಲ್ಲ ನೆನೆಸಿಕೊಂಡ್ರೆನೇ ಕರುಳು ಕಿತ್ತು ಬರುತ್ತೆ ಕಣ್ರೀ
ಆದರೆ ಅವರು ನಮಗೆ ಲೆಟರ್ ಬರೆದಿದ್ದಾರಲ್ಲ ... ಯಾರಾದ್ರೂ ಪ್ರಧಾನಿ ಹೀಗೆ ಲೆಟರ್ ಬರೆದಿದ್ದಾರಾ ದೇಶದ ಜನರಿಗೆ... ಅದೂ ಫ್ಯಾಮಿಲಿ ಮೆಂಬರ್ ಅಂತ ಸಂಬೋಧಿಸಿ... ಅದೂ ಕಣ್ರೀ.. ಅದು ಮುಖ್ಯ. ಈ ಲೆಟರ್ ಅನ್ನು ಫ್ರೆಮ್ ಮಾಡಿ ಮನೆಯಲ್ಲಿ ಹಾಕ್ಕೊಳ್ಳಿ. ಹೇಳಿದ ಕೆಲಸ ಮಾಡೋ ಪ್ರಧಾನಿ ಮುಖ್ಯ ಅಲ್ಲ, ನಮಗೆ ಪ್ರೀತಿಯಿಂದ ಲೆಟರ್ ಬರೆಯೋ ಪ್ರಧಾನಿ ಬೇಕು.. ಏನಂತೀರಾ ...