ಭಾರತೀಯ ನ್ಯಾಯ, ಸೆಂಗೋಲ್, ಸಂವಿಧಾನ ಮತ್ತು ಮೂರು ಹೊಸ ಕ್ರಿಮಿನಲ್ ಕಾನೂನುಗಳು

Update: 2024-07-02 04:08 GMT

ದೇಶದ ಸಂಸತ್ತಿನ ಬದಲಾವಣೆ, ರಾಜದಂಡ ಸೆಂಗೋಲ್ ಇರಿಸುವಿಕೆ, ಸಂಸತ್ತಿನ ಮೇಲೆ ಅಧಿಕಾರದ ಹೇಳಿಕೆಗಳು, ಕಾರ್ಮಿಕ ಕಾನೂನುಗಳ ಬದಲಾವಣೆ, ಸಂವಿಧಾನದ ಬದಲಾವಣೆಯ ಹೇಳಿಕೆಗಳು ನಡೆಯುತ್ತಲೇ ಇವೆ. ಹೀಗೆ ಮುಂದುವರಿದು ಈಗ ಮೂರು ಹೊಸ ಅಪರಾಧಿಕ ಕಾನೂನುಗಳನ್ನು ಬದಲಾವಣೆ ಮಾಡಲಾಗಿದೆ. ಸಾಲು ಸಾಲು ಬದಲಾವಣೆಗಳು ನಡೆಯುತ್ತಲೇ ಇದ್ದರೂ ಜನ ಒಪ್ಪಿಕೊಂಡು ಹಾಗೆಯೇ ಸುಮ್ಮನಿದ್ದಾರೆ.

ಈ ದೇಶದ ಅಪರಾಧಿಕ ಕಾನೂನುಗಳ ಬುನಾದಿ ಭಾರತೀಯ ದಂಡ ಸಂಹಿತೆ ಮತ್ತು ಅಪರಾಧಿಕ ಪ್ರಕ್ರಿಯಾ ಸಂಹಿತೆ ಈ ಎರಡೂ ಕಾಯ್ದೆಗಳನ್ನು ಬದಲಾವಣೆ ಮಾಡಿದವರು ಇನ್ನು ಸಂವಿಧಾನವನ್ನು ಬದಲಾವಣೆ ಮಾಡುವುದಿಲ್ಲ ಎಂಬುದು ಭ್ರಮೆ ಅಷ್ಟೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸಂರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023, ಈ ಕಾಯ್ದೆಗಳು ಸಾಮಾನ್ಯ ಜನರಿಗಲ್ಲದೆ ವಕೀಲರಿಗೆ, ನ್ಯಾಯಾಧೀಶರಿಗೂ ಗೊಂದಲವನ್ನು ಸೃಷ್ಟಿಸಿದೆ, ಅಲ್ಲದೆ ಭಾರತದ ನ್ಯಾಯಾದಾನದಲ್ಲಿ ಸಂಕಷ್ಟವನ್ನು ತಂದಿದೆ.

ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕ ಕಾನೂನು ಮತ್ತು ಹಕ್ಕಿನ ಕುರಿತು ಸಾಕ್ಷ ಚರ್ಚೆಗಳು ನಡೆದಿವೆ. ಈ ಅಪರಾಧಿಕ ಕಾನೂನಿನಲ್ಲಿ ವೈಯಕ್ತಿಕ ಕಾನೂನಿಗೆ, ಸಂವಿಧಾನದ ಮೂಲಭೂತ ಹಕ್ಕಿಗೆ ಅವಕಾಶವಿಲ್ಲ, ಪೊಲೀಸರು ಯಾವಾಗ ಬೇಕಾದರೂ ಎಫ್ಐಆರ್ ಮಾಡಬಹುದು, ಸಬ್ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಈಗ ಡಿವೈಎಸ್ಪಿ ಕೂಡ ತನಿಖೆ ಮಾಡಬಹುದು ಎಂಬುದು ಪೊಲೀಸರು ಮತ್ತಷ್ಟು ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಂತೆ ಆಯಿತು.

ಗೃಹ ವ್ಯವಹಾರಗಳ ಸಚಿವಾಲಯ, ಕೇಂದ್ರ ಸರಕಾರ ಈ ಮೂರು ಕಾಯ್ದೆಗಳನ್ನು ಜಾರಿ ಮಾಡಬೇಕಾದರೆ, ಚರ್ಚೆಗೆ ಅವಕಾಶ ನೀಡಿ, ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ತಿಳಿದು, ಕಾನೂನು ಪಂಡಿತರ ಸಲಹೆ ಪಡೆದು, ನ್ಯಾಯಾಧೀಶರ ಸಮ್ಮುಖದಲ್ಲಿ ಕಾನೂನುಗಳನ್ನು ತಂದರೂ ಸಂಸತ್ತಿನಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ನೀಡಿಯೇ ಕಾಯ್ದೆಗಳನ್ನು ಜಾರಿ ಮಾಡಬೇಕಾಗುತ್ತದೆ. ಆದರೆ ಈ ಮೂರು ಕಾಯ್ದೆಗಳನ್ನು ಜಾರಿ ಮಾಡುವಾಗ ಸಂವಿಧಾನದ ನಿಯಮವನ್ನು ಪಾಲಿಸಿಲ್ಲ ಎಂಬುದು ಹಿರಿಯ ವಕೀಲರ ಅಭಿಪ್ರಾಯ. ಬ್ರಿಟಿಷರು ಮಾಡಿರುವ ಕಾಯ್ದೆಗಳು, ಹಳೆಯ ಕಾಯ್ದೆಗಳು, ಇದು ದಂಡ ಮಾತ್ರ ತಿಳಿಸುತ್ತದೆ ಅಪರಾಧಿಗೆ ಬದಲಾವಣೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ವಾದವಿದ್ದರೂ ಇದಕ್ಕೆ ಪ್ರತಿಯಾಗಿ ಸಣ್ಣ ಸಣ್ಣ ಅಪರಾಧಿಗಳಿಗೆ ಸಮುದಾಯ ಸೇವೆ ಎಂಬ ಪರಿಕಲ್ಪನೆಯನ್ನು ತಂದರೂ ಅಪರಾಧ ಮಾಡಿ ಸಮುದಾಯ ಸೇವೆ ಮಾಡಿದರೆ ಬದಲಾವಣೆ ಸಾಧ್ಯವೇ? ಎಂಬುದು ಕೂಡ ಪ್ರಶ್ನೆಯೇ. ಅಪರಾಧಕ್ಕೆ ಶಿಕ್ಷೆಯೇ ಸರಿ ಎನ್ನುವವರು ಕೆಲವರು ಇದ್ದರೆ, ಶಿಕ್ಷೆ ಬೇಡ ದಂಡ ಸಾಕು ಎಂಬುವವರು ಇದ್ದಾರೆ. ಅದಕ್ಕೆ ಈ ಕಾಯ್ದೆಯಲ್ಲಿ ಸಾಕಷ್ಟು ಅಪರಾಧಿಗಳಿಗೆ ದಂಡ ಮಾತ್ರ ತಿಳಿಸುತ್ತದೆ ಮತ್ತು ದಂಡವನ್ನು ಐವತ್ತು ಸಾವಿರ ರೂ. ವರೆಗೂ ಹಾಕಲಾಗುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸ ಬೇಕಾಗಿರುವುದು ದಂಡವನ್ನು. ಸಣ್ಣ ಸಣ್ಣ ದಾವೆಗಳನ್ನು ಅಂದರೆ ಪಿಟಿ ಕೇಸ್ಗಳನ್ನು ಯಾರ ಮೇಲೆ ಹಾಕುತ್ತಾರೆ ಎಂಬುದು, ಎಲ್ಲರಿಗೂ ಗೊತ್ತಿದೆ. ಇದೇ ಆನೇಕಲ್ ನ್ಯಾಯಾಲಯದಲ್ಲಿ ಮಾನ್ಯ ನ್ಯಾಯಾಧೀಶರು ಪೊಲೀಸ್ ಒಬ್ಬರಿಗೆ ‘‘ನಿಮಗೆೆ ಶ್ರೀಮಂತರು ಕುಡುಕರು ಸಿಗುವುದಿಲ್ಲವೇ? ಎಲ್ಲಾ ಬಡವರ ಮೇಲೆ ಡ್ರಿಂಕ್ ಆ್ಯಂಡ್ ಡ್ರೈವ್ ದಾವೆ ಹಾಕುತ್ತೀರ?’’ ಎಂದು ನಗುತ್ತಲೇ ನೇರವಾಗಿ ಕೇಳಿದರು. ಅಲ್ಲಿ ಒಬ್ಬ ಬಡವ ಕೂಲಿ ಮಾಡಿಕೊಂಡು ಜೀವನ ಮಾಡುವವರು ದ್ವಿಚಕ್ರವಾಹನದಲ್ಲಿ ಹೋಗುವಾಗ ಕುಡಿದು ಚಾಲಾಯಿಸುತ್ತಿದ್ದಾನೆ ಎಂದು ಕೇಸ್ ಹಾಕಿ ನ್ಯಾಯಾಲಯದಲ್ಲಿ ಹತ್ತು ಸಾವಿರ ರೂ. ಕಟ್ಟುವ ಸ್ಥಿತಿ ಬರುತ್ತದೆ ಎಂದರೆ ನಾವು ತಿಳಿದುಕೊಳ್ಳಬೇಕಾದುದು, ದಂಡವನ್ನು ಎಷ್ಟು ಹಾಕಬಹುದು ಎಂಬುದು.

ಇನ್ನೂ ಇಷ್ಟು ವರ್ಷಗಳೂ ಕೂಡ ಕಾನೂನನ್ನು ತಿಳಿದುಕೊಳ್ಳುವಲ್ಲಿ ಜನ ವಿಫಲರಾಗಿದ್ದಾರೆ, ಸಂಸತ್ತಿನಲ್ಲಿ ಸೆಂಗೋಲ್ ಇರಿಸಿದಷ್ಟು ಸುಲಭವಾಗಿ ಅಪರಾಧಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಇದರಲ್ಲಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಒಂದು ಸಣ್ಣ ಸುಳಿವು ಕಾಣಿಸುತ್ತಿದೆ.

ಈ ಮಧ್ಯೆ ಅಂಜಲಿ ಪಟೇಲ್ ಮತ್ತು ಛಾಯಾ ಎಂಬವವರು ಮಾನ್ಯ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಹೊಸ ಕಾಯ್ದೆಗಳು ಜನರಿಗೆ ಅನುಕೂಲ ಮಾಡಿಕೊಡುವುದಿಲ್ಲವೇ? ಎಂಬ ಪ್ರಶ್ನೆಗೆ ಖಂಡಿತ ಒಂದಷ್ಟು ಬದಲಾವಣೆ ತಂದಿದ್ದಾರೆ ಇಲೆಕ್ಟ್ರಾನಿಕ್ ಸಾಕ್ಷ, ಝೀರೋ ಎಫ್ಐ ಆರ್, ದೇಶದ್ರೋಹ ಕೇಸ್, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವ ಕಾಲಂಗಳನ್ನು ತಂದಿದ್ದಾರೆ. ಸಮುದಾಯ ಸೇವೆ ಎಂದು ಹೇಳುವಾಗ ಯಾವ ಸೇವೆ ಎಂಬುದನ್ನು ತಿಳಿಸಿರುವುದಿಲ್ಲ. ಇಲ್ಲಿ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುವ ಸಂಭವವಿದೆ.

ಈಗ ಹೊಸ ಕಾಯ್ದೆಯಾದ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸಂರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023, ಕಾಯ್ದೆಗಳು ಅರ್ಥ ಇನ್ನೆಷ್ಟು ವರ್ಷಗಳು ಬೇಕು ಎಂಬುದು ನಮ್ಮ ನಮ್ಮ ವಿವೇಚನೆಗೆ ಬಿಟ್ಟಿದ್ದು. ಆದರೆ ವಕೀಲರು, ನ್ಯಾಯಾಧೀಶರು, ಪೊಲೀಸರು ಮತ್ತು ತನಿಖಾಧಿಕಾರಿಗಳು ಈ ಕಾಯ್ದೆಗಳನ್ನೂ ತಿಳಿದುಕೊಳ್ಳಬೇಕು. ಹಾಗೆಯೇ ಹಳೆಯ ಐಪಿಸಿಯನ್ನು ಮತ್ತು ಹಳೆಯ ಸಿಆರ್ಪಿಸಿ ಮತ್ತು ಸಾಕ್ಷ್ಯ ಅಧಿನಿಯಮವನ್ನು ತಿಳಿದು ಕೊಂಡು ನ್ಯಾಯಾಲಯದಲ್ಲಿ ದಾವೆಗಳನ್ನು ನಡೆಸಬೇಕಾಗುತ್ತದೆ. ಭಾರತೀಯ ನ್ಯಾಯ ಸಂಹಿತೆ 2023,-358, ಭಾರತೀಯ ದಂಡ ಸಂಹಿತೆಯಲ್ಲಿ 511 ಕಾಲಂಗಳು, ಅಪರಾಧಿಕ ಪ್ರಕ್ರಿಯಾ ಸಂಹಿತೆಯಲ್ಲಿ 484 ಕಾಲಂಗಳು, ಭಾರತೀಯ ನಾಗರಿಕ ಸಂರಕ್ಷಾ ಸಂಹಿತೆ 2023ರಲ್ಲಿ 531 ಕಲಂಗಳು, ಹಳೆ ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯ್ದೆಯಲ್ಲಿ 167 ಕಾಲಂಗಳು, ಹೊಸ ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯ್ದೆಯಲ್ಲಿ 170 ಕಾಲಂಗಳನ್ನು ಕೂಡ ಅರ್ಥ ಮಾಡಿಕೊಂಡು ನಡೆಯಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪುರುಷೋತ್ತಮ ಎ. ಚಿಕ್ಕಹಾಗಡೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!