ಇವಿಎಂ ನಿಂದ ಎಲೆಕ್ಷನ್ ಸುಲಭ ಎಂದಾದರೆ 7 ಹಂತಗಳ ಮತದಾನ ಯಾಕೆ ?

Update: 2024-03-27 06:13 GMT
Editor : Ismail | Byline : ಆರ್. ಜೀವಿ

ಸಾಂದರ್ಭಿಕ ಚಿತ್ರ

ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, 7 ಹಂತಗಳಲ್ಲಿ ಸುದೀರ್ಘವಾಗಿ ನಡೆಯುತ್ತಿದೆ. ದೇಶದ ಚುನಾವಣಾ ಇತಿಹಾಸದಲ್ಲೇ ಇದು ಎರಡನೇ ಅತಿ ದೀರ್ಘ​ ಚುನಾವಣಾ ಪ್ರಕ್ರಿಯೆಯಾಗಿದೆ. ಇಷ್ಟೊಂದು ಸುದೀರ್ಘ​, ಎರಡು ತಿಂಗಳಿಗೂ ಹೆಚ್ಚು ಕಾಲದ ಚುನಾವಣೆ ನಡೆಸುವ ಅಗತ್ಯವಿತ್ತೆ?

ಇವಿಎಂ ಅತ್ಯಾಧುನಿಕವಾಗಿದೆ,​ ಅತ್ಯಂತ ಕ್ಷಿಪ್ರವಾಗಿ ಚುನಾವಣೆ​ ನಡೆಸಲು​ ಅದು ಅತ್ಯಗತ್ಯ ಅನ್ನುವುದಾದರೆ ಒಂದೆರಡು ಹಂತಗಳ ಮತದಾನ ಪ್ರಕ್ರಿಯೆ ಯಾಕೆ ಆಗೋದಿಲ್ಲ? ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಆಯೋಗವೇನೋ ಖಡಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತದಾದರೂ, ಆ ಬಗ್ಗೆ ಈ ಹಿಂದಿನ ನಿದರ್ಶನಗಳು ಬೇರೆಯೇ ಕತೆ ಹೇಳುತ್ತಿವೆ​. ಅಲ್ವಾ ?

ಇವಿಎಂ ಕುರಿತ ಪ್ರಶ್ನೆ ಮತ್ತು ಅನುಮಾನಗಳ ಬಗ್ಗೆಯೂ ಚುನಾವಣಾ ಆಯೋಗದ ವಿವರಣೆ ಕೂಡ ತೃಪ್ತಿದಾಯಕವಾಗಿರಲಿಲ್ಲ​ ಎಂಬ ಆರೋಪಗಳಿವೆ.

ಚುನಾವಣೆ ದಿನಾಂಕವನ್ನು ಘೋಷಿಸಿದ ಸುದ್ದಿಗೋಷ್ಠಿಯಲ್ಲಿಯೂ ಆಯೋಗ ಅದರ ಬಗ್ಗೆ ಸಮರ್ಪಕ ಉತ್ತರ ಕೊಡುವುದು ಸಾಧ್ಯವಾಗಿಲ್ಲ.

ಆಯೋಗದ ಸುದ್ದಿಗೋಷ್ಠಿ ವೇಳೆ ಪತ್ರಕರ್ತರಿಂದ ಬಂದ ಪ್ರಶ್ನೆಗಳು ​ಮಡಿಲ ಮೀಡಿಯಾಗಳ ಮೌನದ ಹೊರತಾಗಿಯೂ ಬಹಳ ಗಂಭೀರವಾಗಿದ್ದವು.

ಆ ಸವಾಲುಗಳಿಗೆ ಚುನಾವಣಾ ಆಯೋಗ ಗಟ್ಟಿ ದನಿಯಲ್ಲಿ ಉತ್ತರಿಸುವುದು, ನೇರವಾಗಿ ಉತ್ತರಿಸುವುದು ಸಾಧ್ಯವಾಯಿತೆ ಎಂದು ಕೇಳಿದರೆ, ಖಂಡಿತ ಇಲ್ಲ. ಹಾಗಾದರೆ, ಏಕೆ ​ಚುನಾವಣಾ ಆಯೋಗಕ್ಕೆ ಅದು ಸಾಧ್ಯವಾ​ಗಲಿಲ್ಲ?

ಮುಖ್ಯ ಚುನಾವಣಾ ಆಯುಕ್ತರು ಮತ್ತೆ ಮತ್ತೆ ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಎಂಬ ಪದ ಬಳಸಿದರು.​ ಅಂದ್ರೆ ಎಲ್ಲರಿಗೂ ಸ್ಪರ್ಧಿಸುವ ಸಮಾನ ಅವಕಾಶ ಅಂತ. ಬಹಳ ಸಂತೋಷ. ಆದರೆ ವಾಸ್ತವದಲ್ಲಿ ಅದಕ್ಕಾಗಿ ಆಯೋಗ ಎಷ್ಟರ ಮಟ್ಟಿಗೆ ಶ್ರಮಿಸಲಿದೆ?

ಚುನಾವಣೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳೆಂಬ ಭೇದವಿಲ್ಲದೆ ಸಮಾನ ಅವಕಾಶಗಳು ಸಿಗಬೇಕು. ಹಾಗಾದರೆ ಬರೀ ಮೋದಿಯನ್ನೇ ತೋರಿಸುವ ಇವತ್ತಿನ ಮೀಡಿಯಾಗಳಲ್ಲಿ ಪ್ರತಿಪಕ್ಷಗಳ ಸುದ್ದಿಗಾಗಿ ಸಿಗುವ ಜಾಗವೆಷ್ಟು?

ಹಣಬಲ ಆಡಳಿತಾರೂಢ ಪಕ್ಷದ ಕೈಯಲ್ಲಿದೆ. ವಿಪಕ್ಷಗಳ ಬಳಿ ಹಣ ಇಲ್ಲವಾಗಿದೆ. ವಿಪಕ್ಷಗಳ ನಾಯಕರನ್ನು ಜೈಲಿನಲ್ಲಿಡಲಾಗಿದೆ. ವಿಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗುತ್ತಿದೆ.

ಹಾಗಿರುವಾಗ ಚುನಾವಣಾ ಆಯೋಗ ಹೇಳುತ್ತಿರುವ ​ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಯಾವುದು? ಮೊದಲು ಈ ಚುನಾವಣೆಯ ಸುದೀರ್ಘ ಅವಧಿಯ ಬಗೆಗಿನ ವಿವರಗಳ ಕಡೆಗೆ ಸ್ವಲ್ಪ ನೋಡೋಣ.ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ 44 ದಿನಗಳ ಅವಧಿಯದ್ದಾಗಿದೆ.

1951-​ 52ರಲ್ಲಿ ಮೊದಲ ಸಂಸತ್ ಚುನಾವಣೆಯ ಪ್ರಕ್ರಿಯೆ ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ನಡೆದ ನಂತರ ದೇಶದ ಚುನಾವಣಾ ಇತಿಹಾಸದಲ್ಲಿಯೇ ಇದು ಎರಡನೇ ಸುದೀರ್ಘ ಚುನಾವಣಾ ಪ್ರಕ್ರಿಯೆಯಾಗಿದೆ.

1980ರಲ್ಲಿ ಅತಿ ಕಡಿಮೆ ಅವಧಿಯಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಆಗ ಮತದಾನ ಪ್ರಕ್ರಿಯೆ ನಡೆದದ್ದು ನಾಲ್ಕೇ ದಿನಗಳು. ಈ ವರ್ಷದ ಚುನಾವಣಾ ಪ್ರಕ್ರಿಯೆಯ ಒಟ್ಟು ಅವಧಿ, ಶನಿವಾರ ಚುನಾವಣೆಯ ಘೋಷಣೆಯಾದಂದಿನಿಂದ ಮತ ಎಣಿಕೆಯವರೆಗೆ 82 ದಿನಗಳ ಸಮಯದ್ದಾಗಿದೆ.

ಈ ಸಲ ಏಪ್ರಿಲ್ 19ರಿಂದ ಮತದಾನ ಶುರುವಾಗಿ ಜೂನ್ 1ರವರೆಗೂ ನಡೆಯುತ್ತದೆ. ಜೂನ್ 4ರಂದು ಮತ ಎಣಿಕೆ. ಯಾಕೆ ಇಷ್ಟು ದೀರ್ಘ ಅವಧಿಯ ಮತದಾನ ಪ್ರಕ್ರಿಯೆ ಎಂಬ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ದೇಶದ ಭೌಗೋಳಿಕತೆಯ ಬಗ್ಗೆ ಹೊಸದಾಗಿ ಸಂಶೋಧನೆ ಮಾಡಿದವರಂತೆ ಉತ್ತರ ಕೊಟ್ಟಿದ್ದಾರೆ.

ನದಿಗಳು, ಪರ್ವತಗಳು, ಹಿಮ, ಕಾಡು, ಬೇಸಿಗೆ ಎಂದೆಲ್ಲ ಹೇಳಿರುವ ಅವರು, ಭದ್ರತಾ ಪಡೆಗಳ ಮೇಲಿನ ಒತ್ತಡದ ಬಗ್ಗೆ ಹೇಳಿದ್ದಾರೆ. ನಡುವೆ ಹಬ್ಬಗಳು, ಪರೀಕ್ಷೆಗಳು ಇರುವುದರ ಬಗ್ಗೆ ಹೇಳಿದ್ದಾರೆ. ಇದು ಯಾರಿಗಾದರೂ ಅನುಕೂಲವಾಗುವುದಕ್ಕಾಗಲೀ ಅಥವಾ ಯಾರಿಗಾದರೂ ನಷ್ಟ ಉಂಟುಮಾಡುವುದಕ್ಕಾಗಲೀ ಅಲ್ಲ. ಅಂಥ ಅನುಮಾನ ಯಾರಿಗಾದರೂ ಇದ್ದರೆ ಅದು ತಪ್ಪು ಎಂದಿದ್ದಾರೆ.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಸುವ ನಿರ್ಧಾರವನ್ನು ಹಲವಾರು ವಿರೋಧ ಪಕ್ಷಗಳು ಈಗಾಗಲೇ ಟೀಕಿಸಿವೆ​. ಆದರೆ, ಹಲವಾರು ಕ್ಷೇತ್ರಗಳು ಮತ್ತು ಅಭ್ಯರ್ಥಿಗಳನ್ನು ಹೊಂದಿರುವ ದೊಡ್ಡ ರಾಜ್ಯಗಳಲ್ಲಿ ಅಷ್ಟು ಹಂತಗಳ ಅಗತ್ಯ ಇದೆಯೆಂದು ಆಯೋಗದ ನಿರ್ಧಾರವನ್ನು ಮುಖ್ಯ ಚುನಾವಣಾ ಆಯುಕ್ತರು ಸಮರ್ಥಿಸಿಕೊಂಡಿದ್ದಾರೆ.

ಮೋದಿ ಮತ್ತವರ ಪಕ್ಷದ ವಿಚಾರದಲ್ಲಿ ಏಕೆ ಪಕ್ಷಪಾತ ಎಂಬ ಪ್ರಶ್ನೆ ಕೂಡ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ಎದುರು ಬಂತು.

ನೀತಿ ಸಂಹಿತೆ ಉಲ್ಲಂಘನೆಗಾಗಿ ವಿಪಕ್ಷಗಳ ವಿಚಾರದಲ್ಲಿ ಮಾತ್ರ ಕ್ರಮ ಕೈಗೊಳ್ಳುತ್ತಿದೆ, ಆಡಳಿತ ಪಕ್ಷ ಬಿಜೆಪಿ ವಿಚಾರದಲ್ಲಿ, ಮೋದಿ, ಅಮಿತ್ ಶಾ ವಿಚಾರದಲ್ಲಿ ಏಕೆ ಕ್ರಮವಿಲ್ಲ ಎಂಬ ಪ್ರಶ್ನೆಯೂ ಎದುರಾಯಿತು. ಆಡಳಿತ ಪಕ್ಷದವರಿಗಿಂತ ವಿಪಕ್ಷಗಳ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳೇ ಹೆಚ್ಚು ನಿಮ್ಮ ಗಮನಕ್ಕೆ ಬರುತ್ತವೆಯೆ ಎಂಬ ಪ್ರಶ್ನೆಯೂ ಎದ್ದಿತು.

​ ಮೋರಲ್ ಕೋಡ್ ಆಫ್ ಕಂಡಕ್ಟ್ ​ಈಗ ಮೋದಿ ಕೋಡ್ ಆಫ್ ಕಂಡಕ್ಟ್ ಆಗಿದೆಯೆ ಎಂಬ ಅನುಮಾನವೂ ಎದ್ದಿತು. ಇದಾವುದಕ್ಕೂ ಮುಖ್ಯ ಚುನಾವಣಾ ಆಯುಕ್ತರು ನೇರ ಉತ್ತರ ನೀಡಲಿಲ್ಲ.​ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ ವಿಚಾರವಾಗಿಯೂ ಪ್ರಶ್ನೆ ಎದ್ದಿತು.

ವೈಯಕ್ತಿಕ ಕಾರಣ ಎಂದು ಪ್ರಸ್ತಾಪಿಸಿದ ​ಮುಖ್ಯ ಚುನಾವಣಾ ಆಯುಕ್ತರೇ, ಕೆಲವು ಕಾರಣಗಳಿಗಾಗಿ ಆಯೋಗದೊಳಗೆ ಭಿನ್ನಾಭಿಪ್ರಾಯ ಬರುತ್ತದೆ ಎಂದರು. ಹಾಗಿರುವಾಗ ವೈಯಕ್ತಿಕ ಕಾರಣ ಎಂದೇಕೆ ಹೇಳಬೇಕು? ಅಸಲಿ ಕಾರಣವನ್ನು ಅವರೇಕೆ ಹೇಳಲಾರರು?

ಇವಿವಿಂ ಕುರಿತು ವಿಪಕ್ಷಗಳ ವಿಚಾರ ಕೇಳಲು ಕೂಡ ಚುನಾವಣಾ ಆಯೋಗ ತಯಾರಾಗಿರಲಿಲ್ಲ. ಬದಲಾಗಿ ತಾನೇ ಒಂದಿಷ್ಟು ವಿವರಣೆಗಳನ್ನು ವೆಬ್ಸೈಟ್ನಲ್ಲಿ ಹಾಕಿ ಸುಮ್ಮನಾಗಿತ್ತು. ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಈಗಲೂ ದೇಶದ ಜನರಲ್ಲಿ ಅನುಮಾನಗಳು, ಪ್ರಶ್ನೆಗಳು ಬೇಕಾದಷ್ಟಿವೆ.

ಮುಖ್ಯ ಚುನಾವಣಾ ಆಯುಕ್ತರು ಮಾತ್ರ, ಅದು ನೂರಕ್ಕೆ ನೂರು ಸೇಫ್ ಎಂದೇ ಹೇಳುತ್ತಿದ್ಧಾರೆ.ವಿವಿಪ್ಯಾಟ್ ಬಗೆಗಿನ ಅನುಮಾನಗಳಿಗೆ ಇವತ್ತಿಗೂ ಆಯೋಗ ಉತ್ತರ ಕೊಟ್ಟಿಲ್ಲ.ಇವೆಲ್ಲವೂ ಚುನಾವಣಾ ಆಯೋಗದ ನಿಷ್ಪಕ್ಷ​ ನಿಲುವಿನ ಬಗ್ಗೆಯೇ ಪ್ರಶ್ನೆಗಳು ಏಳುವಂತೆ ಮಾಡುತ್ತವೆ.

ಮುಖ್ಯ ಚುನಾವಣಾ ಆಯುಕ್ತರ​ ಪತ್ರಿಕಾ ಗೋಷ್ಠಿ ಬಳಿಕವೂ ಇವಿಎಂ ವಿರೋಧಿ ಹೋರಾಟಗಾರರು ಇವಿಎಂ ಕುರಿತ ಪ್ರಶ್ನೆಗಳಿಗೆ ಆಯೋಗ ಸರಿಯಾಗಿ ಉತ್ತರವನ್ನೇ ಕೊಟ್ಟಿಲ್ಲ. ಈಗಲೂ ನಾವು ನಮ್ಮ ವಾದವನ್ನು ಸಾಬೀತುಪಡಿಸಲು ಸಿದ್ಧವಿದ್ದೇವೆ. ಬೇಕಿದ್ದರೆ ಆಯೋಗ ನಮ್ಮ ಮೇಲೆ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.

ಇದು ಏನನ್ನು ಸೂಚಿಸುತ್ತದೆ ? ಇವಿಎಂ ಸಂಪೂರ್ಣ ಸುರಕ್ಷಿತ, ಅದರಲ್ಲಿ ಯಾವುದೇ ತಿರುಚುವಿಕೆಗೆ ಆಸ್ಪದವೇ ಇಲ್ಲ ಎಂದಾದರೆ ಬಹಳ ಒಳ್ಳೇದು. ಅದನ್ನು ಇಡೀ ದೇಶಕ್ಕೆ ಮನವರಿಕೆ ಮಾಡುವುದು ಮಾತ್ರ ಆಯೋಗದ ಕೆಲಸ. ಅಲ್ಲಿಗೆ ಇವಿಎಂ ಕುರಿತ ಎಲ್ಲ ಸಂಶಯಗಳು ನಿವಾರಣೆಯಾಗುತ್ತವೆ.

ಆದರೆ ಪ್ರತಿ ಬಾರಿ ಚುನಾವಣಾ ಆಯೋಗ ಇವಿಎಂ ಕುರಿತು ಮಾತಾಡಿದ ಬಳಿಕ ಅದರ ಬಗ್ಗೆ ಇನ್ನಷ್ಟು ಪ್ರಶ್ನೆಗಳು, ಸಂಶಯಗಳು ಹುಟ್ಟಿಕೊಳ್ಳುವುದು ಹೇಗೆ ? ಮತ್ತು ಯಾಕೆ ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ , ಅತ್ಯಂತ ಮಹತ್ವದ ಪ್ರಕ್ರಿಯೆಗೆ ಬಳಸುವ ಯಂತ್ರ ಹಾಗು ಅದರ ತಂತ್ರಜ್ಞಾನ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಅಲ್ಲಿನ ಮತದಾರರಿಗೆ ಮನವರಿಕೆ ಮಾಡಿ ಕೊಡುವುದು ಯಾಕೆ ಸಾಧ್ಯವಾಗುತ್ತಿಲ್ಲ ?

ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾ ಗೋಷ್ಠಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯನ್ನು ನಾವು ಸಹಿಸುವುದೇ ಇಲ್ಲ ಎಂದು ಹೇಳಿದರು.

ಮೂರ್ಖರ ಸರದಾರ ಎಂದು ರಾಹುಲ್ ಗಾಂಧಿ ಬಗ್ಗೆ ಮೋದಿ ಟೀಕಿಸಿದ್ದರು. ಅದೇ ಪ್ರಧಾನಿ ದೇಶದ ಒಂದು ಧರ್ಮವನ್ನು ಭಯೋತ್ಪಾದಕತೆ ಜೊತೆ ಜೋಡಿಸುತ್ತಾರೆ. ಮತ್ತು ಅದಕ್ಕಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಆಯೋಗ ಏನಾದರೂ ಕ್ರಮ ಕೈಗೊಂಡದ್ದು ಇದೆಯೆ?

ಈ ಹಿಂದೆ ಮೋದಿ, ಅಮಿತ್ ಶಾ ಬಗ್ಗೆ ಹಿಂದಿನ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಪ್ರಶ್ನೆಗಳನ್ನು ಎತ್ತಿದಾಗ ಏನಾಯಿತು? ಅವರ ಮನೆ ಮೇಲೆ ಐಟಿ ರೇಡ್ ಆಯಿತು. ಕೊಡಬಾರದಷ್ಟು ಕಿರುಕುಳವನ್ನು ಅವರಿಗೂ ಅವರ ಪರಿವಾರಕ್ಕೂ ನೀಡಲಾಗಿತ್ತು. ಮಕ್ಕಳನ್ನು ಪ್ರಚಾರದಲ್ಲಿ ಬಳಸುವಂತಿಲ್ಲ ಎನ್ನುತ್ತಾರೆ ಮುಖ್ಯ ಚುನಾವಣಾ ಆಯುಕ್ತರು. ಆದರೆ ಪ್ರಧಾನಿಯೇ ಎಷ್ಟು ಬಾರಿ ಮಕ್ಕಳನ್ನು ಬಳಸಿಲ್ಲ?

ಆದರೆ ಇವತ್ತಿಗೂ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿಲ್ಲ. ಮೊದಲ ಸಲದ ಮತದಾರರ ಎಲ್ಲ ಮಾಹಿತಿಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಕೂಡ ಬಿಡುತ್ತಿಲ್ಲ. ಇದರ ಬಗ್ಗೆ ಏಕೆ ಆಯೋಗ ಸುಮ್ಮನಿದೆ ಎಂಬ ಪ್ರಶ್ನೆಯೂ ಏಳುತ್ತದೆ.

ಎಲ್ಲವೂ, ಎಲ್ಲ ಬಲವೂ ಬಿಜೆಪಿ ಪರ ಇರುವಾಗ ಹೇಗೆ ಚುನಾವಣಾ ಆಯೋಗ ಹೇಳುವ ​ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಸಾಧ್ಯ?

ಚುನಾವಣಾ ಬಾಂಡ್ ಮೂಲಕ ಸಿಂಹಪಾಲು ದೇಣಿಗೆ ಬಿಜೆಪಿಗೆ ಬಂದಿದೆ. ಮಾಧ್ಯಮಗಳೆಲ್ಲ ಬಿಜೆಪಿ ಪರ ನಿಂತಿವೆ. ವಿಪಕ್ಷಗಳ ಕಡೆಗೆ ಅವು ದೊಡ್ಡ ಗೋಡೆ ಎಬ್ಬಿಸಿಕೊಂಡು ಕೂತಿವೆ. ಹಣಬಲ ಬಿಜೆಪಿಯದ್ದಾಗಿದೆ. ಮಾಧ್ಯಮಗಳು ಅದರ ಕೈಯಲ್ಲಿವೆ. ಅಂದಮೇಲೆ ​ಅದು ಹೇಗೆ ​ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಆಗಿರಲು ಸಾಧ್ಯ?

ವಿಪಕ್ಷಗಳಿಗೆ ಈ ಚುನಾವಣೆ ಗೆಲ್ಲುವುದು ಬಹು ದೊಡ್ಡ ಸವಾಲಾಗಿದೆ. ಆಯೋಗ ಪೂರ್ತಿಯಾಗಿ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹಾಗಾಗಿ ಚುನಾವಣೆ ಎನ್ನುವುದು ಚುನಾವಣಾ ಆಯೋಗ ನಡೆಸುವ ಚುನಾವಣೆಯಾಗಿ ಉಳಿಯುವುದು ಸಾಧ್ಯವಿಲ್ಲವಾಗಿದೆ.

ಎಲ್ಲ ಪಕ್ಷಗಳ ಸ್ಟಾರ್ ಪ್ರಚಾರಕರಿಗೂ ಗೈಡ್ಲೈನ್ ವಿಚಾರದ ಬಗ್ಗೆ ಆಯೋಗ ಹೇಳುತ್ತಿದೆ. ​ಆದರೆ ಕ್ರಮ ಕೈಗೊಳ್ಳುವಾಗ ಮಾತ್ರ ಅದು ಯಾವ ಪಕ್ಷ ಎಂಬುದರ ಮೇಲೆ ನಿರ್ಧಾರವಾಗಲಿದೆ​. ಅಲ್ವಾ ?​

ಸುಳ್ಳು ಇತಿಹಾಸ ಹೇಳುವವರ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ? ಕರ್ನಾಟಕದಲ್ಲಿ ಭಗತ್ ಸಿಂಗ್ ವಿಚಾರವಾಗಿ ಮೋದಿ ತಪ್ಪು ಮಾಹಿತಿ ಕೊಟ್ಟಾಗ ಅದರ ಬಗ್ಗೆ ಏನು ಮಾಡಲಾಯಿತು? ಇವತ್ತಿನವರೆಗೂ ಗೊತ್ತಿಲ್ಲ.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನುರಾಗ್ ಠಾಕೂರ್ ಪ್ರಚೋದನಕಾರಿ ಭಾಷಣದ ಬಗ್ಗೆ ಕೇಸ್ ಆಯಿತೇ ಹೊರತು ಅಂತಿಮ ತೀರ್ಮಾನ ಬರಲೇ ಇಲ್ಲ. ​ಚುನಾವಣಾ ಪ್ರಚಾರದಲ್ಲೇ ಹುತಾತ್ಮ ಸೈನಿಕರ ಹೆಸರಲ್ಲಿ ಮತ ಯಾಚಿಸಿದರು ಪ್ರಧಾನಿ ಮೋದಿ. ಆದರೆ ಅಷ್ಟು ದೊಡ್ಡ ಉಲ್ಲಂಘನೆಗೆ ಅವರ ಮೇಲೆ ಕ್ರಮವಾಯಿತೇ ?

ಹಾಗಾದರೆ ಆಯೋಗ ಹೇಳುವ ಗೈಡ್ಲೈನ್ಸ್ ವಿಪಕ್ಷಗಳಿಗಾಗಿ ಮಾತ್ರವೆ? ಸರ್ಕಾರ ಹೇಳುತ್ತಿರುವುದು ಸತ್ಯ ಎಂದು ಚುನಾವಣಾ ಆಯೋಗ ನಂಬುತ್ತದೆಯೊ ಅಥವಾ ವಿಪಕ್ಷಗಳ ಪ್ರಶ್ನೆಗಳು ಸತ್ಯ ಎಂದು ಅದು ನಂಬುತ್ತದೆಯೊ?

ತಪ್ಪು ಮಾಹಿತಿಗಳು ಮತ್ತು ಸುಳ್ಳು ಸುದ್ದಿಗಳ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆಯುವುದನ್ನು ನೋಡಿಕೊಳ್ಳಲೆಂದೇ ಪ್ರತಿ ರಾಜ್ಯಗಳಲ್ಲಿ ಅಧಿಕಾರಿ ನೇಮಕದ ಬಗ್ಗೆ ಆಯೋಗ ಹೇಳಿದೆ. ಆದರೆ ಹಿಂದಿನ ಚುನಾವಣೆಗಳ ಹೊತ್ತಿನಲ್ಲಿ ಆದದ್ದೇನು ​?

ಅಲ್ಲಿಯೂ ಮತ್ತೆ ಅವು ಯಾವ ಪಕ್ಷಗಳದ್ದು ಎಂಬ ವಿಚಾರವೇ ಅವುಗಳ ಕುರಿತ ನಿರ್ಧಾರದ ಹಿಂದೆ ಕೆಲಸ ಮಾಡುತ್ತದೆ.

​ಸಮಾನ ಅವಕಾಶ ಎಂದು ಅಯೋಗ ಹೇಳುವಾಗ ಅದು ಕಿವಿಗೆ ಬಹಳ ಸೊಗಸಾಗಿ ಕೇಳಿಸುವುದೇನೋ ನಿಜ. ಆದರೆ ​ಪರಿಸ್ಥಿತಿ ನೋಡುವಾಗ ಗೊತ್ತಾಗುವ ವಾಸ್ತವ ಮಾತ್ರ ಬೇರೆಯೇ ಆಗಿರುತ್ತದೆ. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಮಾಡಬೇಕು ಮತ್ತು ಹಾಗೆ ಮಾಡುವುದು ಚುನಾವಣಾ ಆಯೋಗದ ಬಹಳ ದೊಡ್ಡ ಕೆಲಸವೂ ಹೌದು.

ಆದರೆ ಅದು ಆಗುತ್ತದೆಯೆ? ಎಲ್ಲ ಟಿವಿ ವಾಹಿನಿಗಳಲ್ಲಿ​ ಇಡೀ ದಿನ ಬಿಜೆಪಿಯ ಬಗ್ಗೆಯೇ ಕವರೇಜ್. 20 ಸುದ್ದಿಗಳು ಬಿಜೆಪಿಯದ್ದಾದರೆ, ಒಂದೊ ಎರಡೊ ಸುದ್ದಿಗಳಷ್ಟೇ ವಿಪಕ್ಷಗಳಿಗೆ ಸಂಬಂಧಿಸಿರುತ್ತವೆ. ತಪ್ಪು ಮಾಡಿದಲ್ಲಿ, ತಪ್ಪು ಮಾಹಿತಿಗಳಿರುವ ಜಾಹೀರಾತು ಪ್ರಕಟಿಸಿದಲ್ಲಿ ಸಂಪಾದಕರ ವಿರುದ್ಧವೂ ಕ್ರಮ ಎಂದೆಲ್ಲ ಹೇಳುವ ಆಯೋಗ, ಯಾವ ವಿಚಾರದಲ್ಲಿ ಹಿಂದೆ ಕ್ರಮ ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರಿಸಲಾರದು.

ಖಡಕ್ ಕ್ರಮಗಳ ಮಾತುಗಳೇನೋ ಸರಿ. ಆದರೆ ಕ್ರಮವನ್ನೇ ಕೈಗೊಳ್ಳದಿದ್ದರೆ ಏನು ಬಂತು? ವಿಪಕ್ಷಗಳ ವಿಚಾರದಲ್ಲಿ ಮಾತ್ರ ವೀರಾಧಿವೀರನಂತೆ ಆಯೋಗ ವರ್ತಿಸಿದರೆ ಏನು ಬಂತು? ಎಲ್ಲ ಚಾನೆಲ್ಗಳಲ್ಲಿ ಮೋದಿ ಮೋದಿ ಮೋದಿ. ಮತ್ತವರ ಭಾಷಣದ ಪ್ರಸಾರ.

ವಿಪಕ್ಷಗಳ ನಾಯಕರ ಹೇಳಿಕೆಗಳಿಗೆ ಎರಡು ನಿಮಿಷಗಳಿಗಿಂತ ಕಡಿಮೆ ಸಮಯ.

​ನಿನ್ನೆಯ ಇಂಡಿಯಾ ಕೂಟದ ಮುಂಬೈ ಸಮಾವೇಶವನ್ನೇ ತೆಗೆದುಕೊಳ್ಳಿ. ಎಷ್ಟು ಚಾನಲ್ ಗಳಲ್ಲಿ ಅದರ ನೇರ ಪ್ರಸಾರ ಬಂತು ?

ಅಷ್ಟು ದೊಡ್ಡ ಸಮಾವೇಶಕ್ಕೆ ಎಷ್ಟು ಕವರೇಜ್ ಸಿಕ್ಕಿತು ? ಇನ್ನು ದುಡ್ಡಿನ ಹರಿವಂತೂ ಚುನಾವಣೆ ಹೊತ್ತಿನಲ್ಲಿ ಕೋಟಿ ಕೋಟಿ. ಜಪ್ತಿಯಾಗುವ ಅಕ್ರಮ ಹಣದ ಪ್ರಮಾಣವಂತೂ ಹೆಚ್ಚುತ್ತಲೇ ಇದೆ. ಚುನಾವಣಾ ಆಯೋಗ ಹೇಳುತ್ತಿರುವ ​ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಹೇಗಿರಲಿದೆ ಎಂಬುದನ್ನು ಏಪ್ರಿಲ್ 19ರಿಂದ ಜೂನ್ 1ರವರೆಗೆ ದೇಶವೇ ನೋಡಲಿದೆ.

ಈ ಬಾರಿಯ ವಾತಾವರಣವನ್ನು ನೋಡಿದರೆ, ಹಿಂದೆಂದೂ ಕಾಣದ ಮಟ್ಟಿಗೆ ಎಲ್ಲವೂ ಅಸಮವಾಗಿರಲಿದೆ. ವಿರೋಧ ಪಕ್ಷದ ಅನೇಕ ದೊಡ್ಡ ನಾಯಕರು ಜೈಲಿನಲ್ಲಿದ್ದಾರೆ, ಪ್ರತಿಪಕ್ಷಗಳ ಬಳಿ ಹಣವಿಲ್ಲ, ಮಾಧ್ಯಮಗಳಲ್ಲಿ ಅವಕ್ಕೆ ಜಾಗವಿಲ್ಲ. ಎಲ್ಲಿ ನೋಡಿದರೂ ಬಿಜೆಪಿ ಮತ್ತು ಪ್ರಧಾನಿಯ ಬಗ್ಗೆ ಮಾತ್ರ ​ಪ್ರಚಾರ ಕಾಣುತ್ತಿದೆ.

ಈ ಅಸಮಾನತೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಬಂದಿದೆ. ಈ ಸಲ ದೊಡ್ಡ ಮಟ್ಟದಲ್ಲಿ ಕಾಣಿಸಲಿದೆ ಎಂಬುದಂತೂ ನಿಚ್ಚಳ.

ಹೀಗಿರುವಾಗ ​ಲೆವೆಲ್​ ಪ್ಲೇಯಿಂಗ್ ಫೀ​ಲ್ಡ್ ಎಂದು ಚುನಾವಣಾ ಆಯೋಗ ಕೂಡ ಮೋದಿ ಸರ್ಕಾರದ ಹಾಗೆ ಮಂಕುಬೂದಿ ಎರಚುತ್ತ ನಿಂತಿದೆಯಲ್ಲವೆ ಎಂಬ ಅನುಮಾನ ಕಾಡದೇ ಇರುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!