ದ್ವೇಷ ಪ್ರೇಮಿ ಆ್ಯಂಕರ್ ಗಳ ಬಣ್ಣ ಬಯಲು ಮಾಡಿದ ಇಂದ್ರಜಿತ್ ಘೋರ್ಪಡೆ

Update: 2024-03-18 06:11 GMT
Editor : Ismail | Byline : ಆರ್. ಜೀವಿ

ಆತ 32 ವರ್ಷದ ಮಾಹಿತಿ ತಂತ್ರಜ್ಞಾನ ಎಂಜಿನಿಯರ್. ​ಆತ ಮನಸ್ಸು ಮಾಡಿದರೆ ಸುಲಭವಾಗಿ ಕೈತುಂಬಾ ಸಂಬಳ ಬರುವ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನು ಹಾಯಾಗಿರಬಹುದು. ಜೊತೆಗೆ ಈಗ ದೇಶದಲ್ಲಿ ನಡೆಯುತ್ತಿರುವಂತೆ ಫೇಸ್ ಬುಕ್ , ವಾಟ್ಸ್ ಆಪ್ ಗಳಲ್ಲಿ ಬರುವ ಸುಳ್ಳನ್ನು, ದ್ವೇಷ ಭಾಷಣಗಳನ್ನು ಫಾರ್ವರ್ಡ್ ಮಾಡಿಕೊಂಡು ಕಾಲ ಕಳೆಯಬಹುದಿತ್ತು.

ಆದರೆ ಅವರು ಆ ಗುಂಪಿನಲ್ಲಿ ಕಳೆದು ಹೋಗಲಿಲ್ಲ. ತಲೆಯಲ್ಲಿ ಬರೀ ಭ್ರಮೆ ತುಂಬಿಕೊಂಡ ಹಾಗೂ ದ್ವೇಷ ಭಾಷಣಕ್ಕೆ ಚಪ್ಪಾಳೆ ತಟ್ಟುವ ​ಹೆಚ್ಚಿನ ಯುವಜನತೆಯ ನಡುವೆ ಅವರು ಭಿನ್ನರಾಗಿ ನಿಲ್ಲುವುದು ತಮ್ಮ​ ಆರೋಗ್ಯಕರ ಕಾಳಜಿಗಳ ಕಾರಣದಿಂದ. ತಮ್ಮ​ ಬದ್ಧತೆಯ ಹೋರಾಟದ ಮೂಲಕ.

ಅವರು ಇಂದ್ರಜಿತ್ ಘೋರ್ಪಡೆ. ವಾಟ್ಸ್ ಆಪ್ ಹರಡುವ ಸಮೂಹ ಸನ್ನಿಗೆ ​ಸ್ವತಃ ಒಳಗಾಗದೆ ಈ ದೇಶದ ಬಹುತೇಕ ಮಾಧ್ಯಮಗಳು ಜನವಿರೋಧಿಯಾಗಿವೆ ಎಂದು ಸ್ಪಷ್ಟವಾಗಿ ಗುರುತಿಸಿದವರು ಇಂದ್ರಜಿತ್. ಇದನ್ನು ತಡೆಯಲೇಬೇಕು ಎಂದು ನಿರ್ಧರಿಸಿದ ಅವರು ಅದಕ್ಕಾಗಿ ಹೋರಾಟಕ್ಕೆ ಅಣಿಯಾಗಿದ್ದಾರೆ.

​ಅವರು ತಮ್ಮ ​ನಿರಂತರ ಹೋರಾಟಗಳ ​ಮೂಲಕ ಈಗ ದ್ವೇ​ಷ ಹರಡುವ ಚಾನೆಲ್ಗಳಿಗೆ ​ಸರಿಯಾದ ಪಾಠ ಕಲಿಸಿದ್ದಾರೆ. ಮಾಧ್ಯಮಗಳು ಜನರ ವಿರುದ್ದವಾ​ದಾಗ ಅವುಗಳ ವಿರುದ್ಧ ದಿಟ್ಟತನದಿಂದ ನಿಂತಿದ್ದಾರೆ. ​ಆ ಮೂಲಕ ಇಲ್ಲಿ ಸುಳ್ಳನ್ನು, ದ್ವೇಷವನ್ನು ಕಂಡು ಮರುಗುವವರು, ಸತ್ಯಕ್ಕಾಗಿ ಹೋರಾಡುವವರು ಇನ್ನೂ ಉಳಿದುಕೊಂಡಿದ್ದಾರೆ ಎಂಬ ಹೊಸ ಭರವಸೆಯನ್ನು ಮೂಡಿಸಿದ್ದಾರೆ ಇಂದ್ರಜಿತ್ ಘೋರ್ಪಡೆ.

ಮಾಧ್ಯಮಗಳ ವಿಚಾರದಲ್ಲಿ ಅವರು ​ಕಂಡುಕೊಂಡ ಸತ್ಯಗಳು ಏನು? ಅನ್ಯಾಯ ಕಂಡಲ್ಲಿ ಸುಮ್ಮನಿರಲಾರದ ಅವರ ಕಳಕಳಿ, ಬದ್ಧತೆ ಎಂಥದು? ತಪ್ಪು ಮಾಹಿತಿ ಹರಡು​ವುದು ಮತ್ತು ​ಮುಸ್ಲಿಮರ ವಿರುದ್ಧದ ದ್ವೇಷಕ್ಕಾಗಿ ಮಾಧ್ಯಮಗಳು ಬೆಲೆ ತೆರುವಂತೆ ಮಾಡುವ ಮೂಲಕ ಸುದ್ದಿಯಾಗುತ್ತಿರುವ ಘೋರ್ಪಡೆ, ಅದನ್ನು ತಾವೇ ತಾವಾಗಿ ತಮ್ಮ ಹೊಣೆ ಎಂಬಂತೆ ತೆಗೆದುಕೊಂಡವರು.

2020ರಲ್ಲಿ ಕೋವಿಡ್ ಸಮಯದಲ್ಲಿ ಲಾಕ್ಡೌನ್ ಇದ್ದಾಗ ಸುದ್ದಿಗಳನ್ನು ಸಾಕಷ್ಟಾಗಿ ನೋಡುತ್ತಿದ್ದ ಅವರಿಗೆ ಆಘಾತವಾಗಿತ್ತು. ಕೋವಿಡ್ ಕುರಿತ ವರದಿಗಳಲ್ಲೂ ತಪ್ಪು ಮಾಹಿತಿ ಮತ್ತು ಇಸ್ಲಾಮೋಫೋಬಿಯಾ ಸೇರಿಕೊಳ್ಳುತ್ತಿರುವುದ​ನ್ನು ನೋಡಿ ಅವರು ಆಘಾತ​ಗೊಂಡಿದ್ದರು.

ಇದೆಲ್ಲದರ ವಿರುದ್ಧ ಏನಾದರೂ ಮಾಡಲೇಬೇಕೆನ್ನಿಸಿತು ಅವರಿಗೆ.

ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ಗೆ ಅವರು ತಮ್ಮ ಮೊದಲ ದೂರು ಸಲ್ಲಿಸಿದ್ದು 2020ರಲ್ಲಿ. ಅದಾದ ಬಳಿಕ ಈವರೆಗೂ ಅವರು ಸುಮಾರು 50 ದೂರುಗಳನ್ನು ಸಲ್ಲಿಸಿದ್ದಾರೆ​. ಚಾನಲ್‌ಗಳು NBDSA ಯ ನೀತಿ ಸಂಹಿತೆ ಮತ್ತು ಮಾರ್ಗಸೂಚಿಗಳನ್ನು ಹೇಗೆಲ್ಲ ಉಲ್ಲಂಘಿಸಿವೆ ಎಂಬುದನ್ನು ಬಯಲು ಮಾಡಿದ್ದಾರೆ.

ಹೋರಾಟಗಾರ ಉಮರ್ ಖಾಲಿದ್‌ ಬಗ್ಗೆ ಮಾಧ್ಯಮಗಳು ಬೇಕಾಬಿಟ್ಟಿ ಮಾತನಾಡಿದ್ದು, ಪ್ರತಿಭಟನಾ ನಿರತ ರೈತರನ್ನು ​ಖಾಲಿಸ್ತಾನಿ ಎಂದು ಕರೆದದ್ದು, ಮುಸ್ಲಿಂ ಮಹಿಳಾ ಪ್ರತಿಭಟನಾಕಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ಸೇರಿದಂತೆ ಹಲವು ಸುದ್ದಿ ಕಾರ್ಯಕ್ರಮಗಳ ವಿರುದ್ಧ ಅವರು ದೂರು ದಾಖಲಿಸಿದ್ದಾರೆ. ಅವರ ದೂರುಗಳು ಪರಿಣಾಮವನ್ನೂ ಬೀರುತ್ತಿವೆ. ಅವರ ದೂರುಗಳಲ್ಲಿ ಶೇ.90ರಷ್ಟು ದೂರುಗಳಿಗೆ ಸಂಬಂಧಿಸಿ ಎನ್‌ಬಿಡಿಎಸ್‌ಎ ಸುದ್ದಿ ವಾಹಿನಿಗಳ ವಿರುದ್ಧ ಆದೇಶ ನೀಡಿದೆ, ಎಚ್ಚರಿಕೆಗಳನ್ನು ನೀಡಿದೆ,

ಮಾತ್ರವಲ್ಲ, ಆಕ್ಷೇಪಕ್ಕೊಳಗಾದ ಕಾರ್ಯಕ್ರಮಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವುದಕ್ಕೂ ಆದೇಶಿಸಿದೆ.

ಕೆಲವು ಪ್ರಕರಣಗಳಲ್ಲಿ 1 ಲಕ್ಷದವರೆಗೆ ದಂಡ ವಿಧಿಸಿದ್ದೂ ಇದೆ. ​ತಾವು ಸಲ್ಲಿಸಿದ ದೂರುಗಳಿಗೆ ಸಂಬಂಧಿಸಿ ಕಳೆದ ತಿಂಗಳು ನಾಲ್ಕು ಪ್ರಕರಣಗಳಲ್ಲಿ ಇಂದ್ರಜಿತ್ ಜಯ ಸಾಧಿಸಿದ್ದಾರೆ.

ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಸಂದರ್ಭದಲ್ಲಿ ಲವ್ ಜಿಹಾದ್ ಪದ ಬಳಸಿ​ ಸುಳ್ಳು ಹಾಗು ದ್ವೇಷ ಹರಡಿದ ಎರಡು ಹಿಂದಿ ಚಾನೆಲ್‌ಗಳಾದ ಟೈಮ್ಸ್ ನೌ ನವಭಾರತ್ ಮತ್ತು ನ್ಯೂಸ್ 18 ಇಂಡಿಯಾಗೆ ಕ್ರಮವಾಗಿ ​ಒಂದು ಲಕ್ಷ ಮತ್ತು 50​ ಸಾವಿರ ರೂ.ದಂಡವನ್ನು ಎನ್‌ಬಿಡಿಎಸ್‌ಎ ವಿಧಿಸಿದೆ. ಅಲ್ಲದೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಕಾರ್ಯಕ್ರಮಗಳನ್ನು ತೆಗೆದುಹಾಕಲು ​ಆ ವಾಹಿನಿಗಳಿಗೆ ಆದೇಶಿಸಲಾಯಿತು.

ಇನ್ನೊಂದು ಚಾನೆಲ್ ಆಜ್ ತಕ್, ಧಾರ್ಮಿಕ ವಿಷಯಗಳ ಕುರಿತು ವರದಿ ಮಾಡುವಾಗ ಸರಿಯಾದ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಅದು ಟೀಕೆಗೆ ಗುರಿಯಾಯಿತು.​ ಅದಕ್ಕೆ ಎಚ್ಚರಿಕೆ ನೀಡಲಾಯಿತು. 2023ರ ಮಾರ್ಚ್ನಲ್ಲಿ ರಾಮನವಮಿ ವೇಳೆ ಬಿಹಾರದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ ಕುರಿತ ​ಅದರ ಕಾರ್ಯಕ್ರಮವನ್ನು ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಲು ಆದೇಶಿಸಲಾಯಿತು.

ಯಾರೋ ದುಷ್ಕರ್ಮಿಗಳಿಂದಾದ ಕೋಮು ಹಿಂಸಾಚಾರದ ಘಟನೆಗಳ ಬಗ್ಗೆ ಹೇಳುವಾಗ ನಿರೂಪಕ ​ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ಎಲ್ಲದಕ್ಕೂ ಅವರೇ ಹೊಣೆ ಎಂಬಂತೆ ಹೇಳಿದ್ದಕ್ಕೆ ಅದು ಆಕ್ಷೇಪಿಸಿತು. ಇಂಡಿಯಾ ಟುಡೇ ವಿರುದ್ಧದ ಘೋರ್ಪಡೆ ದೂರನ್ನು ನೋಡಿದಾಗ, LGBTQIA+ ಸಮುದಾಯದ ಕುರಿತ ಕಾರ್ಯಕ್ರಮವೊಂದರಲ್ಲಿ ವಿಷಯಕ್ಕೆ ಹೊರತಾದ ದೃಶ್ಯಗಳನ್ನು ಬಳಸಲಾಗಿದೆ ಎಂಬುದುನ್ನು ಎನ್‌ಬಿಡಿಎಸ್‌ಎ ಕಂಡುಕೊಂಡಿತು.

ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಬೇಕು ಇಲ್ಲವೆ ಸಂಪೂರ್ಣ ವೀಡಿಯೊವನ್ನು ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಬೇಕು ಎಂದು ಚಾನಲ್‌ಗೆ ಸೂಚಿಸಿತು. ಇಂಥ ಎಲ್ಲದರ ವಿರುದ್ದ ಹೋರಾಡುವ ಬದ್ಧತೆಯುಳ್ಳ ಅವರ ಬಳಿ ಇದಕ್ಕಾಗಿ ಸಾಕಷ್ಟು ಹಣಬಲವೇನೂ ಇಲ್ಲ. ದೂರುಗಳನ್ನು ತಾವೇ ಸಿದ್ಧಪಡಿಸುತ್ತಾರೆ. ಆನ್‌ಲೈನ್ ವಿಚಾರಣೆಗಳಿಗೆ ಹಾಜರಾಗುತ್ತಾರೆ​. ದೊಡ್ಡ ಸುದ್ದಿ ಸಂಸ್ಥೆಗಳಿಂದ ನೇಮಿಸಲ್ಪಟ್ಟ ವಕೀಲರೊಂದಿಗೆ ವಾದಿಸುತ್ತಾರೆ ಮತ್ತು ಏನು ಆದೇಶ ಜಾರಿಯಾಗುತ್ತದೆಯೊ ಅದನ್ನು ಎಲ್ಲರ ಗಮನಕ್ಕೆ ತರುತ್ತಾರೆ.

ತಪ್ಪುಗಳಾಗುತ್ತಿರುವುದು, ಅನ್ಯಾಯ ನಡೆಯುತ್ತಿರುವುದು ಕಂಡಾಗ,​ ಒಂದೋ ಅದರೊಂದಿಗೆ ತಾವೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಸೇರಿಕೊಳ್ಳುವುದು ಅಥವಾ ಅದೆಲ್ಲ ತನಗೇಕೆ ಎಂದು ಸುಮ್ಮನೆ ತನ್ನ ಪಾಡಿಗೆ ಉಳಿದುಬಿಡು​ವುದು ಇಲ್ಲಿ ಸಾಮಾನ್ಯ.

ಆದರೆ ಇಂದ್ರಜಿತ್ ಘೋರ್ಪಡೆ ಆ ಸುಳ್ಳು ಹಾಗು ದ್ವೇಷ ಹರಡುವ ಗುಂಪಿನ ಭಾಗವಾಗಲೂ ಇಲ್ಲ. ನನಗ್ಯಾಕೆ ಊರಿನ ಉಸಾಬರಿ ಎಂದು ಮೂಕ ಪ್ರೇಕ್ಷಕನಾಗಲೂ ಇಲ್ಲ. ಇದು ಇಂದ್ರಜಿತ್ ಅವರ ಹೆಚ್ಚುಗಾರಿಕೆ. ಇದಕ್ಕೆ ಭಾರೀ ಬದ್ಧತೆ, ಅಷ್ಟೇ ಸಾಮಾಜಿಕ ಕಳಕಳಿ ಇರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಈಗಿನ ವಾತಾವರಣದಲ್ಲಿ ಭಾರೀ ಧೈರ್ಯ ಬೇಕು. ಅದು ಇಂದ್ರಜಿತ್ ಅವರಲ್ಲಿದೆ.

​ಅನ್ಯಾಯವನ್ನು ಪ್ರಶ್ನಿಸಲು, ಅದರ ವಿರುದ್ಧ ಏನನ್ನಾದರೂ ಮಾಡಲು ಮುಂದಾಗುತ್ತಾರೆ ಅವರು.

ಸಲ್ಲದ ರೀತಿಯಲ್ಲಿ ನಡೆದುಕೊಂಡ ಮಾಧ್ಯಮಗಳ ವಿರುದ್ಧದ ಅವರ ಹೋರಾಟ ಇಂಥ ಕಳಕಳಿಯ ಒಂದು ಭಾಗವೇ ಆಗಿದೆ.

2020ರ ಡಿಸೆಂಬರ್ನಲ್ಲಿ ಇಂಗ್ಲೆಂಡ್ನ ಸಂವಹನ ನಿಯಂತ್ರಕ ಕಚೇರಿ (ಆಫ್ಕಾಮ್), ಹಿಂದಿ ಸುದ್ದಿ ವಾಹಿನಿ ರಿಪಬ್ಲಿಕ್ ಭಾರತ್‌ಗೆ ಪಾಕಿಸ್ತಾನದ ಜನರ ವಿರುದ್ಧ ದ್ವೇಷವನ್ನು ಪ್ರಚೋದಿಸಿದ್ದಕ್ಕೆ ಮತ್ತು ಸಮರ್ಥಿಸಿದ್ದಕ್ಕೆ 21 ಲಕ್ಷ ರೂ. ದಂಡ ವಿಧಿಸಿತ್ತು.

2023ರ ಫೆಬ್ರವರಿಯಲ್ಲಿ ಮುಂಬೈ ಮೂಲದ ಸಿಟಿಜನ್ಸ್ ಫಾರ್ ಜಸ್ಟೀಸ್ & ಪೀಸ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ​NBDSA ನ್ಯೂಸ್ 18 ಇಂಡಿಯಾಗೆ 50,000 ರೂ ದಂಡ ವಿಧಿಸಿತು.

ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರು ವ್ಯಕ್ತಪಡಿಸಿದ ಕಟುವಾದ ಅಭಿಪ್ರಾಯಗಳಿಗಾಗಿ ಅದೇ ಚಾನೆಲ್‌ಗೆ 2022ರ ಅಕ್ಟೋಬರ್ನಲ್ಲಿ 50,000 ರೂ. ದಂಡ ವಿಧಿಸಲಾಯಿತು.

ಟೈಮ್ಸ್ ನೌ ನವಭಾರತ್​ ದೇಶದ ಬೃಹತ್ ಸುದ್ದಿ ಸಮೂಹ ಟೈಮ್ಸ್ ಗ್ರೂಪ್ ಗೆ ಸೇರಿದ್ದು.

​ಇನ್ನು ನ್ಯೂಸ್ 18 ಇಂಡಿಯಾ​ ದೇಶದ ಮಾತ್ರವಲ್ಲ ಏಷ್ಯಾದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಅವರ ಸಮೂಹಕ್ಕೆ ಸೇರಿದ್ದು.

1 ಲಕ್ಷ ಮತ್ತು 50,000 ರೂ.ಗಳ ದಂಡದ ಮೊತ್ತ​ ಈ ಎರಡೂ ಸಂಸ್ಥೆಗಳಿಗೆ ತೀರಾ ಸಣ್ಣ ಮೊತ್ತ​.

​ಅದರಿಂದ ಅವರು ಆರ್ಥಿಕವಾಗಿ ಕಳಕೊಳ್ಳುವುದು ಏನೂ ಇಲ್ಲ.

NBDSA ಗೆ ಒಂದು ಲಕ್ಷಕ್ಕಿಂತ ಹೆಚ್ಚು ದಂಡ ವಿಧಿಸುವ ಅಧಿಕಾರವಿಲ್ಲ. ಈ ಬಗ್ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

ಸಿಜೆಐ ಚಂದ್ರಚೂಡ್ ಅವರೇ " ಚಾನಲ್ ಗಳು ಆ ಕಾರ್ಯಕ್ರಮದಿಂದ ಗಳಿಸಿದ ಆದಾಯಕ್ಕೆ ಅನುಗುಣವಾಗಿ ದಂಡ ವಿಧಿಸಬೇಕು, ಆಗ ಮಾತ್ರ ಅದು ಪರಿಣಾಮಕಾರಿ ಆಗಲಿದೆ ಎಂದಿದ್ದರು.

ಆದರೂ, ತಪ್ಪೆಸಗಿದ, ನಿಯಮ ಉಲ್ಲಂಘಿಸಿದ ಚಾನೆಲ್ಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಬಹಳ ಮುಖ್ಯ ಎನ್ನುತ್ತಾರೆ ಇಂದ್ರಜಿತ್​ ಘೋರ್ಪಡೆ.

​ಸ್ವತಃ ಲೈಂಗಿಕ ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಇಂದ್ರಜಿತ್ ಯಾವುದೇ ಒಂದು ಸಮುದಾಯವನ್ನು ಬಲಿಪಶು ಮಾಡುವುದನ್ನು ನೋಡಿಕೊಂಡು ಸುಮ್ಮನಿರುವುದು ನನಗೆ ಸಾಧ್ಯವಿಲ್ಲ ಎನ್ನುತ್ತಾರೆ.

​ಅವರ ಹೋರಾಟದಿಂದ ಈ ಬೃಹತ್ ಮಾಧ್ಯಮ ಸಮೂಹಗಳು ಹೇಗೆ ದೇಶದಲ್ಲಿ ಸುಳ್ಳನ್ನು, ದ್ವೇಷವನ್ನು ವ್ಯವಸ್ಥಿತವಾಗಿ ಹರಡುತ್ತಿವೆ ಎಂಬುದು ಮತ್ತೊಮ್ಮೆ ಪುರಾವೆ ಸಮೇತ ಬಯಲಾಗಿದೆ. ಆ ಚಾನಲ್ ಗಳ , ಅವುಗಳ ಆಂಕರ್ ಗಳ ಮೋಸ ಜನರೆದುರು ಬಂದಿದೆ.

ಅವರು ಸುಳ್ಳು ಹೇಳುತ್ತಿದ್ದಾರೆ, ಸಮಾಜಕ್ಕೆ ದ್ರೋಹ ಎಸಗುತ್ತಿದ್ದಾರೆ ಎಂಬುದು ಸಾಬೀತಾಗಿದೆ.

ಅದೇ ಎಲ್ಲಕ್ಕಿಂತ ಮುಖ್ಯ. ದಂಡದ ಮೊತ್ತ ಹೆಚ್ಚಿಸಲು ಇನ್ನೊಂದು ಹೋರಾಟ ಅಗತ್ಯ ಇರಬಹುದು. ದೇಶದಲ್ಲಿನ ಬಹುತೇಕ ಮಾಧ್ಯಮ​ಗಳು ಮೋದಿಗೆ ನಿಕಟವಾಗಿರುವ ಶ್ರೀಮಂತ ಉದ್ಯಮಿಗಳ ಕೈಯಲ್ಲಿ​ವೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ತೀರಾ ಕುಸಿ​ದು ಪಾತಾಳಕ್ಕೆ ತಲುಪಿದೆ. ​ಮಡಿಲ ಮೀಡಿಯಾಗಳು ಮೋದಿಯನ್ನು ಮಾತ್ರ ತೋರಿಸುತ್ತ ಈ ದೇಶದ ಬಡವರು ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಕುರುಡಾಗಿ​ವೆ.

ಸರಕಾರವನ್ನು ಪ್ರಶ್ನಿಸುವ ತಮ್ಮ ಪತ್ರಿಕಾ ಧರ್ಮ ಪಾಲಿಸುವ ಬದಲು ಬಹುತೇಕ ದೊಡ ಮಾಧ್ಯಮಗಳು ಸರಕಾರದ ತುತ್ತೂರಿಗಳಾಗಿ ವಿಪಕ್ಷಗಳನ್ನು, ರೈತರನ್ನು ಪ್ರಶ್ನಿಸುತ್ತಿವೆ. ನೂರಾರು ಕೋಟಿ ಸುರಿದ ಟಿವಿ ಚಾನಲ್ ಗಳು ಸುಳ್ಳು, ದ್ವೇಷ, ಅಸಹಿಷ್ಟುತೆ ಹರಡುವ ವೇದಿಕೆಗಳಾಗಿ ಜನವಿರೋಧಿಗಳಾಗಿಬಿಟ್ಟಿವೆ. ನಿಜವಾದ ವರದಿಗಾರಿಕೆ ಮಾಡುವ ವರದಿಗಾರರನ್ನು, ಕೇಳಬೇಕಾದ ಪ್ರಶ್ನೆ ಕೇಳುವ ಪತ್ರಕರ್ತರನ್ನು ಒಂದೋ ಕೊಲೆ ಮಾಡಲಾಗುತ್ತಿದೆ ಅಥವಾ ಅವರ ಮೇಲೆ ಕೇಸು ಹಾಕಿ ಜೈಲಿಗೆ ತಳ್ಳಲಾಗುತ್ತಿದೆ.

​ಇಂತಹ ವಾತಾವರಣದಲ್ಲಿ ಇಂದ್ರಜಿತ್ ಘೋರ್ಷಪಡೆಯಂಥ​ಹ ಸಾಮಾಜಿಕ ಬದ್ಧತೆಯುಳ್ಳ ಯುವಕರ ಈ ಬಗೆಯ ಹೋರಾಟಗಳು ಸಾಧಾರಣವಾದವುಗಳಲ್ಲ. ಇಂದ್ರಜಿತ್ ಅಂಥವರ​ ಶುದ್ಧ ಮನಸ್ಸು, ಅಪ್ಪಟ ಸಾಮಾಜಿಕ ಕಳಕಳಿ, ಅನ್ಯಾಯದ ವಿರುದ್ಧ ಹೋರಾಡುವ ಅವರ ದಿಟ್ಟತನ​, ಅವರ ತಾಳ್ಮೆ ಹಾಗು ನಿರಂತರ ಹೋರಾಟ - ಈ ದೇಶದ ​ ಯುವಕರಿಗೆ ​ಮಾದರಿಯಾಗಿದೆ. ನನ್ನ​ ಭಾರತದಲ್ಲಿ ದ್ವೇಷ ಹಾಗು ಸುಳ್ಳು ರಾರಾಜಿಸುವುದನ್ನು ಸಹಿಸಲ್ಲ ಎಂದು ಹೋರಾಡುತ್ತಿರುವ ಇಂದ್ರಜಿತ್ ಅವರಿಗೆ ಒಂದು ಸೆಲ್ಯೂಟ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!