ಮೋದಿ ಅವಧಿಯ ನಿರುದ್ಯೋಗ ಪಿಡುಗಿಗೆ 'ಇಂಡಿಯಾ'ದಿಂದ ಪರಿಹಾರ ?
ಈ ದೇಶವನ್ನು ಕಾಡುತ್ತಿರುವ ಅತಿ ದೊಡ್ಡ ಸವಾಲು ಯಾವುದೆಂಬುದು ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವವರಿಗೆ ಇನ್ನೂ ಅರ್ಥವಾದಂತಿಲ್ಲ. ತಮ್ಮ ಆಡಳಿತದ ಪ್ರಮಾದಗಳು ದೊಡ್ಡದಾಗಿ ಕಾಣಿಸುವಾಗೆಲ್ಲ ಅವರು ಹಳೆಯದನ್ನು ಕೆದಕುತ್ತ, ಕಾಂಗ್ರೆಸ್ ಮಾಡಿದ್ದೇನು ಎಂದು ಕೇಳುತ್ತ, ಈಗಿನ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹೊಲಸು ರಾಜಕೀಯವನ್ನೇ ಮಾಡಿಕೊಂಡು ಬಂದಿದ್ದಾರೆ.
ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗು ಮೋದಿಯವರನ್ನು ಈ ದೇಶದ ಯುವಜನತೆ ಕಣ್ಣುಮುಚ್ಚಿ ಬಲವಾಗಿ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಈ ಬೇಷರತ್ ಬೆಂಬಲಕ್ಕೆ ಮೋದಿ ಸರಕಾರ ಆ ಕೋಟ್ಯಂತರ ಯುವಕ ಯುವತಿಯರಿಗೆ ಕೊಟ್ಟಿದ್ದೇನು ?
ದೇಶದ ಸಂಸತ್ ಸ್ಥಾನವೊಂದು ಖಾಲಿಯಾದರೆ ಅದನ್ನು ತಕ್ಷಣವೇ ಚುನಾವಣೆ ನಡೆಸಿ ಭರ್ತಿ ಮಾಡಲಾಗುತ್ತದೆ. ಅದರ ಬಗೆಗೆ ಆಸಕ್ತಿಯಿರುವ ಈ ದೇಶದ ರಾಜಕಾರಣಕ್ಕೆ, ದೇಶದಲ್ಲಿ ಖಾಲಿಯಿರುವ ಲಕ್ಷಗಟ್ಟಲೆ ಉದ್ಯೋಗಗಳನ್ನು ಭರ್ತಿ ಮಾಡಬೇಕೆಂಬುದು ಯಾಕೆ ಆದ್ಯತೆಯ ವಿಷಯವಾಗುವುದಿಲ್ಲ?
ಯಾಕೆ ಸುಳ್ಳು ಭರವಸೆಗಳನ್ನು ಕೊಟ್ಟು, ಅನಂತರವೂ ಸುಳ್ಳುಗಳನ್ನು ಮಾತ್ರವೇ ಹೇಳುತ್ತಾ ಬರಲಾಗುತ್ತಿದೆ? ಈಗ ಮತ್ತೆ ಮೂರನೇ ಬಾರಿ ಚುನಾವಣೆ ಎದುರಿಸುವಾಗಲೂ ನಿಮಗೆ ಇನ್ನಾದರೂ ಉದ್ಯೋಗ ಕೊಡುತ್ತೇನೆ ಎನ್ನುವ ಬದಲು ಬೇರೆಯೇ ಮಾತಾಡುತ್ತಿರುವುದು ಯಾಕೆ ?
ಇಂಥ ಎಲ್ಲ ಪ್ರಶ್ನೆಗಳ ನಡುವೆಯೇ ದೇಶದಲ್ಲಿ ಕಾಂಗ್ರೆಸ್ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಡಲಿದೆಯೆ? ಎರಡೊ ಮೂರೊ ಉದ್ಯಮಿಗಳನ್ನು ಮಾತ್ರವೇ ಸಾಕುತ್ತ, ಎಲ್ಲವನ್ನೂ ಅವರ ಕೈಗೆ ಕೊಟ್ಟು, ಬಡವರನ್ನು, ಈ ದೇಶದ ಹತಾಶ ಯುವಜನತೆಯನ್ನು ಮರೆತು ಕೂತಿರುವ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಈ ಮೂಲಕ ಅತಿ ದೊಡ್ಡ ಸವಾಲನ್ನು ಒಡ್ಡಲಿದೆಯೆ?
ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆ ಬರೀ ಭ್ರಮೆಗಳನ್ನು ಸೃಷ್ಟಿಸುತ್ತಿರುವವರ ಮತ್ತು ವಾಸ್ತವವನ್ನು ಕಂಡು ಅದರ ನೆಲೆಯಲ್ಲಿ ಪರಿಹಾರ ಯೋಚಿಸುತ್ತಿರುವವರ ನಡುವಿನ ಕದನವಾಗಲಿದೆಯೆ? ನಿರುದ್ಯೋಗ ನಿವಾರಣೆಯ ಬಹುದೊಡ್ಡ ನಿರ್ಧಾರ, ಕಾರ್ಪೊರೇಟ್ ಹಿಡಿತದ ವಿರುದ್ಧದ ನಡೆ ಮತ್ತು ದೇಶದ ರೈತರ ವಿಚಾರಗಳೊಂದಿಗೆ ಈ ಚುನಾವಣೆ ಹೊಸ ದಿಕ್ಕನ್ನು ಪಡೆಯಲಿದೆಯೆ?
ಒಂದಂತೂ ಸ್ಪಷ್ಟ. ಬರುವ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿರಲಿದೆ ಅನ್ನೋದು ಪಕ್ಕಾ. ಇದಕ್ಕೆ ಕಾರಣ, ಬರೀ ಬರೆದಿದ್ದನ್ನು ಏಕಮುಖವಾಗಿ ಮಾತನಾಡುವ, ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನು ಎದುರಿಸಿ ನೇರ ಪ್ರಶ್ನೆಗಳಿಗೆ ಉತ್ತರಿಸದ ಪ್ರಧಾನಿ ಮೋದಿಗೆ ವಿರುದ್ಧವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರೊಂದಿಗಿನ ಸಂವಾದದಲ್ಲಿ ನಂಬಿಕೆ ತೋರಿಸುತ್ತ ಬಂದಿರುವುದು ಮತ್ತು ಜನರೊಂದಿಗೆ ಸತತ ಮಾತುಕತೆಯಲ್ಲಿ ತೊಡಗಿರುವುದು.
ಅವರು ಈ ಮೊದಲು ಕೈಗೊಂಡ ಭಾರತ್ ಜೋಡೋ ಯಾತ್ರೆ ಮತ್ತು ಈಗ ನಡೆಸಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಇವೆರಡೂ ಒಂದಕ್ಕಿಂತ ಒಂದು ಮಹತ್ವದ್ದಾಗಿ ಕಾಣಿಸುತ್ತಿರುವುದು ಈ ಹಿನ್ನೆಲೆಯಲ್ಲಿ. ರಾಹುಲ್ ನಡೆ ವಿಭಿನ್ನ ಅನ್ನಿಸುವುದೇ ಸಂವಾದದ ಕಡೆಗೆ ಅವರು ಒಲವು ತೋರಿರುವುದರಿಂದ. ದೇಶದಲ್ಲಿನ ವಾಸ್ತವವನ್ನು ತಿಳಿದುಕೊಳ್ಳಲು ಬಯಸಿರುವುದರಿಂದ.
ಹಾಗೆ ನೋಡಿದರೆ ಮೊದಲ ಯಾತ್ರೆಗಿಂತಲೂ ಈಗಿನದ್ದು ಮಹತ್ವದ್ದು. ಮಣಿಪುರ, ಅಸ್ಸಾಂ, ಬಂಗಾಳ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೆಯೇ ಮಹಾರಾಷ್ಟ್ರಗಳ ಮೂಲಕ ಈ ಸಲದ ಯಾತ್ರೆಯಲ್ಲಿ ದೇಶದ ವಾಸ್ತವವನ್ನು ರಾಹುಲ್ ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಮೊದಲೂ ಮತ್ತು ಈಗಲೂ ರಾಹುಲ್ ಮುಖ್ಯವಾಗಿ ಎತ್ತಿರುವುದು ರೈತರ ವಿಚಾರ ಮತ್ತು ಈ ದೇಶದ ಯುವಕರ ವಿಚಾರ. ಉದ್ಯೋಗದ ವಿಚಾರವನ್ನು ರಾಹುಲ್ ಗಾಂಧಿ ಬಹಳ ಕಳಕಳಿಯೊಂದಿಗೆ ಎತ್ತಿಕೊಂಡಿದ್ದಾರೆ. ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗದ ಬಗ್ಗೆ ಅವರು ಸತತ ಪ್ರಶ್ನೆಗಳನ್ನು ಎತ್ತುತ್ತ ಬಂದಿದ್ದಾರೆ. ಒಂದೆಡೆ ಬೆಲೆಯೇರಿಕೆ, ಇನ್ನೊಂದೆಡೆ ನಿರುದ್ಯೋಗ. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ತಲೆದೋರಿರುವ ಅಸಮಾನತೆ ರಾಹುಲ್ ಅವರ ಕಾಳಜಿಯಲ್ಲಿ ಮತ್ತೆ ಮತ್ತೆ ಬರುತ್ತಿವೆ.
ಒಬಿಸಿ, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ವಿಚಾರದ ಜೊತೆಗೇ ಬೆಲೆಯೇರಿಕೆ, ಬಡವರು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವುದು, ಕಾರ್ಪೊರೇಟ್ಗಳ ಕೈಯಲ್ಲಿ ಹಿಡಿತವಿರುವುದು - ಇವೆಲ್ಲವನ್ನು ರಾಹುಲ್ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ರಾಹುಲ್ ಅವರ ಯಾತ್ರೆ ಮತ್ತದರ ಮೂಲಕ ಅವರು ಪ್ರತಿಪಾದಿಸಿದ ವಿಚಾರಗಳು ಈಗ ಚುನಾವಣೆ ಎದುರಿಗಿರುವ ಹೊತ್ತಿನಲ್ಲಿ ತಾತ್ವಿಕ ಸ್ವರೂಪ ಪಡೆಯುತ್ತಿವೆ.
ಅದರ ಪರಿಣಾಮವೇ, ದೇಶದಲ್ಲೆ ಮೊದಲ ಬಾರಿಗೆ ಉದ್ಯೋಗವನ್ನು ಹಕ್ಕು ಎಂದು ಘೋಷಿಸುವ ಹೊಸ ಸಾಧ್ಯತೆಯನ್ನು ಕಾಂಗ್ರೆಸ್ ಪರಿಗಣಿಸಲು ಮುಂದಾಗಿರುವುದು. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಈಗಾಗಲೇ ನಮಗೆ ಗೊತ್ತಿರುವ ವಿಚಾರಗಳು. ಆದರೆ ಉದ್ಯೋಗದ ಹಕ್ಕನ್ನು ಸಾಂವಿಧಾನಿಕವಾಗಿ ಕೊಡುವುದು ರಾಹುಲ್ ಪ್ರಸ್ತಾಪಿಸಿರುವ ಮತ್ತು ಕಾಂಗ್ರೆಸ್ ಸಮ್ಮತಿಸಿರುವ ಈಗಿನ ಬಹಳ ಮುಖ್ಯ ವಿಚಾರವಾಗಿದೆ.
ಆದ್ದರಿಂದಲೇ ಹೇಳಿದ್ದು, ಈ ಸಲದ ಚುನಾವಣೆ ಹಿಂದೆಂದಿಗಿಂತಲೂ ಬೇರೆಯೇ ಆಗಿರಲಿದೆ.
ಕಾಂಗ್ರೆಸ್ ಈ ಸಲದ ಚುನಾವಣೆಗೆ ತನ್ನ ಪ್ರಣಾಳಿಕೆಯ ಪ್ರಮುಖ ಅಂಶವಾಗಿ ಉದ್ಯೋಗದ ಹಕ್ಕು ಪರಿಕಲ್ಪನೆಯನ್ನು ಪರಿಚಯಿಸಲು ತಯಾರಾಗಿದೆ. ದೇಶದ ಯುವಕರಿಗೆ 'ಉದ್ಯೋಗದ ಹಕ್ಕು ಎಂಬುದು ಇದೇ ಮೊದಲ ಬಾರಿಗೆ ಸಿಗಲಿರುವ ಭರವಸೆಯಾಗಲಿದೆ. ಮತ್ತಿದು ಸಾಧಾರಣ ವಿಚಾರವಂತೂ ಅಲ್ಲ.
ಉದ್ಯೋಗ ಪಡೆಯುವುದನ್ನು ಸಾಂವಿಧಾನಿಕ ಹಕ್ಕಾಗಿಸಲು, ಅದಕ್ಕೆ ಕಾನೂನಿನ ಬಲ ಒದಗಿಸಲು ಮೊದಲ ಬಾರಿಗೆ ಕಾಂಗ್ರೆಸ್ ಮುಂದಾಗಿದೆ.
ದೇಶದಲ್ಲಿ ಪ್ರತಿ 3ನೇ ಮತದಾರರು ಯುವಕ/ ಯುವತಿಯರು. ಹಾಗಾದರೆ, ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನತೆಯ ಮುಂದೆ ಏನು ಸವಾಲುಗಳಿರುತ್ತವೆ? ಕಾಲೇಜು ಓದುತ್ತಿರುವ ಅವರ ಎದುರು ಬದುಕು ರೂಪಿಸಿಕೊಳ್ಳಲು ಇರಬಹುದಾದ ಸವಾಲುಗಳು ಎಂಥವು?
ಕಳೆದ ಬಾರಿ ಚುನಾವಣೆಯಲ್ಲಿ ಮೋದಿ ಮೊದಲ ಬಾರಿಗೆ ಮತ ಚಲಾಯಿಸುವವರು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರಿನಲ್ಲಿ ಮತ ಹಾಕುವಂತೆ ಹೇಳಿದ್ದರು. ಅದರೊಂದಿಗೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರು ನೀತಿ ಸಂಹಿತೆಗೆ ವಿರುದ್ಧವಾಗಿ ಬಲಿಯಾದ ಯೋಧರನ್ನೂ ಬಿಡದೆ ಬಳಸಿಕೊಂಡಿದ್ದಾಯಿತು.
ಆದರೆ, ದೇಶದ ಯುವಕರ ಎದುರಿನ ಕಟು ವಾಸ್ತವದ ಬಗ್ಗೆ ಮೋದಿ ಕಿಂಚಿತ್ ಚಿಂತೆಯನ್ನೂ ಮಾಡಲಿಲ್ಲ. ರಾಹುಲ್ ಗಾಂಧಿಯವರ ನೋಟ ಬೇರೆಯೇ ಇದೆ ಎಂಬುದೇ ಗಮನ ಸೆಳೆಯುತ್ತಿರುವ ಸಂಗತಿ. ಯಾತ್ರೆಯ ಉದ್ದಕ್ಕೂ ರಾಹುಲ್ ಗಾಂಧಿ ಯುವಕರ ಜೊತೆ ಸಂವಾದ ಮಾಡುತ್ತ ಹೊರಟಿದ್ದಾರೆ. ಯುವ ಜನತೆಯ ಎದುರು ಇರುವ ಸವಾಲುಗಳ ಬಗ್ಗೆ ರಾಹುಲ್ ಅವರಿಗೆ ಅರಿವಿದೆ.
ದೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಎಲ್ಲ ಸರ್ಕಾರಿ ಇಲಾಖೆಗಳಲ್ಲೂ ಕೆಲಸಗಳು ಖಾಲಿಯಿವೆ. ಯಾಕೆ? ಒಂದು ಸಂಸತ್ ಸ್ಥಾನ ಖಾಲಿಯಾಗುತ್ತಿದ್ದಂತೆ ಅದನ್ನು ತುಂಬಲು ಚುನಾವಣಾ ಆಯೋಗ ತನ್ನ ಕೆಲಸ ಶುರು ಮಾಡಿಕೊಳ್ಳುತ್ತದೆ. ಚುನಾವಣೆ ನಡೆಸಲು ಮುಂದಾಗುತ್ತದೆ. ಆದರೆ ದೇಶದ ತುಂಬ ಎಷ್ಟೆಲ್ಲ ಇಲಾಖೆಗಳ ಎಷ್ಟೊಂದು ಲಕ್ಷ ಹುದ್ದೆಗಳು ಖಾಲಿಯಿದ್ದರೂ ಅವನ್ನು ಭರ್ತಿ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಯಾಕಿಲ್ಲ?
ಉದ್ಯೋಗ ಪಡೆಯುವಾಗಲೂ ನೂರೆಂಟು ಸಮಸ್ಯೆಗಳು, ಅದಕ್ಕಾಗಿ ತಯಾರಿ ನಡೆಸಬೇಕು. ಪರೀಕ್ಷೆ ಬರೆಯಬೇಕು ಎನ್ನುವಾಗ ಪೇಪರ್ ಲೀಕ್ ಆಗುತ್ತದೆ. ಅಲ್ಲಿಗೆ ಅದುವರೆಗಿನ ತಯಾರಿಯ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಉದ್ಯೋಗ ಸಿಕ್ಕೀತು ಎಂಬ ಕನಸೊಂದು ಹಾಗೆಯೇ ಒಡೆದು ಹೋಗುತ್ತದೆ.
ಹಾಗಾಗಿ ಕಾನೂನಿನ ಮೂಲಕವೇ ಈ ದೇಶದ ಯುವಕರಿಗೆ ಉದ್ಯೋಗ ಪಡೆಯುವ ಅಧಿಕಾರವನ್ನು, ಹಕ್ಕನ್ನು ನೀಡಬೇಕೆಂಬ ಕಾಂಗ್ರೆಸ್ ಚಿಂತನೆ ಅತ್ಯಂತ ಮಹತ್ವಪೂರ್ಣವಾಗಿದೆ. ದೇಶದಲ್ಲಿ ಹಸಿರು ಕ್ರಾಂತಿಯಾದುದನ್ನು ಕಂಡಿದ್ದೇವೆ, ಹೈನೋದ್ಯಮಕ್ಕೆ ಅಭಿವೃದ್ಧಿಯ ದೆಸೆಯನ್ನು ನೀಡಿದ ಶ್ವೇತಕ್ರಾಂತಿಯನ್ನು ನೋಡಿದ್ದೇವೆ.
ಕಂಪ್ಯೂಟರೀಕರಣ ಆಗಿದೆ. ಬ್ಯಾಂಕುಗಳ ರಾಷ್ಟ್ರೀಕರಣವಾಗಿದೆ. ಮೊಬೈಲ್ ಫೋನ್ಗಳು ಬಂದಿವೆ. ಇದೆಲ್ಲವೂ ಆದದ್ದು ಕಾಂಗ್ರೆಸ್ ಕಾಲದಲ್ಲಿ ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿದ್ದಾರೆ. ಈಗ ಇದೊಂದು ಕ್ರಾಂತಿಕಾರಿ ಹೆಜ್ಜೆ. ಉದ್ಯೋಗ ಕಾನೂನಾತ್ಮಕ ಹಕ್ಕಾಗುತ್ತಿದ್ದಂತೆ, ಯುವಕರು ಡಿಗ್ರಿ ಪಡೆದಿದ್ದರೆ ಅವರಿಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿಯಾಗಲಿದೆ.
ಮುಂದಿನ ಚುನಾವಣೆ ಈ ನಿಟ್ಟಿನಲ್ಲಿ ಹೊಸದೇ ತೀವ್ರತೆ ಪಡೆಯಲಿದೆಯೆ? ಹೊಸದೇ ಒಂದು ಆಯಾಮ ಚುನಾವಣೆಗೆ ಈ ಹಿನ್ನೆಲೆಯಲ್ಲಿ ಒದಗಲಿದೆಯೆ?
ಸರ್ಕಾರದಲ್ಲಿನ ಹುದ್ದೆಗಳನ್ನೂ ತುಂಬದ ಸ್ಥಿತಿ ಇರುವಾಗ ಈಗ ಉದ್ಯೋಗದ ಹಕ್ಕಿನ ವಿಚಾರ ಬಹಳ ಮಹತ್ವದ್ದಾಗಲಿದೆ.
ಕಳೆದ 10 ವರ್ಷಗಳಲ್ಲಿ ಏನನ್ನೂ ಮಾಡದೇ, ಬರೀ ಮಾತಾಡಿದವರ ಯೋಜನೆಗಳ ಹೆಸರುಗಳನ್ನೊಮ್ಮೆ ನೋಡಿಬಿಡೋಣ. ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆ, ಸ್ಟ್ರೀಟ್ ವೆಂಡರ್ ಆತ್ಮನಿರ್ಭರ ನಿಧಿ, ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಂ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ಯೋಜನೆ - ಇವೆಲ್ಲವೂ ಮೋದಿ ಸರಕಾರದ ಉದ್ಯೋಗ ಸಂಬಂಧಿ ಯೋಜನೆಗಳು.
ಆದರೆ ಮೋದಿ ಸರ್ಕಾರ ಈ ಯೋಜನೆಗಳ ಮೂಲಕ ಮಾಡಿದ್ದೇನು ? ಪಂ. ದೀನ್ ದಯಾಳ್ ಅಂತ್ಯೋದಯ ಯೋಜನೆ, ನ್ಯಾಷನಲ್ ಅರ್ಬನ್ ಲೈಫ್ಹುಡ್ ಮಿಷನ್, ಸ್ಕಿಲ್ ಡೆವಲಪ್ಮೆಂಟ್ ಇಂಟರ್ನ್ಶಿಪ್, ನ್ಯಾಷನಲ್ ಅಪ್ರಂಟೈಸ್ ಪ್ರಮೋಷನಲ್ ಸ್ಕೀಮ್, ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ, ಇದಕ್ಕಿಂತಲೂ ಮುಖ್ಯವಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ.
ಇವಾವುವೂ ಈ ನಾಡಿನ ಯುವಜನತೆಗೆ ಆಸರೆ ಆಗಲಿಲ್ಲ. ಬರೀ ಕಥೆ ಹೇಳಿಕೊಂಡು ಓಡಾಡಿದ್ದೇ ಆಯಿತು. ಜನರ ದೊಡ್ಡ ಸಮಸ್ಯೆಯಾಗಿರುವ, ಯುವಕರಿಗೆ ಕಂಟಕವಾಗಿರುವ ನಿರುದ್ಯೋಗ ವಿಚಾರವನ್ನು ಎತ್ತಿಕೊಳ್ಳುವ ಮೂಲಕ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಈಗ ಚುನಾವಣೆಯ ಸಮೀಕರಣವನ್ನೇ ಬದಲಿಸಿದರೆ ಅಚ್ಚರಿಯಿಲ್ಲ.
ಯುವಕರಿಗಾಗಿ ಒಂದು ಮಹತ್ವದ ಹೆಜ್ಜೆಯನ್ನು ರಾಹುಲ್ ಗಾಂಧಿ ಈ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್ ಅವರ ಈ ಮಾತುಗಳು ಯುವಕರ ಪರವಾದ ದನಿಯಾಗಿವೆ. " ಇಡೀ ದೇಶವನ್ನು ವಶದಲ್ಲಿಟ್ಟುಕೊಂಡಿರುವವರು 2 ಪರ್ಸೆಂಟ್ ಜನ. ಅದಾನಿ ಉದ್ಯಮ ಎಲ್ಲಿ ಬೇಕೆಂದರೆ ಅಲ್ಲಿ ನಡೆಯುತ್ತದೆ. ದೇಶದ ಎಲ್ಲ ಬಂದರುಗಳು ಅದಾನಿ ಕೈಯಲ್ಲಿವೆ. ಗಣಿಗಾರಿಕೆಯನ್ನೂ ನಡೆಸುತ್ತಾರೆ, ಆಹಾರ ಶೇಖರಣೆ ಉದ್ಯಮವನ್ನೂ ಮಾಡುತ್ತಾರೆ. ನೀವು ನೋಡುತ್ತ ಇರಬೇಕು ಅಷ್ಟೆ. ನಿಮಗೆ ಕೆಲಸ ಸಿಗಬೇಕಾದ ಸಮಯ ಬಂದಾಗ ಕೆಲಸ ಸಿಗುವುದಿಲ್ಲ. ಖಾಸಗಿ ವಿವಿ ಕಾಲೇಜಿಗೆ 5 ಲಕ್ಷ ಫೀಸ್ ಕಟ್ಟಿರುತ್ತೀರಿ. ಆದರೆ ಉದ್ಯೋಗ ನಿಮಗೆ ದೇಶದಲ್ಲಿ ಸಿಗುವುದಿಲ್ಲ. ಯಾಕೆ? "
" ಎಲ್ಲ ಸಣ್ಣ ಉದ್ಯಮಗಳನ್ನು ನಾಶ ಮಾಡಲಾಗಿದೆ. ಎಲ್ಲವೂ ಎರಡು ಮೂರು ಉದ್ಯಮಿಗಳ ಕೈಯಲ್ಲಿ ಸೇರಿಹೋಗಿದೆ. ನಿಮ್ಮ ಜಮೀನು, ನೀರು, ಅರಣ್ಯ ಎಲ್ಲವೂ ಅವರ ಪಾಲಾಗುತ್ತಿದೆ. ಇದೆಲ್ಲವೂ ಬದಲಾಗಬೇಕಾಗಿದೆ ಎಂದಿದ್ಧಾರೆ " ರಾಹುಲ್ ಗಾಂಧಿ.
ಭಾರತ್ ಜೋಡೋ ನ್ಯಾಯ ಯಾತ್ರೆ ಹೊರಟಿರುವ ರಾಹುಲ್ ಅವರಿಗೆ ಮಣಿಪುರ, ಅಸ್ಸಾಂ, ಬಂಗಾಳ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಈ ಎಲ್ಲ ರಾಜ್ಯಗಳಲ್ಲಿನ ಯುವಕರ ಸ್ಥಿತಿ ಗೊತ್ತಾಗಿದೆ.
ಒಂದು ಉದ್ಯೋಗಕ್ಕಾಗಿ ಸಾವಿರಾರು ಮಂದಿ ಪೈಪೋಟಿ ನಡೆಸಬೇಕಿದೆ. ಹೀಗಾಗಿಯೇ ಇದು ಬಹು ದೊಡ್ಡ ಸವಾಲು. ಈ ದೇಶದಲ್ಲಿ ಪ್ರತಿ ನಾಲ್ಕನೇ ವ್ಯಕ್ತಿ ನಿರುದ್ಯೋಗಿಯಾಗಿದ್ದಾನೆ. ಇದನ್ನು ಬಗೆಹರಿಸಲು ಉದ್ಯೋಗವನ್ನು ಕಾನೂನಾತ್ಮಕ ಹಕ್ಕಾಗಿಸುವ ರಾಹುಲ್ ಪ್ರಸ್ತಾವಕ್ಕೆ ಕಾಂಗ್ರೆಸ್ ಮುದ್ರೆ ಬಿದ್ದಿದೆ. ಅದು ಈಗ ಇಂಡಿಯಾ ಮೈತ್ರಿಕೂಟದ ನೀತಿಯಾಗಲಿದೆ.
ಮೋದಿ 2014ರಿಂದಲೂ ಈ ದೇಶದ ಬಡವರ ಬಗ್ಗೆ ಮಾತಾಡುತ್ತ ಬಂದಿದ್ದಾರೆ. ಅವರು ತನ್ನ ಪರಿವಾರ ಎನ್ನುತ್ತಾರೆ. 10 ವರ್ಷಗಳ ನಂತರವೂ ಅದೇ ಮಾತು ಆಡುತ್ತಿದ್ಧಾರೆ. ಆದರೆ ಅವರಿಗಾಗಿ ಮೋದಿ ಮಾಡಿದ್ದು ಮಾತ್ರ ಏನೂ ಇಲ್ಲ. ಆದರೆ ಹಾಗೆ ಹೇಳಿಕೊಂಡು ರಾಜಕೀಯ ಲಾಭವನ್ನು ಮಾತ್ರ ಅವರು ಬೇಕಾದಷ್ಟು ಪಡೆದಿದ್ದಾರೆ.
ಆದರೆ ಕಾಂಗ್ರೆಸ್ ನಿಲುವು ಮೋದಿ ಸರ್ಕಾರದ ಇಂಥ ಎಲ್ಲ ಸುಳ್ಳುಗಳಿಗೆ ಸವಾಲೊಡ್ಡುವ ಹಾಗಿದೆ.
ಉದ್ಯೋಗದ ಹಕ್ಕನ್ನು ಕೊಡುವ ಪ್ರಸ್ತಾಪದ ಜೊತೆಗೇ, ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ವಿಚಾರವನ್ನೂ ಅದು ಪ್ರಸ್ತಾಪಿಸಿದೆ. 'ಭಾರತ್ ಜೋಡೋ ನ್ಯಾಯ ಯಾತ್ರೆ'ಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದಂತಹ ಕೆಲವೆಡೆ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರ ಪರೀಕ್ಷೆಗಳನ್ನು ರದ್ದುಗೊಳಿಸುವುದರಿಂದ ಬಳಲುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಅರಿತಿದ್ಧಾರೆ.
ಹಾಗಾಗಿಯೇ ಅಂಥ ಮಾಫಿಯಾ ವಿರುದ್ಧ ಕಠಿಣ ಕ್ರಮ ಜರುಗಿಸುವ ಪ್ರಸ್ತಾಪಕ್ಕೂ ಮಹತ್ವ ಸಿಕ್ಕಿದೆ. ಎಂಎಸ್ಪಿಗೆ ಕಾನೂನು ಖಾತರಿ, ಸರ್ಕಾರಿ ಹುದ್ದೆಗಳ ಭರ್ತಿ, ದೇಶದಲ್ಲಿ ಜಾತಿ ಆಧರಿತ ಜನಗಣತಿಯ ಭರವಸೆ, ಸಮಾಜದ ಕಟ್ಟಕಡೆಯ ವರ್ಗಗಳಿಗೆ ಆರ್ಥಿಕ ನೆರವು ಮತ್ತು ಅವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಮತ್ತು ರಾಜ್ಯದ ಕಲ್ಯಾಣ ಕ್ರಮಗಳಿಗೆ ಒತ್ತು ನೀಡುವುದು - ಈ ನಿಟ್ಟಿನಲ್ಲಿ ಕಾಂಗ್ರೆಸ್ ಯೋಚನೆಗಳಿವೆ.
ಜಾತಿ ಜನಗಣತಿ, ಶಿಕ್ಷಣ, ಉದ್ಯೋಗದ ಹಕ್ಕು, ಖಾಸಗೀಕರಣದ ಪರಿಣಾಮವಾಗಿ ದೇಶದ ಸಂಪತ್ತೆಲ್ಲವೂ ಕೆಲವೇ ಕೆಲವರ ಕೈಯಲ್ಲಿ ಹೋಗುತ್ತಿರುವುದರ ಬಗೆಗಿನ ವಿರೋಧ, ಆರ್ಥಿಕ ಕಾಳಜಿ ಮತ್ತು ನಿರುದ್ಯೋಗ ಬಗೆಹರಿಸುವ ನಿಟ್ಟಿನ ನಿಲುವು - ಇವೆಲ್ಲವುಗಳ ಮೂಲಕ ಕಾಂಗ್ರೆಸ್ ಹೊಸ ದಿಸೆಯೊಂದರ ಕಡೆಗೆ ಹೆಜ್ಜೆ ಇಟ್ಟಿದೆ. ಚುನಾವಣೆಯ ಹೊತ್ತಿನಲ್ಲಿ ಇದೆಲ್ಲವೂ ತೆರೆಯಲಿರುವ ಸಾಧ್ಯತೆಗಳು ಏನು? ಕಾದು ನೋಡಬೇಕಿದೆ.