ಪರಿಶಿಷ್ಟರ ಉಪ ಯೋಜನೆಗಳ ಅನುಷ್ಠಾನ ಮತ್ತು ತಪ್ಪು ಗ್ರಹಿಕೆಗಳು

ಇತ್ತೀಚಿನ ಉಪ ಯೋಜನೆಗಳ ಕ್ರೋಡೀಕೃತ ಹಣವನ್ನು ಆದ್ಯತೆ ಮೇರೆಗೆ ಇಲಾಖೆಗಳಿಗೆ ಮರುಹಂಚಿಕೆ ಮಾಡಿ ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದನ್ನು ದುರುಪಯೋಗವೆನ್ನಲಾಗದು. ಕಾಂಗ್ರೆಸ್ ಸರಕಾರದ ಮಹತ್ವಾಂಕ್ಷಿ ಖಾತರಿ ಯೋಜನೆಗಳಿಗೆ ವಿನಿಯೋಗ ಮಾಡಿದರೆ ಅದರ ನೇರ ಹಣ ವರ್ಗಾವಣೆ ಫಲಿತಗಳು ಆ ಸಮುದಾಯದ ಜನರೇ ಅನುಭವಿಸಿದಂತಾಗುತ್ತದೆ. ಇದರಿಂದ ದುರುಪಯೋಗದ ಪ್ರಮಾಣ ತಗ್ಗುತ್ತದೆ. ಜಲಪೂರಣ ಮಾಡಿದಂತೆ ತೆರಿಗೆ ಹಣವನ್ನು ಅವರ ಕೈಗೆ ನೀಡಿದರೆ, ಅದು ಆರ್ಥಿಕ ಚಕ್ರೀಯ ಚಲಾವಣೆಗೆ ಬರುವುದರಿಂದ ಹಣದುಬ್ಬರ ಕಡಿಮೆಗೊಳಿಸುತ್ತದೆ. ಜೊತೆಗೆ ಉತ್ಪಾದನೆಗೆ ಬೇಕಾದ ಅಂಶಗಳಾಗುತ್ತದೆ.

Update: 2023-09-10 04:38 GMT

- ದಾಸನೂರು ಕೂಸಣ್ಣ

ಸಮುದಾಯ ಚಿಂತಕರು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ನಾಗರಬಾವಿ ಅಂಚೆ, ಬೆಂಗಳೂರು

ಭಾರತ ಅಸಮಾನತೆಗಳಿಂದ ತುಂಬಿರುವ ದೇಶ. ಸಾಮಾನ್ಯವಾಗಿ ಅದರ ದಶ ದಿಕ್ಕುಗಳಲ್ಲಿಯೂ ಹಲವು ಬಗೆಯ ವೈರುಧ್ಯಗಳ ಆಗರ ತುಂಬಿದೆ. ಅದರಲ್ಲೂ ಸಾಮಾಜಿಕ ಅಸಮಾನತೆ ಅನ್ನುವುದು ಅದರ ಬೀಜಮಂತ್ರವಾಗಿದೆ. ಆದುದರಿಂದ ಶೋಷಣೆ ಅನುಭವಿಸುವವರಿಗೆ ಉಸಿರಾಡಲಾಗದ ಸ್ಥಿತಿಯನ್ನು ನಿರ್ಮಿಸಿದೆ.

ಸಂವಿಧಾನೋತ್ತರ ಈ ನೆಲದ ಕಾಯ್ದೆ ಮತ್ತು ಕಾನೂನುಗಳು ಅವರ ಸಂರಕ್ಷಣೆ ಮತ್ತು ಅಭಿವೃದ್ಧಿ ಮಂತ್ರಗಳನ್ನು ಜಪಿಸಿ, ಸಮಾನತೆಯ ಬೆಸುಗೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿವೆ. ಈ ನಿಟ್ಟಿನಲ್ಲಿ ಸಂವಿಧಾನ ವಿವಿಧ ಸ್ವರೂಪದ ಸುರಕ್ಷತೆಯನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒದಗಿಸಿದೆ. ಹಾಗಾಗಿ ಈ ಜನ ಸಮುದಾಯಗಳ ಕಲ್ಯಾಣಕ್ಕಾಗಿ ನೇರ ಪ್ರಸ್ತಾವನೆಯಿದೆ. ಅದರಲ್ಲೂ ದುರ್ಬಲರ ಶೈಕ್ಷಣಿಕ ಮತ್ತು ಆರ್ಥಿಕ ಕಲ್ಯಾಣ ಕುರಿತು ರಾಜ್ಯ ನಿರ್ದೇಶಕ ತತ್ವದ ಪರಿಚ್ಛೇದ 46ರಲ್ಲಿ ಸ್ಪಷ್ಟೋಕ್ತಿಯಲ್ಲಿ ಉಲ್ಲೇಖಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಅನುಭವಿಸುವ ಎಲ್ಲಾ ಬಗೆಯ ಸಾಮಾಜಿಕ ಅನ್ಯಾಯ ಮತ್ತು ಶೋಷಣೆಗಳಿಂದ ಅವರನ್ನು ಮುಕ್ತಗೊಳಿಸಿ ರಕ್ಷಣೆ ಮಾಡುವುದು ರಾಜ್ಯದ (ಸರಕಾರಗಳ) ಹೊಣೆ ಎಂದಿದೆ. ಆದುದರಿಂದ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತರುವಾಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿವೆ. ಅನೇಕ ಯೋಜನಾಕಾರರು ಮತ್ತು ಆಡಳಿತಗಾರರು ಈ ಸಮುದಾಯಗಳ ಸಬಲೀಕರಣಕ್ಕಾಗಿ ಐದು ಪಂಚವಾರ್ಷಿಕ ಯೋಜನೆಗಳ ಫಲಿತಗಳು ಅವರ ಸುತ್ತ ಪ್ರಸರಣವಾಗುತ್ತದೆಂದು ಊಹಿಸಿದ್ದರು. ಮತ್ತೊಂದು ಕಡೆ, ಅಭಿವೃದ್ಧಿ ರೇಖೆಗಳು ನಕಾರಾತ್ಮಕವಾಗಿ ಮೂಡಿದ್ದವು.

ಆದುದರಿಂದ ನೇರ ಆಕ್ರಮಣ ನೀತಿಯನ್ನು ಆರನೇ ಯೋಜನೆಯಲ್ಲಿ ಅಳವಡಿಸಲಾಯಿತು. ಈ ನಿಟ್ಟಿನಲ್ಲಿ ವಿಶೇಷ ಘಟಕ ಯೋಜನೆಯು (ಎಸ್ಸಿಪಿ) ರೂಪುಗೊಂಡಿತು. ಅದಕ್ಕೂ ಮೊದಲು ಟಿ.ಎಸ್.ಪಿ. (1975) ಜಾರಿಯಲ್ಲಿತ್ತು. ಇವೆರಡೂ ಯೋಜನೆಗಳ ಮೂಲ ಉದ್ದೇಶ ವ್ಯಕ್ತಿ ಅಥವಾ ಕುಟುಂಬ ಹಾಗೂ ಸಮುದಾಯಗಳನ್ನು ಸಮಾನಾಂತರವಾಗಿ ಅಭಿವೃದ್ಧಿಪಡಿಸುವುದು. ಹಿಂದಿನ ಯೋಜನಾ ಆಯೋಗ ನಿರ್ಣಯದ ಪ್ರಕಾರ ಪರಿಶಿಷ್ಟ ಜಾತಿ/ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಆಯವ್ಯಯ ಅಥವಾ ವಾರ್ಷಿಕ ಯೋಜನೆಯ ಆರ್ಥಿಕ ಗಾತ್ರಕ್ಕೆ ಅನುಗುಣವಾಗಿ ಹಣಕಾಸನ್ನು ಪೂರೈಸಬೇಕೆಂದಿದೆ.

ಈ ಹಣ ಬೇರೆಡೆಗೆ ವರ್ಗಾಯಿಸುವ ಅಥವಾ ಕೈತಪ್ಪಿಸುವಂತಿಲ್ಲವೆಂದು ಸಹ ಹೇಳಿದೆ. ಅದರ ನಾಮರೂಪ 2005ರಿಂದ ಮತ್ತಷ್ಟು ಬದಲಾಯಿತು.

ನೆರೆಯ ಆಂಧ್ರಪ್ರದೇಶದಂತೆ, ಕರ್ನಾಟಕ ರಾಜ್ಯ ಸರಕಾರ ಸಹ 2013ರಲ್ಲಿ ಒಂದು ಐತಿಹಾಸಿಕ ತೀರ್ಮಾನ ಮಾಡಿ ಎಸ್ಸಿ ಎಸ್ಪಿ/ಟಿ ಎಸ್ಪಿಗೆ ಶಾಸನಬದ್ಧ ಕಾನೂನು ಬೆಂಬಲ ನೀಡಿ ಅದರ ಮೇಲೊಂದು ಕಾಯ್ದೆ ಜಾರಿಗೊಳಿಸಿತು. ಅದು ಯೋಜನೆ ನಿರೂಪಿಸುವ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ, ಮತ್ತು ಬಳಕೆಗೆ ಅಗತ್ಯವೆನಿಸಿರುವ ನಿಯಮಾವಳಿಗಳನ್ನು (2017) ನಿರೂಪಿಸಿದೆ. ಇದರ ಹಿಂದಿನ ಸಾಂಸ್ಥಿಕ ಸ್ವರೂಪದಲ್ಲಿದ್ದ ಯೋಜನೆ ಮತ್ತು ಯೋಜನೇತರ ಪರಿಕಲ್ಪನೆ ಕೈಬಿಟ್ಟು, ಅದರ ಜಾಗದಲ್ಲಿ ರಾಜಸ್ವ (ರೆವೆನ್ಯು) ಮತ್ತು ಬಂಡವಾಳ ವೆಚ್ಚಗಳೆಂಬ ವರ್ಗೀಕರಣಗಳನ್ನು ಸೇರಿಸಲಾಗಿದೆ.

ಉಪ ಯೋಜನೆಗಳ ಗುಣವಿಶೇಷತೆಯಲ್ಲಿ ಪ್ರಧಾನವಾಗಿ ಸಮುದಾಯದ ಜನಸಂಖ್ಯೆ ಗಾತ್ರಕ್ಕೆ ಅನುಗುಣವಾಗಿ ಹಣಕಾಸು ಪೂರೈಸುವುದು, ಇತರ ಸಮುದಾಯಗಳೊಂದಿಗೆ ಇರುವ ಅಭಿವೃದ್ಧಿ ಅಂತರ ಆ ಮೂಲಕ ಕುಗ್ಗಿಸಿ ಆದಾಯ ಗಳಿಕೆಗೆ ಪ್ರೋತ್ಸಾಹ ನೀಡುವುದು, ಅನುದಾನವನ್ನು ಬೇರೆಡೆಗೆ ವರ್ಗಾಯಿಸುವಂತಿಲ್ಲ ಅಥವಾ ಕೈತಪ್ಪಿಸುವಂತಿಲ್ಲ, ಸುಸ್ಥಿರ ಅಭಿವೃದ್ಧಿಗೆ ಅಡಿಪಾಯ ಹಾಕುವುದು, ಪ್ರೋತ್ಸಾಹ ಮತ್ತು ದಂಡನೆ ವಿಧಿಸುವುದು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನಿಗಾವಹಿಸುವ ಪ್ರದತ್ತವಾದ ಅಂಶಗಳಿವೆ.

ಸಮಾಜ ಕಲ್ಯಾಣ ಇಲಾಖೆಯ ಮೇಲು ಉಸ್ತುವಾರಿಯಲ್ಲಿ ಉಪ ಯೋಜನೆಗಳು ಅನುಷ್ಠಾನವಾಗುತ್ತಿವೆ. ಕಾಲಂ 7 ಅನುದಾನ ಹಂಚಿಕೆಯ ಸ್ವರೂಪ ಹೇಳಿದರೆ, 7(ಬಿ) ಪರಿಶಿಷ್ಟರ ಕಲ್ಯಾಣ ಮಾದರಿ ವಿವರಿಸುತ್ತದೆ. 7(ಸಿ) ವಲಯವಾರು ಅಭಿವೃದ್ಧಿ ದೃಷ್ಟಿಕೋನ ವ್ಯಾಖ್ಯಾನಿಸಿದೆ. ಇನ್ನೊಂದು 7(ಡಿ) ಸ್ವಾಯತ್ತ ವೆಚ್ಚ ನಿಯಂತ್ರಣ ಉಲ್ಲೇಖಿಸುತ್ತಿತ್ತು. ಅದನ್ನೀಗ ರಾಜ್ಯ ಸರಕಾರ ಹೋರಾಟಗಳಿಗೆ ಮಣಿದು ಕೈಬಿಟ್ಟಿದೆ.

ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ (2011) 101 ಪರಿಶಿಷ್ಟ ಜಾತಿಗಳು, 21 ಲಕ್ಷ ಕುಟುಂಬಗಳಿದ್ದು ಶೇ.17.15ರಷ್ಟು (1.05 ಕೋಟಿ), ಮತ್ತು 50 ಪಂಗಡಗಳ 8.50 ಲಕ್ಷ ಕುಟುಂಬಗಳಲ್ಲಿ ಶೇ. 6.5 (43 ಲಕ್ಷ) ಜನಸಂಖ್ಯೆ ಹೊಂದಿವೆ. ರಾಜ್ಯದ 86.61 ಲಕ್ಷ ಒಟ್ಟು ಹಿಡುವಳಿಯಲ್ಲಿ ಪರಿಶಿಷ್ಟ ಜಾತಿಗಳು 9.73 ಲಕ್ಷ (ಶೇ.11), ಪಂಗಡಗಳು 5.21 ಲಕ್ಷ (ಶೇ.6) ಹಿಡುವಳಿ ಹೊಂದಿದ್ದಾರೆ. 117.15 ಲಕ್ಷ ಒಟ್ಟು ಕಾರ್ಯಾಚರಣೆ ಹಿಡುವಳಿಗಳಲ್ಲಿ ಅನುಕ್ರಮವಾಗಿ 11.08 ಲಕ್ಷ (ಶೇ.9) ಮತ್ತು 7.30 ಲಕ್ಷ (ಶೇ.6) ಕಾರ್ಯಾಚರಣೆ ಹಿಡುವಳಿಗಳನ್ನು ಹೊಂದಿದ್ದಾರೆ. ಬಹುತೇಕ ಈ ವರ್ಗದ ರೈತರು ಅತಿ ಸಣ್ಣ ಮತ್ತು ಸಣ್ಣ ಹಿಡುವಳಿದಾರರು, ಅವರ ಸರಾಸರಿ ಭೂ ಹಿಡುವಳಿಯಲ್ಲಿ ಪ.ಜಾತಿಗಳು 1.14 ಹೆಕ್ಟೇರ್ ಮತ್ತು ಪಂಗಡಗಳು ಶೇ. 1.40 ಹೆಕ್ಟೇರ್ ಹೊಂದಿವೆ.

ಒಟ್ಟಾರೆ ಈ ವರ್ಗಗಳು ರಾಜ್ಯದ ಒಟ್ಟು ಆಸ್ತಿ ವೌಲ್ಯದಲ್ಲಿ ಅತ್ಯಲ್ಪ ಪ್ರಮಾಣದ ಪಾಲು ಹೊಂದಿವೆೆ. ಇನ್ನು ಜನ ವಸತಿ ಪ್ರದೇಶಗಳಲ್ಲಿ ಕಿರಿದಾದ ಮನೆಗಳಲ್ಲಿ ವಾಸಿಸುವವರು. ಬಡತನದಿಂದ ಮೂಲಭೂತ ಸೌಕರ್ಯ ಕೊರತೆಗಳನ್ನು ಸಾರ್ವಕಾಲಿಕ ಶಾಪದಂತೆ ಅನುಭವಿಸುವವರಾಗಿದ್ದಾರೆ. ಕೃಷಿ ಕಾರ್ಮಿಕರಾಗಿ ಪಾರಂಪರಿಕ ವೃತ್ತಿ ಕೌಶಲ್ಯಗಳಿಂದ ಬದುಕು ಕಟ್ಟಿಕೊಂಡಿರುವ ದುರ್ಬಲ ಜನ ಸಮುದಾಯಗಳಾಗಿವೆ. ಇಂತಹ ಸಮಸ್ಯೆಗಳನ್ನು ಹಿಮ್ಮೆಟ್ಟಲು ಪರಿಶಿಷ್ಟರ ಉಪ ಯೋಜನೆ ಒಂದು ಸಾಂಸ್ಥಿಕ ಅಭಿವೃದ್ಧಿ ಆಯಾಮ ಒದಗಿಸಿದೆ. ರಾಜ್ಯದಲ್ಲಿ ಒಟ್ಟು 35 ಇಲಾಖೆಗಳು ಈ ಅನುಷ್ಠಾನ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ಸುಮಾರು 137 ವಿವಿಧ ಬಗೆಯ ಕಾರ್ಯಕ್ರಮಗಳನ್ನು ರಾಜ್ಯ, ಜಿಲ್ಲಾ ಮತ್ತು ತಾಲೂಕು ವಲಯಗಳಲ್ಲಿ ವಿಕೇಂದ್ರೀಕೃತ ವ್ಯವಸ್ಥಾಪನಾ ನಿರ್ವಹಣೆಯಲ್ಲಿ ಜಾರಿಗೊಳ್ಳುತ್ತಿವೆ.

ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿದ್ದು ಅದು ಆದ್ಯತೆಗೆ ಅನುಗುಣವಾಗಿ ಇಲಾಖೆವಾರು ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಆಗುತ್ತದೆ. ಉಪಯೋಜನೆಗಳ ಕಾಯ್ದೆ ಜಾರಿಗೆ ಬರುವ ಮುನ್ನಾ ನೀಡಿದ್ದ ರೂ. 8,617 ಕೋಟಿಯಲ್ಲಿ 7,193 ಕೋಟಿ ರೂ. (ಶೇ. 83) ವಿನಿಯೋಗ ಆಗಿದೆ. ಪರಿಶಿಷ್ಟರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಕೇವಲ ಸಮಾಜ ಕಲ್ಯಾಣ ಇಲಾಖೆ, ಅದರ ಅಂಗ ಸಂಸ್ಥೆಗಳಿಂದ ಮಾತ್ರ ಸಾಧ್ಯವಿಲ್ಲ. ಅದರ ಬೆನ್ನೆಲುಬಾಗಿ 35 ಇಲಾಖೆಗಳು ದುಡಿಯುತ್ತಿವೆ. ಬಹುಶಃ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಎಲ್ಲಾ ವಲಯಗಳನ್ನು ಸಮಾನವಾಗಿ ಒಳಗೊಳ್ಳುವ ಒಂದು ಬಹು ಆಯಾಮ ಮಾದರಿ ಉಪ ಯೋಜನೆಗಳಲ್ಲಿ ಯೋಜನೆ ನಿರೂಪ, ಹಂಚಿಕೆ ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆಗೆ ವೈಜ್ಞಾನಿಕ ತಳಹದಿಯನ್ನು ಸೃಷ್ಟಿಸಲಾಗಿದೆ.

2014-15 ಸಾಲಿನಿಂದ ಹಣಕಾಸು ಹಂಚಿಕೆ ಮತ್ತು ಬಳಕೆ ವಿವರಗಳಲ್ಲಿ ಒಂದು ಏರುಗತಿಯಿದೆ. ಶಾಸನದ ಬೆಂಬಲವಿಲ್ಲದಿದ್ದ ವರ್ಷಗಳಲ್ಲಿ ಎಸ್ಸಿ ಎಸ್ಪಿ/ಟಿ ಎಸ್ಪಿಗಳಿಗೆ ಕೇವಲ ರೂ. 5,878 ಕೋಟಿಯಷ್ಟು ಅತ್ಯಲ್ಪ ಹಣಕಾಸು ಪೂರೈಕೆ ಆಗಿದೆ. ಆದರೆ, 2013 ಕಾಯ್ದೆ ಜಾರಿಯ ಬೆನ್ನ ಹಿಂದೆ ಈ ಕಾರ್ಯಕ್ರಮಗಳಿಗೆ 2014-15 ಸಾಲಿಂದಾಚೆಗೆ ಇಮ್ಮಡಿ ಸ್ವರೂಪದ ಹಣಕಾಸು ಒದಗಿಸಲಾಗುತ್ತಿದೆ.

2014-15 ಸಾಲಿನಲ್ಲಿ ಅದು ದ್ವಿಗುಣವಾಗಿ ರೂ. 13,998 ಕೋಟಿ ಆಯವ್ಯಯದಲ್ಲಿ ಉಪಯೋಜನೆಗಳಿಗೆ ಒಂದು ಅಂದಾಜು ಮಾಡಿ ಅದರನ್ವಯ 35 ಇಲಾಖೆಗಳಿಗೆ ನೀಡಲಾಗಿದೆ. 2017-18 ಸಾಲಿನಲ್ಲಿ ಮೂರುಪಟ್ಟು ಏರಿಕೆಯಾಗಿದೆ (ರೂ. 26,032 ಕೋಟಿ). 2022-23 ಸಾಲಿನಲ್ಲಿ ರೂ. 30,089 ಕೋಟಿ ಪೈಕಿ ರೂ. 29,108 ಕೋಟಿ ಖರ್ಚಾಗಿದೆ; ನೂತನ ಸರಕಾರದ ಪರಿಷ್ಕೃತ ಆಯವ್ಯಯ 2023-24 ಸಾಲಿನಲ್ಲಿ ರೂ. 34,293.69 ಕೋಟಿಗಳಷ್ಟು ಗರಿಷ್ಠ ಹೆಚ್ಚಳವಾಗಿದೆ.

ಆಯವ್ಯಯದ ಗಾತ್ರ ಹಿಗ್ಗಿರುವ ಕಾರಣ ಹೆಚ್ಚುವರಿಯಾಗಿ ರೂ. 4,205 ಕೋಟಿಗಳಷ್ಟು ಹೆಚ್ಚಿನ ಹಣ ಉಪ ಯೋಜನೆಗಳಿಗೆ ಲಭ್ಯವಾಗಿದೆ. ಪ್ರತೀ ಇಲಾಖೆಗಳ ಬೇಡಿಕೆಗಳು ಮತ್ತು ಸರಕಾರದ ಆಯಾ ಸಾಲಿನ ಕಾರ್ಯಕ್ರಮಗಳ ಆದ್ಯತೆಗಳ ಅನ್ವಯ ತುಲನಾತ್ಮಕವಾಗಿ ಉಪ ಯೋಜನೆಗಳಿಗೆ ಮರು ಹಂಚಿಕೆ ಮಾಡಲಾಗುತ್ತದೆ. ಆದರೆ, ಕಾಯ್ದೆಯ 7 (ಡಿ) ಪ್ರಕಾರ ಬಳಕೆಯಾಗದ ಸ್ವಾಯತ್ತ ವೆಚ್ಚವನ್ನು ರಾಜ್ಯ ಸರಕಾರ ಇತರ ವಲಯಗಳ ಕೊರತೆ ತುಂಬಲು ಬಳಸುತ್ತಿತ್ತು. ಅದರ ರದ್ದತಿ ಆಗಿರುವ ಕಾರಣ ವಾಪಸ್ ಪಡೆಯುವ ಸಂದರ್ಭ ಈಗಂತೂ ಉದ್ಭವಿಸುವುದಿಲ್ಲ.

ಪ್ರತೀ ವರ್ಷವೂ ಆಯಾ ಇಲಾಖೆಗಳ ಆಯವ್ಯಯ ಪ್ರಸ್ತಾವನೆ ಅಖೈರು ಆದ ಮೇಲೆ ಆಯಾ ವರ್ಷದ ಬೇಡಿಕೆ ಸ್ಥಿರೀಕರಿಸಿ ಹಂಚಿಕೆ ಮಾಡಲಾಗಿದೆ. ಈ ಪರಿಕ್ರಮದಲ್ಲಿ ಉಪ ಯೋಜನೆಗಳ ವೆಚ್ಚ ನೀತಿಯನ್ನು ಪರಿಪಾಲಿಸುತ್ತಾ ಬರಲಾಗಿದೆ. ಅದರ ವೆಚ್ಚ ನೀತಿಗೆ ಅನುಗುಣವಾಗಿ ರಾಜ್ಯ ವಲಯದಲ್ಲಿ 26 ಬೇಡಿಕೆಯಿದ್ದು; ಕೃಷಿ, ಆರಣ್ಯ, ತೋಟಗಾರಿಕೆ, ರೇಷ್ಮೆ, ನೀರಾವರಿ ಇಲಾಖೆಗಳು ಸಹ ಸಂಬಂಧ ಹೊಂದಿರುವ ವಲಯಗಳು.

ಹಾಗೆಯೇ ವಾರ್ತೆ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು ಮತ್ತೊಂದು ಗುಂಪಾಗಿವೆ. ಪರಿಶಿಷ್ಟ ಜಾತಿಗಳ, ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಮಗದೊಂದು ಗುಂಪಾಗಿವೆ. ಉನ್ನತ ಮತ್ತು ಶಾಲಾ ಶಿಕ್ಷಣ ಬೇಡಿಕೆಗಳನ್ನು ಸಮಾನವಾಗಿ ಸೇರಿಸಲಾಗಿದೆ. ಇನ್ನುಳಿದ ಇಲಾಖೆಗಳನ್ನು ಪ್ರತ್ಯೇಕ ಘಟಕಗಳಾಗಿ ವಿಂಗಡಿಸಲಾಗಿದೆ. ಪರಿಶಿಷ್ಟರು ಹೊಂದಿರುವ ಭೂಮಿಗಳಿಗೆ ಬೇಕಾದ ನೀರು, ಇತ್ಯಾದಿಗಳನ್ನು ಒದಗಿಸಿ ಕೃಷಿ ಮತ್ತು ಅದರ ಅವಲಂಬಿತರನ್ನು ಸಬಲೀಕರಣ ಮಾಡುವ ಗುರಿಗಳಿವೆ.

ರಾಷ್ಟೀಯ ಆಹಾರ ಭದ್ರತೆ ಕಾಯ್ದೆ ಅಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಮತ್ತು ಪೌಷ್ಟಿಕ ನೀಡುತ್ತದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯು ಸಹ ಮಹಿಳೆ ಮತ್ತು ಮಕ್ಕಳ ಪೌಷ್ಟಿಕತೆ ವೃದ್ಧಿಸುತ್ತದೆ. ಶಾಲಾ ಶಿಕ್ಷಣ ಇಲಾಖೆ ವ್ಯಾಸಂಗ ನಿರತ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬಿಸಿಊಟ, ಇತರ ಸೌಲಭ್ಯ ಒದಗಿಸುತ್ತಿದೆ. ಕಂದಾಯ ಇಲಾಖೆಯು ಅದರ ಯೋಜನೆಗಳ ಜೊತೆಗೆ ಸಾಮಾಜಿಕ ಸುರಕ್ಷತೆ ನಿಯಮಗಳನ್ವಯ ವೃದ್ಧಾಪ್ಯವೇತನ, ವಿಧವಾ ವೇತನ ಮತ್ತು ಅಂಗವಿಕಲರ ವೇತನಗಳಿಗೆ ಬಳಕೆ ಮಾಡುತ್ತದೆ.

ಹೀಗೆ 35 ಇಲಾಖೆ ಮತ್ತು ಅವುಗಳ ಅಂಗ ಸಂಸ್ಥೆಗಳು ಬುಡದಿಂದ ಮೇಲೆದ್ದ ಬೃಹತ್ ಮರ ರಂಬೆ-ಕೊಂಬೆಗಳಿಂದ ಮೈದುಂಬಿದ ಮಾದರಿಯಲ್ಲಿ ಚದುರಿದಂತೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ವಲಯಗಳೆಂಬ ವರ್ಗೀಕೃತ ಸ್ವರೂಪದಲ್ಲಿ ಅವುಗಳ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತದೆ. ವಸತಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಇಂಧನ ಇಲಾಖೆಗಳು ಪರಿಶಿಷ್ಟರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ನೀಡುತ್ತಿವೆ. ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟರಿಗೆ ಸಾಮಾಜಿಕ, ಶಿಕ್ಷಣ, ಆರ್ಥಿಕ ಮತ್ತು ಕಾನೂನು ಸುರಕ್ಷತೆಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ.

ಇದು ಪರಿಶಿಷ್ಟರಿಗಾಗಿ 656 ವಸತಿ ಶಾಲೆಗಳನ್ನು ನಿರ್ವಹಿಸುವುದರ ಜೊತೆಗೆ ವಿವಿಧ ಸ್ವರೂಪದ ವಿದ್ಯಾರ್ಥಿನಿಲಯಗಳ ನಿರ್ವಹಣೆ ಹಾಗೂ ಅನೇಕ ಕುಟುಂಬ ಆಧಾರಿತ ಆದಾಯ ವೃದ್ಧಿ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿ ನಿಗಮಗಳು ಆದಾಯ ವೃದ್ಧಿ ಸ್ವಯಂಯೋಜನೆಗಳ ಮೂಲಕ ನಿರುದ್ಯೋಗಿ ಯುವ ಜನತೆಯನ್ನು ಸ್ವಾವಲಂಬಿ ಬದುಕಿಗೆ ಬೇಕಾದ ಉತೇಜನ ನೀಡುತ್ತಿವೆ. ಎಸ್ಸಿ ಎಸ್ಪಿ/ಟಿ ಎಸ್ಪಿ ಅಡಿ ಬಳಸದಿದ್ದ ಸ್ವಾಯತ್ತ 9 ಸಾವಿರ ಕೋಟಿ ಹಣವನ್ನು ಹಿಂದಿನ ಸರಕಾರ ಹಿಂಪಡೆದಿರುವುದನ್ನು; ಪ್ರಸಕ್ತ ರೂ. 11 ಸಾವಿರ ಕೋಟಿಯನ್ನು ಮರು ಹಂಚಿಕೆ ಮಾಡಿರುವ ಪ್ರಕರಣಗಳೆರಡೂ ಭಿನ್ನ ಮತ್ತು ವಿಭಿನ್ನವಾಗಿದೆ. 2023-24 ಸಾಲಿನ ಆಯವ್ಯಯದಲ್ಲಿ ಕಂದಾಯ, ಕೃಷಿ, ನೀರಾವರಿ, ಕೈಗಾರಿಕೆ ಮತ್ತು ಇತರ ಇಲಾಖೆಗಳು ಆಯೋಜಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರೂ. 11 ಸಾವಿರ ಕೋಟಿಯನ್ನು ಒದಗಿಸಲಾಗಿದೆ. ಅಂದರೆ ಎಡಗೈಯಿಂದ ಆಯವ್ಯಯ ಮೂಲಕ ಸ್ವೀಕರಿಸಿರುವ ಹಣವನ್ನು ಬಲಗೈಯಿಂದ ಬೇಡಿಕೆ ಮೇಲಣ ಪುನರ್ ಹಂಚಿಕೆ ಮಾಡಲಾಗುತ್ತಿದೆ. ಉದಾಹರಣೆಗೆ ರೂ. 11 ಸಾವಿರ ಕೋಟಿಯನ್ನು ವಿವಿಧ ಇಲಾಖೆ ಯೋಜನೆಗಳಿಗೆ ನೀಡದೆ, ಸಮಾಜ ಕಲ್ಯಾಣ ಇಲಾಖೆಯು ಉಳಿಸಿಕೊಂಡಿದ್ದರೂ ಅನ್ಯ ಇಲಾಖೆಗಳ ಕಾರ್ಯಕ್ರಮಗಳನ್ನು ಇದು ನೇರವಾಗಿ ಅನುಷ್ಠಾನಗೊಳಿಸಲು ಅಸಾಧ್ಯ.

ಏಕೆಂದರೆ ಪ್ರತೀ ಇಲಾಖೆಯ ವ್ಯವಸ್ಥಾಪನಾ ಮತ್ತು ಸಂಘಟನೆಗಳ ಮಾದರಿಗಳು ಭಿನ್ನ ಸ್ವರೂಪಗಳಲ್ಲಿ ಶ್ರೇಣೀಕರಣಗೊಂಡು ತಮ್ಮ ಕ್ಷೇತದಲ್ಲಿ ನೈಪುಣ್ಯತೆ ಸಾಧಿಸಿರುತ್ತವೆ. ಸಮತೋಲನ ಅಭಿವೃದ್ಧಿ ದೃಷ್ಟಿಯಲ್ಲಿ ಮುಖ್ಯಮಂತ್ರಿಗಳ ಮೇಲುಸ್ತುವಾರಿ ರಾಜ್ಯ ಸಮಿತಿ ಅಖೈರು ಮಾಡಿರುವಂತೆ, 2023-24 ಸಾಲಿನ ಆಯವ್ಯಯದಲ್ಲಿ ನೀಡಿರುವ ಅಂದಾಜುಗಳಿಗೆ ಅನುಗುಣವಾಗಿ ನೀಡಲಾಗಿದೆಯೇ ಹೊರತು ಬೇಕಾಬಿಟ್ಟಿಯಾಗಿ ಹಂಚಿಲ್ಲ.

ದುರ್ಬಳಕೆಗಾಗಿ ನೀಡಿಲ್ಲ. ಹಾಗೆ ಮಾಡಿದರೆ ರಾಜ್ಯ ಲೆಕ್ಕ ಮಹಾನಿರ್ದೇಶನಾಲಯ (ಎಜಿ) ಕಣ್ಣುಮುಚ್ಚಿ ಸಮ್ಮತಿಸುವುದಿಲ್ಲ. ಹೀಗೆ 35 ಇಲಾಖೆಗಳಿಗೆ ನೀಡಿರುವ ಉಪ ಯೋಜನೆ ಹಣವನ್ನು ಪರಿಶಿಷ್ಟರ ಕಲ್ಯಾಣಗಳಿಗಲ್ಲದೆ ಅನ್ಯರ ಕಾರ್ಯಕ್ರಮಗಳಿಗೆ ಬಳಸಲು 2013 ಕಾಯ್ದೆ ಸಮ್ಮತಿಸುವುದಿಲ್ಲ. ಈ ರೀತಿಯ ತಾಂತ್ರಿಕ ಹಣಕಾಸು ಹಂಚಿಕೆಯ ಸೂತ್ರಗಳು ಸಾಮಾನ್ಯ ಸ್ವರೂಪದಲ್ಲಿ ತಿಳಿಯಲಾಗದ ಕಬ್ಬಿಣದ ಕಡಲೆಯಾಗಿರುವ ಕಾರಣ ರಾಜ್ಯಾದ್ಯಂತ ತಪ್ಪು ಗ್ರಹಿಕೆಗೆ ಆಸ್ಪದ ನೀಡಿದೆ.

ಒಂದುವೇಳೆ 2023-24ನೇ ಸಾಲಿನಲ್ಲಿ ಖರ್ಚಾಗದ ಹಣವನ್ನು ಮುಂದಿನ ಆರ್ಥಿಕ ಸಾಲುಗಳಲ್ಲಿ ಅದೇ ಕಾರ್ಯಕ್ರಮಗಳಿಗೆ ಭರಿಸುವ ಅವಕಾಶವನ್ನು ಕಾಯ್ದೆ ನೀಡಿರುವ ಕಾರಣ ಹಂಚಿಕೆಯಾದ ಹಣ ಪೋಲಾಗುವುದಿಲ್ಲ. ಇತ್ತೀಚಿನ ಉಪ ಯೋಜನೆಗಳ ಕ್ರೋಡೀಕೃತ ಹಣವನ್ನು ಆದ್ಯತೆ ಮೇರೆಗೆ ಇಲಾಖೆಗಳಿಗೆ ಮರುಹಂಚಿಕೆ ಮಾಡಿ ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದನ್ನು ದುರುಪಯೋಗವೆನ್ನಲಾಗದು. ಕಾಂಗ್ರೆಸ್ ಸರಕಾರದ ಮಹತ್ವಾಂಕ್ಷಿ ಖಾತರಿ ಯೋಜನೆಗಳಿಗೆ ವಿನಿಯೋಗ ಮಾಡಿದರೆ ಅದರ ನೇರ ಹಣ ವರ್ಗಾವಣೆ ಫಲಿತಗಳು ಆ ಸಮುದಾಯದ ಜನರೇ ಅನುಭವಿಸಿದಂತಾಗುತ್ತದೆ. ಇದರಿಂದ ದುರುಪಯೋಗದ ಪ್ರಮಾಣ ತಗ್ಗುತ್ತದೆ. ಜಲಪೂರಣ ಮಾಡಿದಂತೆ ತೆರಿಗೆ ಹಣವನ್ನು ಅವರ ಕೈಗೆ ನೀಡಿದರೆ, ಅದು ಆರ್ಥಿಕ ಚಕ್ರೀಯ ಚಲಾವಣೆಗೆ ಬರುವುದರಿಂದ ಹಣದುಬ್ಬರ ಕಡಿಮೆಗೊಳಿಸುತ್ತದೆ. ಜೊತೆಗೆ ಉತ್ಪಾದನೆಗೆ ಬೇಕಾದ ಅಂಶಗಳಾಗುತ್ತದೆ.

ಗ್ಯಾರಂಟಿ ಯೋಜನೆಗಳಿಗೆ ಉಪ ಯೋಜನೆಗಳ ಹಣ ಬಳಕೆ ಸಲ್ಲದೆಂದು ಕೆಲವರು ಟೀಕಿಸುತ್ತಿದ್ದಾರೆ. ಹಾಗೆಯೇ ಹಿಂದಿನ ಸರಕಾರ ಬದ್ಧವಲ್ಲದ ವೆಚ್ಚಗಳಿಗೆ ಅತಿ ಹೆಚ್ಚಿನ ಆದಾಯ ಸುರಿದಿದೆ. ಇದರಿಂದ ಅಭಿವೃದ್ಧಿ ವಲಯಗಳಿಗೆ ಕೊರತೆ ಬೀಳುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳ ಮೇಲಣ ವೆಚ್ಚವನ್ನು ಪರಿಶಿಷ್ಟ ಗುಂಪಿಗೆ ವ್ಯಯ ಮಾಡಿದರೆ ತಪ್ಪಾಗದು. ಹಾಗಿದ್ದರೂ ಅಭಿವೃದ್ಧಿ ಯೋಜನೆಗಳಿಗೆ ಕೊರತೆ ಬೀಳದು. ಈ ಮಾದರಿಯಲ್ಲಿ ಸಂಪನ್ಮೂಲಗಳ ಮರು ಹಂಚಿಕೆ ಮಾಡುವುದರಿಂದ ಉತ್ಪಾದನೆ ಹೆಚ್ಚಾದರೆ ಉದ್ಯೋಗ ಸೃಷ್ಟಿ ಆಗುತ್ತದೆ. ತ್ರಿವಲಯಗಳಿಂದ ಬರುವ ರಾಜ್ಯಾದಾಯದ ಹೆಚ್ಚಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಜನರ ಖರೀದಿ ಮಟ್ಟ ಸುಧಾರಣೆ ಆಗಿ ಅವರ ನಿಶ್ಚಿತ ಮಾಸಿಕ ಖರ್ಚಿನ ಬಾಬ್ತುಗಳಿಗೆ ಹಣ ಸಿಗುವುದರ ಮೂಲಕ ಅಸುರಕ್ಷಿತ ಮೂಲಗಳಿಂದ ಅಧಿಕ ಬಡ್ಡಿ ನೀಡಿ ಪಡೆಯುವ ಸಾಲಗಳ ಪ್ರಮಾಣ ಕುಗ್ಗುತ್ತದೆ. ಇದರಿಂದ ಸಾಂಸ್ಥಿಕ ಸಮಸ್ಯೆಗಳ ನಿಯಂತ್ರಣಕ್ಕೆ ಕಡಿವಾಣ ಬೀಳುತ್ತದೆ.

ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳು ಸಾಂವಿಧಾನಿಕ ವ್ಯಾಖ್ಯಾನದಡಿ ಸ್ವಜಾತಿಯ ಸಹ ಸಂಬಂಧ ಹೊಂದಿದ್ದರೆ; ರೂಢಿಗತವಾಗಿ ಅವುಗಳೊಂದಿಗೆ ವಿಜಾತಿಯ ಸಾಮಾಜಿಕ ಕಟ್ಟುಪಾಡುಗಳಿಗೆ ಜೋತುಬಿದ್ದು, ಅಂತರ್ ಜಾತಿಯ ಒಳಶ್ರೇಣಿಯಲ್ಲಿ ವಿಘಟಿತರಾಗಿ ಮತ್ತಷ್ಟು ಘಾಸಿಯಾಗಿದ್ದಾರೆ.

ಇವರೊಳಗಿರುವ ಬಲಾಢ್ಯ ಸಮುದಾಯಗಳ ಪೈಪೋಟಿ ಮತ್ತು ಆಕ್ರಮಣಗಳ ಮಧ್ಯದಲ್ಲಿ ಸೂಕ್ಷ್ಮ್ಮಾತಿ ಸೂಕ್ಷ್ಮ ಜಾತಿ, ಪಂಗಡಗಳು ನಮಗಾಗಿ ಒಂದಷ್ಟು ಯೋಜನೆಗಳಿವೆ ಎಂಬ ಕನಿಷ್ಠ ಜ್ಞಾನಗಳ ಅರಿವಿಲ್ಲದೆ ಬಡವರಾಗಿದ್ದಾರೆ. ಮಲಗಲು ಸೂರಿಲ್ಲದೆ ಕಾಗೆ ಪತ್ತಿನಂತಹ ಬಿಡಾರಗಳಲ್ಲಿ ಬೇಡಿ ಬದುಕುವವರಾಗಿದ್ದಾರೆ. ಹಾಗಾಗಿ ಉಪ ಯೋಜನೆಗಳು ಸೈದ್ಧಾಂತಿಕವಾಗಿ ಎಷ್ಟು ಚಂದವೋ ಅವುಗಳ ಅನುಷ್ಠಾನಗಳಲ್ಲಿರುವ ಆರೋಪ ಪ್ರತ್ಯಾರೋಪಗಳೆಲ್ಲವೂ ದೂರದ ಬೆಟ್ಟ ನುಣ್ಣಗೆ ಅನ್ನುವಂತಿದೆ. ಪರಿಶಿಷ್ಟರಿಗೆ ಉಪ ಯೋಜನೆಗಳ ಅನಿವಾರ್ಯತೆ ಭಾರತೀಯ ಸಮಾಜದಲ್ಲಿ ಸೃಷ್ಟಿಯಾಗಿರುವ ಸಾಮಾಜಿಕ ಸನ್ನಿವೇಶಗಳನ್ನು ಮನನ ಮಾಡಿಕೊಡಲು ಶಕ್ತವಾದರೆ ಅವುಗಳ ಅನುಷ್ಠಾನ ಯಶಸ್ವಿ ಆಗುತ್ತದೆ. ಆಗ ಅದರ ಅರ್ಥಪೂರ್ಣತೆಗಳನ್ನು ಸಮಾಜ ಅರಿಯಬಹುದು.

ಜಾತಿ, ಭೇದಭಾವಗಳನ್ನು ಮೀರಿ ಪ್ರತಿಯೊಬ್ಬರೂ ಸಮಾನ ಸಾಮಾಜಿಕ ಅವಕಾಶಗಳನ್ನು ಅನುಭವಿಸುವ ಅವಕಾಶ ದೊರಕಿದರೆ ಅವರೆಲ್ಲರೂ ಉತ್ಪಾದನಾ ಕೊಂಡಿಯಲ್ಲಿ ಗಟ್ಟಿಯಾದ ಮಣಿಗಳಾಗಿ ಜೋಡಿಸಲ್ಪಡುತ್ತಾರೆ. ಇಂದಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾಜೋಆರ್ಥಿಕ ಸ್ತರ ವಿನ್ಯಾಸಗಳನ್ನು ಅವಲೋಕಿಸಿದಾಗ ಅವರನ್ನು ತಮ್ಮಂತೆಯೇ ಸಮಾನ ನಾಗರಿಕರಾಗಿ ಅಪ್ಪಿಕೊಳ್ಳುವ ವ್ಯವಧಾನ ಇನ್ನು ಭಾರತೀಯ ಸಮಾಜದ ಕಣ್ಣುಗಳಲ್ಲಿ ಮೂಡಿಲ್ಲ. ಅವರ ಅಭಿವೃದ್ಧಿ ಯೋಜನೆಗಳ ಫಲಿತಗಳು ಅವರಿರುವ ಸಾಮಾಜಿಕ ಜಡತ್ವದಿಂದ ಬಿಡುಗಡೆ ಮಾಡಲು ಸಹಕಾರ ನೀಡುತ್ತಿಲ್ಲ.

ಆದರೂ ಅವುಗಳ ಫಲಿತಗಳು ಖಾಲಿ ಕೈಗಿಂತ ಹಿತ್ತಾಳೆ ಕಡಗ ಲೇಸೆಂಬಂತೆ ಉಪ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಅನೇಕ ಬದಲಾವಣೆ, ಆವಿಷ್ಕಾರ ಮತ್ತು ಮುನ್ನೋಟಗಳನ್ನು ಮೈದುಂಬಿಕೊಳ್ಳುವ ತವಕ ಹೆಚ್ಚಾಗುತ್ತಿದೆ. ಸಕಾಲಿಕ ಮತ್ತು ನಿಶ್ಚಿತ ಅವಧಿಯಲ್ಲಿ ಯೋಜನೆಗಳು ಆಸೆೆಗಣ್ಣಿಂದ ಕಾಯುವವರಿಗೆ ಸಿಗುವಂತಾಗಬೇಕಿದೆ. ಮಧ್ಯವರ್ತಿಗಳ ಮತ್ತು ಅಧಿಕಾರಶಾಹಿ ಭ್ರಷ್ಟರ ಹಾವಳಿಗಳಿಂದ ಯೋಜನೆಗಳ ಸ್ವರೂಪ ಮತ್ತಷ್ಟು ಕುರೂಪವಾಗುತ್ತಿವೆ. ಸರಕಾರ ಈ ಸವಾಲುಗಳನ್ನು ಹಿಮ್ಮೆಟ್ಟಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!